ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟನಾಶಕ ಜತೆ ಸಿಂಪಡಿಸುವ ಅಂಟು ದುಬಾರಿ: ಬೆಲೆ ಶೇ 22.5 ರಷ್ಟು ಏರಿಕೆ

Last Updated 2 ಅಕ್ಟೋಬರ್ 2017, 19:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೃಷಿ ಬೆಳೆಗಳಿಗೆ ಸಿಂಪಡಿಸುವ ಕೀಟನಾಶಕದೊಂದಿಗೆ ಬೆರೆಸುವ ಅಂಟು ದ್ರವದ ಬೆಲೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಬಳಿಕ ಶೇ 22.5 ರಷ್ಟು ಹೆಚ್ಚಾಗಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಅಂಟು ದ್ರವ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.

‘ಕೀಟನಾಶಕ ಸಿಂಪಡಿಸಿದ ತಕ್ಷಣ ಮಳೆ ಬಂದರೆ ಅದರ ಪರಿಣಾಮ ಬೆಳೆ ಮೇಲೆ ಏನೂ ಇರುವುದಿಲ್ಲ. ಹೀಗಾಗಿ ಮಳೆ ನಂತರವೂ ಅದರ ತೀಕ್ಷ್ಣತೆ ಹೆಚ್ಚು ಕಾಲ ಇರಬೇಕು ಎನ್ನುವ ಕಾರಣಕ್ಕೆ ಕೀಟನಾಶಕದೊಂದಿಗೆ ಅಂಟು (ವೆಟ್ಟಿಂಗ್‌ ಏಜೆಂಟ್‌) ಮಿಶ್ರಣ ಮಾಡಲಾಗುತ್ತದೆ.  ಜುಲೈಗೂ ಮೊದಲು ವಿವಿಧ ಕಂಪೆನಿಗಳ ಅಂಟು ದ್ರವಕ್ಕೆ ಶೇ 5 ರಷ್ಟು ತೆರಿಗೆ ಇತ್ತು. ಜಿಎಸ್‌ಟಿ ಜಾರಿ ನಂತರ ಅದು ಶೇ 22ಕ್ಕೆ ಏರಿಕೆಯಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಆಗ್ರೊ ಟ್ರೇಡರ್ಸ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ. ಉಲ್ಲಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಟು ದ್ರವದ ಮೇಲೆ ಈ ರೀತಿ ತೆರಿಗೆ ಹೆಚ್ಚಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಗೋದಾಮಿನಲ್ಲಿ ಇರುವ ಅಂಟು ದ್ರವ ಡಬ್ಬಿಗಳು ಖಾಲಿಯಾದರೆ ಸಾಕು ಎನ್ನುವಂತಾಗಿದೆ’ ಎಂದು ಅವರು ತಿಳಿಸಿದರು.

‘ಮುಂಗಾರು, ರೈತರ ಕೈ ಹಿಡಿದು ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಅದು ಕೈಕೊಟ್ಟಿತು. ಹಿಂಗಾರು ಚೆನ್ನಾಗಿ ಆಗಿದ್ದು, ಹೊಲದತ್ತ ಮುಖ ಮಾಡಿ ಬಿತ್ತನೆ ಮಾಡಿದ್ದೇವೆ. ಸ್ವಲ್ಪ ಬೆಳೆ ಬಂದಿದ್ದು, ಅದು ಉಳಿಯಬೇಕಾದರೆ ಕೀಟನಾಶಕ ಸಿಂಪಡಿಸಬೇಕು. ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕ ಹೆಚ್ಚು ದಿನ ಹಿಡಿದಿಟ್ಟುಕೊಳ್ಳಬೇಕಾದರೆ ಅಂಟು ದ್ರವ ಮಿಶ್ರಣ ಮಾಡಲೇಬೇಕು. ಆದರೆ, ಅಂಟು ದ್ರವಕ್ಕೆ ಸಾಕಷ್ಟು ತೆರಿಗೆ ಹಾಕಿರುವುದರಿಂದ ಬೆಲೆ ಹೆಚ್ಚಳವಾಗಿದೆ. ಮೊದಲಿದ್ದ ದರಕ್ಕೆ ಅಂಟು ದ್ರವ ಮಾರಾಟ ಮಾಡಬೇಕು’ ಎಂದು ಕುಂದಗೋಳ ತಾಲ್ಲೂಕು ಸಂಶಿ ಗ್ರಾಮದ ರೈತ ಸಂಗಮೇಶ ಪಾಟೀಲ ಒತ್ತಾಯಿಸಿದರು.

**

‘ಬೇಡಿಕೆ ಇಲ್ಲದ್ದರಿಂದ ನಷ್ಟ’

‘ಜಿಎಸ್‌ಟಿ ಜಾರಿಗೂ ಮುನ್ನ ಅಂಟು ದ್ರವವನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದರು. ಇದೀಗ ಅದರ ಮೇಲೆ ಶೇ 22.5 ರಷ್ಟು ತೆರಿಗೆ ಹೆಚ್ಚಳ ಮಾಡಿರುವುದರಿಂದ ರೈತರು ಖರೀದಿ ಮಾಡುತ್ತಿಲ್ಲ. ಜುಲೈಗೂ ಮುನ್ನ ತರಿಸಲಾಗಿದ್ದ ಅಂಟು ದ್ರವ ಇನ್ನೂ ಖಾಲಿಯಾಗಿಲ್ಲ. ಬೇಡಿಕೆ ಕಡಿಮೆ ಆಗಿರುವುದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ’ ಎಂದು ಹುಬ್ಬಳ್ಳಿಯ ಬಸವೇಶ್ವರ ಆಗ್ರೊ ಟ್ರೇಡರ್ಸ್‌ ಮಾಲೀಕ ಶಶಿಧರ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT