ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಅಲ್ಪಾವಧಿಯ ಅಡಚಣೆಗಳೇ ಅವಕಾಶಗಳಾಗಬಹುದು!

Published 31 ಆಗಸ್ಟ್ 2023, 16:13 IST
Last Updated 31 ಆಗಸ್ಟ್ 2023, 16:13 IST
ಅಕ್ಷರ ಗಾತ್ರ

ದೇಶದ ಷೇರುಪೇಟೆಗಳು ಸದ್ಯ ಅಲ್ಪಾವಧಿಯ ಅಡತಡೆಗಳನ್ನು ಎದುರಿಸುತ್ತಿವೆ. ಜಾಗತಿಕ ಮತ್ತು ದೇಶಿ ವಿದ್ಯಮಾನಗಳು ಷೇರುಪೇಟೆಗಳಲ್ಲಿ ಅಲ್ಪಾವಧಿಗೆ ಒಂದಿಷ್ಟು ಪ್ರತಿಕೂಲ ಪರಿಣಾಮ ಉಂಟುಮಾಡಬಹುದು. ಅಮೆರಿಕದ ಡಾಲರ್‌ ಮೌಲ್ಯ ವೃದ್ಧಿ ಆಗುತ್ತಿರುವುದು ಹಾಗೂ ಅಮೆರಿಕದ ಬಾಂಡ್‌ ಗಳಿಕೆ ಹೆಚ್ಚಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಪ್ರಮುಖ ಸವಾಲುಗಳಾಗಿವೆ. ದೇಶಿ ಮಟ್ಟದಲ್ಲಿ ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ 7.44ಕ್ಕೆ ಏರಿಕೆ ಕಂಡಿರುವುದರಿಂದ ಬಡ್ಡಿದರವನ್ನು ದೀರ್ಘಾವಧಿಯವರೆಗೆ ಗರಿಷ್ಠ ಮಟ್ಟದಲ್ಲಿ ಇರುವಂತೆ ಮಾಡುವ ಸಾಧ್ಯತೆ ಇದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಬಂಡವಾಳ ಒಳಹರಿವಿಗೆ ಈ ಬೆಳವಣಿಗೆಗಳು ನಕಾರಾತ್ಮಕ ಆಗಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮೂರು ತಿಂಗಳವರೆಗೆ ಷೇರುಗಳನ್ನು ಖರೀದಿಸಿದ ಬಳಿಕ ಇದೀಗ ಆಗಸ್ಟ್‌ನಲ್ಲಿ ಷೇರುಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ಎಫ್‌ಐಐಗಳಿಂದ ಷೇರು ಖರೀದಿಯು ಷೇರುಪೇಟೆಗಳಲ್ಲಿ ಸೂಚ್ಯಂಕಗಳ ಓಟಕ್ಕೆ ನೆರವಾಯಿತು. ಎಫ್‌ಐಐ ಮಾರಾಟವು ಮುಂದುವರಿದಲ್ಲಿ ಷೇರುಪೇಟೆ ಓಟಕ್ಕೆ ತಡೆ ಒಡ್ಡಬಹುದು. ಆಗಸ್ಟ್‌ 15ರವರೆಗಿನ ವಹಿವಾಟಿನಲ್ಲಿ ಎಫ್‌ಐಐ ₹9,867 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹7,419 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೂ ಎಫ್‌ಐಐ ಮಾರಾಟದಿಂದ ಷೇರುಪೇಟೆಯ ಮೇಲೆ ಆಗುವ ಪರಿಣಾಮವನ್ನು ತಡೆಯಲು ಸಾಧ್ಯವಾಗಿಲ್ಲ. ಮಾರುಕಟ್ಟೆ ಸ್ಥಿತಿಯು ಬದಲಾಗಬಹುದು.

ಎಫ್‌ಐಐ ಮತ್ತು ಡಿಐಐ ವಹಿವಾಟಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಎಫ್‌ಐಐ ಹೂಡಿಕೆಯು ಹಲವು ಬಾಹ್ಯ ವಿದ್ಯಮಾನಗಳಿಂದ ಪ್ರಭಾವಿತವಾಗಿರುತ್ತದೆ. ಕರೆನ್ಸಿ ಚಲನೆಯು ಹೂಡಿಕೆ ನಿರ್ಧಾರದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಿಗೆ ಬಂಡವಾಳ ಒಳಹರಿವು ಆಗಲು ಡಾಲರ್ ಚಲನೆ ಮುಖ್ಯವಾಗುತ್ತದೆ; ಡಾಲರ್‌ ಮೌಲ್ಯ ಇಳಿಕೆ ಕಂಡರೆ ಎಫ್‌ಐಐ ಹೂಡಿಕೆ ಹೆಚ್ಚಾಗುತ್ತದೆ. ಮೌಲ್ಯ ಏರಿಕೆ ಆದರೆ, ಬಂಡವಾಳ ಹೊರಹರಿವು ಕಂಡುಬರುತ್ತದೆ. ಅದೇ ರೀತಿಯಲ್ಲಿ ಅಮೆರಿಕದ ಬಾಂಡ್‌ ಗಳಿಕೆಯೂ ಮುಖ್ಯವಾಗಿದೆ. ಅಲ್ಲದೆ ದೇಶಗಳ ಆರ್ಥಿಕ ಬೆಳವಣಿಗೆಯೂ ಪ್ರಭಾವ ಬೀರುತ್ತದೆ. ಉದಾಹರಣೆಗೆ; ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಮಾರಾಟ, ಚೀನಾದಲ್ಲಿ ಖರೀದಿ ತಂತ್ರ ಅನುಸರಿಸಿದರು. ಆದರೆ ಮೇ, ಜೂನ್‌ ಮತ್ತು ಜುಲೈನಲ್ಲಿ ಭಾರತದಲ್ಲಿ ಖರೀದಿ ಮತ್ತು ಚೀನಾದಲ್ಲಿ ಮಾರಾಟ ಮಾಡಿದರು. ಯಾವಾಗೆಲ್ಲಾ ಆರ್ಥಿಕ ಸ್ಥಿತಿ ಮತ್ತು ನಿರೀಕ್ಷೆಗಳು ಬದಲಾಗುತ್ತವೆಯೋ ಆಗೆಲ್ಲಾ ಎಫ್‌ಐಐ ಯೋಜನೆಯಲ್ಲಿಯೂ ಬದಲಾವಣೆ ಆಗುತ್ತದೆ.

ಎಫ್‌ಐಐಗೆ ವಿರುದ್ಧವಾಗಿ ದೇಶಿ ಸಾಂಸ್ಥಿಕ ಹೂಡಿಕೆದಾರರ ನಡೆಯು ದೇಶದ ಆರ್ಥಿಕತೆ ಮತ್ತು ಮೂಲಭೂತ ಅಂಶಗಳ ಕಡೆಗೆ ಗಮನ ಕೇಂದ್ರೀಕರಿಸಿರುತ್ತದೆ. ದೇಶದ ಆರ್ಥಿಕ ಬೆಳವಣಿಗೆ, ನಿರ್ದಿಷ್ಟ ವಲಯಗಳ ಗಳಿಕೆ, ನಿರ್ದಿಷ್ಟ ಕಂಪನಿಗಳ ಸ್ಥಿತಿ, ಹಣದುಬ್ಬರ ಮತ್ತು ಬಡ್ಡಿದರಗಳು ದೇಶಿ ಸಾಂಸ್ಥಿಕ ಹೂಡಿಕೆಯ ಮೇಲೆ ಪ್ರಭಾವ ಬೀರುತ್ತವೆ.

2023ರ ಆರಂಭದಲ್ಲಿ ಬ್ಯಾಂಕಿಂಗ್‌/ಹಣಕಾಸು ಸೇವೆಗಳಿಗೆ ಸಂಬಂಧಿಸಿದ ಷೇರುಗಳನ್ನು ಎಫ್ಐಐ ಹೆಚ್ಚಾಗಿ ಮಾರಾಟ ಮಾಡಿದ್ದರು. ಆದರೆ, ಮೇ, ಜೂನ್‌ ಮತ್ತು ಜುಲೈನಲ್ಲಿ ಮತ್ತೆ ಖರೀದಿ ಮಾಡಿದ್ದಾರೆ. ಎಫ್ಐಐ ಮಾರಾಟ ಮಾಡಿದ ಸಂದರ್ಭದಲ್ಲಿ ಷೇರುಗಳನ್ನು ಖರೀದಿ ಮಾಡಿದ ಹೂಡಿಕೆದಾರರು ಇದೀಗ ಲಾಭದಲ್ಲಿದ್ದಾರೆ. ವಿದೇಶಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಷೇರುಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ತಮ್ಮ ಬಳಿ ಇರುವ ಷೇರುಗಳನ್ನು ಮಾರಾಟ ಮಾಡುವ ಮೂಲಕ ಲಾಭ ಮಾಡಿಕೊಳ್ಳುವುದು ಉತ್ತಮ ನಡೆಯಾಗಿದೆ.

ಷೇರುಪೇಟೆಯು ಅಲ್ಪಾವಧಿಯಲ್ಲಿ ಇಳಿಕೆ ಕಂಡರೆ ಬ್ಯಾಂಕಿಂಗ್‌/ಹಣಕಾಸು ವಲಯದಲ್ಲಿ ಹೆಚ್ಚಿನ ಕುಸಿತ ಕಾಣಲಿದೆ. ಬಡ್ಡಿದರವು 2024ರ ಮಧ್ಯದವರೆಗೂ ಗರಿಷ್ಠ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ. ಆದರೆ, ಸದ್ಯ, ಬ್ಯಾಂಕಿಂಗ್ ವಲಯದ ಸ್ಥಿತಿ ಉತ್ತಮವಾಗಿದೆ; ಸಾಲ ನೀಡಿಕೆ ಹೆಚ್ಚಾಗಿದೆ, ವಸೂಲಾಗದ ಸಾಲದ ಪ್ರಮಾಣ ಇಳಿಕೆ ಕಂಡಿದೆ, ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವೂ ಕಡಿಮೆ ಆಗಿದೆ. ಹೀಗಾಗಿ ದೀರ್ಘಾವಧಿಗೆ ಹಣ ತೊಡಗಿಸಲು ಬಯಸುವ ಹೂಡಿಕೆದಾರರು ಗುಣಮಟ್ಟದ ಬ್ಯಾಂಕಿಂಗ್ ಷೇರುಗಳನ್ನು ಖರೀದಿಸಬಹುದು. ಐ.ಟಿ. ಷೇರುಗಳು ಮತ್ತೆ ಚೇತರಿಸಿಕೊಳ್ಳುವ ಹಂತದಲ್ಲಿವೆ. ಬಂಡವಾಳ ಸರಕುಗಳು ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ವಲಯಗಳ ಷೇರುಗಳು ಉತ್ತಮವಾಗಿವೆ.

(ಲೇಖಕ: ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT