ಬುಧವಾರ, ಮೇ 18, 2022
23 °C

ಆಪತ್ಬಾಂಧವರು

ಡಾ. ಆಶಾ ಬೆನಕಪ್ಪ Updated:

ಅಕ್ಷರ ಗಾತ್ರ : | |

ಆಪತ್ಬಾಂಧವರು

ಎಪ್ಪತ್ತರ ದಶಕ. `49, ರಂಗರಾವ್ ರಸ್ತೆ~ಯಲ್ಲಿದ್ದ ನಮ್ಮ `ಅಡ್ಡಾ~ಕ್ಕೆ ನಟ ವಿಷ್ಣುವರ್ಧನ್ ಅವರ ಸಹೋದರ ರವಿಕುಮಾರ್ ಸದಸ್ಯರಾಗಿದ್ದರು. ಆಗ ನಾನಿನ್ನೂ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದೆ. ಆಗಷ್ಟೇ `ನಾಗರಹಾವು~ ಚಿತ್ರದ ಮೂಲಕ ವಿಷ್ಣುವರ್ಧನ್ ಕೀರ್ತಿಯ ಶಿಖರವೇರಿದ್ದರು.ರವಿ ಭಾರತೀಯ ದೂರವಾಣಿ ಕೈಗಾರಿಕೆ (ಐಟಿಐ)ನ ಉದ್ಯೋಗಿಯಾಗಿದ್ದರು. ಸಂತ್ರಸ್ತರಿಗೆ ಪರಿಹಾರ ಒದಗಿಸುವ ಸಂಸ್ಥೆ (ಏಯ್ಡ ದಿ ಏಲಿಂಗ್ ಅಸೋಸಿಯೇಷನ್- ಎಎಎ)ನ ಸದಸ್ಯರೂ ಆಗಿದ್ದರು. ನನ್ನಂತಹ ಯುವ ಸಮೂಹಕ್ಕೆ ಅವರು ಮಾರ್ಗದರ್ಶಕರಂತಿದ್ದರು.ರೋಗಿಗಳಿಗೆ ಮತ್ತು ಬಡವರಿಗೆ ಹಣ್ಣು-ಆಹಾರ ನೀಡುವುದು, ಔಷಧ ವಿತರಿಸುವುದು ಮುಂತಾದ ತಮ್ಮ ಆಸ್ಪತ್ರೆ ಭೇಟಿಯ ಕಥೆಗಳನ್ನವರು ನಮಗೆ ಹೇಳುತ್ತಿದ್ದರು. ಅವರಿಂದ ತುಂಬಾ ಪ್ರಭಾವಿತಳಾಗಿದ್ದ ನಾನು, ಆ ಸಂಸ್ಥೆಯ ಸದಸ್ಯತ್ವ ಕೊಡಿಸುವಂತೆ ಅವರಿಗೆ ದುಂಬಾಲು ಬಿದ್ದಿದ್ದೆ. ಮುಂದೆ ಆ ಸಂಸ್ಥೆಯ ಜೊತೆಗೆ ವೃತ್ತಿಪರ ಸಂಪರ್ಕ ಹೊಂದುತ್ತೇನೆ ಎಂಬ ಕಲ್ಪನೆಯೂ ಆಗ ನನಗಿರಲಿಲ್ಲ.1985ರ ಆಗಸ್ಟ್‌ನಲ್ಲಿ ನಾನು ವಾಣಿ ವಿಲಾಸ ಆಸ್ಪತ್ರೆಗೆ ಸೇರಿಕೊಂಡೆ. ಬಳಿಕ `ಎಎಎ~ನ ಪ್ರಸನ್ನ ವೆಂಕಟೇಶ ಮೂರ್ತಿ, ಸತ್ಯನಾರಾಯಣ ಮತ್ತು ಕೃಷ್ಣಮೂರ್ತಿ ಅವರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದೆ. ದೇವರ ತಲೆಯ ಮೇಲೆ ಹೂವು ಇಡುವುದನ್ನಾದರೂ ಯಾರಾದರೂ ಮರೆಯಬಹುದು, ಆದರೆ ಈ ಮೂವರ ಆಸ್ಪತ್ರೆ ಭೇಟಿ ಮಾತ್ರ ತಪ್ಪುವಂತಿಲ್ಲ. ಪ್ರತಿ ಗುರುವಾರ ಮಧ್ಯಾಹ್ನ (ಐಟಿಐನಲ್ಲಿ ಅರ್ಧ ದಿನ ಕಳೆದು) ಮತ್ತು ಭಾನುವಾರ ಬೆಳಿಗ್ಗೆ ಹಾಜರಾಗುತ್ತಿದ್ದರು.ಬಡ ಮತ್ತು ನಿರ್ಗತಿಕ ರೋಗಿಗಳನ್ನು ಹುಡುಕಿಕೊಂಡು ಹೋಗಿ ನೆರವು ನೀಡುತ್ತಿದ್ದರು. ಒಬ್ಬ ವ್ಯಕ್ತಿಯ ಮಹತ್ವಾಕಾಂಕ್ಷೆಯ ಫಲವಾಗಿ ಜನ್ಮತಳೆದ `ಎಎಎ~ ಈಗ ಸುವರ್ಣ ಮಹೋತ್ಸವ ಆಚರಣೆಯತ್ತ ಸಾಗುತ್ತಿದೆ.1954ರಲ್ಲಿ ಸೂರ್ಯನಾರಾಯಣ ಅವರು ಶಿಕ್ಷಕರಾಗಿದ್ದ ಸರ್ಕಾರಿ ಪ್ರೌಢಶಾಲೆಯಲ್ಲಿ, ಅವರಿಗೆ ಶಿಕ್ಷಕರಾಗಿದ್ದ ರಾಮಚಂದ್ರರಾಯ ಅವರು ಮಕ್ಕಳಿಗೆ ಕೆಳಗಿನಂತೆ ಬೋಧಿಸುತ್ತಿದ್ದರಂತೆ:“ಮಾನವ ಸಮಾಜಜೀವಿ. ಇದರರ್ಥ, ಆತ ತನ್ನನ್ನು ತಾನು ಕುಟುಂಬಕ್ಕೆ ಮುಡಿಪಾಗಿಟ್ಟುಕೊಳ್ಳಬೇಕು ಎಂದಲ್ಲ. ಆತ ಬೇರೆಯವರಿಗೆ ಸಹಾಯ ಮಾಡಬೇಕು. ಪ್ರಾಣಿಗಳೂ ಸಹ ಮಾನವನಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತವೆ. ನೆರವು ನೀಡುವ ಪ್ರಕ್ರಿಯೆ ನಿಮ್ಮನ್ನು ಸಂತೃಪ್ತಿ ಸಂತೋಷದೆಡೆಗೆ ಕರೆದೊಯ್ಯುತ್ತದೆ. ವೈಯಕ್ತಿಕ ಬದುಕಿನಲ್ಲಿ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರಲೂ ಸಹಕಾರಿಯಾಗುತ್ತದೆ.ಮನುಷ್ಯಕುಲಕ್ಕೆ ಸ್ವಾರ್ಥ ರಹಿತ ಸೇವೆ ಸಲ್ಲಿಸುವುದರಿಂದ ಯಶಸ್ಸನ್ನು ಸಾಧಿಸುವಿರಿ.” ಅವರು ಹಿತವಚನ ನೀಡುವುದಷ್ಟೇ ಅಲ್ಲ, ರೋಗಿಗಳಿಗೆ ಮತ್ತು ನಿರ್ಗತಿಕರಿಗೆ ಹಣ್ಣುಗಳನ್ನು ವಿತರಿಸಲು ಹಾಗೂ ಅವರ ನೋವುಗಳನ್ನು ಮನವರಿಕೆ ಮಾಡುವ ಸಲುವಾಗಿ ವಿದ್ಯಾರ್ಥಿಗಳನ್ನು ವಾಣಿ ವಿಲಾಸ ಆಸ್ಪತ್ರೆಗೆ ಕರೆದೊಯ್ದು ವಾಸ್ತವ ದರ್ಶನ ಮಾಡಿಸುತ್ತಿದ್ದರು.

 

ಈ ಬೋಧನೆ ಮತ್ತು ಪರಿಪಾಠ ಅವರ ಯುವ ವಿದ್ಯಾರ್ಥಿ ಸೂರ್ಯನಾರಾಯಣರ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ಅವರು ಐಟಿಐನ ಉದ್ಯೋಗಿಯಾಗಿ ಹತ್ತು ವರ್ಷ ಕಳೆದ ಬಳಿಕ ಅಲ್ಲಿನ ಎಲ್ಲಾ ಸಹೋದ್ಯೋಗಿಗಳು ನೀಡಿದ ನಾಣ್ಯಗಳು 1965ರಲ್ಲಿ `ಎಎಎ~ ರೂಪುಗೊಳ್ಳಲು ಕಾರಣವಾದವು.`ಎಎಎ~ ಬೆಳವಣಿಗೆಯ ಹಿಂದಿನ ಶಕ್ತಿಗಳು ಸಿ.ಎಸ್.ಎಸ್. ರಾವ್, ಯು.ವಿ.ನಾಯಕ್, ಎಂ.ಎಸ್.ಜಯಸಿಂಹ ಮತ್ತು ಎ.ಗುರುರಾಜು ಅವರನ್ನು ನೆನಪಿಸಿಕೊಳ್ಳಬೇಕು. ಅದರ 10ನೇ ವಾರ್ಷಿಕೋತ್ಸವದ (1975) ಸಂದರ್ಭದಲ್ಲಿ ಹೊರತಂದ ನೆನಪಿನ ಸಂಚಿಕೆಯಲ್ಲಿ ಆಗ ಶಿಶುವೈದ್ಯ ವಿಭಾಗದ ಮುಖ್ಯಸ್ಥರಾಗಿದ್ದ ಅಪ್ಪಾಜಿ ಬರೆದ ಶ್ಲಾಘನೆಯ ಪತ್ರವಿದೆ.ಮಕ್ಕಳಿಗೆ ಆವರಿಸುವ ಹೆಲ್ಮೆಂಥಿಕ್ ಎಂಬ ಅತಿ ಭಯಂಕರ ಮಾರಿಯನ್ನು ಹೊಡೆದೋಡಿಸಲು ಉಚಿತವಾಗಿ ಒದಗಿಸಿದ್ದ ಔಷಧಗಳು ಹೇಗೆ ಸಹಕಾರಿಯಾಗಿದ್ದವು ಎಂಬುದನ್ನು ಅಪ್ಪಾಜಿ ತಮ್ಮ ಪತ್ರದಲ್ಲಿ ಸ್ಮರಿಸಿಕೊಂಡ್ದ್ದಿದಾರೆ.ಅಂದು ಮತ್ತು ಇಂದಿಗೂ `ಎಎಎ~ಯ ಯಶಸ್ವಿ ಸದಸ್ಯರು ಬದ್ಧತೆ ಮತ್ತು ಸಮರ್ಪಣಾ ಭಾವದಿಂದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ. ಔಷಧಗಳು ತುಟ್ಟಿಯಾಗಿವೆ. ಆದರೆ ಅವರೆಂದಿಗೂ ಅದರ ಬಗ್ಗೆ ದೂರದೇ ನಿಧಿ ಸಂಗ್ರಹಣೆಯನ್ನು ನಿಭಾಯಿಸುತ್ತಿದ್ದಾರೆ.ದೀರ್ಘಕಾಲದ ಕಾಯಿಲೆಗೆ ತುತ್ತಾಗಿ ದಿನ ನಿತ್ಯವೂ ಔಷಧದ ಅಗತ್ಯವಿರುವ ಮಕ್ಕಳನ್ನು ದತ್ತು ತೆಗೆದುಕೊಂಡು, ಆ ಮಕ್ಕಳ ಅವಶ್ಯಕತೆಗಳನ್ನು ಸಂತೋಷದಿಂದಲೇ ಪೂರೈಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ರೋಗಿಗಳ/ಪೋಷಕರ ನೋವು ಮತ್ತು ಸಂಕಟಗಳನ್ನು ಉಪಶಮನಗೊಳಿಸಲು ಅತ್ಯಗತ್ಯವಾದ `ಪುನರ್ ಭರವಸೆಯ ಸ್ಪರ್ಶ~ ನೀಡುತ್ತಿದ್ದಾರೆ.ರೋಗಿಗಳಿಗಾಗಿ ತಮ್ಮ ಮಹತ್ವದ ಸಮಯವನ್ನು ಮೀಸಲಿಡುತ್ತಾರೆ. ಅವರ ಭರವಸೆಗಳು ಮತ್ತು ಆಶ್ವಾಸನೆಗಳು ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತವೆ. ನಮ್ಮಲ್ಲಿ ಎಷ್ಟು ಜನ ತಮ್ಮ ಭಾನುವಾರದ ರಜೆಯನ್ನು ರೋಗಿಗಳು ಮತ್ತು ನಿರ್ಗತಿಕರೊಂದಿಗೆ ಕಳೆಯುತ್ತಾರೆ? ಮತ್ತು ತಮ್ಮ ಅತ್ಯಮೂಲ್ಯ ಸಂಪಾದನೆಯ ಹಣವನ್ನು ಅವರಿಗೆ ದಾನ ಮಾಡುತ್ತಾರೆ?ನಾನು ಇಂದಿಗೂ ಪ್ರಸನ್ನ, ಸತ್ಯನಾರಾಯಣ ಮತ್ತು ಕೃಷ್ಣಮೂರ್ತಿ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ, ಅವರು ದತ್ತು ತೆಗೆದುಕೊಂಡಿರುವ ಮೊಮ್ಮಕ್ಕಳ ಯೋಗಕ್ಷೇಮವನ್ನೂ ನೋಡಿಕೊಳ್ಳುತ್ತಿದ್ದೇನೆ. `ಎಎಎ~ಯ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದ ಪ್ರಸನ್ನ `ಮೀಲ್ಸ್ ಫಾರ್ ಮಿಲಿಯನ್ಸ್ ಅಸೋಸಿಯೇಷನ್~ನಿಂದ ಪೌಷ್ಠಿಕಾಂಶಯುತ ಆಹಾರವನ್ನು ಕೊಳ್ಳಲು ಬೇಕಾಗುವ ವೆಚ್ಚದ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು.ನಾನು ಕೂಡಲೇ ಬಹೂಪಯೋಗಿ ಪೌಷ್ಠಿಕ ಆಹಾರದ ತಯಾರಿಕೆಯ ಬಗ್ಗೆ ಅವರಿಗೆ ಮಾಹಿತಿ ನೀಡುವಂತೆ ಆಹ್ವಾನಿಸಿದೆ. ದಾವಣಗೆರೆ ಮಿಕ್ಸ್‌ನಂತಹ ಮಹತ್ವಾಕಾಂಕ್ಷಿ ಕಾರ್ಯದ ಹಿಂದಿನ ರೂವಾರಿ ಪ್ರೊ. ನಿರ್ಮಲಾ ಕೇಸರಿ ಅವರ ವಿದ್ಯಾರ್ಥಿಯಾಗಿ ಇಂಥದ್ದೊಂದು ಕಾರ್ಯಕ್ಕೆ ತೊಡಗಿಕೊಳ್ಳದಿದ್ದರೆ ಹೇಗೆ...ಬಹೂಪಯೋಗಿ ಪೌಷ್ಠಿಕ ಆಹಾರ ಹುಟ್ಟಿಕೊಂಡದ್ದು ಹೀಗೆ. ಪ್ರಸನ್ನ ಅವರ ಪತ್ನಿ ಮತ್ತು ತಂಗಿಯ ಕುಟುಂಬದ ಸದಸ್ಯರು ಆಹಾರ ತಯಾರಿಕೆ ಮತ್ತು ಪ್ಯಾಕ್ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅದೀಗ ಐಟಿಐ ಕ್ಯಾಂಟೀನ್ ಹೊರಭಾಗದಲ್ಲಿನ `ಶಕ್ತಿ ಪ್ರೊಡಕ್ಟ್ಸ್~ನಲ್ಲಿ ತಯಾರಾಗುತ್ತಿದೆ. ಅದರ ಉದ್ಯೋಗಿಗಳೆಂದರೆ ನಿರ್ಗತಿಕರು ಮತ್ತು ವಿಧವೆಯರು. ತಮ್ಮ 66ನೇ ವಯಸ್ಸಿನಲ್ಲೂ ಪ್ರಸನ್ನ ಆಹಾರ ಉತ್ಪನ್ನದಲ್ಲಿ ಬಳಸುವ ಅಂಶಗಳ ಬಗ್ಗೆ ಪರಿಶೀಲನೆ ನಡೆಸುತ್ತಾರೆ.ಹೆಚ್ಚು ಹೆಚ್ಚು ಹೊಣೆ ಹೊತ್ತಂತೆಲ್ಲ ಪ್ರಸನ್ನ ಅವರ ಉತ್ಸಾಹ ಹೆಚ್ಚುತ್ತಲೇ ಇದೆ. ಒಂದು ಯೋಜನೆಯೊಂದನ್ನು ನಾನಿಲ್ಲಿ ಹೇಳುತ್ತಿದ್ದೇನೆ- ಮನೆಯಲ್ಲಿ ಸುಮ್ಮನೆ ಕುಳಿತುಕೊಂಡಿದ್ದ ಅಂಗವಿಕಲ ಮಕ್ಕಳನ್ನು ಗುರುತಿಸುವ ಸಲುವಾಗಿ ಸದಸ್ಯರೆಲ್ಲರೂ ಉತ್ತರಹಳ್ಳಿಯಲ್ಲಿ ಮನೆಯಿಂದ ಮನೆಗೆ ತೆರಳುವ ಕಾರ್ಯಕ್ರಮ ಹಮ್ಮಿಕೊಂಡರು. ಇಲ್ಲಿ ಸಿಕ್ಕವರ ಸಂಖ್ಯೆ ಅಪಾರ. ಆದರೆ ಚಿಕಿತ್ಸೆಗಾಗಿ ಅವರನ್ನು ಕರೆದೊಯ್ಯುವುದು ತುಂಬಾ ಕಷ್ಟವಾಗಿತ್ತು.ಹೀಗಾಗಿ ಅವರ ನೇತೃತ್ವದಲ್ಲಿ `ಬನಶಂಕರಿ ಅಂಗವಿಕಲರ ಸಂಘ~ ಜನ್ಮತಾಳಿತು. ಬಿಎನ್‌ಎಂ ಕಾಲೇಜು ಆವರಣದಲ್ಲಿ ಪ್ರತಿ ಭಾನುವಾರ ಶಿಬಿರಗಳು ಆರಂಭವಾದವು. ಕಾಲೇಜಿನ ಪ್ರಾಂಶುಪಾಲರಾಗಿದ್ದ ಸುನಂದಾ ಜಾಧವ್ ಶಿಬಿರ ನಡೆಸಲು ಅನುಮತಿ ಕೊಟ್ಟರು. ಭೌತ ಚಿಕಿತ್ಸಕ ರಘುನಾಥ ರಾವ್ ಈ ಸಾಹಸಕ್ಕೆ ಕೈ ಜೋಡಿಸಿದರು. ತನ್ನ ತಂದೆಯ ಹೆಗಲ ಮೇಲೆ ಕುಳಿತುಕೊಂಡು ಶಿಬಿರಕ್ಕೆ ಬಂದಿದ್ದ ಹುಡುಗ ಆರೇ ತಿಂಗಳಲ್ಲಿ ಸ್ವತಂತ್ರವಾಗಿ ನಡೆದಾಡುವಂತಾದ.ಪ್ರಸನ್ನ ಆತನಿಗೆ ಕಿಯೊಸ್ಕೊದಲ್ಲಿ ದೂರವಾಣಿ ನಿರ್ವಾಹಕನ ಉದ್ಯೋಗವನ್ನೂ ಕೊಡಿಸಿದರು. ಈ ಶಿಬಿರಗಳಲ್ಲಿ ಜನ ಅಪಾರ ಪ್ರಮಾಣದಲ್ಲಿ ಸೇರುತ್ತಿದ್ದರು. ಪ್ರಸನ್ನ ಅವರ ಕುಟುಂಬದ ಸದಸ್ಯರು, ಸಂಬಂಧಿಗಳಾದ ಬದರಿನಾಥ್, ನಳಿನಿ ಮತ್ತು ಚಂದ್ರಿಕಾ ಜನರ ಗುಂಪಿನ ನಿರ್ವಹಣೆ, ದಾಖಲೆ ಪತ್ರಗಳ ನಿರ್ವಹಣೆ ಮತ್ತು ಹಣ್ಣು ಹಂಪಲು ಹಂಚಿಕೆಯ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದರು.ನಾನು, ಇಂದಿಗೂ ಈ ಕುಟುಂಬದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇನೆ. `ಸಮಾಜ ಸೇವೆ~ ಎಂಬ ಬೀಜವನ್ನು ಬದುಕಿನಲ್ಲಿ ಬಹುಬೇಗ ಬಿತ್ತಿದಂತೆ ವರ್ಷಗಳು ಉರುಳಿದರೂ ಅವರು ಬದಲಾಗಿಲ್ಲ. ವಾರ್ಡ್‌ಗಳಲ್ಲಿನ ಕೆಟ್ಟ ಸುಟ್ಟ ವಾಸನೆಯನ್ನು ಸಹಿಸಿಕೊಳ್ಳಬಲ್ಲ ಮತ್ತು ಆ ರೋಗಿಗಳಿಗೆ ಔಷಧ ಹಾಗೂ ಹಣ್ಣುಗಳನ್ನು ನೀಡುವ ವ್ಯಕ್ತಿಯೆಂದರೆ ಪ್ರಸನ್ನ ಮಾತ್ರ.

ಒಂದು ದಿನ ಪ್ರಸನ್ನ ಈ ಅಂಗವಿಕಲರಲ್ಲಿ ಕೆಲವರನ್ನು ಲಾಲ್‌ಬಾಗ್ ಪ್ರವಾಸಕ್ಕಾಗಿ ಕರೆದೊಯ್ಯಲು ನಿರ್ಧರಿಸಿದರು.ದೈಹಿಕ ಸಮಸ್ಯೆಯುಳ್ಳ ಸುಮಾರು 20 ರೋಗಿಗಳನ್ನು ಮೆಟಾಡರ್ ವಾಹನದಲ್ಲಿ ಕರೆದೊಯ್ಯಲಾಯಿತು. ಅವರ ವೀಲ್‌ಚೇರ್, ಕ್ಯಾಲಿಪರ್‌ಗಳು (ಕಾಲಿಗೆ ಜೋಡಿಸುವ ಲೋಹದ ಉಪಕರಣ) ಮತ್ತು ಇತರೆ ಉಪಕರಣಗಳನ್ನು ಹೇಗೆ ಗುಡ್ಡೆ ಹಾಕಿದ್ದರೆಂಬುದನ್ನು ನಾನು ಮರೆಯಲು ಸಾಧ್ಯವಿಲ್ಲ. ಅವರ ಊಟದ ತಯಾರಿಕೆಯಲ್ಲಿ ನಾವೆಲ್ಲರೂ ಕೈ ಜೋಡಿಸಿದ್ದೆವು.ನಮ್ಮಲ್ಲಿ ಹೆಚ್ಚಿನ ಹಣ ಇಲ್ಲದಿದ್ದರೂ ಆ ದಿನವನ್ನು ನಗುನಗುತ್ತಾ ಕಳೆದೆವು. ಈ ಶಿಬಿರದಲ್ಲಿ ನಾನು ಮಾಲತಿ ಹೊಳ್ಳ (ಪ್ಯಾರಾ ಒಲಿಂಪಿಕ್ ಖ್ಯಾತಿ), ರಮಾ ವಾಸುದೇವನ್ (ಮರದ ಕಾರ್ಟೂನ್ ಕಟೌಟ್‌ಗಳನ್ನು ಮಾಡುತ್ತಿದ್ದರು), ಇಂಗ್ಲಿಷ್ ಕಾಲುವೆಯನ್ನು ದಾಟಿದ ಜಾಹ್ನವಿ, ಸದಾ ತನ್ನ ತಾಯಿಯ ಸಂಗಡವೇ ಇರುವ ಸಾರ್ವಜನಿಕ ವಲಯದ ಉದ್ಯೋಗಿ ಹೇಮಲತಾ (ಹತ್ತು ವರ್ಷದ ಬಳಿಕ ತಾಯಿಯ ಮರಣದ ನಂತರ ಆಕೆಯನ್ನು ನೋಡಿಕೊಳ್ಳುವವರಿಲ್ಲದೆ ಅವರು ಆತ್ಮಹತ್ಯೆ ಮಾಡಿಕೊಂಡರು. ಆಗ ಆತ್ಮಹತ್ಯೆ ತುಂಬಾ ಅಪರೂಪದ ಸಂಗತಿಯಾಗಿತ್ತು) ಅವರನ್ನೆಲ್ಲಾ ಭೇಟಿ ಮಾಡಿದೆ.ಗ್ಯಾಸ್ಟ್ರೋಯೆಂಟೆರಿಟಿಸ್ (ಉದರ ಜ್ವರ) ಸಮಸ್ಯೆಯಿಂದ ನರಳುತ್ತಿದ್ದ ಟೀ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ 10 ವರ್ಷದ ಅನಾಥ ಬಾಲಕನನ್ನು ನಾವೆಲ್ಲರೂ ಒಂದಾಗಿ ಸೇರಿಕೊಂಡು ಹೇಗೆ ಉಳಿಸಿದೆವು ಎಂಬುದನ್ನು ಕೃಷ್ಣಮೂರ್ತಿ ನೆನಪಿಸಿಕೊಳ್ಳುತ್ತಾರೆ. ಆಗಿನ ಕಾಲದಲ್ಲಿ ದೊಡ್ಡ ಮೊತ್ತವಾದ 800 ರೂಪಾಯಿ ಆತನ ಚಿಕಿತ್ಸೆಗೆ ತಗುಲಿತ್ತು.ಹಸಿವು ತಾಳಲಾರದೆ ಎರಡು ಚಪಾತಿ ಕದ್ದ ಬಾಲಕನ ಮೇಲೆ ಕುದಿಯುವ ನೀರು ಸುರಿದ ಪ್ರಕರಣವನ್ನು ಸತ್ಯನಾರಾಯಣ ನೆನಪಿಗೆ ತಂದುಕೊಂಡರು. ಘಟನೆಯಲ್ಲಿ ಮೈ ತುಂಬಾ ಸುಟ್ಟ ಗಾಯವಾಗಿ ನರಳುತ್ತಿದ್ದ ಮಂಜುನಾಥನ ಪರವಾಗಿ ಯಾವುದೇ ಸೂಕ್ತ ಆಧಾರಗಳಿಲ್ಲದೆಯೂ ವರ್ಷಗಟ್ಟಲೆ `ಎಎಎ~ ಹೋರಾಟ ನಡೆಸಿತು.ಇಂದು ಈ ವಿಶಿಷ್ಟ ಸಂಸ್ಥೆಯ ನೇತೃತ್ವವನ್ನು ಐಟಿಐನ ನಿವೃತ್ತ ಮಹಾನಿರ್ದೇಶಕ ಚಂದ್ರಕುಮಾರ್ ವಹಿಸಿಕೊಂಡಿದ್ದಾರೆ. ವಿಶ್ವ ಮೂತ್ರಪಿಂಡ ದಿನದ (07-03-2012) ಸಂದರ್ಭದಲ್ಲಿ ಶಿಶುವೈದ್ಯ ವಿಭಾಗದ ಪರವಾಗಿ ನಾವು ಈ `ಯುವ~ ಸದಸ್ಯರನ್ನು (ಎಲ್ಲರೂ 65 ವರ್ಷ ಮೇಲ್ಪಟ್ಟವರು) ಅಭಿನಂದಿಸಿದ್ದೆವು. ಅವರು ತಾವು ಸಲ್ಲಿಸಿದ ಸೇವೆಯಿಂದ ಸಂತೃಪ್ತರಾಗಿದ್ದಂತೆ ಕಾಣಿಸಿತು.ಮೂತ್ರಪಿಂಡ ವಾರ್ಡ್‌ಗೆ ಅತ್ಯಗತ್ಯವಾಗಿದ್ದ ಎಲ್‌ಸಿಡಿ ಟಿವಿಯೊಂದನ್ನು ಅವರು ಕೊಡುಗೆಯಾಗಿ ನೀಡಿದರು. ಆಸ್ಪತ್ರೆಯ ಈ ವಿಭಾಗದಲ್ಲಿ ತಿಂಗಳುಗಟ್ಟಲೆ ಇರಬೇಕಾಗುತ್ತಿದ್ದ ಮಕ್ಕಳಿಗೆ ಹೊತ್ತು ಸಾಗಿಸಲು ಬೇರೆ ಸಾಧನಗಳಿಲ್ಲದೆ ಬೇಸರ ಹುಟ್ಟಿಸುತ್ತಿತ್ತು. ಕೆಲವರು ನಿರುತ್ಸಾಹಿಗಳಾಗುತ್ತಿದ್ದರು. ಅದಲ್ಲದೆ ಟಾಟಾ ಸ್ಕೈ ಡಿಟಿಎಚ್‌ನ ಸಂಪರ್ಕವನ್ನೂ ಅವರಿಗೆ ಕಲ್ಪಿಸಲಾಗಿದೆ.`ಎಎಎ~ನ ಖಾತೆ ಇರುವ ಬ್ಯಾಂಕ್‌ನಲ್ಲಿ, ಅಲ್ಲಿನ ಸಿಬ್ಬಂದಿಯೊಬ್ಬಾಕೆ ತನ್ನ ಉಳಿತಾಯದ 90 ಸಾವಿರ ರೂಪಾಯಿಗಳನ್ನು `ಎಎಎ~ ಖಾತೆಗೆ ವರ್ಗಾವಣೆ ಮಾಡಿದ್ದನ್ನು ನೆನಪಿಸಿಕೊಳ್ಳುವಾಗ ಚಂದ್ರಕುಮಾರ್ ಭಾವುಕರಾಗುತ್ತಾರೆ. ಇದು ತುಂಬಾ ಅಪರೂಪದ ವರ್ತನೆ ಎನ್ನುತ್ತಾರೆ. ಅಂದಹಾಗೆ, `ಎಎಎ~ ಸದಸ್ಯರಿಗೆ ವಯಸ್ಸಾಗುತ್ತಿದ್ದು ಬದ್ಧತೆಯುಳ್ಳ ಮತ್ತು ಉತ್ಸಾಹಿ ಯುವ ಜನತೆ ಇದಕ್ಕೆ ಸದಸ್ಯರಾಗುವ ಅವಶ್ಯಕತೆಯಿದೆ.ಸಹಾಯದ ಅಗತ್ಯವಿದ್ದರೆ ಚಂದ್ರಕುಮಾರ್ ಮತ್ತವರ ತಂಡಕ್ಕೆ ಒಂದು ಕರೆ ಮಾಡಿದರೆ ಸಾಕು, ತಮ್ಮ ಮುಂದೆ ಕಡತಗಳ ರಾಶಿ ಇರುವ ಸಂದರ್ಭಗಳನ್ನು ಹೊರತುಪಡಿಸಿ ಅರೆಕ್ಷಣದಲ್ಲಿ ಪ್ರತ್ಯಕ್ಷರಾಗಿ `ತಥಾಸ್ತು~ ಎನ್ನುತ್ತಾರೆ.ಈ ಲೇಖನವನ್ನು ಬರೆಯುವ ವೇಳೆಯು ನನ್ನನ್ನು 20 ವರ್ಷದ ಹಿಂದಿನ ನೆನಪುಗಳತ್ತ ಕರೆದೊಯ್ದಿತು. ನನ್ನ ಸ್ನೇಹಿತರನ್ನು, ಪ್ರಸನ್ನ, ಸತ್ಯನಾರಾಯಣ ಮತ್ತು ಕೃಷ್ಣಮೂರ್ತಿಯವರನ್ನು ಭೇಟಿ ಮಾಡಿದ್ದು, ಅವರು ತಮ್ಮ ಅನುಭವ ಮತ್ತು ಜೀವನ ವೃತ್ತಾಂತವನ್ನು ಉತ್ಸಾಹದಿಂದ ಹಂಚಿಕೊಂಡಿದ್ದು ಎಲ್ಲವೂ ಇನ್ನೂ ಹಚ್ಚ ಹಸಿರಾಗಿದೆ. ಅವರೆಲ್ಲರಿಗೂ ಈಗ 65ಕ್ಕೂ ಹೆಚ್ಚು ವಯಸ್ಸಾಗಿದೆ. ಅವರು ದೀರ್ಘಕಾಲ ಸಂತೋಷದಿಂದ ಆರೋಗ್ಯವಂತರಾಗಿ ಬಾಳಲಿ ಎಂಬುದು ನನ್ನ ಹಾರೈಕೆ.ನೆನಪಿಡಿ, ಅವರ ಈ ಎಲ್ಲಾ ಸೇವೆ ಮತ್ತು ಕಾಣಿಕೆಗಳು ತಮಗೋಸ್ಕರ, ತಮ್ಮ ಕುಟುಂಬ ಅಥವಾ ಐಟಿಐ ಉದ್ಯೋಗಿಗಳಿಗಾಗಿ ಮಾಡಿದ್ದಲ್ಲ, ಅದರ ಹಿಂದಿರುವ ಜನರಿಗಾಗಿ. ನಮ್ಮಲ್ಲಿ ಎಷ್ಟು ಜನ ಧನ ಸಹಾಯದೊಂದಿಗೆ ಅವರ ಈ ಮಹತ್ಕಾರ್ಯದ ಭಾಗವಾಗುತ್ತಾರೆ? ದಾನಿಗಳು ನೀಡುವ ಪ್ರತಿ ನಾಣ್ಯವನ್ನೂ ಇಲ್ಲಿ ಲೆಕ್ಕ ಹಾಕುತ್ತಾರೆ! ಈ ಕಾರ್ಯದಲ್ಲಿ ಕೈ ಜೋಡಿಸಲು ಸಿದ್ಧರಿರುವವರು ಚಂದ್ರಕುಮಾರ್ ಅವರನ್ನು 99806 94849 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.`ಎಎಎ~ ಹಿನ್ನೆಲೆಯಲ್ಲಿ, ಪೋಲಿಯೊ ನಿರ್ಮೂಲನೆಗಾಗಿ 1938ರಲ್ಲಿ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಪ್ರಾರಂಭಿಸಿದ `ಮಾರ್ಚ್ ಆಫ್ ಡೈಮ್ಸ~ (ಡೈಮ್- ಡಾಲರ್‌ನ ಹತ್ತನೇ ಒಂದು ಭಾಗದ ನಾಣ್ಯ. ಒಂದು ಡೈಮ್ ಒಂದು ರೂಪಾಯಿ ನಾಣ್ಯಕ್ಕೆ ಸಮ) ನನಗೆ ನೆನಪಾಗುತ್ತಿದೆ. ಫ್ರಾಂಕ್ಲಿನ್ ತನ್ನ ಕಾರ್ಯದ ಸ್ಮರಣಾರ್ಥವಾಗಿ ಅಮೆರಿಕದ ಡೈಮ್‌ನಲ್ಲಿ 1946ರಲ್ಲಿ ಸ್ಥಾನ ಪಡೆದರು.ಇಂದು ಈ ಸಂಸ್ಥೆ ಜಾಗತಿಕವಾಗಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಅವರ ಈಗಿನ ಗುರಿ ಹುಟ್ಟುವಾಗಲೇ / ಹುಟ್ಟಿದ ಬಳಿಕ ದೈಹಿಕ ನ್ಯೂನತೆಗೆ ಒಳಗಾದವರಿಗೆ ನೆರವಾಗುವುದು. ಅವರ ನೆರವಿನ ಹಸ್ತ ಭಾರತಕ್ಕೂ ಚಾಚಿದೆ.ಒಂದೊಂದು ನಾಣ್ಯವನ್ನೂ ನೆರವಾಗಿ ನೀಡಿದ ಐಟಿಐನ ಉದ್ಯೋಗಿಗಳು ಮತ್ತು ಅಲ್ಲಿನ ಪ್ರತಿಯೊಬ್ಬ ಕೆಲಸಗಾರನಿಗೂ ನಾನು ವಂದಿಸುತ್ತೇನೆ. ಈ ಸಹಾಯ ಹಸ್ತಗಳು ಸಾಯುವ ದಿನಗಳನ್ನು ಎಣಿಸುತ್ತಿದ್ದ ಅನೇಕ ರೋಗಿಗಳನ್ನು ಬದುಕಿಸಿವೆ. ಅವರ ಆಪ್ಯಾಯಮಾನವಾದ ಸ್ಪರ್ಶ ನೋವು ಮತ್ತು ದುಃಖಗಳನ್ನು ನಿವಾರಿಸಿವೆ. ಅವರು ಪೂರೈಸಿದ ಪೌಷ್ಠಿಕ ಆಹಾರ ಮಕ್ಕಳ ಮತ್ತು ಅವರ ಆರೈಕೆ ಮಾಡುತ್ತಿರುವವರ ಹಸಿವಿನ ಯಾತನೆಯನ್ನು ಕೊಂಚವಾದರೂ ನಿವಾರಿಸಿದೆ.

 

ashabenakappa@yahoo.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.