ಸೋಮವಾರ, ಜೂಲೈ 13, 2020
29 °C

ಉನ್ನತ ಶಿಕ್ಷಣಕ್ಕೆ ಭವಿಷ್ಯ ದರ್ಶನ: ಸಾಧಕ-ಬಾಧಕಗಳು

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಕಳೆದ ಹತ್ತು ವರ್ಷಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಯಶಃ ಹಿಂದೆಂದೂ ಕಾಣದಂಥ ಬೆಳವಣಿಗೆಗಳನ್ನೂ ಬದಲಾವಣೆಗಳನ್ನೂ ಕರ್ನಾಟಕ ಕಂಡಿದ್ದು, ಈಗ ರಾಜ್ಯ ಜಾಗತಿಕ ಜ್ಞಾನ ಉದ್ದಿಮೆಯಲ್ಲಿ ಪ್ರಧಾನ ಸ್ಥಾನದಲ್ಲಿರುವುದು ಒಂದು ಮಹತ್ ಸಾಧನೆಯೇ ಸರಿ. ಈ ಶತಮಾನದ ಮೊದಲ ದಶಕದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯಲ್ಲಿ ಅಪಾರ ಪ್ರಮಾಣದ ಹೆಚ್ಚಳ ಉಂಟಾಗಿದ್ದು ಈ ಬೆಳವಣಿಗೆಯ ಒಂದು ಮುಖವಾದರೆ, ವಿಭಿನ್ನವೂ ವಿನೂತನವೂ ಆದ ಅಧ್ಯಯನ ವಿಷಯಗಳಲ್ಲಿ ಶಿಕ್ಷಣವನ್ನು ಪಡೆಯುವಂಥ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಅನೇಕ ಸಂಸ್ಥೆಗಳು ಒದಗಿಸಿದ್ದು ಈ ಅವಧಿಯಲ್ಲಿ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಕ್ಷೇತ್ರ ಕಂಡ ಮತ್ತೊಂದು ವಿಶೇಷವಾದಂಥ ಬೆಳವಣಿಗೆ.ಹೊಸ ಶತಮಾನದ ಮೊದಲನೆಯ ದಶಕದಲ್ಲಿ ಹೊಸದಾಗಿ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯಗಳು ಹಾಗೂ ವಿಶ್ವವಿದ್ಯಾಲಯಗಳಾಗಿ ಪರಿವರ್ತಿತವಾದ ಕಾಲೇಜುಗಳು ಇವುಗಳೆರಡನ್ನೂ ಸೇರಿಸಿದರೆ ಹತ್ತಕ್ಕೂ ಹೆಚ್ಚು ಸಾಮಾನ್ಯ ಅಥವಾ ವಿಶೇಷ ವಿಷಯಗಳಲ್ಲಿ ಶಿಕ್ಷಣ ನೀಡುವಂಥ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿದ್ದರೆ, ಇದೇ ಕಾಲಘಟ್ಟದಲ್ಲಿ ನೂರಕ್ಕೂ ಹೆಚ್ಚು ಕಾಲೇಜುಗಳು ರಾಜ್ಯದಲ್ಲಿ ಪ್ರಾರಂಭವಾಗಿವೆ. ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಕಾಲೇಜುಗಳನೇಕವು ಸ್ನಾತಕ ಕೋರ್ಸುಗಳನ್ನು ಪ್ರಾರಂಭ ಮಾಡಿದ್ದು ವಿಶ್ವವಿದ್ಯಾಲಯಗಳಿಗೆ ಮಾತ್ರ ಸೀಮಿತವಾಗಿದ್ದ ಸ್ನಾತಕ ಮಟ್ಟದ ಶಿಕ್ಷಣ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒದಗಿಸಲಾರಂಭಿಸಿದ್ದು ಕೂಡ ಈ ದಶಕದಲ್ಲಿಯೇ. ಒಟ್ಟಿನಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರ ಹಿಂದೆಂದೂ ಕಾಣದಂಥ ಬೆಳವಣಿಗೆಗಳನ್ನೂ ಪರಿವರ್ತನೆಗಳನ್ನೂ ಒಂದೇ ದಶಕದಲ್ಲಿ ಕಂಡಿದ್ದು, ಇಲ್ಲಿಂದ ನಾವು ಹೋಗುವುದೆಲ್ಲಿಗೆ ಎಂಬ ಪ್ರಶ್ನೆಯನ್ನು ಕೇಳಲು ಇದೀಗ ಸಮಯ ಸೂಕ್ತವಾಗಿದೆ.ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರ ಕಳೆದ ಒಂದು ದಶಕದಲ್ಲಿ ಬೆಳೆದು ಬಂದ ರೀತಿಯನ್ನು ವಿಶ್ಲೇಷಿಸಿದರೆ ಈ ಬೆಳವಣಿಗೆಯ ಸ್ವರೂಪ ಹೆಚ್ಚು ಕಡಿಮೆ ಸಂಖ್ಯಾತ್ಮಕ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಉನ್ನತ ಶಿಕ್ಷಣಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದ್ದಂತೆ ಅವರ ಅಗತ್ಯಗಳನ್ನು ಪೂರೈಸಲು ಹೊಸ ಹೊಸ ಕಾಲೇಜುಗಳು ಅಸ್ತಿತ್ವಕ್ಕೆ ಬರಬೇಕೆನ್ನುವುದು ನಿಜ. ಕಾಲೇಜುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹೊಸ ಹೊಸ ವಿಶ್ವವಿದ್ಯಾಲಯಗಳೂ ಕಾರ್ಯಾರಂಭ ಮಾಡಬೇಕೆನ್ನುವುದೂ ಸರಿಯೇ. ಆದರೆ ಈ ಹೆಚ್ಚಳ ಗುಣಾತ್ಮಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಜೊತೆಜೊತೆಗೆ ಶಿಕ್ಷಕರ ಬೋಧನಾ ಹಾಗೂ ಸಂಶೋಧನಾ ಸಾಮರ್ಥ್ಯಗಳನ್ನು ವೃದ್ಧಿಸುವಂಥ ಅವಕಾಶಗಳನ್ನು ಕಲ್ಪಿಸುವುದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕಿತ್ತು. ಆದರೆ ಅನೇಕ ಸಂದರ್ಭಗಳಲ್ಲಿ ಇಂಥ ಶಕ್ತಿಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗಾಗಲಿ, ಶಿಕ್ಷಕರಿಗಾಗಲಿ ಪೂರಕವಾದ ಶೈಕ್ಷಣಿಕ ಪರಿಸರ ಸೃಷ್ಟಿಯಾಗಲೇ ಇಲ್ಲ.ಕಳೆದ ದಶಕದಲ್ಲಿ ಹೊಸದಾಗಿ ಆರಂಭವಾದ ಬಹು ವಿಷಯಗಳಲ್ಲಿ ಶಿಕ್ಷಣವನ್ನು ಒದಗಿಸುತ್ತಿರುವ ಅಥವಾ ಏಕವಿಷಯ ಕೇಂದ್ರಿತ ವಿಶ್ವವಿದ್ಯಾಲಯಗಳನ್ನೇ ತೆಗೆದುಕೊಳ್ಳೋಣ. ಹೊಸ ವಿಶ್ವವಿದ್ಯಾಲಯವೊಂದನ್ನು ಪ್ರಾರಂಭಿಸಬೇಕೆಂದರೆ ಅದಕ್ಕೆ ಕನಿಷ್ಠ ಮಟ್ಟದ ಮೂಲ ಸೌಕರ್ಯಗಳು, ಅನುಭವಿ ಅಧ್ಯಾಪಕರು, ಪರಿಣಾಮಕಾರಿ ಕಲಿಕಾ ಬೋಧನಾ ಸಲಕರಣೆಗಳು, ಗುಣಮಟ್ಟದ ಗ್ರಂಥಾಲಯ ಹಾಗೂ ಸಾಕಷ್ಟು ಧನಸಹಾಯ  ಇವುಗಳನ್ನೆಲ್ಲಾ ಮೊದಲ ಹಂತದಲ್ಲೇ  ಒದಗಿಸುವುದಕ್ಕೆ ಪ್ರಥಮ ಆದ್ಯತೆಯನ್ನು ನೀಡಬೇಕಿತ್ತು. ಆದರೆ ಸೂಕ್ತ ಮೂಲಸೌಕರ್ಯಗಳನ್ನಾಗಲಿ, ಮಾನವ ಸಂಪನ್ಮೂಲವನ್ನಾಗಲಿ ಒದಗಿಸದೆ ಅಥವಾ ಕೆಲ ಸಂದರ್ಭಗಳಲ್ಲಿ ಒಂದು ನಿಶ್ಚಿತ ಸ್ಥಳವನ್ನೂ ನಿರ್ಧರಿಸದೆ, ಒಂದರ ನಂತರ ಮತ್ತೊಂದು ವಿಶ್ವವಿದ್ಯಾಲಯವನ್ನು ಪ್ರಾರಂಭಿಸುತ್ತಿರುವ ವೈಖರಿಯನ್ನು ನೋಡಿದರೆ ಶೈಕ್ಷಣಿಕ ಅಗತ್ಯಗಳ ಪೂರೈಕೆಗಿಂತ ರಾಜಕೀಯ ಅಥವಾ ಇತರ ಒತ್ತಡಗಳಿಗೆ ಅಧಿಕಾರಾರೂಢ ವ್ಯವಸ್ಥೆ ಮಣಿದಿರುವುದು ಸ್ಪಷ್ಟವಾಗುತ್ತದೆ.ಕರ್ನಾಟಕದಲ್ಲಿ 35ಕ್ಕಿಂತ ಹೆಚ್ಚಿರುವ (ಸರ್ಕಾರಿ, ಖಾಸಗಿ, ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದ, ಕೇಂದ್ರೀಯ) ವಿಶ್ವವಿದ್ಯಾಲಯಗಳ ಪಟ್ಟಿಗೆ ಇನ್ನೂ ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾಲಯಗಳು ಈಗಷ್ಟೇ ಆರಂಭವಾಗಿರುವ ದಶಕದಲ್ಲಿ ಸೇರ್ಪಡೆಯಾಗಲಿರುವ ಸೂಚನೆಗಳು ಈಗಾಗಲೇ ಹೊರಬಿದ್ದಿವೆ. 2020ರ ವೇಳೆಗೆ ಕರ್ನಾಟಕ ಸಾಧಿಸಬೇಕಾದ ಪ್ರಗತಿಯ ಪಥವನ್ನು ಸೂಚಿಸಲು ತಯಾರಾದ ‘ಭವಿಷ್ಯ ದರ್ಶನ’ ದಾಖಲೆಯಲ್ಲಿ ಅಡಕವಾಗಿರುವ ಸಲಹೆಯೆಂದರೆ ಪ್ರತಿ ಜಿಲ್ಲೆಗೂ ಒಂದೊಂದು ವಿಶ್ವವಿದ್ಯಾಲಯವಿರಬೇಕೆನ್ನುವುದು. ರಾಜ್ಯದಲ್ಲಿ ಉನ್ನತ ಶಿಕ್ಷಣದ ಬೆಳವಣಿಗೆಗೆ ಸಂಬಂಧಿಸಿದ ಭವಿಷ್ಯ ಕಾರ್ಯಸೂಚಿಯನ್ನು ರೂಪಿಸುವ ಜವಾಬ್ದಾರಿಯನ್ನು ಹೊತ್ತಿರುವ ಉನ್ನತ ಶಿಕ್ಷಣ ಪರಿಷತ್ತು ಒಂದು ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಕೇವಲ 100 ಕಾಲೇಜುಗಳಿಗೆ ಸೀಮಿತಗೊಳಿಸಬೇಕೆಂಬ ಸಲಹೆಯನ್ನೂ ನೀಡಿತ್ತು.ಈ ಲೆಕ್ಕದಲ್ಲೇನಾದರೂ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸ ಹೊರಟರೆ 700 ಕಾಲೇಜುಗಳನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಿಕೊಂಡಿರುವ ಬೆಂಗಳೂರು ವಿಶ್ವವಿದ್ಯಾಲಯವನ್ನು ಏಳು ಭಾಗಗಳಾಗಿ ವಿಭಜಿಸಬೇಕಾಗುತ್ತದೆ! ಏಳು ಭಾಗಗಳಿರಲಿ, ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಅಥವಾ ಎರಡು ವಿಶ್ವವಿದ್ಯಾಲಯಗಳಾಗಿ ಪರಿವರ್ತಿಸುವ ಪ್ರಸ್ತಾವನೆಗೆ ಒಳಗಿನಿಂದಲೇ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗುತ್ತಿದ್ದು, ನೂರಕ್ಕಿಂತ ಹೆಚ್ಚು ಕಾಲೇಜುಗಳಲ್ಲಿ ದಾಖಲಾತಿಯೇ ಇಲ್ಲದಿರುವುದರಿಂದ ಈ ವಿಭಜನೆ ಅರ್ಥಹೀನ ಎಂಬ ಭಿನ್ನ ಧ್ವನಿಗಳು ಪ್ರಬಲವಾಗಿಯೇ ಏಳುತ್ತಿವೆ.ದಾಖಲಾತಿಯ ವಿಚಾರ ಬಂದಾಗ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಏರಿಸುವುದರ ಬಗ್ಗೆ ನಡೆಯುತ್ತಿರುವ ಚಿಂತನೆಯನ್ನು ಉಲ್ಲೇಖಿಸಬೇಕಾಗಿರುತ್ತದೆ. ಇತ್ತೀಚೆಗಷ್ಟೇ ಉನ್ನತ ಶಿಕ್ಷಣ ಸಚಿವಾಲಯ ಮತ್ತು ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನಡುವೆ ಏರ್ಪಾಡಾಗಿದ್ದ ಸಭೆಯೊಂದರಲ್ಲಿ ರಾಜ್ಯದಲ್ಲಿ 2020ರ ವೇಳೆಗೆ ಈಗಿರುವ ಶೇಕಡ 11ರಿಂದ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳ ದಾಖಲಾತಿಯನ್ನು ಶೇಕಡ 25ರಿಂದ 30ರವರೆಗೆ ಹೆಚ್ಚಿಸಬೇಕು ಎಂಬ ಗುರಿಯನ್ನು ವಿಶ್ವವಿದ್ಯಾಲಯಗಳಿಗೆ ನಿಗದಿ ಪಡಿಸಲಾಯಿತು. ಎಲ್ಲ ಕೋರ್ಸುಗಳಲ್ಲೂ ಸೀಟು ಹೆಚ್ಚಳಕ್ಕೆ ಅವಕಾಶ ಮಾಡಿಕೊಡಬೇಕೆಂಬ ನಿರ್ದೇಶನ ಕೂಡ ಸರ್ಕಾರದಿಂದ ಹೊರಬಿದ್ದಿದೆ.ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶಿಕ್ಷಣದ ಸಾರ್ವತ್ರೀಕರಣ ಅನಿವಾರ್ಯವಷ್ಟೇ ಅಲ್ಲ, ಅಗತ್ಯವೂ ಹೌದು. ಪ್ರಜಾಪ್ರಭುತ್ವದ ಬುಡಗಳು ಗಟ್ಟಿಯಾಗಬೇಕಾದರೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಕಾರವಾಗಬೇಕಾದರೆ ಶಾಲಾ ಶಿಕ್ಷಣವನ್ನು ಮುಗಿಸಿದಂಥ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಾವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ ತೆರೆದುಕೊಳ್ಳುತ್ತಾ ಹೋಗಬೇಕೆನ್ನುವುದೂ ನಿಜ. ಆದರೆ ಕೇವಲ ಸಂಖ್ಯೆಗಳನ್ನು ಸ್ಫೋಟಿಸುವುದರತ್ತ ಗಮನವಿಟ್ಟು, ಗುಣಮಟ್ಟವನ್ನು ಗಾಳಿಗೆ ತೂರಿಬಿಟ್ಟರೆ ಭವಿಷ್ಯದಲ್ಲಿ ನಾವು ಸೃಷ್ಟಿಸಲಿರುವ ಮಾನವ ಸಂಪನ್ಮೂಲವಾದರೂ ಎಂತಹುದು ಎಂಬುದನ್ನೂ ಸಂಬಂಧಪಟ್ಟವರು ಯೋಚನೆ ಮಾಡಬೇಕಲ್ಲವೇ?ಹೋದ ದಶಕದಲ್ಲಿ, ಕರ್ನಾಟಕದ ಗ್ರಾಮೀಣ ವಿದ್ಯಾರ್ಥಿಗಳ ಬಾಗಿಲಿಗೆ ಉನ್ನತ ಶಿಕ್ಷಣವನ್ನು ತೆಗೆದುಕೊಂಡು ಹೋಗಬೇಕೆನ್ನುವ ಕಾರಣವನ್ನು ಮುಂದೊಡ್ಡಿ ಮೂಲೆಮೂಲೆಯಲ್ಲಿ ನೂರಕ್ಕಿಂತಲೂ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳನ್ನು ತೆರೆಯಲಾಯಿತು. ತೀವ್ರ ಸ್ವರೂಪದ ಸಾಮಾಜಿಕ  ಆರ್ಥಿಕ ಅಸಮಾನತೆಗಳಿಂದ ನರಳುತ್ತಿರುವ ಈ ಸಮಾಜದಲ್ಲಿ ಎಲ್ಲ ಉನ್ನತ ಶಿಕ್ಷಣಾಕಾಂಕ್ಷಿಗಳಿಗೂ ದೂರದ ಊರುಗಳಲ್ಲಿರುವ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲವೆನ್ನುವುದು ತಿಳಿದಿರುವ ವಿಚಾರವೇ. ಆದರೆ ‘ಬಡವರು’, ‘ಗ್ರಾಮೀಣ ಮಕ್ಕಳು’ ಎನ್ನುವ ಕಾರಣಕ್ಕಾಗಿ ಅವರಿಗೆ ಸಮರ್ಥ ಶಿಕ್ಷಣ ಪಡೆಯುವ ಅವಕಾಶ ತಪ್ಪಿಸಲು ನಮಗ್ಯಾವ ಹಕ್ಕಿದೆ?ಶಿಕ್ಷಣದ ಮೂಲ ಉದ್ದೇಶವೇ ಸಾಮಾಜಿಕ ಅಸಮತೆಯನ್ನು ಎದುರಿಸಿ ಸಮಾನತೆಯ ತತ್ವಕ್ಕೆ ಬದ್ಧವಾದ ಸಮಾಜದ ಸೃಷ್ಟಿ. ಆದರೆ ಈಗ ಬಹಳೆಡೆಗಳಲ್ಲಿ ನಾವು ಕಾಣುತ್ತಿರುವುದು ಶಿಕ್ಷಣದಿಂದಲೇ ಪ್ರೇರಿತವಾದ ಅಸಮಾನತೆ ಹಾಗೂ ಜೀವನವಿಡೀ ಈ ಅಸಮಾನತೆ ಸೃಷ್ಟಿಸಿದ ಅನಾನುಕೂಲಗಳ ಭಾರವನ್ನು ಹೊತ್ತು ಬದುಕನ್ನು ಸವೆಸಬೇಕಾದ ಯುವಜನತೆ. ಆದುದರಿಂದ ಸೀಟು ಹೆಚ್ಚಳ ಅಥವಾ ಹೊಸ ಸಂಸ್ಥೆಗಳ ಪ್ರಾರಂಭ ಇವೆರಡು ಕ್ರಮಗಳನ್ನೂ ಕೈಗೊಳ್ಳುವ ಮೊದಲು ಉನ್ನತ ಶಿಕ್ಷಣದ ಭವಿಷ್ಯವನ್ನು ರೂಪಿಸಹೊರಟಿರುವ ಶಕ್ತಿಗಳು ಈಗಾಗಲೇ ಆಗಿ ಹೋಗಿರುವ ಬೆಳವಣಿಗೆಯ ಸಾಧಕ-ಬಾಧಕಗಳನ್ನು ನಿಷ್ಪಕ್ಷಪಾತವಾಗಿ ವಿಮರ್ಶೆ ಮಾಡಿದರೆ ಒಳಿತು.ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಅಧ್ಯಾಪಕರ ನೇಮಕಾತಿಯನ್ನು ನಿರ್ಧರಿಸುವ ನಿಯಮಗಳು ಹೆಚ್ಚು ಹೆಚ್ಚು ಬಿಗಿಯಾಗುತ್ತಿವೆ. ವಿಶ್ವವಿದ್ಯಾಲಯ ಅನುದಾನ ಆಯೋಗ ನಡೆಸುವ ಅರ್ಹತಾ ಪರೀಕ್ಷೆಗಳಲ್ಲಿ ಕೆಲ ಅಧ್ಯಯನ ವಿಷಯಗಳಲ್ಲಂತೂ ನಮ್ಮ ರಾಜ್ಯದ ಪ್ರಾತಿನಿಧ್ಯ ಅಸಮಾಧಾನಕರವಾಗಿದ್ದು ಇನ್ನು ಮುಂದಾದರೂ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಲ್ಲಿ ಕರ್ನಾಟಕದ ಯಶಸ್ಸಿನ ಪಾಲನ್ನು ವೃದ್ಧಿಸುವಂಥ ಕ್ರಮಗಳನ್ನು ಕೈಗೊಳ್ಳುವತ್ತ ಗಮನ ಹರಿಸಬೇಕು. ನಮ್ಮ ಸಂಪೂರ್ಣ ಗಮನ ಭವಿಷ್ಯದಲ್ಲಿ ಸಮರ್ಥ ಅಧ್ಯಾಪಕರು ಹಾಗೂ ಜ್ಞಾನ ಸಂಪತ್ತನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಪಡೆದ ವಿದ್ಯಾರ್ಥಿ ಸಮುದಾಯವನ್ನು ತಯಾರು ಮಾಡುವುದರತ್ತ ಹರಿಯಬೇಕೇ ಹೊರತು, ಅರ್ಹತೆಗಳನ್ನು ಕೇವಲ ಅಂಕಪಟ್ಟಿಗಳಿಂದ ಅಳೆಯುವ ಹಾಗೂ ಹತ್ತು ಹಲವಾರು ವರ್ಷಗಳ ಕಾಲ ಅತಿಥಿ ಅಥವಾ ಹಂಗಾಮಿ ಉಪನ್ಯಾಸಕರಾಗಿ ಜೀವನ ಸವೆಸುವಂಥ ಪರಿಸ್ಥಿತಿಗೆ ಪದವೀಧರರ ಗುಂಪುಗಳನ್ನು ತಳ್ಳುವಂಥ ವ್ಯವಸ್ಥೆಯನ್ನು ಪೋಷಿಸುವುದರತ್ತಲಲ್ಲ.ಬರಲಿರುವ ದಶಕದಲ್ಲಿ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯ ಮುಂದಿರುವ ಮತ್ತೆರಡು ಬಹು ದೊಡ್ಡ ಸವಾಲುಗಳೆಂದರೆ ಸಂಪನ್ಮೂಲಗಳ ಹಂಚಿಕೆ ಹಾಗೂ ಬಳಕೆಯ ವಿಚಾರದಲ್ಲಿ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳ ನಡುವಣ ಅಂತರವನ್ನು ಕಡಿಮೆ ಮಾಡುವುದು, ಹಾಗೂ ಪ್ರತಿಷ್ಠಿತ ಎಂಬ ನಾಮಫಲಕವನ್ನು ಹೊತ್ತಿರುವ ಸಂಸ್ಥೆಗಳಿಗೆ ಅಧಿಕ ಪ್ರಮಾಣದಲ್ಲಿ ಹಣಕಾಸು ಸಂಪನ್ಮೂಲಗಳನ್ನು ಒದಗಿಸಿ, ಇನ್ನುಳಿದ ಸಂಸ್ಥೆಗಳಿಗೆ ಅಭಿವೃದ್ಧಿ ವೆಚ್ಚಕ್ಕೆ ಕಡಿಮೆ ಪ್ರಮಾಣದ ಆರ್ಥಿಕ ನೆರವನ್ನು ಒದಗಿಸುತ್ತಿರುವಂಥ ವ್ಯವಸ್ಥೆಯನ್ನು ಸರಿಪಡಿಸುವುದು. ಎಲ್ಲೋ ಒಂದೆಡೆ ಶಿಕ್ಷಣ ಸಂಸ್ಥೆಗಳ ನಡುವಣ ಈ ತಾರತಮ್ಯವೇ ಸಮಾಜದ ಅಂಚಿನಲ್ಲಿರುವ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿರುವುದು. ಅಪಾರ ಸಾಧನೆಮಾಡಿರುವ ಸಂಸ್ಥೆಗಳ ಮಟ್ಟಕ್ಕೆ ಎಲ್ಲ ಸಂಸ್ಥೆಗಳನ್ನು ಏರಿಸುವುದು ಮುಂದಿನ ಹತ್ತು ಇಪ್ಪತ್ತು ವರ್ಷಗಳಲ್ಲೇ  ಸಾಧ್ಯವಾಗದಿದ್ದರೂ ಈಗ ಕಾರ್ಯನಿರತವಾಗಿರುವ ಅನೇಕ ಸಂಸ್ಥೆಗಳಲ್ಲಿ ಶೈಕ್ಷಣಿಕ ಸಾಧನೆಗೆ ಪೂರಕವಾದಂಥ ವಾತಾವರಣ ನಿರ್ಮಿಸುವುದು ಅಗತ್ಯವಾಗಿ ಆಗಲೇಬೇಕಾದಂಥ ಕೆಲಸ.ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರುವ ಉದ್ದೇಶದಿಂದ ಜಾರಿಯಲ್ಲಿರುವ ವ್ಯವಸ್ಧೆಯಲ್ಲಿ ಕೆಲ ಮೂಲಭೂತ ಬದಲಾವಣೆಗಳನ್ನು ತರಲು ಸರ್ಕಾರ ಯೋಚಿಸುತ್ತಿರುವುದು ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ. ಆದರೆ ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸುವಾಗ ಹೊಸ-ಹೊಸ ಸಂಸ್ಧೆಗಳ ಸ್ಧಾಪನೆ, ಸಮಿತಿಗಳ ರಚನೆ ಅಥವಾ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳ ಇಂಥ ಗುರಿಗಳನ್ನು ಸ್ವಲ್ಪ ಬದಿಗಿಟ್ಟು, ಈಗಾಗಲೇ ಆಗಿ ಹೋಗಿರುವ ಬೆಳವಣಿಗೆಗಳಲ್ಲಿ ಪುನರಾವರ್ತಿಸಬಹುದಾದಂಥವು ಯಾವುವು, ಪರಿವರ್ತಿಸಬೇಕಾದವು ಯಾವುವು ಹಾಗೂ ಸಂಪೂರ್ಣವಾಗಿ ತ್ಯಜಿಸಬೇಕಾದವು ಯಾವುವು ಎಂಬುದನ್ನು ಕುರಿತಂತೆ ವಿಮರ್ಶಾತ್ಮಕ ಅಧ್ಯಯನಗಳನ್ನು ಕೈಗೊಂಡರೆ ಭವಿಷ್ಯದಲ್ಲಿ ನಾವು ಅರ್ಥಪೂರ್ಣ ಬದಲಾವಣೆಗಳನ್ನು ಎದುರು ನೋಡಬಹುದೇನೋ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.