ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ವಹಿವಾಟು: ಹೂಡಿಕೆದಾರರ ಸಂಪತ್ತು ₹ 3.50 ಲಕ್ಷ ಕೋಟಿ ಹೆಚ್ಚಳ

Last Updated 20 ಜೂನ್ 2020, 12:38 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳ ವಾರದ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದೆ.ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 951 ಅಂಶ ಜಿಗಿತ ಕಂಡು 34,731 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 3.5 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ ₹ 134 ಲಕ್ಷ ಕೋಟಿಗಳಿಂದ ₹ 137.50 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಜೂನ್‌ 1ರಿಂದ 19ರವರೆಗಿನ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 7.30 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 153 ಅಂಶ ಹೆಚ್ಚಾಗಿ 10,244 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ಸುದ್ದಿಯಲ್ಲಿ ರಿಲಯನ್ಸ್‌: ರಿಲಯನ್ಸ್‌ ಇಂಡಸ್ಟ್ರೀಸ್ (ಆರ್‌ಐಎಲ್‌)‌ ಕಂಪನಿಯು ಎರಡು ತಿಂಗಳಿನಿಂದ ಹೆಚ್ಚು ಸುದ್ದಿಯಲ್ಲಿದೆ. ಅದರ ಡಿಜಿಟಲ್‌ ವಹಿವಾಟಿನ ಮೂಲವಾಗಿರುವ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿದೆ. ಎರಡು ತಿಂಗಳಿನಲ್ಲಿ ₹ 1.69 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸುವ ಮೂಲಕ ಆರ್‌ಐಎಲ್‌ ಸಾಲಗಳಿಂದ ಮುಕ್ತವಾಗಿದೆ.

ಜಾಗತಿಕ ಷೇರುಪೇಟೆಗಳು ಮತ್ತು ಹೊಸದಾಗಿ ವಿದೇಶಿ ಬಂಡವಾಳ ಒಳಹರಿವು ಷೇರುಪೇಟೆಗಳಲ್ಲಿ ಸೂಚ್ಯಂಕದ ಓಟಕ್ಕೆ ಉತ್ತೇಜನ ನೀಡಿದವು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುತ್ತಿದ್ದು, ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಮತ್ತೆ ಆರಂಭವಾಗುತ್ತಿವೆ. ಇದು ಷೇರುಪೇಟೆಯಲ್ಲಿ ಉತ್ಸಾಹ ಮೂಡಿಸುವಂತೆ ಮಾಡುತ್ತಿದೆ ಎಂದೂ ಹೇಳಿದ್ದಾರೆ.

ಅಲ್ಪಾವಧಿಗೆ ಹೂಡಿಕೆದಾರರು ಎಚ್ಚರಿಕೆಯಿಂದ ಇರುವಂತೆ ಕೋಟಕ್‌ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಸಂಜೀವ್‌ ಝರ್ಬಡೆ ಅವರು ಎಚ್ಚರಿಕೆ ನೀಡಿದ್ದಾರೆ. ‘ಭಾರತ–ಚೀನಾ ಗಡಿ ಸಂಘರ್ಷ, ಕೋವಿಡ್‌–19 ಬಿಕ್ಕಟ್ಟು ಹಾಗೂ ಎರಡನೇ ಹಂತದಲ್ಲಿ ಸೋಂಕು ಹರಡುವ ಆತಂಕ ಇರುವುದರಿಂದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ವಾರದ ವಹಿವಾಟು

2.81% - ಬಿಎಸ್‌ಇ ಏರಿಕೆ

2.72% - ಎನ್‌ಎಸ್‌ಇ ನಿಫ್ಟಿ ಏರಿಕೆ

36 ಪೈಸೆ - ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT