ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಷೇರು ಸೂಚ್ಯಂಕ 1941 ಅಂಶಗಳ ಪತನ: ವಿದೇಶಿ ಹೂಡಿಕೆದಾರರ ನಿರ್ಗಮನ

Last Updated 9 ಮಾರ್ಚ್ 2020, 11:38 IST
ಅಕ್ಷರ ಗಾತ್ರ

ಮುಂಬೈ: ಕಚ್ಚಾ ತೈಲದ ದರ ಸಮರ ಮತ್ತು ಯೆಸ್ ಬ್ಯಾಂಕ್‌ ಪತನದಿಂದ ಆತಂಕಗೊಂಡ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಗಿಬಿದ್ದ ಕಾರಣ ಸೋಮವಾರ ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕಗಳು ವ್ಯಾಪಕ ಇಳಿಕೆ ದಾಖಲಿಸಿದವು. ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಬಂದಿದ್ದ ಗಳಿಕೆ ಒಮ್ಮೆಲೆ ಕರಗಿತು.

ಅತಿದೊಡ್ಡ 30 ಕಂಪನಿಗಳ ಸಂವೇದಿ ಸೂಚ್ಯಂಕವು(ಸೆನ್ಸೆಕ್ಸ್) 1,941.67 (ಶೇ 5.17)ಅಂಶಗಳಷ್ಟು ಪತನ ಕಂಡು 35,634.95ಕ್ಕೆ ಕುಸಿಯಿತು. 538 ಅಂಶಗಳ (ಶೇ4.90)ಪತನಕಂಡ ನಿಫ್ಟಿ50 ಸಂವೇದಿ ಸೂಚ್ಯಂಕ10,451.45ಕ್ಕೆ ಕುಸಿಯಿತು.

ಷೇರುಪೇಟೆಯಲ್ಲಿ ಇತರ ವಿದ್ಯಮಾನಗಳಿಗೆ ಹೊರತಾದಂತೆ ವರ್ತಿಸುವ ಈ ಬೆಂಚ್‌ಮಾರ್ಕ್ ಸೂಚ್ಯಂಕಗಳೇ ಶೇ 5ರಷ್ಟು ಕುಸಿದಿದ್ದು ಇದೇ ಮೊದಲು. ಸಾಮಾನ್ಯವಾಗಿವಿದೇಶಿ ಹೂಡಿಕೆದಾರರು ಹೆಚ್ಚಿನ ಮೊತ್ತವನ್ನು ದೈತ್ಯ ಕಂಪನಿಗಳಲ್ಲಿ (ಬ್ಲೂಚಿಪ್) ಹೂಡಿಕೆ ಮಾಡುವುದು ವಾಡಿಕೆ. ಇಂದು ಷೇರುಪೇಟೆಯಲ್ಲಿ ಕಂಡು ಬಂದ ಈ ಕುಸಿತವು, ವಿದೇಶಿ ಹೂಡಿಕೆದಾರರುತಮ್ಮ ನಿಧಿಗಳನ್ನು ಹಿಂತೆಗೆಯುತ್ತಿರುವುದರ ದ್ಯೋತಕ.

ವಹಿವಾಟು ನಡೆಯುವ ಸಂದರ್ಭ ಒಂದು ಹಂತದಲ್ಲಿ 30 ಷೇರುಗಳ ಬಿಎಸ್‌ಇ ಸಂವೇದಿ ಸೂಚ್ಯಂಕವು 2,400 ಅಂಶಗಳ ಕುಸಿತ ದಾಖಲಿಸಿತ್ತು.

ತೈಲ ಕಂಪನಿಗಳು ಮತ್ತು ಬ್ಯಾಂಕ್‌ಗಳ ಷೇರು ಮೌಲ್ಯ ಅತಿಹೆಚ್ಚಿನ ಕುಸಿತ ದಾಖಲಿಸಿತು. ಮುಂಬೈ ಸಂವೇದಿ ಸೂಚ್ಯಂಕದಲ್ಲಿ ಒಎನ್‌ಜಿಸಿ ಶೇ 17ರಷ್ಟು ಕುಸಿದರೆ, ರಿಲಯನ್ಸ್‌ ಶೇ 12.52ರಷ್ಟು ಕುಸಿತ ದಾಖಲಿಸಿತು. ಇಂಡಸ್ ಇಂಡ್ ಬ್ಯಾಂಕ್‌ನ ಷೇರುಗಳು ಶೇ 12.06ರಷ್ಟು ಕುಸಿದವು. ಒಟ್ಟಾರೆಯಾಗಿ ಒಂದೇ ದಿನ ಹೂಡಿಕೆದಾರರ ₹6.2 ಲಕ್ಷ ಕೋಟಿಯಷ್ಟು ಹಣ ಕರಗಿದೆ.

50 ಷೇರುಗಳ ಎನ್‌ಎಸ್‌ಇ ನಿಫ್ಟಿ ಸಂವೇದಿ ಸೂಚ್ಯಂಕವು 538 ಅಂಶಗಳ (ಶೇ 4.9) ಕುಸಿತ ದಾಖಲಿಸಿ,10,451.45 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು. ಮಾಧ್ಯಮ, ಲೋಹ ಮತ್ತು ಬ್ಯಾಂಕ್‌ ಉದ್ಯಮಗಳಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಅತ್ಯಂತ ವೇಗವಾಗಿ ಕುಸಿದವು. ಬಹುತೇಕ ಕಂಪನಿಗಳ ಷೇರುಮೌಲ್ಯ ಒಂದೇ ದಿನ ಶೇ 6.5ರಿಂದ ಶೇ 8ರಷ್ಟು ಕುಸಿದಿದೆ.

ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹೊರನಡೆಯುತ್ತಿರುವುದು ರೂಪಾಯಿ ಮೌಲ್ಯದ ಮೇಲೆಯೂ ಪರಿಣಾಮ ಬೀರಿದೆ. ಕಳೆದ 16 ತಿಂಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯವು ಡಾಲರ್‌ ಎದುರು 74ರ ಗಡಿಯಿಂದ ಕೆಳಗಿಳಿದಿತ್ತು. ಸಂಜೆ 5ರ ಹೊತ್ತಿಗೆ ಡಾಲರ್ ಮೌಲ್ಯವು ₹74.0600 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT