ಗುರುವಾರ , ಸೆಪ್ಟೆಂಬರ್ 23, 2021
27 °C

ಫಾರ್ಮಾ, ಹಣಕಾಸು ವಲಯದ ಷೇರುಗಳ ಗಳಿಕೆ: ಸೆನ್ಸೆಕ್ಸ್‌ 370 ಅಂಶ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯ ನಡುವೆ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಇದರಿಂದಾಗಿ ಫಾರ್ಮಾ ಮತ್ತು ಹಣಕಾಸು ಸಂಸ್ಥೆಗಳ ಷೇರುಗಳು ಸೋಮವಾರ ಆರಂಭಿಕ ವಹಿವಾಟಿನಲ್ಲಿ ಗಳಿಕೆ ದಾಖಲಿಸಿವೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 108.80 ಅಂಶ (ಶೇ 1.06) ಏರಿಕೆಯಾಗಿ 10,353.20 ಅಂಶ ತಲುಪಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌  370.09 ಅಂಶ ಹೆಚ್ಚಳದೊಂದಿಗೆ 35,101.82 ಅಂಶಗಳಲ್ಲಿ ವಹಿವಾಟು ನಡೆದಿದೆ.

ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 2.5ರಷ್ಟು ಹಾಗೂ ಬ್ಯಾಂಕ್‌ ಸೂಚ್ಯಂಕ ಶೇ 1.2ರಷ್ಟು ಹೆಚ್ಚಳ ಕಂಡಿದೆ.

ನಿಫ್ಟಿ 50 ಕಂಪನಿಗಳ ಸಾಲಿನಲ್ಲಿ ಬಜಾಜ್‌ ಫಿನ್‌ಸರ್ವ್ ಅತಿ ಹೆಚ್ಚು ಶೇ 5ರಷ್ಟು ಗಳಿಕೆ ದಾಖಲಿಸಿದ್ದು, ಸಿಪ್ಲಾ, ಬಜಾಜ್‌ ಫೈನಾನ್ಸ್‌, ಬಜಾಜ್‌ ಆಟೊ, ಐಸಿಐಸಿಐ ಬ್ಯಾಂಕ್‌, ಇಂಡಸ್ಇಂಡ್‌ ಬ್ಯಾಂಕ್‌, ಕೊಟ್ಯಾಕ್‌ ಬ್ಯಾಂಕ್‌ ಸೇರಿದಂತೆ 38 ಕಂಪನಿಗಳ ಷೇರುಗಳು ಸಕಾರಾತ್ಮ ವಹಿವಾಟು ಕಂಡಿವೆ.

ಕೋವಿಡ್‌–19 ಚಿಕಿತ್ಸೆಗಾಗಿ ಗ್ಲೆನ್‌ಮಾರ್ಕ್ ಫಾರ್ಮಾಸ್ಯೂಟಿಕಲ್ಸ್‌ನ ಆ್ಯಂಟಿ ವೈರಲ್‌ ಔಷಧ ಫ್ಯಾಬಿಫ್ಲೂ ಮಾರಾಟಕ್ಕೆ ದೇಶದಲ್ಲಿ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಇಂದು ಗ್ಲೆನ್‌ಮಾರ್ಕ್ ಕಂಪನಿ ಷೇರು ಶೇ 15ರಷ್ಟು ಗಳಿಕೆ ದಾಖಲಿಸಿದೆ.

ಕಳೆದ ವಾರ ವಹಿವಾಟು ಅಂತ್ಯಕ್ಕೆ ನಿಫ್ಟಿ ಶೇ 2.72ರಷ್ಟು ಹಾಗೂ ಸೆನ್ಸೆಕ್ಸ್‌ ಶೇ 2.81ರಷ್ಟು ಏರಿಕೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು