ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರಾಚ್ಯ ಸಂಘರ್ಷ: ಷೇರುಪೇಟೆ ತತ್ತರ, 2 ದಿನಗಳಲ್ಲಿ ಕರಗಿತು ₹3.36 ಲಕ್ಷ ಕೋಟಿ

ಕರಡಿ ಕುಣಿತ
Last Updated 7 ಜನವರಿ 2020, 1:56 IST
ಅಕ್ಷರ ಗಾತ್ರ

ಮುಂಬೈ: ಅಮೆರಿಕ ಮತ್ತು ಇರಾನ್‌ ಮಧ್ಯೆ ನಡೆಯುತ್ತಿರುವ ಸೇನಾ ಸಂಘರ್ಷವು, ದೇಶದ ಷೇರುಪೇಟೆಗಳನ್ನು ತತ್ತರಿಸುವಂತೆ ಮಾಡಿದೆ.ಎರಡು ದಿನಗಳ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ, ಹೂಡಿಕೆದಾರರ ಸಂಪತ್ತು ₹ 3.36 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 153.90 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಸೋಮವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 788 ಅಂಶ ಕುಸಿತ ಕಂಡು 40,676 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಆರು ತಿಂಗಳ ಬಳಿಕ (ಜುಲೈ 8ರ) ದಿನದ ವಹಿವಾಟಿನಲ್ಲಿ ಸೂಚ್ಯಂಕದ ಗರಿಷ್ಠ ಕುಸಿತ ಇದಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ233 ಅಂಶ ಇಳಿಕೆಯಾಗಿ11,933 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಯಿತು.

ಗರಿಷ್ಠ ನಷ್ಟ: ಬಜಾಜ್‌ ಫೈನಾನ್ಸ್‌ ಷೇರು ಶೇ 4.63ರಷ್ಟು ಗರಿಷ್ಠ ನಷ್ಟ ಕಂಡಿತು. ಎಸ್‌ಬಿಐ, ಇಂಡಸ್‌ಇಂಡ್‌ ಬ್ಯಾಂಕ್‌, ಮಾರುತಿ, ಎಚ್‌ಡಿಎಫ್‌ಸಿ, ಹೀರೊ ಮೋಟೊಕಾರ್ಪ್‌, ಆ್ಯಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ನಷ್ಟ ಕಂಡಿವೆ.

ಗಳಿಕೆ: ಟೈಟಾನ್‌ ಮತ್ತು ಪವರ್‌ ಗ್ರಿಡ್‌ ಕಂಪನಿಯ ಷೇರುಗಳು ಮಾತ್ರವೇ ಗಳಿಕೆ ಕಂಡುಕೊಂಡಿವೆ.

ರೂಪಾಯಿ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ13 ಪೈಸೆ ಕುಸಿತ ಕಂಡು ಒಂದು ಡಾಲರ್‌ಗೆ₹ 71.93ರಂತೆ ವಿನಿಮಯಗೊಂಡಿತು.

ಒಟ್ಟಾರೆ ಮೂರು ದಿನಗಳ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 71 ಪೈಸೆಗಳಷ್ಟು ಇಳಿಕೆ ಕಂಡಿದೆ.

ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಕಾಣುತ್ತಿದೆ. ಇದು ರೂಪಾಯಿ ಮೌಲ್ಯದ ಮೇಲೆ ಒತ್ತಡ ಸೃಷ್ಟಿಸುತ್ತಿದೆ ಎಂದು ವರ್ತಕರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿಯೂ ರೂಪಾಯಿ ಮೇಲೆ ಜಾಗತಿಕ ವಿದ್ಯಮಾನಗಳ ಪ್ರಭಾವ ಹೆಚ್ಚಿರಲಿದೆ ಎಂದು ತಿಳಿಸಿದ್ದಾರೆ.

ಕಚ್ಚಾ ತೈಲ ಬೆಲೆ ಶೇ 3ರಷ್ಟು ಹೆಚ್ಚಳ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಸೋಮವಾರ ಪ್ರತಿ ಬ್ಯಾರೆಲ್‌ಗೆ ₹ 4,646 ರಂತೆ (ಶೇ 3) ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ನ್ಯೂಯಾರ್ಕ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 70.16 ಡಾಲರ್‌ಗೆ (ಶೇ 2.27) ತಲುಪಿದೆ.

ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿಯಿಂದ ಬೆಲೆ ಏರುಗತಿಯಲ್ಲಿ ಇದೆ.

₹ 41 ಸಾವಿರ ದಾಟಿದ ಚಿನ್ನ

ದೇಶದಾದ್ಯಂತ ಚಿನ್ನದ ಬೆಲೆಯು ಸೋಮವಾರ ಆರೂವರೆ ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ದಾಖಲಿಸಿತು. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹ 625ರಂತೆ ಏರಿಕೆಯಾಗಿ ₹ 40,825ರಂತೆ ಮಾರಾಟವಾಯಿತು.

ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು. ಹೀಗಾಗಿ ಹೂಡಿಕೆದಾರರು ಚಿನ್ನ ಖರೀದಿಗೆ ಹೆಚ್ಚಿನ ಗಮನ ನೀಡಿದರು. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ವಿಶ್ಲೇಷಣೆ ಮಾಡಿದೆ.

ಬೆಳ್ಳಿ ಧಾರಣೆಯೂ ಕೆ.ಜಿಗೆ ₹47,600 ರಿಂದ ₹ 48,500ಕ್ಕೆ ಏರಿಕೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT