ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಸಾಲ: ತೆರಿಗೆ ಉಳಿತಾಯ ಹೇಗೆ?

Last Updated 26 ಜನವರಿ 2020, 19:47 IST
ಅಕ್ಷರ ಗಾತ್ರ

ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಉಳಿತಾಯ ಮಾಡಲು ಇನ್ನೂ ಎರಡು ತಿಂಗಳ ಕಾಲಾವಕಾಶ ಮಾತ್ರ ಉಳಿದಿದೆ. ತೆರಿಗೆ ಉಳಿತಾಯಕ್ಕೆ ವೇತನದಾರರು ಹೂಡಿಕೆ ಆಯ್ಕೆಗಳ ಹುಡುಕಾಟದಲ್ಲಿದ್ದಾರೆ.

ಹೀಗೆ ಹೂಡಿಕೆಗಳ ಅನ್ವೇಷಣೆಗೂ ಮೊದಲು ವಿವಿಧ ವೆಚ್ಚಗಳ ಮೇಲೆ ಸಿಗುವ ತೆರಿಗೆ ಕಡಿತದ ಬಗ್ಗೆಯೂ ಅರಿತುಕೊಳ್ಳುವುದು ಮುಖ್ಯ. ತೆರಿಗೆ ಹೊರೆ ಇಳಿಸುವಲ್ಲಿ ಗೃಹ ಸಾಲ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಗರಿಷ್ಠ ತೆರಿಗೆ (ಶೇ 30ರಷ್ಟು) ಮಿತಿಯಲ್ಲಿದ್ದರೆ ಗೃಹ ಸಾಲಕ್ಕೆ ಸಿಗುವ ಎಲ್ಲ ತೆರಿಗೆ ವಿನಾಯಿತಿಗಳನ್ನು ಬಳಸಿಕೊಂಡು ವರ್ಷಕ್ಕೆ ₹ 1.56 ಲಕ್ಷದವರೆಗೆ ಹಣ ಉಳಿಸಬಹುದು. ಹಾಗಾದರೆ ಗೃಹ ಸಾಲಕ್ಕೆ ಸಿಗುವ ವಿವಿಧ ತೆರಿಗೆ ಅನುಕೂಲಗಳೇನು. ಬನ್ನಿ ನೋಡೋಣ.

ಗೃಹ ಸಾಲದ ಅಸಲು ಪಾವತಿಗೆ ವಿನಾಯಿತಿ: ಗೃಹ ಸಾಲದ ಮೇಲಿನ ಅಸಲು ಪಾವತಿಗೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ
₹ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಗೃಹ ಸಾಲದ ಅಸಲು ಪಾವತಿಗೆ ಸಂಪೂರ್ಣ ವಿನಾಯಿತಿ ಪಡೆದರೆ ವರ್ಷಕ್ಕೆ ಸುಮಾರು ₹ 47 ಸಾವಿರದವರೆಗೆ ಉಳಿತಾಯ ಮಾಡಬಹುದು.

ಗೃಹ ಸಾಲ ಮರುಪಾವತಿಯ ಆರಂಭಿಕ ಹಂತದಲ್ಲಿ ಅಸಲಿನ ಭಾಗಕ್ಕಿಂತ ಬಡ್ಡಿಯ ಭಾಗವೇ ಹೆಚ್ಚಿಗೆ ಇರುತ್ತದೆ. ಹೀಗಾಗಿ ವರ್ಷದ ಆರಂಭದಲ್ಲೇ ಸಾಲ ಮರುಪಾವತಿಯ ಅಂದಾಜು ಪಟ್ಟಿ (ಲೋನ್ ಸ್ಟೇಟ್‌ಮೆಂಟ್ ಬ್ರೇಕ್ ಅಪ್) ಗಮನಿಸಿಕೊಳ್ಳಿ.

ಗೃಹ ಸಾಲದ ಮೇಲಿನ ಬಡ್ಡಿ ಪಾವತಿಗೆ ವಿನಾಯಿತಿ: ಸೆಕ್ಷನ್ 24(ಬಿ): 1999 ರ ನಂತರ ಪಡೆದಿರುವ ಗೃಹ ಸಾಲಗಳ ಮೇಲಿನ ಬಡ್ಡಿ ಪಾವತಿಗೆ ಆದಾಯ ತೆರಿಗೆಯ ಸೆಕ್ಷನ್ 24(ಬಿ) ಅಡಿಯಲ್ಲಿ ₹ 2 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ವಿನಾಯಿತಿ ಪಡೆಯಲು ಪಡೆದಿರುವ ಸಾಲದ ಮೊತ್ತ, ಆಸ್ತಿಯ ಮೌಲ್ಯ ಸೇರಿದಂತೆ ಯಾವುದೇ ನಿಬಂಧನೆಗಳಿಲ್ಲ. ಗೃಹ ಸಾಲದ ಮೇಲಿನ ಬಡ್ಡಿ ಪಾವತಿಗೆ ₹ 2 ಲಕ್ಷದವರೆಗೆ ಸಂಪೂರ್ಣ ವಿನಾಯಿತಿ ಪಡೆದರೆ ವಾರ್ಷಿಕ ₹ 62 ಸಾವಿರದವರೆಗೆ ಉಳಿತಾಯ ಸಾಧ್ಯ.

ಸೆಕ್ಷನ್ 80 ಇಇ: ಸೆಕ್ಷನ್ 80 ಇಇ ಅಡಿಯಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರು ಹೆಚ್ಚುವರಿಯಾಗಿ ₹ 50 ಸಾವಿರದವರೆಗೆ ವಿನಾಯಿತಿ ಪಡೆಯಬಹುದು. ಆದರೆ ಈ ಅನುಕೂಲ ಪಡೆದುಕೊಳ್ಳಲು ಕೆಲ ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ₹ 35 ಲಕ್ಷಕ್ಕಿಂತ ಕಡಿಮೆ ಸಾಲ ಪಡೆದಿದ್ದು ನಿಮ್ಮ ಆಸ್ತಿಯ ಮೌಲ್ಯ ₹ 50 ಲಕ್ಷ ಇದ್ದಲ್ಲಿ ಮಾತ್ರ ಈ ವಿನಾಯಿತಿ ಲಭ್ಯ. ಜತೆಗೆ 2017ನೇ ವರ್ಷದಲ್ಲಿ ಅಥವಾ ನಂತರದಲ್ಲಿ ಪಡೆದಿರುವ ಸಾಲಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಸೆಕ್ಷನ್ 80 ಇಇ ಬಳಸಿಕೊಂಡರೆ ವರ್ಷಕ್ಕೆ ಸುಮಾರು ₹ 16 ಸಾವಿರದ ವರೆಗೆ ಹಣ ಉಳಿಸಬಹುದು.

ಸೆಕ್ಷನ್ 80 ಇಇಎ: ಸೆಕ್ಷನ್ 24 (ಬಿ) ಅಡಿಯಲ್ಲಿ ಸಾಲದ ಮೇಲಿನ ಬಡ್ಡಿ ಪಾವತಿಗೆ ₹ 2 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಅದಕ್ಕಿಂತ ಹೆಚ್ಚಿಗೆ ಬಡ್ಡಿ ಪಾವತಿಸಿದ್ದರೆ ಸೆಕ್ಷನ್ 80 ಇಇಎ ಅಡಿಯಲ್ಲಿ ನಿಮಗೆ ವಿನಾಯಿತಿ ಲಭ್ಯ.

2019 ರಲ್ಲಿ ಜಾರಿಗೆ ಬಂದಿರುವ ಈ ಸೆಕ್ಷನ್ ಅಡಿಯಲ್ಲಿ ನೀವು ₹ 1.5 ಲಕ್ಷದವರೆಗೆ ಹೆಚ್ಚುವರಿಯಾಗಿ ಗೃಹ ಸಾಲದ ಮೇಲಿನ ಬಡ್ಡಿ ಪಾವತಿಗೆ ವಿನಾಯಿತಿ ಪಡೆಯಬಹುದು. ಹಣಕಾಸು ವರ್ಷ 2020 ರಲ್ಲಿ ಸಾಲ ಪಡೆದಿದ್ದು, ಮನೆಯ ನೋಂದಣಿ ಮೊತ್ತ ₹ 45 ಲಕ್ಷದ ಒಳಗಿದ್ದರೆ ಮಾತ್ರ ಈ ಅನುಕೂಲ ಸಿಗುತ್ತದೆ. ಈ ತೆರಿಗೆ ಅನುಕೂಲದಿಂದ ವರ್ಷಕ್ಕೆ ಸುಮಾರು
₹ 47 ಸಾವಿರ ಉಳಿಸಬಹುದು. ನೆನಪಿರಲಿ ನೀವು ಈ ಸೆಕ್ಷನ್ ಅಡಿಯಲ್ಲಿ ವಿನಾಯಿತಿ ಪಡೆದರೆ ಸೆಕ್ಷನ್ 80 ಇಇ ಅನುಕೂಲ ಪಡೆಯುವಂತಿಲ್ಲ.

(ಲೇಖಕ: ಇಂಡಿಯನ್ ಮನಿಡಾಟ್‌ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT