ಶುಕ್ರವಾರ, ಜೂನ್ 18, 2021
22 °C

ಕಂಡ ದೃಶ್ಯದ ಹಿಂದಿನ ಸತ್ಯ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಬೇಸಿಗೆಯ ರಜೆ ಬಂದಿತಲ್ಲ ಎಂದು ತಾಯಿ ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಬಂದರು.  ಮಕ್ಕಳಿಗೆ ಮುಂಬೈ ತೋರಿಸಿದ್ದಾಯಿತು.ಒಂದು ಸಂಜೆ ಅಮ್ಮ ಮಕ್ಕಳನ್ನು ಕರೆದುಕೊಂಡು ಚೌಪಾಟಿ ಸಮುದ್ರ ತೀರಕ್ಕೆ ಬಂದರು.  ಮಕ್ಕಳಿಗೆ ತಿನ್ನಲು ಚಾಟ್ ಕೊಡಿಸಿದರು.  ನಂತರ ಮಕ್ಕಳು ಸಮುದ್ರ ತೀರದ ಮರಳ ಮೇಲೆ ಓಡಾಡುತ್ತ ಆಟವಾಡುತ್ತಿದ್ದರು. ತಾಯಿ ದೂರದಲ್ಲಿ ಕುಳಿತುಕೊಂಡು ಅವರನ್ನೇ ನೋಡುತ್ತಿದ್ದರು.ಆಗ ಅಲ್ಲಿಯೇ ಗಲಾಟೆಯಾದಂತೆ ಕಂಡಿತು.  ಅಲ್ಲೆಲ್ಲ ಆಟವಾಡುತ್ತಿದ್ದ ಬೇರೆ ಮಕ್ಕಳು ಓಡೋಡಿ ಒಂದೆಡೆಗೆ ಬರುತ್ತಿದ್ದರು.  ಅವರ ಪಾಲಕರು ಮಕ್ಕಳ ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದರು.  ಇವರ ಮಕ್ಕಳೂ ಓಡಿ ಬಂದರು. ಅಮ್ಮ ಆತಂಕದಿಂದ,  ಏನಾಯ್ತೋ?  ಎಂದು ಕೇಳಿದರು.  ಮಗಳು ಹೇಳಿದಳು,  ಅಮ್ಮೋ ಅಲ್ಲೊಬ್ಬ ಹುಚ್ಚಿ ಇದ್ದಾಳೆ.  ಎಲ್ಲರನ್ನೂ ಬೈದು ಓಡಿಸುತ್ತಾ ಇದ್ದಾಳೆ .  ಅಮ್ಮ ಆ ದಿಕ್ಕಿನತ್ತ ನೋಡಿದರು.  ಹೌದು! ಅಲ್ಲೊಬ್ಬ ಮುದುಕಿ. ಆಕೆಯ ಬಟ್ಟೆಯೆಲ್ಲ ಮಾಸಲಾಗಿದೆ. ತಲೆಗೂದಲು ಬಿಳಿಯಾಗಿ, ಗಂಟುಗಂಟಾಗಿದೆ.  ಬೀಸುತ್ತಿದ್ದ ಗಾಳಿಗೆ ಮುಂಗೂದಲು ಹಾರಾಡುತ್ತ ಮುಖಕ್ಕೊಂದು ವಿಚಿತ್ರ ರೂಪ ನೀಡಿವೆ.ಅಮ್ಮ ಎದ್ದು ಹತ್ತಿರ ಹೋಗಿ ನೋಡಿದರು.  ಆ ಮುದುಕಿ ಕೈಯಲ್ಲೊಂದು ಪ್ಲಾಸ್ಟಿಕ್ ಚೀಲ ಹಿಡಿದುಕೊಂಡಿದ್ದಾಳೆ. ಆಗಾಗ ಬಾಗಿ ಬಾಗಿ ಮರಳಿನಿಂದ ಏನನ್ನೋ ಹೆಕ್ಕಿಕೊಂಡು ಚೀಲದಲ್ಲಿ ಹಾಕಿಕೊಳ್ಳುತ್ತಾಳೆ.ಯಾವುದಾದರೂ ಮಗು ಹತ್ತಿರಕ್ಕೆ ಬಂದರೆ ಸಾಕು,  ದೂರಹೋಗ್ರೋ.  ಇಲ್ಯಾಕೆ ಬಂದ್ರಿ? ಹತ್ತಿರ ಬಂದ್ರೆ ಹೊಡೆದುಬಿಡುತ್ತೇನೆ  ಎಂದು ಕೂಗುತ್ತ ಕೈಯಲ್ಲಿ ಕಲ್ಲು ಹಿಡಿದುಕೊಂಡು ಅವರತ್ತ ಒಗೆಯುವಳಂತೆ ಓಡುತ್ತಾಳೆ.  ಆಗ ಮಕ್ಕಳೆಲ್ಲ ಗಾಬರಿಯಾಗಿ ಚೀರುತ್ತ ಓಡಿ ಹೋಗುತ್ತಾರೆ. ಅವಳು ಮತ್ತೆ ಮರಳಲ್ಲಿ ಏನನ್ನೋ ಆಯ್ದುಕೊಳ್ಳುವ ಕೆಲಸ ಮುಂದುವರೆಸುತ್ತಾಳೆ.ಮಕ್ಕಳ ತಾಯಿ ಧೈರ್ಯಮಾಡಿ ಮುದುಕಿಯ ಹತ್ತಿರ ಹೋದರು.  ಆಕೆಗೆ ಯಾರ ಬಗ್ಗೆಯೂ ಲಕ್ಷ್ಯವಿಲ್ಲ.  ಆಕೆ ಮರಳಿನಲ್ಲಿ ಕೈ ಆಡಿಸಿ ಅಲ್ಲಿ ದೊರೆತ ಗಾಜಿನ ತುಣುಕುಗಳನ್ನು ಆರಿಸಿ ಆರಿಸಿ ಚೀಲದಲ್ಲಿ ತುಂಬಿಕೊಳ್ಳುತ್ತಿದ್ದಾಳೆ.  ಅಷ್ಟೊಂದು ಗಾಜಿನ ತುಂಡುಗಳು ಅಲ್ಲಿ ಹೇಗೆ ಬಂದವೋ?  ಅಲ್ಲದೇ ಅವುಗಳು ಅಲ್ಲಿದ್ದದ್ದು ಮುದುಕಿಗೆ ಹೇಗೆ ತಿಳಿಯಿತೋ ಎಂದು ಇವರು ಚಿಂತಿಸುತ್ತ ಮುದುಕಿಯನ್ನು ಕೇಳಿದರು,  ಅಜ್ಜೀ ಏನು ಮಾಡುತ್ತಿದ್ದೀರಿ?  ಆಕೆ ತಕ್ಷಣ ತಲೆ ಎತ್ತಿ ನೋಡಿ,   ಕಣ್ಣು ಕಾಣುವುದಿಲ್ಲವೇ?  ಗಾಜಿನ ಚೂರುಗಳನ್ನು ಆರಿಸುತ್ತಿದ್ದೇನೆ. ನಿನ್ನೆ ರಾತ್ರಿ  ಮೂರ್ಖರು ಕುಡಿದ ಅಮಲಿನಲ್ಲಿ ಹೊಡೆದಾಡಿದರು.  ತಮ್ಮ ತಮ್ಮ ಬಾಟಲಿಗಳಿಂದಲೇ ಮತ್ತೊಬ್ಬರನ್ನು ಚೆಚ್ಚಿದರು.  ಬಾಟಲಿಗಳು ಒಡೆದು ಚೂರಾಗಿ ಎಲ್ಲೆಡೆಗೆ ಹರಡಿದವು.  ಈ ಪಾಪದ ಮಕ್ಕಳು ಕಾಲಿಗೆ ಚುಚ್ಚಿಕೊಂಡರೆ ತೊಂದರೆಯಲ್ಲವೇ?  ಅದಕ್ಕೇ ಆರಿಸಿ ತೆಗೆಯುತ್ತೇನೆ.  ಹತ್ತಿರ ಬರಬೇಡಿರೆಂದು ಹೆದರಿಸುತ್ತೇನೆ  ಎಂದಳು. ಆಕೆ ಮತ್ತೆ ಮಾತನಾಡಿದಳು,  ನನಗೆ ಮಕ್ಕಳೆಂದರೆ ಭಾರೀ ಪ್ರೀತಿ. ಇವರಿಗೆ ಕೊಂಚ ತೊಂದರೆಯಾದರೂ ನನ್ನಿಂದ ತಡೆದುಕೊಳ್ಳುವುದಾಗುವುದಿಲ್ಲ.  ನನಗೂ ಒಬ್ಬ ಮಗನಿದ್ದ, ಪುಟ್ಟ ಹುಡುಗ. ನಾನೋ ಪುಟ್ಟ ವಿಧವೆ. ನನಗೆ ಅವನೇ ಎಲ್ಲ.  ಒಂದು ದಿನ ಅಪಘಾತದಲ್ಲಿ ಹೋಗಿಬಿಟ್ಟ.  ನನಗೆ ಈಗ ಯಾವ ಮಗುವನ್ನು ಕಂಡರೂ ಅವನೇ ಕಾಣುತ್ತಾನೆ . ಎಂದು ಹೇಳಿ ಕಣ್ಣು ಒರೆಸಿಕೊಂಡು ಮತ್ತೆ ಗಾಜಿನ ಚೂರುಗಳನ್ನು ಆರಿಸತೊಡಗಿದಳು.  ಎರಡು ಕ್ಷಣಗಳ ಹಿಂದೆ ಭೀಕರವಾದ ಹುಚ್ಚಿಯ ಹಾಗೆ ಕಂಡ ಮುದುಕಿ ಈಗ ಮಾನವ ಅಂತ:ಕರಣದ ಸಾಕಾರಮೂರ್ತಿಯಾಗಿ ಕಾಣಿಸಿದಳು.ನಮ್ಮ ಕಣ್ಣಿಗೆ ಕಂಡದ್ದೇ ಸತ್ಯವಿರಲಾರದು.  ಅದರ ಹಿಂದಿನ ಸತ್ಯವನ್ನು ಕಾಣುವ ಪರಿಶ್ರಮ ಮತ್ತು ಛಲವನ್ನು ತೋರಿದಾಗ ಬೇರೊಂದೇ ವಿಷಯ ಕಂಡೀತು.  ಹೀಗೆ ಸತ್ಯವನ್ನು ಸದಾ ಪರೀಕ್ಷಿಸಿ ನೋಡುವ ಗುಣ ನಮ್ಮ ಸತ್ವವನ್ನು ಬೆಳೆಸೀತು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.