ಬುಧವಾರ, ಜೂನ್ 23, 2021
29 °C

ಒಳಗಿರುವ ವಿಶೇಷ ಶಕ್ತಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನಮ್ಮಲ್ಲಿ ಪ್ರತಿಯೊಬ್ಬರಿಗೂ ಪ್ರಪಂಚದ ಲಕ್ಷಾಂತರ ಜನಕ್ಕೆ ಇಲ್ಲದಿರುವ ವಿಶೇಷ ಗುಣ ಇದ್ದೇ ಇರುತ್ತದೆ. ದುರ್ದೈವವೆಂದರೆ ಅದು ಯಾವುದು ಎಂಬುದು ತಿಳಿಯದೇ ಹೋಗಬಹುದು. ನಾವು ಪ್ರಯತ್ನ ಮಾಡಿ ನಮ್ಮ ವಿಶೇಷ ಗುಣವನ್ನು ಅರಿತುಕೊಂಡು ಅದನ್ನು ಬೆಳೆಸುವತ್ತ ಶ್ರಮಪಟ್ಟರೆ ಯಶಸ್ಸು ಖಂಡಿತವಾಗಿಯೂ ದೊರಕುತ್ತದೆ. ಕೆಲವೊಮ್ಮೆ ಅದು ನಮಗೆ ಅರಿವಿಲ್ಲದಂತೆ ಆಕಸ್ಮಿಕವಾಗಿ ಹೊರಬಂದುಬಿಡುತ್ತದೆ. ಈ ತರಹದ ಶಕ್ತಿ ನನಗಿತ್ತೇ ಎಂದು ಆಶ್ಚರ್ಯಪಡುವಂತೆ ಆಗುತ್ತದೆ. ಪ್ರಪಂಚದಲ್ಲಿ ಸಾಕಷ್ಟು ಜನರಿಗೆ ಹೀಗೆ ಅವರ ಶಕ್ತಿಯ ಅರಿವಾದದ್ದು ಆಕಸ್ಮಿಕವಾಗಿಯೇ.

ಅಡಾಲ್ಫ್ ಹಿಟ್ಲರ್ ತಾನು ವಾಸ್ತುಶಿಲ್ಪಿಯಾಗಬೇಕೆಂದು ಬಯಸಿದ್ದ. ತಾನು ಬಹಳ ಅಂತರ್ಮುಖಿ, ಹೆಚ್ಚು ಜನರೊಂದಿಗೆ ಸ್ನೇಹ ಬೆಳೆಸಲಾರೆ ಎಂದುಕೊಂಡಿದ್ದ. ವಾಸ್ತುಶಿಲ್ಪಿಯಾಗಬೇಕೆಂದು ಹಟ ತೊಟ್ಟು ಅನೇಕ ಕಟ್ಟಡಗಳ ನಕ್ಷೆಗಳನ್ನೂ, ನೀಲಿಪ್ರಿಂಟ್‌ಗಳನ್ನೂ  ತೆಗೆಯುತ್ತಿದ್ದ. ಸದಾ ಅದರದೇ ಧ್ಯಾನ ಅವನಿಗೆ. ಆಗ ಮೊದಲನೇ ಮಹಾಯುದ್ಧದ ಕಾಲ. ಜರ್ಮನಿ ಜಗತ್ತಿನ ರಾಜಕಾರಣದಲ್ಲಿ ತನ್ನ ಕಾಲನ್ನು ಆಗ ತಾನೇ ಊರಿ ನಿಲ್ಲಲು ಪ್ರಯತ್ನಿಸುತ್ತಿದ್ದ ದಿನಗಳು. ರಾಜಕಾರಣದ ಚರ್ಚೆಗಳು ಜನರಲ್ಲಿ ಬಹುವಾಗಿ ನಡೆಯುತ್ತಿದ್ದವು. ರಸ್ತೆ ರಸ್ತೆಗಳಲ್ಲಿ ಜನ ಗುಂಪು ಸೇರಿ ಈ ರಾಜಕಾರಣವನ್ನು ಚರ್ಚಿಸುತ್ತಿದ್ದರು. ಆಗ ಅನೇಕ ನಾಯಕರು ಅಲ್ಲಿಗೆ ಬಂದು ಪ್ರಪಂಚದ ರಾಜಕಾರಣದ ಚಿತ್ರಣವನ್ನು ನೀಡುತ್ತಿದ್ದರು.

ಕುತೂಹಲದಿಂದ ಹಿಟ್ಲರ್ ಕೂಡ ಈ ಸಭೆಗಳಿಗೆ ಹೋಗಿ ಅವರ ಮಾತುಗಳನ್ನು ಕೇಳುತ್ತಿದ್ದ. ಆ ಭಾಷಣಗಳಿಗೆ ಹೋಗುವಾಗಲೂ ಅವನ ಕೈಯಲ್ಲಿ ಡ್ರಾಯಿಂಗ್ ಬೋರ್ಡ್ ಮತ್ತು ಪೆನ್ಸಿಲ್‌ಗಳು ಇರುತ್ತಿದ್ದವಂತೆ. ಆತ ನಾಯಕರು ಹೇಳಿದ್ದನ್ನು ಏಕಚಿತ್ತದಿಂದ ಅಲಿಸುತ್ತಿದ್ದ. ಅವನು ವೆನಿಸ್ ನಗರದಲ್ಲಿದ್ದ ಪ್ರಖ್ಯಾತ ವಾಸ್ತುಶಿಲ್ಪ ಕಾಲೇಜಿಗೆ ಪ್ರವೇಶವನ್ನು ಕೋರಿ ಅರ್ಜಿ ಸಲ್ಲಿಸಿದ್ದ. ಹೇಗಾದರೂ ಮಾಡಿ ಪ್ರವೇಶ ಪಡೆಯಲೇಬೇಕೆಂದು ಹಂಬಲಿಸುತ್ತಿದ್ದ. ಆದರೆ ದುರ್ದೈವದಿಂದ ಅವನ ಅರ್ಜಿಯನ್ನು ನಿರಾಕರಿಸಲಾಯಿತು. ಅವನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಆಗ ಆತನ ಮನಸ್ಸು ನಿಧಾನವಾಗಿ ವಾಸ್ತುಶಿಲ್ಪದಿಂದ ರಾಜಕಾರಣದ ಕಡೆಗೆ ತಿರುಗಿತು. ಮನೆಯಲ್ಲಿ ಆತ ತಾನು ಚಿಂತಿಸಿದ್ದನ್ನು ಮಾತನಾಡಲು ಪ್ರಾರಂಭಿಸಿದ. ಪರವಾಗಿಲ್ಲ, ತಾನು ಚೆನ್ನಾಗಿ ಮಾತನಾಡಬಲ್ಲೆ ಎನ್ನಿಸಿತು. ತನ್ನ ಮಾತುಗಳಿಗೆ ಚಿಂತನೆಯ ಆಳವನ್ನು ತರಲು ಪ್ರಯತ್ನಿಸಿದ.

ಒಂದು ದಿನ ಐದು ಸಾವಿರ ಜನ ಬೀರ್‌ಹಾಲ್‌ನಲ್ಲಿ ನೆರೆದಿದ್ದಾರೆ. ರಾಜಕೀಯ ನಾಯಕರು ಒಬ್ಬೊಬ್ಬರಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು. ಇನ್ನೊಬ್ಬ ನಾಯಕ ಈ ಕಾರ್ಯಕ್ರಮಕ್ಕೆ ಬರಬೇಕಾದವರು, ಯಾವುದೋ ಕಾರಣದಿಂದ ಬರಲಾಗಲಿಲ್ಲ. ಆಗ ಹಿಟ್ಲರ್ ತಾನು ಅವರ ಬದಲು ಮಾತನಾಡಬಹುದೇ ಎಂದು ಕೇಳಿದ. ಅವರಿಗೂ ಒಂದು ಸ್ಥಾನ ತುಂಬಬೇಕಿತ್ತಲ್ಲವೇ? ಸರಿ ಕೇವಲ ಹತ್ತು ನಿಮಿಷ ಮಾತನಾಡು ಎಂದು ಕಳುಹಿಸಿದರು. ಈತ ವೇದಿಕೆಯ ಮೇಲೆ ಹೋಗಿ ಭಾಷಣ ಪ್ರಾರಂಭಿಸಿದ. ಅವನ ಮಾತಿನ ಮೋಡಿಗೆ ತಾನೇ ಬೆರಗಾದ! ತಾನು ಇಷ್ಟು ಚೆನ್ನಾಗಿ ಮಾತನಾಡಬಲ್ಲೆನೇ ಎಂದು ಆಶ್ಚರ್ಯಪಟ್ಟ. ಮಾತು ಮುಂದುವರೆಸಿದ. ಸುಮಾರು ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ. ಅವನ ಮಾತಿನ ಪ್ರಖರತೆ, ಭಾಷೆಯ ಓಘ ..., ಚಿಂತನೆಯ ಆಳ ಮುಂದೆ ಕುಳಿತಿದ್ದ ಹಿರಿಯ ನಾಯಕರನ್ನು ಬೆರಗುಗೊಳಿಸಿತ್ತು. ಅವನ ಮಾತು ಮುಗಿಯುವುದರೊಳಗಾಗಿ ಅನಾಮಿಕನಾಗಿದ್ದ ಅಡಾಲ್ಫ್ ಹಿಟ್ಲರ್ ಜರ್ಮನಿಯ ನಾಯಕನಾಗಿದ್ದ. ಹಿರಿಯ ನಾಯಕರು ಕೂಡ ಈತನೇ ನಮ್ಮ ದೇಶದ ಭವಿಷ್ಯ ಎಂದು ಒಪ್ಪಿಕೊಂಡರು. ಹಿಟ್ಲರ್ ನಂತರ ಹಿಂದಿರುಗಿ ನೋಡಲಿಲ್ಲ.

ಹಿಟ್ಲರ್‌ನಿಗೆ ತಾನೊಬ್ಬ ಅದ್ಭುತ ಮಾತುಗಾರ ಎಂದು ಆಕಸ್ಮಿಕವಾಗಿ ಗೊತ್ತಾದ ಹಾಗೆ ನಮ್ಮಲ್ಲಿರುವ ವಿಜ್ಞಾನಿಯೋ, ಕಲಾಕಾರನೋ, ಕವಿಯೋ, ಲೇಖಕನೋ, ನೃತ್ಯಪಟುವೋ, ತಂತ್ರಜ್ಞಾನಿಯೋ, ಕೃಷಿಕನೋ ಎಂದು ಒಮ್ಮೆ ಥಟ್ಟನೇ ಹೊರಬಂದುಬಿಡಬಹುದು. ಹಾಗೆ ಆಕಸ್ಮಿಕಕ್ಕೆ ಕಾಯುವ ಬದಲು ನಮ್ಮಲ್ಲಿರುವ ವಿಶೇಷತೆಯನ್ನು ಗುರುತಿಸಲು ಸತತ ಪ್ರಯತ್ನ ಮಾಡುವುದು ಒಳ್ಳೆಯದು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.