ಶನಿವಾರ, ಮೇ 8, 2021
21 °C

ಅಂತರಂಗದ ಅರಿವು; ಬಹಿರಂಗದ ಕ್ರಿಯೆ

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಅಂತರಂಗದ ಅರಿವು; ಬಹಿರಂಗದ ಕ್ರಿಯೆ

‘ಶೂನ್ಯ ಸಂಪಾದನೆ’ಯಲ್ಲಿ ಬಸವಣ್ಣ ಅಲ್ಲಮಪ್ರಭುವನ್ನು ಕೇಳುತ್ತಾನೆ: ‘ಅಂತರಂಗದಲ್ಲಿ ಅರಿವಾದೊಡೇನಯ್ಯ ಬಹಿರಂಗದಲ್ಲಿ ಕ್ರಿಯೆಯಿಲ್ಲದನ್ನಕ್ಕ?’ಈ ಮಾತನ್ನು ಕೆಲವು ವರ್ಷಗಳ ಕೆಳಗೆ ಡಿ.ಆರ್. ನಾಗರಾಜರ  ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಪುಸ್ತಕದಲ್ಲಿ ಓದಿದಾಗ ಮೈಯಲ್ಲಿ ಮಿಂಚೊಡೆದಿತ್ತು. ಬಸವಣ್ಣನ ಪ್ರಶ್ನೆ ಎಲ್ಲ ಕಾಲದ ಚಿಂತಕ, ಚಿಂತಕಿಯರಿಗೂ ಒಂದಲ್ಲ ಒಂದು ಘಟ್ಟದಲ್ಲಿ ಎದುರಾಗುತ್ತಿರುತ್ತದೆ. ಹತ್ತಾರು ವರ್ಷ ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡಿ, ಬೋಧಿಸಿ, ದೇಶದ ರಾಜಕಾರಣವನ್ನು ಆಳವಾಗಿ ವಿಶ್ಲೇಷಿಸುತ್ತಾ ಬಂದಿರುವ ಯೋಗೇಂದ್ರ ಯಾದವ್ ಅವರಿಗೂ ಈ ಪ್ರಶ್ನೆ ಕೆಲವು ವರ್ಷಗಳ ಕೆಳಗೆ ಎದುರಾಗಿರಬಹುದು. ಇವತ್ತಿನ ಇಂಡಿಯಾದ ಜವಾಬ್ದಾರಿಯುತ ಬುದ್ಧಿಜೀವಿಗಳಲ್ಲಿ ಒಬ್ಬರಾದ ಯೋಗೇಂದ್ರ ಯಾದವ್ ತಾವು ಈವರೆಗೆ ಚಿಂತಿಸಿದ ವಿಶಾಲ ಅರ್ಥದ ರಾಜಕಾರಣವನ್ನು ದೇಶದುದ್ದಕ್ಕೂ ಚರ್ಚಿಸಲು ‘ಸ್ವರಾಜ್ ಸಂವಾದ’ ಎಂಬ ಅಭಿಯಾನವನ್ನು ಶುರು ಮಾಡಿದ್ದಾರೆ. ಕಳೆದ ವಾರ ಪುಣೆಯಲ್ಲಿ ನಡೆದ ಸ್ವರಾಜ್ ಸಂವಾದ, ಈ ಅಂಕಣ ಅಚ್ಚಿಗೆ ಹೋಗುವ ದಿನ ಹೈದರಾಬಾದಿನಲ್ಲಿ ನಡೆಯುತ್ತಿತ್ತು.ಕಳೆದ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿದ್ದ ಯೋಗೇಂದ್ರ ಯಾದವ್  ‘ಸ್ವರಾಜ್ ಸಂವಾದ’ವನ್ನು ವಿಶಾಲ ಚಳವಳಿಯಾಗಿ, ದೀರ್ಘಕಾಲದ ರಾಜಕಾರಣವಾಗಿ ದೇಶದುದ್ದಕ್ಕೂ ನಡೆಸುವ ಅಗತ್ಯದ ಬಗ್ಗೆ ಮಾತಾಡುತ್ತಿದ್ದರು. ಸ್ವರಾಜ್ ಅಭಿಯಾನ ಈ ನಾಡನ್ನು ಅರಿಯುವ ಯಾತ್ರೆ ಎಂದ ಯಾದವ್ ಬುದ್ಧ, ಗುರುನಾನಕರು ಸಮಾಜವನ್ನು ಅರಿಯುವ ನಿಟ್ಟಿನಲ್ಲಿ ಯಾತ್ರೆ ಮಾಡಿದ್ದನ್ನು ನೆನಪಿಸಿದರು. ಆಮ್ ಆದ್ಮಿ ಪಕ್ಷದಿಂದ ಯಾದವ್ ಅವರನ್ನು ಹೊರಹಾಕಿದ ಸಂದರ್ಭದಲ್ಲಿ ದೆಹಲಿಯ ಪತ್ರಕರ್ತರು ಅವರನ್ನು ಕೇಳಿದ್ದರು: ‘ಈ ಬಿಕ್ಕಟ್ಟಿನಿಂದಾಗಿ ನೀವು ರಾಜಕೀಯ ಬಿಟ್ಟು ಅಕಡೆಮಿಕ್ಸ್‌ಗೆ ಹೋಗುತ್ತೀರ?’ ‘ಇಲ್ಲ’ ಎಂದರು ಯಾದವ್. ಅಂದರೆ, ಅವರು ಮತ್ತೆ ದೆಹಲಿಯ ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’ನಲ್ಲಿ ಪ್ರೊಫೆಸರ್ ಆಗಿರುವುದಿಲ್ಲ. ತಮ್ಮ ದೆಹಲಿಯ ಉತ್ತರದ ಮುಂದುವರಿಕೆಯೆಂಬಂತೆ ಬೆಂಗಳೂರಿನ ಸಭೆಯಲ್ಲಿ ಯೋಗೇಂದ್ರ ಹೇಳಿದರು: ‘ಮುಂದೆ ಉಳಿದಿರಬಹುದಾದ ನನ್ನ ಜೀವನದ 15–20 ವರ್ಷಗಳ ಅವಧಿಯನ್ನು ಸಂಪೂರ್ಣವಾಗಿ ಸ್ವರಾಜ್ ಅಭಿಯಾನಕ್ಕೆ ಮೀಸಲಿಡುತ್ತೇನೆ’.ಗಂಭೀರ ರಾಜಕೀಯ ಚಿಂತಕ ಯೋಗೇಂದ್ರ ಯಾದವ್ ತಮ್ಮ ಮುಂದಿನ ಜೀವಿತಾವಧಿಯನ್ನು ಸ್ವರಾಜ್ ಅಭಿಯಾನಕ್ಕೆ ಮೀಸಲಾಗಿಡುತ್ತೇನೆ ಎಂದದ್ದು ಅವರು ಆರಂಭಿಸಲಿರುವ ಹೊಸ ರಾಜಕಾರಣದ ಬಗ್ಗೆ ಗೌರವ ಹಾಗೂ ನಿರೀಕ್ಷೆಗಳೆರಡನ್ನೂ  ಹುಟ್ಟಿಸುತ್ತದೆ. ಒಂದು ಕಾಲಕ್ಕೆ ಅಕಡೆಮಿಕ್ ಆಗಿದ್ದ ಅವರಿಗೆ ಸಮಾಜವಾದಿ ಚಿಂತಕ ಕಿಶನ್ ಪಟ್ನಾಯಕ್ ಸಮಾಜ ಹಾಗೂ ರಾಜಕಾರಣದ ಇನ್ನೊಂದು ಮುಖವನ್ನು ತೋರಿಸಿದರು. ಯೋಗೇಂದ್ರ ಚಿಂತನೆಗೆ ವಿಶಿಷ್ಟ ಸಮಾಜವಾದಿ ಆಯಾಮ ಬಂದದ್ದು ಆಗ. ಆನಂತರ ಅವರು  ‘ಸೆಫಾಲಜಿ’ (ಅಥವಾ ‘ಚುನಾವಣಾ ಗಿಳಿಶಾಸ್ತ್ರ!’) ಮೂಲಕ ಇಂಡಿಯಾದ ಚುನಾವಣೆಗಳ ದಿಕ್ಕು ಹಾಗೂ ಫಲಿತಾಂಶಗಳನ್ನು ಆತ್ಮಸಾಕ್ಷಿಗೆ ಹತ್ತಿರ ನಿಂತು ಚರ್ಚಿಸತೊಡಗಿದರು; ಆನಂತರ ತಮ್ಮ ಹಲವು ದಶಕಗಳ ರಾಜಕೀಯ ಅರಿವನ್ನು, ಚುನಾವಣೆಗಳ ಅಲೆ ಹಾಗೂ ಒಳಸುಳಿಗಳನ್ನು ಕುರಿತ ತಮ್ಮ ಅದ್ಭುತ ಜ್ಞಾನವನ್ನು ಆಮ್ ಆದ್ಮಿ ಪಾರ್ಟಿಗೆ ಧಾರೆಯೆರೆದರು. ಆನಂತರ ಆದದ್ದು ಎಲ್ಲರಿಗೂ ಗೊತ್ತಿದೆ.ಯೋಗೇಂದ್ರ ತಲುಪಿರುವ ಈ ಘಟ್ಟ  ಇಂಡಿಯಾದಲ್ಲಿ ರಾಜಕಾರಣವನ್ನು ಪ್ರವೇಶಿಸುವ ಎಲ್ಲ ಸೂಕ್ಷ್ಮಜ್ಞರ ಪ್ರಾತಿನಿಧಿಕ ಸ್ಥಿತಿಯಂತಿದೆ. ರಾಜಕೀಯ ಸೇರುವ ಸೂಕ್ಷ್ಮಜೀವಿಗಳ ಕಷ್ಟಗಳು ಒಂದೊಂದಲ್ಲ. ಬುದ್ಧಿಜೀವಿಗಳು ನೈತಿಕ ಸೂಕ್ಷ್ಮಗಳನ್ನು ಕಡೆಗಣಿಸಿ ರಾಜಕೀಯ ಮಾಡುವುದು, ಪ್ರತಿಕ್ರಿಯಿಸುವುದು ಕಷ್ಟ. ಜನರ ಮೇಲೆ ತಮ್ಮ ನಡೆನುಡಿಗಳ ಪರಿಣಾಮ ಏನೆಂಬುದರ ಬಗೆಗೆ ಅವರು ಸದಾ ಎಚ್ಚರವಾಗಿರಬೇಕಾಗುತ್ತದೆ. ತಮ್ಮ ಇಂಟಿಗ್ರಿಟಿ ಹಾಗೂ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವ ಸವಾಲುಗಳು ಅಂಥವರಿಗೆ ಸದಾ ಎದುರಾಗುತ್ತಿರುತ್ತವೆ. ‘ಅಶ್ವತ್ಥಾಮ ಎಂಬ ಹೆಸರಿನ ಆನೆ ಹತವಾಯಿತು’ ಎಂದು ಧರ್ಮರಾಯ ಸತ್ಯ ಬೆರೆಸಿ ಸುಳ್ಳು ಹೇಳಿದಂತೆ ಹೇಳುವುದು ಕೂಡ ಸೂಕ್ಷ್ಮಜೀವಿಗಳಿಗೆ ಕಷ್ಟ. ಸುತ್ತಲಿನವರಲ್ಲಿ ಹುಸಿ ಹುಮ್ಮಸ್ಸು ತುಂಬಿ ಚಳವಳಿಗಳನ್ನು, ಪಕ್ಷಗಳನ್ನು ಮುನ್ನಡೆಸುವುದು ಕೂಡ ಇಂಥವರಿಗೆ  ಕಷ್ಟ. ಒಮ್ಮೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ರೂಪುಗೊಳ್ಳುತ್ತಿದ್ದಾಗ, ಕಾರ್ಯಕರ್ತರೊಬ್ಬರು ‘ತೆಲುಗುದೇಶಂ ಪಾರ್ಟಿ ತೆಲುಗು ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಹಾಗೆ ನಾವು ಕೂಡ ಕನ್ನಡತನವನ್ನು ಕೆರಳಿಸಿ ಪ್ರಾದೇಶಿಕ ಪಕ್ಷವನ್ನು ಕಟ್ಟಬೇಕು’ ಎಂದರು. ಸಾಮಾಜಿಕ ಚಳವಳಿಗಾರರು, ಲೇಖಕರು ಹೆಚ್ಚಿಗೆಯಿದ್ದ ಆ ಸಭೆಯಲ್ಲಿ ಈ ರೀತಿಯ ಅಬ್ಬರದ ಭಾಷೆ ಬಳಸಿ ಪಕ್ಷವನ್ನಾಗಲೀ ಚಳವಳಿಯನ್ನಾಗಲೀ ಕಟ್ಟಲು ಒಲವು ತೋರುವವರು ತೀರ ಕಡಿಮೆಯಿದ್ದರು.ಆದರೆ, ಮೊನ್ನೆ ಯೋಗೇಂದ್ರ  ಅವರ ಮಾತು ಕೇಳುತ್ತಿರುವಾಗ ಸತ್ಯಕ್ಕೆ ಹತ್ತಿರವಾಗಿ ಚಿಂತಿಸಿ, ಮಾತಾಡಿ, ಹೊಸ ರಾಜಕೀಯವನ್ನು ರೂಪಿಸಬಲ್ಲ ಸಾಧ್ಯತೆಗಳು ಗೋಚರಿಸತೊಡಗಿದವು. ಯೋಗೇಂದ್ರ ಅಬ್ಬರವಿಲ್ಲದೆ ತಮ್ಮ ಆಳದ ಮಾತುಗಳನ್ನು ಸ್ಪಷ್ಟವಾಗಿ ಆಡುತ್ತಿದ್ದರು: ‘ಇಂಡಿಯಾದಲ್ಲಿ ಸಾರ್ವಜನಿಕ ಜೀವನವನ್ನು ಎಂದೂ ಪ್ರವೇಶಿಸದ ಹೊಸಕಾಲದ ವಿದ್ಯಾವಂತ ತರುಣ ತರುಣಿಯರು ಕಳೆದ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಬೀದಿಗೆ ಬಂದಿದ್ದಾರೆ. ಇಂಡಿಯಾದ ರಾಜಕಾರಣದಲ್ಲಿ ಈ ಬಗೆಯ ಹೊಸ ಎನರ್ಜಿ ಉಕ್ಕಿರುವುದು ಎರಡು, ಮೂರು ದಶಕಗಳಿಗೊಮ್ಮೆ ಮಾತ್ರ. ಈ ಪಾಸಿಟಿವ್ ಎನರ್ಜಿ ದೇಶದ ನಿಜವಾದ ಸಂಪತ್ತು; ಇದು ರಾಷ್ಟ್ರೀಯ ಆಸ್ತಿ. ರಾಷ್ಟ್ರ ನಿರ್ಮಾಣಕ್ಕಾಗಿ ಬೀದಿಗಿಳಿದಿರುವ ಈ ಹೊಸ ತಲೆಮಾರಿನ ಉತ್ಸಾಹ, ಆಸೆ, ಭರವಸೆಗಳು ಕೊಚ್ಚಿ ಹೋದರೆ ಅದು ನಿಜಕ್ಕೂ ರಾಷ್ಟ್ರೀಯ ದುರಂತ. ಈಚೆಗೆ ಇಂಡಿಯಾದ ಸಾರ್ವಜನಿಕ ಕ್ಷೇತ್ರದಲ್ಲಿ ಮತ್ತೆ ಉಕ್ಕಿ ಬಂದಿರುವ ಈ ಹೊಸ ಎನರ್ಜಿ ಹಾಗೂ ಆದರ್ಶ ಕೊಚ್ಚಿ ಹೋಗದಂತೆ ಒಡ್ಡು ಕಟ್ಟುವುದು ಈ ಸ್ವರಾಜ್ ಅಭಿಯಾನದ ಉದ್ದೇಶ’.ಈಚೆಗೆ ಯೋಗೇಂದ್ರ ಹೋದ ಕಡೆಯೆಲ್ಲ ಇತ್ತೀಚಿನ ವರ್ಷಗಳಲ್ಲಿ ಹೊಸ ಆದರ್ಶದಿಂದ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ಆಮ್ ಆದ್ಮಿ ರಾಜಕಾರಣವನ್ನು ಪ್ರವೇಶಿಸಿದ ಅನೇಕರು ಅವರ ಜೊತೆ ಸೇರುತ್ತಿದ್ದಾರೆ.  ಇಂಡಿಯಾದಲ್ಲಿ ಎಡವೂ ಅಲ್ಲದ ಬಲವೂ ಅಲ್ಲದ ವಿಶಾಲ ತಳಹದಿಯ ಸಾಮಾಜಿಕ-ರಾಜಕೀಯ ಚಳವಳಿಯೊಂದು ರೂಪುಗೊಳ್ಳಲಿದೆಯೆಂದು ನನಗನ್ನಿಸುತ್ತದೆ. ಅಕಸ್ಮಾತ್ ಆಮ್ ಆದ್ಮಿ ಪಕ್ಷ ತನ್ನ ರಾಜಕೀಯ ನೆಲೆಯನ್ನು ದೆಹಲಿಯ ಆಚೆಗೆ ವಿಸ್ತರಿಸದಿದ್ದರೆ ಸ್ವರಾಜ್ ಅಭಿಯಾನದವರು ಪಂಜಾಬ್ ಮತ್ತು ಇನ್ನಿತರ ರಾಜ್ಯಗಳಲ್ಲಿ ಚುನಾವಣೆಗೂ ಇಳಿಯಬಹುದು ಎಂದು ಕೂಡ ಕೆಲವರು ಊಹಿಸುತ್ತಿದ್ದಾರೆ.ಹಾಗಾದರೆ ಸ್ವರಾಜ್ ಅಭಿಯಾನ ಒಂದು ರಾಜಕೀಯ ಪಕ್ಷವೇ? ಈ ಪ್ರಶ್ನೆಗೆ ಯಾದವ್ ಕೊಟ್ಟ ಉತ್ತರ: ‘ಹೌದು’ ಮತ್ತು ‘ಅಲ್ಲ.’ ಅವರ ಪ್ರಕಾರ, ‘ಕೇವಲ ಚುನಾವಣೆ ಹಾಗೂ ಸರ್ಕಾರ ರಚನೆ-ಇವೆರಡೇ ರಾಜಕೀಯದ ಗುರಿ ಅಲ್ಲ. ಹೋರಾಟಗಳನ್ನು ಕಟ್ಟುವುದು ಕೂಡ ಅದರ ಕೆಲಸ. ಈ ಕೆಲಸವನ್ನು ನಾವು ಚಳವಳಿಗಳಿಗೆ ಬಿಟ್ಟುಬಿಟ್ಟಿದ್ದೇವೆ. ನಾವೀಗ ಎಲ್ಲ ಕಸುಬುಗಳ, ವಲಯಗಳ ಜನರು ಕೂಡಿದ ತಂಡಗಳನ್ನು ರಚಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲೂ ಸೃಜನಶೀಲ ಐಡಿಯಾಗಳನ್ನು ಸೃಷ್ಟಿಸಬೇಕು; ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಬೇಕು; ಅವುಗಳನ್ನು ಮುಕ್ತವಾಗಿ ಎಲ್ಲರೊಡನೆ ಹಂಚಿಕೊಳ್ಳಬೇಕು. ರಾಜಕೀಯ ಈ ಕಾಲದ ಯುಗಧರ್ಮವಾದ್ದರಿಂದ ನಮ್ಮ ಚಿಂತನೆಗಳನ್ನು ನನಸಾಗಿಸಿಕೊಳ್ಳಲು ರಾಜಕೀಯದ ಮೂಲಕ ಕ್ರಿಯೆಗಿಳಿಯಬೇಕು. ಈ ದೃಷ್ಟಿಯಿಂದ ಸ್ವರಾಜ್ ಆಭಿಯಾನ ವಿಶಾಲ ಅರ್ಥದಲ್ಲಿ ರಾಜಕೀಯ ಚಳವಳಿ’.ಹೊಸ ರಾಜಕೀಯಕ್ಕೆ ಹೊಸ ಮಾದರಿಗಳನ್ನೂ ಸೃಷ್ಟಿಸಬೇಕು ಎಂಬುದು ಯಾದವ್ ಕನಸು: ಪ್ರಜಾಪ್ರಭುತ್ವದ ತತ್ವಗಳನ್ನಾಧರಿಸಿದ ರಾಜಕೀಯ ಸಂಸ್ಥೆಯನ್ನು ಕಟ್ಟಬೇಕು. ಈ ಸಂಸ್ಥೆ ಮಾಹಿತಿ ಹಕ್ಕಿನ ಅಡಿ ಬರಬೇಕು. ಎಲ್ಲ ಅಧಿಕಾರವನ್ನೂ ಒಬ್ಬ ವ್ಯಕ್ತಿಗೆ ಕೊಡುವ ವ್ಯಕ್ತಿಕೇಂದ್ರಿತ ಸಂಘಟನೆಯಾಗಬಾರದು. ದೆಹಲಿ ದರ್ಬಾರಿಗೆ ಕೊನೆ ಹೇಳಬೇಕು; ಅಂದರೆ, ತುಮಕೂರಿನಲ್ಲಿ ಮಾಡಬೇಕಾದ ಕಾರ್ಯಕ್ರಮವನ್ನು ದೆಹಲಿ ನಿರ್ಧರಿಸಬಾರದು; ತುಮಕೂರಿನ  ಘಟಕವೇ ನಿರ್ಧರಿಸಬೇಕು. ಎಲ್ಲೆಡೆ ಸ್ವರಾಜ್ ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ನಿತ್ಯ ನೆರವಾಗಬೇಕು. ಸ್ಥಳೀಯ ಬಿಕ್ಕಟ್ಟುಗಳು ಬೆಳೆಯದಂತೆ ಶಾಂತಿಯುತವಾಗಿ ಅವನ್ನು ಬಗೆ ಹರಿಸುವಂತೆ ಸ್ವರಾಜ್ ವೇದಿಕೆಗಳು ನೋಡಿಕೊಳ್ಳಬೇಕು…ಹೀಗೆ ಯೋಗೇಂದ್ರ ಯಾದವರ ಸ್ವರಾಜ್ ಚಿಂತನೆ ಬೆಳೆಯುತ್ತಿದೆ. ಇದಕ್ಕೆ ಇನ್ನೂ ಹತ್ತಾರು ಅಂಶಗಳನ್ನು ಎಲ್ಲರೂ ಜೋಡಿಸುತ್ತಾ ಹೋಗಬಹುದು.ಇದೀಗ ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲಿವೆ. ಯಾದವ್ ಮಂಡಿಸುತ್ತಿರುವ ವಿಶಾಲ ರಾಜಕೀಯದ  ಸ್ವರಾಜ್ ಸಂವಾದವನ್ನು ಮುನ್ನೆಲೆಗೆ ತರಲು ಇದು ಸಕಾಲ. ‘ಈ ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ನಂತರ ರಾಜ್ಯ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೆ ಐದು ವರ್ಷಗಳ ಅವಧಿಗೆ ಎಪ್ಪತ್ತರಿಂದ ನೂರು ಕೋಟಿ ರೂಪಾಯಿಗಳ ಅನುದಾನ ನೀಡಬೇಕು’ ಎಂದು ರೈತನಾಯಕ ಹಾಗೂ ಶಾಸಕ ಪುಟ್ಟಣ್ಣಯ್ಯ ಮೊನ್ನೆ ಹೇಳಿದ್ದಾರೆ. ‘ಗ್ರಾಮದಲ್ಲಿ ಕುಸಿದುಬಿದ್ದ ಒಂದು ಮನೆಗೆ ಪರಿಹಾರ ಕೊಡುವ ಅಧಿಕಾರ ಕೂಡ ಗ್ರಾಮಪಂಚಾಯ್ತಿಗೆ ಇಲ್ಲ; ಆ ಫೈಲು ವಿಧಾನಸೌಧದವರೆಗೂ ಬರಬೇಕು ಎಂದರೆ ‘ವಿಕೇಂದ್ರೀಕರಣ’ ಎಂಬ ಪದಕ್ಕೆ ಅರ್ಥವೇ ಇಲ್ಲ’ ಎಂದು ಪುಟ್ಟಣ್ಣಯ್ಯ ಎತ್ತಿರುವ ವಿಕೇಂದ್ರೀಕರಣದ ಪ್ರಶ್ನೆಯನ್ನು ಈ ಚುನಾವಣೆಯ ಸಂದರ್ಭದಲ್ಲಿ ಗಂಭೀರವಾಗಿ ಚರ್ಚಿಸಬೇಕು; ಗ್ರಾಮದ ಅಭಿವೃದ್ಧಿಗಳ ಚಿಂತನೆಯನ್ನು ಪಕ್ಷಾತೀತವಾಗಿ, ಆರ್ಥಿಕ ನೆಲೆಯಿಂದ ಆರಂಭಿಸಬೇಕು.ಇವತ್ತು ಪಂಚಾಯಿತಿ ಚುನಾವಣೆಗೆ ಹೊಸ ತಲೆಮಾರಿನ ತರುಣ ತರುಣಿಯರು ಇಳಿಯಲಿದ್ದಾರೆ. ಇವರೊಡನೆ ನವ ಮಾಧ್ಯಮಗಳನ್ನು ಬಳಸುತ್ತಿರುವ ಹೊಸ ತಲೆಮಾರಿನ ಲೇಖಕ ಲೇಖಕಿಯರು, ಪತ್ರಕರ್ತರು ಸೇರಿ, ಸ್ವರಾಜ್ಯದ ಹೊಸ ಚರ್ಚೆಗಳನ್ನು ಬಿತ್ತಿ ಬೆಳೆಸಿದರೆ, ವಿಕೇಂದ್ರೀಕರಣದ ಹೊಸ ರಾಜಕಾರಣದ ಹೊಸ ಅಲೆ ಕರ್ನಾಟಕದಿಂದಲೇ ಮತ್ತೆ ಸೃಷ್ಟಿಯಾಗಬಹುದು. ವಿಕೇಂದ್ರೀಕರಣದ ರಾಜಕಾರಣಕ್ಕೆ ಕರ್ನಾಟಕವೇ ಮುಂಚೂಣಿ ಮಾದರಿ ಎಂಬುದನ್ನು ದೇಶಕ್ಕೆ ತೋರಿಸುವ ಕಾಲ ಈಗ ಮತ್ತೆ ಬಂದಿದೆ.

ಇದೆಲ್ಲದರ ನಡುವೆ ನನಗೆ ನಿಜಕ್ಕೂ ಆಶ್ಚರ್ಯ ಹುಟ್ಟಿಸುವುದು ಗಾಂಧೀಜಿ ನೂರು ವರ್ಷಗಳ ಕೆಳಗೆ ಬಳಸಿದ ‘ಸ್ವರಾಜ್’ ಕಲ್ಪನೆ ಇಂಡಿಯಾದಲ್ಲಿ ಮತ್ತೆ ಮತ್ತೆ ಹುಟ್ಟುವ ರೀತಿ! ಈ ದೇಶದಲ್ಲಿ ಒಡೆದು ಆಳುವ ರಾಜಕೀಯವೊಂದೇ ಮರುಕಳಿಸುವುದಿಲ್ಲ; ಇಲ್ಲಿ ಕಾಲಕಾಲಕ್ಕೆ ನಿರ್ಮಾಣ ರಾಜಕಾರಣವೂ ಹುಟ್ಟುತ್ತಿರುತ್ತದೆ ಎಂಬ ಆಶಾವಾದ ಇಂಥ ಬೆಳವಣಿಗೆಗಳಿಂದ ಹುಟ್ಟುತ್ತಿರುತ್ತದೆ. 

ಕೊನೆ ಟಿಪ್ಪಣಿ: ಎಷ್ಟು ಸೀಟ್ ಗೆಲ್ಲಬಹುದು?:

ಸಮಾಜವಾದಿ ರೈತನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು 80ರ ದಶಕದಲ್ಲಿ ರೈತಸಂಘದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವ ಯೋಚನೆಯಲ್ಲಿದ್ದರು. ಆಗ ಅವರನ್ನು ಸಂದರ್ಶಿಸಿದ್ದ ಲೇಖಕ ಕೆ.ಪುಟ್ಟಸ್ವಾಮಿ ಬರೆಯುತ್ತಾರೆ: ನಂಜುಂಡಸ್ವಾಮಿಯವರನ್ನು ‘ನೀವು ಎಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯಥಿಗಳನ್ನು ನಿಲ್ಲಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿದೆವು.

ಥಟ್ಟಂತ ಉತ್ತರ ಬಂತು: ‘183 ಕ್ಷೇತ್ರಗಳಲ್ಲಿ’

‘ಎಷ್ಟು ಸೀಟು ಗೆಲ್ಲಬಹುದು?’

‘183  ಸೀಟ್‌ಗಳನ್ನೂ ಗೆಲ್ತೀವಿ’


ಕಕ್ಕಾಬಿಕ್ಕಿಯಾಗುವ ಸರದಿ ನಮ್ಮದಾಯಿತು. ಪ್ರೊಫೆಸರ್ ತಣ್ಣಗೆ ಮಾತು ಮುಂದುವರಿಸಿದರು: ‘ನಾವು 224 ಸೀಟುಗಳನ್ನೂ ಗೆಲ್ಲುತ್ತೇವೆ. ಆದರೆ ಒಂದು ವಿರೋಧ ಪಕ್ಷ ಇಲ್ಲದೆ ಸರ್ಕಾರ ನಡೆಸೋದು ಅಷ್ಟು ಒಳ್ಳೆಯದಲ್ಲ. ಅದಕ್ಕೇ 183 ಸೀಟ್‌ಗೆ ಲಿಮಿಟ್ ಮಾಡಿಕೊಂಡಿದ್ದೀವಿ’.ರಾಜಕೀಯದಲ್ಲಿ ಹೀಗೆ ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುವ ಒಂದು ಪುಟ್ಟ ಎಳೆ ಇದ್ದರೆ ರಾಜಕಾರಣಿಗಳ ‘ಇಗೋ’ದ ಅನೇಕ ಸಮಸ್ಯೆಗಳು ಪರಿಹಾರವಾಗಬಲ್ಲವು! ನಂಜುಂಡಸ್ವಾಮಿಯವರಿಗೂ ಅದು ಉತ್ಪ್ರೇಕ್ಷೆ ಎಂಬುದು ಗೊತ್ತಿತ್ತು; ಸಂದರ್ಶಿಸಿದವರಿಗೂ ಗೊತ್ತಿತ್ತು. ಆದರೆ ಚುನಾವಣೆಯೆನ್ನುವುದು ನಿಜಕ್ಕೂ ಪಂದ್ಯದಂತಿರುವುದರಿಂದ ಅಲ್ಲಿ ಗೆಲ್ಲುವ ಭಾಷೆ ಬಳಸುವುದು ಅನಿವಾರ್ಯವಿರಬಹುದು. ಚುನಾವಣೆಯ ಬಹಿರಂಗ ಪರೀಕ್ಷೆಯ ಸಂದರ್ಭದಲ್ಲಿ ಎಂಥ ಸೂಕ್ಷ್ಮಜ್ಞರೂ  ಅಂತರಂಗ ಪರೀಕ್ಷೆಯಿಂದ ಹುಟ್ಟುವ ಸತ್ಯಗಳನ್ನು ಕೆಲ ಕಾಲ ಅಮಾನತಿನಲ್ಲಿ ಇಡಬೇಕಾಗಿ ಬರಬಹುದು! ಹ್ಯಾಮ್ಲೆಟ್‌ನ ‘ಟು ಬಿ ಆರ್ ನಾಟ್ ಟು ಬಿ’  ಹೊಯ್ದಾಟ ಎಲ್ಲ ಕಾಲಕ್ಕೂ ಆದರ್ಶವಾಗಿರಬೇಕಿಲ್ಲ!

editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.