ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮಾತು: ಕಂಪನಿಗಳ ಜಾತಕ ನೋಡುವುದು ಹೇಗೆ?

Last Updated 6 ಸೆಪ್ಟೆಂಬರ್ 2021, 22:20 IST
ಅಕ್ಷರ ಗಾತ್ರ

ಮದುವೆ ನಿಶ್ಚಯಕ್ಕೂ ಮುನ್ನ ಜಾತಕ ನೋಡಿ ಮುಂದುವರಿಯುವ ಸಂಪ್ರದಾಯ ಇರುವಂತೆಯೇ, ಷೇರುಪೇಟೆಯಲ್ಲಿ ಹೂಡಿಕೆಗೂ ಮುನ್ನ ಕಂಪನಿಯ ಜಾತಕ ಆಧರಿಸಿ ಹೂಡಿಕೆ ನಿರ್ಧಾರ ಮಾಡುವುದು ಬಹಳ ಮುಖ್ಯ. ಕಂಪನಿಯೊಂದರ ‘ಜಾತಕಫಲ’ ಅರಿಯದೆ ಹೂಡಿಕೆ ಮಾಡಿದರೆ ದುಡ್ಡು ಕರಗುವುದು ನಿಶ್ಚಿತ. ಕಂಪನಿಗಳ ಬಗ್ಗೆ ಮಾಹಿತಿ ಹುಡುಕುವುದುಹೇಗೆ? ಎಲ್ಲೆಲ್ಲಿ ಆ ಮಾಹಿತಿ ಸಿಗುತ್ತದೆ ಮತ್ತು ಅದನ್ನು ಅರ್ಥೈಸಿಕೊಳ್ಳುವುದು ಹೇಗೆ ಎಂದು ತಿಳಿಯೋಣ.

ಮಾಹಿತಿ ಹುಡುಕಾಟ: ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಹಣಕಾಸು ಸ್ಥಿತಿಗತಿ ಬಗ್ಗೆ ಉಚಿತವಾಗಿ ಮಾಹಿತಿ ಒದಗಿಸುವ ಹಲವು ವೆಬ್‌ಸೈಟ್‌ಗಳು ಇವೆ. ಷೇರುಪೇಟೆಯ ಬಗ್ಗೆ ಒಟ್ಟಾರೆ ಸಮಗ್ರ ಮಾಹಿತಿಬೇಕೆಂದರೆ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಮತ್ತು ಮುಂಬೈ ಷೇರುಪೇಟೆಯ (ಬಿಎಸ್‌ಇ) ವೆಬ್‌ಸೈಟ್‌ ಕಡೆ ನೋಟ ಹರಿಸಬಹುದು.

ಉದಾಹರಣೆಗೆ, ನೀವುರಾಷ್ಟ್ರೀಯ ಷೇರುಪೇಟೆಯ ವೆಬ್‌ಸೈಟ್‌ಗೆ (www.nseindia.com) ಲಾಗಿನ್ ಆದರೆ ಮುಖಪುಟದಲ್ಲೇ ಕಾರ್ಪೊರೇಟ್ ಅನೌನ್ಸ್‌ಮೆಂಟ್ಸ್, ಬೋರ್ಡ್ ಮೀಟಿಂಗ್ಸ್, ಕಾರ್ಪೊರೇಟ್ ಆ್ಯಕ್ಷನ್ಸ್ ಎಂಬ ಟ್ಯಾಬ್‌ಗಳು ಇವೆ. ಅವುಗಳ ಮೇಲೆ ಕ್ಲಿಕ್‌ ಮಾಡಿದರೆ ಕಂಪನಿಗಳ ಪ್ರಮುಖ ಘೋಷಣೆಗಳು, ಮಂಡಳಿ ಸಭೆಗಳು, ಲಾಭಾಂಶ ಹಂಚಿಕೆ, ಬೋನಸ್ ಷೇರು ಘೋಷಣೆ ಬಗ್ಗೆ
ಮಾಹಿತಿ ಲಭಿಸುತ್ತದೆ. ನಿಮಗೆ ನಿರ್ದಿಷ್ಟ ಕಂಪನಿಯ ಮಾಹಿತಿ ಬೇಕು ಎಂದಾದರೆ ಮನಿ ಕಂಟ್ರೋಲ್ ಡಾಟ್ ಕಾಂ, ಸ್ಕ್ರೀನರ್
ಡಾಟ್ ಇನ್, ವ್ಯಾಲ್ಯೂರಿಸರ್ಚ್ ವೆಬ್ ಸೈಟ್‌ಗಳನ್ನು ನೋಡಬಹುದು.

ಮನಿ ಕಂಟ್ರೋಲ್‌ನಂತಹ ತಾಣಗಳು ನಿರ್ದಿಷ್ಟ ಕಂಪನಿಗಳ ಶಕ್ತಿ–ದೌರ್ಬಲ್ಯ, ಆ ಕಂಪನಿಗೆ ಇರುವ ಅವಕಾಶಗಳು ಹಾಗೂ ಅಪಾಯಗಳ ಬಗ್ಗೆ ವಿವರ ನೀಡುತ್ತವೆ. ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ನೀವು, ನಿಮಗೆ ಆಸಕ್ತಿ ಇರುವಕಂಪನಿಯ ಸಾಮರ್ಥ್ಯ, ದೌರ್ಬಲ್ಯ, ಆ ಕಂಪನಿಗೆ ಇರುವ ಸವಾಲುಗಳು ಹಾಗೂ ಅವಕಾಶಗಳು ಏನು ಎಂಬುದನ್ನು ಅರಿತುಕೊಳ್ಳಬಹುದು.

ಇಷ್ಟೇ ಅಲ್ಲದೆ, ಕಂಪನಿಯ ಲಾಭ–ನಷ್ಟ ಎಷ್ಟು, ಪ್ರಸ್ತುತ ಹಣಕಾಸು ಸ್ಥಿತಿ ಹೇಗಿದೆ, ಸಾಲದ ಹೊರೆ ಎಷ್ಟಿದೆ, ನಗದು ಲಭ್ಯತೆ ಉತ್ತಮವಾಗಿದೆಯೇ, ಕಂಪನಿಯ ಪ್ರವರ್ತಕರು ಹೊಂದಿರುವ ಷೇರುಗಳ ಪ್ರಮಾಣ ಎಷ್ಟು, ಕಂಪನಿ ಎಷ್ಟು ಪ್ರಮಾಣದ ಷೇರುಗಳನ್ನು ಅಡಮಾನ ಇರಿಸಿದೆ ಎಂಬ ವಿವರಗಳನ್ನು ತಿಳಿದುಕೊಳ್ಳಬಹುದು. ಅಲ್ಲದೆ, ನೀವು ನೋಡುತ್ತಿರುವ ಕಂಪನಿಯು ತನ್ನ ಪ್ರತಿಸ್ಪರ್ಧಿಗಳ ಜೊತೆ ಹೋಲಿಸಿದರೆ ಎಷ್ಟು ಸಾಧನೆ ತೋರಿದೆ,ಬ್ರೋಕರೇಜ್ ಸಂಸ್ಥೆಗಳು ಆ ಕಂಪನಿ ಬಗ್ಗೆ ಸಿದ್ಧಪಡಿಸಿರುವ ಸಂಶೋಧನಾ ವರದಿಗಳು ಏನು ಹೇಳುತ್ತವೆ, ವಿದೇಶಿಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರು ಎಷ್ಟು ಪ್ರಮಾಣದಲ್ಲಿ ಅಲ್ಲಿ ಹೂಡಿಕೆ ಮಾಡಿದ್ದಾರೆ ಎಂಬೆಲ್ಲ ವಿವರಗಳನ್ನು ಪಡೆಯಬಹುದು.

ಇವೆಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ನೀವು ಯಾವ ಕಂಪನಿಯ ಷೇರಿನಲ್ಲಿ ಹಣ ತೊಡಗಿಸಬಹುದು ಎಂಬ ತೀರ್ಮಾನ ಮಾಡಬಹುದು. ಲೆಕ್ಕಾಚಾರಗಳ ಬಳಿಕ ಮಾಡುವ ಷೇರುಹೂಡಿಕೆ ನಿಮಗೆ ಫಲ ಕೊಡುವ ಸಾಧ್ಯತೆ ಹೆಚ್ಚು.

(ಗಮನಿಸಿ: ಬರಹದಲ್ಲಿ ಉಲ್ಲೇಖಿಸಿರುವ ಕೆಲವು ವೆಬ್‌ಸೈಟ್‌ಗಳ ಹೆಸರು ಉದಾಹರಣೆಗೆ ಮಾತ್ರ; ಅವೇ ವೆಬ್‌ಸೈಟ್‌ಗಳನ್ನು ಗಮನಿಸಬೇಕು ಎಂಬ ಶಿಫಾರಸು ಅಲ್ಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT