ಮಂಗಳವಾರ, ಮೇ 11, 2021
20 °C

ಅಚ್ಚರಿ ಮೂಡಿಸಿದ ಆರ್‌ಬಿಐ ನೀತಿ!

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಕಳೆದ ಮೂರು ವರ್ಷಗಳಲ್ಲಿ ಮೊದಲ ಭಾರಿಗೆ ಬ್ಯಾಂಕ್‌ಗಳಿಗೆ ನೀಡುವ ಅಲ್ಪಾವಧಿ ಸಾಲದ ಮೇಲೆ ಶೇ. 0.5ರಷ್ಟು ಬಡ್ಡಿ ದರ ಕಡಿತಗೊಳಿಸಿ ಹೆಚ್ಚಿನ ವಿಶ್ಲೇಷಕರಿಗೆ ಅಚ್ಚರಿ ಮೂಡಿಸಿತು. ಕಾರಣ ಹೆಚ್ಚಿನವರು ಶೇ. 0.25 ಕಡಿತದ ನಿರೀಕ್ಷೆಯಲ್ಲಿದ್ದರು!2010ರ ಮಾರ್ಚ್‌ನಿಂದ 2011ರ ಅಕ್ಟೋಬರ್ ನಡುವಿನ ಅವಧಿಯಲ್ಲಿ 13 ಬಾರಿ ರೆಪೊ ದರ ಹೆಚ್ಚಿಸಿದ್ದ ಆರ್‌ಬಿಐ, ಮುಂದಿನ ದಿನಗಳಲ್ಲಿ ಮತ್ತೆ ಕಡಿತ ಮಾಡಲು ಅವಕಾಶ ವಿರಲಾರದೆಂಬ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ ಬ್ಯಾಂಕ್‌ಗಳು ಬಂಗಾರದ ಮೇಲೆ ಸಾಲ ನೀಡುವ ಕಂಪನಿಗಳಿಗೆ ಒದಗಿಸುವ ಸಾಲದ ಪ್ರಮಾಣವು ಈಗಿನ ಶೇ. 10 ರಷ್ಟು ಬ್ಯಾಂಕ್ ಬಂಡವಾಳದ ಬದಲು ಶೇ. 7.5ಗೆ ಇಳಿಸಿದೆ.ಇದು ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಯ ಶೇ. 50ರಷ್ಟರ ಒಟ್ಟು ಸ್ವತ್ತಿನ ಮೌಲ್ಯದಷ್ಟು ಬಂಗಾರದ ಮೇಲೆ ಸಾಲ ನೀಡುವ ಕಂಪನಿಗಳಿಗೆ ಅನ್ವಯಿಸುತ್ತದೆ. ಈ ಕಂಪನಿಗಳು ಶೇ. 60ರವರೆಗಷ್ಟೇ ಚಿನ್ನದ ಮೇಲೆ ಸಾಲ ನೀಡಬಹುದು ಎಂಬ ನಿರ್ದೇಶನವನ್ನು ಆರ್‌ಬಿಐ ಹಿಂದಿನ ತಿಂಗಳಷ್ಟೆ ನೀಡಿದೆ.ಆರ್‌ಬಿಐನ ರೆಪೊ ದರ ಕಡಿತ ಷೇರುಪೇಟೆಯನ್ನು ಅಂದು 206 ಪಾಯಿಂಟ್ ಮುನ್ನಡೆ ಪಡೆಯುವಂತೆ ಮಾಡಿತು. ಆದರೂ ಸದೃಢವಾದ ವಾತಾವರಣ, ನಂಬಿಕೆಯ ಕೊರತೆ ಚಟುವಟಿಕೆದಾರರಲ್ಲಿತ್ತು. ಷೇರುಪೇಟೆ ಬಂಡವಾಳ ಮೌಲ್ಯ ರೂ 62.48 ಲಕ್ಷ ಕೋಟಿಯಲ್ಲಿದ್ದರೂ ವಹಿವಾಟಿನ ಗಾತ್ರ ಕೇವಲ 2000 ಕೋಟಿಯಷ್ಟು ಮಾತ್ರ ಎಂದರೆ ಸಮಂಜಸವಾದುದಲ್ಲ.ಹಿಂದಿನ ವಾರ ಒಟ್ಟಾರೆ 279 ಅಂಶಗಳಷ್ಟು ಏರಿಕೆ ಕಂಡ ಸಂವೇದಿ ಸೂಚ್ಯಂಕ ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 79 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕವನ್ನು 101 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ರೂ364 ಕೋಟಿ ಏರಿಸಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ 278 ಕೋಟಿ ಹೂಡಿಕೆ ಮಾಡಿವೆ. ಪೇಟೆ ಬಂಡವಾಳ  ಮೌಲ್ಯ ರೂ61.63 ಲಕ್ಷ ಕೋಟಿಯಿಂದ ರೂ 62.48 ಲಕ್ಷ ಕೋಟಿಗೆ ಏರಿಕೆಯಾಗಿದೆ.ಹೊಸ ಷೇರಿನ ವಿಚಾರ

*ತ್ರಿಭುವನ್ ದಾಸ್ ಭೀಂಜಿ ಝವೇರಿ ಲಿ. ಕಂಪನಿಯ ಚಿನ್ನಾಭರಣ ವಲಯದ ಶತಮಾನಕ್ಕೂ ಹೆಚ್ಚಿನ ಹಳೆಯದಾದ ಕಂಪನಿಯಾಗಿದ್ದು, ಈವರೆಗೂ 14 ಷೋರೂಂಗಳನ್ನು ದೇಶದ 10 ನಗರಗಳಲ್ಲಿ ಹೊಂದಿದೆ. 2015ರ ಅಂತ್ಯದ ವೇಳೆಗೆ 43 ಹೊಸ ಷೋರೂಂ ಆರಂಭಿಸುವ ಗುರಿ ಹೊಂದಿದೆ. ಈ ಕಂಪನಿಯ ರೂ10ರ ಮುಖಬೆಲೆಯ 1.66 ಕೋಟಿ ಷೇರುಗಳು ಏ.24ರಿಂದ 26ರವರೆಗೆ ಸಾರ್ವಜನಿಕ ವಿತರಣೆಗೆ ಬಿಡುಗಡೆಯಾಗಲಿವೆ.ಪ್ರತಿ ಷೇರಿಗೆ ರೂ120ರಿಂದ ರೂ126ರ ಅಂತರದಲ್ಲಿ ವಿತರಣೆ ಬೆಲೆಯಿದ್ದು, ಕನಿಷ್ಠ 45 ಮತ್ತು ಅದರ ಗುಣಕದಲ್ಲಿ ಷೇರುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕಂಪನಿಯ ಪ್ರತಿ ಷೇರಿನ ಮೌಲ್ಯ(ಎನ್‌ಎವಿ) 2011ರ ಮಾರ್ಚ್‌ನಲ್ಲಿ ರೂ 21.98ರಲ್ಲಿದ್ದು ಈಗಿನ ವಿತರಣೆ ಬೆಲೆ ಹೆಚ್ಚಿನ ಲಾಭದಾಯಕವಾಗಿರದು.*ಜಿಂದಾಲ್ ಸಾ ಲಿ.ನ ಹೂಡಿಕೆ ವಿಭಾಗಬೇರ್ಪಡಿಸಿ ಹೆಕ್ಸಾಟ್ರೇಡೆಕ್ಸ್ ಲಿ.ನಲ್ಲಿ ವಿಲೀನಗೊಳಿಸಲಾಗಿದ್ದು, ಈ ಷೇರುಗಳು ಏ. 20ರಿಂದ `ಟಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.ಮುತ್ತೋಟ್ ಫೈನಾನ್ಸ್ ಎನ್‌ಸಿಡಿ ವಹಿವಾಟು

ಮುತ್ತೋಟ್ ಫೈನಾನ್ಸ್ ಲಿ. ಕಂಪನಿ ವಿತರಿಸಿದ ರೂ1000 ಮುಖಬೆಲೆಯ ನಾನ್ ಕನ್ವರ್ಟಬಲ್ ಡಿಬೆಂಚರ್‌ಗಳು ಏ. 26ರಿಂದ ಎಫ್ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ. ಒಟ್ಟು 4 ವಿಧದ ಬಾಂಡ್‌ಗಳು ವಹಿವಾಟಾಗಲಿವೆ.ಎರಡು ವರ್ಷ ಅವಧಿಗೆ ಶೇ. 13ರಂತೆ ಬಡ್ಡಿ ನೀಡುವ ಎನ್‌ಸಿಡಿ, ಶೇ. 13.25ರ ಬಡ್ಡಿ ನೀಡುವ 3 ವರ್ಷದ ಅವಧಿಯ ಬಾಂಡ್‌ಗಳು, ಶೇ. 13.25ರಂತೆ ವಾರ್ಷಿಕ ಬಡ್ಡಿ ನೀಡುವ 5 ವರ್ಷದ ಡಿಬೆಂಚರ್‌ಗಳು ಹಾಗೂ ರೂ2000 ಮುಖಬೆಲೆಯ ಬಾಂಡ್‌ಗಳು, ಬಡ್ಡಿ ಗಳಿಸದೆ ಪಕ್ವತೆ ಬೆಲೆಯ ಎನ್‌ಸಿಡಿಗಳು ರಿಯಾಯಿತಿ ಮಟ್ಟದಲ್ಲಿ ಕೊಟ್ಟಂತಹವು 66 ತಿಂಗಳಲ್ಲಿ 2000 ರೂಪಾಯಿ ಪಕ್ವತೆಯ ಮೌಲ್ಯದ ಬಾಂಡ್‌ಗಳು ಸಹ ವಹಿವಾಟಾಗಲಿವೆ.ಮೊದಲ 3 ನಾನ್ ಕನ್ವರ್ಟಬಲ್ ಬಾಂಡ್‌ಗಳು 2013ರ ಏ. 18ರಂದು ಮೊದಲ ಬಡ್ಡಿಯನ್ನು ಪಡೆಯುತ್ತವೆ. ನಂತರ ಪ್ರತಿ ವರ್ಷ ಅದೇ ದಿನ ಪಡೆಯುತ್ತವೆ.ಲಾಭಾಂಶ: ಕ್ಯಾನ್‌ಫಿನ್ ಹೋಮ್ಸ ಶೇ 30, ಸಿ.ಎಂ.ಸಿ. ಶೇ 125, ಕ್ರಿಸಿಲ್ ಶೇ 600 (ಮುಖಬೆಲೆ ರೂ1), ಆಟೋ ಕಾರ್ಪೊರೇಷನ್ ಆಫ್ ಗೋವಾ ಶೇ 125, ಎಚ್.ಸಿ.ಎಲ್. ಟೆಕ್ನಾಲಜೀಸ್ ಶೇ 100 (ಮು.ಬೆ. ರೂ 2), ಹಿಂದೂಸ್ಥಾನ್ ಝಿಂಕ್ ಶೇ 45 (ಮು.ಬೆ. ರೂ 2), ಹಿಂದೂಸ್ಥಾನ್ ಹಾರ್ಡಿ ಶೇ 50, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 215 (ಮು.ಬೆ. ರೂ2), ಗೋವಾ ಕಾರ್ಬನ್ ಶೇ 40 (ನಿ.ದಿ. 24.7), ಇಂಡಾಗ್ ರಬ್ಬರ್ ಶೇ 45, ಇನ್‌ಫೊಟೆಕ್ ಎಂಟರ್‌ಪ್ರೈಸಸ್ ಶೇ 25 (ಮು.ಬೆ. ರೂ5), ಇಂಡಸ್ ಇಂಡ್ ಬ್ಯಾಂಕ್ ಶೇ 22, ಜಯಭಾರತ್ ಮಾರುತಿ ಶೇ 30 (ಮು.ಬೆ. ರೂ 5), ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಶೇ 180 (ನಿ.ದಿ. 27.4), ಮೈಂಡ್ ಟ್ರೀ ಶೇ 15, ಆರ್.ಎಸ್. ಸಾಫ್ಟ್‌ವೇರ್ ಶೇ 20, ರಿಲಯನ್ಸ್ ಇಂಡಸ್ಟ್ರೀಸ್ ಶೇ 85, ಸುಂದರಂ ಕ್ಲೇಟನ್ ಶೇ 115 (ಮು.ಬೆ. ರೂ5), ವಿಎಸ್‌ಟಿ ಇಂಡಸ್ಟ್ರೀಸ್ ಶೇ 650 (ನಿ.ದಿ. 19.6.12).ಮುಂದಿನ ದಿನಗಳಲ್ಲಿ ಕೋರಮಂಡಲಂ ಇಂಟರ್ ನ್ಯಾಷನಲ್, ಜಾಮೆಟ್ರಿಕ್ ಸಾಫ್ಟ್‌ವೇರ್ 23ರಂದು, ಎಚ್‌ಸಿಎಲ್ ಇನ್‌ಫೋ 24ರಂದು, ಟಿನ್‌ಪ್ಲೇಟ್ ಬಿಎಎಸ್‌ಎಫ್ 25ರಂದು, ಅಜಂತಾ ಫಾರ್ಮ, ಅಸ್ಟ್ರಾ ಮೈಕ್ರೊವೇವ್, ವಕ್ರಾಂಗಿ ಸಾಫ್ಟ್‌ವೇರ್, ಅಡೋರ್ ವೆಲ್ಡಿಂಗ್ ಕಂಪನಿಗಳು 26 ರಂದು, ಕಜಾರಿಯಾ ಸಿರಾಮಿಕ್ಸ್, ಡೆಲ್ಟಾಕಾರ್ಪ್, ಗುಜರಾತ್ ಹೋಟೆಲ್ಸ್ 27ರಂದು, ಆಟೊಲೈನ್ ಇಂಡಸ್ಟ್ರೀಸ್, ಟಿಟಾಗರ್ ವ್ಯಾಗನ್ಸ್, ಎಲ್.ಜಿ. ಬಾಲಕೃಷ್ಣ ಬ್ರದರ್ಸ್ 28ರಂದು, ಪುಂಜ್ ಲಾಯ್ಡ, ಕೆಪಿಐಟಿ ಕಮ್ಮಿನ್ ಮತ್ತು ವಿಜಯಾ ಬ್ಯಾಂಕ್ 30ರಂದು, ಸೋನೋಕೋಯಾ ಸ್ಟೀರಿಂಗ್ ಮತ್ತು ಎಸ್‌ಆರ್‌ಎಫ್ ಮೇ 1ರಂದು, ಕಾರ್ಬೊರೆಂಡಂ ಯೂನಿವರ್ಸಲ್, ಓರಿಯಂಟ್ ಪೇಪರ್ ಮೇ 2ರಂದು, ಡಿ-ಲಿಂಕ್ ಮತ್ತು ಐಎಲ್ ಅಂಡ್ ಎಫ್‌ಎಸ್ ಇನ್ವೆಸ್ಟ್ ಮ್ಯಾನೇಜರ್ಸ್ ಮೇ 3 ರಂದು ಲಾಭಾಂಶ ಪ್ರಕಟಿಸುವುದಾಗಿ ಘೋಷಿಸಿವೆ.ಮುಖಬೆಲೆ ಸೀಳಿಕೆ ವಿಚಾರ

ಅಜಂತಾ ಫಾರ್ಮ ಕಂಪನಿ 26ರಂದು ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.ಅಮಾನತು ತೆರವು

ಡನ್‌ಲಪ್ ಇಂಡಿಯ ಕಂಪನಿ ಮೇಲೆ ಲಿಕ್ವಿಡೇಷನ್‌ಗೆ ಸಲ್ಲಿಸಿದ್ದ ಅರ್ಜಿಗೆ ತಡೆ ನೀಡಿದ ಕೊಲ್ಕತ್ತಾ ಉಚ್ಚ ನ್ಯಾಯಾಲಯ, ಕಂಪನಿಯ ಷೇರಿನ ವಹಿವಾಟಿಗೆ ವಿಧಿಸಿದ್ದ ನಿರ್ಬಂಧ ತೆರವಾದ ಕಾರಣ 19ರಿಂದ ವಹಿವಾಟಾಗುತ್ತಿದೆ.

ವಾರದ ಪ್ರಶ್ನೆ

ಐಪಿಒ ಪೇಟೆಯಲ್ಲಿ ಬಿಡುಗಡೆ ನಂತರದ ಲಿಸ್ಟಿಂಗ್‌ನಲ್ಲಿ ಆ ಷೇರುಗಳನ್ನು `ಟಿ~ ಗುಂಪಿನಲ್ಲಿ ಸೇರಿಸುವುದು ಯಾವ ರೀತಿ ಸೂಕ್ತವೇ?ಉತ್ತರ:
ಕಳೆದ ಒಂದೆರಡು ವರ್ಷಗಳಲ್ಲಿ ಬಂದ ಆರಂಭ ಷೇರು ವಿತರಣೆಗಳಲ್ಲಿ ಹೆಚ್ಚಿನವು ಹೂಡಿಕೆದಾರರ ಸ್ವತ್ತು ವೃದ್ಧಿ ಮಾಡುವ ಬದಲು ಕರಗಿಸಲು ಕಾರಣವಾಗಿವೆ. ವಿಡ್‌ಫೀಲ್ಡ್ ಇಂಡಸ್ಟ್ರೀಸ್ ರೂ133ರಂತೆ ವಿತರಿಸಿದ್ದು ಈಗ ರೂ42ರ ಸಮೀಪವಿದೆ. ಎಸ್.ಕೆ.ಎಸ್. ಮೈಕ್ರೋ ಫೈನಾನ್ಸ್ ರೂ985ರಲ್ಲಿ ವಿತರಿಸಿದ್ದು ಈಗ 117 ರೂಪಾಯಿಯಲ್ಲಿದೆ.ಮೈಕ್ರೊಸೆಕ್ ಫೈನಾನ್ಷಿಯಲ್ ಸರ್ವಿಸಸ್ ವಿತರಿಸಿದ ರೂ118ರ ಬದಲಿಗೆ ಈಗ ರೂ24ರ ಸಮೀಪವಿದೆ. ಕ್ಯಾಂಟಬಿಲ್ ರೀಟೇಲ್ ಇಂಡಿಯ ವಿತರಣೆ ಬೆಲೆ ರೂ 135ಕ್ಕೆ ಬದಲಿಗೆ ರೂ17ರಲ್ಲಿದೆ, ಬ್ರೂಕ್ಸ್ ಲ್ಯಾಬ್ ವಿತರಿಸಿದ ಬೆಲೆ ರೂ 100. ಆದರೆ ಈಗಿನ ಬೆಲೆ 17 ರೂಪಾಯಿ ಸಮೀಪವಿದೆ.

 

ತಕ್ಷೀಲ್ ಸಲ್ಯೂಷನ್ಸ್ ವಿತರಣೆ ರೂ150ರ ಬದಲಿಗೆ ಈಗ ರೂ14ರ ಸಮೀಪವಿದೆ. ತಲ್ಪಾಲ್‌ಕರ್ ಫಿಟ್‌ನೆಸ್, ಬಜಾಜ್‌ಕಾರ್ಪ್, ಕೋಲ್ ಇಂಡಿಯ, ಟ್ರೀ ಹೌಸ್, ಎಜುಕೇಷನ್, ಮಲ್ಟಿ ಕಮಾಡಿಟೀಸ್‌ನಂತಹ ಕೆಲವು ಕಂಪನಿಗಳು ವಿತರಣೆ ಬೆಲೆಗಿಂತ ಹೆಚ್ಚಿನ ದರದಲ್ಲಿವೆಯಾದರೂ ಹಾನಿಗೊಳಿಸಿದ ಕಂಪನಿಗಳೇ ಹೆಚ್ಚಾಗಿವೆ. ಹಾಗಾಗಿ ಐಪಿಒ ಎಂದರೆ ಸಣ್ಣ ಹೂಡಿಕೆದಾರರ ನಿರಾಸಕ್ತಿಗೂ ಕಾರಣವಾಗಿದ್ದು ಆರಂಭಿಕ ಷೇರು ವಿತರಣೆ ಬಹುತೇಕ ಸ್ತಬ್ಧವಾಗಿದೆ.ಕೇವಲ `ಟಿ~ ಗುಂಪಿಗೆ ಸೇರಿಸುವುದರಿಂದ ಆಗುತ್ತಿದ್ದ ಅಸಹಜಮಯ ವಹಿವಾಟಿನ ಗಾತ್ರಕ್ಕೆ ತಡೆಹಿಡಿದು ಸಹಜವಾದ ಬೆಲೆ ಬಿಂಬಿತವಾಗುತ್ತಾದರೂ ಸಣ್ಣ ಹೂಡಿಕೆದಾರರು ಮತ್ತು ಇತರೆ ಹೂಡಿಕೆದಾರರನ್ನು ಆಕರ್ಷಿಸಲು ವಿತರಣೆ ಮಾಡುವ ಕಂಪನಿಗಳು `ಸುರಕಾ ಜಾಲ~ ಜಾರಿಗೊಳಿಸಬೇಕು.ಈ ಮೂಲಕ ಆರಂಭಿಕ ಷೇರುಗಳು ಅಲಾಟ್ ಆದವರಿಗೆ ಒಂದು ವರ್ಷದವರೆಗೂ ಷೇರಿನ ಬೆಲೆ ಕುಸಿದಲ್ಲಿ, ವಿತರಣೆ ಬೆಲೆಯಲ್ಲಿ ಹಿಂಕೊಳ್ಳುವ ವ್ಯವಸ್ಥೆ ಜಾರಿಯಾಗಬೇಕು. ಹಾಗೂ ಮರ್ಚಂಟ್ ಬ್ಯಾಂಕ್‌ಗಳು ವಿತರಣೆ ಬೆಲೆ ನಿಗದಿಪಡಿಸುವಾಗ ಜವಾಬ್ದಾರಿಯುತ ವಾಗುವಂತೆ ಮಾಡುವುದರೊಂದಿಗೆ ಅವರ ರೇಟಿಂಗ್‌ಗೆ ಮುಂದಾಗಬೇಕು. ಆಗ ಸ್ವಲ್ಪಮಟ್ಟಿಗಿನ ನಂಬಿಕೆ ಮರುಕಳಿಸಿ ಈಗ ತೂಕಡಿಸುತ್ತಿರುವ ಪೇಟೆಗೆ ಚೇತರಿಕೆ ಮೂಡಿ ಹೂಡಿಕೆದಾರರ ಬೆಂಬಲ ಪಡೆಯುವ ಸಾಧ್ಯತೆ ಇರುತ್ತದೆ ಅಲ್ಲವೇ?

  98863-13380

 (ಮಧ್ಯಾಹ್ನ 4.30ರ ನಂತರ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.