ಶನಿವಾರ, ಏಪ್ರಿಲ್ 17, 2021
23 °C

ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

ಕತ್ತು ಕತ್ತರಿಸುವ ಸಿನಿಮಾಗಳ ಸಂದೇಶವೇನು?

ಚಲನಚಿತ್ರ ನಿರ್ಮಾಪಕ, ನಿರ್ದೇಶಕರ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ಸಮಯ ಮತ್ತೊಮ್ಮೆ ಒದಗಿಬಂದಿದೆ. ಮನರಂಜನೆಯನ್ನು ಬಯಸಿ, ಸಿನಿಮಾ ನೋಡಲು ಹಂಬಲಿಸುವ ಪ್ರೇಕ್ಷಕನ ಮೇಲೆ ಅದು ಬೀರುವ ಆಳ ಪ್ರಭಾವ ಒಳಿತನ್ನೂ ಮಾಡಿದೆ.ಅನಾಹುತಗಳನ್ನೂ ಸೃಷ್ಟಿಸಿದೆ. ಮನರಂಜನೆಗಾಗಿ ಚಲನಚಿತ್ರಗಳನ್ನು ವೀಕ್ಷಿಸುವ ಜನ ನಮ್ಮ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಅದರಿಂದ ಪ್ರಭಾವಿತರಾಗಿ, ಅಲ್ಲಿನ ಅವಗುಣಗಳನ್ನು ಆವಾಹಿಸಿಕೊಳ್ಳುವ, ಆರಾಧನಾ ಮನೋಭಾವ ಬೆಳೆಸಿಕೊಳ್ಳುವಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿರುವುದರಿಂದಲೇ, ಅದನ್ನು ಸದುಪಯೋಗಪಡಿಸಿಕೊಳ್ಳುವ, ಶೋಷಿಸುವ, ಲಾಭಕ್ಕೆ ಬಳಸಿಕೊಳ್ಳುವ ನಿರ್ಮಾಪಕ ವರ್ಗ ಹುಟ್ಟಿಕೊಂಡಿದೆ. ಹಣ ಸಂಪಾದಿಸುವ ಏಕೈಕ ಉದ್ದೇಶದಿಂದಲೇ ಅಂತಹ ಪ್ರೇಕ್ಷಕರನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಯತ್ನದಲ್ಲೇ ಈ ವರ್ಗ ಸದಾ ಮಗ್ನವಾಗಿರುವುದರಿಂದ, ನಮ್ಮ ಸಿನಿಮಾ ಬೌದ್ಧಿಕ ಪ್ರಗತಿ ಸಾಧಿಸಿಲ್ಲ.`ದಂಡುಪಾಳ್ಯ~ ಚಿತ್ರ ಬಿಡುಗಡೆಯಾದ ನಂತರ ಆದ ಬೆಳವಣಿಗೆಗಳನ್ನು ಗಮನಿಸಿ- ಕೊಲೆ, ಸುಲಿಗೆ, ಅತ್ಯಾಚಾರಗಳೇ ತುಂಬಿ ಹೋಗಿರುವ ಈ ಚಿತ್ರ ಸಮಾಜಕ್ಕೆ ಕೊಡುವ ಸಂದೇಶವೇನು? ಎಂದೋ ನಡೆದ ಒಂದು ಘಟನೆಯ ಸಾಕ್ಷ್ಯಚಿತ್ರವೇ ಅಥವಾ ಕೊಲೆಗಡುಕರ ವಿಜೃಂಭಣೆಯೇ?ಈ ಚಿತ್ರ ಬಿಡುಗಡೆಯಾದಾಗ ಟೀವಿ ಚಾನಲ್‌ಗಳಲ್ಲಿ `ದಂಡುಪಾಳ್ಯ~ ತಂಡದ ಬೆನ್ನತ್ತಿ ಆ ತಂಡವನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರ ಸಂದರ್ಶನ, ಮಾತುಗಳು, ಅಂದಿನ ಘಟನೆಗಳ ನೆನಪು, ಮೊದಲಾದವು ಚಿತ್ರದ ಪ್ರಚಾರದ ರೂಪದಲ್ಲಿ ಪ್ರಸಾರವಾದವು. ಚಿತ್ರದ ಬಗ್ಗೆ ಮಾತನಾಡಿದ ಎಲ್ಲ ಪೊಲೀಸರೂ, `ಸಮಾಜದಲ್ಲಿ ಜನರನ್ನು ಎಚ್ಚರಿಸುವ ದೃಷ್ಟಿಯಿಂದ ಈ ಚಿತ್ರ ಮಹತ್ವದ್ದು, ಒಳ್ಳೆಯ ಪ್ರಯತ್ನ~ ಎಂದೆಲ್ಲಾ ಶ್ಲಾಘಿಸಿದರು.

 

ಇದೇ ರೀತಿಯ ಉದ್ದೇಶದಿಂದಲೇ ಸೆನ್ಸಾರ್ ಮಂಡಳಿ ಸದಸ್ಯರೂ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದರು ಎಂದು ಕಾಣುತ್ತದೆ. ರೇಪುಗಳು, ಕುತ್ತಿಗೆ ಕುಯ್ಯುವ ದೃಶ್ಯಗಳು, ಅಶ್ಲೀಲ ಸಂಭಾಷಣೆಗಳೊಡನೆ ಕತೆಗಾಗಿ ಹೆಣೆದ ಕತೆಯನ್ನಿಟ್ಟುಕೊಂಡು ಹಸಿಬಿಸಿಯಾಗಿರುವ ಉದ್ದೇಶರಹಿತವಾಗಿರುವ ಈ ಚಿತ್ರವನ್ನು ಯಥಾವತ್ತಾಗಿ ಪ್ರದರ್ಶನಕ್ಕೆ ಬಿಡುವುದಕ್ಕೆ ಮುನ್ನ ಈ ಎರಡೂ ವಿಭಾಗದ ಜನ, ಇದನ್ನು ಪಡ್ಡೆ ಹುಡುಗರು, ನಿರುದ್ಯೋಗಿಗಳು, ಕೆಲಸವಿಲ್ಲದ ಸೋಂಬೇರಿಗಳು ನೋಡಿದರೆ ಏನಾಗುತ್ತದೆ ಎಂಬುದನ್ನು ಒಮ್ಮೆ ಯೋಚಿಸಿದ್ದರೆ ಚೆನ್ನಾಗಿತ್ತು.ಅಂತಹ ಹೊಣೆ ಹೊತ್ತವರು ಒಂದು ಕ್ಷಣ ಸಾಮಾಜಿಕ ಜವಾಬ್ದಾರಿಯನ್ನು ಮರೆತರೆ ಎಷ್ಟು ಅನಾಹುತವಾಗುತ್ತದೆ ಎಂಬುದಕ್ಕೆ ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರಗಳಲ್ಲಿ ನಡೆದ, ವರದಿಯಾದ ಘಟನೆಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಅನಾಹುತಗಳನ್ನು ಗಮನಿಸಿದರೆ ಸಾಕು.ಆಗಸ್ಟ್ 7ರಂದು ಮೈಸೂರಿನ ಜೆಪಿ ನಗರದ ಪೊಲೀಸ್ ಬೂತ್ ಬಳಿ ಇರುವ ಡಾ. ಜಗನ್ನಾಥಾಚಾರ್ ಮತ್ತು ಅವರ ಪುತ್ರಿ ಅಶ್ವಿನಿ ಅವರ ಕತ್ತು ಕೊಯ್ದು ಕೊಲೆ ಮಾಡಲಾಯಿತು. ಅಲ್ಲದೆ, ಮನೆಯಲ್ಲಿದ್ದ ಚಿನ್ನದ ಸರಗಳು, ನೆಕ್ಲೆಸ್, ಬಳೆ, ಎಲ್ಲವೂ ಸೇರಿ 5 ಲಕ್ಷ ರೂಪಾಯಿ ಮೌಲ್ಯದ ನಗ-ನಾಣ್ಯಗಳನ್ನು ದೋಚಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದರು.21 ಮತ್ತು 26 ವರ್ಷ ವಯಸ್ಸಿನ ಹೋಟೆಲ್ ಕೆಲಸಗಾರರಾದ ಈ ಇಬ್ಬರು, ಐಷಾರಾಮಿ ಜೀವನ ನಡೆಸಲು ಈ ಕೃತ್ಯ ಮಾಡಿದ್ದಾಗಿ ತಿಳಿಸಿದರು. “ದಂಡುಪಾಳ್ಯ” ಸಿನಿಮಾ ನೋಡಿ ಅದರಿಂದ ಪ್ರೇರೇಪಿತರಾಗಿ ಈ ಕೊಲೆ ಮಾಡಿದ್ದಾಗಿ ಯುವಕರು ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ.ಆಗಸ್ಟ್ 2ನೇ ತೇದಿ ಬೆಂಗಳೂರಿನ ಪರಪ್ಪನ ಅಗ್ರಹಾರ ಬಡಾವಣೆಯಲ್ಲಿ ಒಂಟಿ ಮಹಿಳೆಯನ್ನು ಮಂಚಕ್ಕೆ ಕಟ್ಟಿಹಾಕಿ ಕೊಲೆ ಮಾಡಲಾಗಿದೆ. ಮನೆಗೆ ನೀರು ಕೇಳಿಕೊಂಡು ಬಂದವರು ಈ ಕೃತ್ಯ ಎಸಗಿರಬಹುದೆಂದು ಪೊಲೀಸರೇ ಹೇಳಿದ್ದಾರೆ. `ದಂಡುಪಾಳ್ಯ~ದಲ್ಲಿ ಪೂಜಾಗಾಂಧಿ ಮಾಡುವುದೇನು? ಆಗಸ್ಟ್ 10ರಂದು ಜೆ.ಪಿ. ನಗರದಲ್ಲಿ ವೆಂಟೇಶಯ್ಯ ಮತ್ತು ಅವರ ಪತ್ನಿ ಸ್ವರ್ಣಾಂಬ ಅವರ ಹತ್ಯೆಯಾಯಿತು.

 

ಇಬ್ಬರೂ ವೃದ್ಧರು. ಈ ಕೊಲೆ ನಡೆದಿರುವ ರೀತಿಯನ್ನು ಗಮನಿಸಿದರೆ ದಂಡುಪಾಳ್ಯ ಚಿತ್ರದಿಂದ ಪ್ರೇರೇಪಣೆ ಪಡೆದಿರಲಿಕ್ಕೂ ಸಾಕು ಎನ್ನುವುದು ಸ್ಪಷ್ಟವಾಗುತ್ತದೆ. ಆಗಸ್ಟ್ 1ರಿಂದ 10ರವರೆಗೆ ಬೆಂಗಳೂರು ನಗರವೊಂದರಲ್ಲೇ 12 ಸರಣಿ ಕೊಲೆಗಳು ನಡೆದಿವೆ. ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಕೊಲೆ ಆಗುತ್ತಿರುವುದು ದಂಡುಪಾಳ್ಯದ ಕಥಾಸೂತ್ರ.ಇದು ಬೆಂಗಳೂರಿನಲ್ಲಿ ಮರುಕಳಿಸುತ್ತಿರುವುದಕ್ಕೆ ದಂಡುಪಾಳ್ಯವೇ ಕಾರಣ ಎನ್ನುವುದು ಅವಸರದ ತೀರ್ಮಾನ ಎಂದು ಕೆಲವರು ಹೇಳಬಹುದು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ದೊಡ್ಡ ಪ್ರತಿಭಟನೆಯೇ ನಡೆಯಿತು. `ದಂಡುಪಾಳ್ಯ~ ಬಿಡುಗಡೆಯಾದ ನಂತರ ಅಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾದವು. ದೊಡ್ಡಬಳ್ಳಾಪುರದ ದರ್ಗಾಜೋಗಿ ಹಳ್ಳಿ ಬಡಾವಣೆಯಲ್ಲಿ ಜುಲೈ 20ರಂದು ಒಂಟಿ ಮಹಿಳೆಯ ಕೊಲೆಯಾಯಿತು.

 

ಪೊಲೀಸರು ತನಿಖೆ ಚುರುಕುಗೊಳಿಸಲಿಲ್ಲ. ಜುಲೈ 25ರಂದು ಮತ್ತೊಂದು ಬಡಾವಣೆಯಲ್ಲಿ ಮತ್ತೊಬ್ಬ ಒಂಟಿಮಹಿಳೆಯ ಕೊಲೆ ನಡೆಯಿತು. ಮಹಿಳೆಯ ತಲೆಗೆ ಬಡಿದು, ಎಲ್ಲವನ್ನೂ ಅಪಹರಿಸಿ, ಕತ್ತುಕುಯ್ದು ಹೋದದ್ದು ಥೇಟ್ `ದಂಡುಪಾಳ್ಯ~ ಚಿತ್ರದ ಶೈಲಿಯಲ್ಲೇ ಇದೆ ಎಂದು ಅಲ್ಲಿಗೆ ಜನರಿಗೆ ಖಾತ್ರಿಯಾಗಿತ್ತು. ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಕ್ಕೆ ತೆರಳಿ, ಗಲಾಟೆ ಮಾಡಿ ಪ್ರದರ್ಶನ ರದ್ದಾಗುವಂತೆ ಮಾಡಿದರು.

 

ಒಂದು ಸಿನಿಮಾ ಪ್ರದರ್ಶನಕ್ಕೆ ಬಂದ ನಂತರ ಇಷ್ಟೊಂದು ಪ್ರಚೋದನಕಾರಿಯಾಗುತ್ತದೆ, ಅಪರಾಧ ಮನೋಭಾವನೆ ಇರುವವರಲ್ಲಿ ಕೆಟ್ಟಕೃತ್ಯ ಮಾಡುವಂತೆ ಪ್ರೇರೇಪಿಸುತ್ತದೆ ಎನ್ನುವ ಮುನ್‌ಹೊಳಹು ಸೆನ್ಸಾರ್ ಮಂಡಳಿಗೆ ಇರಬೇಕಾದ್ದು ಅಪೇಕ್ಷಣೀಯ.

ಕೆಲವು ತಿಂಗಳ ಹಿಂದೆ ಚೆನ್ನೈ ಶಾಲೆಯೊಂದರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಿ. ತರಗತಿಯಲ್ಲಿ ಸರಿಯಾದ ಅಂಕ ಗಳಿಸದೆ ತಂಟೆ ಮಾಡುತ್ತಿದ್ದ ಬಾಲಕನೊಬ್ಬ ಗದರಿದ ಶಿಕ್ಷಕಿಗೆ ಚಾಕುವಿನಿಂದ ಇರಿದು ಕೊಂದು ಹಾಕಿದ.

 

ವಿಚಾರಣೆಯ ವೇಳೆ ಆತ, “ಅಗ್ನಿಪಥ್‌” ಚಿತ್ರದ ಪ್ರೇರಣೆಯಿಂದ ಆ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡ. ಸಿನಿಮಾಗಳಲ್ಲಿನ ಕತೆ ಎಂದರೆ ರಾಮನೂ ಇರುತ್ತಾನೆ. ರಾವಣನೂ ಇರುತ್ತಾನೆ. ಆದರೆ ನಿರೂಪಣೆಯಲ್ಲಿ ವಿಜೃಂಭಿಸುವ ಮೌಲ್ಯಗಳು ಪ್ರೇಕ್ಷಕನನ್ನು ರಾಮನತ್ತ ಒಲಿಯುವಂತೆ ಮಾಡುತ್ತವೆ.ನಿರ್ದೇಶಕನೇ ರಾವಣನ ಪರವಹಿಸಿ, ಸೀತೆಯನ್ನು ಅಪಹರಿಸಿದ್ದು ಕರೆಕ್ಟ್ ಎಂದು ಹೇಳಿದರೆ ಏನಾಗುತ್ತದೆ? ಸಮಾಜ ಗಬ್ಬೆದ್ದು ಹೋಗುತ್ತದೆ, ಅಡ್ಡದಾರಿಯನ್ನೇ ರಾಜಮಾರ್ಗ ಎಂದು ಹೇಳಿಕೊಂಡು ಓಡಾಡುತ್ತಿರುವ ಕೆಲ ಚಿತ್ರ ನಿರ್ಮಾಪಕರು ನಿರ್ದೇಶಕರುಗಳಿಂದಾಗಿ ರಾಜ್ಯದಲ್ಲಿ ಅಪರಾಧದ ಪಟ್ಟಿ ಸರ‌್ರನೆ ಏರುಮುಖವಾಗಿ ಬಿಟ್ಟಿದೆ.ಎಂಬತ್ತರ ದಶಕದಲ್ಲಿ ಚಿತ್ರಮಂದಿರಗಳನ್ನು ದರೋಡೆಕೋರರು, ಕಳ್ಳರು ತಮ್ಮ ಆವಾಸಸ್ಥಾನ ಮಾಡಿಕೊಂಡಿದ್ದರು. ಆಗ ಬೆಂಗಳೂರು ನಗರದಲ್ಲಿ ದರೋಡೆ, ಗೂಂಡಾಗಳ ಹಾವಳಿ ವಿಪರೀತವಾಗಿತ್ತು. ಮಧ್ಯರಾತ್ರಿ ಮನೆಗೆ ನುಗ್ಗಿ, ಬಾಗಿಲು ಮುರಿದು, ಕೊಲೆ ಮಾಡಿ ದೋಚಿ ಪರಾರಿಯಾಗುವ ಘಟನೆಗಳು ಹೆಚ್ಚಾಗಿದ್ದವು.

 

ಪೊಲೀಸರ ತನಿಖೆಯಿಂದ ಬಹಿರಂಗವಾದ ಸಂಗತಿಯೇ ಅಚ್ಚರಿ ಹುಟ್ಟಿಸುವಂತಹದು. ದರೋಡೆಕೋರರು ತಾವು ದರೋಡೆ ಮಾಡಬೇಕಾದ ಮನೆಯನ್ನು ಮೊದಲೇ ಗುರುತಿಸಿಟ್ಟುಕೊಂಡಿರುತ್ತಾರೆ.ರಾತ್ರಿ 9.30ರ ಸಿನಿಮಾ (ಸೆಕೆಂಡ್ ಶೋ) ನೋಡಿ, ಮಧ್ಯರಾತ್ರಿಯವರೆಗೆ ಸಮಯ ಕಳೆಯುತ್ತಾರೆ. ರಾತ್ರಿ 12.30ಕ್ಕೆ ಸಿನಿಮಾ ಮುಗಿಯುತ್ತದೆ. ಕಳ್ಳರಿಗೆ ಪ್ರಶಸ್ತಕಾಲ. ಈ ಸ್ಕೆಚ್ ಬಹಿರಂಗಗೊಂಡ ನಂತರ ಪೊಲೀಸರು ಸೆಕೆಂಡ್‌ಶೋ ಪ್ರದರ್ಶನವನ್ನೇ ರದ್ದು ಮಾಡಲು ಆದೇಶಿಸಿದರು.ಅಮೆರಿಕದಲ್ಲಾದ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ಜಾಗತಿಕವಾಗಿ ಸಿನಿಮಾ ಒಂದೇ ರೀತಿಯ ಪ್ರಭಾವ ಬೀರುತ್ತದೆ. ಇಲ್ಲಿ ದಂಡುಪಾಳ್ಯ ಅಲ್ಲಿ `ಬ್ಯಾಟ್‌ಮ್ಯಾನ್~ ( ದಿ ಡಾರ್ಕ್ ನೈಟ್ ರೈಸಸ್). ಬ್ಯಾಟ್‌ಮ್ಯಾನ್ ಸರಣಿಯ “ಜೋಕರ್‌” ಪಾತ್ರದಿಂದ ಪ್ರೇರಣೆಗೊಂಡ ಯುವಕನೊಬ್ಬ ಚಿತ್ರಮಂದಿರಕ್ಕೆ ತೆರಳಿ, ಬಂದೂಕಿನಿಂದ ಸತತವಾಗಿ ಗುಂಡುಹಾರಿಸಿ 12 ಪ್ರೇಕ್ಷಕರನ್ನು ಕೊಂದ ಘಟನೆಗೆ ಕಾರಣವೇನಿರಬಹುದು? ಅಲ್ಲಿನ ನಿರುದ್ಯೋಗಿ ಯುವಕರಿಗೆ ಸಿನಿಮಾ ಏನು ಕಲಿಸುತ್ತಿದೆ? ಸಿನಿಮಾದವರೇ ಇದಕ್ಕೆ ಉತ್ತರ ಕೊಡಬೇಕು.ಭೂಗತ ಜಗತ್ತಿನ ಜನರ ಉಪಟಳ ಹೆಚ್ಚಾಗಿದ್ದ ದಿನಗಳಲ್ಲಿ ಅಂತಹ ಹೆಸರುಗಳನ್ನೇ ಸಿನಿಮಾಗಳಿಗೆ ಇಟ್ಟು, ಅವರಂತಹವರನ್ನೇ ಹೀರೋಗಳನ್ನಾಗಿ ಮಾಡಿ, ಅಂಥವರ ದುಡ್ಡಿನಿಂದಲೇ ಸಿನಿಮಾ ಮಾಡುತ್ತಿದ್ದ ನಮ್ಮ ನಿರ್ಮಾಪಕರು, ಸಿನಿಮಾ ಉದ್ಯಮವನ್ನೇ ಭೂಗತಲೋಕದ ದಾದಾಗಳ ಕೈಗೆ ಒಪ್ಪಿಸಿಬಿಟ್ಟರು.

 

ನಮ್ಮ ಮಹಾನ್ ನಟರೊಬ್ಬರು ಎಕೆ-47 ಬಂದೂಕು ಸರಬರಾಜು ವ್ಯವಹಾರದಲ್ಲಿ ತೊಡಗಿಸಿಕೊಂಡು, ಸಿಕ್ಕಿಬಿದ್ದದ್ದು ನಿಮಗೆಲ್ಲಾ ಗೊತ್ತೇ ಇದೆ. ನಟಿಯೊಬ್ಬಳು ಭೂಗತ ದಾದಾನೊಬ್ಬನ ಮಡದಿಯಾಗಿ ದೇಶಾಂತರ ಮಾಡಿ, ಹಗರಣಗಳಲ್ಲಿ ಸಿಕ್ಕಿಬಿದ್ದು ಈಗ ಜೈಲಿನಲ್ಲಿರುವುದು ಬೇರೆ ಕತೆ.ನಾವು ಸಿನಿಮಾಗಳ ಮೂಲಕ ಭಯೋತ್ಪಾದಕರನ್ನು, ಉಗ್ರಗಾಮಿಗಳನ್ನು, ನಕ್ಸಲರನ್ನು ಹೀರೋ ಮಾಡಿಟ್ಟಿದ್ದೇವೆ. ಇಂದಿನ ಯುವಕರಿಗೆ ಈ ಹೀರೋಗಳ ಜೀವನಶೈಲಿ ಅತ್ಯಾಕರ್ಷಕ ಎನ್ನಿಸುವಷ್ಟರಮಟ್ಟಿಗೆ ನಮ್ಮ ಕಥಾಶೈಲಿಯನ್ನು ಹಿಗ್ಗಿಸಿಟ್ಟಿದ್ದೇವೆ. ಚಿತ್ರರಂಗ ಮರೆತ ಜವಾಬ್ದಾರಿಯನ್ನು ನೆನಪಿಸುವುದು ಹೇಗೆ?

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.