ಶನಿವಾರ, ಜೂನ್ 19, 2021
21 °C

ಕಾಂಗ್ರೆಸ್: ಅಸ್ತಿತ್ವದಲ್ಲಿರಲು ಕಾರಣ ಕಂಡುಕೊಳ್ಳದಿದ್ದರೆ...

ಆಕಾರ್‌ ಪಟೇಲ್ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ಸಿನ ನೈಜ ಸಮಸ್ಯೆ ಏನು? ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವು ಹಿಂದೆಂದೂ ಕಾಣದಂತಹ ಕಷ್ಟದ ಪರಿಸ್ಥಿತಿಯಲ್ಲಿದೆ. ಪಕ್ಷದ ಪುನಶ್ಚೇತನ ಸಾಧ್ಯವಿಲ್ಲವೆಂಬಂತೆ ತೋರುತ್ತಿದೆ. ಪಕ್ಷ ಇನ್ನೆಂದೂ ಸರಿಹೋಗದಂತೆ ಕುಸಿಯುತ್ತಿದೆಯೇ ಅಥವಾ ಹೊಸ ನಾಯಕನೊಬ್ಬನಿಂದ ಪುನಶ್ಚೇತನಕ್ಕೆ ಕಾಯುತ್ತಿದೆಯೇ? ಈ ವಿಚಾರದ ಬಗ್ಗೆ ಗಮನ ಹರಿಸೋಣ.

ಪಕ್ಷದಲ್ಲಿ ಕಾಣುತ್ತಿರುವ ಮೊದಲ ಅಂಶ ‘ನಿರಾಕರಣೆ’. ಅಂದರೆ ಪಕ್ಷ ಶಾಶ್ವತವಾದ ತೊಂದರೆಯನ್ನು ಎದುರಿಸುತ್ತಿಲ್ಲ ಎಂಬ ನಂಬಿಕೆ. ಎರಡು ಕಾರಣಗಳ ಮೂಲಕ ಇದನ್ನು ಅರ್ಥ ಮಾಡಿಕೊಳ್ಳಬಹುದು. ಮೊದಲನೆಯದು: ಕೇವಲ 34 ತಿಂಗಳುಗಳ ಹಿಂದೆ ಅತಿಹೆಚ್ಚಿನ ಸಂಖ್ಯಾಬಲ ಹೊಂದಿ ಪಕ್ಷ ದೇಶವನ್ನು ಆಳುತ್ತಿತ್ತು. ಕಾಂಗ್ರೆಸ್ಸಿನವರೊಬ್ಬರು ಪ್ರಧಾನಿಯಾಗಿ ದೇಶವನ್ನು ನಿರಂತರ 10 ವರ್ಷ ಆಳಿದ್ದರು. 70ರ ದಶಕದಲ್ಲಿ ಇಂದಿರಾ ಗಾಂಧಿ ಅವರಿಗೆ ಮಾತ್ರ ಇದು ಸಾಧ್ಯವಾಗಿತ್ತು. ಇಂಥ ಆಳ್ವಿಕೆಯ ಅವಧಿ ಕೊನೆಗೊಂಡ ನಂತರ ಬರುವ ಕುಸಿತ ತಾತ್ಕಾಲಿಕ, ಕಾಲ ಕಳೆದಂತೆ ಮತದಾರರು ಪಕ್ಷದತ್ತ ಬರುತ್ತಾರೆ ಎಂಬ ನಂಬಿಕೆ ಇರುವುದು ಸಹಜ. ಎರಡನೆಯ ಕಾರಣ: ಕುಟುಂಬದ ನಿಯಂತ್ರಣದಲ್ಲಿರುವ ಯಾವುದೇ ರಾಜಕೀಯ ಪಕ್ಷದ ವಂದಿ, ಮಾಗಧರು ಜನಪ್ರಿಯ ನಾಯಕರಾಗಿರುವುದಿಲ್ಲ. ನಾಯಕರಿಗೆ ಸತ್ಯ ಸಂಗತಿ ತಿಳಿಸಿದ್ದಕ್ಕೆ ಅವರಿಗೆ ಬಹುಮಾನ ಸಿಗುವುದಿಲ್ಲ. ಜನಬೆಂಬಲ ಒಗ್ಗೂಡಿಸುವ ಅನಿವಾರ್ಯ ವಂದಿ, ಮಾಗಧರಿಗೆ ಇರುವುದಿಲ್ಲವಾದ ಕಾರಣ, ಅವರಿಗೆ ತಳಮಟ್ಟದ ವಾಸ್ತವ ಏನೆಂಬುದು ಗೊತ್ತಿರುವುದೂ ಇಲ್ಲ.

ಎರಡನೆಯ ಸಮಸ್ಯೆ, ನಾಯಕ ಇಲ್ಲದಿರುವುದೊಂದೇ ಅಲ್ಲ. ಪಕ್ಷದ ವಿಚಾರಗಳನ್ನು ಸಮರ್ಥವಾಗಿ ಹೇಳುವವರು ಇಲ್ಲ. ನರೇಂದ್ರ ಮೋದಿ ಅವರು ವರ್ಚಸ್ಸು ಇರುವ ನಾಯಕ, ಇನ್ನೊಬ್ಬರಲ್ಲಿ ಭಕ್ತಿ ಮೂಡಿಸುವ ವ್ಯಕ್ತಿ ಎಂಬುದು ನಿಜ. ನಮಗೆಲ್ಲ ಗೊತ್ತಿರುವಂತೆ ಅವರು ಉತ್ತಮ ವಾಗ್ಮಿಯೂ ಹೌದು. ಆದರೆ, ಅವರ ಬಹುದೊಡ್ಡ ಕೌಶಲ ಇರುವುದು ಸಮಸ್ಯೆಗಳನ್ನು ಗೌಣವಾಗಿಸುವಲ್ಲಿ. ಅಂದರೆ, ಮೋದಿ ಅವರು ಭಾರತದ ಸಂಕೀರ್ಣ ಸಮಸ್ಯೆಗಳನ್ನು ತೀರಾ ಸರಳವಾದ ಚೌಕಟ್ಟಿನಲ್ಲಿ ಇಟ್ಟು ತೋರಿಸುತ್ತಾರೆ.

ಉದಾಹರಣೆಗೆ, ‘ದುರ್ಬಲ ಹಾಗೂ ಹೇಡಿ ನಾಯಕತ್ವದಿಂದಾಗಿ ಭಯೋತ್ಪಾದನೆ ನಡೆಯುತ್ತಿದೆ. ನಾನು ಅದನ್ನು ಕೊನೆಗಾಣಿಸುವೆ’ ಎಂದು ಮೋದಿ ಹೇಳಬಲ್ಲರು. ನಾವು ಈಗಾಗಲೇ ನೋಡಿರುವಂತೆ, ಭಯೋತ್ಪಾದನೆ ಕೊನೆಗಾಣಿಸಲು ಮೋದಿ ಅವರಿಗೆ ಸಾಧ್ಯವಾಗಿಲ್ಲ. ಹೀಗಿದ್ದರೂ, ಅವರ ಮಾತುಗಳನ್ನು ಸಮರ್ಥವಾಗಿ ಪ್ರಶ್ನಿಸುವ ಶಕ್ತಿ ಎದುರಾಳಿಯಲ್ಲಿ ಇಲ್ಲ.

ಮೋದಿ ಅವರು ರಾಜಕೀಯ ಚರ್ಚೆಗಳ ರೂಪುರೇಷೆ ಹೇಗಿರಬೇಕು ಎಂಬುದನ್ನು ತಾವೇ ನಿರ್ಧರಿಸಬಲ್ಲರು. ಪ್ರತಿ ಭಾರತೀಯನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ನೋಟು ರದ್ದತಿ ತೀರ್ಮಾನವನ್ನು ಮೋದಿ ಅವರು ಕಪ್ಪುಹಣ, ಭಯೋತ್ಪಾದನೆ ಮತ್ತು ನಕಲಿ ನೋಟುಗಳ ವಿರುದ್ಧದ ದಿಗ್ವಿಜಯ ಎಂದು ಪ್ರಚಾರ ಮಾಡಬಲ್ಲರು!

ಮೋದಿ ಅವರ ಮಾತುಗಳನ್ನು ಶಕ್ತಿಯುತವಾಗಿ ಎದುರಿಸುವ ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ವಿರೋಧಿಸುವಲ್ಲಿನ ಅಸಾಮರ್ಥ್ಯ ರಾಹುಲ್ ಗಾಂಧಿ ಅವರ ಅತಿದೊಡ್ಡ ಸೋಲು. ರಾಹುಲ್ ಅವರು ಸಾರ್ವಜನಿಕರೆದುರು ಮಂದವಾಗಿ ಮಾತನಾಡುವುದು, ಚೈತನ್ಯ ಕಳೆದುಕೊಂಡವರಂತೆ ಇರುವುದೆಲ್ಲ ಗೌಣ. ಕಾಂಗ್ರೆಸ್ಸಿನ ಸಾಧನೆಗಳನ್ನು ತಮ್ಮದಾಗಿಸಿಕೊಳ್ಳುವ ಶಕ್ತಿ, ನರೇಗಾ ಹಾಗೂ ಆಧಾರ್‌ ವಿಚಾರದಲ್ಲಿ ಮೋದಿ ಅವರು ಉಲ್ಟಾ ಹೊಡೆದಿದ್ದನ್ನು ವಿವರಿಸುವ ಸಾಮರ್ಥ್ಯ ರಾಹುಲ್‌ ಅವರಿಗಿಲ್ಲ.

ತಳಮಟ್ಟದಲ್ಲಿ ಕಾರ್ಯಕರ್ತರು ಇಲ್ಲದಿರುವುದು ಕಾಂಗ್ರೆಸ್ಸಿನ ಮೂರನೆಯ ಸಮಸ್ಯೆ. ತಳಮಟ್ಟದಲ್ಲಿ ಕೆಲಸ ಮಾಡಲು ಬಿಜೆಪಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕಾಲಾಳುಗಳಿದ್ದಾರೆ. ಆರ್‌ಎಸ್‌ಎಸ್‌ನ ಲಕ್ಷಾಂತರ ಕಾರ್ಯಕರ್ತರು ಬಿಜೆಪಿಗೆ ಕೆಲಸ ಮಾಡಬಲ್ಲರು. ಅವರಲ್ಲಿ ಹಲವರು ಬದ್ಧತೆ ಇರುವವರು, ಸಂಘದ ವಿಚಾರಗಳಿಂದ ಪ್ರೇರಣೆ ಪಡೆದವರು.

ಕೆಲವು ವರ್ಷಗಳ ಹಿಂದೆ, ಕೆಲವು ವ್ಯಕ್ತಿಗಳ ಹೆಸರು ಹೇಳುವಾಗ ‘ಸ್ವಾತಂತ್ರ್ಯ ಯೋಧ’ ಎಂಬ ಪದಗಳೂ ಕೇಳುತ್ತಿದ್ದವು. ಇವರೆಲ್ಲರೂ ಭೌತಿಕವಾಗಿ ಹೋರಾಟ ನಡೆಸಿದ್ದರು ಎನ್ನಲಾಗದು. ಆದರೆ, ಕಾಂಗ್ರೆಸ್ ಮೂಲಕ ನಡೆಯುತ್ತಿದ್ದ ನಾಗರಿಕ ಹೋರಾಟಗಳ ಮೂಲಕ ಅವರು ಬ್ರಿಟಿಷರನ್ನು ವಿರೋಧಿಸಿದ್ದರು.

30ರ ದಶಕದ ಮಧ್ಯಭಾಗದಲ್ಲಿ ಜನಿಸಿದವರು ನೆಹರೂ ಪರ ಕೆಲಸ ಮಾಡಿರಬಹುದು. ನಂತರದ ಕಾಲದಲ್ಲಿ, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಕಾರಣಕ್ಕೆ, ಇವರು ಇಂದಿರಾ ಪರ ಕೆಲಸ ಮಾಡಿರಬಹುದು. ಆದರೆ 80ರ ದಶಕದ ಅಂತ್ಯದ ವೇಳೆಗೆ ‘ಕಾಂಗ್ರೆಸ್ ಕಾರ್ಯಕರ್ತ’ ಎಂಬ ಜನ ಸಮೂಹ ಮರೆಗೆ ಸರಿಯಲು ಆರಂಭವಾಯಿತು. ಈಗ ಅಂಥದ್ದೊಂದು ಗುಂಪೇ ಇಲ್ಲ. ಹಿಂದುತ್ವ ಅಥವಾ ಕಮ್ಯುನಿಸಂಗೆ ಇರುವಂತೆ ಕಾಂಗ್ರೆಸ್ಸಿಗೆ ಈಗ ನಿರ್ದಿಷ್ಟ ಸಿದ್ಧಾಂತವೇ ಇಲ್ಲ. ಮಾಯಾವತಿ ಮತ್ತು ಅಸಾದುದ್ದೀನ್ ಒವೈಸಿ ಅವರಿಗೆ ದಲಿತರಲ್ಲಿ ಹಾಗೂ ಮುಸ್ಲಿಮರಲ್ಲಿ ಇರುವಂತಹ ನೆಲೆ ಕೂಡ ಕಾಂಗ್ರೆಸ್ಸಿಗೆ ಇಲ್ಲ.

ಈ ಎಲ್ಲ ಕಾರಣಗಳಿಂದಾಗಿ, ಸ್ಥಳೀಯ ಕಾಂಗ್ರೆಸ್ ನಾಯಕರು ತಮ್ಮ ಹಣ ಖರ್ಚು ಮಾಡಿ ತಮ್ಮದೇ ಆದ ಬೆಂಬಲಿಗರ ಪಡೆ ರೂಪಿಸಿಕೊಳ್ಳಬೇಕಾದ ಸ್ಥಿತಿ ಇದೆ.

ಈ ಎಲ್ಲ ಸಮಸ್ಯೆಗಳು ಒಟ್ಟಾಗಿ, ನಾಲ್ಕನೆಯ ಸಮಸ್ಯೆಯೊಂದು ಸೃಷ್ಟಿಯಾಗಿದೆ. ಅದು ಸಂಪನ್ಮೂಲಕ್ಕೆ ಸಂಬಂಧಿಸಿದ್ದು. ಚುನಾವಣೆ ಎದುರಿಸಲು ದೊಡ್ಡ ಪ್ರಮಾಣದಲ್ಲಿ ಹಣ ಬೇಕು. ಈ ಹಣ ಚುನಾವಣಾ ರಾಜಕೀಯಕ್ಕೆ ಎರಡು ಮಾರ್ಗಗಳಿಂದ ಬರುತ್ತದೆ. ಪಕ್ಷಗಳು ದೇಣಿಗೆ ರೂಪದಲ್ಲಿ, ಸದಸ್ಯತ್ವ ಶುಲ್ಕದ ರೂಪದಲ್ಲಿ ಅಥವಾ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸುತ್ತವೆ. ಇದರಲ್ಲಿ ಒಂದು ಭಾಗವನ್ನು ಅಭ್ಯರ್ಥಿಗಳಿಗೆ ವಿತರಿಸಲಾಗುತ್ತದೆ. ಇನ್ನೊಂದು ಭಾಗವನ್ನು ಒಂದೆಡೆ ಕೂಡಿಸಿ ಅದನ್ನು ಪ್ರಚಾರ ಅಭಿಯಾನಕ್ಕೆ, ಪ್ರಯಾಣದ ವೆಚ್ಚಗಳಿಗೆ, ಚುನಾವಣಾ ರ್‌್ಯಾಲಿಗಳಿಗೆ ಮತ್ತಿತರ ವೆಚ್ಚಗಳಿಗೆ ಬಳಸಿಕೊಳ್ಳಲಾಗುತ್ತದೆ. ಪಕ್ಷಗಳಿಗೆ ಹಣ ಬರುವ ಎರಡನೆಯ ಮಾರ್ಗ ಅಭ್ಯರ್ಥಿಗಳು ವೈಯಕ್ತಿಕ ನೆಲೆಯಲ್ಲಿ ಮಾಡುವ ಖರ್ಚುಗಳು. ವಿಧಾನಸಭಾ ಚುನಾವಣೆ ಎದುರಿಸಲು ₹ 10 ಕೋಟಿಗಿಂತ ಹೆಚ್ಚು ಬೇಕು, ಸಂಸತ್ ಚುನಾವಣೆಗೆ ಅದಕ್ಕಿಂತ ಹೆಚ್ಚಿನ ಮೊತ್ತ ಬೇಕು ಎಂದು ಹೇಳಿದರೆ, ಅದೇನೂ ದೊಡ್ಡ ರಹಸ್ಯ ಬಹಿರಂಗಪಡಿಸಿದಂತೆ ಆಗದು.

ಕಾಂಗ್ರೆಸ್‌ ಈಗ ಎರಡು ದೊಡ್ಡ ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ – ಅದು ಕರ್ನಾಟಕ (ಇಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ) ಮತ್ತು ಪಂಜಾಬ್. ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಬೇಕಿರುವಷ್ಟು ಹಣ ಒದಗಿಸಲು ಈ ಎರಡು ರಾಜ್ಯಗಳಿಗೆ ಆಗದು. ಕಾಂಗ್ರೆಸ್ ಟಿಕೆಟ್ ಪಡೆಯುವ ಅಭ್ಯರ್ಥಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡುವುದಿಲ್ಲ. ಸೋಲುವ ಆಟಕ್ಕೆ ದೊಡ್ಡ ಬಂಡವಾಳ ಹೂಡಲು ಮೂರ್ಖನಿಗಾದರೂ ಮನಸ್ಸಿರುತ್ತದೆಯೇ?

ಇವು ಕಾಂಗ್ರೆಸ್‌ನ ಶಾಶ್ವತ ಕುಸಿತಕ್ಕೆ ಕಾರಣವಾಗಿವೆ. ಹಲವು ರಾಜ್ಯಗಳನ್ನು ಕಳೆದುಕೊಂಡಿರುವ ಕಾರಣ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿಯೂ ಸೋಲುತ್ತಿದೆ. ಎರಡು ಪಕ್ಷಗಳು ಮಾತ್ರ ಇರುವ ಗುಜರಾತ್‌ನಂತಹ ರಾಜ್ಯಗಳಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದರೂ ಚುನಾವಣೆ ಗೆಲ್ಲಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಲೋಕಸಭೆ ಹಾಗೂ ವಿಧಾನಸಭೆಗೆ ಗುಜರಾತಿನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕಡೆಯ ಬಾರಿ ಮೇಲುಗೈ ಪಡೆದಿದ್ದು ಎರಡು ದಶಕಗಳ ಹಿಂದೆ!

ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸಗಡದ ರಮಣ್ ಸಿಂಗ್ ಅವರು ತಮ್ಮ ಅವಧಿ ಪೂರ್ಣಗೊಳಿಸುವ ವೇಳೆಗೆ, ಆ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು 15 ವರ್ಷಗಳು ಕಳೆದಿರುತ್ತವೆ. ಅಲ್ಲಿ ಪಕ್ಷ ಶಾಶ್ವತವಾಗಿ ವಿರೋಧ ಪಕ್ಷ ಸಾಲಿನಲ್ಲಿ ಕುಳಿತಿರುವಂತೆ ತೋರುತ್ತಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈಗ, ಉತ್ತರ ಪ್ರದೇಶ, ಬಿಹಾರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬಹು ಹಿಂದಿನಿಂದಲೇ ಕಾಂಗ್ರೆಸ್ ಪಕ್ಷ ಅರ್ಥಪೂರ್ಣ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿದೆ.

ಇಂಥ ಪಕ್ಷಗಳಿಗೆ ಪುನಶ್ಚೇತನ ನೀಡಲು ಹೊಸ ನಾಯಕತ್ವಕ್ಕೆ ಸಾಧ್ಯವಿಲ್ಲ. ಇಂಥ ಪಕ್ಷಗಳು ಹೊಸ ಸಂದೇಶವನ್ನು ಹೊತ್ತು ತರಬೇಕು, ಅಸ್ತಿತ್ವದಲ್ಲಿ ಇರಲು ಹೊಸ ಕಾರಣಗಳನ್ನು ಕಂಡುಕೊಳ್ಳಬೇಕು. 2017ರಲ್ಲಿ ಕಾಂಗ್ರೆಸ್ ಜಾತ್ಯತೀತ ಮೌಲ್ಯ ಸೇರಿದಂತೆ ಧನಾತ್ಮಕವಾದ ಯಾವುದನ್ನೂ ಪ್ರತಿನಿಧಿಸುತ್ತಿಲ್ಲ. ಇದನ್ನು ನಾವು ಒಪ್ಪಿಕೊಳ್ಳಬೇಕು. ಇಂದಿನ ಕೋಪಾವಿಷ್ಟ ರಾಷ್ಟ್ರೀಯವಾದಕ್ಕೆ ಹೆದರಿರುವ ಮುಸ್ಲಿಮನೊಬ್ಬ ತನ್ನ ಮಗನ ಮೃತದೇಹ ಪಡೆಯಲು ನಿರಾಕರಿಸಿದರೆ, ಕಾಂಗ್ರೆಸ್ ಪಕ್ಷ ಅದನ್ನೂ ಹೊಗಳುತ್ತದೆ. ಶತ್ರುತ್ವ ಮತ್ತು ದ್ವೇಷ ಸಾವಿನಲ್ಲೂ ಉಳಿದುಕೊಳ್ಳುತ್ತಿದೆ.

ಮೌಲ್ಯಗಳಿಲ್ಲದ, ವಿಶ್ವಾಸಾರ್ಹತೆ ಇಲ್ಲದ ಇಂಥ ಪಕ್ಷಗಳು ಅಸ್ತಿತ್ವ ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ. ಕಾಂಗ್ರೆಸ್ಸಿಗೆ ಎದುರಾಗಿರುವುದು ಇದೇ ಸ್ಥಿತಿ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.