ಬುಧವಾರ, ಮಾರ್ಚ್ 22, 2023
23 °C

ಕೋವಿಡ್‌ ಭೀತಿಗೆ ಕುಸಿದ ಸೂಚ್ಯಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳು ಸತತ ನಾಲ್ಕನೆಯ ದಿನವೂ ಕುಸಿತ ಕಂಡಿವೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರದ ವಹಿವಾಟಿನಲ್ಲಿ 980.93 ಅಂಶ ಕುಸಿದಿದೆ. ಸೆನ್ಸೆಕ್ಸ್‌ 60 ಸಾವಿರಕ್ಕಿಂತ ಕಡಿಮೆ ಮಟ್ಟಕ್ಕೆ ಬಂದಿದೆ.

ಚೀನಾ ಹಾಗೂ ಇತರ ಕೆಲವು ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವುದು ಜಾಗತಿಕವಾಗಿ ಈ ಸಾಂಕ್ರಾಮಿಕದ ಇನ್ನೊಂದು ಅಲೆ ಎದುರಾಗಬಹುದು ಎಂಬ ಭೀತಿ ಹುಟ್ಟಿಸಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬಿಗಿ ಹಣಕಾಸು ನಿಲುವನ್ನು ಮುಂದುವರಿಸಬಹುದು ಎಂಬ ನಿರೀಕ್ಷೆ ಕೂಡ ಇದೆ. ಇವೆಲ್ಲ ಹೂಡಿಕೆದಾರರ ಮೇಲೆ ಪರಿಣಾಮ ಬೀರಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 320 ಅಂಶ ಕುಸಿದಿದೆ.

ಸೆನ್ಸೆಕ್ಸ್‌ನಲ್ಲಿ ಟೈಟನ್ ಹೊರತುಪಡಿಸಿ ಇತರ ಎಲ್ಲ ಷೇರುಗಳ ಮೌಲ್ಯ ಕುಸಿಯಿತು. ಟಾಟಾ ಸ್ಟೀಲ್‌ ಶೇ 5ರಷ್ಟು ಕುಸಿತ ಕಂಡಿದೆ.

ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,492 ಅಂಶ, ನಿಫ್ಟಿ 462 ಅಂಶ ಇಳಿಕೆ ಕಂಡಿವೆ.

ಹೂಡಿಕೆದಾರರಿಗೆ ₹ 15.77 ಲಕ್ಷ ಕೋಟಿ ನಷ್ಟ

ನವದೆಹಲಿ (ಪಿಟಿಐ): ದೇಶದ ಷೇರುಪೇಟೆಗಳು ಸತತ ನಾಲ್ಕು ದಿನಗಳಿಂದ ನಕಾರಾತ್ಮಕ ವಹಿವಾಟು ಕಾಣುತ್ತಿದ್ದು, ಹೂಡಿಕೆದಾರರ ಸಂಪತ್ತು ಒಟ್ಟು ₹ 15.77 ಲಕ್ಷ ಕೋಟಿಯಷ್ಟು ಕರಗಿದೆ.

ನಾಲ್ಕು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇಕಡ 3ಕ್ಕಿಂತ ಹೆಚ್ಚು ಕುಸಿದಿದೆ. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಈಗ ₹ 272 ಲಕ್ಷ ಕೋಟಿಗೆ ತಲುಪಿದೆ.

‘ಬಡ್ಡಿ ದರವನ್ನು ಇನ್ನಷ್ಟು ಹೆಚ್ಚು ಮಾಡುವ ಸೂಚನೆಯನ್ನು ಅಮೆರಿಕದ ಫೆಡರಲ್ ರಿಸರ್ವ್‌ ನೀಡಿದ ನಂತರದಲ್ಲಿ ಜಾಗತಿಕ ಮಾರುಕಟ್ಟೆಗಳು ಇಳಿಕೆ ಕಾಣುತ್ತಿವೆ. ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿರುವುದು ಹೂಡಿಕೆದಾರರ ವಿಶ್ವಾಸವನ್ನು ಕುಂದಿಸಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು