ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಷೇರುಪೇಟೆ: ಕರಗಿದ ₹ 4.23 ಲಕ್ಷ ಕೋಟಿ ಸಂಪತ್ತು

Last Updated 21 ಸೆಪ್ಟೆಂಬರ್ 2020, 14:03 IST
ಅಕ್ಷರ ಗಾತ್ರ

ಮುಂಬೈ: ಯುರೋಪಿನಲ್ಲಿ ಕೋವಿಡ್–19 ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದರಿಂದ ಅಲ್ಲಿ ಮತ್ತೊಂದು ಸುತ್ತಿನ ಲಾಕ್‌ಡೌನ್‌ ಹೇರಬಹುದು ಎಂಬ ಭೀತಿಯ ಕಾರಣಕ್ಕೆ ವಿಶ್ವದೆಲ್ಲೆಡೆ ಷೇರು ಮಾರುಕಟ್ಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು. ಇದರ ಪರಿಣಾಮ ಮುಂಬೈ ಷೇರುಪೇಟೆಯ ಮೇಲೆಯೂ ಆಯಿತು. ಬಿಎಸ್‌ಇ ಸೆನ್ಸೆಕ್ಸ್ ಸಂವೇದಿ ಸೂಚ್ಯಂಕವು 812 ಅಂಶಗಳಷ್ಟು ಕುಸಿತ ಕಂಡಿತು. ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರ ಒಟ್ಟು ಸಂಪತ್ತಿನಲ್ಲಿ ₹ 4.23 ಲಕ್ಷ ಕೋಟಿ ಕರಗಿಹೋಯಿತು.

ಕೋವಿಡ್–19 ಪ್ರಕರಣಗಳು ಮತ್ತೆ ಹೆಚ್ಚುವುದನ್ನು ತಡೆಯುವ ಉದ್ದೇಶದಿಂದ ಡೆನ್ಮಾರ್ಕ್‌, ಗ್ರೀಸ್‌ ಮತ್ತು ಸ್ಪೇನ್‌ ದೇಶಗಳಲ್ಲಿ ಹೊಸದಾಗಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬ್ರಿಟನ್‌ ಕೂಡ ಎರಡನೆಯ ಸುತ್ತಿನ ಲಾಕ್‌ಡೌನ್‌ ಹೇರುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಇದರಿಂದಾಗಿ, ಯುರೋಪಿನ ಹೂಡಿಕೆದಾರರು ಪ್ರವಾಸೋದ್ಯಮ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳನ್ನು ಮಾರಾಟ ಮಾಡಲು ಮುಂದಾದರು.

ಇತ್ತ ಮುಂಬೈ ಷೇರುಪೇಟೆಯಲ್ಲಿ ಕೂಡ ನಕಾರಾತ್ಮಕ ವಹಿವಾಟು ನಡೆಯಿತು. ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್‌ಇ ಶೇಕಡ 2.09ರಷ್ಟು ಕುಸಿದು, 38,034 ಅಂಶಗಳಲ್ಲಿ ಕೊನೆಗೊಂಡಿತು. ಎನ್‌ಎಸ್‌ಇ ಸೂಚ್ಯಂಕ ಕೂಡ ಶೇ 2.21ರಷ್ಟು ಕುಸಿತ ದಾಖಲಿಸಿತು.

ಸೆನ್ಸೆಕ್ಸ್‌ನಲ್ಲಿ ಅತಿಹೆಚ್ಚು ಇಳಿಕೆ ದಾಖಲಿಸಿದ್ದು ಇಂಡಸ್ ಇಂಡ್ ಬ್ಯಾಂಕಿನ ಷೇರುಗಳು. ಈ ಷೇರುಗಳು ಶೇ 8.67ರಷ್ಟು ಇಳಿಕೆ ಕಂಡವು. ಭಾರ್ತಿ ಏರ್ಟೆಲ್‌, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್‌, ಮಹೀಂದ್ರ ಆ್ಯಂಡ್ ಮಹೀಂದ್ರ, ಆ್ಯಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಕೂಡ ಇಳಿಕೆ ಕಂಡವು. ಕೋಟಕ್ ಮಹೀಂದ್ರ ಬ್ಯಾಂಕ್, ಇನ್ಫೊಸಿಸ್ ಮತ್ತು ಟಿಸಿಎಸ್‌ ಷೇರುಗಳು ಮಾತ್ರ ಗಳಿಕೆ ದಾಖಲಿಸಿದವು.

‘ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳನ್ನು ಮಾರಾಟ ಮಾಡಿದ ಪರಿಣಾಮವಾಗಿ ಸೂಚ್ಯಂಕಗಳು ಕುಸಿದಿವೆ. ಜಗತ್ತಿನ ಬಹುತೇಕ ಮಾರುಕಟ್ಟೆಗಳಲ್ಲಿ ಹೀಗೇ ಆಗಿದೆ. ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಅಸ್ಥಿರತೆ ಕಾಣಿಸಿಕೊಳ್ಳಬಹುದು. ಹಾಗಾಗಿ ಎಚ್ಚರದಿಂದ ಇರಿ’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೂಡಿಕೆದಾರರಿಗೆ ಕಿವಿಮಾತು ಹೇಳಿದ್ದಾರೆ.

ಶಾಂಘೈ, ಹಾಂಗ್‌ಕಾಂಗ್‌ ಮತ್ತು ಸೋಲ್‌ನ ಷೇರುಪೇಟೆಗಳು ಕೂಡ ಕುಸಿತ ಕಂಡಿವೆ. ಯುರೋಪಿನ ಷೇರು ಮಾರುಕಟ್ಟೆಗಳು ಗರಿಷ್ಠ ಶೇ 3ರಷ್ಟರವರೆಗೆ ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT