ಮಂಗಳವಾರ, ಮಾರ್ಚ್ 9, 2021
31 °C

ಅಭಿವೃದ್ಧಿ ವಾಸ್ತವವೋ, ಮರೀಚಿಕೆಯೋ?

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಅಭಿವೃದ್ಧಿ ವಾಸ್ತವವೋ, ಮರೀಚಿಕೆಯೋ?

ಹೈದರಾಬಾದ್‌ನ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ರಾಜ್ಯದ ಈಶಾನ್ಯ ಭಾಗದ ಜಿಲ್ಲೆಗಳ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಸ್ವಾತಂತ್ರ್ಯ ಲಭಿಸಿ 66 ವರ್ಷಗಳು ಕಳೆದಿದ್ದರೂ ದಶಕಗಳ ಹಿಂದೆ ಇದ್ದ ಸಮಸ್ಯೆಗಳು ಈಗಲೂ ಬೆಂಬಿಡದ ಬೇತಾಳದಂತೆ ಆ ಭಾಗದ ಜನರನ್ನು ಕಾಡುತ್ತಲೇ ಇವೆ. ಈಗಲೂ ಅತ್ಯಂತ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಈ ಭಾಗಕ್ಕೆ ಆಗಿಯೇ ಇಲ್ಲ.ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ, ಸೇತುವೆ, ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು ಪೂರೈಕೆ, ನೀರಾವರಿ ಸೌಲಭ್ಯ ಒಂದು ರೀತಿಯಲ್ಲಿ ಮರಿಚೀಕೆಯೇ ಆಗಿದೆ. ಪರಿಸ್ಥಿತಿ ಇಷ್ಟು ಶೋಚನೀಯವಾಗಿದ್ದರೂ ಅಭಿವೃದ್ಧಿ ಬಗ್ಗೆ ಮಾತನಾಡುವವರು, ಒಂದು ಪರ್ಯಾಯ ಮಾರ್ಗದ ಬಗ್ಗೆ ಆಲೋಚನೆಯನ್ನೂ ಮಾಡದಂಥ ಸಮಯದಲ್ಲಿ ಕೇರಳದ ಸಿ.ಎಂ. ಸ್ಟೀಫನ್ ಇದಕ್ಕೆ ಚಾಲನೆ ಕೊಟ್ಟರು ಎಂದರೆ ಆಶ್ಚರ್ಯವಾಗುತ್ತದೆ.1980ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಸ್ಟೀಫನ್ ಅವರಿಗೆ ಗುಲ್ಬರ್ಗದಿಂದ ಗೆದ್ದಿದ್ದ ಧರ್ಮಸಿಂಗ್ ಸ್ಥಾನ ಬಿಟ್ಟುಕೊಟ್ಟರು. ಸ್ಟೀಫನ್ ಅವರು ಲೋಕಸಭೆಗೆ ಆರಿಸಿಬರಬೇಕು ಎಂಬುದು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಇಚ್ಛೆಯಾಗಿತ್ತು. ಅವರಿಗೆ ಕೇರಳದಲ್ಲಿ ಅವಕಾಶವಿರಲಿಲ್ಲ. ಹಾಗಾಗಿ ಸ್ಟೀಫನ್ ಅವರನ್ನು ಗುಲ್ಬರ್ಗದಿಂದ ಕಣಕ್ಕಿಳಿಸಲು ಇಂದಿರಾ ಗಾಂಧಿ ನಿರ್ಧರಿಸಿದ್ದರಿಂದ ಧರ್ಮಸಿಂಗ್ ತಮ್ಮ ಸ್ಥಾನ ತೆರವು ಮಾಡಬೇಕಾಯಿತು.

ಗುಲ್ಬರ್ಗದ ಅಭಿವೃದ್ಧಿಗೆ ಏನಾದರೂ ಮಾಡಬೇಕು ಎಂಬ ಭಾವನೆಯಿಂದ ಸ್ಟೀಫನ್ ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಮೇಲೆ ಒತ್ತಡ ತಂದು, ಧರ್ಮಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗುವಂತೆ ಮಾಡಿದರು. ಇದು ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಗೆ ನಾಂದಿಯಾಯಿತು. ಧರ್ಮಸಿಂಗ್ ಸಮಿತಿ ನೀಡಿದ ವರದಿ ಹಾಗೂ ಅತ್ಯಂತ ಹಿಂದುಳಿದ ಈ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮಹತ್ವಾಕಾಂಕ್ಷೆಯಿಂದ, ರಾಜ್ಯ ಸರ್ಕಾರ 1991ರಲ್ಲಿ ಕಾಯ್ದೆ ಮೂಲಕ ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ರಚಿಸಿತು.ಮಂಡಳಿ ರಚಿಸುವಾಗ ಇರುವ ಉತ್ಸಾಹ ಮುಂದೆಯೂ ಅದೇ ರೀತಿ ಇರುತ್ತದೆ ಎಂದು ಹೇಳಲಾಗದು. ಏಕೆಂದರೆ ನಂತರದ ವರ್ಷಗಳಲ್ಲಿ, ಸರ್ಕಾರ ಮಂಡಳಿಗೆ ನಿಗದಿತ ಪ್ರಮಾಣದಲ್ಲಿ ಹಣ ಒದಗಿಸಿಲ್ಲ. ಮಂಡಳಿ ರಚನೆಯಾಗಿ 22 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಸರ್ಕಾರ 13 ಕೋಟಿ, 20 ಕೋಟಿ, 28 ಕೋಟಿ ರೂಪಾಯಿಯಷ್ಟು ಕಡಿಮೆ ಹಣ ಒದಗಿಸಿದೆ. ಅತ್ಯಂತ ಹೆಚ್ಚು ಎಂದರೆ 66 ಕೋಟಿ ರೂಪಾಯಿ ಒದಗಿಸಿದೆ.

ಈ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ 40 ಮತ್ತು ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ಕ್ಷೇತ್ರ (ಈಗ ದಾವಣಗೆರೆ ಜಿಲ್ಲೆ) ಸೇರಿಸಿ 41 ವಿಧಾನಸಭಾ ಕ್ಷೇತ್ರಗಳಿವೆ. ಇಷ್ಟು ಕಡಿಮೆ ಹಣದಲ್ಲಿ ಏನು ಅಭಿವೃದ್ಧಿ ಕೈಗೊಳ್ಳಲು ಸಾಧ್ಯ? ಒಟ್ಟಾರೆ 22 ವರ್ಷದಲ್ಲಿ ರಾಜ್ಯ ಸರ್ಕಾರ ಸುಮಾರು 992 ಕೋಟಿ ರೂಪಾಯಿಯನ್ನು ಮಂಡಳಿಗೆ ಒದಗಿಸಿದೆ. ದೊರೆತ ಅನುದಾನದಲ್ಲಿ ಮಂಡಳಿ ಕೂಡ ಸಾವಿರಾರು ಕಾಮಗಾರಿಗಳನ್ನು ನಿರ್ವಹಿಸಿದೆ.

ಅದರಲ್ಲೂ ಹೆಚ್ಚಿನವು ಸಣ್ಣ ಪುಟ್ಟ ಕಾಂಕ್ರೀಟ್ ರಸ್ತೆ, ಸಮುದಾಯ ಭವನಗಳ ನಿರ್ಮಾಣದಂತಹ ಕೆಲಸಗಳಿಗೆ ಆದ್ಯತೆ ದೊರೆತಿದೆ. ಎಲ್ಲಿ ಯಾವ ಕೆಲಸವನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ಶಾಸಕರೇ ತೀರ್ಮಾನಿಸುತ್ತಾರೆ. ಅವರು ಸಲ್ಲಿಸುವ ಪ್ರಸ್ತಾವವನ್ನು ಮಂಡಳಿ ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕು. ಆದರೆ ಕಾಯ್ದೆ ಪ್ರಕಾರ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆ, ಕಾರ್ಯಕ್ರಮಗಳ ವಾರ್ಷಿಕ ಕ್ರಿಯಾಯೋಜನೆಯನ್ನು ಮಂಡಳಿಯೇ ಸಿದ್ಧಪಡಿಸಿ, ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಬೇಕು.

ಜತೆಗೆ ಯೋಜನೆ ಅನುಷ್ಠಾನದ ಮೌಲ್ಯಮಾಪನವನ್ನೂ ಮಾಡಬೇಕು. ಈ ಮೂಲಕ ಈ ಭಾಗದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಮಾಡಬೇಕು. ಈಗ ಆಗಿರುವುದೇ ಬೇರೆ. ಮಂಡಳಿಯ ಕಾರ್ಯನಿರ್ವಹಣೆಯು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ರೀತಿಯೇ ಆಗಿದೆ. ಶಾಸಕರು ಸೂಚಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅದಕ್ಕೆ ಹಣ ಒದಗಿಸಿ, ಕಾಮಗಾರಿಯ ನಿರ್ವಹಣೆಯ ಕೆಲಸವನ್ನು ಮಾತ್ರ ಮಂಡಳಿ ಮಾಡುತ್ತಿದೆ.

ಎಷ್ಟೋ ವೇಳೆ ಕಾಮಗಾರಿಯ ಗುಣಮಟ್ಟ ಉತ್ತಮವಾಗಿಲ್ಲದಿದ್ದರೂ ಸುಮ್ಮನಿರಬೇಕಾಗುತ್ತದೆ. ಮಂಡಳಿಯ ಕಾರ್ಯದರ್ಶಿ ಅವರು ಕೆಲ ಕಾಮಗಾರಿಗಳನ್ನು ಪರಿಶೀಲಿಸಿ, ಬಳಸಿರುವ ಸಾಮಗ್ರಿಗಳು ಕಳಪೆಯಾಗಿವೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಮಂಡಳಿಯ ಕಾರ್ಯವೈಖರಿಯನ್ನು ಇದು ಸಾರುತ್ತದೆ. ಹಾಗಾಗಿಯೇ ಮಂಡಳಿ ರಚನೆಯ ಉದ್ದೇಶ ಪೂರ್ಣವಾಗಿ ಸಫಲವಾಗಿಲ್ಲ. ಶಾಶ್ವತ ಆಸ್ತಿ ಸೃಷ್ಟಿಸಬೇಕು ಎಂಬ ಮೂಲ ಉದ್ದೇಶ ಬದಿಗೆ ಸರಿದಿದೆ.ಮೊದಲೇ ನಿಜಾಮರ ಆಳ್ವಿಕೆಯಲ್ಲಿ ನಲುಗಿದ್ದ ಈ ಪ್ರದೇಶಗಳು, ರಾಜ್ಯ ಪುನರ್‌ವಿಂಗಡಣೆ ಸಂದರ್ಭದಲ್ಲಿ ವಿಶಾಲ ಮೈಸೂರಿನೊಂದಿಗೆ ಸೇರ್ಪಡೆಯಾದ ನಂತರವೂ ನಿರ್ಲಕ್ಷ್ಯಕ್ಕೆ ಒಳಗಾಗಲು ಕಾರಣಗಳೇನು ಎಂಬುದು ಯಕ್ಷಪ್ರಶ್ನೆ. ಇದಕ್ಕೆ ನೀತಿ-ನಿರೂಪಕರು, ಕಾಯ್ದೆ ರಚಿಸುವವರು ಉತ್ತರ ಕೊಡಬೇಕು. ತಮ್ಮ ಊರಿಗೆ ಏನು ಕೆಲಸ ಆಗಬೇಕು. ಹೇಗೆ ಅನುದಾನ ಪಡೆದುಕೊಳ್ಳಬೇಕು ಎಂಬ ಜಾಣ್ಮೆ, ಛಾತಿಯೂ ಚುನಾಯಿತ ಪ್ರತಿನಿಧಿಗಳಲ್ಲಿ ಇರಬೇಕು. ಇಲ್ಲದಿದ್ದರೆ ಯಾವ ಪ್ರದೇಶವೂ ಅಭಿವೃದ್ಧಿ ಕಾಣುವುದಿಲ್ಲ. ಇದರ ಕೊರತೆ ಈ ಭಾಗದಲ್ಲಿ ಎದ್ದು ಕಾಣುತ್ತಿದೆ.ರಾಜ್ಯ ಸರ್ಕಾರ ಹೈದರಾಬಾದ್ -ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚಿಸುವುದಕ್ಕೂ ಮುನ್ನವೇ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಬೇಕು ಕೂಗು ಕೇಳಿಬಂದಿತ್ತು. ಆದರೆ ಆಗ ಬರೀ ಹಿಂದುಳಿದ ಪ್ರದೇಶ ಎಂಬ ಕಾರಣಕ್ಕೆ ವಿಶೇಷ ಸ್ಥಾನಮಾನ ನೀಡಲು ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಳ್ಳಿಹಾಕಿತ್ತು. ಈಗ ಅದೇ ಸರ್ಕಾರ (ಕಾಂಗ್ರೆಸ್) ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಿದೆ! ಹಿಂದೆ ಇದೇ ಇಚ್ಛಾಶಕ್ತಿ ಪ್ರದರ್ಶನ ಏಕೆ ಸಾಧ್ಯವಾಗಲಿಲ್ಲ?ಇದರ ಹಿನ್ನೆಲೆಯನ್ನು ನೋಡಿದರೆ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟೇ ಕೇಂದ್ರ ಈ ತೀರ್ಮಾನ ಪ್ರಕಟಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ನಲ್ವತ್ತು ವರ್ಷಗಳ ಹಿಂದೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜೊತೆಗೇ ಕರ್ನಾಟಕ ನಡೆಸಿದ ಹೋರಾಟಕ್ಕೆ ಮಾತ್ರ ಕೇಂದ್ರ ಸೊಪ್ಪು ಹಾಕಿರಲಿಲ್ಲ. ಈಗ ದಿಢೀರ್ ನಿರ್ಧಾರ ಮಾಡಿದೆ ಎಂದರೆ ಬೇರೆ ಉದ್ದೇಶವಿರಲು ಸಾಧ್ಯವೇ? ರಾಜ್ಯ ವಿಧಾನಸಭೆ ಚುನಾವಣೆ ಮೇಲೂ ಕೇಂದ್ರದ ಈ ಘೋಷಣೆ ಪ್ರಭಾವ ಬೀರಿದ್ದರಿಂದಲೇ ಆ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಲಭಿಸಿದವು.ಈಗ 371 (ಜೆ) ಕಲಂ ಅನ್ವಯ ಶಾಸನಬದ್ಧ ವಿಶೇಷ ಮಂಡಳಿ ಅಸ್ತಿತ್ವಕ್ಕೆ ಬರುವುದರಿಂದ ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇದು ರಾಜಕೀಯ ವಿಷಯವಾಗುವುದರಿಂದ ಮಂಡಳಿಯನ್ನು ಮುಂದುವರಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ರಾಜಕೀಯ ಸ್ಥಾನಮಾನ ಕಲ್ಪಿಸಲು ಅನಗತ್ಯವಾಗಿ ಮಂಡಳಿ ಮುಂದುವರಿಸುವ ಕಾರ್ಯವನ್ನು ಸರ್ಕಾರ ಮಾಡಬಾರದು.

ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯೇ ಮೂಲಮಂತ್ರವಾಗಬೇಕು. ಒಂದು ವೇಳೆ ರಾಜ್ಯ ಸರ್ಕಾರ ಈ  ಮಂಡಳಿಯನ್ನೂ ಉಳಿಸಿಕೊಳ್ಳುವುದಾದರೆ ಅದಕ್ಕೆ ಸಮರ್ಪಕವಾಗಿ ಹಣಕಾಸು ಒದಗಿಸಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ನಿರ್ದಿಷ್ಟವಾದ ಯೋಜನೆ ರೂಪಿಸಿ, ಕಾಲಮಿತಿಯೊಳಗೆ ಅವನ್ನು ಪೂರ್ಣಗೊಳಿಸುವ ಹೊಣೆಯನ್ನು ಮಂಡಳಿಗೆ ವಹಿಸಬೇಕು.ಅಲ್ಲದೇ ಕೇಂದ್ರದಿಂದ ಎಷ್ಟೇ ಹಣ ಬಂದರೂ ಅದನ್ನು ತನ್ನ ಲೆಕ್ಕಕ್ಕೆ ಸೇರಿಸಿಕೊಳ್ಳದೆ, ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಅನುದಾನ ಒದಗಿಸಬೇಕು. ಜತೆಗೆ ಡಾ. ನಂಜುಂಡಪ್ಪ ಸಮಿತಿಯ ವರದಿ ಪ್ರಕಾರವೂ ಬಿಡುಗಡೆಯಾಗುತ್ತಿರುವ ಅನುದಾನದ ಜತೆಗೂ ಹೊಂದಿಸಬಾರದು. ಇದು ಕೂಡ ಪ್ರತ್ಯೇಕ ಅನುದಾನವೇ ಆಗಿರಬೇಕು. ಜತೆಗೆ ಈಗ ನೀಡುತ್ತಿರುವಂತೆ ಅಲ್ಪ ಪ್ರಮಾಣದ ಹಣ ಒದಗಿಸಿದರೆ ಏನೂ ಪ್ರಯೋಜನವಾಗದು. ಪ್ರಾದೇಶಿಕ ಅಸಮತೋಲನ ನಿವಾರಣೆ ಮರೀಚಿಕೆಯಾಗುತ್ತದಷ್ಟೇ.ರಾಜ್ಯ ಸರ್ಕಾರ ಕೂಡ 371 (ಜೆ) ಕಲಂ ನಿಯಮಾವಳಿ ಸಂಬಂಧ ಸಂಪುಟ ಉಪ ಸಮಿತಿ ನೀಡಿದ ವರದಿಯನ್ನು ಒಪ್ಪಿದೆ. ಇದರಿಂದ ಈ ಭಾಗದ ಜನರ ಕನಸುಗಳು ಗರಿಗೆದರಿವೆ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕೂಡ ದೊರೆಯಲಿದೆ. ಇದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ.

ಈಗಲೂ ಸರ್ಕಾರದ ಆದ್ಯತೆ ಶಿಕ್ಷಣ, ಆರೋಗ್ಯ, ರಸ್ತೆ, ಸಾರಿಗೆ, ವಸತಿ, ಕುಡಿಯುವ ನೀರು ಪೂರೈಕೆ ಮೊದಲಾದ ಮೂಲ ಸೌಕರ್ಯವೇ ಆಗಬೇಕು. ಪಟ್ಟಣ-ನಗರ ಪ್ರದೇಶದ ಜನತೆಗೂ ನದಿ ಮೂಲದ ನೀರು ಒದಗಿಸಲು ಮುಂದಾಗಬೇಕು. ಈ ಎಲ್ಲ ಕಾರ್ಯಗಳಾದರಷ್ಟೇ ಈ ಭಾಗದ ಏಳಿಗೆ ಸಾಧ್ಯ.

ನಿಮ್ಮ ಅನಿಸಿಕೆ ತಿಳಿಸಿ:   editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.