ಜಿಮ್: ಘೋಷಣೆ-ವಾಸ್ತವ

ಮತ್ತೊಂದು ಸುತ್ತಿನ ಜಾಗತಿಕ ಆರ್ಥಿಕ ಹಿಂಜರಿತದ ಕರಿನೆರಳು ಪ್ರಪಂಚವನ್ನು ಆವರಿಸಿರುವ ಈ ಹೊತ್ತಿನಲ್ಲೇ ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಎರಡನೇ ಸುತ್ತಿನ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಸರ್ಕಾರದ ಅಭಿವೃದ್ಧಿಯ ಘೋಷಣೆ ರಾಜ್ಯದ ಜನರಿಗೆ ಹೊಸದೇನೂ ಅಲ್ಲ. ಆದರೆ, ಅವೆಲ್ಲ ಸಾಕಾರಗೊಳ್ಳುತ್ತವೆಯೇ ಎಂಬುದೇ ಇಲ್ಲಿನ ಪ್ರಶ್ನೆ.

ಹೆಸರಿಗೆ ಜಾಗತಿಕ ಹೂಡಿಕೆದಾರರ ಸಮಾವೇಶವಾದರೂ ಕಳೆದ ಬಾರಿ ಆದ ಒಡಂಬಡಿಕೆಗಳಲ್ಲಿ ಶೇ 90ರಷ್ಟು ಯೋಜನೆಗಳಿಗೆ ಬಂಡವಾಳ ಹೂಡಿದ್ದು ದೇಶಿ ಕಂಪೆನಿಗಳೆ. ಒಟ್ಟು ಹೂಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಬಂದದ್ದು ಉಕ್ಕು, ಇಂಧನ ಮತ್ತು ಸಿಮೆಂಟ್ ವಲಯಗಳಿಗೆ ಮಾತ್ರ. ಪ್ರಮುಖವಾಗಿ ಕಬ್ಬಿಣ ಮತ್ತು ಉಕ್ಕು ಕ್ಷೇತ್ರದಲ್ಲಿ ಅಂದಾಜು ರೂ 2.50 ಲಕ್ಷ ಕೋಟಿಯ 52 ಯೋಜನೆಗಳಿಗೆ ಒಡಂಬಡಿಕೆ(ಎಂಒಯು) ಮಾಡಿಕೊಳ್ಳ ಲಾಗಿತ್ತು.

ಇಂಧನ ಕ್ಷೇತ್ರದಲ್ಲೂ ರೂ 44,152 ಕೋಟಿ ಮೊತ್ತದ 38 ಯೋಜನೆಗಳಿಗೆ ಹೂಡಿಕೆ ಹರಿದುಬಂದಿತ್ತು. ವಿದ್ಯುತ್ ಕ್ಷೇತ್ರದತ್ತ ಆಸಕ್ತಿ ತೋರಿ 140 ಪ್ರಸ್ತಾವಗಳು ಬಂದಿದ್ದವು. ಸಿಮೆಂಟ್ ಕ್ಷೇತ್ರದಲ್ಲಿ 12 ಯೋಜನೆಗಳಿಗೆ ರೂ41,196 ಕೋಟಿ ಮೊತ್ತದ ಒಡಂಬಡಿಕೆ, ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಕ್ಷೇತ್ರದಲ್ಲಿ 50 ಯೋಜನೆಗಳಿಗೆ ರೂ16,489 ಕೋಟಿ ಹೂಡಿಕೆಗೆ ಒಡಂಬಡಿಕೆ ಆಗಿತ್ತು. ಉಕ್ಕು ವಲಯಕ್ಕೆ ಸಿಂಹಪಾಲು ಹೂಡಿಕೆ ಬಂದಿದ್ದರಿಂದ `ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್~, `ಸ್ಟೀಲ್ ಇನ್ವೆಸ್ಟರ್ಸ್ ಮೀಟ್~ ಆಯಿತು ಎಂಬ ವಿಶ್ಲೇಷಣೆ ನಂತರ ನಡೆದವು.

`ಒಟ್ಟು ಒಡಂಬಡಿಕೆಯ 389 ಯೋಜನೆಗಳಲ್ಲಿ ಈವರೆಗೆ ಜಾರಿಯಾಗಿರುವುದು 38 ಮಾತ್ರ. ಕಬ್ಬಿಣ ಮತ್ತು ಉಕ್ಕು ವಲಯಗಳಲ್ಲಿ ಆಗಿರುವ `ಎಂಒಯು~ ಕುರಿತು ಕೇಳಲೇಬೇಡಿ. ವಿಜಾಪುರದ ಬಸವನಬಾಗೇವಾಡಿ ಕೂಡಗಿಯಲ್ಲಿ `ಎನ್ಟಿಪಿಸಿ~ ಶಾಖೋತ್ಪನ್ನ ಘಟಕಕ್ಕೆ ಶಂಕುಸ್ಥಾಪನೆ ಆಗಿದ್ದು ಬಿಟ್ಟರೆ ಬೇರಾವುದೇ ಬೃಹತ್ ವಿದ್ಯುತ್ ಯೋಜನೆ ಈವರೆಗೆ ಆರಂಭವಾಗಿಲ್ಲ~ ಎನ್ನುತ್ತಾರೆ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ(ಎಫ್ಕೆಸಿಸಿಐ) ಅಧ್ಯಕ್ಷ ಜೆ.ಆರ್.ಬಂಗೇರಾ.

`ಪೋಸ್ಕೊ~ ಭೂಸ್ವಾಧೀನ ವಿವಾದ ಬ್ರಹ್ಮಿಣಿ ಇಂಡಸ್ಟ್ರೀಸ್ ಮಾರಾಟ, ಗಣಿಗಾರಿಕೆ ನಿಷೇಧ ಹೀಗೆ ಹಲವು ಸಂಗತಿಗಳು ಉಕ್ಕು ವಲಯದ ಬಿಕ್ಕಟ್ಟು ಹೆಚ್ಚುವಂತೆ ಮಾಡಿವೆ. ಇವೆಲ್ಲವೂ ದೀರ್ಘಾವಧಿ ಯೋಜನೆಗಳಾದ್ದರಿಂದ ಕಾರ್ಯಾರಂಭ ಮಾಡಲು 5 ವರ್ಷಗಳಾದರೂ ಬೇಕಾಗುತ್ತದೆ.

ಜಿಂದಾಲ್ ಉಕ್ಕು ಕಾರ್ಖಾನೆ ಕಾರ್ಯಾರಂಭಕ್ಕೆ 12 ವರ್ಷಗಳನ್ನು ತೆಗೆದುಕೊಂಡ ನಿದರ್ಶನವೇ ನಮ್ಮ ಕಣ್ಮಂದೆ ಇದೆ. ಇದರರ್ಥ ಮೊದಲ ಸುತ್ತಿನ `ಜಿಮ್~ ಯಶಸ್ವಿಯಾಗಿಲ್ಲ ಎಂದಲ್ಲ. ಹೂಡಿಕೆದಾರರ ಸಮಾವೇಶ ಆಯೋಜಿಸುವುದರ ಮುಖ್ಯ ಉದ್ದೇಶವೇ ಜಾಗತಿಕ ಬಂಡವಾಳ ಆಕರ್ಷಿಸಲು.

ಈ ಮೂಲಕ ಇಡೀ ಆಡಳಿತ ಯಂತ್ರವನ್ನು ಇನ್ನಷ್ಟು ಚುರುಕುಗೊಳಿಸಬಹುದು. `ಅಭಿವೃದ್ಧಿಗಾಗಿ ರಾಜಕೀಯಕ್ಕಿಂತ ರಾಜಕೀಕ್ಕಾಗಿ ಅಭಿವೃದ್ಧಿ~ ಇರುವ ಈಗಿನ ಪರಿಸ್ಥಿತಿಯಲ್ಲಿ ಇಂತಹ ಸಮಾವೇಶಗಳಿಂದ ಶೇ 100ರಷ್ಟು ಅಲ್ಲದಿದ್ದರೂ ಶೇ 10ರಷ್ಟಾದರೂ ಅಭಿವೃದ್ಧಿ ನಿರೀಕ್ಷಿಸಬಹುದು. `ಜಿಮ್-1ರಲ್ಲಿ~ ಏನಾಯಿತು ಎನುವುದರ ಸಮಗ್ರ ಚಿತ್ರಣ 2015ರ ವೇಳೆಗೆ ಲಭಿಸಲಿದೆ~ ಎನ್ನುತ್ತಾರೆ ಬಂಗೇರಾ.

`ಎಂಎಸ್ಎಂಇ~ಗಳಿಗೆ ಆದ್ಯತೆ
ಕಳೆದ ಬಾರಿ ಸ್ಥಳೀಯ ಉದ್ಯಮ ಸಂಸ್ಥೆಗಳನ್ನು ಕಡೆಗಣಿಸಲಾಗಿತ್ತು. ಈ ಬಾರಿ ರಾಜ್ಯದ ಸಣ್ಣ ಮತ್ತು ಮಧ್ಯಮ ಪ್ರಮಾಣದ(ಎಂಎಸ್ಎಂಇ) ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ. ಬ್ಯಾಂಕುಗಳನ್ನೂ ಸೇರಿಸಿಕೊಂಡಿರುವುದು ವಿಶೇಷ. ಸರ್ಕಾರ ರೂ5 ಲಕ್ಷ ಕೋಟಿ ಹೂಡಿಕೆ ನಿರೀಕ್ಷಿಸಿದೆ. ಇದರಲ್ಲಿ ರೂ20 ಸಾವಿರ ಕೋಟಿ ಹೂಡಿಕೆಯನ್ನು `ಎಫ್ಕೆಸಿಸಿಐ~ ಸಂಗ್ರಹಿಸಿ ಕೊಡಲಿದೆ.

ವಿಜಾಪುರ, ಮೈಸೂರು, ಧಾರವಾಡ, ಬೆಳಗಾವಿ, ಮಂಗಳೂರು ಸೇರಿದಂತೆ 2 ಮತ್ತು 3ನೇ ಹಂತದ ನಗರಗಳಲ್ಲಿ ಆಹಾರ ಸಂಸ್ಕರಣೆ, ಮಾಹಿತಿ ತಂತ್ರಜ್ಞಾನ, ಹಾರ್ಡ್ವೇರ್, ಪ್ರವಾಸೋದ್ಯಮ, ಆತಿಥ್ಯ, ಫೌಂಡ್ರಿ, ರಾಸಾಯನಿಕ, ಹೆಲ್ತ್ಕೇರ್, ಪೆಟ್ರೋಕೆಮಿಕಲ್ಸ್ ಕ್ಷೇತ್ರಗಳಲ್ಲಿ ರಾಜ್ಯದ `ಎಸ್ಎಂಇ~ಗಳೇ ಹೂಡಿಕೆ ಮಾಡಲಿವೆ. ಕಳೆದ ಬಾರಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಉತ್ತರ ಕರ್ನಾಟಕದಿಂದಲೇ ರೂ2,500 ಕೋಟಿ ಹೂಡಿಕೆ ಸಂಸ್ಥೆ ಸಂಗ್ರಹಿಸಿ ಕೊಡಲಿದೆ ಎನ್ನುತ್ತಾರೆ.

ಕಂಪೆನಿಗಳಿಗೆ ಬಂಡವಾಳ ಹೂಡಿಕೆಗಿಂತ ಭೂಸ್ವಾಧೀನವೇ ದೊಡ್ಡ ಸಮಸ್ಯೆ. ಕೆಲವೆಡೆ ಪಟ್ಟಭದ್ರ ಹಿತಾಸಕ್ತಿಗಳಿಂದ ಈ ವಿವಾದ ಹೆಚ್ಚಿದೆ. ಭೂಸ್ವಾಧೀನ ವಿಳಂಬ ತಪ್ಪಿಸಲು ಮತ್ತು ಇದರಲ್ಲಿನ ಭ್ರಷ್ಟಾಚಾರ ತಡೆಯಲು `ಎಫ್ಕೆಸಿಸಿಐ~ ಖಾಸಗಿ ಭೂ ಬ್ಯಾಂಕ್ ಸ್ಥಾಪಿಸುವಂತೆ ಸರ್ಕಾರಕ್ಕೆ ಸಲಹೆ ಮಾಡಿದೆ. ಇದರಡಿ ಭೂಮಿಯನ್ನು ಮಾರಾಟ ಮಾಡಬೇಕೆಂದಿರುವ ರೈತ (ಕೃಷಿ ಭೂಮಿ ಹೊರತುಪಡಿಸಿ) ನೇರವಾಗಿ ಖಾಸಗಿ ಭೂ ಬ್ಯಾಂಕ್ಗೆ ಮಾರಾಟ ಮಾಡಬಹುದು. ಮಾರುಕಟ್ಟೆಗೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆ ಲಭಿಸುತ್ತದೆ. ಆಯಾ ಜಿಲ್ಲಾಡಳಿತ ಈ ಭೂಮಿಗೆ `ಎನ್ಒಸಿ~ ಪ್ರಮಾಣ ಪತ್ರ ನೀಡಬೇಕು.

ಇದರಿಂದ ಭೂಸ್ವಾಧೀನ ತ್ವರಿತವಾಗಿ ಆಗುತ್ತದೆ. ಈಗ ಕಂಪೆನಿಗಳಿಗೆ ಜಿಲ್ಲಾಡಳಿತದಿಂದ `ಎನ್ಒಸಿ~ ಪಡೆದುಕೊಳ್ಳುವುದೇ ದೊಡ್ಡ ತಲೆನೋವು ಎನ್ನುತ್ತಾರೆ ಅವರು.

ನೋಡಲ್ ಅಧಿಕಾರಿ ನೇಮಕ
ನಿಗದಿತ ಸಮಯದಲ್ಲೇ `ಜಿಮ್~ ಒಡಂಬಡಿಕೆಗಳು ಜಾರಿಯಾಗಲು ಮತ್ತು ಯೋಜನೆಗಳ ಮೇಲೆ ನಿಗಾವಹಿಸಲು ಸರ್ಕಾರ ಜಿಲ್ಲೆಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎನ್ನುವುದು `ಎಫ್ಕೆಸಿಸಿಐ~ ಆಗ್ರಹ. ಕಳೆದ ಬಾರಿಯ `ಜಿಮ್~ನಲ್ಲಿ ದೊಡ್ಡ ಯೋಜನೆಗಳಾದರೆ ನಿರ್ದಿಷ್ಟ ಯೋಜನೆಗೆ ಒಬ್ಬರನ್ನು, ಸಣ್ಣ ಪ್ರಮಾಣದಾಗಿದ್ದರೆ 25 ಯೋಜನೆಗಳಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ನೇಮಕವೇ ಆಗಲಿಲ್ಲ. ಇದರ ಬದಲಿಗೆ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿ ನೇಮಿಸುವುದು ಒಳ್ಳೆಯದು ಎಂಬುದು ಬಂಗೇರಾ ಅವರ ಸಲಹೆ.

ತಾನಾಗಿಯೇ ಬರುತ್ತದೆ ಹೂಡಿಕೆ
`ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ರಾಜ್ಯದಲ್ಲಿ ಈಗಿರುವ ಸಂಪನ್ಮೂಲಗಳನ್ನೇ ಸಮರ್ಥವಾಗಿ ಬಳಸಿಕೊಂಡರೆ ಹೂಡಿಕೆಗಳು ತಾನಾಗಿಯೇ ಹರಿದು ಬರುತ್ತವೆ. ಸರ್ಕಾರ ಹೂಡಿಕೆದಾರರನ್ನು ಹುಡುಕಿಕೊಂಡು ಹೋಗುವ ಅಗತ್ಯವೇ ಬರುವುದಿಲ್ಲ~ ಎನ್ನುವುದು ಬಂಗೇರಾ ಅವರ ಖಚಿತ ಅಭಿಪ್ರಾಯ.

ಮುಖ್ಯವಾಗಿ ರಾಜ್ಯದ `ಸಾರಿಗೆ~ (ರಸ್ತೆ, ರೈಲು, ವಿಮಾನ) ಅಭಿವೃದ್ಧಿಯಾಗಬೇಕು. ಮೈಸೂರು, ಮಂಗಳೂರಿನಲ್ಲಿ ವಿಮಾನ ನಿಲ್ದಾಣಗಳು ಇದ್ದರೂ ವಿಮಾನ ಸಂಚಾರ ಸಮರ್ಪಕವಾಗಿಲ್ಲ. ಶಿವಮೊಗ್ಗ ಮತ್ತು ಬೆಳಗಾವಿ ನಿಲ್ದಾಣಗಳು ಹಾರಾಟಕ್ಕೆ ಇನ್ನೂ ಸಿದ್ಧಗೊಳ್ಳಬೇಕು. ಬೆಂಗಳೂರು-ಮೈಸೂರು ನಡುವೆ ಹೈಸ್ಪೀಡ್ ರೈಲು ಪ್ರಾರಂಭಿಸಬಹುದು.

ಹಾಸನ, ಶ್ರವಣಬೆಳಗೊಳ-ಮಂಗಳೂರು ನಡುವಿನ ಮಾರ್ಗ ಅಭಿವೃದ್ಧಿಪಡಿಸುವುದರಿಂದ ದೊಡ್ಡ ಪ್ರಮಾಣದಲ್ಲಿ ಸಮಯ, ಇಂಧನ ಉಳಿಯಲಿದೆ.

ಉದಾಹರಣೆಗೆ ಮಹಾರಾಷ್ಟ್ರದ ಧಾಬೂಲ್ನಿಂದ ಬೆಂಗಳೂರು ಬಿಡದಿವರೆಗಿನ ಅನಿಲ ಕೊಳವೆ ಮಾರ್ಗ ಯೋಜನೆಯಿಂದ ರಾಜ್ಯದ ಉದ್ಯಮಕ್ಕೆ ಬೃಹತ್ ಪ್ರಮಾಣದಲ್ಲಿ ಅನುಕೂಲ ಆಗಲಿದೆ. ಜತೆಗೆ ಬೆಂಗಳೂರು ಮೂಲಕ ಹಾದು ಹೋಗಲಿರುವ ಚೆನ್ನೈ-ಮುಂಬೈ ಹೊಸ ಕಾರಿಡಾರ್ ಯೋಜನೆ ಜಾರಿಗೆ ಬಂದರೆ ಅದರಿಂದ ರಾಜ್ಯಕ್ಕೆ ಆಗುವ ವಾಣಿಜ್ಯ ಲಾಭಗಳು ನೂರಾರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯದ ಸಹಭಾಗಿತ್ವದಲ್ಲಿ ಶಿರಾಡಿ ಘಾಟ್ನಲ್ಲಿ ಸಕಲೇಶಪುರದಿಂದ ಗುಂಡ್ಯವರೆಗೆ 20 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸುವ (ಟನಲ್ ರೋಡ್) ರೂ3000 ಕೋಟಿ ವೆಚ್ಚದ ಯೋಜನೆ ಹಮ್ಮಿಕೊಂಡಿದೆ. ಜತೆಗೆ ತದಡಿ ಬಂದರು, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗವೂ ಅಭಿವೃದ್ಧಿಯಾಗಬೇಕಿದೆ.

ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ನಿರ್ಮಿಸುವ ರಸ್ತೆಮಾರ್ಗವನ್ನು ಪ್ರಸಕ್ತ ವರ್ಷದಿಂದ 20 ಕಿ.ಮೀ.ನಿಂದ 30 ಕಿ.ಮೀ.ಗೆ ಹೆಚ್ಚಿಸಲಾಗಿದೆ.

ಇದನ್ನೇ ಸಮರ್ಪಕವಾಗಿ ಜಾರಿಗೆ ತಂದರೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಬಹುದು. ಹೀಗೆ ಈಗಿರುವ ಸಾರಿಗೆ ಮಾರ್ಗ ಅಭಿವೃದ್ಧಿಪಡಿಸಿ, ಲಭ್ಯ ಸಂಪನ್ಮೂಲಗಳನ್ನೇ ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡರೆ ಸರ್ಕಾರ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದಂತೆಯೂ ಆಗಲಿದೆ, ಕೈಗಾರಿಕಾ ಕ್ಷೇತ್ರದ ಪ್ರಗತಿಯ ಚಿತ್ರಣವನ್ನೂ ಬದಲಿಸಬಹುದಾಗಿದೆ ಎನ್ನುತ್ತಾರೆ ಬಂಗೇರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.