ಬುಧವಾರ, ಏಪ್ರಿಲ್ 14, 2021
26 °C
ಸ್ಟೀಲ್‌ ಕಂಪನಿಗಳ ಷೇರಿನ ಮೌಲ್ಯ ವರ್ಷದಲ್ಲೇ ಒಂದು ಪಟ್ಟು ಹೆಚ್ಚಳ

PV Web Exclusive | ತೂಕ ಹೆಚ್ಚಿಸಿಕೊಂಡ ಲೋಹದ ಕಂಪನಿಗಳು

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದೇಶದಲ್ಲಿ ಆರ್ಥಿಕತೆ ಚೇತರಿಸಿಕೊಂಡ ಬೆನ್ನಲ್ಲೇ ಹೂಡಿಕೆದಾರರು ಲೋಹದ ವಲಯದತ್ತ ಚಿತ್ತ ಹರಿಸಿದ ಪರಿಣಾಮ ಪ್ರಮುಖ ಸ್ಟೀಲ್‌ ಕಂಪನಿಗಳ ಷೇರಿನ ಮೌಲ್ಯವು ಒಂದು ವರ್ಷದ ಅವಧಿಯಲ್ಲೇ ಒಂದು ಪಟ್ಟು ಹೆಚ್ಚಾಗಿದೆ. ಷೇರುಪೇಟೆಯಲ್ಲಿ ಲೋಹದ ವಲಯದಲ್ಲಾದ ಬದಲಾವಣೆಯ ಪಕ್ಷಿನೋಟ ಇಲ್ಲಿದೆ...

***

ದೇಶದಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಿದ ಬೆನ್ನಲೇ ಮೂಲಸೌಕರ್ಯ, ರಿಯಲ್‌ ಎಸ್ಟೇಟ್‌ ಹಾಗೂ ಆಟೊಮೊಬೈಲ್‌ ವಲಯಗಳಲ್ಲಿನ ಬೇಡಿಕೆ ಹೆಚ್ಚಿದ ಪರಿಣಾಮ ಹೂಡಿಕೆದಾರರು ಲೋಹದ ಕಂಪನಿಗಳ ಷೇರಿನ ಮೇಲೆ ಚಿತ್ತ ಹರಿಸಿದ್ದಾರೆ. ಇದರಿಂದಾಗಿ ತೂಕ ಹೆಚ್ಚಿಸಿಕೊಂಡ ಲೋಹ ವಲಯದ ಹಲವು ಪ್ರಮುಖ ಸ್ಟೀಲ್‌ ಕಂಪನಿಗಳು ಷೇರಿನ ಮೌಲ್ಯವನ್ನು ಒಂದು ವರ್ಷದ ಅವಧಿಯಲ್ಲೇ ಒಂದು ಪಟ್ಟು ಹೆಚ್ಚಿಸಿಕೊಳ್ಳುವ ಮೂಲಕ ಗಮನ ಸೆಳೆದಿವೆ.

ವರ್ಷದ ಆರಂಭದಿಂದ ಈ ದಿನದವರೆಗೆ (YTD) ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕ ‘ನಿಫ್ಟಿ 50’ ಶೇ 7.50ರಷ್ಟು ಏರಿಕೆ ಕಂಡಿದ್ದರೆ, ‘ನಿಫ್ಟಿ ಮೆಟಲ್‌’ ಸೂಚ್ಯಂಕವು ಶೇ 17.99ರಷ್ಟು ತೂಕವನ್ನು ಹೆಚ್ಚಿಸಿಕೊಂಡಿದೆ. ಮಾರ್ಚ್‌ 12ಕ್ಕೆ ವಹಿವಾಟು ಅಂತ್ಯಗೊಂಡಂತೆ 3,840.20 ಅಂಶಗಳನ್ನು ಒಳಗೊಂಡಿರುವ ‘ನಿಫ್ಟಿ ಮೆಟಲ್‌’ ಸೂಚ್ಯಂಕವು ಕಳೆದ ಒಂದು ತಿಂಗಳ ಅವಧಿಯಲ್ಲಿ ಶೇ 17.99 (ನಿಫ್ಟಿ 50 ಸೂಚ್ಯಂಕವು ಶೇ –0.87); ಮೂರು ತಿಂಗಳ ಅವಧಿಯಲ್ಲಿ ಶೇ 22.06 (ಶೇ 11.23); ಆರು ತಿಂಗಳಲ್ಲಿ ಶೇ 61.06 (ಶೇ 31.11) ಹಾಗೂ ಒಂದು ವರ್ಷದಲ್ಲಿ ಶೇ 113.27 (ಶೇ 56.73) ಅಂಶಗಳ ಏರಿಕೆ ಕಂಡಿದೆ.

ಎರಡು ವರ್ಷಗಳ ಅವಧಿಗೆ ಹೋಲಿಸಿದರೆ ‘ನಿಫ್ಟಿ ಮೆಟಲ್‌’ ಸೂಚ್ಯಂಕವು ಶೇ 26.20 ಅಂಶಗಳ ಏರಿಕೆ ಕಂಡಿದ್ದರೆ, ‘ನಿಫ್ಟಿ 50’ ಸೂಚ್ಯಂಕವು ಶೇ 33ರಷ್ಟು ಏರಿಕೆಯಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಮೆಟಲ್‌ ಸೂಚ್ಯಂಕವು ಕೇವಲ ಶೇ 1.95 ಅಂಶಗಳ ಏರಿಕೆ ಕಂಡಿದ್ದರೆ, ‘ನಿಫ್ಟಿ 50’ ಸೂಚ್ಯಂಕವು ಶೇ 44.23ರಷ್ಟು ಏರಿಕೆಯನ್ನು ದಾಖಲಿಸಿದೆ. 2020ರ ಮಾರ್ಚ್‌ 23ರಂದು 52 ವಾರಗಳ ಕನಿಷ್ಠ ಮಟ್ಟವಾದ 1,480.70 ಅಂಶಗಳಿಗೆ ಕುಸಿದಿದ್ದ ನಿಫ್ಟಿ ಮೆಟಲ್‌ ಸೂಚ್ಯಂಕವು, 2021ರ ಮಾರ್ಚ್‌ 3ರಂದು 52 ವಾರಗಳ ಗರಿಷ್ಠ ಮಟ್ಟವಾದ 4,075.40ಕ್ಕೆ ತಲುಪಿತ್ತು.

ಎಪಿಎಲ್‌ ಅಪೋಲೊ ಶೇ 311 ಗಳಿಕೆ

₹ 10 ಸಾವಿರ ಕೋಟಿಗಿಂತಲೂ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಲೋಹ ವಲಯದ ಏಳು ಕಬ್ಬಿಣ ಹಾಗೂ ಸ್ಟೀಲ್‌ ಕಂಪನಿಗಳು ರಾಷ್ಟ್ರೀಯ ಷೇರುಪೇಟೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ತನ್ನ ಷೇರಿನ ಮೌಲ್ಯವನ್ನು ಒಂದು ಪಟ್ಟಿಗಿಂತಲೂ ಹೆಚ್ಚು ವೃದ್ಧಿಸಿಕೊಂಡಿವೆ. ಇವುಗಳ ಪೈಕಿ ಎಪಿಎಲ್‌ ಅಪೋಲೊ ಕಂಪನಿಯು ತನ್ನ ಷೇರಿನ ಮೌಲ್ಯವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿದೆ.

ಇದೇ ಮಾರ್ಚ್‌ 12ಕ್ಕೆ ಎಪಿಎಲ್‌ ಅಪೋಲೊ ಕಂಪನಿಯ ಷೇರಿನ ಬೆಲೆಯು 1,257.55ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈ ಕಂಪನಿಯ ಷೇರಿನ ಬೆಲೆಯು ಶೇ 71.13; ಆರು ತಿಂಗಳಲ್ಲಿ ಶೇ 159.68 ಹಾಗೂ ಒಂದು ವರ್ಷದ ಅವಧಿಯಲ್ಲಿ ಶೇ 311.22ರಷ್ಟು ಏರಿಕೆಯನ್ನು ದಾಖಲಿಸಿದೆ. ಎರಡು ವರ್ಷಗಳಲ್ಲಿ ಶೇ 357.04 ಹಾಗೂ ಮೂರು ವರ್ಷಗಳಲ್ಲಿ ಶೇ 233.54ರಷ್ಟು ಗಳಿಕೆಯನ್ನು ಹೂಡಿಕೆದಾರರಿಗೆ ತಂದುಕೊಟ್ಟಿದೆ. ವರ್ಷದ ಆರಂಭದಿಂದ ಈ ದಿನದವರೆಗೆ (YTD) ಶೇ 42.42ರಷ್ಟು ಲಾಭವನ್ನು ನೀಡಿದೆ.

