ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಆಮದು ಸಮಸ್ಯೆ

Last Updated 29 ಜನವರಿ 2013, 19:59 IST
ಅಕ್ಷರ ಗಾತ್ರ

ಚಿನ್ನ' ಎಂಬ ಎರಡಕ್ಷರದ ಪದ ಅದೆಷ್ಟು ಸವಕಲಾದರೂ ಅದು ಚಿನ್ನವೇ....ಚಿನ್ನ ಎಂದು ಕರೆದರೆ ಸಾಕು ಮುನಿದ ಮಡದಿಯ ಕೋಪದ ಮೊಗದಲ್ಲಿಯೂ ತಿಳಿನಗೆಯ ಕಾರಂಜಿ ಚಿಮ್ಮದೇ ಇರುತ್ತದೆಯೇ? ಚಿನ್ನ ಎಂಬ ಪದಕ್ಕಿರುವ ಶಕ್ತಿಯೇ ಇಷ್ಟಿರಬೇಕಾದರೆ ಇನ್ನು ಮಿರ ಮಿರ ಮಿನುಗುವ ಚಿನ್ನದ ಒಡವೆಗಳ ಶಕ್ತಿಯನ್ನು ಅಳೆಯುವುದಕ್ಕೆ ಎಂಟೆದೆಯೇ ಬೇಕು.

`ರನ್ನನ ಕೃತಿ ರತ್ನಮುಮಂ ಪೇಳ್ ಪರೀಕ್ಷಿಪರ್ಗೆಂಟರ್ದೆಯೇ...' ಎಂಬ ಕವಿಯ ಮಾತುಗಳನ್ನು ರನ್ನನ ಕೃತಿಗೆ ಮಾತ್ರವಲ್ಲ ಇಂದು ರಾಕೆಟ್‌ನ ವೇಗವನ್ನೂ ಮೀರಿಸುವಷ್ಟು ಮಿಂಚಿನ ವೇಗದಲ್ಲಿ ಬೆಲೆಯನ್ನು ಏರಿಸಿಕೊಳ್ಳುತ್ತಿರುವ ಚಿನ್ನಕ್ಕೂ ಅನ್ವಯಿಸಬಹುದೇನೋ?ಕಳೆದ ಕೆಲವು ವರ್ಷಗಳಿಂದೀಚೆಗೆ ಸತತವಾಗಿ ಗಗನಮುಖಿಯಾಗಿರುವ ಬಂಗಾರ, ಬಡವರಿಗಿರಲಿ ಮಧ್ಯಮ ವರ್ಗದ ಜನರ ಪಾಲಿಗೂ ಗಗನ ಕುಸುಮವೇ ಆಗಿದೆ. ಮೂಗಿಗಿಂತ ಮೂಗುತಿಯೇ ಭಾರ ಎಂಬ ಗಾದೆ ಮಾತು ನೆನಪಿಸುವಂತೆ ಚಿನ್ನದ ಮೇಲಿನ ಆಮದು ಸುಂಕವನ್ನು ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ಏರಿಸಿದೆ.

ಆ ಮೂಲಕ ಮಧ್ಯಮ ವರ್ಗದವರ `ಬಂಗಾರ'ದ ಕನಸುಗಳು ಮತ್ತಷ್ಟು ಭಾರವಾಗುವಂತೆ ಮಾಡಿದೆ.ಹಾಗೆ ನೋಡಿದರೆ ಚಿನ್ನದ ಮೇಲೆ ಜನಸಾಮಾನ್ಯರಿಗೆ ಎಷ್ಟು ಒಲವಿದೆಯೋ, ಸರ್ಕಾರಕ್ಕೂ ಅದೇ ರೀತಿ ಅದರ ಮೇಲಿನ ತೆರಿಗೆ ಹೆಚ್ಚಿಸುವತ್ತ ಭಾರೀ ಒಲವು ಇರುವುದು ಹೊಸತೇನೂ ಅಲ್ಲ. 2012-13ನೇ ಸಾಲಿನ ಬಜೆಟ್‌ನಲ್ಲಿ ಚಿನ್ನದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದ್ದ ಕೇಂದ್ರ ಸರ್ಕಾರ ಇದೀಗ ಚಿನ್ನದ ಆಮದು ಮೇಲಿನ ಸುಂಕವನ್ನು ಶೇ 50ರಷ್ಟು ಹೆಚ್ಚಿಸಿದೆ. ಸದ್ಯ ಶೇ 4ರಷ್ಟಿದ್ದ ಚಿನ್ನದ ಆಮದು ಸುಂಕ ಈಗ ಶೇ 6ಕ್ಕೆ ಹೆಚ್ಚಿದೆ. ಪರಿಣಾಮ ಚಿನ್ನದ ಬೆಲೆ ಕೆಲವು ವಾರಗಳಲ್ಲಿ ಕನಿಷ್ಠರೂ700ರಷ್ಟಾದರೂ ಹೆಚ್ಚಬಹುದು ಎಂಬುದು ಚಿನಿವಾರ ಪೇಟೆ ಪಂಡಿತರ ಅಂದಾಜು.

ಇದು ಒಂದೆಡೆ ಚಿನ್ನದ ವ್ಯಾಪಾರಿಗಳ ಪಾಲಿಗೂ ಹೊರೆಯಾಗಲಿದೆ. ಅವರು ಚಿನ್ನ ಆಮದು ಮಾಡಿಕೊಳ್ಳಲು ಹೆಚ್ಚು ಬಂಡವಾಳ ತೊಡಗಿಸಬೇಕಾಗುತ್ತದೆ. ಜತೆಗೆ ಮದುವೆ ತಯಾರಿಯಲ್ಲಿರುವ ಕುಟುಂಬಗಳಿಗೂ ಬಿಸಿ ಮುಟ್ಟಿಸಲಿದೆ. ಅಪ್ಪ-ಅಮ್ಮ ಮಗಳ ಮದುವೆಯ ಬಜೆಟ್ ಹೆಚ್ಚಿಸಬೇಕಾಗುತ್ತದೆ.ಚಿನ್ನದ ಆಮದು ಸುಂಕ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಇನ್ನೊಂದೆಡೆ ಬಂಗಾರದ ಕಳ್ಳಸಾಗಣೆ ಚಟುವಟಿಕೆ ಹೆಚ್ಚಲು ಕಾರಣವಾಗಲಿದೆ ಎಂಬ ಮಾತುಗಳೂ ಮಾರುಕಟ್ಟೆಯಲ್ಲಿ ಕೇಳಿಬರುತ್ತಿವೆ.

ಚಿನ್ನ ಆಮದು ಪ್ರಮಾಣ ತಗ್ಗಿಸಿ ವಿದೇಶಿ ವಿನಿಮಯ ಸಂಗ್ರಹದ ಮೇಲಿನ ಹೊರೆ ತಗ್ಗಿಸಬೇಕೆಂಬುದು ಕೇಂದ್ರ ಸರ್ಕಾರ ಯತ್ನ. ಅದಕ್ಕಾಗಿ ಸರ್ಕಾರ ಚಿನ್ನದ ಆಮದು ಸುಂಕವನ್ನು ಶೇ 50ರಷ್ಟು ಏರಿಸಿದೆ. ಆದರೆ, ಕೇಂದ್ರದ ಈ ಕ್ರಮ ಚಿನ್ನ ಆಮದು ಮೇಲೆ ಕಡಿವಾಣ ಹಾಕುವ ಬದಲು ಕಳ್ಳ ಸಾಗಣೆಗೆ ಅವಕಾಶ ಮಾಡಿಕೊಡುವ ಅಪಾಯವೇ ಹೆಚ್ಚಿದೆ' ಎನ್ನುತ್ತಾರೆ `ನ್ಯಾಷನಲ್ ಸ್ಪಾಟ್ ಎಕ್ಸಚೇಂಜ್ ಲಿ.'ನ ಮುಖ್ಯ ವ್ಯಾಪಾರ ಸಚೇತಕ ಅಮಿತ್ ಮುಖರ್ಜಿ.
ಸುಂಕ ಏರಿಕೆ ಉದ್ದೇಶ?

