ಶನಿವಾರ, ಮೇ 21, 2022
25 °C

ಇಬ್ಬರೂ ಸೇರಿದರೆ ಏನಂತೆ, ಪ್ರಳಯವಾಗುತ್ತಾ?

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

ಇಬ್ಬರೂ ಸೇರಿದರೆ ಏನಂತೆ, ಪ್ರಳಯವಾಗುತ್ತಾ?ಚಿತ್ರರಂಗದಲ್ಲಿ ಬಿರುಗಾಳಿ ಬೀಸಲಿಲ್ಲ. ಗಾಂಧೀನಗರ ಅಲ್ಲೋಲಕಲ್ಲೋಲ ಆಗಲಿಲ್ಲ. ನಿರ್ಮಾಪಕರು ಸೆಟೆದೆದ್ದು ಕುಳಿತುಕೊಳ್ಳಲಿಲ್ಲ. ಆಕಾಶದಲ್ಲಿ ಗುಡುಗುಮಿಂಚುಗಳು ಆರ್ಭಟಿಸಿ ಸ್ವಾಗತದ ಹೂಮಳೆಗರೆಯಲಿಲ್ಲ.ಕಳೆದ 25 ವರ್ಷಗಳಿಂದ ದೂರವಾಗಿದ್ದ ನಟ, ನಿರ್ದೇಶಕ ರವಿಚಂದ್ರನ್- ಸಂಗೀತ ನಿರ್ದೇಶಕ ಹಂಸಲೇಖ ಮತ್ತೆ ಒಂದಾದರು. ಹೊಸ ಚಿತ್ರ ‘ನರಸಿಂಹ’ದಲ್ಲಿ ಇವರಿಬ್ಬರ ಕಾಂಬಿನೇಷನ್ ಇದೆ. ಅದಕ್ಕಾಗಿ ಸಮಾರಂಭವೊಂದು ಕಳೆದ ವಾರ ನಡೆಯಿತು.ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ಬೆಳವಣಿಗೆ. ಆದರೆ ಉದ್ಯಮದಲ್ಲಿ ಇದಕ್ಕೆ ಸಿಕ್ಕ ಸ್ವಾಗತ ಎಂಥದು?

ಹಂಸಲೇಖ, ರವಿಚಂದ್ರನ್ ಒಂದಾದರೇನು? ಉಪೇಂದ್ರ, ರಜನೀಕಾಂತ್ ಒಂದೇ ಸಿನಿಮಾ ನೋಡಿದರೇನಾಯಿತು? ರಾಜಮೌಳಿ ಸಿನಿಮಾದಲ್ಲಿ ಸುದೀಪ್ ಅಭಿನಯಿಸಿದರೆ ನಮಗೇನು?, ಯೋಗರಾಜಭಟ್ಟರು, ಸೂರಿ, ಪುನೀತ್ ಮತ್ತೆ ಜತೆಗೂಡಿದರೆ ಏನಾಯಿತು? ಹೀಗೇ ಎಲ್ಲ ಮಹತ್ವದ ಬೆಳವಣಿಗೆಗಳಿಗೂ ಸಿನಿಮಾ ಮಂದಿ ತಮ್ಮ ಕಣ್ಣುಕಿವಿಗಳನ್ನು ಮುಚ್ಚಿಕೊಂಡಿದ್ದಾರೆ.ವ್ಯವಹಾರವೇ ಮುಖ್ಯವಾಗಿರುವ ಸಿನಿಮಾರಂಗದಲ್ಲಿ ಹೀಗೆ ‘ಒಂದಾಗೋಣ ಬಾ’ ತಂತ್ರಗಳಿಗೆ ಬೆಲೆಯಿಲ್ಲ. ಏಳು ವರ್ಷಗಳ ಹಿಂದೆ ‘ಒಂದಾಗೋಣ ಬಾ’ ಎನ್ನುತ್ತಲೇ ದೂರವಾದ ಹಂಸಲೇಖ-ರವಿಚಂದ್ರನ್ ಜೋಡಿ ಮತ್ತೆ ಈಗ ನರಸಿಂಹ ಚಿತ್ರದ ಮೂಲಕ ತಮ್ಮ ಹಳೇ ಖದರು ತೋರಿಸಲು ಸಿದ್ಧರಾಗಿದ್ದಾರೆ. ಹಂಸಲೇಖ ತೋರಿಸಿದ ಹಾದಿಯಲ್ಲಿ ಈಗಾಗಲೇ ಮುನ್ನಡೆದಿರುವ ಸೂರಿ, ಯೋಗರಾಜಭಟ್, ಉಪೇಂದ್ರ ಅವರುಗಳೆಲ್ಲಾ ಪ್ರೇಮಲೋಕ, ರಣಧೀರದ ಎಲ್ಲ ಡೈಲಾಗ್ ಪಂಚ್‌ಗಳನ್ನು ಪ್ರಯೋಗ ಮಾಡಿ ಗಾಳಿಯಲ್ಲಿ ತೇಲಿಬಿಟ್ಟಿರುವುದರಿಂದ ಹಂಸಲೇಖ-ರವಿಚಂದ್ರನ್ ಜೋಡಿ ಸೇರಿ ಹೊಸಪೀಳಿಗೆಯ ಮೇಲೆ ಯಾವ ರೀತಿಯ ಬಾಣಗಳನ್ನು ಬೀಸುತ್ತಾರೆ ಎಂದು ಹೇಳುವುದು ಕಷ್ಟ.ಚಿತ್ರರಂಗದಲ್ಲಿ ಸಾಮಾನ್ಯವಾಗಿ ಈ ರೀತಿಯ ಕೆಮಿಸ್ಟ್ರಿ ವ್ಯಾವಹಾರಿಕವಾಗಿ ಲಾಭವನ್ನೇ ತಂದುಕೊಟ್ಟ ಉದಾಹರಣೆಗಳಿವೆ.ಎಪ್ಪತ್ತರ ದಶಕದಲ್ಲಿ ರಾಜ್‌ಕುಮಾರ್- ಕಲ್ಯಾಣ್ ಕುಮಾರ್ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವುದೇ ದೊಡ್ಡ ಸುದ್ದಿ. ತೊಂಬತ್ತರ ದಶಕದಲ್ಲಿ ರಾಜ್‌ಕುಮಾರ್- ವಿಷ್ಣುವರ್ಧನ್ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವುದು ದೊಡ್ಡ ಸುದ್ದಿ. ಇಂತಹ ‘ರುಚಿಕರ ಮಾತು’ಗಳು ಕೇಳಲು ಚೆನ್ನಾಗಿಯೇ ಇರುತ್ತವೆ. ಇವು ಎಂದಿಗೂ ಕಾರ್ಯಗತವಾಗಲೇ ಇಲ್ಲ.ವ್ಯಾವಹಾರಿಕವಾಗಿ ಲಾಭವಾಗುವ ಇಂತಹ ಜೋಡಿ ಕುದುರಿಸುವ ವ್ಯಾಪಾರಗಳು ಚಿತ್ರರಂಗದಲ್ಲಿ ಆಗಾಗ ಆಗುತ್ತಲೇ ಇರುತ್ತವೆ. ವಿಷ್ಣುವರ್ಧನ್- ದ್ವಾರಕೀಶ್ ಮತ್ತೆ ಒಂದಾಗುತ್ತಿದ್ದಾರೆ ಎಂದು ಭಾರೀ ಹವಾ ಸೃಷ್ಟಿಸಿ ‘ಆಪ್ತಮಿತ್ರ’ನಾಗಿ ವ್ಯಾಪಾರ ಕುದುರಿಸಿಕೊಂಡ ಜೋಡಿ ‘ಆಪ್ತ ರಕ್ಷಕ’ ವೇಳೆಗೆ ಮತ್ತೆ ಬೇರೆ ಬೇರೆ ಆದರು. ಕಮಲಹಾಸನ್-ರಜನೀಕಾಂತ್ ಒಂದೇ ಚಿತ್ರದಲ್ಲಿ ಅಭಿನಯಿಸಬೇಕೆಂಬುದೂ ಶಾರುಖ್ - ಸಲ್ಮಾನ್ ಒಂದೇ ಚಿತ್ರದಲ್ಲಿ ಅಭಿನಯಿಸಬೇಕೆಂಬುದೂ ಚಿತ್ರ ನಿರ್ಮಾಪಕರಲ್ಲೂ ಅಭಿಮಾನಿಗಳಲ್ಲೂ ವಿಚಿತ್ರ ಬಯಕೆಯಾಗಿ ಕಾಡುತ್ತಿರುತ್ತದೆ. ಅದು ಆಗಾಗ ಸುದ್ದಿಯಾಗುತ್ತಲೂ ಇರುತ್ತದೆ.ರವಿಚಂದ್ರನ್- ಹಂಸಲೇಖ ಮುನಿಸಿಕೊಂಡ ದಿನಗಳಲ್ಲಿ, ಇವರು ಮತ್ತೆ ಒಂದಾಗುವುದಿಲ್ಲ ಎಂಬ ಸುದ್ದಿಗಳು ಹರಡಿದ ದಿನಗಳಲ್ಲಿ, ಅಯ್ಯೋ... ಈ ಜೋಡಿ ಚೆನ್ನಾಗಿತ್ತಲ್ಲ ಎಂದು ಮರುಗಿದವರೂ ಇದ್ದಾರೆ. ಒಳ್ಳೆಯದಾಯ್ತು ಎಂದವರೂ ಇದ್ದಾರೆ.‘ಪ್ರೇಮಲೋಕ’ದಲ್ಲಿ ರವಿಚಂದ್ರನ್, ಹಂಸಲೇಖ ಒಂದುಗೂಡುವ ಮೊದಲು 1983ರಲ್ಲೇ ‘ನಾನೂ ನನ್ನ ಹೆಂಡ್ತಿ’ ಚಿತ್ರದಲ್ಲಿ ಇವರಿಬ್ಬರ ಜೋಡಿಯ ರಿಹರ್ಸಲ್ ಆಗಿತ್ತು. 1973ರಲ್ಲೇ ‘ತ್ರಿವೇಣಿ’ ಮೂಲಕ ಚಿತ್ರರಂಗ ಪ್ರವೇಶಿಸಿದ ಹಂಸಲೇಖ, 1984ರಲ್ಲಿ ರಾಹುಚಂದ್ರದ ಮೂಲಕ ಕೈಸುಟ್ಟುಕೊಂಡು, ಬ್ರೇಕ್‌ಗಾಗಿ ಕಾದಿದ್ದರು. ಹೀರೋ ಅಲ್ಲದಿದ್ದರೂ ತಮ್ಮದೇ ಸಂಸ್ಥೆಯ ತಯಾರಿಕೆಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮಿಂಚುತ್ತಾ ಇಮೇಜ್ ಮೂಡಿಸಿಕೊಳ್ಳುತ್ತಿದ್ದ ರವಿಚಂದ್ರನ್ ನಿರ್ದೇಶಕರಾಗಲು, ಹೀರೋ ಆಗಲು ತವಕಿಸುತ್ತಿದ್ದರು.ಅಂಥ ಸಮಯದಲ್ಲೇ ‘ಗ್ರೀಸ್-2’ ಬಿಡುಗಡೆಯಾಗಿ ಇಬ್ಬರ ಬಾಳಿನಲ್ಲೂ ಬೆಳಗು ಮೂಡಿತು. ‘ಪ್ರೇಮ ಲೋಕ’ ಅಂಥದೊಂದು ಟ್ರೆಂಡ್‌ಗೆ ದಾರಿ ಮಾಡಿಕೊಟ್ಟಿತು. ‘ಪ್ರೇಮ ಲೋಕ’ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು. 10 ಹಾಡುಗಳಿದ್ದ ಈ ಸಿನಿಮಾ ಚಿತ್ರಮಯ ಪ್ರೇಮಕಾವ್ಯವೂ ಆಯಿತು. ರಾಕ್ ಸಂಗೀತ ದೃಶ್ಯಗಳಲ್ಲಿ, ಪಂಚ್ ಡೈಲಾಗ್‌ಗಳಲ್ಲಿ ಗದ್ಯವನ್ನೇ ಪದ್ಯವಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಜೊತೆಗೆ ಹಂಸಲೇಖ ರಸಿಕರ ನಾಲಿಗೆಯ ಮೇಲೆ ದೇಸಿ ಸಿಹಿಯನ್ನು ಹಾಕಿದರು.ನಾಯಕಿ ಕಾಲೇಜಿಗೆ ಎಂಟ್ರಿ ಕೊಡುವುದು, ಅಡ್ಮಿಷನ್ ಆಗುವುದು, ಕಾಲೇಜಿನ ಚಟುವಟಿಕೆಗಳು, ಹಾಡು-ಪದ್ಯ ಗದ್ಯದ ರೂಪದಲ್ಲಿ ನಾಟಕೀಯವಾಗಿ ಚಿತ್ರೀಕರಣಗೊಂಡು ಹೊಸ ಶೈಲಿಯನ್ನು ಕನ್ನಡ ಪರದೆಯ ಮೇಲೆ ನಳನಳಿಸಿತು. ನಿಂಬೆಹಣ್ಣಿನಂಥ ಹುಡುಗಿ ಮಾರುಕಟ್ಟೆಗೆ ಬರುವುದೂ, ಶಕುಂತಲಾ ಬಂದ್ಲು ಸಾರ್.... ಎನ್ನುವ ಕವಿ ಕಲ್ಪನೆಗಳೂ ಹಂಸಲೇಖಾಗೆ ಮಾತ್ರ ಸಾಧ್ಯ.ರಣಧೀರನ ಮೂಲಕ ಸಿನಿಮಾ ಟೈಟಲ್‌ಗಳನ್ನೆಲ್ಲಾ ಗುಡ್ಡೆ ಹಾಕಿ ಚಿತ್ರಗೀತೆ ಮಾಡುವ ಕಲೆಯಲ್ಲಿ ಕೂಡಾ ಹಂಸಲೇಖ ನಿಷ್ಣಾತರು. ಕುಚೋದ್ಯವನ್ನು ರಮ್ಯಗೀತೆಯಾಗಿಸುವ ಕಲೆ ಅವರಿಗೆ ಗೊತ್ತಿದೆ. ಅಂಜದ ಗಂಡು, ರಾಮಾಚಾರಿ, ಹಳ್ಳಿಮೇಷ್ಟ್ರು, ಕಿಂದರಿಜೋಗಿ, ಯಾರೇ ನೀನು ಚೆಲುವೆ, ಪುಟ್ನಂಜ, ಅಣ್ಣಯ್ಯ, ಯುದ್ಧಕಾಂಡ ಹೀಗೆ ರವಿ-ಹಂಸ ಜೋಡಿ ನಡಿಗೆ ಮೆರೆದಿದೆ.ಹಂಸಲೇಖ ಸಾಹಿತ್ಯದಲ್ಲಿ ಖದರು ತಂದಂತೆಲ್ಲ ಅದನ್ನು ತಾಂತ್ರಿಕವಾಗಿ ಶ್ರೀಮಂತಗೊಳಿಸುವ ಚಿತ್ರಕಶಕ್ತಿಯನ್ನು ರವಿಚಂದ್ರನ್ ಮೆರೆದರು. ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ, ತಂತ್ರಜ್ಞ ರವಿಚಂದ್ರನ್- ಹಂಸಲೇಖ ಅವರ ಸಾಹಿತ್ಯ - ರವಿಚಂದ್ರನ್ ಅವರ ನಿರ್ದೇಶನ ಚಳಕ ಚಿತ್ರರಂಗಕ್ಕೆ ಹೊಸ ತಿರುವು ಮಾಡಿಸಿದ್ದು ಸುಳ್ಳಲ್ಲ.ರವಿಚಂದ್ರನ್ ಜೊತೆಯಲ್ಲಿರುವಂತೆಯೇ ಹಂಸಲೇಖ ಯುವ ನಾಯಕರ ಚಿತ್ರಗಳಿಗೆ ಸಂಗೀತ ನೀಡಲಾರಂಬಿಸಿದರು. ಎಲ್ಲರಿಗೂ ಹಂಸಲೇಖ ಬೇಕಾದರು. ಇತರ ಎಲ್ಲ ಸಂಗೀತ ನಿರ್ದೇಶಕರು ಮೂಲೆಗುಂಪಾಗಿ ಇಡೀ ದಶಕವನ್ನು ಹಂಸಲೇಖ ಆಳಿದರು.ಹಂಸಲೇಖ ಇತರೆ ಯುವನಟರ ಚಿತ್ರಗಳಲ್ಲಿ ಬಿಜಿ ಆಗತೊಡಗುತ್ತಿದ್ದಂತೆ ರವಿಚಂದ್ರನ್, ಕನಸುಗಾರನಾ...ಒಂದು ಹಾಡು ಕೇಳಮ್ಮಾ... ಎಂದು ತಾವೇ ಸಂಗೀತ ನೀಡಲಾರಂಭಿಸಿದರು. ಓ ನನ್ನ ನಲ್ಲೆ, ಪ್ರೀತ್ಸು ತಪ್ಪೇನಿಲ್ಲ, ಓ ಪ್ರೇಮವೇ, ನಾನು ನನ್ನ ಹೆಂಡ್ತೀರು, ಪ್ರೀತ್ಸೋದ್ ತಪ್ಪಾ, ಮಲ್ಲ, ಏಕಾಂಗಿ, ಮಾಂಗಲ್ಯ ತಂತು ನಾನೇನಾ... ಮೊದಲಾದ ಚಿತ್ರಗಳ ಸರಣಿಯಲ್ಲಿ ಯಾರಮ್ಮ ಇವಳು ಚೆಲುವೆ, ಚೋರಿಯಾಗಿದೆ ನನ್ನ ದಿಲ್, ಬಂಗಾರಿಂದ ಬಣ್ಣಾನ ತಂದಾ..ಲವ್ವ ಫೀಲಿಂಗೂ, ಮೊದಲಾದ ಹಾಡುಗಳು ರಸಿಕರನ್ನು ತಣಿಸಿದವು.ಸಾಹಿತ್ಯದಲ್ಲೂ, ಸಂಗೀತದಲ್ಲೂ ರವಿಚಂದ್ರನ್ ತಮ್ಮದೇ ಆದ ಶೈಲಿಗೆ ಅದನ್ನು ದುಡಿಸಿಕೊಂಡರು. ಹಂಸಲೇಖ ಅವರ ದೇಸಿ ಶೈಲಿಗೆ ಒಗ್ಗಿ ಹೋಗಿದ್ದರಿಂದಲೋ ಏನೋ ಅವು ಥ್ರಿಲ್ ಕೊಟ್ಟರೂ, ಏನೋ ಕಳೆದುಕೊಂಡಿದ್ದೇವೆ ಎಂದು ಅನ್ನಿಸುತ್ತಿದ್ದುದು ನಿಜ.ಆದರೂ ರವಿಚಂದ್ರನ್ ಖದರು ಚಿತ್ರರಂಗದಲ್ಲೇ ತನ್ನದೇ ಛಾಪಿನಲ್ಲಿ ಕಂಗೊಳಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ಸಾಧ್ಯತೆಗಳನ್ನು ನಿರೂಪಿಸಿ ಸಾಧಿಸಿ ತೋರಿಸಿದ ಖ್ಯಾತಿ ರವಿಚಂದ್ರನ್ ಅವರದು.ಹಂಸಲೇಖ-ರವಿಚಂದ್ರನ್ ಇಬ್ಬರೂ ಸೇರಿ ಪ್ರೇಮಲೋಕದಲ್ಲಿ ಮೂಡಿಸಿದ ಟ್ರೆಂಡ್ ಕನ್ನಡ ಚಿತ್ರಗಳಲ್ಲಿ ಇನ್ನೂ ಮಾಸಿಲ್ಲ. 35 ವರ್ಷಗಳ ಹಿಂದೆ ಈ ಚಿತ್ರದಲ್ಲಿ ನಾಯಕಿಯ ರಂಗಪ್ರವೇಶ ಹೇಗಿರಬೇಕು ಎನ್ನುವುದನ್ನು ತೋರಿಸಿದರು. ಕಾಲೇಜು ಅಂದರೆ ಹೇಗಿರುತ್ತೆ ಅಂತ ಹೇಳಿದರು. ಹಂಸಲೇಖ ಅವರ ಸಂಗೀತ ನಿರ್ದೇಶನದ 300ನೇ ಚಿತ್ರದಲ್ಲಿ ರವಿಚಂದ್ರನ್ ಇರುತ್ತಾರೆ, ಹಂಸಲೇಖ ಎಂಥಾ ಪ್ರಭಾವ ಬೀರಿದ್ದಾರೆ ಎಂದರೆ ಸುಮಾರು 500 ಚಿತ್ರಗಳಲ್ಲಿ ಹಂಸಲೇಖ ಅವರ ಸಂಗೀತದ ಛಾಯೆ ಕಾಣುತ್ತದೆ.ರವಿಚಂದ್ರನ್ ಎಷ್ಟು ಪ್ರಭಾವ ಮೂಡಿಸಿದ್ದಾರೆ ಎಂದರೆ ಸುಮಾರು 600 ಚಿತ್ರಗಳಲ್ಲಿ ಪ್ರೇಮಲೋಕದ ಪ್ರೀತಿ/ಪ್ರೇಮ ಇಣುಕು ಹಾಕಿದೆ. ಮೂರು ತಿಂಗಳ ಹಿಂದೆ ಬಂದ ‘ಪಂಚರಂಗಿ’ ಚಿತ್ರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಕಾಲೇಜು ಡೇ ದಿನ ದಿಗಂತ್ ಮಾಡುವ ಡ್ಯಾನ್ಸ್, ಸನ್ನಿವೇಶ, ದೃಶ್ಯ ಎಲ್ಲವೂ ಪ್ರೇಮಲೋಕವನ್ನು ನೆನಪಿಸದಿದ್ದರೆ ಕೇಳಿ. ಇಷ್ಟೆಲ್ಲಾ ಪ್ರಭಾವ, ಪ್ರಯೋಗಗಳನ್ನು ಅಚ್ಚೊತ್ತಿರುವ ಈ ಜೋಡಿ ಮತ್ತೆ ಒಂದಾಗಿ ಏನು ಮಾಡುತ್ತಾರೆ? ಅವರ ಸರಕು ಮುಗಿದಿಲ್ಲವೇ? ಎನ್ನುತ್ತದೆ ಚಿತ್ರರಂಗ. ನನಗಂತೂ ಕುತೂಹಲವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.