ಬುಧವಾರ, ಜೂನ್ 23, 2021
25 °C

ಕ್ರಿಪ್ಟೋಕರೆನ್ಸಿ: ಸರ್ಕಾರಿ ಖಾತರಿಯ ಹಂಗಿಲ್ಲದ ದುಡ್ಡು

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಕ್ರಿಪ್ಟೋಕರೆನ್ಸಿ: ಸರ್ಕಾರಿ ಖಾತರಿಯ ಹಂಗಿಲ್ಲದ ದುಡ್ಡು

ಕಳೆದ ವರ್ಷದ ಕೊನೆಯ ಹೊತ್ತಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾದ ಪದವೊಂದಿದೆ ಅದು ‘ಬ್ಲಾಕ್ ಚೈನ್’ (Blockchain). ತಂತ್ರಜ್ಞಾನ ಕ್ಷೇತ್ರದ ಜೊತೆಗೆ ಅಷ್ಟೊಂದು ಒಡನಾಟವಿಲ್ಲದವರೂ ಇದರ ಬಗ್ಗೆ ಚರ್ಚಿಸುತ್ತಿದ್ದರು. ಆದರೆ ಅವರು ಈ ಪದದ ಬದಲಿಗೆ ‘ಬಿಟ್ ಕಾಯಿನ್’ ಎಂಬ ಪದವನ್ನು ಬಳಸುತ್ತಿದ್ದರು. ‘ಬಿಟ್ ಕಾಯಿನ್’ ಎಂಬುದು ಒಂದು ಪರ್ಯಾಯ ಡಿಜಿಟಲ್ ದುಡ್ಡು. ಇದರ ಮೌಲ್ಯ ಎರ್ರಾಬಿರ್ರಿಯಾಗಿ ಏರಿ ಷೇರು ಮಾರುಕಟ್ಟೆ ಮತ್ತು ವಿದೇಶಿ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿ ಲಾಭ ಕಾಣುತ್ತಿದ್ದವರೆಲ್ಲಾ ‘ಬಿಟ್ ಕಾಯಿನ್’ ಎಂಬ ಕ್ರಿಪ್ಟೋಕರೆನ್ಸಿಯ ಮೇಲೆ ಹೂಡಿಕೆ ಮಾಡಲು ಆರಂಭಿಸಿದ್ದರಿಂದ ಬ್ಲಾಕ್‌ ಚೈನ್ ತಂತ್ರಜ್ಞಾನದ ಬಗ್ಗೆ ಸಾಮಾನ್ಯರೂ ಚರ್ಚಿಸುವುದಕ್ಕೆ ಕಾರಣವಾಯಿತು.

ಬಿಟ್ ಕಾಯಿನ್ ಸೇರಿದಂತೆ ಹಲವು ಹೆಸರುಗಳಲ್ಲಿ ಅಸ್ತಿತ್ವ ಕಂಡುಕೊಂಡಿರುವ ಪರ್ಯಾಯ ದುಡ್ಡಿನ ಬಗ್ಗೆ ಹೂಡಿಕೆದಾರರು ಆಸಕ್ತಿ ವಹಿಸಿರುವಂತೆಯೇ ಜಗತ್ತಿನ ಬಹುತೇಕ ಸರ್ಕಾರಗಳು ಸಂಶಯದಿಂದ ನೋಡುತ್ತಿವೆ. ಇವನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತ ತಲೆಕೆಡಿಸಿಕೊಂಡಿವೆ. ಹಣಕಾಸು ತಜ್ಞರಂತೂ ಇದು ಮತ್ತೊಂದು ಬಗೆಯ ಜಾಗತಿಕ ಹಣಕಾಸು ಬಿಕ್ಕಟ್ಟಿಗೆ ಕಾರಣವಾಗಬಹುದೇ ಎಂಬ ಭಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಬಿಟ್ ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಗಳು ಒಡ್ಡಿರುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಈ ಕ್ರಿಪ್ಟೋಕರೆನ್ಸಿ ಎಂಬ ಪರಿಕಲ್ಪನೆಗೆ ಕನಿಷ್ಠ ಎರಡು ದಶಕಗಳ ಇತಿಹಾಸವಿದೆ. 1998ರಲ್ಲಿ ವೀ ದಾಯ್ ಎಂಬ ಕಂಪ್ಯೂಟರ್ ಎಂಜನಿಯಿರ್ ಸೈಬರ್‌ಪಂಕ್ಸ್ ಎಂಬ ಇ-ಮೇಲ್ ಬಳಗದಲ್ಲಿ ಅನಾಮಿಕವಾಗಿ ನಿರ್ವಹಿಸಬಹುದಾದ, ಸಾಮುದಾಯಿಕ ಹೊಣೆಗಾರಿಕೆ ಇರುವ ಡಿಜಿಟಲ್ ದುಡ್ಡಿನ ಪರಿಕಲ್ಪನೆಯೊಂದನ್ನು ಮಂಡಿಸಿದ್ದರು. ಈ ಹಣವನ್ನು ಅಂದು ಅವರು ‘ಬಿ-ಮನಿ’ ಎಂದು ಕರೆದಿದ್ದರು.  ಇದು ಮೂರ್ತರೂಪ ಪಡೆದುಕೊಂಡದ್ದು 2009ರಲ್ಲಿ.  ಜಪಾನಿನ ತಂತ್ರಜ್ಞ  ಸತೋಷಿ ನಕಮೊಟೊ ಆ ಹೊತ್ತಿಗಾಗಲೇ ದೊಡ್ಡ ಗಾತ್ರದ ಡಿಜಿಟಲ್ ಕಡತಗಳನ್ನು ಹಂಚಿಕೊಳ್ಳುವುದಕ್ಕೆ ಇದ್ದ ಪಿಯರ್ ಟು ಪಿಯರ್ ತಂತ್ರಜ್ಞಾನವನ್ನು ಸುಧಾರಿಸಿ ಹೊಸ ಬಗೆಯ ಡಿಜಿಟಲ್ ದುಡ್ಡೊಂದನ್ನು ನಿಜವಾಗಿಸಿ ಇದಕ್ಕೆ ಬಿಟ್ ಕಾಯಿನ್ ಎಂಬ ಹೆಸರಿಟ್ಟರು. ಸಾಂಪ್ರದಾಯಿಕ ದುಡ್ಡಿನಷ್ಟೇ ಪರಿಣಾಮಕಾರಿಯಾಗಿ ಕಂಪ್ಯೂಟರ್ ಜಾಲದೊಳಗೆ ವ್ಯವಹರಿಸಬಹುದಾದ ಈ ಕ್ರಿಪ್ಟೋಕರೆನ್ಸಿಯ ಹಿಂದಿರುವ ತಂತ್ರಜ್ಞಾನವನ್ನು ‘ಬ್ಲಾಕ್ ಚೈನ್’ ಎಂದು ಕರೆಯುತ್ತಾರೆ.

ಡಿಜಿಟಲ್ ವ್ಯವಹಾರ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮೂಲಕ ಕ್ರಿಪ್ಟೋಕರೆನ್ಸಿಯ ವ್ಯವಹಾರವನ್ನು ಅರ್ಥೈಸಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಒಂದು ಪಾವತಿಗೆ ಮುಂದಾದರೆ ಹಣ ಪಡೆದುಕೊಳ್ಳುವವನ ಬಳಿ ಇರುವ ಸ್ವೈಪಿಂಗ್ ಯಂತ್ರ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಬ್ಯಾಂಕ್‌ಗೆ ಕಳುಹಿಸಿ ಅವನ ಖಾತೆಯಲ್ಲಿ ಹಣವಿದೆಯೋ ಇಲ್ಲವೋ ಎಂದು ಪರಿಶೀಲಿಸಿ ಪಾವತಿಯನ್ನು ಅಂಗೀಕರಿಸುತ್ತದೆ. ಅದು ಒಮ್ಮೆ ಅಂಗೀಕಾರವಾದರೆ ಪಾವತಿ ಮಾಡುವವನ ಖಾತೆಯಿಂದ ಹಣ ಯಾರಿಗೆ ಪಾವತಿಸಬೇಕೋ ಅವರಿಗೆ ವರ್ಗಾವಣೆಯಾಗುತ್ತದೆ. ವೀಸಾ, ಮಾಸ್ಟರ್‌, ರೂಪೇ, ಅಮೆಕ್ಸ್‌ನಂಥ ಸೇವೆಗಳು ಬ್ಯಾಂಕ್‌ಗಳ ಸಹಕಾರದೊಂದಿಗೆ ಪಾವತಿಯನ್ನು ಅಂಗೀಕರಿಸುವ ಕೆಲಸ ಮಾಡುತ್ತವೆ. ಈ ಇಡೀ ಪ್ರಕ್ರಿಯೆಯಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುವ ಹಣ ಕೂಡಾ ಸಾಂಪ್ರದಾಯಿಕವಾದದ್ದು. ಅಂದರೆ ಆಯಾ ದೇಶಗಳ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ಗಳ ಖಾತರಿ ಇರುವ ದುಡ್ಡು. ಇದಕ್ಕೆ ಮೌಲ್ಯ ದೊರೆಯುವುದು ವ್ಯವಹರಿಸುವವರು ಅದರ ಮೌಲ್ಯವನ್ನು ಒಪ್ಪಿಕೊಳ್ಳುವುದರಿಂದ. ಈ ಒಪ್ಪಿಗೆಗೆ ಕಾರಣ ಅದಕ್ಕೆ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕುಗಳು ನೀಡಿರುವ ಖಾತರಿ. ಭೌತಿಕ ಸ್ವರೂಪದ ಕರೆನ್ಸಿಯನ್ನು ನೇರವಾಗಿ ಒಬ್ಬರು ಮತ್ತೊಬ್ಬರಿಗೆ ಕೊಡಬಹುದು. ಆನ್‌ಲೈನ್ ವ್ಯವಹಾರವಾದರೆ ವರ್ಗಾವಣೆಯನ್ನು ಖಾತರಿ ಪಡಿಸುವ ಮಧ್ಯವರ್ತಿ ಸಂಸ್ಥೆಯೊಂದು ಬೇಕಾಗುತ್ತದೆ.

ಬಿಟ್‌ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಗಳು ಈ ವ್ಯವಸ್ಥೆಯನ್ನೇ ಅಪ್ರಸ್ತುಗೊಳಿಸುತ್ತಿದೆ. ಇದನ್ನು ಸಾಧ್ಯವಾಗಿಸಿರುವುದು ಬ್ಲಾಕ್‌ಚೈನ್ ತಂತ್ರಜ್ಞಾನ. ಬಿಟ್‌ಕಾಯಿನ್‌ನ ಮೌಲ್ಯಕ್ಕೆ ಖಾತರಿಯನ್ನು ನೀಡುತ್ತಿರುವುದು ಅದನ್ನು ಬಳಸುವವರೇ. ಒಬ್ಬರಿಂದ ಒಬ್ಬರಿಗೆ ವಿನಿಮಯವಾದಾಗ ಆ ವ್ಯವಹಾರವನ್ನು ಮಾನ್ಯ ಮಾಡುವ ಕೆಲಸವೂ ಈ ಬಳಕೆದಾರರ ಗುಂಪಿನಲ್ಲಿರುವವರದ್ದೇ ಆಗಿರುತ್ತದೆ. ಒಬ್ಬ ತನ್ನ ಬಿಟ್ ಕಾಯಿನ್ ವ್ಯಾಲೆಟ್‌ನಲ್ಲಿರುವ ನಿರ್ದಿಷ್ಟ ಮೊತ್ತವನ್ನು ಮತ್ತೊಬ್ಬರಿಗೆ ಕೊಡಲು ಮುಂದಾದರೆ ಅದು ಒಂದು ‘ಬ್ಲಾಕ್’ ಅಥವಾ ಘಟಕ. ಈ ಘಟಕ ಜಾಲದಲ್ಲಿರುವ ಉಳಿದೆಲ್ಲಾ ಘಟಕಗಳಿಗೂ ಈ ವ್ಯವಹಾರವನ್ನು ಪ್ರಸಾರ ಮಾಡುತ್ತದೆ. ಇಡೀ ಜಾಲ ಈ ವ್ಯವಹಾರವನ್ನು ಮಾನ್ಯ ಮಾಡುತ್ತದೆ. ವರ್ಗಾವಣೆಯಾಗುವ ಘಟಕ ವ್ಯವಹಾರದ ಸರಪಳಿಗೆ ಸೇರ್ಪಡೆಯಾಗುತ್ತದೆ. ಘಟಕವೊಂದು ಪ್ರಸಾರ ಮಾಡುವ ಮಾಹಿತಿ ಮತ್ತು ಆ ವ್ಯವಹಾರದ ಮಾನ್ಯಮಾಡುವಿಕೆಗಳು ಅಳಿಸಲು ಅಥವಾ ಮಾರ್ಪಡಿಸಲಾಗದ ಸ್ವರೂಪದಲ್ಲಿರುತ್ತವೆ. ಈ ತಾಂತ್ರಿಕತೆಯೇ ಬಿಟ್ ಕಾಯಿನ್‌ನಂಥ ಕ್ರಿಪ್ಟೋ ಕರೆನ್ಸಿಗಳಿಗೆ ಮಾನ್ಯತೆಯನ್ನು ದೊರಕಿಸಿಕೊಡುತ್ತಿರುವುದು.

ಇದರ ಕುರಿತಂತೆ ಸರ್ಕಾರಗಳು ತಲೆಕೆಡಿಸಿಕೊಳ್ಳುವುದರಲ್ಲಿ ಹುರುಳಿದೆ. ಸಂಪತ್ತಿನ ವಿನಿಮಯವನ್ನು ಸುಲಭವಾಗಿಸಿದ ದುಡ್ಡು ಎಂಬ ಪರಿಕಲ್ಪನೆ ನಿಂತಿರುವುದು ರಾಷ್ಟ್ರವೊಂದರ ಸಾರ್ವಭೌಮತೆಗೆ ಇರುವ ಮಾನ್ಯತೆ ಮೇಲೆ. ಆದರೆ ಇದಷ್ಟೇ ಆ ರಾಷ್ಟ್ರದ ದುಡ್ಡಿಗೆ ಮಾನ್ಯತೆಯನ್ನು ತಂದುಕೊಡುವುದಿಲ್ಲ. ಆ ರಾಷ್ಟ್ರದ ಕೇಂದ್ರೀಯ ಬ್ಯಾಂಕ್ ತಾನು ಮುದ್ರಿಸುವ ಕರೆನ್ಸಿಯ ಮೌಲ್ಯವನ್ನು ಚಿನ್ನ ಅಥವಾ ವಿದೇಶಿ ವಿನಿಮಯ ಮೀಸಲನ್ನು ಇಟ್ಟುಕೊಳ್ಳುವ ಮೂಲಕ ದುಡ್ಡಿಗೆ ಮಾನ್ಯತೆಯನ್ನು ದೊರಕಿಸುತ್ತದೆ. ಕ್ರಿಪ್ಟೋಕರೆನ್ಸಿ ಈ ವ್ಯವಸ್ಥೆಯನ್ನೇ ಅಪ್ರಸ್ತುತಗೊಳಿಸುತ್ತದೆ. ಅಂದರೆ ಸರ್ಕಾರಗಳು ದುಡ್ಡಿನ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತವೆ.

ಇದೇ ಕಾರಣದಿಂದ ಅನೇಕ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಿಟ್ ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಿದವು. ಆದರೆ ಈ ಕ್ರಿಪ್ಟೋಕರೆನ್ಸಿಗಳ ಡಿಜಿಟಲ್ ಸ್ವರೂಪವೇ ಈ ಬಗೆಯ ಮಾನ್ಯತೆ ಮತ್ತು ಅಮಾನ್ಯತೆಯನ್ನೂ ಅಪ್ರಸ್ತುಗೊಳಿಸಿಬಿಟ್ಟಿವೆ. ಡಿಜಿಟಲ್ ಸಂವಹನವನ್ನು ಸಂಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸುವುದು ಎಲ್ಲಾ ಸರ್ಕಾರಗಳಿಗೂ ಅಸಾಧ್ಯ. ಕ್ರಿಪ್ಟೋಕರೆನ್ಸಿಯ ಶಕ್ತಿ ಇರುವುದೂ ಇದರಲ್ಲೇ. ಕೆಲವೇ ಕೆಲವು ದೇಶಗಳು ಇದನ್ನು ಮಾನ್ಯ ಮಾಡುವುದಿಲ್ಲ ಎಂದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ.

ಈ ವಿಚಾರಕ್ಕೆ ಮತ್ತೊಂದು ಆಯಾಮವೂ ಇದೆ. ವರ್ಷದಿಂದ ವರ್ಷಕ್ಕೆ ಕೇಂದ್ರೀಯ ಬ್ಯಾಂಕ್‌ಗಳು ಮತ್ತು ಸರ್ಕಾರದ ಮೇಲೆ ಜನರ ನಂಬಿಕೆಯೂ ಕುಸಿಯತೊಡಗಿದೆ. ಸರ್ಕಾರದ ಹಂಗಿಲ್ಲದ ವಿನಿಮಯ ಮಾದರಿಯೊಂದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಏಷ್ಯಾ ಮತ್ತು ಆಫ್ರಿಕಾದ ಅನೇಕ ರಾಷ್ಟ್ರಗಳಲ್ಲಿರುವ ರಾಜಕೀಯ ಅಸ್ಥಿರತೆ,  ಗ್ರೀಸ್‌ನ ಆರ್ಥಿಕತೆಯ ಕುಸಿತ ಮತ್ತು ಭಾರತದ ನೋಟು ಅಮಾನ್ಯೀಕರಣದಂಥ ಘಟನೆಗಳು ಸರ್ಕಾರದ ಖಾತರಿ ಇರುವ ಕರೆನ್ಸಿಯನ್ನು ಜನರು ಸಂಶಯದಿಂದ ನೋಡುವುದಕ್ಕೆ ಕಾರಣವಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಬಿಟ್ ಕಾಯಿನ್ ಜನ್ಮ ತಳೆದ ಕಾಲಘಟ್ಟವನ್ನೇ ನೋಡಿದರೂ ಇದು ಅರ್ಥವಾಗುತ್ತದೆ. 2008ರ ಅಮೆರಿಕದ ಆರ್ಥಿಕತೆಯ ಕುಸಿತದ ಹಿಂದೆಯೇ ಬಿಟ್ ಕಾಯಿನ್ ಜನ್ಮ ತಳೆಯಿತು. ಅರ್ಜೆಂಟೀನಾದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಟ್ ಕಾಯಿನ್ ತನ್ನ ಮೌಲ್ಯ ಹೆಚ್ಚಿಸಿಕೊಂಡಿತು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಅಭಿವೃದ್ಧಿಹೊಂದಿದ ದೇಶಗಳಲ್ಲಿ ಡಿಜಿಟಲ್ ಸ್ವರೂಪದ ವ್ಯವಹಾರಗಳೇ ಹೆಚ್ಚು. ಭಾರತದಂಥ ಮುದ್ರಿತ ಕರೆನ್ಸಿಯನ್ನೇ ಹೆಚ್ಚಾಗಿ ಬಳಸುತ್ತಿದ್ದ ಆರ್ಥಿಕತೆಗಳಲ್ಲಿ ಕೂಡಾ ಡಿಜಿಟಲ್ ವ್ಯವಹಾರದ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ಡಿಜಿಟಲ್ ವ್ಯವಹಾರ ಹೆಚ್ಚಾದರೆ ತೆರಿಗೆ ವಂಚನೆಯನ್ನು ತಡೆಯುವುದು ಸುಲಭವಾಗುತ್ತದೆ ಎಂಬುದು ಸರ್ಕಾರಗಳ ಲೆಕ್ಕಾಚಾರ. ಕ್ರಿಪ್ಟೋಕರೆನ್ಸಿಗಳು ಸರ್ಕಾರದ ಹಂಗಿನಲ್ಲಿ ಇಲ್ಲದೇ ಇರುವುದರಿಂದ ಸಂಪತ್ತನ್ನು ಈ ಸ್ವರೂಪದಲ್ಲಿ ಸಂಗ್ರಹಿಸುವುದು ಹೆಚ್ಚು ಸುರಕ್ಷಿತ ಎಂದು ತೆರಿಗೆ ವಂಚಿಸುವವರು ಆಲೋಚಿಸುತ್ತಾರೆ. ಹಾಗೆಯೇ ನಮ್ಮ ಮೇಲೆ ಅತಿಯಾಗಿ ತೆರಿಗೆ ವಿಧಿಸಲಾಗುತ್ತಿದೆ ಎಂದು ಭಾವಿಸುವವರೂ ಇದೇ ಹಾದಿಯಲ್ಲಿ ಸಾಗುತ್ತಾರೆ.

ಇನ್ನು ಕ್ರಿಪ್ಟೋಕರೆನ್ಸಿಯ ಭದ್ರತೆಯ ಬಗ್ಗೆ ಇರುವ ಸಂಶಯಗಳಲ್ಲಿ ಬಹಳ ಮುಖ್ಯವಾದುದು ಹ್ಯಾಕರ್‌ಗಳ ಹಾಕಬಹುದಾದ ಕನ್ನ. ಕ್ರಿಪ್ಟೋಕರೆನ್ಸಿಗೆ ವಿಶ್ವಾಸಾರ್ಹತೆಯನ್ನು ತಂದುಕೊಂಟ್ಟಿರುವ ಬ್ಲಾಕ್ ಚೈನ್ ತಂತ್ರಜ್ಞಾನ ಅಸುರಕ್ಷಿತ ಎಂದು ಯಾರೂ ಹೇಳಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಅದರ ವಿರುದ್ಧ ಇರುವ ವಾದಗಳನ್ನು ಗಮನಿಸಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಇಡೀ ಹಣಕಾಸು ವ್ಯವಹಾರವನ್ನು ತನ್ನ ಮೂಗಿನಡಿಯೇಲ್ಲೇ ನಡೆಯುವಂತೆ ನೋಡಿಕೊಳ್ಳುತ್ತೇನೆ ಎಂಬ ಸರ್ಕಾರದ ಅಹಂಕಾರಕ್ಕೆ ಕ್ರಿಪ್ಟೋಕರೆನ್ಸಿ ಸವಾಲೊಡ್ಡುತ್ತಿದೆ ಎಂಬುದು ವಾಸ್ತವ. ಇತ್ತೀಚೆಗೆ ಭಾರತದ ಆದಾಯ ತೆರಿಗೆ ಇಲಾಖೆ ಬಿಟ್ ಕಾಯಿನ್ ಎಕ್ಸ್‌ಚೇಂಜ್‌ಗಳ ಮೇಲೆ ದಾಳಿ ನಡೆಸಿ ಯಾರೆಲ್ಲಾ ಬಿಟ್ ಕಾಯಿನ್ ಖರೀದಿಸಿದ್ದಾರೆ ಎಂಬ ಮಾಹಿತಿ ಪಡೆಯಿತು. ಹೀಗೆ ಖರೀದಿಸಿದವರ ಬಳಿ ಇರುವುದು ಸಂಪತ್ತು ಎಂದು ಭಾವಿಸಿ ತೆರಿಗೆ ವಿಧಿಸಿದರೆ ಭಾರತ ಸರ್ಕಾರದ ಬಿಟ್ ಕಾಯಿನ್‌ಗೆ ಮಾನ್ಯತೆ ನೀಡಿದಂತಾಗುತ್ತದೆ. ಒಂದು ವೇಳೆ ಹಾಗೆ ಮಾಡಲಿಲ್ಲವಾದರೆ ತೆರಿಗೆಗೆ ಅರ್ಹವಾದ ವ್ಯವಹಾರವೊಂದನ್ನು ತೆರಿಗೆಯಿಂದ ಹೊರಗುಳಿಸಿದಂತಾಗುತ್ತದೆ. ಈ ಸವಾಲನ್ನು ಸರ್ಕಾರಗಳು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.