ಒಂದು ವರ್ಷದ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಸೈಲ್‌ ಕಂಪನಿಯು ಶೇ 194.94 ಹಾಗೂ ಜಿಂದಾಲ್‌ ಸ್ಟೀಲ್‌ ಕಂಪನಿಯು ಶೇ 178.88 ಗಳಿಕೆಯನ್ನು ಹೂಡಿಕೆದಾರರಿಗೆ ತಂದುಕೊಡುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಹಿಂಡಾಲ್ಕೊ ಕಂಪನಿಯು ಶೇ 174.71; ಟಾಟಾ ಸ್ಟೀಲ್‌ ಕಂಪನಿಯು ಶೇ 150.46; ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯು ಶೇ 106.08 ಹಾಗೂ ಎನ್‌ಎಂಡಿಸಿ ಕಂಪನಿಯು ಶೇ 86.12ರಷ್ಟು ಲಾಭವನ್ನು ಹೂಡಿಕೆದಾರರಿಗೆ ತಂದುಕೊಡುವಲ್ಲಿ ಯಶಸ್ವಿಯಾಗಿವೆ.

ಸ್ಟೀಲ್‌ಗೆ ಹೆಚ್ಚಿದ ಬೇಡಿಕೆ

ಕಳೆದ ವರ್ಷದಿಂದ ಈ ವರ್ಷಕ್ಕೆ ಹೋಲಿಸಿದರೆ 2021ರ ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಸ್ಟೀಲ್‌ ಬೇಡಿಕೆ ಪ್ರಮಾಣದಲ್ಲಿ ಕ್ರಮವಾಗಿ ಶೇ 6 ಹಾಗೂ ಶೇ 7ರಷ್ಟು ಹೆಚ್ಚಾಗಿದೆ ಎಂದು ಕೋಟಕ್‌ ಸೆಕ್ಯೂರಿಟೀಸ್‌ ಬ್ರೋಕರೇಜ್‌ ಕಂಪನಿಯು ಅಭಿಪ್ರಾಯಪಟ್ಟಿದೆ.

ಕೋವಿಡ್‌ ಸಾಂಕ್ರಾಮಿಕ ರೋಗ ವ್ಯಾಪಿಸಿ ಲಾಕ್‌ಡೌನ್‌ ಘೋಷಿಸಿದಾಗ ಸ್ಟೀಲ್‌ ವಲಯದ ಕಂಪನಿಗಳಿಗೆ ಕಾರ್ಯಾಚರಣೆ ಮಾಡುವುದು ಬಹಳ ಕಷ್ಟದ ಕೆಲಸವಾಗಿತ್ತು. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುವ ಮೂಲಕ ಗಮನಸೆಳೆದಿದೆ.

2021–22ನೇ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕ ಅವಧಿಯಿಂದ ಸ್ಟೀಲ್‌ ವಲಯವು ಕ್ಷಿಪ್ರಗತಿಯಲ್ಲಿ ಚೇತರಿಕೆ ಕಂಡಿದೆ. ರಿಟೇಲ್‌ ಬೇಡಿಕೆ ಹೆಚ್ಚಿರುವುದು, ಗ್ರಾಮೀಣ ಆರ್ಥಿಕತೆ ಚೇತರಿಕೆ ಕಂಡಿರುವುದು ಹಾಗೂ ಆಟೊಮೊಬೈಲ್‌ ವಲಯದಲ್ಲಿ ಟ್ರ್ಯಾಕ್ಟರ್‌, ಪ್ರಯಾಣಿಕರ ವಾಹನ ಹಾಗೂ ದ್ವಿಚಕ್ರ ವಾಹನಗಳ ಖರೀದಿ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಡಿಸೆಂಬರ್‌ ಅಂತ್ಯಕ್ಕೆ ಲೋಹದ ಕಂಪನಿಗಳ ಲಾಭ ಗಳಿಕೆಯ ಪ್ರಮಾಣ ದಾಖಲೆಯ ಮಟ್ಟಕ್ಕೆ ತಲುಪಿದ್ದು, ಮಾರ್ಚ್‌ ಅಂತ್ಯಕ್ಕೂ ಇದು ಮುಂದುವರಿಯುವ ನಿರೀಕ್ಷೆ ಇದೆ ಎಂದು ಷೇರುಪೇಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು