ಗುರುವಾರ , ಮೇ 19, 2022
23 °C

ಆರೋಗ್ಯ ವಿಮೆ ಆಯ್ಕೆಗೆ ಮುನ್ನ...

ಆನಂದ್ Updated:

ಅಕ್ಷರ ಗಾತ್ರ : | |

Prajavani

ಆರೋಗ್ಯ ವಿಮೆ ಇದೆ ಎಂದಾದಲ್ಲಿ ಅಗತ್ಯ ಸಂದರ್ಭದಲ್ಲಿ ಅದು ನಿಮ್ಮ ಉಪಯೋಗಕ್ಕೆ ಬರಬೇಕು. ಹೀಗಾಗಬೇಕು ಎಂದರೆ ವಿಮೆ ಆಯ್ಕೆಯಲ್ಲಿರುವ ಪ್ರಮುಖ ಸಂಗತಿಗಳ ಬಗ್ಗೆ ನಿಮಗೆ ಅರಿವಿರಬೇಕು. ವಿಮೆ ಪ್ಲ್ಯಾನ್ ಅಂತಿಮಗೊಳಿಸುವಾಗ ಎಡವಿದರೆ ವಿಮಾ ಕಂತಿನ ಮೊತ್ತ ( ಪ್ರೀಮಿಯಂ) ಹೆಚ್ಚಾಗುವ ಜತೆಗೆ ಕವರೇಜ್ ವ್ಯಾಪ್ತಿ ತಗ್ಗುವ ಸಾಧ್ಯತೆ ಇರುತ್ತದೆ. ಆರೋಗ್ಯ ವಿಮೆ ಆಯ್ಕೆ ಮಾಡಿಕೊಳ್ಳುವ ಮುನ್ನ ಗಮನಿಸಬೇಕಾದ ಅಂಶಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

1) ಕವರೇಜ್ ಮತ್ತು ಪ್ರೀಮಿಯಂ ಮೊತ್ತ: ಯಾವ ಕಂಪನಿಯ ಇನ್ಶೂರೆನ್ಸ್ ತೆಗೆದುಕೊಂಡರೆ ಎಷ್ಟು ಪ್ರೀಮಿಯಂ ಬರುತ್ತದೆ. ಯಾವ ಕಂಪನಿ ಹೆಚ್ಚು ಅನುಕೂಲಗಳನ್ನು ನೀಡುತ್ತಿದೆ. ಯಾವ ಕಂಪನಿಯ ಕವರೇಜ್ ಮೊತ್ತ ಹೇಗಿದೆ– ಎನ್ನುವುದರ ಬಗ್ಗೆ ಹತ್ತಾರು ಅಂತರ್ಜಾಲ ತಾಣಗಳು ಮಾಹಿತಿ ನೀಡುತ್ತವೆ. ಅವುಗಳ ಅಧ್ಯಯನ ಮಾಡಿದಾಗ ಕಡಿಮೆ ಬೆಲೆಯಲ್ಲಿ ಒಳ್ಳೆಯ ಇನ್ಶೂರೆನ್ಸ್
ಖರೀದಿ ಹೇಗೆ ಎನ್ನುವುದರ ಬಗ್ಗೆ ಸ್ಪಷ್ಟತೆ ದೊರಕುತ್ತದೆ.

2) ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್ : ಫ್ಲೋಟರ್ ಪ್ಲ್ಯಾನ್‌ನಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಆರೋಗ್ಯ ವಿಮೆಯ ರಕ್ಷಣೆ ಸಿಗುತ್ತದೆ.

ಆದರೆ ಕುಟುಂಬದಲ್ಲಿರುವ ಅತ್ಯಂತ ಹಿರಿಯ ವ್ಯಕ್ತಿಯ ವಯಸ್ಸಿನ ಆಧಾರದಲ್ಲಿ ಪ್ರೀಮಿಯಂ ನಿಗದಿಪಡಿಸಲಾಗುತ್ತದೆ. ಕುಟುಂಬದ ಇಬ್ಬರು ಅಥವಾ ಮೂವರು ಒಮ್ಮೆಲೆ ಅನಾರೋಗ್ಯಕ್ಕೆ ಒಳಗಾದಾಗ ಕ್ಲೇಮ್ ಪಡೆಯಲು ತೊಂದರೆಯಾಗುತ್ತದೆ. ಹೀಗಾಗಿ ಈ ಪ್ಲ್ಯಾನ್‌ ಬಗ್ಗೆ ಯೋಚಿಸಿ ನಿರ್ಧರಿಸಿ.

3) ವಯಸ್ಸು, ಮದುವೆ: ವಯಸ್ಸು ಕಡಿಮೆ ಇದ್ದಾಗ ಇನ್ಶೂರೆನ್ಸ್ ತೆಗೆದುಕೊಳ್ಳಿ. ಆಗ ಪ್ರೀಮಿಯಂ ಕಡಿಮೆ ಇರುತ್ತದೆ. ಮದುವೆಯ ಬಳಿಕ ಸಂಗಾತಿಯ ಆರೋಗ್ಯ ಸ್ಥಿತಿಗತಿ ಗಮನಿಸಿ ಪಾಲಿಸಿಯ ಸಮ್ ಅಶೂರ್ಡ್ ಹೆಚ್ಚಿಸಿಕೊಳ್ಳಿ.

4) ಕಾಯುವಿಕೆ ಅವಧಿ: ಇನ್ಶೂರೆನ್ಸ್ ಕಂಪನಿಗಳು ಈಗಾಗಲೇ ಇರುವ ಕಾಯಿಲೆಗಳಿಗೆ ಕೂಡಲೇ ಇನ್ಶೂರೆನ್ಸ್ ಕವರೇಜ್ ನೀಡುವುದಿಲ್ಲ. ಕಾಯಿಲೆಗೆ ಅನುಗುಣವಾಗಿ ವೇಯ್ಟಿಂಗ್ ಪೀರಿಯಡ್ ನಿಗದಿಪಡಿಸುತ್ತವೆ. ಕಡಿಮೆ ವೇಯ್ಟಿಂಗ್ ಪೀರಿಯಡ್ ಇರುವ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ.

5) ಗರಿಷ್ಠ ರಿನಿವಲ್ ವಯೋಮಿತಿ: ಇನ್ಶೂರೆನ್ಸ್ ಆಯ್ಕೆ ಮಾಡುವಾಗ ಗರಿಷ್ಠ ರಿನಿವಲ್ ವಯೋಮಿತಿ ಮತ್ತು ನೋ ಕ್ಲೇಮ್ ಬೋನಸ್ ನೀಡುವ ಕಂಪನಿಗಳನ್ನು ಪರಿಗಣಿಸಿ.

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನಿಯಮದ ಪ್ರಕಾರ ಇನ್ಶೂರೆನ್ಸ್ ಕಂಪನಿಗಳು 65 ವರ್ಷಗಳ ವರೆಗೆ ಇನ್ಶೂರೆನ್ಸ್ ನೀಡಬೇಕು. ಈ ಅಂಶವನ್ನು ಗಮನಿಸಿ ಇನ್ಶೂರೆನ್ಸ್ ಮಾಡಿಸಿದರೆ ವಯಸ್ಸಾದ ಕಾಲದಲ್ಲಿ ಸುಲಭದಲ್ಲಿ ಇನ್ಶೂರೆನ್ಸ್ ಕವರೇಜ್ ಸಿಗುತ್ತದೆ.

6) ಕ್ಲೇಮ್ ಸೆಟಲ್‌ಮೆಂಟ್‌ ರೇಷಿಯೊ : ಇನ್ಶೂರೆನ್ಸ್ ಕ್ಲೇಮ್‌ಗಾಗಿ ಅರ್ಜಿ ಸಲ್ಲಿಸಿರುವವರ ಪೈಕಿ ಎಷ್ಟು ಜನರ ಕ್ಲೇಮ್ ಅರ್ಜಿಯನ್ನು ವಿಮಾ ಕಂಪನಿ ಪುರಸ್ಕರಿಸಿದೆ ಎನ್ನುವುದನ್ನು ಕ್ಲೇಮ್ ಸೆಟಲ್‌ಮೆಂಟ್ ರೇಷಿಯೊ (ವಿಮೆ ಪರಿಹಾರ ಇತ್ಯರ್ಥ ಅನುಪಾತ) ಎನ್ನಲಾಗುತ್ತದೆ. ಕ್ಲೇಮ್ ಸೆಟಲ್ ಮೆಂಟ್ ರೇಷಿಯೊ ಶೇ 90 ಕ್ಕಿಂತ ಕಡಿಮೆ ಇದ್ದಲ್ಲಿ, ಅಂತಹ ಕಂಪನಿಗಳ ವಿಮೆ ಪಡೆದುಕೊಳ್ಳುವುದು ಅಷ್ಟು ಸುರಕ್ಷಿತವಲ್ಲ.

7) ಆಸ್ಪತ್ರೆ ಜಾಲ : ಯಾವ ಇನ್ಶೂರೆನ್ಸ್ ಕಂಪನಿ ವೈದ್ಯಕೀಯ ಸೇವೆ ಕಲ್ಪಿಸಲು ಹೆಚ್ಚು ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಂಡಿದೆಯೋ ಆ ಕಂಪನಿಯನ್ನು ನೀವು ಆಯ್ಕೆಗೆ ಪರಿಗಣಿಸಬಹುದು.

8) ಚಿಕಿತ್ಸೆ ಸಿಗದ ಕಾಯಿಲೆಗಳ ಪಟ್ಟಿ: ಯಾವ ಇನ್ಶೂರೆನ್ಸ್ ಕಂಪನಿ ಹೆಚ್ಚು ಚಿಕಿತ್ಸೆಗಳಿಗೆ
ವೆಚ್ಚ ನೀಡುತ್ತದೋ ಆ ಕಂಪನಿಯ ಇನ್ಶೂರೆನ್ಸ್ ಖರೀದಿ ಸೂಕ್ತ.

ಮೂರು ವಾರಗಳಿಂದ ನಿರಂತರ ಕುಸಿತ

ಭಾರತದ ಷೇರುಪೇಟೆ ಸೂಚ್ಯಂಕಗಳು ಮೂರು ವಾರಗಳಿಂದ ನಿರಂತರವಾಗಿ ಕುಸಿತದ ಹಾದಿಯಲ್ಲಿ ಸಾಗುತ್ತಿವೆ. ಅಮೆರಿಕ ಮತ್ತು ಚೀನಾ ನಡುವಣ ವ್ಯಾಪಾರ ಬಿಕ್ಕಟು, ಮೇ 23 ರಂದು ಹೊರಬೀಳಲಿರುವ ಚುನಾವಣೆ ಫಲಿತಾಂಶ, ಸರಣಿ ತ್ರೈಮಾಸಿಕ ವರದಿಗಳು ಮತ್ತು ಸಮಗ್ರ ಅರ್ಥಶಾಸ್ತ್ರದ ದತ್ತಾಂಶಗಳು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶೇ 3.9 ರಷ್ಟು (37,462) ಕುಸಿದಿದ್ದರೆ, ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ 3.7 (11,270) ಇಳಿದಿದೆ. ನಿಫ್ಟಿ (50) ಯಲ್ಲಿ 48 ಕಂಪನಿಗಳು ವಾರದ ಅವಧಿಯಲ್ಲಿ ಕುಸಿತ ದಾಖಲಿಸಿವೆ. ಟಿಸಿಎಸ್, ಎಸ್‌ವಿಸಿಎಸ್ ಲಿಮಿಟೆಡ್ ಮತ್ತು ಐಷರ್ ಮೋಟರ್ಸ್ ಲಿಮಿಟೆಡ್ ಮಾತ್ರ ಕ್ರಮವಾಗಿ ಶೇ 0.18 ಹಾಗೂ ಶೇ 0.01 ರಷ್ಟು ಗಳಿಕೆ ನೋಡಿವೆ.

ಕುಸಿದ ಪ್ರಮುಖ ಕಂಪನಿಗಳು: ಜಾಗ್ವಾರ್ ಲ್ಯಾಂಡ್ ರೋವರ್‌ನ ಸಗಟು ವಹಿವಾಟು ಏಪ್ರಿಲ್ ನಲ್ಲಿ ಶೇ 13.3 ರಷ್ಟು ಕುಸಿದ ಕಾರಣ ಟಾಟಾ ಮೋಟರ್ಸ್‌ನ ಷೇರುಗಳು ಈ ವಾರದಲ್ಲಿ ಶೇ 11.7 ರಷ್ಟು ಹಿನ್ನಡೆ ಅನುಭವಿಸಿವೆ.

ಮೋರ್ಗನ್ ಸ್ಟ್ಯಾನ್ಲಿಯ ವರದಿ ಹಿನ್ನೆಲೆಯಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಶೇ 11.6 ರಷ್ಟು ಕುಸಿದಿವೆ. ನಾಲ್ಕು ದಿನಗಳ ಅವಧಿಯಲ್ಲಿ ಕಂಪನಿಯು ₹ 96,000 ಕೋಟಿಯಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ ಎಂದು ಅಂದಾಜು ಮಾಡಲಾಗಿದೆ.

ಪ್ರಮಾಣಿತ ಷೇರುಗಳ ಮಾರಾಟಕ್ಕೆ ಜೀ ಎಂಟರ್‌ಟೇನ್‌ಮೆಂಟ್‌ ಎಂಟರ್‌ಪ್ರೈಸಸ್‌ ಮುಂದಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳು ಶೇ 9.7 ಕುಸಿದಿವೆ. ಆದರೆ, ಪ್ರಮಾಣಿತ ಷೇರುಗಳ ಮಾರಾಟದ ವರದಿಯನ್ನು ಕಂಪನಿ ನಿರಾಕರಿಸಿದೆ. ಮಿಡ್ ಕ್ಯಾಪ್‌ ಷೇರುಗಳ ಪೈಕಿ ಡಿಎಚ್ಎಫ್ಎಲ್ ಶೇ 17.4 ರಷ್ಟು ಕುಸಿದಿದೆ.

ತ್ರೈಮಾಸಿಕ ವರದಿಗಳತ್ತ ನೋಟ: ತ್ರೈಮಾಸಿಕ ಅವಧಿಯಲ್ಲಿ ಏರ್‌ಟೆಲ್ ಉತ್ತಮ ಸಾಧನೆ ತೋರಿದೆ. ಕಳೆದ ವರ್ಷ ₹ 20,231 ಕೋಟಿ ಇದ್ದ ಒಟ್ಟು ವರಮಾನ ಈ ಬಾರಿ ₹ 20,602 ಕ್ಕೆ ಜಿಗಿದು ಶೇ 6.22 ರಷ್ಟು ಪ್ರಗತಿ ಸಾಧಿಸಿದೆ. ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಎಸ್‌ಬಿಐ ₹ 838 ಕೋಟಿ ನಿವ್ವಳ ಲಾಭ ಗಳಿಸಿದೆ.

ಉಳಿದಂತೆ ಐಸಿಐಸಿಐ, ಸಿಯೆಟ್, ಎಚ್‌ಸಿಎಲ್ ಟೆಕ್ನಾಲಜೀಸ್, ವೇದಾಂತ, ಮಾರಿಕೊ , ಟೈಟನ್ ತ್ರೈಮಾಸಿಕ ಸಾಧನೆಗಳು ಸಾಧಾರಣವಾಗಿವೆ.

ಮುನ್ನೋಟ: ಐಟಿಸಿ ಲಿಮಿಟೆಡ್, ಇಂಡಿಯನ್ ಆಯಿಲ್, ಎಚ್‌ಡಿಎಫ್ ಸಿ ಲಿ., ಬಜಾಜ್, ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಹಿಂಡಾಲ್ಕೊ, ಡಾ. ರೆಡ್ಡೀಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ. ಏಪ್ರಿಲ್‌ನ ಗ್ರಾಹಕ ದರ ಸೂಚ್ಯಂಕ (ಸಿಪಿಐ), ಸಗಟು ದರ ಸೂಚ್ಯಂಕ ಮತ್ತು ಆಮದು ರಫ್ತಿನ ಅಂಕಿ-ಅಂಶಗಳು ಪ್ರಕಟಗೊಳ್ಳಲಿವೆ. ಈ ಎಲ್ಲ ಅಂಶಗಳ ಜತೆ ಬಾಹ್ಯ ಬೆಳವಣಿಗೆಗಳೂ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

(ಲೇಖಕ- ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ )

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು