ಕೋರೆಗಾಂವ್ ವಿಜಯೋತ್ಸವ ದೇಶದ್ರೋಹದ್ದೇ?

7

ಕೋರೆಗಾಂವ್ ವಿಜಯೋತ್ಸವ ದೇಶದ್ರೋಹದ್ದೇ?

ಡಿ. ಉಮಾಪತಿ
Published:
Updated:
ಕೋರೆಗಾಂವ್ ವಿಜಯೋತ್ಸವ ದೇಶದ್ರೋಹದ್ದೇ?

ಕನ್ನಡದ ಮಹತ್ವದ ಬರಹಗಾರರಲ್ಲಿ ಒಬ್ಬರಾದ ಡಾ. ಕೆ.ವೈ.ನಾರಾಯಣಸ್ವಾಮಿ ಅವರು ವರ್ಷಗಳ ಹಿಂದೆ ಬರೆದ ನಾಟಕ ‘ಚಕ್ರರತ್ನ’ ಜೈನ ಸಮುದಾಯದ ಆಗ್ರಹಕ್ಕೆ ತುತ್ತಾಗಿ ನ್ಯಾಯಾಲಯದ ಖಟ್ಲೆಗಳಲ್ಲಿ ಸಿಲುಕಿ ನರಳಿದೆ. ನಾಟಕದ ಪ್ರಮುಖ ಪಾತ್ರಧಾರಿ ಚಮ್ಮಾರ. ಗಾಯಗಳನ್ನು ಹುಡುಕಿಕೊಂಡು ಹೋಗಿ ತನ್ನ ಗಲ್ಲೆಬಾನಿಯ (ಚರ್ಮದ ತಿತ್ತಿ) ನೀರನ್ನು ಗಾಯಾಳಿಗೆ ಕುಡಿಸಿ, ಗಾಯಗಳ ಮೇಲೆ ಸವರಿ ಚಪ್ಪಲಿ ಹೊಲಿಯುವ ಸೂಜಿದಾರಗಳಿಂದ ಗಾಯಗಳನ್ನು ಹೊಲಿದು ಗುಣ ಮಾಡುವಾತ. ಜೈನ ಧರ್ಮದ ಬಾಹುಬಲಿಯನ್ನೇ ಪ್ರತಿಮಾತ್ಮಕವಾಗಿ ಆತನಲ್ಲಿ ಚಿತ್ರಿಸಿದ್ದಾರೆ ಡಾ.ನಾರಾಯಣಸ್ವಾಮಿ. ಮೊದಲ ತೀರ್ಥಂಕರ ಆದಿದೇವನ ಗಾಯಗಳನ್ನು ಹೀಗೆಯೇ ವಾಸಿ ಮಾಡುತ್ತಾನೆ ಚಮ್ಮಾರ. ಜೈನ ಸಮುದಾಯ ನ್ಯಾಯಾಲಯಕ್ಕೆಳೆದ ಈ ಕೃತಿಯು ರಂಗರೂಪ ಧರಿಸಿ ಪ್ರಯೋಗಗಳನ್ನು ಕಂಡಿತ್ತು ಕೂಡ. ಖಟ್ಲೆಗೆ ಅಂಜಿ ಈ ನಾಟಕ ಪ್ರದರ್ಶನಗಳು ನಿಂತು ಹೋಗಿವೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ನದಿ ತೀರದ ಗ್ರಾಮ ಭೀಮಾ ಕೋರೆಗಾಂವ್. ಸನಿಹದ ಮತ್ತೊಂದು ಗ್ರಾಮದಲ್ಲಿ ಶಿವಾಜಿಯ ಮಗ ಸಂಭಾಜಿಯ ಸಮಾಧಿಯಿದೆ. ಅದರ ಪಕ್ಕದಲ್ಲಿರುವ ಮತ್ತೊಂದು ಪುಟ್ಟ ಸಮಾಧಿಯನ್ನು ‘ಅಸ್ಪೃಶ್ಯ’ ಮಹಾರ್ ಜಾತಿಗೆ ಸೇರಿದ ಗೋವಿಂದ ಗಾಯಕವಾಡನದು ಎಂದು ವ್ಯಾಪಕವಾಗಿ ನಂಬಲಾಗಿದೆ. 1689ರಲ್ಲಿ ಔರಂಗಜೇಬನ ಚಿತ್ರಹಿಂಸೆಯಿಂದ ಸಾವಿಗೀಡಾದ ಸಂಭಾಜಿಯ ದೇಹದ ಭಾಗಗಳನ್ನು ಹೊಲಿದು ಒಂದು ಮಾಡಿ ಆನಂತರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು ಇದೇ ಗೋವಿಂದ ಗಾಯಕವಾಡ ಎಂದೂ ನಂಬಲಾಗಿದೆ. ಮರಾಠರು ಈ ಮಾತನ್ನು ಒಪ್ಪುವುದಿಲ್ಲ. ಸಂಭಾಜಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು ಮರಾಠರೇ ವಿನಾ ದಲಿತರಲ್ಲ ಎಂಬುದು ಅವರ ವಾದ. ಕೀಳು ಕುಲದವರು ಬೇಡುವವರೇ ವಿನಾ ನೀಡುವವರಲ್ಲ. ಅವರಿಂದ ನೀಡಿಸಿಕೊಳ್ಳುವುದಕ್ಕಿಂತ ಅವಮಾನ ಮತ್ತೊಂದಿಲ್ಲ ಎಂಬ ಭೇದ ಭಾವದ ಮನುಷ್ಯವಿರೋಧಿ ಮನಸ್ಥಿತಿ ಈ ಎರಡೂ ಘಟನೆಗಳ ಹಿಂದೆ ಕೆಲಸ ಮಾಡಿದೆ.

ಗೋವಿಂದ ಗಾಯಕವಾಡನದೆಂದು ಹೇಳಲಾದ ಸಮಾಧಿಯ ಪಕ್ಕ ಫಲಕವೊಂದನ್ನು ನೆಡಲಾಗಿತ್ತು. ಸಂಭಾಜಿಯ ಅಂತ್ಯಕ್ರಿಯೆ ನೆರವೇರಿಸಿದ ಗಾಯಕವಾಡನ ಸಮಾಧಿಯಿದು ಎಂದು ಸಾರುವ ಫಲಕವದು. ಕಳೆದ ವಾರ ಜನವರಿ ಒಂದರಂದು ದಲಿತರ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಮುನ್ನ ಈ ಫಲಕ ಕಿತ್ತೆಸೆದು ಸಮಾಧಿಯನ್ನು ವಿರೂಪಗೊಳಿಸಲಾಯಿತು. ಲಕ್ಷಾಂತರ ದಲಿತರು ಕೋರೆಗಾಂವ್‌ಗೆ ಭೇಟಿ ನೀಡಲು ಒಂದೆರಡು ದಿನಗಳ ಮುನ್ನ ನಡೆದ ಈ ಕೃತ್ಯ ದಲಿತರು ಮತ್ತು ಮರಾಠರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟುವ ಕಿಡಿಗೇಡಿತನದ್ದು ಎಂದು ಶಂಕಿಸಲಾಗಿದೆ. ಬಹುತೇಕ ಶರದ್ ಪವಾರರ ಎನ್.ಸಿ.ಪಿ. ಮತ್ತು ಶಿವಸೇನೆಯಲ್ಲಿ ಹಂಚಿ ಹೋಗಿರುವ ಮರಾಠರನ್ನು ಬಿಜೆಪಿಗೆ ಒಲಿಸಿಕೊಳ್ಳುವುದು ಕಷ್ಟದ ಕೆಲಸ. ಹರಿದು ಹಂಚಿ ಹೋಗಿರುವ ದಲಿತರ ನಾಯಕ ರಾಮದಾಸ್ ಆಠವಳೆ ಈಗಾಗಲೆ ಎನ್‌ಡಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ, ಅವರಿಗೆಂದು ಬೃಹತ್ ಸ್ಮಾರಕ ಸೌಧ ನಿರ್ಮಿಸಿ ದಲಿತರನ್ನು ಒಲಿಸಿಕೊಳ್ಳಲು ಹೊರಟಿದೆ ಬಿಜೆಪಿ.

ಮೊನ್ನೆ ನಡೆದ ಕೋರೆಗಾಂವ್ ಘರ್ಷಣೆಗಳಿಗೆ ಎಡಪಂಥೀಯರು ಕಾರಣರೆಂದು ಆರೆಸ್ಸೆಸ್ ಮತ್ತು ಬಿಜೆಪಿ ದೂರಿದರೆ, ಕಟ್ಟರ್‌ವಾದಿ ಹಿಂದುತ್ವದ ಶಕ್ತಿಗಳೇ ಈ ಘರ್ಷಣೆಯ ಹಿಂದಿವೆ ಎಂಬುದು ಮತ್ತೊಂದು ಆರೋಪ. ಕೋರೆಗಾಂವ್ ಗ್ರಾಮ ದಲಿತ ಸ್ವಾಭಿಮಾನದ ಐತಿಹಾಸಿಕ ಪ್ರತೀಕಗಳಲ್ಲಿ ಒಂದು. 200 ವರ್ಷಗಳಿಂದ ತಣ್ಣಗೆ ಮಲಗಿದ್ದ ಈ ಹಳ್ಳಿ ಕಳೆದ ವಾರ ಹಠಾತ್ತನೆ ಸಿಡಿದು ಹಿಂಸಾಚಾರದ ತಪ್ಪು ಕಾರಣಗಳಿಗಾಗಿ ದೇಶವ್ಯಾಪಿ ಪ್ರಚಾರ ಪಡೆಯಿತು.

ಸಮಸ್ತ ಹಿಂದೂ ಆಘಾಡಿ ಎಂಬ ಹಿಂದೂ ಸಂಘಟನೆಯ ಮುಖ್ಯಸ್ಥ ಮಿಲಿಂದ್ ಏಕಬೋಟೆ ಮತ್ತು ಶಿವ ಪ್ರತಿಷ್ಠಾನದ ಮನೋಹರ ಅಲಿಯಾಸ್ ಸಂಭಾಜಿ ಭಿಡೆ ಗುರೂಜಿ  ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ತುದಿಯಂಚಿನಲ್ಲೇ ಬಿದ್ದಿರುವ ತಮ್ಮ ಇತಿಹಾಸವನ್ನು ಮುಖ್ಯಧಾರೆಗೆ ತಂದು ಸ್ಥಾಪಿಸುವ ದಲಿತ ಅಸ್ಮಿತೆಯ ಮರುಪ್ರತಿಪಾದನೆ- ದಲಿತ ಮುಂದಾಳುಗಳ ಮೇಲಾಟ ಮತ್ತು ಅದಕ್ಕೆ ಎದುರಾಗಿ ತಲೆಯೆತ್ತಿದ ಬಲಪಂಥೀಯ ಶಕ್ತಿಗಳ ಕತೆಯಿದು. ಈ ಶಕ್ತಿಗಳ ಕಣ್ಣೋಟದ ಕೇಂದ್ರ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳು.

ಮಹಾರಾಷ್ಟ್ರದ ಹಿರಿಯ ಪತ್ರಕರ್ತರ ಪ್ರಕಾರ ಮಾಧ್ಯಮಗಳ ಕೆಲ ವರ್ಗಗಳು ಮತ್ತು ರಾಜಕೀಯ ವರ್ಗವೊಂದು ಈ ಪ್ರಕರಣದಲ್ಲಿ ಹಿತಾಸಕ್ತ ನಿಲುವು ತಳೆದು ಅದಕ್ಕೆ ತಕ್ಕಂತೆ ಘಟನೆಗಳನ್ನು ಬಿಂಬಿಸತೊಡಗಿವೆ. ಹಿಂಸಾಚಾರಕ್ಕೆ ಮೊದಲಿಟ್ಟವರು, ದಲಿತರಲ್ಲ. ವಾಸ್ತವವಾಗಿ ಜನವರಿ ಒಂದರ ಭೀಮಾ ಕೋರೆಗಾಂವ್ 200ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಲ್ಲೆಗೆ ತುತ್ತಾದವರು ಅವರು.

ಪ್ರತಿವರ್ಷ ಜನವರಿ 1ರಂದು ದಲಿತರು ಅದರಲ್ಲೂ ವಿಶೇಷವಾಗಿ ಮಹಾರರು ವಿಜಯಸ್ತಂಭ ಸ್ಮಾರಕಕ್ಕೆ ಗೌರವ ಸಲ್ಲಿಸಲು ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಸೇರುತ್ತಾರೆ. 1818ರ ಜನವರಿ 1ರಂದು ಬ್ರಿಟಿಷ್ ಸೇನೆಗೆ ಸೇರಿದ ಕೆಲವೇ ನೂರು ಮಹಾರ ಸೈನಿಕರು ಪೇಶ್ವೆಗಳ ಸೈನ್ಯ ಸದೆಬಡಿದು ಹಿಮ್ಮೆಟ್ಟಿಸಿದ್ದರು. 1927ರ ಜನವರಿ 1ರಂದು ಡಾ.ಬಿ.ಆರ್.ಅಂಬೇಡ್ಕರ್ ಈ ಸ್ಥಳಕ್ಕೆ ಭೇಟಿ ನೀಡಿ ಮಹಾರ ಹುತಾತ್ಮರಿಗೆ ಗೌರವ ಸಲ್ಲಿಸಿದ್ದರು. ಅಂದಿನಿಂದ ಇಂದಿನವರೆಗೆ ಈ ಪದ್ಧತಿ ಮುಂದುವರೆದಿದೆ.

ಈ ಬಾರಿ ಕದನದ 200ನೆಯ ವಾರ್ಷಿಕೋತ್ಸವಸಲುವಾಗಿ ಲಕ್ಷಾಂತರ ದಲಿತರು ನೆರೆಯುವ ನಿರೀಕ್ಷೆ ಇತ್ತು. ಪುಣೆಯ ಐತಿಹಾಸಿಕ ಶನಿವಾರವಾಡದಲ್ಲಿ ಒಂದು ದಿನ ಮುಂಚಿತವಾಗಿಯೇ ಉತ್ಸವ ಆರಂಭ ಆಗಿತ್ತು. ಆಳಿದ ಪೇಶ್ವೆಗಳ ಸಾಮ್ರಾಜ್ಯದ ರಾಜಧಾನಿ ಶನಿವಾರವಾಡ.  ಭೀಮಾ ಕೋರೆಗಾಂವ್ ಶೌರ್ಯ ದಿನಾಚರಣೆಗೆಂದು ಶನಿವಾರವಾಡ ಕೆಲ ತಾಸುಗಳ ಕಾಲವಾದರೂ ದಲಿತರ ಪಾಲಾಗುವುದನ್ನು ಪೇಶ್ವೆಗಳ ವಂಶಜರು ಮತ್ತು ಇತರೆ ಬ್ರಾಹ್ಮಣ ಗುಂಪುಗಳು ಸಹಿಸಲಿಲ್ಲ. ಭಾರತೀಯ ಸೇನೆಯ ಮೇಲೆ ಬ್ರಿಟಿಷರ ಗೆಲುವಿನ ಉತ್ಸವ ಆಚರಿಸುವುದು ರಾಷ್ಟ್ರವಿರೋಧಿ ಕೃತ್ಯವೆಂದರು. ಪೇಶ್ವೆಗಳ ಮನಸ್ಥಿತಿಯನ್ನು ಬಿಜೆಪಿ ಇನ್ನಾದರೂ ಬಿಡಬೇಕು ಎಂಬ ಜಿಗ್ನೇಶ್ ಮೆವಾನಿ ಮಾತಿಗೆ ಸಭೆ ಉತ್ಸಾಹದಿಂದ ಪ್ರತಿಕ್ರಿಯಿಸಿತ್ತು.

ಮರುದಿನ ಲಕ್ಷಾಂತರ ದಲಿತರು ಕೋರೆಗಾಂವ್‌ಗೆ ನಡೆದು ಸ್ಮಾರಕಕ್ಕೆ ವಂದಿಸಿದರು. ಆದರೆ ಹೀಗೆ ಹೋಗುವ ಮತ್ತು ಬರುವ ದಲಿತರ ಮೇಲೆ ಕಲ್ಲು ತೂರಿ ದಾಳಿ ನಡೆಸಿದ್ದೇ ಅಲ್ಲದೆ ಅವರ ವಾಹನಗಳಿಗೆ ಬೆಂಕಿ ಇಟ್ಟ ಗುಂಪು ಕೇಸರಿ ಬಾವುಟಗಳನ್ನು ಪಟಪಟಿಸಿತ್ತು. ಪ್ರತಿಯಾಗಿ ಮುಂಬೈ ಸೇರಿದಂತೆ ಹಲವೆಡೆ ದಲಿತರ ಪ್ರತಿಭಟನೆ ನಡೆಯಿತು. ಜನವರಿ ಎರಡರ ಸಂಜೆಯ ಹೊತ್ತಿಗೆ ಕೆಲವೆಡೆ ಹಿಂಸಾಚಾರಗಳೂ ನಡೆದವು. ಮರಾಠಾ ಯುವಕನೊಬ್ಬನ ಹತ್ಯೆಯಾಯಿತು. ದಲಿತ ಸಂಘಟನೆಗಳು ಸಾರ್ವಜನಿಕ ಸಾರಿಗೆ ತಡೆದು  ಬಲವಂತದ ಬಂದ್ ಹೇರಿದವು. ಈ ವಿದ್ಯಮಾನಕ್ಕೆ ಭಾರೀ ಪ್ರಚಾರ ದೊರೆಯಿತು. ಆದರೆ ಹಿಂದಿನ ದಿನ ದಲಿತರ ಮೇಲೆ ಹಿಂಸಾಚಾರ ಎಸಗಲಾದ ಸಂಗತಿಯನ್ನು ಬಹುತೇಕ ಮಾಧ್ಯಮಗಳು ಮುಚ್ಚಿಟ್ಟವು.

ಭೀಮಾ ಕೋರೆಗಾಂವ್ ವಿದ್ಯಮಾನದ ಹಿಂದೆ ಬ್ರಾಹ್ಮಣರು ಮತ್ತು ಮರಾಠರ ನಡುವೆ ಬಹುಕಾಲ ಜರುಗಿದ್ದ ಅಧಿಕಾರ ಸಂಘರ್ಷವಿದೆ ಎನ್ನುತ್ತಾರೆ ಮಹಾ

ರಾಷ್ಟ್ರದ ಹಿರಿಯ ಪತ್ರಕರ್ತೆ ಸ್ಮೃತಿ ಕೊಪ್ಪೀಕರ್. ಆರೆಸ್ಸೆಸ್ ಹಿನ್ನೆಲೆಯ ಬ್ರಾಹ್ಮಣ ದೇವೇಂದ್ರ ಫಡಣವೀಸ್ ಅವರಿಗೆ ಮುಖ್ಯಮಂತ್ರಿ ಗಾದಿ ಒಲಿದಿತ್ತು. ಬಲಿಷ್ಠ ಮರಾಠರು ನಿರ್ಲಕ್ಷ್ಯ ಎದುರಿಸಿದರು. ಬ್ರಾಹ್ಮಣ ಪೇಶ್ವಾಗಳು ಮರಾಠಾ ಸಾಮ್ರಾಜ್ಯವನ್ನು ನಿಯಂತ್ರಿಸಿದ್ದಾಗಲೂ ಮರಾಠರು ಇದೇ ಅವಗಣನೆಗೆ ಗುರಿಯಾಗಿದ್ದರು. ಪೇಶ್ವೆಗಳ ಸೈನ್ಯದ ಮೇಲೆ ಬ್ರಿಟಿಷರ ಸೇನೆಯ ವಿಜಯವನ್ನು ಆಚರಿಸುವುದು ದೇಶದ್ರೋಹದ ಕೃತ್ಯ ಎನ್ನುವ ಕೂಗೆದ್ದಿದೆ. ಎಂದಿನಂತೆ ಮೇಲ್ಜಾತಿಗಳ ಮಧ್ಯಮವರ್ಗಗಳು ಈ ಕೂಗಿಗೆ ಧ್ವನಿವರ್ಧಕ ಹಿಡಿದು ನಿಂತಿವೆ. ಜಾತಿಪದ್ಧತಿ ಎಂಬ ದೇಶದ್ರೋಹ ಕುರಿತು ಉಸಿರೆತ್ತದ ಹಿಂದುತ್ವವಾದಿಗಳು, ಮಧ್ಯಮವರ್ಗಿಗಳು ಜಾಣಕಿವುಡರು ಮತ್ತು ಜಾಣ ಕುರುಡರು.

1818ರ ಜನವರಿ1ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ 900 ಸೈನಿಕರು ಶಿರೂರಿನಿಂದ ಪುಣೆಗೆ ಹೆಜ್ಜೆ ಹಾಕಿದ್ದರು. ಎರಡನೆಯ ಬಾಜೀರಾವ್ ಪೇಶ್ವೆಯ 20 ಸಾವಿರ ಯೋಧರ ಸೇನೆ ಎದುರಾಗಿತ್ತು. ಕೋರೆಗಾಂವ್‌ನ ಈ ಯುದ್ಧ ಹೆಚ್ಚು ಕಾಲ ನಡೆಯಲಿಲ್ಲ. ಬ್ರಿಟಿಷರ 200 ಸೈನಿಕರು ಮತ್ತು ಪೇಶ್ವೆಯ 500 ಸೈನಿಕರು ಹತರಾಗಿದ್ದರು. ಅಂದು ಯಾರೂ ಗೆಲ್ಲಲಿಲ್ಲ, ಯಾರೂ ಸೋಲಲಿಲ್ಲ. ಆದರೆ ಆಂಗ್ಲೊ- ಮರಾಠಾ ಯುದ್ಧದಲ್ಲಿ ಅಂತಿಮ ಗೆಲುವು

ಬ್ರಿಟಿಷರದಾಗಿತ್ತು. ಹೀಗಾಗಿ ಕೋರೆಗಾಂವ್‌ನಲ್ಲಿ ಗೆಲುವಿನ ರಣಸ್ತಂಭ ಸ್ಮಾರಕ ನಿರ್ಮಿಸಿದರು. ಗೆದ್ದದ್ದು ಬ್ರಿಟಿಷ್ ಸೇನೆಯಾದರೂ ಸೇನೆಯಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ಮಹಾರಾಷ್ಟ್ರದ ‘ಅಸ್ಪೃಶ್ಯ’ ಜನಾಂಗವಾದ ಮಹಾರರು. ಮೇಲ್ಜಾತಿ ಪೇಶ್ವಾ ಸೇನೆಯ ವಿರುದ್ಧ ಮಹಾರ್ ಗೆಲುವು ದಲಿತ ಹೆಮ್ಮೆಗೆ ಕಾರಣವಾಯಿತು. ಕೆಳಜಾತಿಯವರಾದರೂ ಅವರು ಬಲಿಷ್ಠ ದೇಹವುಳ್ಳವರೂ, ಬಹುತೇಕರು ಸುಂದರಾಂಗರೂ, ಬುದ್ಧಿವಂತರೂ, ತ್ವರಿತ ಗ್ರಹಿಕೆಯವರೂ ಹಾಗೂ ಧೈರ್ಯಶಾಲಿಗಳೂ ಆಗಿದ್ದರೆಂಬುದು ಮಹಾರರ ಕುರಿತು ಬ್ರಿಟಿಷ್ ಅಧಿಕಾರಿ ಹೆನ್ರಿ ಬೇಡನ್ ಪೊವೆಲ್ ಉಲ್ಲೇಖ. ಮಹಾರರ ಸಮರ

ಮೌಲ್ಯವನ್ನು ಬ್ರಿಟಿಷರು ಗುರುತಿಸಿದ್ದರು. ಶಿವಾಜಿ ಮಹಾರಾಜ ಕೂಡ ಮಹಾರರ ಈ ಗುಣ ಗುರುತಿಸಿದ್ದ.

ಶಿವಾಜಿ ಕುರಿತು ಜ್ಯೋತಿರಾವ್ ಫುಲೆ ರಚಿಸಿರುವ ಲಾವಣಿಯಲ್ಲಿ ಈ ಉಲ್ಲೇಖವಿದೆ. ಮರಾಠಾ ಜಾತಿ ಅಸ್ಮಿತೆ ಕ್ಷತ್ರಿಯ ರೂಪ ತಾಳದೆ ಇನ್ನೂ ಕೃಷಿ ಜೊತೆ ತಳಕು ಹಾಕಿಕೊಂಡಿದ್ದ ಶಿವಾಜಿಯ ಕಾಲದಲ್ಲಿ ಮರಾಠರು –ಮಹಾರರ ನಡುವಣ ಕಂದಕ ಹಿರಿದಾಗಿರಲಲ್ಲ ಎನ್ನುತ್ತಾರೆ ಇತಿಹಾಸಕಾರರು. ಶಿವಾಜಿ ಕಾಲದಲ್ಲಿ ಮಹಾರ ಸೈನಿಕರು ಉನ್ನತ ಹುದ್ದೆಗೆ ಏರಿದ್ದರು. ಮುಂದೆ ಪೇಶ್ವೆಗಳ ಕಾಲದಲ್ಲಿ ಮಹಾರರ ಈ ಸ್ಥಾನಮಾನ ಕುಸಿಯಿತು ಎಂದು ಇತಿಹಾಸ ತಜ್ಞೆ ಶ್ರದ್ಧಾ ಕುಂಭೋಜ್ಕರ್ ಬರೆಯತ್ತಾರೆ.

ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸದಂತೆ ಮಹಾರರ ಮೇಲೆ ನಿಷೇಧ ಹೇರಿದ್ದರು ಪೇಶ್ವೆಗಳು. ಶಿವಾಜಿ ಕಾಲದಲ್ಲಿ ಮಹಾರರಿಗೆ ಇದ್ದ ಸಾಮಾಜಿಕ ಮತ್ತು ವೃತ್ತಿ ಸಂಬಂಧದ ಚಲನೆಯನ್ನು ಪೇಶ್ವೆಗಳು ಕತ್ತರಿಸಿ ಒಗೆದಿದ್ದರು. ಈ ಜಾತಿ ಆಧಾರಿತ ಕ್ರೌರ್ಯ ಮಹಾರರ ಸಾಮೂಹಿಕ ನೆನಪಿನಿಂದ ಈವರೆಗೂ ಅಳಿಸಿಲ್ಲ ಎನ್ನುತ್ತಾರೆ ಕುಂಭೋಜ್ಕರ್.

ಬ್ರಿಟಿಷರು ಬಾಂಬೆ ಆರ್ಮಿಗೆ ಸೈನಿಕರನ್ನು ನೇಮಕ ಮಾಡಿಕೊಂಡ ಅವಕಾಶವನ್ನು ಮಹಾರರು ಬಳಸಿಕೊಂಡರು. ಸೇನೆಗೆ ಸೇರುವ ಅವಕಾಶವನ್ನು ಸಾಮಾಜಿಕ ಮತ್ತು ಆರ್ಥಿಕ ಬಿಡುಗಡೆಯ, ತಮ್ಮ ಕಳೆದು ಹೋದ ವೈಭವವನ್ನು ಮರಳಿ ಗಳಿಸುವ ದಾರಿಯನ್ನಾಗಿ ಕಂಡುಕೊಂಡರು. ರಮೋಶಿ, ಮಹಾರ್ ಹಾಗೂ ಮಾಂಗ್‌ನಂಥ ಕೆಳಜಾತಿ ಯೋಧರನ್ನು ಒಳಗೊಂಡ ಪದಾತಿ ದಳವನ್ನು ಶಿವಾಜಿ ಕಟ್ಟಿದ್ದ ರೀತಿಯನ್ನು ಬ್ರಿಟಿಷರೂ ಅನುಕರಿಸಿದರು. ಪೇಶ್ವೆಗಳ ಆಡಳಿತದಲ್ಲಿ ಗುಲಾಮ ಬದುಕನ್ನು ಎದುರಿಸಿದ್ದ ಮಹಾರರು, ತಮ್ಮ ಪೀಡಕರ ಅಧೋಗತಿಯನ್ನು ಕಾಣಲು ಬ್ರಿಟಿಷ್ ಸೇನೆ ಸೇರಲು ಹಿಂದೆ ಮುಂದೆ ನೋಡಲಿಲ್ಲ. ಬ್ರಿಟಿಷ್ ಸೇನೆಯಲ್ಲಿ ಪರಾಕ್ರಮ ಮತ್ತು ನಿಯತ್ತಿನಿಂದ ದುಡಿದರು. ಕದನದಲ್ಲಿ ಪ್ರಾಣತೆತ್ತ 22 ಮಹಾರ ಸೈನಿಕರ ಹೆಸರುಗಳನ್ನು ಬ್ರಿಟಿಷರು ಕೋರೆಗಾಂವ್‌ನಲ್ಲಿ ತಾವು ನಿರ್ಮಿಸಿದ ವಿಜಯಸ್ತಂಭದಲ್ಲಿ ಕೆತ್ತಿಸಿದರು.

ಆನಂತರದ ವರ್ಷಗಳಲ್ಲಿ ಮಹಾರರ ನೇಮಕವನ್ನು ಬ್ರಿಟಿಷರೂ ನಿಲ್ಲಿಸಿದರು. ದಲಿತರ ಪಾಲಿಗೆ ಮೇಲ್ಜಾತಿಗಳ ದೌರ್ಜನ್ಯದ ವಿರುದ್ಧದ ವಿಜಯದ ಪ್ರತೀಕವಾಯಿತು ಕೋರೆಗಾಂವ್ ವಿಜಯಸ್ತಂಭ. ಬ್ರಿಟಿಷರು ಕಡೆಗಣಿಸಿದಂತೆಯೇ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸ ರಚನೆಯಲ್ಲೂ ಮಹಾರರ ಸಮರ ಕೌಶಲ ಮೂಲೆಗುಂಪು ಮಾಡಲಾಯಿತು. ಆದರೆ ತಮ್ಮ ಪಾಲಿನ ಪರಮಪೀಡಕ ಪೇಶ್ವೆಗಳ ಆಡಳಿತವನ್ನು ಕೊನೆಗಾಣಿಸಿದ ಕದನದಲ್ಲಿ ತಾವು ಮೆರೆದ ಪರಾಕ್ರಮದ ಹೆಮ್ಮೆಯು ಮಹಾರರ ಸಾಮೂಹಿಕ ನೆನಪಿನ ಕೋಶದಲ್ಲಿ ಎಂದೆಂದಿಗೂ ಉಳಿಯಿತು.

ಕೋರೆಗಾಂವ್ ಪ್ರಕರಣ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಆದರೆ ಆ ರಾಜ್ಯದಲ್ಲಿ ತಮ್ಮ ಸೈದ್ಧಾಂತಿಕ ಸಂಗಾತಿಗಳಿಗೆ ಮೂಗುದಾರ ತೊಡಿಸುವಸ್ವಾತಂತ್ರ್ಯವಾಗಲೀ, ಸಾಮರ್ಥ್ಯವಾಗಲೀ ಅವರಿಗೆ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry