ಸೋಮವಾರ, ಜೂನ್ 14, 2021
20 °C

ಕರಗಿಹೋದ ಗಾಜಿನ ಬುಡ್ಡಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಬೆಳಗಾವಿಯಿಂದ ಕೊಲ್ಹಾಪುರದ ಕಡೆಗೆ ಹೊರಟಿದ್ದೆ.  ಅದು ಸೂಪರ್ ಹೈವೇ ಆದ್ದರಿಂದ ವಾಹನಗಳು ವೇಗ­ದಿಂದ ಸುಮಾರು 100–-120 ಕಿಲೋಮೀಟರ್ ವೇಗದಲ್ಲಿ ಚಲಿಸು­ವುದು ಸಾಮಾನ್ಯ. ದಾರಿಯಲ್ಲಿ ಹತ್ತರಗಿ ಎಂಬ ಒಂದು ಪುಟ್ಟ ಪಟ್ಟಣವನ್ನು ದಾಟುತ್ತಿದ್ದೆವು. ನನ್ನ ಕಾರಿನ ಮುಂದೆ ಮತ್ತೊಂದು ಕಾರು. ಅದರ ಮುಂದೆ ಒಂದು ಮಿನಿ ಲಾರಿ. ನಾನು ಮುಂದೆ ಡ್ರೈವರ್ ಪಕ್ಕದಲ್ಲಿ ಕುಳಿತು ಕಿಟಕಿ­ಯಿಂದ ನೋಡುತ್ತ ಕುಳಿತಿದ್ದೆ.ದೂರದಲ್ಲಿ ರಸ್ತೆಯ ಎಡಭಾಗದಲ್ಲಿ ಒಬ್ಬ ಹೆಣ್ಣು­ಮಗಳು ನಿಂತಿದ್ದು ಕಂಡಿತು. ಆಕೆ ಕೈ ಮಾಡಿ ರಸ್ತೆಯ ಇನ್ನೊಂದು ಬದಿಯಿದ್ದ ಬಾಲಕನಿಗೆ ಏನೋ ಹೇಳುತ್ತಿದ್ದಂತಿತ್ತು. ಅದೇನಾಯಿತೋ ತಿಳಿಯದು. ಆಕೆ ರಸ್ತೆಗೆ ಇಳಿದು ದಾಟಲು ತೊಡಗಿರಬೇಕು. ಮರುಕ್ಷಣ­ದಲ್ಲಿ ಮಿನಿ ಲಾರಿ ಜೋರಾಗಿ ಬ್ರೇಕ್ ಹಾಕಿದಾಗ ಆಗುವ ಕಿರ್‌ ಎಂಬ ಸಪ್ಪಳ ಕೇಳಿಸಿತು. ಅಷ್ಟು ವೇಗವಾಗಿ ಹೋಗು­ತ್ತಿದ್ದ ವಾಹನ ನಿಲ್ಲಬೇಕಾದರೆ ಕನಿಷ್ಠ ನೂರೈವತ್ತು ಅಡಿಗಳಷ್ಟಾದರೂ ಅಂತರ ಬೇಕು. ಅದರ ಹಿಂದಿನ ಕಾರಿನ ಮತ್ತು ನನ್ನ ಕಾರಿನ ಡ್ರೈವರ್ ಜೋರಾಗಿ ಬ್ರೇಕ್ ಹಾಕಿ ನಿಲ್ಲಿಸಿದರು. ಮುಂದೆ ಕಂಡದ್ದು ಅನಾಹುತ. ಆ ಮಹಿಳೆಗೆ ಮಿನಿ ಲಾರಿ ಡಿಕ್ಕಿ ಹೊಡೆದು ದೇಹವನ್ನು ಅಷ್ಟೂ ದೂರ ಎಳೆದುಕೊಂಡು ಹೋಗಿದೆ. ಸುಮಾರು ಇಪ್ಪತ್ತು ಅಡಿ ಹಿಂದಿನಿಂದ ಅಲ್ಲಲ್ಲಿ ಮಾಂಸದ ಮುದ್ದೆಗಳು, ಮಿದುಳಿನ ಚೂರುಗಳು ಚೆಲ್ಲಾಡಿವೆ.ಆ ದೇಹ ಗುರುತು ಹತ್ತು­ವುದೂ ಸಾಧ್ಯ­ವಿಲ್ಲ. ದೇಹ­ದೊಳಗಿದ್ದ ಭಾಗಗಳೆಲ್ಲ ಹೊರಬಂದಿವೆ. ಒಂದು ಕ್ಷಣದಲ್ಲಿ ಚೈತನ್ಯ­ವಾಗಿದ್ದ ದೇಹ ಈಗ ಚಿಂದಿಯಾಗಿ ರಸ್ತೆಯಲ್ಲಿ ಬಿದ್ದಿತ್ತು. ಆಕೆಯ ಮಗ ಓಡಿ ಬಂದ. ಹೋ ಎಂದು ಕೂಗುತ್ತ ಕೆಳಗೆ ಬಿದ್ದ.  ತಾಯಿಯ ದೇಹವನ್ನು ಮುಟ್ಟುವ ಧೈರ್ಯವೂ ಅವನಿಗಿಲ್ಲ. ಜನ ಸೇರಿದರು. ರಸ್ತೆಯಲ್ಲಿ ಸಂಚಾರ ನಿಂತು­ಹೋಯಿತು. ಯಾರೋ ಫೋನ್ ಮಾಡಿರಬೇಕು, ಐದು ನಿಮಿಷ­ದಲ್ಲಿ ಆಂಬು­ಲೆನ್ಸ್ ಬಂದಿತು, ಪೋಲೀಸರು ಬಂದರು. ಆ ತಾಯಿ ಯಾಕೆ ಹಾಗೆ ರಸ್ತೆಯಲ್ಲಿ ಓಡಿದಳೋ? ಮಗ ಎಲ್ಲಿ ಮರಳಿ ರಸ್ತೆಯಲ್ಲಿ ಬಂದಾನೋ ಎಂಬ ಆತಂಕ­ದಿಂದಲೋ, ಅಥವಾ ತಾನೇ ಅವನನ್ನು ಬೇಗನೇ ಸೇರಬೇಕೆಂಬ ತವಕ­ದಿಂದಲೋ? ಆಕೆಯ ತಲೆಯಲ್ಲಿ ಯಾವ ವಿಚಾರವಿತ್ತೋ? ಯಾವ ಕೆಲಸಕ್ಕಾಗಿ ಬಂದಿದ್ದಳೋ? ಮನೆಗೆ ಹೋಗಿ ಏನು ಮಾಡಬೇಕೆಂದು ಹವಣಿಸಿದ್ದಳೋ? ಮರುದಿನ, ಮರು­ವಾರ, ಮುಂದಿನ ತಿಂಗಳು, ಮುಂದಿನ ವರ್ಷ ಏನೇನೋ ಮಾಡಬೇಕು ಎಂಬ ಆಸೆ ಹೊತ್ತಿರಬೇಕಲ್ಲವೇ? ತಲೆ ಗಿರ್ರೆಂದಿತು.

ಅಷ್ಟರಲ್ಲಿ ಪೋಲೀಸರು ಆ ದೇಹ-­ವನ್ನು ಮರೆಮಾಚಲು ಒಂದು ಬಟ್ಟೆ­ಯನ್ನು ಹೊಚ್ಚಿದರು, ವಾಹನಗಳನ್ನು ಅತ್ತಿತ್ತ ಸರಿಸಿ ಸಂಚಾರ ಸರಿಮಾಡಿ­ದರು. ಕ್ಷಣದಲ್ಲೇ ಕಣ್ಣಮುಂದೆ ಗಾಜಿನ ಬುಡ್ಡಿಯಂತೆ ಕರಗಿ ಹೋದ ಜೀವವನ್ನು ಕಂಡಿದ್ದ ನಾನು ಭಾರವಾದ ಹೃದಯ­ದಿಂದ ಕಾರಿನಲ್ಲಿ ಕುಳಿತು ಮತ್ತೆ ನನ್ನ ಹೃದಯದಲ್ಲಿ ಅಂದು ಸಂಜೆ, ನಾಳೆ, ನಾಡಿದ್ದು ಮಾಡಬೇಕಾದ ಕೆಲಸಗಳ ಕನಸುಗಳನ್ನು ಚಿಗುರಿಸಿಕೊಂಡು ಧಾವಿ­ಸಿದೆ, ನಾಳೆ ಇದ್ದೀತು ಎಂಬ ಭರವಸೆ­ಯಲ್ಲಿ. ನಾವು ಕನಸುಗಳನ್ನು ಹೆಣೆ­ಯುತ್ತೇವೆ, ಅವು ಸಾಕಾರವಾ­ದಾವು ಎಂಬ ನಂಬಿಕೆಯಲ್ಲಿ ಪರಿಶ್ರಮಿಸುತ್ತೇವೆ. ಆದರೆ, ಒಂದೇ ಕ್ಷಣದಲ್ಲಿ ಅದೆಲ್ಲ ಶೂನ್ಯವಾಗಿ ಬಿಡಬ­ಹುದೆಂಬ ವಿಚಾರ ತಿಳಿದೂ ಅದನ್ನು ಪ್ರಜ್ಞಾಪೂರ್ವಕವಾಗಿ ಮರೆಯು­ತ್ತೇವೆ.ಬಹುಶಃ ಇದೇ ಮನುಷ್ಯ ಜೀವನದ ಬಹುದೊಡ್ಡ ಪವಾಡ. ಮುಂದಿನ ಕ್ಷಣವೇ ಬದುಕು ಇಲ್ಲವಾಗುವ ಸಾಧ್ಯತೆಯನ್ನು ತಿಳಿದೂ ಹತ್ತು ವರ್ಷಗಳಲ್ಲಿ ಮಾಡ­ಬೇಕಾದ ಕಾರ್ಯಗಳನ್ನು ಯೋಜಿಸುತ್ತೇವೆ.  ಮಗನ ಶಾಲೆ, ನೌಕರಿ, ಮಗಳ ಮದುವೆ, ಅವಳ ಸಂಸಾರ, ಸೈಟು, ಮನೆ, ಹೊಸ ಕಾರುಗಳು ಇವೆಲ್ಲವುಗಳ ಆಸೆ ನಮ್ಮನ್ನು ದುಡಿಸುತ್ತವೆ. ನನಗೆ ಈ ಘಟನೆಯಲ್ಲಿ ಒಂದು ಸಂದೇಶ ಕಂಡಿತು. ಹೌದು, ಬದುಕು ಅನಿಶ್ಚಿತ.  ಈ ಅನಿಶ್ಚಿತ­ತೆಯೇ ಅದರ ಸೌಂದರ್ಯ. ನಾಳೆ ನಾನು ಬದುಕಿರಲಾರೆ ಎಂಬ ಭಯ­ದಿಂದ ಕಾರ್ಯಮಾಡದಿರುವುದು ಹೇಡಿ­ತನ. ಇಂದೇ ನನ್ನ ಕೊನೆಯ ದಿನ­ವೆಂಬಂತೆ, ಅಷ್ಟರೊಳಗೆ ಸಾಧ್ಯವಾದ­ಷ್ಟನ್ನು ಮಾಡಿಯೇ ತೀರಬೇಕೆಂಬ ಉತ್ಸಾಹದಿಂದ, ಯಾರನ್ನೂ ದ್ವೇಷಿಸದೆ ಕಾರ್ಯತತ್ಪರರಾದರೆ ಮತ್ತಷ್ಟು ದಿನ­ಗಳು ದೊರೆತಾವು. ಆ ಪ್ರಯತ್ನ ನಮ್ಮ ಜೀವನವನ್ನು ಎತ್ತರಕ್ಕೆ ಕೊಂಡೊಯ್ಯ­ಬಹುದು. ಆಗ ಸಾವು ನಮ್ಮನ್ನು ಹೆದರಿಸಲಾರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.