ಸೋಮವಾರ, ಏಪ್ರಿಲ್ 6, 2020
19 °C

ಷೇರುಪೇಟೆಯಲ್ಲಿ ಹಾವು–ಏಣಿ ಆಟ: ಯೆಸ್‌ ಬ್ಯಾಂಕ್ ಷೇರು ಶೇ 56ರಷ್ಟು ಗಳಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಷೇರುಪೇಟೆ

ಮುಂಬೈ: ಕೋವಿಡ್‌–19 ಸಾಂಕ್ರಾಮಿಕ ರೋಗದ ಭೀತಿಯಿಂದ ಷೇರುಪೇಟೆಯಲ್ಲಿ ಉಂಟಾಗಿರುವ ತಲ್ಲಣ ಮಂಗಳವಾರವೂ ಮುಂದುವರಿದಿದೆ. ಸೋಮವಾರ 2,713 ಅಂಶಗಳಷ್ಟು ಇಳಿಕೆಯಾಗಿದ್ದ ಸೆನ್ಸೆಕ್ಸ್‌ ಇಂದು ಆರಂಭಿಕ ವಹಿವಾಟಿನಲ್ಲಿ 500 ಅಂಶ ಹೆಚ್ಚಳದೊಂದಿದೆ ಅಲ್ಪ ಚೇತರಿಕೆ ತೋರಿತು. ಆದರೆ, ದೇಶದಲ್ಲಿ ಕೋವಿಡ್‌–19ಗೆ ಮತ್ತೊಬ್ಬ ವ್ಯಕ್ತಿ ಸಾವಿಗೀಡಾದ ಸುದ್ದಿ ಹೊರ ಬರುತ್ತಿದ್ದಂತೆ ಸೂಚ್ಯಂಕ ಇಳಿಮುಖವಾಗಿದೆ. 

ವಹಿವಾಟು ಆರಂಭದಲ್ಲಿ ಸೆನ್ಸೆಕ್ಸ್‌ ಶೇ 1.51ರಷ್ಟು ಏರಿಕೆಯಾಗಿ 31,865.52 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 163 ಅಂಶ ಜಿಗಿದು 9,360.40 ಅಂಶ ಮುಟ್ಟಿತು. ಚೇತರಿಕೆಯ ಹಾದಿ ಹೆಚ್ಚು ಸಮಯ ಮುಂದುವರಿಯಲಿಲ್ಲ. 11:50ಕ್ಕೆ ಸೆನ್ಸೆಕ್ಸ್‌ 255.61 ಅಂಶ ಏರಿಕೆಯಾಗಿ 31,645.68 ಅಂಶ ಹಾಗೂ ನಿಫ್ಟಿ ಶೇ 1ರಷ್ಟು ಏರಿಕೆಯಾಗಿ 9,289.10 ಅಂಶಗಳಲ್ಲಿ ವಹಿವಾಟು ನಡೆದಿದೆ. 

ಯೆಸ್‌ ಬ್ಯಾಂಕ್‌ ಷೇರು ಗಳಿಕೆ ಇಂದೂ ಸಹ ಮುಂದುವರಿದಿದೆ. ಶೇ 56ರಷ್ಟು ಹೆಚ್ಚಳ ಕಂಡು ಪ್ರತಿ ಷೇರು ಬೆಲೆ ₹57.90 ತಲುಪಿದೆ. 

ಸೋಮವಾರ ಸೆನ್ಸೆಕ್ಸ್‌ ಶೇ 7.96ರಷ್ಟು ಇಳಿಕೆಯಾಗಿ 31,390.07 ಅಂಶ ಮುಟ್ಟಿತ್ತು. ನಿಫ್ಟಿ 757.80 ಅಂಶ ಕಡಿಮೆಯಾಗಿ 9,197.40 ಅಂಶಗಳಿಗೆ ಇಳಿದಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 3,809.93 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 7.62 ಲಕ್ಷ ಕೋಟಿ ಕರಗಿ, ದಿನದ ಅಂತ್ಯಕ್ಕೆ ಮಾರುಕಟ್ಟೆಯ ಬಂಡವಾಳ ಮೌಲ್ಯವು ₹ 121 ಲಕ್ಷ ಕೋಟಿಗಳಿಗೆ ಇಳಿದಿತ್ತು.

ಸನ್‌ ಫಾರ್ಮಾ, ಒಎನ್‌ಜಿಸಿ, ರಿಲಯನ್ಸ್‌ ಇಂಡಸ್ಟ್ರೀಸ್‌, ಐಟಿಸಿ, ಎಚ್‌ಡಿಎಫ್‌ಸಿ, ಐಸಿಐಸಿಐಸಿ ಬ್ಯಾಂಕ್‌, ಕೊಟ್ಯಾಟ್‌ ಬ್ಯಾಂಕ್‌ ಹಾಗೂ ಟೈಟಾನ್‌ ಕಂಪನಿ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಶೇ 2 ರಿಂದ 4ರಷ್ಟು ಗಳಿಕೆ ಕಂಡು ಮತ್ತೆ ಇಳಿಮುಖವಾಗಿವೆ.

ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ದೊರೆಯುತ್ತಿರುವುದರಿಂದ ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು ಖರೀದಿ ನಡೆಸಿದ್ದಾರೆ. 

ಅಮೆರಿಕದ ಷೇರುಪೇಟೆ ನಿನ್ನೆಯ ವಹಿವಾಟಿನಲ್ಲಿ ಶೇ 12–13ರಷ್ಟು ಇಳಿಕೆಯಾಗಿದೆ. 1987ರಿಂದ ಇದೇ ಮೊದಲ ಬಾರಿಗೆ ಅತಿ ದೊಡ್ಡ ಕುಸಿತ ನಾಸ್‌ಡಾಕ್‌ ಮತ್ತು ಡೌ ಜೋನ್ಸ್‌ ಷೇರುಪೇಟೆಗಳಲ್ಲಿ ದಾಖಲಾಗಿದೆ. ಇದೂ ಸಹ ದೇಶದ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದೆ. 

ಡಾಲರ್‌ ಎದುರು ರೂಪಾಯಿ ಮೌಲ್ಯ 22 ಪೈಸೆ ಚೇತರಿಕೆ ಕಂಡು ₹74.03ರಲ್ಲಿ ವಹಿವಾಟು ನಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 2.10ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 30.67 ಡಾಲರ್‌ ಆಗಿದೆ. 

ಕೊರೊನಾ ವೈರಸ್‌ ಸೋಂಕಿನಿಂದ ಜಗತ್ತಿನಾದ್ಯಂತ 7,000ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. 1,75,000 ಮಂದಿ ಸೋಂಕಿಗೆ ಒಳಗಾಗಿದ್ದು, ಭಾರತದಲ್ಲಿ 125 ಪ್ರಕರಣಗಳು ವರದಿಯಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು