ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: ರಾಜ್ಯಗಳಿಗೆ ಸಿನ್ಹಾ ಸಲಹೆ

Last Updated 21 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಮೊದಲು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಜಾರಿಗೆ ತರಬೇಕು ಎಂದು ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಪರೋಕ್ಷ ತೆರಿಗೆ ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೊದಲು ‘ಜಿಎಸ್‌ಟಿ’ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರಗಳಿಗೆ ಮಾದರಿಯಾಗಲಿ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮಟ್ಟದಲ್ಲಿ ಕೇಂದ್ರೀಯ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಗಳು ಇವೆ. ಈ ಎರಡೂ ತೆರಿಗೆಗಳನ್ನು ಕೇಂದ್ರ ಸರ್ಕಾರವು ಮೊದಲು ವಿಲೀನಗೊಳಿಸಿದರೆ ಅದರಿಂದ ಕೇಂದ್ರದ ‘ಜಿಎಸ್‌ಟಿ’ ಜಾರಿಗೆ ಬಂದಂತೆ ಆಗುವುದು. ಈ ವ್ಯವಸ್ಥೆ ಅನುಸರಿಸಲು ಕೇಂದ್ರವು ಆಮೇಲೆ ರಾಜ್ಯಗಳಿಗೆ ಸಲಹೆ ನೀಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿಯೇ ‘ಜಿಎಸ್‌ಟಿ’ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಆಲೋಚಿಸುತ್ತಿರುವುದನ್ನೂ ಬಿಜೆಪಿಯ ಮುಖಂಡರೂ ಆಗಿರುವ ಸಿನ್ಹಾ ಟೀಕಿಸಿದ್ದಾರೆ. 

‘ಜಿಎಸ್‌ಟಿ’ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಎಲ್ಲ ಮೂರೂ ಕರಡು ಪ್ರಸ್ತಾವನೆಗಳು ಇದುವರೆಗೆ ನೆನೆಗುದಿಗೆ ಬಿದ್ದಿವೆ. ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ಪ್ರಮುಖವಾಗಿ ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ವಿರೋಧದ ಮಧ್ಯೆಯೂ ಸರ್ಕಾರವು ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಬಜೆಟ್ ಅಧಿವೇಶನದ ಕಲಾಪ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಈ ಮಸೂದೆ ಅಂಗೀಕಾರವಾಗಲು ಸಂಸತ್ತಿನ ಉಭಯ ಸದನಗಳಲ್ಲಿ ಎರಡು ಮೂರಾಂಶದಷ್ಟು ಬಹುಮತ ದೊರೆಯಬೇಕಾಗುತ್ತದೆ.

2010ರ ಏಪ್ರಿಲ್‌ನಿಂದಲೇ ದೇಶದಾದ್ಯಂತ ‘ಜಿಎಸ್‌ಟಿ’ ಜಾರಿಗೆ ಬರಬೇಕಾಗಿತ್ತು. ಈಗ ಅದನ್ನು 2011ರ ಏಪ್ರಿಲ್‌ನಿಂದ ಜಾರಿಗೆ ತರಲು ಕೇಂದ್ರವು ಬಯಸಿದ್ದರೂ, ಅದು ಕೂಡ ನೆರವೇರುವ ಸಾಧ್ಯತೆಗಳು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT