ಮಂಗಳವಾರ, ಮಾರ್ಚ್ 31, 2020
19 °C

ಈಗಲೂ ಭಾರತದಲ್ಲಿ ಇಂದಿರಾ ಮನಸ್ಥಿತಿ!

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಈಗಲೂ ಭಾರತದಲ್ಲಿ ಇಂದಿರಾ ಮನಸ್ಥಿತಿ!

ಕಥೆಗಳನ್ನು ಹೇಳುವುದು ನನಗೆ ತುಂಬ ಇಷ್ಟವಾಗುತ್ತದೆ ಎಂಬ ಕಾರಣಕ್ಕೂ ನಾನು ನನ್ನ ಪತ್ರಕರ್ತ ವೃತ್ತಿಯನ್ನು ಪ್ರೀತಿಸುವೆ. ಇಂದಿರಾ ಗಾಂಧಿ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ನಾನು ನನ್ನ ಈ ಅಂಕಣದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲು ಸಾಧ್ಯವಾಗದಿರುವುದಕ್ಕೆ ನನ್ನಲ್ಲಿ ವಿಷಾದವೂ ಇದೆ.

ಇಂದಿರಾ ಅವರ ಹತ್ಯೆ ನಡೆದಾಗ ನಾನು 27 ವರ್ಷದವನಾಗಿದ್ದೆ. ಎರಡು ಸಂದರ್ಭಗಳಲ್ಲಿ ನಾನು ಅವರ ಹತ್ತಿರ ಹೋಗಿ ಸಂದರ್ಶಿಸುವ ಅವಕಾಶ ಗಿಟ್ಟಿಸಿಕೊಂಡಿದ್ದೆ. 1979ರ ಬೇಸಿಗೆಯಲ್ಲಿ ಅವರು ಅಧಿಕಾರದಲ್ಲಿ ಇದ್ದಿರಲಿಲ್ಲ. ಆಗ ದೆಹಲಿಯಿಂದ ಶ್ರೀನಗರಕ್ಕೆ ಇಂಡಿಯನ್‌ ಏರ್‌ಲೈನ್ಸ್‌ ಒಂದೇ ವಿಮಾನ ಸೌಲಭ್ಯ ಇತ್ತು. ಅದು ಚಂಡೀಗಡ – ಜಮ್ಮು – ಮಾರ್ಗದಲ್ಲಿ ಸಂಚರಿಸುತ್ತಿತ್ತು. ಒಂದು ಬಾರಿ ಇಂದಿರಾ ಅವರು ಶ್ರೀನಗರಕ್ಕೆ ಹೋಗುವ ಮಾರ್ಗಮಧ್ಯೆ ಚಂಡೀಗಡದಲ್ಲಿ ಕೆಲಹೊತ್ತು ತಂಗಿದ್ದಾಗ ಅವರನ್ನು ಭೇಟಿಯಾಗುವ ಅವಕಾಶ ಗಿಟ್ಟಿಸಿಕೊಂಡಿದ್ದೆ.

ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಹವಣಿಸಿದ್ದೆ. ಆ ಸಂದರ್ಶನದ ವರದಿಗಿಂತ ಇಂದಿರಾ ಅವರ ಜತೆಗಿನ ನನ್ನ ಪ್ರಶ್ನೋತ್ತರವನ್ನು ಗ್ಯಾನಿ ಜೈಲ್‌ಸಿಂಗ್ ಮತ್ತು ಕಾಂಗ್ರೆಸ್‌ನ ಮಾಜಿ ಸಚಿವ ಮನೀಷ್‌ ತಿವಾರಿ ಅವರ ತಂದೆ ವಿ.ಎನ್‌. ತಿವಾರಿ ಅವರು ಕುತೂಹಲದಿಂದ ಕೇಳಿದ ಕಪ್ಪುಬಿಳುಪಿನ ಚಿತ್ರ ಮಾತ್ರ ನನ್ನ ಮನದಲ್ಲಿ ಅಚ್ಚಾಗಿ ಕುಳಿತಿದೆ.

ಎರಡನೇ ಭೇಟಿಯು ಹೆಚ್ಚು ಒಳನೋಟಗಳಿಂದ ಕೂಡಿತ್ತು. ಅದಕ್ಕಾಗಿ ನಾನು 1983ರ ಫೆಬ್ರುವರಿವರೆಗೆ ಅಂದರೆ ನಾಲ್ಕು ವರ್ಷಗಳ ಕಾಲ ಕಾಯಬೇಕಾಯಿತು. ಅಸ್ಸಾಂನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗುವಾಹಟಿಯಿಂದ 120 ಕಿ.ಮೀ ದೂರದಲ್ಲಿನ ನೆಲ್ಲೆ ಎಂಬಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮುಸ್ಲಿಮರನ್ನು ಭೀಕರವಾಗಿ ಕಗ್ಗೊಲೆ ಮಾಡಲಾಗಿತ್ತು. ಮರುದಿನ ಇಂದಿರಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಹೆಲಿಕಾಪ್ಟರ್‌ನ ತಿರುಗುತ್ತಿದ್ದ ರೆಕ್ಕೆಗಳು ನಿಲ್ಲುತ್ತಿದ್ದಂತೆ ಅವರು ಕೆಳಗೆ ಇಳಿಯಲು ಮುಂದಾದಾಗ ಅಲ್ಲೆಲ್ಲ ಮರಳಿನ ದೂಳು ಆವರಿಸಿತ್ತು. ತಮ್ಮ ಸೀರೆಯ ಸೆರಗಿನಿಂದ ಮೂಗು ಮುಚ್ಚಿಕೊಂಡರೂ ಅದು ಅವರ ಮುಖದಲ್ಲಿನ ಸಿಟ್ಟನ್ನು ಮುಚ್ಚಿಕೊಳ್ಳಲು ನೆರವಾಗಲಿಲ್ಲ. ‘ಮೂರು ಸಾವಿರ ಮುಸ್ಲಿಮರು ಹತರಾಗಿದ್ದಾರೆ. ಇದಕ್ಕೆ ನೀವು ಉತ್ತರ ನೀಡುವೀರಾ’ ಎಂದು ರಾಜ್ಯಪಾಲರ ಮುಖ್ಯ ಸಲಹೆಗಾರ ಆರ್‌.ವಿ. ಸುಬ್ರಮಣಿಯನ್‌ ಅವರನ್ನು ಖಾರವಾಗಿಯೇ ಪ್ರಶ್ನಿಸಿದರು. ಆಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿತ್ತು. ಆನಂತರ ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದ ಕೆ.ಪಿ.ಎಸ್‌. ಗಿಲ್‌ ಅವರತ್ತ ತಿರುಗಿದ ಇಂದಿರಾ, ‘ನೀವೆಲ್ಲಾ ಏನ್‌ ನಿದ್ದೆ ಮಾಡ್ತಾ ಇದ್ದೀರಾ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ತಪ್ಪು ಮಾಡಿದ ಶಾಲಾ ಬಾಲಕರಂತೆ ಅವರಿಬ್ಬರೂ ಮೌನದಿಂದ ಆಲಿಸುತ್ತಿದ್ದರು. ಆನಂತರ ಅವರು ತಮ್ಮ ಸೆರಗಿನಿಂದ ಮುಖ ಒರೆಸಿಕೊಂಡು ‘ಏನಿದು ಇಷ್ಟು ದೂಳು ಆವರಿಸಿದೆಯಲ್ಲ’ ಎಂದು ಮಾತು ಮುಂದುವರೆಸಿದ್ದರು.

ನನಗೆ ಇಲ್ಲಿ, ಸತ್ಯಜಿತ್‌ ರೇ ಅವರ ಸಂದರ್ಶನವೂ ನೆನಪಾಗುತ್ತದೆ. ಇಂದಿರಾ ಗಾಂಧಿ ಅವರ ಬದುಕಿನ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುವಾಗ ತಮಗಾದ ಅನುಭವವನ್ನು ರೇ, ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇಂದಿರಾ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದನ್ನು ರೇ ಅವರು ಚಿತ್ರೀಕರಿಸುತ್ತಿದ್ದಾಗ ನಡೆದ ಘಟನೆ ಅದಾಗಿತ್ತು. ತಮ್ಮ ಕೋಣೆಯಲ್ಲಿನ ಕುರ್ಚಿ ಸರಿಪಡಿಸುವ ಮತ್ತು ಚಿತ್ರಪಟವನ್ನು ಸ್ಥಳಾಂತರಿಸುವ ದೃಶ್ಯದಲ್ಲಿ ಭಾಗವಹಿಸಿದ್ದ ಇಂದಿರಾ, ದೂಳಿನಿಂದ ಕೂಡಿದ್ದ ತಮ್ಮ ತಂದೆಯ ಫೋಟೊ ಫ್ರೇಮ್‌ ಕೈಗೆತ್ತಿಕೊಳ್ಳುತ್ತಾರೆ. ದೂಳು ಒರೆಸಲು ಬಟ್ಟೆಗಾಗಿ ಸುತ್ತಲೂ ತಡಕಾಡುವಾಗ, ‘ನಿಮ್ಮ ಸೆರಗಿನಿಂದಲೇ ದೂಳು ಒರೆಸಿದರೆ ನಿಜಕ್ಕೂ ಅದೊಂದು ಸುಂದರ ದೃಶ್ಯವಾಗಿರುತ್ತದೆ’ ಎಂದು ರೇ ಸಲಹೆ ನೀಡುತ್ತಾರೆ. ಅದಕ್ಕೆ ಇಂದಿರಾ ತಾವು ಹಾಗೆ ಮಾಡುವುದಿಲ್ಲ ಎಂದು ಹೇಳಿ ರೇ ಸಲಹೆಯನ್ನು ನಯವಾಗಿ ತಿರಸ್ಕರಿಸುತ್ತಾರೆ. ‘ಸೆರಗಿನಿಂದ ದೂಳು ಒರೆಸದಿರಲು ಕಾರಣವೇನು. ನಿಮ್ಮ ತಂದೆ ಬಗ್ಗೆ ನಿಮಗೆ ಕಕ್ಕುಲಾತಿಯೇ ಇಲ್ಲವೆ. ಅಂತಹ ದೃಶ್ಯ ಅದ್ಭುತವಾಗಿ ಮೂಡಿ ಬರುತ್ತದೆ’ ಎಂದು ರೇ ಹೇಳುತ್ತಾರೆ. ‘ನಾನು ಹಾಗೆ ಮಾಡಬಲ್ಲೆ. ಆದರೆ, ದೂಳಿನ ಬಗ್ಗೆ ನನ್ನಲ್ಲಿ ನವಿರು ಭಾವನೆಗಳಿಲ್ಲ’ ಎಂದು ಇಂದಿರಾ ಉತ್ತರ ನೀಡಿದ್ದರಂತೆ.

ಬ್ರಹ್ಮಪುತ್ರ ಕಣಿವೆಯ ಈ ಭೇಟಿಯು ಇಂದಿರಾ ಅವರ ಬದುಕಿನ ಸುಮಧುರ ಕ್ಷಣವೇನೂ ಆಗಿರಲಿಲ್ಲ. ಆದರೆ, ಈ ಸಂದರ್ಭದಲ್ಲಿ ಅವರು ಕೈಗೊಂಡ ನಿರ್ಧಾರ ಮಾತ್ರ ಅತ್ಯಂತ ಕಠಿಣವಾಗಿತ್ತು. ‘ವಿದೇಶಿ ರಾಷ್ಟ್ರೀಯರ’ ವಿರುದ್ಧ ಬಹುತೇಕ ಶಾಂತಿಯುತವಾಗಿಯೇ ನಡೆಯುತ್ತಿದ್ದ ಜನಾಂದೋಲನವು ಅಸ್ಸಾಂನಲ್ಲಿ ಹಲವು ವರ್ಷಗಳ ಕಾಲ ಕ್ರೋಧಾಗ್ನಿಗೆ ಅವಕಾಶ ಮಾಡಿಕೊಟ್ಟಿತ್ತು. ತೈಲ ನಿಕ್ಷೇಪಗಳಿಂದ ಕಚ್ಚಾ ತೈಲದ ಪೂರೈಕೆಯನ್ನು ನಿರ್ಬಂಧಿಸಲಾಗಿತ್ತು. ಪರಿಸ್ಥಿತಿ ಮೇಲೆ ರಾಜ್ಯ ಸರ್ಕಾರಕ್ಕೆ ನಿಯಂತ್ರಣವೇ ಇದ್ದಿರಲಿಲ್ಲ. ಈ ಕಾರಣಕ್ಕೆ ಚುನಾವಣೆ ನಡೆಯುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಚುನಾವಣೆ ಬಹಿಷ್ಕಾರಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದ್ದರೂ ಇಂದಿರಾ ತಮ್ಮ ಅಧಿಕಾರ ಸ್ಥಾಪಿಸಲು ಮುಂದಾಗಿದ್ದರು. ಅದಕ್ಕೆ ರಾಜ್ಯವು ದುಬಾರಿ ಬೆಲೆಯನ್ನೂ ತೆತ್ತಿತು. ಅಂದಾಜಿನ ಪ್ರಕಾರ ಹದಿನೈದು ದಿನಗಳಲ್ಲಿ ಏಳು ಸಾವಿರದಷ್ಟು ಜನರು ಹತರಾಗಿದ್ದರು. ಅವರಲ್ಲಿ ಬಹುತೇಕರು ಮುಸ್ಲಿಮರು.

ಇಂದಿರಾ ಅವರ ಧೋರಣೆಯನ್ನು ಇತಿಹಾಸ ಹೇಗೆ ಅಂದಾಜು ಮಾಡಲಿದೆ? ಅಧಿಕಾರ ದುರ್ಬಳಕೆಯು ಕ್ರೌರ್ಯ, ಸಿನಿಕತನ ಮತ್ತು ಹಿಂಸೆಯನ್ನು ಒಳಗೊಂಡಿರುತ್ತದೆ. ಹಲವಾರು ಮತಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದ್ದರೂ ಇಂದಿರಾ ಗಾಂಧಿ ಅವರು ಚುನಾಯಿತ ಸರ್ಕಾರವನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸಿದ್ದರು. ಹೊಸ ಸರ್ಕಾರದಲ್ಲಿ ಸಚಿವರಾದ ಶಾಸಕರೊಬ್ಬರಿಗೆ ಶೇ 100ರಷ್ಟು ಮತಗಳು ಬಿದ್ದಿದ್ದವು. ಅವರು ಪಡೆದುಕೊಂಡ ಮತಗಳ ಸಂಖ್ಯೆ ಕೇವಲ 266 ಇತ್ತು! ಪ್ರತಿಭಟನೆಯ ಕಾರಣಕ್ಕೆ ಅವರ ಎದುರಾಳಿಯು ಮತ ಚಲಾಯಿಸಲು ಸಾಧ್ಯವಾಗಿರಲಿಲ್ಲ. ಇಂದಿರಾ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಜಾಯಮಾನದವರೂ ಆಗಿರಲಿಲ್ಲ.

ಅವರಲ್ಲಿನ ಇಂತಹ ನಿಷ್ಕರುಣ ಸ್ವಭಾವವು ಸಂಸತ್ತಿನಲ್ಲಿನ ಅವರ ಆರಂಭಿಕ ದಿನಗಳಲ್ಲೂ ಕಂಡು ಬಂದಿತ್ತು. ರಾಮ ಮನೋಹರ ಲೋಹಿಯಾ ಅವರು ಇಂದಿರಾ ಅವರನ್ನು ‘ಮೂಕ ಗೊಂಬೆ’ ಎಂದೇ ಕರೆದಿದ್ದರು. ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರ ಹಠಾತ್‌ ನಿಧನದಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಏರಲು ಇಂದಿರಾ ಸಾಕಷ್ಟು ಚಾಕಚಕ್ಯತೆ ಮೆರೆದಿದ್ದರು.

1962-65ರ ಅವಧಿಯಲ್ಲಿ ಭಾರತವು ಯುದ್ಧಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಈ ಹೊತ್ತಿನಲ್ಲಿ ದೇಶದಲ್ಲಿ ಆಹಾರ ಕೊರತೆಯೂ ಉದ್ಭವಿಸಿತ್ತು. ಮಿಜೊ ಬಂಡುಕೋರರು ಐಜ್ವಾಲ್‌ ಮೇಲೆ ಹಿಡಿತ ಸಾಧಿಸಿದ್ದರು. ಅಲ್ಲಿಯವರೆಗೆ ಯಾರೊಬ್ಬರೂ ಮಾಡದ ಕೆಲಸಕ್ಕೆ ಇಂದಿರಾ ಕೈ ಹಾಕಿದ್ದರು. ಭಾರತೀಯ ವಾಯು ಪಡೆ ಬಳಸಿ ಐಜ್ವಾಲ್‌ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈಗ ಆ ಕೃತ್ಯವನ್ನು ಟೀಕಿಸಲಾಗುತ್ತಿದೆ. ಆದರೆ, ಅಂದು ಇದು ಅನಿವಾರ್ಯವಾಗಿತ್ತು.

ಐಜ್ವಾಲ್‌ ಮೇಲೆ ನಿಯಂತ್ರಣ ಸಾಧಿಸಲು ನಡೆಸಿದ ಸೇನಾ ಕಾರ್ಯಾಚರಣೆ, ಬಾಂಗ್ಲಾದೇಶದಲ್ಲಿ ನಡೆದ ನಿರ್ಣಾಯಕ ಯುದ್ಧ, ಅಸ್ಸಾಂನಲ್ಲಿ 1983ರಲ್ಲಿ ನಡೆಸಿದ ಚುನಾವಣೆ ಮತ್ತು ಒಂದು ವರ್ಷದ ನಂತರ ಸ್ವರ್ಣ ಮಂದಿರದಲ್ಲಿ ನಡೆದ ‘ಬ್ಲೂ ಸ್ಟಾರ್‌ ಕಾರ್ಯಾಚರಣೆ’ಗಳು ಅಧಿಕಾರ ದುರ್ಬಳಕೆಯ ಕ್ಷಮಿಸಲಾಗದ ನಿದರ್ಶನಗಳಾಗಿವೆ. ಸರ್ಕಾರದಲ್ಲಿ ಎಲ್ಲ ಅಧಿಕಾರ ಕೇಂದ್ರೀಕೃತಗೊಂಡಿದ್ದ ಅವರ ಕಾರ್ಯಶೈಲಿಗೂ ಇವು ಸಾಕ್ಷಿಗಳಾಗಿವೆ. ಇಂದಿರಾ ಕೈಗೊಂಡಿದ್ದ ಈ ಎಲ್ಲ ನಿರ್ಧಾರಗಳು ಅವುಗಳದ್ದೇ ಆದ ಕಪ್ಪುಚುಕ್ಕೆಗಳನ್ನು ಬಿಟ್ಟು ಹೋಗಿವೆ. ಆದರೆ, ಭಾರತಕ್ಕೆ ಎದುರಾಗಿದ್ದ ಬೆದರಿಕೆಯನ್ನು ಶಾಶ್ವತವಾಗಿ ದೂರ ಮಾಡಿವೆ. ಪಾಕಿಸ್ತಾನವು ಎರಡು ದಿಕ್ಕಿನಿಂದ ಬೆದರಿಕೆ ಒಡ್ಡುವ ಸಾಧ್ಯತೆ ಇಲ್ಲವಾಗಿದೆ. ಬಾಂಗ್ಲಾದೇಶವು ನಂಬಬಹುದಾದ ಮಿತ್ರ ದೇಶವಾಗಿದೆ.

ಬಾಂಗ್ಲಾದೇಶದಲ್ಲಿನ ಸಾಮಾಜಿಕ ಸ್ಥಿತಿಗತಿ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ. ಕ್ರೀಡೆಯಲ್ಲಿಯೂ ಅದು ಒಳ್ಳೆಯ ಸಾಧನೆ ಮಾಡುತ್ತಿದೆ. ಢಾಕಾ ಷೇರುಪೇಟೆಯು ಕರಾಚಿ ಷೇರುಪೇಟೆಯ ಮಾರುಕಟ್ಟೆ ಮೌಲ್ಯವನ್ನೂ ಮೀರಿದೆ.

ಈಶಾನ್ಯ ರಾಜ್ಯಗಳ ಪೈಕಿ ಮಿಜೊರಾಂ ಈಗ ಅತ್ಯಂತ ಶಾಂತಿಯುತ ಆದಿವಾಸಿ ರಾಜ್ಯವಾಗಿದೆ. 1983ರಲ್ಲಿ ಕಚ್ಚಾ ತೈಲ ಪೂರೈಕೆ ನಿರ್ಬಂಧಿಸಿದ್ದ ಮುಖಂಡರು ಆನಂತರ ಕೇಂದ್ರ ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಿ ಮುಖ್ಯವಾಹಿನಿಗೆ ಸೇರ್ಪಡೆಗೊಂಡಿದ್ದರು. ಎರಡು ಬಾರಿ ಗೆದ್ದು ಬಂದು ಅಧಿಕಾರವನ್ನೂ ಅನುಭವಿಸಿದ್ದರು. ಆನಂತರ ಅಧಿಕಾರಕ್ಕೂ ಎರವಾದರು. ಇಂದು ಅವರದ್ದೇ ಗುಂಪಿನ ಕೆಲವರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಸ್ವರ್ಣ ಮಂದಿರದ ಮೇಲಿನ ಸೇನಾ ಕಾರ್ಯಾಚರಣೆ ವಿರುದ್ಧದ ಪ್ರತೀಕಾರಕ್ಕಾಗಿ ಅವರ ಹತ್ಯೆ ನಡೆದ ನಂತರದ 25 ವರ್ಷಗಳಿಂದ ಪಂಜಾಬ್‌ನಲ್ಲಿ ಸಾಮಾನ್ಯ ರಾಜಕೀಯ ಪರಿಸ್ಥಿತಿ ನೆಲೆಸಿದೆ.

ಇಂದಿರಾ ಅವರ ನಿರ್ಧಾರಗಳು, ಶಸ್ತ್ರಚಿಕಿತ್ಸಕರು ಬಳಸುವ ನಯನಾಜೂಕಿನ ಸಣ್ಣ ಚಾಕುವಿನಂತೆ ಇದ್ದಿರಲಿಲ್ಲ. ಅವೆಲ್ಲ ಮರ ಕತ್ತರಿಸುವ ಕೊಡಲಿ ಏಟುಗಳಾಗಿದ್ದವು. ಇವುಗಳು ಕೂಡ ತಮ್ಮ ಕೃತ್ಯಗಳ ದೊಡ್ಡ ಕಪ್ಪುಕಲೆಗಳನ್ನು ಬಿಟ್ಟು ಹೋಗಿವೆ. ಅವರ ಕತ್ತಿ ಅಲಗಿನಂತಹ ದಿಟ್ಟ ನಿಲುವು ಪಕ್ಷದ ಒಳಗೂ ಸೇರಿದಂತೆ ಹೊಸ ವಿರೋಧಿಗಳನ್ನು ಸೃಷ್ಟಿಸಿತ್ತು. ಸದ್ಯಕ್ಕೆ ಸರ್ಕಾರ ಮತ್ತು ವಿಭಿನ್ನ ರಾಜಕೀಯ ಪಕ್ಷಗಳಲ್ಲಿ ಅಧಿಕಾರ ಅನುಭವಿಸುತ್ತಿರುವ ಬಹುತೇಕರು ಇಂದಿರಾ ವಿಧಿಸಿದ್ದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಿಸಿರಕ್ತದ ಯುವ ಮುಖಂಡರಾಗಿ ಜೈಲಿನಲ್ಲಿದ್ದರು ಎನ್ನುವುದನ್ನು ನಾನು ತುರ್ತು ಪರಿಸ್ಥಿತಿಯ 40ನೇ ವರ್ಷಾಚರಣೆ ಸಂದರ್ಭದಲ್ಲಿ ಬರೆದಿದ್ದ ಈ ಅಂಕಣದಲ್ಲಿ ನೆನಪಿಸಿಕೊಂಡಿದ್ದೆ.

ಹಲವಾರು ವರ್ಷಗಳ ಕಾಲ ರಾಷ್ಟ್ರೀಯ ಭದ್ರತೆಗೆ ಎದುರಾಗಿದ್ದ ಸವಾಲುಗಳನ್ನು ಇಂದಿರಾ ಅವರು ಜಾಣ್ಮೆಯಿಂದ ಎದುರಿಸಿದ್ದರು. ಆದರೆ, ಎರಡು ಅತಿದೊಡ್ಡ ವೈಫಲ್ಯಗಳೂ ಅವರ ಹೆಸರಿನ ಜತೆ ತಳಕು ಹಾಕಿಕೊಂಡಿವೆ. ಕೋಮು ಸೌಹಾರ್ದ ಕಾಯ್ದುಕೊಂಡು ಬರುವಲ್ಲಿ ಅವರು ವಿಫಲರಾಗಿದ್ದರು. ತಮ್ಮದು ಜಾತ್ಯತೀತ ಧೋರಣೆ ಎಂದು ಹೇಳಿಕೊಂಡ, ಪ್ರಾಮಾಣಿಕವಾಗಿ ಅದನ್ನು ಅನುಸರಿಸುತ್ತಿದ್ದವರಿಗೂ ಇಂದಿರಾ ಅವರ ನಿಲುವು ಸಾಕಷ್ಟು ಬಾರಿ ಮುಜುಗರ ಉಂಟು ಮಾಡಿತ್ತು. ಅವರ ನಿಗಾದ ಅಡಿಯಲ್ಲಿಯೇ ಕೋಮು ಗಲಭೆಗಳು ನಡೆದಿದ್ದವು. ರಾಜಕೀಯ ಆರ್ಥಿಕತೆಗೆ ಅವರು ಮಾಡಿದ ಹಾನಿಯು ಎರಡನೆಯ ಮತ್ತು ಅತಿದೊಡ್ಡ ವೈಫಲ್ಯವಾಗಿದೆ.

ಜವಾಹರಲಾಲ್‌ ನೆಹರೂ ಅವರ ಸಮಾಜವಾದವು ಗೌರವಾರ್ಹ ಸ್ವರೂಪದ್ದಾಗಿತ್ತು. ಅವರ ಎಡಪಂಥೀಯ ಅಂತಃಪ್ರೇರಣೆಯು ಅವರ ಅಧಿಕಾರಾವಧಿಯಲ್ಲಿನ ಆದರ್ಶಗಳ ಅನುಷ್ಠಾನದಲ್ಲಿಯೂ ಪ್ರತಿಫಲನೆಗೊಂಡಿತ್ತು. ಆದರೆ, ಇಂದಿರಾ ಗಾಂಧಿ ಅವರದ್ದು ಸಿನಿಕತನದ ಧೋರಣೆಯಾಗಿತ್ತು. ಅವರು ಉದಾರ ಧೋರಣೆಯವರಾಗಿರಲಿಲ್ಲ. ಶೀತಲ ಸಮರದಲ್ಲಿ ಅವರು ನಂಬಿಕೆ ಇರಿಸಿದ್ದರು. ಪಕ್ಷ ವಿಭಜಿಸಲು ಅವರು ಸಮಾಜವಾದ ಬಳಸಿಕೊಂಡಿದ್ದರು. ಒಂದರ ಹಿಂದೆ ಒಂದರಂತೆ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿದರು. ಬ್ಯಾಂಕ್‌, ಕಲ್ಲಿದ್ದಲು ಗಣಿ, ಪೆಟ್ರೋಲ್ ಉತ್ಪನ್ನ, ವಿಮೆ... ಹೀಗೆ ಎಲ್ಲವನ್ನೂ ಸರ್ಕಾರದ ವಶಕ್ಕೆ ತಂದರು. ಪಕ್ಕಾ ಕಮ್ಯುನಿಸ್ಟರ ಮಾದರಿಯಲ್ಲಿ ಧಾನ್ಯಗಳ ವ್ಯಾಪಾರವನ್ನೂ ರಾಷ್ಟ್ರೀಕರಣಗೊಳಿಸಿದ್ದರು. ಆದರೆ, ಕೃಷಿ ಸಂಕಷ್ಟದ ದಿನಗಳಲ್ಲಿ ಆತಂಕಕ್ಕೆ ಒಳಗಾಗಿದ್ದರು. ಎಡ ಪಂಥದ ಕಡೆ ವಾಲಿದ್ದಕ್ಕೆ ಆ ಸಂದರ್ಭದಲ್ಲಿ ಮಾತ್ರ ಅವರು ತಮ್ಮ ಸ್ಥೈರ್ಯ ಕಳೆದು

ಕೊಂಡಿದ್ದರು.

ನಮ್ಮ ಸಂವಿಧಾನಕ್ಕೆ ಅವರು ಮಾಡಿದ ಹಾನಿ ಮಾತ್ರ ಶಾಶ್ವತವಾಗಿದೆ. ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದ’ ಮತ್ತು ‘ಧರ್ಮ ನಿರಪೇಕ್ಷತೆ’ ಶಬ್ದಗಳನ್ನು ಕಾನೂನುಬಾಹಿರವಾಗಿ ಸೇರ್ಪಡೆ ಮಾಡಿದ್ದರು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಸಂಸತ್ತಿನ ಕಾಲಾವಧಿಯನ್ನು 6ನೆ ವರ್ಷಕ್ಕೆ ವಿಸ್ತರಿಸಿದ ಸಂದರ್ಭದಲ್ಲಿ ಅವರು ಈ ಅಪಚಾರ ಎಸಗಿದ್ದರು.

1991ರಿಂದೀಚೆಗೆ ಭಾರತವು ಮಾರುಕಟ್ಟೆ ಆಧಾರಿತ ಆರ್ಥಿಕತೆಯ ಹಾದಿಯಲ್ಲಿ ಸಾಗುತ್ತಿದೆ. ಆದಾಗ್ಯೂ, ಯಾವುದೇ ಮುಖಂಡನು ನಮ್ಮ ಸಂವಿಧಾನವನ್ನು ಅಪವಿತ್ರಗೊಳಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಿಲ್ಲ. ಒಂದು ವೇಳೆ ಮುಂದೊಂದು ದಿನ ಬಿಜೆಪಿ ಸಂಸತ್ತಿನಲ್ಲಿ ಗರಿಷ್ಠ ಬಹುಮತದಿಂದ ಅಧಿಕಾರಕ್ಕೆ ಬಂದಾಗ, ಸಂವಿಧಾನದ ಮುನ್ನುಡಿಗೆ ತಿದ್ದುಪಡಿ ತಂದರೆ ಧರ್ಮನಿರಪೇಕ್ಷತೆ ಶಬ್ದವನ್ನು ಹೊಡೆದು ಹಾಕಬಹುದು. ಸಮಾಜವಾದ ಶಬ್ದ ಉಳಿಸಿಕೊಳ್ಳಬಹುದು.

ಈಗ ಸಮಕಾಲೀನ ರಾಜಕೀಯಕ್ಕೆ ಬರೋಣ. ಇಂದಿರಾ ಗಾಂಧಿ ಅವರ ಅತ್ಯಂತ ಕೆಟ್ಟ ಆರ್ಥಿಕ ನಿರ್ಧಾರವಾಗಿದ್ದ ಬ್ಯಾಂಕ್‌ಗಳ ರಾಷ್ಟ್ರೀಕರಣ ನಿರ್ಧಾರವನ್ನು ನಿರರ್ಥಕಗೊಳಿಸುವುದರ ಬದಲಿಗೆ, ಬಿಜೆಪಿ ನೇತೃತ್ವದಲ್ಲಿನ ಕೇಂದ್ರ ಸರ್ಕಾರವು, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಬಲಪಡಿಸಲು ₹ 2.11 ಲಕ್ಷ ಕೋಟಿಗಳಷ್ಟು ಬಂಡವಾಳ ನೆರವು ನೀಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಆರ್ಥಿಕ ನೀತಿಯು, ವಾಜಪೇಯಿ ಅವರಿಗಿಂತ ಇಂದಿರಾ ಗಾಂಧಿ ಅವರಿಂದ ಹೆಚ್ಚು ಪ್ರೇರಣೆ ಪಡೆದಿದೆ.

ರಾಜಕೀಯದ ವಿಷಯಕ್ಕೆ ಬಂದರೂ ಇಂತಹದ್ದೇ ಬೆಳವಣಿಗೆ ಕಂಡು ಬರುತ್ತಿದೆ. ಸಂಪೂರ್ಣ ರಾಜಕೀಯ ತತ್ವದಲ್ಲಿ ಇಂದಿರಾ ನಂಬಿಕೆ ಇರಿಸಿದ್ದರು. ಇಡೀ ಪ್ರತಿಪಕ್ಷವನ್ನು ಅವರ ಕಾಂಗ್ರೆಸ್‌ ಪಕ್ಷವು ತನ್ನ ವಶ ಮಾಡಿಕೊಂಡಿತ್ತು. ಪ್ರತಿಪಕ್ಷಗಳೆಲ್ಲ ನಾಶವಾಗಿದ್ದವು. ಜನಪ್ರಿಯತೆ, ಮೈತ್ರಿಕೂಟ, ಬಗ್ಗುಬಡಿಯುವ– ಸೆಳೆದುಕೊಳ್ಳುವ, ತಮ್ಮ ಗುರಿ ಸಾಧನೆಗೆ ಯಾವ ಮಾರ್ಗವನ್ನಾದರೂ ತುಳಿಯುವ ಮೂಲಕ ಮತ್ತು ಸಂವಿಧಾನದ 356ನೆ ಕಲಂ ಅನ್ನು ದುರ್ಬಳಕೆ ಮಾಡಿಕೊಂಡು ವಿರೋಧಿಗಳ ಸದ್ದು ಅಡಗಿಸಿದ್ದರು. ದೂಳಿನ ಬಗ್ಗೆ ಅವರಲ್ಲಿದ್ದ ನಿಕೃಷ್ಟ ಭಾವನೆಯನ್ನು ಪ್ರತಿಪಕ್ಷಗಳಿಗೂ ಅನ್ವಯಿಸಿದ್ದರು. ಪ್ರತಿಪಕ್ಷ ಮುಕ್ತ ಭಾರತ್‌ ನಿರ್ಮಾಣ ಮಾಡಬೇಕು ಎನ್ನುವುದು ಅವರ ಹೆಬ್ಬಯಕೆಯಾಗಿತ್ತು. ಈಗ ನರೇಂದ್ರ ಮೋದಿ ಅವರೂ ‘ಕಾಂಗ್ರೆಸ್‌ ಮುಕ್ತ ಭಾರತ್‌’ ಮಾಡಲು ಹೊರಟಿದ್ದಾರೆ. ಇಬ್ಬರ ಧೋರಣೆಯಲ್ಲಿ ಸಾಮ್ಯತೆ ಇರುವಂತೆ ಕಾಣುವುದಿಲ್ಲವೆ?

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)