ಬುಧವಾರ, ಮೇ 12, 2021
24 °C

ಒಳ್ಳೆಯದನ್ನೇ ಗುರುತಿಸುವ ಬಗೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

 ಈ ಮನಶಾಸ್ತ್ರದ ಅಧ್ಯಾಪಕರು ಬಹಳ ಪ್ರಸಿದ್ಧರಾದವರು, ಜನಪ್ರಿಯರು. ಅವರು ಕಲಿಸುವ ರೀತಿ ಎಷ್ಟು ಸುಂದರವಾಗಿತ್ತೆಂದರೆ ವಿದ್ಯಾರ್ಥಿಗಳು ಅವರ ತರಗತಿಗಳನ್ನು ತಪ್ಪಿಸಿಕೊಳ್ಳದಿರುವುದು ಮಾತ್ರವಲ್ಲ. ಹೆಚ್ಚಿನ ತರಗತಿಗಳನ್ನು ತೆಗೆದುಕೊಳ್ಳಲು ಒತ್ತಾಯಿಸುತ್ತಿದ್ದರು.ಒಂದು ದಿನ ಅಧ್ಯಾಪಕರು ತರಗತಿಗೆ ಬಂದರು. ತರಗತಿ ಭರ್ತಿಯಾಗಿದೆ. ಅಧ್ಯಾಪಕರು ಒಂದೂ ಮಾತನಾಡದೇ ವೇದಿಕೆಯನ್ನೇರಿದರು, ಒಂದು ದೊಡ್ಡ ಹಾಳೆಯನ್ನು ಬೋರ್ಡಿಗೆ ಅಂಟಿಸಿದರು. ನಂತರ ಒಂದು ಪೆನ್ಸಿಲ್ಲಿನಿಂದ ಹಾಳೆಯ ಮಧ್ಯದಲ್ಲಿ ಪುಟ್ಟದಾದ ವೃತ್ತವನ್ನು ಬರೆದರು. ಆ ವೃತ್ತದಲ್ಲಿ ಕಪ್ಪು ಬಣ್ಣವನ್ನು ತುಂಬಿದರು. ವಿದ್ಯಾರ್ಥಿಗಳು ಗಮನಿಸುತ್ತಲೇ ಇದ್ದರು. ಇದು ಯಾವ ಪ್ರಯೋಗ ಎಂಬ ಕುತೂಹಲ ಅವರಿಗೆ. ಇದೆಲ್ಲ ಮುಗಿದ ಮೇಲೆ ವಿದ್ಯಾರ್ಥಿಗಳತ್ತ ತಿರುಗಿ ಗಂಭೀರವಾಗಿ ಕೇಳಿದರು,  ಈಗ ದಯವಿಟ್ಟು ತಾವೆಲ್ಲ ಗಮನಿಸಿ ನೋಡಿ ಹೇಳಿ, ಕಾಗದದ ಮೇಲೆ ಏನಿದೆ?  ಒಂದು ಕಪ್ಪು ಚುಕ್ಕೆ ಇದೆ ಸರ್  ಎಂದು ಹೇಳಿದ ಒಬ್ಬ ಹುಡುಗ. ಒಂದು ಕಪ್ಪು ಬಣ್ಣದ ವೃತ್ತವಿದೆ ಮತ್ತೊಬ್ಬ ನುಡಿದ.  ಒಂದು ಪುಟ್ಟ ವೃತ್ತದಲ್ಲಿ ಕಪ್ಪು ಬಣ್ಣವನ್ನು ತುಂಬಲಾಗಿದೆ ಹುಡುಗಿ ನುಡಿದಳು. ತಕ್ಷಣವೇ ಕಣ್ಣಿಗೆ ಹೊಡೆಯುವಷ್ಟು ಕಪ್ಪು ಬಣ್ಣದ ಗುರುತು ಇದೆ.ಗುರುಗಳು ತರಗತಿಯನ್ನು ಗಮನಿಸುತ್ತಲೇ ಇದ್ದರು. ಇನ್ನೂ ಒಂದಾದ ಮೇಲೊಂದು ಅಭಿಪ್ರಾಯಗಳು ಬರುತ್ತಲೇ ಇದ್ದವು. ಪ್ರಾಧ್ಯಾಪಕರು ಇಷ್ಟೊಂದು ಗಂಭೀರವಾಗಿ ಪ್ರಶ್ನೆಯನ್ನು ಕೇಳಿರುವುದರಿಂದ ಉತ್ತರ ಬಹಳ ಎತ್ತರದ ಮಟ್ಟದ್ದಾಗಿರಬೇಕೆಂದುಕೊಂಡು ವಿದ್ಯಾರ್ಥಿಗಳು ಇನ್ನೂ ಆಳವಾಗಿ ಚಿಂತಿಸಿ ಉತ್ತರ ಕೊಡತೊಡಗಿದರು. ಕಪ್ಪು ಇನ್ನಷ್ಟು ಕಡುವಾಗಬೇಕಿತ್ತು  ಕಪ್ಪು ಚುಕ್ಕೆ ಇನ್ನಷ್ಟು ದೊಡ್ಡದಾಗಿದ್ದರೆ ಕಾಗದದ ಗಾತ್ರಕ್ಕೆ ಹೊಂದುತ್ತಿತ್ತು . ಕಪ್ಪು ಚುಕ್ಕೆ ಸರಿಯಗಿ ಮಧ್ಯದಲ್ಲಿಲ್ಲ. ಇನ್ನಷ್ಟು ಬಲಭಾಗಕ್ಕೆ ಬಂದು ಸ್ವಲ್ಪ ಮೇಲೆ ಸರಿದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು . ಛೇ, ಛೇ, ಅದು ಮಧ್ಯದಲ್ಲೇ ಇದೆ. ಆದರೆ ಸ್ವಲ್ಪ ಚಿಕ್ಕದಾಗಿದ್ದರೆ ಇನ್ನಷ್ಟು ಕುತೂಹಲವನ್ನು ಕೆರಳಿಸುವಂತೆ ಆಕರ್ಷಕವಾಗಿರುತ್ತಿತ್ತು .ಉತ್ತರಗಳ ಪ್ರವಾಹ ಹರಿದುಬರುತ್ತಿತ್ತು. ಆಗ ಅಧ್ಯಾಪಕರು ಮುಗುಳ್ನಕ್ಕು,  ನನ್ನ ಪ್ರಶ್ನೆಯನ್ನು ಸರಿಯಾಗಿ ಕೇಳಿಸಿಕೊಂಡಿದ್ದೀರಾ? ನಾನು ಕೇಳಿದ್ದು ಕಾಗದದ ಮೇಲೆ ಏನಿದೆ ಎಂದು. ಎಲ್ಲರೂ ಕಪ್ಪು ಚುಕ್ಕೆಯ ಬಗ್ಗೆಯೇ ಮತನಾಡುತ್ತಿದ್ದೀರಿ. ಕಾಗದದ ತುಂಬೆಲ್ಲ ಹರಡಿಕೊಂಡಿದ್ದ ಅಷ್ಟೊಂದು ಬಿಳೀ ಬಣ್ಣ ಕಾಣಲಿಲ್ಲವೇ? ಅಷ್ಟು ವಿಸ್ತಾರವಾಗಿ ಕಾಗದದ ತುಂಬ ಇದ್ದ ಬಿಳೀ ಬಣ್ಣ ಕಾಣದೇ ಅಷ್ಟೂ ಪುಟ್ಟದಾಗಿದ್ದ ಕಪ್ಪು ಚುಕ್ಕೆ ಮಾತ್ರ ಕಂಡದ್ದು ಏಕೆ?   ಬಿಳೀ ಬಣ್ಣದ ಮಧ್ಯೆ ಇದ್ದ ಕಪ್ಪು ಚುಕ್ಕೆ ನಮ್ಮ ಗಮನ ಸೆಳೆಯುತ್ತದೆ  ಎಂದ ವಿದ್ಯಾರ್ಥಿಯೊಬ್ಬ. ಇಲ್ಲಪ್ಪ, ಅದು ಗಮನ ಸೆಳೆಯುವುದಕ್ಕಿಂತ ಹೆಚ್ಚಾಗಿ ನಾವು ಕಪ್ಪು ಚುಕ್ಕೆಯನ್ನೇ ನೋಡುವ ಅಭ್ಯಾಸ ಮಾಡಿಕೊಂಡಿದ್ದೇವೆ. ನಿಮ್ಮ ಸುತ್ತಮುತ್ತ ಸಮಾಜದಲ್ಲಿರುವ ಬಹುತೇಕ ಜನರು ಇದೇ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ಬರೀ ದೋಷಗಳನ್ನೇ ನೋಡುತ್ತಾರೆ, ಕೊರತೆಗಳನ್ನೇ ಗಮನಿಸುತ್ತಾರೆ, ಮಾಡಿದ ಕೆಲಸಗಳಲ್ಲಿ ಅಪರಿಪೂರ್ಣವಾದದ್ದನ್ನೇ ಎತ್ತಿ ಆಡುತ್ತಾರೆ, ದೊಡ್ಡ ವ್ಯವಸ್ಥೆಯಲ್ಲಿ ತೊಂಭತ್ತೊಂಭತ್ತು ಭಾಗ ಸರಿಯಿದ್ದರೂ ಸರಿ ಇಲ್ಲದ ಒಂದು ಭಾಗವನ್ನೇ ಎತ್ತಿ ಹಿಡಿದು ದೊಡ್ಡದನ್ನಾಗಿ ಮಾಡುತ್ತಾರೆ. ಪರಿಪೂರ್ಣತೆಯನ್ನು ಅಪೇಕ್ಷಿಸುವುದು ಸರಿ. ಆದರೆ ಬರೀ ದೋಷಗಳನ್ನೇ ಗಮನಿಸುವ ಪ್ರವೃತ್ತಿ ನಮ್ಮನ್ನು ಋಣಾತ್ಮಕವಾಗಿ ಮಾಡುತ್ತದೆ, ಒಳ್ಳೆಯದನ್ನು ನೋಡುವ, ಗುರುತಿಸುವ, ಮೆಚ್ಚುವ ಸ್ವಭಾವವೇ ಮರೆಯಾಗಿ ಬಿಡುತ್ತದೆ. ಇದು ಸಂಸಾರದ, ಸಮಾಜದ, ದೇಶದ ಆರೋಗ್ಯಕ್ಕೆ ಒಳ್ಳೆಯದಲ್ಲ  ಎಂದರು ಪ್ರಾಧ್ಯಾಪಕರು.ಇದನ್ನೇ ಡಿ.ವಿ.ಜಿ. ಹೇಳುತ್ತಿದ್ದರುಬರದಿಹುದರೆಣೆಕೆಯಲಿ ಬಂದಿಹುದ ಮರೆಯದಿರು!

ಗುರುತಿಸು ಒಳಿತಿರುವುದನು ಕೇಡುಗಳ ಮಧ್ಯೆ!

ಬಂದಭಾಗ್ಯವ ನೆನೆ, ಬಾರೆನೆಂಬುದನು ಬಿಡು!

ಹರುಷಕದೆ ದಾರಿಯೆಲೋ ಮಂಕು ತಿಮ್ಮ!ರಾಶಿ ಒಳ್ಳೆಯದರ ನಡುವೆ ಇದ್ದ ಪುಟ್ಟ ಕೆಡಕನ್ನೇ ನೋಡಿ ಮನಸ್ಸನ್ನು ಕಹಿಮಾಡಿಕೊಳ್ಳುವುದಕ್ಕಿಂತ, ರಾಶಿ ಕೆಡಕುಗಳ ನಡುವೆ ಹುದುಗಿದ್ದ ಒಂದು ಒಳ್ಳೆಯದನ್ನು ನೋಡಿ ಮನಸ್ಸನ್ನು ಮುದಗೊಳಿಸಿಕೊಳ್ಳುವ ಪ್ರಯತ್ನ ಪ್ರಯೋಜನಕಾರಿಯಾದದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.