`ಕೆಲವು ವಾರಗಳಿಂದ ದೇಶದ ಷೇರುಪೇಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಎಂಬಂತೆ ಹೂಡಿಕೆ ಪ್ರಮಾಣ ಹೆಚ್ಚುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರೂ ಭಾರತದಲ್ಲಿನ ಷೇರುಪೇಟೆ ಮೇಲೆ ವಿಶ್ವಾಸ ಹೆಚ್ಚಿದ್ದರಿಂದ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಿಸುತ್ತಲೇ ಇದ್ದಾರೆ. ಪರಿಣಾಮ ಷೇರುಗಳ ಖರೀದಿ ವಹಿವಾಟು ಜೋರಾಗಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) 20,000 ಅಂಶಗಳನ್ನು ದಾಟಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚ್ಯಂಕ `ನಿಫ್ಟಿ' ಸಹ 6,000 ಅಂಶಗಳಾಚೆಗೆ ಮುನ್ನಡೆದಿದೆ. ಷೇರುಗಳು ಹೂಡಿಕೆದಾರರಿಗೆ ಲಾಭ ತಂದುಕೊಡುತ್ತಿವೆ.

ಹಾಗಾಗಿ ಚಿನ್ನದಲ್ಲಿ ಹಣ ಹೂಡುತ್ತಿದ್ದವರೂ ಷೇರುಪೇಟೆಯತ್ತ ಗಮನ ಕೇಂದ್ರೀಕರಿಸಿದ್ದಾರೆ. ಪರಿಣಾಮ ಕೆಲವು ದಿನಗಳಿಂದ ಚಿನ್ನದ ಬೆಲೆ ತುಸುವೇ ಆದರೂ ಇಳಿಮುಖವಾಗಿದ್ದಿತು. ಚಿನ್ನ ಅಗ್ಗವಾಗುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆಮದು ತೆರಿಗೆ ಪ್ರಮಾಣವನ್ನು ಶೇ 50ರಷ್ಟು ಹೆಚ್ಚಿಸುವ ಪ್ರಮೇಯವೇ ಇರಲಿಲ್ಲ'. ಇದು ಚಿನಿವಾರ ಪೇಟೆಯ ಹಲವು ವರ್ತಕರ ವಾದ. ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲೆಂದೇ ಆಮದು ಸುಂಕ ಏರಿಸಿದೆ ಎಂಬುದು ಬಹಳಷ್ಟು ಮಂದಿಯ ನಂಬಿಕೆ.

ವಾಸ್ತವದಲ್ಲಿ ವಿದೇಶಿ ವಿನಿಮಯ ಸಂಗ್ರಹ ಸಂಪತ್ತನ್ನು ಉಳಿಸುವುದಕ್ಕಾಗಿಯೇ ಸರ್ಕಾರ ಈ ಕ್ರಮ ಕೈಗೊಂಡಿದೆ. ಸದ್ಯ ದೇಶದ ಅತಿ ಹೆಚ್ಚಿನ ವಿದೇಶಿ ವಿನಿಮಯ ವ್ಯಯವಾಗುತ್ತಿರುವುದು ಪೆಟ್ರೋಲಿಯಂ ಉತ್ಪನ್ನಗಳಿಗೆ. ಅದನ್ನು ಬಿಟ್ಟರೆ ವಿದೇಶಿ ವಿನಿಮಯವನ್ನು ಹೆಚ್ಚಾಗಿ ಭಕ್ಷಿಸುವುದು ಚಿನ್ನದ ಆಮದು!
ಹೌದು, ಕೇಂದ್ರ ಸರ್ಕಾರ 2011-12ನೇ ಹಣಕಾಸು ವರ್ಷವೊಂದರಲ್ಲಿಯೇ ತನ್ನ ವಿದೇಶಿ ವಿನಿಮಯ ಸಂಗ್ರಹದಲ್ಲಿದ್ದ ಮೊತ್ತದಲ್ಲಿ 5650 ಕೋಟಿ ಅಮೆರಿಕನ್ ಡಾಲರ್‌ಗಳನ್ನು, ಅಂದರೆ ಸುಮಾರುರೂ 3.05 ಲಕ್ಷ ಕೋಟಿಯನ್ನು ಚಿನ್ನದ ಆಮದಿಗಾಗಿಯೇ ಖರ್ಚು ಮಾಡಿದೆ!

ಹೀಗೆ ವಿದೇಶಿ ವಿನಿಮಯ ಸಂಗ್ರಹದಿಂದ ಡಾಲರ್ ಪ್ರಮಾಣ ಚಿನ್ನ ಆಮದು ಪ್ರಕ್ರಿಯೆಗೇ ದೊಡ್ಡ ಪ್ರಮಾಣದಲ್ಲಿ ಹರಿದು ಹೋಗುತ್ತಿರುವುದರಿಂದ ಚಿಂತಿತವಾಗಿರುವ ಕೇಂದ್ರ ಸರ್ಕಾರ, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇದರ ಪ್ರಮಾಣ ತಗ್ಗಿಸಲೇಬೇಕೆಂದು ನಿರ್ಧರಿಸಿದೆ.
ಈ ಕ್ರಮ ಕೈಗೊಳ್ಳದೇ ಇದ್ದರೆ ರೂಪಾಯಿ ಮೌಲ್ಯ ಕುಸಿತದಿಂದ ಈಗಾಗಲೇ ಹದಗೆಟ್ಟಿರುವ ಚಾಲ್ತಿ ಖಾತೆಯ ಕೊರತೆ  ಪ್ರಮಾಣ ಮಿತಿ ಮೀರಲಿದೆ. ನಿರೀಕ್ಷಿತ ಪ್ರಮಾಣದ ಆರ್ಥಿಕ ಪ್ರಗತಿ ದಾಖಲಿಸಲಾಗದೆ ಪರಿತಪಿಸುತ್ತಿರುವ ದೇಶದ ಆರ್ಥಿಕತೆ ಇನ್ನಷ್ಟು ಗಂಡಾಂತರಕ್ಕೆ ಸಿಲುಕಲಿದೆ.  ಹಾಗಾಗಿಯೇ ಕೇಂದ್ರ ಸರ್ಕಾರ ಚಿನ್ನದ ಆಮದು ಕಡಿಮೆ ಮಾಡಲೆಂದೇ ಸುಂಕವನ್ನು ಶೇ 4ರಿಂದ 6ಕ್ಕೆ ಹೆಚ್ಚಿಸಿದೆ.

ಆಮದು ಸುಂಕ ಹೆಚ್ಚಿಸಿದ್ದರಿಂದ ದೇಶದ ಮಾರುಕಟ್ಟೆಯಲ್ಲಿ ಚಿನ್ನ ದುಬಾರಿಯಾಗುತ್ತದೆ. ಚಿನಿವಾರರು ದಾಸ್ತಾನು ಇಟ್ಟುಕೊಂಡಿರುವ ಭೌತಿಕ ರೂಪದ(ಚಿನ್ನದ ಗಟ್ಟಿ, ಬಿಸ್ಕತ್, ಆಭರಣ) ಚಿನ್ನವನ್ನು ಮಾರುಕಟ್ಟೆಗೆ ಬಿಡಲಿದ್ದಾರೆ. ಆಗ ಚಿನ್ನದ ಆಮದು ಅಗತ್ಯ ಕಡಿಮೆ ಆಗಲಿದೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಆದರೆ ಇತಿಹಾಸ ಇದನ್ನು ಅಲ್ಲಗಳೆಯುತ್ತಿದೆ.ಈ ಹಿಂದೆಯೂ ಹಲವು ಬಾರಿ ಸರ್ಕಾರ ಚಿನ್ನದ ಆಮದು ಸುಂಕ ಏರಿಸಿದೆ. ಆದರೆ ಆಗಲೂ ಬಂಗಾರವನ್ನು ವಿದೇಶದಿಂದ ತರಿಸಿಕೊಳ್ಳುವ ಪ್ರಮಾಣವೇನೂ ಕಡಿಮೆ ಆಗಿರಲಿಲ್ಲ. ಕೇಂದ್ರದ ಯತ್ನಕ್ಕೆ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.

