ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಪಿಎಫ್’ ಚಿಂತೆ ಬಿಡಿ, ‘ಇಪಿಎಫ್’ನಲ್ಲಿ ಹೂಡಿ

Last Updated 12 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

2020ರಏಪ್ರಿಲ್ – ಜೂನ್ ತ್ರೈಮಾಸಿಕ ಅವಧಿಗೆ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಗಣನೀಯ ಇಳಿಕೆ ಮಾಡಿದೆ. ಜನಪ್ರಿಯ ಹೂಡಿಕೆ ಯೋಜನೆಗಳಾದ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿ ಬಹುತೇಕ ಅಂಚೆ ಕಚೇರಿ ಯೋಜನೆಗಳ ಮೇಲೆ ; 70 ರಿಂದ ; 140 ಮೂಲಾಂಶಗಳಷ್ಟು (; 0.70 ರಿಂದ ; 1.40) ಬಡ್ಡಿ ದರ ತಗ್ಗಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ದೀರ್ಘಾವಧಿಯಲ್ಲಿ ವೇತನದಾರರಿಗೆ ಹೆಚ್ಚು ಬಡ್ಡಿ ಲಾಭ ತಂದು ಕೊಡುವ ಪರ್ಯಾಯ ಹೂಡಿಕೆ ಯಾವುದು ಎಂದು ಆಲೋಚನೆ ಮಾಡುತ್ತಿರುವವರಿಗೆ ಸೂಕ್ತ ಆಯ್ಕೆ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್). ಹೌದು ‘ಇಪಿಎಫ್’ನಲ್ಲಿ ಹೆಚ್ಚುವರಿ ಹೂಡಿಕೆಗೆ ಅವಕಾಶವಿದೆ. ಈ ಆಯ್ಕೆಯನ್ನು ನೀವು ಹೇಗೆ ಪಡೆಯಬೇಕು ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಪಿಪಿಎಫ್ ಬದಲು ಇಪಿಎಫ್ ಯಾಕೆ?; ಆಕರ್ಷಕ ಬಡ್ಡಿ ದರ, ಸುರಕ್ಷಿತ ಹೂಡಿಕೆಯ ಜತೆಗೆ ತೆರಿಗೆ ವಿನಾಯಿತಿ ಲಭ್ಯತೆಯ ಕಾರಣಕ್ಕೆ ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್) ಜನಪ್ರಿಯ ಹೂಡಿಕೆ ಸಾಧನಗಳಲ್ಲಿ ಒಂದಾಗಿತ್ತು. ಆದರೆ ಪಿಪಿಎಫ್ ಬಡ್ಡಿ ದರವನ್ನು ಸರ್ಕಾರ ; 7.9 ರಿಂದ ; 7.1 ಕ್ಕೆ ಇಳಿಕೆ ಮಾಡಿದೆ. ನಾಲ್ಕು ದಶಕಗಳಲ್ಲೇ ಪಿಪಿಎಫ್ ಹೂಡಿಕೆಗೆ ನಿಗದಿ ಮಾಡಲಾಗಿರುವ ಅತ್ಯಂತ ಕನಿಷ್ಠ ಬಡ್ಡಿ ದರ ಇದು. ಆದರೆ, ವೇತನದಾರರಾಗಿದ್ದರೆ ನೀವು ಚಿಂತೆ ಮಾಡಬೇಕಿಲ್ಲ. ಯಾಕಂದ್ರೆ ನಿಮಗೆ ‘ಇಪಿಎಫ್’ನಲ್ಲಿ ಹೆಚ್ಚುವರಿಯಾಗಿ ಹೂಡಿಕೆ ಮಾಡುವ ಆಯ್ಕೆಯಿದೆ. ಸದ್ಯ ಇಪಿಎಫ್ ಹೂಡಿಕೆ ಮೇಲಿನ ಬಡ್ಡಿ ದರ ; 8.5 ರಷ್ಟು ಇರುವುದರಿಂದ ‘ಪಿಪಿಎಫ್’ ನಲ್ಲಿ ಹೂಡಿಕೆ ಮಾಡುವ ದುಡ್ಡನ್ನೇ ನೀವು ‘ಇಪಿಎಫ್’ ನಲ್ಲಿ ತೊಡಗಿಸಿದರೆ ಬರೊಬ್ಬರಿ ; 1.4 ರಷ್ಟು ಅಧಿಕ ಬಡ್ಡಿ ಲಾಭ ಸಿಗುತ್ತದೆ. ‘ಇಪಿಎಫ್’ ನಲ್ಲಿ ಹೂಡಿಕೆ ಮಾಡಿದರೆ ‘ಪಿಪಿಎಫ್’ ಗೆ ಸಿಗುವಂತೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯೂ ಸಿಗುತ್ತದೆ.

‘ಇಪಿಎಫ್‌’ಗೆ ಹೆಚ್ಚುವರಿ ಹೂಡಿಕೆ ಹೇಗೆ?

ಕಾರ್ಮಿಕರ ಭವಿಷ್ಯ ನಿಧಿಯ ಖಾತೆಗೆ ಸ್ವಯಂಪ್ರೇರಿತವಾಗಿ ಹೆಚ್ಚುವರಿ ಕೊಡುಗೆ ನೀಡಬಹುದು. ಉದ್ಯೋಗಿಯ ಮೂಲ ವೇತನದ ; 12 ರಷ್ಟು ಹಣ ‘ಇಪಿಎಫ್’ಗೆ ಹೋಗುತ್ತದೆ. ಇಷ್ಟೇ ಪ್ರಮಾಣದ ಹಣವನ್ನು ಉದ್ಯೋಗದಾತ ಸಂಸ್ಥೆ ‘ಇಪಿಎಫ್’ ಗೆ ಕಟ್ಟುತ್ತದೆ. ಇದಕ್ಕಿಂತ ಹೆಚ್ಚಿಗೆ ಹಣವನ್ನು ಹೂಡಿಕೆ ಮಾಡಲು ‘ಇಪಿಎಫ್‌’ನಲ್ಲಿ ಅವಕಾಶವಿದೆ. ನಿಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಗರಿಷ್ಠ ಪಾಲನ್ನು ಮಾಸಿಕವಾಗಿ ನೀವು ‘ಇಪಿಎಫ್‌’ಗೆ ಹೆಚ್ಚುವರಿ ಕೊಡುಗೆಯಾಗಿ ನೀಡಬಹುದು. ‘ಇಪಿಎಫ್’ ಉಳಿತಾಯಕ್ಕೆ ನೀಡುವ ಬಡ್ಡಿಯನ್ನೇ ಈ ಹೆಚ್ಚುವರಿ ಹೂಡಿಕೆಗೂ ನೀಡಲಾಗುತ್ತದೆ. ಇಪಿಎಫ್ ಅಕೌಂಟ್ ಇರುವ ಎಲ್ಲ ನೌಕರರು ಇದರಲ್ಲಿ ಹೂಡಿಕೆ ಮಾಡಬಹುದು. ಮೆಚ್ಯೂರಿಟಿ ಅವಧಿಗಿಂತ ಮೊದಲೇ ಹಣ ಹಂಪಡೆದರೆ ತೆರಿಗೆ ಅನ್ವಯಿಸುತ್ತದೆ. ವೈದ್ಯಕೀಯ ತುರ್ತು, ಉನ್ನತ ಶಿಕ್ಷಣದ ಉದ್ದೇಶ , ಮದುವೆ, ಮನೆ ನಿರ್ಮಾಣ/ ಖರೀದಿಯಂತಹ ಸಂದರ್ಭದಲ್ಲಿ ಅವಧಿ ಪೂರ್ವ ‘ವಿಪಿಎಫ್’ ಹಿಂಪಡೆತಕ್ಕೆ ವಿನಾಯಿತಿ ಇದೆ.

‘ಪಿಪಿಎಫ್’, ‘ಇಪಿಎಫ್’ ಬಡ್ಡಿ ದರ ಹೋಲಿಕೆ

ಹಣಕಾಸು ವರ್ಷ;ಪಿಪಿಎಫ್ (%); ಇಪಿಎಫ್ (%)
2013-14;8.7;8.75
2014-15;8.7;8.75
2015-16;8.7;8.8
2016-17;8 ರಿಂದ 8.1;8.8
2017-18;7.6 ರಿಂದ 8;8.55
2018-19;7.6 ರಿಂದ7.9;8.65
2020 ಏಪ್ರಿಲ್ – ಜೂನ್ ;7.9 ರಿಂದ 7.1;8.50

(ಲೇಖಕ, ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

***

ಏಳು ವಾರಗಳ ನಂತರ ಪೇಟೆ ಚೇತರಿಕೆ

ಏಳು ವಾರಗಳ ಕಾಲ ಸತತ ಕುಸಿತ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಮತ್ತೆ ಚೇತರಿಕೆ ಕಂಡಿವೆ. ವಾರಾಂತ್ಯದಲ್ಲಿ 31,159 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ 3,568 ಅಂಶಗಳ ಸೇರ್ಪಡೆಯೊಂದಿಗೆ ಶೇ 12.93 ರಷ್ಟು ಜಿಗಿತ ಕಂಡಿದೆ. 9,111 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ (50) ಸೂಚ್ಯಂಕ 1,028 ಅಂಶಗಳ ಏರಿಕೆಯೊಂದಿಗೆ ಶೇ 12.72 ರಷ್ಟು ಹೆಚ್ಚಳ ಕಂಡಿದೆ. ಮಾರ್ಚ್ 16 ರ ನಂತರ ಕಂಡುಬಂದಿರುವ ಬಹುದೊಡ್ಡ ಚೇತರಿಕೆ ಇದಾಗಿದೆ.

ಮಿಡ್ ಕ್ಯಾಪ್ 100 ಸೂಚ್ಯಂಕ ಶೇ 10.93, ಸ್ಮಾಲ್ ಕ್ಯಾಪ್ 100 ಶೇ 9.65, ಬಿಎಸ್‌ಸಿ 500 ಶೇ 12.14, ಬಿಎಸ್‌ಸಿ ಸ್ಮಾಲ್ ಕ್ಯಾಪ್ ಶೇ 9.40, ಮಿಡ್ ಕ್ಯಾಪ್ ಶೇ 11.31 ರಷ್ಟು ಏರಿಕೆ ಕಂಡಿವೆ. ಎಲ್ಲ ವಲಯಗಳಲ್ಲೂ ಕಂಡುಬಂದ ಖರೀದಿ ಭರಾಟೆ ಈ ಚೇತರಿಕೆಗೆ ಕಾರಣವಾಗಿದೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಬ್ಯಾಂಕ್ ಶೇ 15.45, ವಾಹನ ತಯಾರಿಕೆ ಶೇ 23.26, ಹಣಕಾಸು ಸೇವೆ ಶೇ 14.59, ಎಫ್ಎಂಸಿಜಿ ಶೇ 9.10, ಮಾಹಿತಿ ತಂತ್ರಜ್ಞಾನ ಶೇ 8.98, ಮಾಧ್ಯಮ ಶೇ 11.98, ಲೋಹ ವಲಯ ಶೇ 11.99, ಫಾರ್ಮಾ ವಲಯ ಶೇ 19.55, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 5.68, ಖಾಸಗಿ ಬ್ಯಾಂಕ್ 16.78 ಮತ್ತು ರಿಯಲ್ ಎಸ್ಟೇಟ್ ಶೇ 7.96 ಅಷ್ಟು ಏರಿಕೆ ಕಂಡಿವೆ.

ನಿಫ್ಟಿಯಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ 36.62, ಮಾರುತಿ ಸುಜುಕಿ ಶೇ 33.37, ಸಿಪ್ಲಾ ಶೇ 29.12, ಆ್ಯಕ್ಸಿಸ್ ಬ್ಯಾಂಕ್ ಶೇ 29.05, ಇಂಡಸ್‌ಇಂಡ್ ಬ್ಯಾಂಕ್ ಶೇ 25.96, ಹೀರೊ ಮೋಟೊ ಕಾರ್ಪ್ ಶೇ 24.51, ವೇದಾಂತ ಶೇ 23.09, ಹಿಂಡಾಲ್ಕೊ ಶೇ 21.45, ಜೀ ಶೇ 20.35 ಮತ್ತು ಸನ್ ಫಾರ್ಮಾ ಶೇ 20.35 ರಷ್ಟು ಜಿಗಿದಿವೆ.

ಈ ವಾರ ಸುಮಾರು ₹ 3,098.68 ಕೋಟಿ ಮೊತ್ತದ ಹೂಡಿಕೆಯನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾಡಿದ್ದಾರೆ. ‘ಕೋವಿಡ್-19’ನಿಂದಾಗಿ ಮಾರ್ಚ್‌ನಲ್ಲೇ ವಿದೇಶಿ ಹೂಡಿಕೆದಾರರು ₹ 61,973 ಕೋಟಿ ಮೌಲ್ಯದ ಹೂಡಿಕೆ ಹಿಂಪಡೆದಿದ್ದರು.

ಮುನ್ನೋಟ

ಕೋವಿಡ್ ನಿಯಂತ್ರಣದ ವಿಚಾರದಲ್ಲಿ ನಾವು ಎತ್ತ ಸಾಗುತ್ತೇವೆ ಮತ್ತು ಲಾಕ್ ಡೌನ್ ಬಗ್ಗೆ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಈ ವಾರದ ಸೂಚ್ಯಂಕಗಳ ಏರಿಳಿತ ನಿಂತಿದೆ. ಕಳೆದ ವಾರ ಮಾರುಕಟ್ಟೆ ಏರಿಕೆ ಕಂಡಿದ್ದರೂ ಅದು ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರ ಮತ್ತಷ್ಟು ವಲಯಗಳಿಗೆ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಯಿದೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಔಷಧಿ ತಯಾರಿಕೆ ವಲಯ, ತಂತ್ರಜ್ಞಾನ ಮತ್ತು ತ್ವರಿತವಾಗಿ ಬಿಕರಿಯಾಗುವ ದಿನಬಳಕೆ ವಸ್ತುಗಳ (ಎಫ್‌ಎಂಸಿಜಿ) ವಲಯದಲ್ಲಿ ಹೂಡಿಕೆ ಬಗ್ಗೆ ಚಿಂತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT