ಸೊಣ್ಣಕ್ಕನಿಗೆ ತನ್ನ ರೂಪದ ಬಗ್ಗೆ ತಾತ್ಸಾರ. ತಾನು ಜೆರಾಫೆ ಆಗಿದ್ದೇ ತಪ್ಪೇ? ದೇವರು ಇಷ್ಟು ಅನ್ಯಾಯ ಮಾಡಬಾರದಿತ್ತು. ಒಂದು ಸ್ವಲ್ಪವಾದರೂ ಸೌಂದರ್ಯ ಕೊಡಬಾರದಿತ್ತೇ? ಆಕೆ ಸರೋವರದ ದಂಡೆಯಲ್ಲಿ ನಿಂತು ತನ್ನ ಪ್ರತಿಬಿಂಬ ನೋಡಿಕೊಂಡಾಗ ಅಸಹ್ಯವೆನಿಸುತ್ತಿತ್ತು.

ಅದೇನು ಅಷ್ಟುದ್ದದ ಕಾಲುಗಳು! ತನ್ನ ಕತ್ತು ಉದ್ದವೋ ಉದ್ದ. ಅದರ ಮೇಲೆ ಪುಟ್ಟ ಮೀನು ಅಂಟಿಸಿದಂತೆ ಉದ್ದ ಚೂಪಾದ ಮುಖ. ತಲೆಯ ಮೇಲೆ ಎರಡು ಉಪಯೋಗವಿಲ್ಲದ ಚಿಕ್ಕ ಕೊಂಬುಗಳು. ಅವುಗಳಿಂದ ಏನು ಪ್ರಯೋಜನ? ಹೀಗೆ ಗೊಣಗುತ್ತಿದ್ದಾಗ ಅವಳಮ್ಮ ಬಂದು ಬುದ್ಧಿ ಹೇಳಿದಳು, ‘ಸೊಣ್ಣಕ್ಕ ಎಷ್ಟು ಬಾರಿ ಗೊಣಗುತ್ತೀ? ನಾವು ಜಿರಾಫೆಗಳು ಕಣಮ್ಮ. ನಮ್ಮ ರೂಪ ಹೀಗೆಯೇ ಇರಬೇಕು. ನಾವು ಬೇರೆಯವರಂತೆ ಇಲ್ಲ ಎಂದು ದುಃಖ ಪಡುವುದಕ್ಕಿಂತ ನಮ್ಮ ಹಾಗೆ ಯಾರೂ ಇಲ್ಲ ಎಂದು ಸಂತೋಷಪಡಬಾರದೇ?

ನಾವು ಚಿರತೆಯ ಹಾಗೆ ಓಡಲಾರೆವು, ಮಂಗಗಳ ಹಾಗೆ ಮರ ಏರಲಾರೆವು ಮತ್ತು ಆನೆಗಳ ಹಾಗೆ ನೀರಲ್ಲಿ ಆಟವಾಡಲಾರೆವು. ಆದರೆ, ನಾವು ನಾವೇ. ನಾವು ಮಾಡಬಹುದಾದದ್ದನ್ನು ಬೇರೆ ಯಾರೂ ಮಾಡಲಾರರು’. ಸೊಣ್ಣಕ್ಕನಿಗೆ ಸಮಾಧಾನವಾಗಲಿಲ್ಲ. ‘ನೀನು ಯಾವಾಗಲೂ ಹೀಗೆಯೇ ಏನೋ ಸಮಜಾಯಿಸಿ ಹೇಳಿ ಸುಮ್ಮನಾಗಿಸುತ್ತೀ’ ಎಂದು ಗೊಣಗುತ್ತ ಹೊರನಡೆದಳು. ಕಾಡಿನಲ್ಲಿ ಭಾರಿ ಬಿಸಿಲು. ನೀರು ಹುಡುಕಿಕೊಂಡು ಸರೋವರದ ಬಳಿಗೆ ನಡೆದಳು ಸೊಣ್ಣಕ್ಕ.

ಸರೋವರದ ಹತ್ತಿರ ಬಂದಾಗ ಹೆಣ್ಣು ಸಿಂಹವೊಂದು ಅಬ್ಬರಿಸಿಕೊಂಡು ಬಂದಿತು. ತನ್ನ ಮೇಲೆ ಸಿಂಹಿಣಿ ಹಾರಿಯೇ ಬಿಡುತ್ತದೆಂದು ಗಾಬರಿಯಾಗಿ ಸೊಣ್ಣಕ್ಕ ಓಡತೊಡಗಿದಳು. ಆಗ ಸಿಂಹಿಣಿ ಕೂಗಿತು, ‘ಓಡಬೇಡ, ನಿಂತುಕೋ. ನಿನ್ನ ಬೇಟೆಯಾಡಲು ನಾನು ಬಂದಿಲ್ಲ. ಇದೇ ತಾನೆ ಆನೆಯೊಂದು ನನ್ನ ಮರಿಯನ್ನು ಎತ್ತಿ ಮರದ ಮೇಲೆ ಬಿಸಾಕಿದೆ. ಅದು ಕೊಂಬೆಯ ತುದಿಗೆ ಸಿಕ್ಕಿಹಾಕಿಕೊಂಡಿದೆ. ದಯವಿಟ್ಟು ಅದನ್ನು ಪಾರುಮಾಡು’.

ಸೊಣ್ಣಕ್ಕ ಮರದ ಹತ್ತಿರ ಹೋಗಿ ತನ್ನ ನೀಳವಾದ ಕೊರಳನ್ನು ಮತ್ತಷ್ಟು ಚಾಚಿ ಕೊಂಬೆಯ ತುದಿಗಿದ್ದ ಸಿಂಹದ ಮರಿಯನ್ನು ನಿಧಾನವಾಗಿ ಬೆಕ್ಕು ಮರಿಯನ್ನು ಹಿಡಿಯುವಂತೆ ಹಿಡಿದು ನೆಲಕ್ಕಿಳಿಸಿತು. ಮರಿ ಕುಣಿಯುತ್ತ ತಾಯಿಯ ಬಳಿಗೆ ಹೋಯಿತು. ಸಿಂಹಿಣಿ ಕೃತಜ್ಞತೆಯಿಂದ, ‘ಸೊಣ್ಣಕ್ಕ, ಏನಮ್ಮ ನಿನ್ನ ಶಕ್ತಿ? ನನ್ನ ಮಗುವನ್ನು ಬದುಕಿಸಿಬಿಟ್ಟೆ. ಯಾವ ಪ್ರಾಣಿಯಿಂದಲೂ ಇದು ಸಾಧ್ಯವಿರಲಿಲ್ಲ. ಇನ್ನು ಮೇಲೆ ನಿನಗೆ ಯಾವ ಪ್ರಾಣಿಯಿಂದಲೂ ಭಯಬಾರದು. ನಾನು, ನನ್ನ ಪರಿವಾರವೆಲ್ಲ ನಿನ್ನ ರಕ್ಷಣೆಗೆ ನಿಲ್ಲುತ್ತೇವೆ’ ಎಂದಿತು. ಸೊಣ್ಣಕ್ಕ ಅಭಿಮಾನದಿಂದ ಬೀಗಿದಳು.

ಸ್ವಲ್ಪ ಮುಂದೆ ಹೋದಾಗ ಕೋತಿಯೊಂದು ಓಡಿಬಂದು ಮೇಲುಸಿರುಬಿಡುತ್ತಾ, ‘ಸೊಣ್ಣಕ್ಕ ಬೇಗ ಬಾ. ನನ್ನ ಮರಿ ಮರದ ಬೇರು ಹಿಡಿದು ಜಾರುತ್ತ ಕೆಳಗೆ ಹೋಗಿದೆ. ಅದು ಬಹಳ ಹೊತ್ತು ಹಿಡಿದುಕೊಳ್ಳಲಾರದು. ಕೈಬಿಟ್ಟರೆ ಪ್ರಪಾತದಲ್ಲೇ ಬೀಳುತ್ತದೆ. ಅದನ್ನು ಯಾರೂ ನಿಲುಕಲು ಸಾಧ್ಯವಿಲ್ಲ. ನೀನೇ ಸಹಾಯ ಮಾಡಬೇಕು’ ಎಂದು ಗೋಗರೆಯಿತು. ಸೊಣ್ಣಕ್ಕ ಕುಣಿಯುತ್ತ ಓಡಿದಳು. ಪ್ರಪಾತದ ತುದಿಯಲ್ಲಿ ಗಟ್ಟಿಯಾಗಿ ಕಾಲೂರಿ ಕುಳಿತಳು.

ತನ್ನ ಉದ್ದವಾದ ಕತ್ತನ್ನು ಆದಷ್ಟು ಮುಂದಕ್ಕೆ ಚಾಚಿ ಕೆಳಗೆ ಜಾರುತ್ತಿದ್ದ ಕೋತಿಯ ಮರಿಯ ಕಾಲನ್ನು ಬಾಯಿಯಲ್ಲಿ ಹಿಡಿದು ನಿಧಾನವಾಗಿ ಮೇಲಕ್ಕೆತ್ತಿ ತಂದು ಇಳಿಸಿದಳು. ಕೋತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಜಿರಾಫೆಯಂಥ ಪ್ರಾಣಿ ಜಗತ್ತಿನಲ್ಲೇ ಇಲ್ಲ. ಮತ್ತಾವ ಪ್ರಾಣಿಯಿಂದಲೂ ಸಾಧಿಸಲಾಗದ್ದು ನಿನ್ನಿಂದಾಯಿತು. ಭಗವಂತ ಎಷ್ಟು ಪ್ರೀತಿಯಿಂದ, ಚಿಂತನೆಯಿಂದ ನಿಮ್ಮನ್ನು ನಿರ್ಮಿಸಿದ್ದಾನಲ್ಲವೇ? ಎಂದಿತು ಕೋತಿ.

ಜಿರಾಫೆ ಸೊಣ್ಣಕ್ಕನಿಗೆ ಮೊಟ್ಟಮೊದಲನೇ ಬಾರಿಗೆ ತನ್ನ ರೂಪದ ಮೇಲೆ ಶಕ್ತಿಯ ಬಗ್ಗೆ ಅಭಿಮಾನ ಉಕ್ಕಿ ಬಂತು. ನಮ್ಮಲ್ಲಿಯೂ ಅನೇಕರಿಗೆ ತಾವು ಅವರಂತಾಗಬೇಕು, ಇವರಂತೆ ಕಾಣಬೇಕು, ಮತ್ತೊಬ್ಬರಂತೆ ಬದುಕಬೇಕು ಎಂಬ ಹಂಬಲಗಳಿರುತ್ತವೆ. ಅವೆಲ್ಲ ವ್ಯರ್ಥ ಪ್ರಯತ್ನಗಳು. ನಾವು ಮತ್ತೊಬ್ಬರಂತಾಗುವುದು ಅಸಾಧ್ಯ ಮತ್ತು ಮೂರ್ಖತನ. ನಾವು ನಾವೇ ಆದಾಗ, ನಮ್ಮಲ್ಲಿಯ ಸುಪ್ತ ಶಕ್ತಿ ವಿಶೇಷಗಳನ್ನು ಅರಿತಾಗ, ಬಳಸಿದಾಗ ನಾವು ಕಲ್ಪನೆ ಕೂಡ ಮಾಡಿರದಂತಹ ಕಾರ್ಯಗಳು ನಡೆದುಹೋಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.