ಗೋಲ್ಡ್ ಇಟಿಎಫ್ ಯೋಜನೆ
ಸದ್ಯ ಚಾಲ್ತಿಯಲ್ಲಿ ಇರುವ ಗೋಲ್ಡ್ ಇಟಿಎಫ್ ಯೋಜನೆಗೂ, ಚಿನ್ನದ ಠೇವಣಿ ಯೋಜನೆಗೂ ಸಂಪರ್ಕ ಕಲ್ಪಿಸುವ ಮೂಲಕ `ಇಟಿಎಫ್'ನಲ್ಲಿ ಶೇಖರವಾಗಿರುವ ಭೌತಿಕ ಚಿನ್ನವನ್ನು ಚಲಾವಣೆಗೆ ತರುವುದು ಕೇಂದ್ರದ ಮತ್ತೊಂದು ಯೋಜನೆ.`ಇಟಿಎಫ್'ನಲ್ಲಿ ಯೂನಿಟ್ ಆಧಾರದಲ್ಲಿ ಚಿನ್ನವನ್ನು ಭೌತಿಕ ರೂಪದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಈ ಚಿನ್ನವನ್ನು ಚಿನ್ನ ಠೇವಣಿ ಯೋಜನೆಗೆ ಸಂಪರ್ಕಿಸಿ ಅದನ್ನು ಮಾರುಕಟ್ಟೆಗೆ ಹರಿದು ಬರುವಂತೆ ಮಾಡುವುದರಿಂದ ಚಿನ್ನದ ಆವಕ ಹೆಚ್ಚಾಗಿ ಆಮದು ಮೇಲಿನ ಒತ್ತಡ ಕೊಂಚವಾದರೂ ತಗ್ಗಬಹುದು ಎಂಬುದು ಕೇಂದ್ರದ ಲೆಕ್ಕಾಚಾರ.

2011-12ರ ಹಣಕಾಸು ವರ್ಷದ ಅಂಕಿ-ಅಂಶದಂತೆ ದೇಶದಲ್ಲಿ ಉತ್ಪಾದನೆಯಾದ ಚಿನ್ನ ಪ್ರಮಾಣ ಕೇವಲ 2 ಟನ್. 900 ಟನ್‌ಗಿಂತಲೂ ಹೆಚ್ಚಿನ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ!ಭಾರತ 2001-02ರ ಅವಧಿಯಲ್ಲಿ 410 ಕೋಟಿ ಡಾಲರ್‌ಗಳನ್ನು ಚಿನ್ನಕ್ಕಾಗಿ ವೆಚ್ಚ ಮಾಡಿದ್ದಿತು. 2011-12ರ ವೇಳೆಗೆ ಈ ಪ್ರಮಾಣ 5650 ಕೋಟಿ ಡಾಲರ್‌ಗೆ ಹೆಚ್ಚಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಇದು 3800 ಕೋಟಿ ಅಮೆರಿಕನ್ ಡಾಲರ್‌ಗೆ ಹೆಚ್ಚಿದೆ. ಚಿನ್ನದ ಆಮದು ಚಟುವಟಿಕೆಗೆಂದೇ ಸದ್ಯ ಸರ್ಕಾರದ ಬಳಿ ಇರುವ ವಿದೇಶಿ ವಿನಿಮಯ ಸಂಗ್ರಹದ ಮೀಸಲು ಪ್ರಮಾಣ 2722 ಕೋಟಿ ಡಾಲರ್ ಮಾತ್ರ!

