ಭಾನುವಾರ, ಏಪ್ರಿಲ್ 5, 2020
19 °C

ಲಾಕ್‌ಡೌನ್‌ ಭೀತಿಯಲ್ಲಿ ಹೂಡಿಕೆದಾರರು: ಸೆನ್ಸೆಕ್ಸ್ 3,000 ಅಂಶ ಕುಸಿತ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ ಎಪಿಎಂಸಿ ಮಾರುಕಟ್ಟೆಯಲ್ಲಿ ನಿಂತಿರುವ ಟ್ರಕ್‌ಗಳು – ಜನತಾ ಕರ್ಫ್ಯೂ ದಿನದ ಚಿತ್ರ

ಮುಂಬೈ: ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್‌ ಮುಂದುವರಿದಿರುವುದು ಸೋಮವಾರ ಷೇರುಪೇಟೆಗಳಲ್ಲಿ ವಿಪರೀತ ತಲ್ಲಣ ಸೃಷ್ಟಿಸಿತು. ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್‌ 2,700 ಅಂಶ ಕುಸಿಯಿತು. ಸೂಚ್ಯಂಕ ದಿಢೀರ್‌ ಕುಸಿತದಿಂದ ಸರ್ಕ್ಯೂಟ್‌ ಬ್ರೇಕ್‌ ಆಗಿದ್ದು, 45 ನಿಮಿಷಗಳ ವರೆಗೆ ವಹಿವಾಟು ಸ್ಥಗಿತಗೊಳಿಸಲಾಯಿತು. 

ಜಗತ್ತಿನಾದ್ಯಂತ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹಲವು ರಾಷ್ಟ್ರಗಳೂ ಲಾಕ್‌ಡೌನ್‌ಗೆ ಮೊರೆ ಹೋಗಿವೆ. ಇದರಿಂದಾಗಿ ಹೂಡಿಕೆದಾರರು ಷೇರು ಮಾರಾಟ ಮಾಡಿ ನಷ್ಟ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಶೇ 10ರಷ್ಟು (3,037.13) ಕುಸಿದು 26,924.11 ಅಂಶ ತಲುಪಿದೆ. ಇನ್ನೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಶೇ 9.63 ಇಳಿಕೆಯಾಗಿ 7,903.00 ಅಂಶ ಮುಟ್ಟಿದೆ. 

ಡಾಲರ್‌ ಎದುರು ರೂಪಾಯಿ ಮೌಲ್ಯ 92 ಪೈಸೆ ಕುಸಿತ ಕಂಡಿದ್ದು, ₹76.12ರಲ್ಲಿ ವಹಿವಾಟು ನಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಶೇ 3ರಷ್ಟು ಇಳಿಕೆಯಾಗಿ 26.17 ತಲುಪಿದೆ. 

ಬಜಾಜ್‌ ಫೈನಾನ್ಸ್‌ ಷೇರು ಶೇ 14, ಆ್ಯಕ್ಸಿಸ್‌ ಬ್ಯಾಂಕ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಐಸಿಐಸಿಐ ಬ್ಯಾಂಕ್‌, ಮಾರುತಿ ಹಾಗೂ ಮಹೀಂದ್ರ ಆ್ಯಂಡ್ ಮಹೀಂದ್ರಾ, ಇನ್ಫೊಸಿಸ್‌, ಐಟಿಸಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಸೇರಿದಂತೆ ಬಹುತೇಕ ಎಲ್ಲ ಕಂಪನಿಗಳ ಷೇರುಗಳು ಶೇ 20–5ರಷ್ಟು ಇಳಿಕೆ ಕಂಡಿವೆ.

 

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಶೇ 5.75 ಏರಿಕೆಯೊಂದಿಗೆ 29,915.96 ಅಂಶ ಹಾಗೂ ನಿಫ್ಟಿ ಶೇ 5.83 ಹೆಚ್ಚಳದೊಂದಿಗೆ 8,745.45 ಅಂಶಗಳೊಂದಿಗೆ ವಹಿವಾಟು ಅಂತ್ಯಗೊಂಡಿತ್ತು. ವಿದೇಶಿ ಹೂಡಿಕೆದಾರರು ₹3,345.95 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 

ಕಳೆದ ವಾರ ಶುಕ್ರವಾರದ ವರೆಗೂ ಸೆನ್ಸೆಕ್ಸ್‌ ಒಟ್ಟು 4,187.52 ಕುಸಿದರೆ, ನಿಫ್ಟಿ 1,209.75 ಇಳಿಕೆಯಾಗಿದೆ. 

ಲಾಕ್‌ಡೌನ್‌ನಿಂದ ವ್ಯಾಪಾರ ವಹಿವಾಟುಗಳಿಗೆ ಅಡ್ಡಿಯಾಗುವ ಆತಂಕದಲ್ಲಿ ಹೂಡಿಕೆದಾರರ ಷೇರುಗಳ ಮೇಲಿನ ಹೂಡಿಕೆ ಹಿಂಪಡೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟು 75 ಜಿಲ್ಲೆಗಳಲ್ಲಿ ಲಾಕ್‌ಡೌನ್‌ಗೆ ನಿರ್ಧರಿಸಿವೆ. 

ಚೀನಾದ ಶಾಂಘೈ, ಹಾಂಗ್‌ ಕಾಂಗ್‌ ಹಾಗೂ ಸೋಲ್‌ ಷೇರುಪೇಟೆಗಳು ಶೇ 4ರಷ್ಟು ಕುಸಿದಿವೆ. 

ಭಾರತದಲ್ಲಿ ಕೊರೊನಟ ಸೋಂಕಿತರ ಸಂಖ್ಯೆ 390 ದಾಟಿದೆ. ಜಗತ್ತಿನಾದ್ಯಂತ 3,00,000 ಅಧಿಕ ಮಂದಿಗೆ ಕೋವಿಡ್‌–19 ದೃಢಪಟ್ಟಿದೆ ಹಾಗೂ 14,000 ಜನರು ಸಾವಿಗೀಡಾಗಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)