ಶುಕ್ರವಾರ, ಜೂನ್ 18, 2021
21 °C

ಖಾಲಿಯಾಗುವ ಕೋಣೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನಾ ರಾಯಣನ ತಂದೆ ನನ್ನ ಸ್ನೇಹಿತರಾಗಿದ್ದವರು. ಅವರು ಕೇಂದ್ರ ಸರ್ಕಾರದ ಒಂದು ಇಲಾಖೆಯಲ್ಲಿ ಕೆಲಸಮಾಡಿ ನಿವೃತ್ತರಾಗಿದ್ದರು. ಅವರ ಹುದ್ದೆ ಸಣ್ಣದಾದ್ದರಿಂದ ಅವರಿಗೆ ನಿವೃತ್ತಿಯ ನಂತರ ದೊರೆತ ಹಣವೂ ದೊಡ್ಡದೇನೂ ಆಗಿರಲಿಲ್ಲ. ತಮ್ಮ ವೃತ್ತಿಜೀವನದಲ್ಲಿ ಉಳಿಸಿದ ಹಣ ಮತ್ತು ನಿವೃತ್ತಿ­ಯಾ­ದಾಗ ದೊರೆತ ಹಣದಿಂದ ಬೆಂಗಳೂರಿನ ಒಂದು ದೂರದ ಬಡಾ­ವಣೆಯಲ್ಲಿ ಎರಡು ಮಲಗುವ ಕೋಣೆಗಳನ್ನುಳ್ಳ ಪುಟ್ಟ ಮನೆಯನ್ನು ಕಟ್ಟಿಸಿ­ಕೊಂಡು ವಾಸವಾಗಿದ್ದರು. ಪಾಪ!ಆ ಮನೆಯಲ್ಲಿ ಬಹಳ ವರ್ಷ ಬದುಕುವ ಯೋಗ ಅವರಿಗಿರಲಿಲ್ಲ. ಮನೆ ಕಟ್ಟಿದ ಎರಡು ವರ್ಷಕ್ಕೇ ತೀರಿಹೋದರು. ಆಗ ನಾರಾಯಣ ಇಂಜಿನೀಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ್ದ. ತಾಯಿ ತಮ್ಮ ಒಬ್ಬನೇ ಮಗನಾದ ನಾರಾಯಣನಿಗೆ ಮದುವೆ ಮಾಡಿದರು.  ಮುಂದೆ ನಾಲ್ಕು ವರ್ಷದಲ್ಲಿ ಅವರಿಗೊಬ್ಬ ಮೊಮ್ಮಗ ಬಂದ. ಗಂಡಸರಿಗೆ ನಿವೃತ್ತಿ ಎಂಬುದಿದೆ ಆದರೆ ನಮ್ಮ ಮಹಿಳೆಯರಿಗೆ ನಿವೃತ್ತಿಯೇ ಇಲ್ಲ. ವಯಸ್ಸಾದಂತೆ ಕೆಲಸ ಹೆಚ್ಚಾಗುತ್ತಲೇ ಹೋಗುತ್ತದೆ.ನಿಧಾನವಾಗಿ ನಾರಾಯಣನ ತಾಯಿಯ ಆರೋಗ್ಯ ಅಷ್ಟೇನೂ ಚೆನ್ನಾಗಿ ಉಳಿಯಲಿಲ್ಲ. ಆಗಾಗ್ಗೆ ಬಂದುಹೋಗುವ ಮೈನೋವು, ಜ್ವರ, ರಕ್ತದೊತ್ತಡಗಳು ಕಾಡುತ್ತಿದ್ದವೇ ಹೊರತು ಹಾಸಿಗೆ ಹಿಡಿದು ಮಲಗುವಷ್ಟೇನೂ ತೀವ್ರವಾಗಿರಲಿಲ್ಲ. ಮೊನ್ನೆ ನಾರಾಯಣ ಮನೆಗೆ ಬಂದಿದ್ದ. ಅವನ ಜೊತೆಗೆ ಮಗನೂ ಇದ್ದ. ಹುಡುಗನಿಗೆ ಈಗ ಎಂಟು ವರ್ಷ. ಏನೇನೋ ಮಾತನಾಡುವಾಗ ನಾರಾಯಣ ಹೇಳಿದ, ಅಂಕಲ್, ನಮಗೆ ಈಗ ಒಂದು ಸಮಸ್ಯೆ ಬಂದಿದೆ. ನನ್ನ ಮಗ ರಮೇಶ ಈಗ ದೊಡ್ಡವನಾಗಿದ್ದಾನೆ. ನಿಮಗೇ ತಿಳಿದಿ­ರುವ ಹಾಗೆ ನಮ್ಮ ಮನೆಯಲ್ಲಿ ಎರಡು ಮಲಗುವ ಕೋಣೆಗಳಿವೆ. ಒಂದರಲ್ಲಿ ನಾವಿರುತ್ತೇವೆ, ಇನ್ನೊಂದರಲ್ಲಿ ಅಮ್ಮ ಇರುತ್ತಾರೆ.ಈಗ ರಮೇಶನಿಗೊಂದು ಕೋಣೆ ಬೇಕಾಗುತ್ತದೆ. ಈಗೇನೋ ಅಜ್ಜಿಯ ಜೊತೆಗೇ ಇನ್ನೊಂದು ಕೋಣೆ­ಯಲ್ಲಿ ಮಲಗುತ್ತಾನೆ. ಆದರೆ ತನಗೊಂದು ಕೋಣೆ ಬೇಕೆಂದು ಆಗಾಗ ಹಟ ಮಾಡು­ತ್ತಾನೆ. ಇನ್ನೊಂದು ಕೋಣೆ ಎಲ್ಲಿದೆ? ಆಗ ನಾನು ಹೇಳಿದೆ, ಅಲ್ಲಯ್ಯ, ಮಹಡಿ ಮೇಲೆ ಬೇಕಾದಷ್ಟು ಸ್ಥಳ ಇದೆಯಲ್ಲ, ಒಂದು ಕೋಣೆ ಕಟ್ಟಿಸಿಕೋ. ನಾರಾಯಣ ಹೇಳಿದ, ನಾನು ಹಾಗೆಯೇ ಮಾಡಬೇಕು ಎಂದುಕೊಂಡೆ ಅಂಕಲ್. ಅನಂತರ ಅಲೋಚನೆ ಮಾಡಿ ನೋಡಿದೆ.ತಕ್ಷಣಕ್ಕೆ  ಅವಸರಮಾಡುವುದು ಬೇಡ ಎನ್ನಿಸಿತು. ಈಗ ಅಮ್ಮನಿಗೆ ಎಪ್ಪತ್ತಾರು ವರ್ಷ ವಯಸ್ಸು. ಆರೋಗ್ಯವೂ ಚೆನ್ನಾಗಿಲ್ಲ. ಅದನ್ನು ಗಮನಿಸಿದರೆ ಅಬ್ಬಬ್ಬಾ ಎಂದರೆ ಆಕೆ ಇನ್ನು ಎರಡು ವರ್ಷ ಬದುಕಿದರೆ ಹೆಚ್ಚು. ಆಕೆ ಹೋದ ಮೇಲೆ ಆ ಕೋಣೆ ಖಾಲಿಯಾಗುತ್ತದಲ್ಲ. ಅದನ್ನೇ ರಮೇಶನಿಗೆ ಕೊಟ್ಟರಾಯಿತು. ಆ ಕೋಣೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಅಲ್ಲೊಂದು ಮೇಜು, ಕುರ್ಚಿ ಹಾಕಿಕೊಟ್ಟರೆ ಅವನಿಗೆ ತುಂಬ ಚೆನ್ನಾಗಿರು­ತ್ತದೆ. ಮೊನ್ನೆ, ನಾನು, ನನ್ನ ಹೆಂಡತಿ ಆ ಕೋಣೆಯಲ್ಲಿ ಏನೇನು ಬದಲಾವಣೆ ಮಾಡಬೇಕೆಂಬುದನ್ನು ಗುರುತು ಹಾಕಿಕೊಂಡಿದ್ದೇವೆ. ಆತ ಹೇಳುತ್ತಲೇ ಇದ್ದ.  ನನಗೆ ಆಶ್ಚರ್ಯದಿಂದ, ಆತಂಕದಿಂದ, ನೋವಿನಿಂದ ತೆರೆದ ಬಾಯಿಯನ್ನು ಮುಚ್ಚಲಾಗಲಿಲ್ಲ. ತಾಯಿಯ ಏಕೈಕ ಸುಪುತ್ರ ತನ್ನ ತಾಯಿ ಸಾಯವುದನ್ನೇ ಕಾಯುತ್ತಿದ್ದಾನೆ!ಅಷ್ಟೇ ಏಕೆ, ಸತ್ತ ತಕ್ಷಣ ಆ ಕೋಣೆಯನ್ನು ಹೇಗೆ ಬದಲಾ­ಯಿಸಬೇಕು ಎಂಬುದರ ನಕ್ಷೆಯನ್ನು ಮಾಡಿಟ್ಟುಕೊಂಡಿದ್ದಾನೆ! ತನ್ನ ಜೀವವನ್ನೇ ಒತ್ತೆಯಿಟ್ಟು ಜನ್ಮ ನೀಡಿದ ತಾಯಿ ಎಂದು ಹೋದಾಳೋ ಎಂದು ಸುಪುತ್ರ ಎದುರುನೋಡುತ್ತಿದ್ದಾನೆ, ಆ ಒಂದು ಕೋಣೆಗಾಗಿ. ಆಕೆ ಎರಡು ವರ್ಷ ಕೂಡ ಬದುಕದೇ ಹೋಗಬಹುದು, ಮುಂದಿನ ತಿಂಗಳೇ ಆಯುಷ್ಯ ಮುಗಿದು ಹೋಗಬಹುದು.ಆದರೆ ಆಕೆ ಹೋದರೆ ತನಗೆ ಅನುಕೂಲವಾದೀತು ಎಂದು ಯೋಚಿಸುವುದು, ಅದಕ್ಕಾಗಿ ಕಾಯುವುದು ಅತ್ಯಂತ ಅಮಾನವೀಯವಾದದ್ದು ಎನ್ನಿಸಿತು. ಒಂದು ಕ್ಷಣ ತನ್ನ ಮಗನೂ ಒಂದು ದಿನ ತನ್ನ ಸಾವಿಗೆ ಹೀಗೆಯೇ ಕಾಯಬಹುದಲ್ಲ ಎಂಬ ಯೋಚನೆ ಬಂದರೆ ನಾರಾಯಣ ಮತ್ತೆ ಮನುಷ್ಯರಂತೆ ಆತ್ಮೀಯತೆಯಿಂದ ಚಿಂತಿಸಬಹುದೇನೋ. ನಮಗಾಗಿ, ನಮ್ಮಿಂದ ಏನನ್ನೂ ಅಪೇಕ್ಷಿ­ಸದೇ ತಮ್ಮದೆಲ್ಲವನ್ನು ನೀಡಿ ಬಿಡುವ ಎರಡೇ ಜೀವಗಳು ತಾಯಿ ಮತ್ತು ತಂದೆ. ಅವರಿಗೆ ನೋವು ಮಾಡುವ, ಕೆಟ್ಟದ್ದನ್ನು ಬಯಸುವ ಮನಸ್ಸೇ ಮನುಷ್ಯತ್ವದ ಅಧಃಪತನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.