ದೇಶ 2011-12ರ ಹಣಕಾಸು ವರ್ಷದಲ್ಲಿನ 1,067 ಟನ್ ಚಿನ್ನ ತರಿಸಿಕೊಂಡಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 44.4ರಷ್ಟು ಅಧಿಕ ಪ್ರಮಾಣದ್ದಾಗಿದೆ. ಅಂದರೆ, ಈ ಹಿಂದಿನ ವರ್ಷಗಳ ಆಮದು ಪ್ರಮಾಣ ಹೆಚ್ಚಳದ ಅಂಕಿ -ಅಂಶ ಗಮನಿಸಿದರೆ 2011-12ನೇ ಸಾಲಿನಲ್ಲಿನ ಆಮದು ಪ್ರಮಾಣ ಹೆಚ್ಚಳವೇ (ಶೇ 44.4) ಸಾರ್ವಕಾಲಿಕ ದಾಖಲೆ. 2010-11ರ ಅವಧಿಯಲ್ಲಿಯೂ ಚಿನ್ನದ ಆಮದು ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇ 43.5ರಷ್ಟು (969 ಟನ್) ಹೆಚ್ಚಳ ಕಂಡಿತ್ತು.

ಪ್ರಪಂಚದಲ್ಲೇ ಅತಿ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿರುವ ಹಾಗೂ ಬಳಸುತ್ತಿರುವ ದೇಶಗಳೆಂದರೆ ಭಾರತ ಹಾಗೂ ಚೀನಾ. ಸದ್ಯ ಸರ್ಕಾರ ಆಮದು ಸುಂಕವನ್ನು ಏರಿಸಿರುವುದರಿಂದ ಎಲ್ಲದರಲ್ಲೂ ನಮ್ಮನ್ನು ದಾಟಿ ಮುಂದೆ ಸಾಗುತ್ತಿರುವ ಚೀನಾ, ಸದ್ಯದಲ್ಲೇ ಅತಿ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಬರಲಿದೆ ಎಂಬುದು ಭಾರತದಲ್ಲಿನ ಚಿನ್ನದ ಆಮದು ಮಾರುಕಟ್ಟೆ ತಜ್ಞರ ಅಂದಾಜು.

ಆಮದು ತಗ್ಗಿಸಲು ಕ್ರಮ

ಕಠಿಣ ನಿರ್ಧಾರಗಳ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯಲ್ಲಿನ ಚೇತರಿಕೆ ತರಲು ಹಲವು ಸುಧಾರಣಾ ಕ್ರಮಗಳನ್ನು ಘೋಷಿಸಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಸಂಗ್ರಹಗಾರರ ಕಣಜದಲ್ಲಿ ತುಂಬಿಕೊಂಡಿರುವ ದೊಡ್ಡ ಪ್ರಮಾಣದ ಚಿನ್ನದ ದಾಸ್ತಾನು, ಮುಕ್ತ ಮಾರುಕಟ್ಟೆಗೆ ಬರುವಂತೆ ಮಾಡುವುದು ನಮ್ಮ ಈ ಕ್ರಮದ ಮುಖ್ಯ ಉದ್ದೇಶ' ಎಂದಿದ್ದಾರೆ.`ಆಮದು ಚಿನ್ನದ ಬೆಲೆ ಹೆಚ್ಚಾದಾಗ ಸಹಜವಾಗಿಯೇ ದಾಸ್ತಾನಿನಲ್ಲಿರುವ ಚಿನ್ನವು ಮಾರುಕಟ್ಟೆಗೆ ಬರುತ್ತದೆ. ಆಗ ಚಿನ್ನದ ಆಮದು ಪ್ರಮಾಣ ತಾನಾಗಿಯೇ ತಗ್ಗುತ್ತದೆ' ಎಂದಿದ್ದಾರೆ.

ಕಳ್ಳ ಸಾಗಣೆಗೆ ದಾರಿ
`ಸರ್ಕಾರದ ಈ ಕ್ರಮದಿಂದ ಚಿನ್ನದ ವ್ಯಾಪಾರಿಗಳಲ್ಲಿ ನಿರುತ್ಸಾಹ ಮೂಡಿದೆ. ಈ ಹಿಂದೆಯೂ ಸಾಕಷ್ಟು ಬಾರಿ ಸರ್ಕಾರ ಇಂತಹುದೇ ಕ್ರಮ ಕೈಗೊಂಡಿದ್ದರೂ ಚಿನ್ನದ ಆಮದು ಪ್ರಮಾಣವೇನೂ ಕಡಿಮೆ ಆಗಿರಲಿಲ್ಲ. ಈ ಬಾರಿಯೂ ಸರ್ಕಾರದ ಉದ್ದೇಶ ವಿಫಲವಾಗುವುದರಲ್ಲಿ ಸಂಶಯವಿಲ್ಲ. ಅಲ್ಲದೆ, ಇನ್ನೊಂದೆಡೆ ಇದು ಕಳ್ಳ ಸಾಗಣೆಗೆ ಆಸ್ಪದ ನೀಡುತ್ತದೆ'.
ಎಸ್.ವೆಂಕಟೇಶ್ ಬಾಬುನಿಕಟ ಪೂರ್ವ ಅಧ್ಯಕ್ಷ, ಜ್ಯೂವೆಲ್ಲರಿ ಅಸೋಷಿಯೇಷನ್, ಬೆಂಗಳೂರು

ತಪ್ಪು ನಿರ್ಧಾರ
`ನಮ್ಮ ದೇಶದ ಜನರ ಪಾಲಿಗೆ ಚಿನ್ನ ಕೇವಲ ಒಂದು ಲೋಹವಲ್ಲ. ಅದೊಂದು ಸಾಂಸ್ಕೃತಿಕ ಮಹತ್ವ ಪಡೆದ ಮಹತ್ವದ ವಸ್ತು. ಅದರ ಬೆಲೆ ಎಷ್ಟೇ ಹೆಚ್ಚಾದರೂ ಬೇಡಿಕೆ ತಕ್ಷಣಕ್ಕೆ ಸ್ವಲ್ಪವಷ್ಟೇ ಇಳಿಯಬಹುದು. ಆದರೆ ದೀರ್ಘಕಾಲಿಕವಾಗಿ ಬೇಡಿಕೆ ಹೆಚ್ಚಾಗುತ್ತಲೇ ಇರುತ್ತದೆ. ಜನರು ಚಿನ್ನದ ಬೆಲೆ ಇನ್ನಷ್ಟು ಹೆಚ್ಚಲಿದೆ ಎಂಬ ನಿರೀಕ್ಷೆಯಿಂದಲೇ ಅದರ ಮೇಲೆ ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡುತ್ತಾ ಹೋಗುತ್ತಾರೆ. ಹೀಗಾಗಿ ಸರ್ಕಾರ ತನ್ನ ಉದ್ದೇಶದಲ್ಲಿ ವಿಫಲವಾಗುತ್ತದೆ. ಒಟ್ಟಾರೆ ಸರ್ಕಾರ ಕೈಗೊಂಡ ಕ್ರಮ ಸರ್ವಥಾ ಸರಿಯಲ್ಲ'.
ಸಂದೀಪ, `ಸಿಇಒ',ಜ್ಯೂವೆಲ್ಸ್ ಆಫ್ ಇಂಡಿಯಾ ಎಕ್ಸಿಬಿಷನ್

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT