ಸೋಮವಾರ, ಏಪ್ರಿಲ್ 19, 2021
31 °C

ಗಫೂರ್, ಗೋರಾ ಎನ್‌ಕೌಂಟರ್

ಶಿವರಾಮ್ Updated:

ಅಕ್ಷರ ಗಾತ್ರ : | |

ಮಾಲೂರಿನಲ್ಲಿ ಬಾಬುರಾವ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಮನೆಯವರು ಆತಂಕಗೊಂಡು ಹುಟುಕಾಡುವ ಹೊತ್ತಿಗೆ ಅಪಹಾರಣಕಾರರಿಂದ ಫೋನ್ ಬಂತು. ಯಥಾಪ್ರಕಾರ ಅವರು ಒಂದಿಷ್ಟು ಹಣ ನೀಡುವಂತೆ ಒತ್ತಾಯಿಸಿದರು. ಮಾಲೂರು ಪೊಲೀಸರಿಗೆ ಅವರ ಮನೆಯವರು ದೂರು ಕೊಟ್ಟರೂ ಏನೂ ಪ್ರಯೋಜನವಾಗಲಿಲ್ಲ. ವಿಧಿಯಿಲ್ಲದೆ ಆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹಣ ಕೊಟ್ಟೇ ಅವರೆಲ್ಲಾ ಬಿಡಿಸಿಕೊಂಡು ಬರಬೇಕಾಯಿತು.ಅಪಹರಣಗೊಂಡು ಬಿಡುಗಡೆಯಾಗಿದ್ದ ಆ ಉದ್ಯಮಿ ಸಾಕಷ್ಟು ಕಷ್ಟ ಅನುಭವಿಸಿದ್ದರು. ಅಪಹರಣಕಾರರ ಅಟ್ಟಹಾಸವನ್ನು ಅಡಗಿಸಬೇಕೆಂಬ ಕೆಚ್ಚು ಅವರಲ್ಲಿದ್ದರೂ ಅದು ಅವರೊಬ್ಬರರಿಂದ ಸಾಧ್ಯವಿರಲಿಲ್ಲ. ಮಾಲೂರು ಪೊಲೀಸರ ಉದಾಸೀನದ ಕುರಿತೂ ಅವರಿಗೆ ಬೇಸರವಿತ್ತು. ಅವರು ಸಿಟಿ ಕ್ರೈಮ್ ಬ್ರ್ಯಾಂಚ್(ಸಿಸಿಬಿ)ನಲ್ಲಿದ್ದ ನಮ್ಮ ಬಳಿಗೆ ಧಾವಿಸಿಬಂದರು. ಸಾವಿನ ದವಡೆಗೆ ಹೋಗಿ ಪಾರಾಗಿಬಂದಿದ್ದ ಅವರಿಗೆ ಸಹಜವಾಗಿಯೇ ಸಿಟ್ಟು ಕೂಡ ಬಂದಿತ್ತು.ತಾವು ಅನುಭವಿಸಿದ ಕಷ್ಟವನ್ನು ಬೇರೆ ಯಾರೂ ಅನುಭವಿಸಬಾರದೆಂಬ ಕಳಕಳಿಯೂ ಇತ್ತೆನ್ನಿ. ಅದಕ್ಕೇ ಅವರು ಅಪಹರಣಕಾರರ ಜಾಲವನ್ನು ಬುಡಸಮೇತ ಕಿತ್ತೆಸೆಯುವಂತೆ ನಮ್ಮನ್ನು ಕೇಳಿಕೊಂಡರು. ಆ ಪ್ರಕರಣ ನಡೆದದ್ದು ಕೋಲಾರ ಜಿಲ್ಲೆಯಲ್ಲಿ. ಹಾಗಾಗಿ ನಮ್ಮ ವ್ಯಾಪ್ತಿಗೆ ಅದು ಬರುತ್ತಿರಲಿಲ್ಲ. ನೇರಾಗಿ ನಾವೇ ಅಪಹರಣಕಾರರನ್ನು ಹಿಡಿಯಲು ಕಾರ್ಯಪ್ರವೃತ್ತರಾಗುವುದೂ ಸಾಧ್ಯವಿರಲಿಲ್ಲ. ಆದರೂ ನೊಂದಿದ್ದ ಆ ವ್ಯಕ್ತಿ ಸಿಸಿಬಿಯ ಮೇಲೆ ಇಟ್ಟಿದ್ದ ನಂಬಿಕೆ ನಮ್ಮನ್ನು ಹುರಿದುಂಬಿಸುವಂತಿತ್ತು. ಅವರು ಕೊಟ್ಟ ಮಾಹಿತಿ ಮುಂದೆ ಎಂದಾದರೂ ನಮ್ಮ ಕೆಲಸಕ್ಕೆ ನೆರವಾಗುತ್ತದೆ ಎಂದು ಭಾವಿಸಿ ಅವರ ಎಲ್ಲಾ ಮಾತಿಗೂ ಕಿವಿಗೊಟ್ಟೆವು. ನಮ್ಮ ಕಾರ್ಯವ್ಯಾಪ್ತಿಯ ಮಿತಿಯ ಬಗ್ಗೆ ಅವರಿಗೆ ತಿಳಿಸಿದೆವು. ಆದರೂ ನಮ್ಮಷ್ಟಕ್ಕೆ ನಾವು ಅಪಹರಣಕಾರರ ಜಾಡು ಸಿಕ್ಕೀತೆ ಎಂದು ಜಾಗೃತರಾಗಿದ್ದೆವು. ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದ್ದೆವು.2006ರಲ್ಲಿ ರಂಜಾನ್ ಉಪವಾಸ ಮುಗಿದಿದ್ದ ದಿನ. ಹಬ್ಬಕ್ಕೆಂದು ಮಾಡಿದ ಸಿಹಿಯನ್ನು ಅತ್ತೆಮನೆಗೆ ಕೊಟ್ಟು ಬರಲೆಂದು ಮುಸ್ಲಿಂ ಕುಟುಂಬವೊಂದು ಹೊರಟಿತ್ತು. ನಂದಗುಡಿ ಹಾಗೂ ಹೊಸಕೋಟೆ ನಡುವೆ ಸರಹದ್ದಿನಲ್ಲಿ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿದರು. ಆ ಕಾರಿನಲ್ಲಿದ್ದ ಕುಟುಂಬದ ಮುಖ್ಯಸ್ಥ ನಜೀರ್ ಖಾನ್ ಕೆಳಗಿಳಿದರು. ಅವರ ಹೆಂಡತಿ-ಮಕ್ಕಳ ಎದುರಲ್ಲೇ ಅವರನ್ನು ಅಪಹರಣಕಾರರು ಗನ್ ತೋರಿಸಿ ಬೆದರಿಸಿ, ಕಣ್ಣಿಗೆ ಒಟ್ಟೆ ಕಟ್ಟಿ ಅವರನ್ನು ಎಲ್ಲಿಗೋ ಕರೆದೊಯ್ದರು. ಸಿನಿಮೀಯ ರೀತಿಯ ಈ ಘಟನೆಯನ್ನು ಕಂಡು ನಜೀರ್ ಖಾನ್ ಕುಟುಂಬ ತತ್ತರಿಸಿಹೋಯಿತು. ಬಾಯಲ್ಲಿಟ್ಟುಕೊಂಡಿದ್ದ ಹಬ್ಬದ ಬೆಲ್ಲ ಕ್ಷಣಮಾತ್ರದಲ್ಲಿ ಕಹಿ ಎನ್ನಿಸುವಂತಾಗಿತ್ತು.ಅಪಹರಣಕಾರರು ನಜೀರ್ ಖಾನ್ ಬಿಡುಗಡೆ ಮಾಡಲು ಒಂದು ಕೋಟಿ ರೂಪಾಯಿಗೆ ಡಿಮ್ಯಾಂಡ್ ಇಟ್ಟರು. ಅಪಹೃತರ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಜೀರ್ ಖಾನ್ ಶ್ರೀಮಂತರಾಗಿದ್ದರು. ಬಡವರ ಅಪಹರಣವಾಗಿ ದೂರು ದಾಖಲಾದರೆ ಅದು ಆ ಪೊಲೀಸ್ ಠಾಣೆಯವರ ಉಸಾಬರಿಯಷ್ಟೇ ಆಗುತ್ತದೆ. ಆದರೆ, ಹಣವಂತರು ಅಪಹರಣಗೊಂಡರೆ ಇಡೀ ವ್ಯವಸ್ಥೆ ಜಾಗೃತಗೊಳ್ಳುತ್ತದೆ. ವಿಧಾನಸೌಧ ಕೂಡ ಸದ್ದು ಮಾಡುತ್ತದೆ. ನಜೀರ್ ಖಾನ್ ಅಪಹರಣವಾದಾಗ ಆದದ್ದೂ ಅದೇ. ಆ ಅಪಹರಣ ಪತ್ತೆಯ ಜವಾಬ್ದಾರಿಯು ಸಿಸಿಬಿಗೆ ಬಂತು. ಸಿಟಿ ಕ್ರೈಮ್ ಬ್ರ್ಯಾಂಚ್‌ನಲ್ಲಿ ಆಗ ರವಿಕಾಂತೇಗೌಡರು ಡಿಸಿಪಿ ಆಗಿದ್ದರು. ಜಂಟಿ ಆಯುಕ್ತರಾಗಿ ಗೋಪಾಲ್ ಹೊಸೂರ್ ಕೆಲಸ ನಿರ್ವಹಿಸುತ್ತಿದ್ದರು. ಹಿಂದೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಅಪಹರಣದಿಂದ ನಾವು ಕಲೆಹಾಕಿದ್ದ ಮಾಹಿತಿ ಈ ಪ್ರಕರಣದಲ್ಲಿ ನೆರವಿಗೆ ಬಂದಿತು.ಅಪಹರಣಕಾರರ ಕಾರ್ಯವೈಖರಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದೆವು. ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿದಾಗ ಅವರು ಯಾವ ರೀತಿ ವರ್ತಿಸಿದ್ದರೋ ಈಗಲೂ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಅವರು ಬೇಡಿಕೆ ಇಡುತ್ತಿದ್ದ ರೀತಿ, ಮಾತಿನ ಧಾಟಿ, ಅಪಹೃತರ ಕುಟುಂಬದವರನ್ನು ಹೆದರಿಸಲು ಬಳಸುತ್ತಿದ್ದ ತಂತ್ರ ಎಲ್ಲದರಲ್ಲೂ ಸಾಮ್ಯತೆ ಇತ್ತು.ಅಪಹರಣಕಾರರು ತಮ್ಮನ್ನು ಕತ್ತಲುಕೋಣೆಯಲ್ಲಿ ಕೂಡಿಹಾಕಿದ್ದರೆಂದು ಆ ರಿಯಲ್ ಎಸ್ಟೇಟ್ ಉದ್ಯಮಿ ನಮಗೆ ಹೇಳಿದ್ದರು. ಆ ಕತ್ತಲಿನಲ್ಲಿ ಅವರಿಗೆ ಕೇಳಿಸುತ್ತಿದ್ದುದು ಒಂದೇ- ವಿಮಾನ ಇಳಿಯುವ, ಹಾರುವ ಸದ್ದು ಮಾತ್ರ. ಅವರು ಕೊಟ್ಟ ಆ ಮಾಹಿತಿ ಆಧರಿಸಿ ಅಪಹರಣಕಾರರು ಬಹುಶಃ ಎಚ್‌ಎಎಲ್ ವಿಮಾನ ನಿಲ್ದಾಣದ ಸಮೀಪದಿಂದಲೇ ಆಪರೇಟ್ ಮಾಡುತ್ತಿದ್ದಾರೆ ಎಂಬ ಬಲವಾದ ಅನುಮಾನಕ್ಕೆ ನಾವು ಬಂದೆವು. ಅಪಹರಣಕಾರ ಫೋನ್ ಮಾಡಿದಾಗ ಬೇರೆ ಏನು ಸದ್ದು ಕೇಳುತ್ತದೆ ಎಂಬುದನ್ನು ಗ್ರಹಿಸುವಂತೆ ನಜೀರ್ ಖಾನ್ ಕುಟುಂಬದವರಿಗೆ ತಿಳಿಸಿದೆವು. ಅವರೂ ವಿಮಾನ ಹಾರುವ ಸದ್ದು ಕೇಳುತ್ತಿದೆ ಎಂದಾಗ ನಮ್ಮ ಅನುಮಾನ ಇನ್ನೂ ಬಲಗೊಂಡಿತು. ನಮ್ಮ ಮಾಹಿತಿದಾರರ ಜಾಲವನ್ನು ಜಾಗೃತಗೊಳಿಸಿದೆವು. ಈ ಅಪಹರಣದಲ್ಲಿ ಯಾರ ಕೈವಾಡ ಇರಬಹುದೆಂಬ ಲೆಕ್ಕಾಚಾರ ಶುರುಮಾದೆವು. ಅಬ್ದುಲ್ ಗಫೂರ್ ಹಾಗೂ ಗೋರು ಎಂಬುವರ ಗ್ಯಾಂಗ್ ಇತ್ತು. ಈ ಅಪಹರಣದಲ್ಲಿ ಅದರ ಕೈವಾಡ ಇದ್ದೀತೆಂದು ನಾವೆಲ್ಲಾ ಅಂದುಕೊಂಡೆವು. ಟಿಪ್ಪೂ ಎಂಬ ರೌಡಿಯನ್ನು ವಿಚಾರಣೆಗೆ ಒಳಪಡಿಸಿದೆವು. ಅವನನ್ನು ವಿಚಾರಣೆಗೆ ಒಳಪಡಿಸಿದಾಗ ಗಫೂರ್, ಗೋರು ಗ್ಯಾಂಗ್‌ನದ್ದೇ ಕೆಲಸವಿದು ಎಂಬುದು ನಮಗೆ ಖಚಿತವಾಯಿತು. ಶ್ರೀಗಂಧಚೋರನೂ ಆಗಿದ್ದ ಗಫೂರ್ ಬಹಳ ವ್ಯವಸ್ಥಿತವಾಗಿ ಅಪಹರಣಗಳನ್ನು ಮಾಡುತ್ತಿದ್ದ. ನಾಸಿರ್‌ಖಾನ್ ಹಣವಂತರೆಂಬುದು ಅವನಿಗೆ ಖಚಿತವಾಗಿ ಗೊತ್ತಿತ್ತು. ಹಣ ಪಡೆದು ಅವರನ್ನು ಮುಗಿಸುವುದು ಅವನ ತೀರ್ಮಾನವಾಗಿತ್ತು. ಟಿಪ್ಪೂ ನಮಗೆ ಈ ಸಂಗತಿಯನ್ನು ಹೇಳಿದ. ಗಫೂರ್ ಬಳಿ ರಿವಾಲ್ವರ್ ಇದೆ ಎಂಬುದನ್ನೂ ತಿಳಿಸಿದ.ನೀಲಸಂದ್ರದ ಮನೆಯೊಳಗಡೆ ನಜೀರ್ ಖಾನ್ ಅವರನ್ನು ಕೂಡಿಹಾಕಿದ್ದರು. ಅವರ ಕಾಲಿಗೆ ಸರಪಳಿ ಹಾಕಿ ಅಲ್ಲಿ ಇರಿಸಿದ್ದು ಟಿಪ್ಪು. ಮೊದಲಿಗೆ ನಜೀರ್ ಖಾನ್ ಅವರ ಸುರಕ್ಷತೆಯ ಕಡೆಗೆ ನಾವು ಗಮನ ಹರಿಸಿದೆವು. ಅವರು ಸೇಫ್ ಎಂಬುದನ್ನು ಖಾತರಿಪಡಿಸಿಕೊಂಡ ನಂತರ ನಮ್ಮ ಗುರಿ ಇದ್ದದ್ದು ಗಫೂರ್. ನಾವು ಟಿಪ್ಪುವನ್ನು ವಶಕ್ಕೆ ತೆಗೆದುಕೊಂಡಿದ್ದು ಗಫೂರ್‌ಗೆ ಗೊತ್ತಿರಲಿಲ್ಲ.ಸರ್ಜಾಪುರ ರಸ್ತೆಯಲ್ಲಿ ಚೊಕ್ಕಸಂದ್ರ ದಾಟಿದ ಮೇಲೆ ಕೈಕೊಂಡನಹಳ್ಳಿ ಕೆರೆ ಇದೆ. ಅಲ್ಲಿಗೆ ಹಣ ತರುವಂತೆ ಗಫೂರ್ ನಜೀರ್ ಖಾನ್ ಕುಟುಂಬದವರಿಗೆ ಹೇಳಿದ್ದ. ಆಟೋರಿಕ್ಷಾದಲ್ಲೇ ಬರಬೇಕೆಂಬುದನ್ನು ಕಡ್ಡಾಯವೆಂಬಂತೆ ಸೂಚಿಸಿದ್ದ. ನಾನು, ರವಿಕಾಂತೇಗೌಡರು ಹಾಗೂ ನಂಜುಂಡೇಗೌಡರು ಆಟೋದಲ್ಲಿ ಹೋಗಲು ನಿರ್ಧರಿಸಿದೆವು. ಮಧ್ಯರಾತ್ರಿ ಹೊರಟೆವು. ನಾನೇ ಆಟೋ ಓಡಿಸಿದೆ. ಮೊದಲೇ ಟಿಪ್ಪೂ ರಿವಾಲ್ವರ್ ಇರುವ ವಿಷಯ ಹೇಳಿದ್ದರಿಂದ ನಾವು ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಂಡೇ ಹೋಗಿದ್ದೆವು.ಕೈಕೊಂಡನಹಳ್ಳಿ ತಲುಪಿದಾಗ ನೀರವ ರಾತ್ರಿ. ಕತ್ತಲಲ್ಲಿ ನುಗ್ಗಿದ ಗಫೂರ್, ಗೋರಾ ನಮ್ಮ ಸೂಟ್‌ಕೇಸ್ ಕಿತ್ತುಕೊಳ್ಳಲು ಯತ್ನಿಸಿದರು. ನಮ್ಮತ್ತ ಫೈರ್ ಮಾಡಿದರು. ಗುಂಡೊಂದು ನಂಜುಂಡೇಗೌಡರ ಬುಲೆಟ್ ಪ್ರೂಫ್ ಜಾಕೆಟ್‌ಗೆ ತಗುಲಿತು. ನಾವೂ ಕೌಂಟರ್ ಫೈರ್ ಮಾಡಿದೆವು.ನಂಜುಂಡೇಗೌಡರು ಹಾರಿಸಿದ ಬಹುತೇಕ ಗುಂಡುಗಳು ಗಫೂರ್‌ನ ಎದೆಸೇರಿದವು. ಓಡುತ್ತಾ ಹೋಗಿ ಅವನು ಕೆರೆಗೆ ಬಿದ್ದ. ಅಷ್ಟು ಹೊತ್ತಿಗೆ ಅವನ ಪ್ರಾಣ ಹಾರಿಹೋಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಗೋರುವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಿದೆವು. ಅವನು ಅಲ್ಲಿ ಕೊನೆಯುಸಿರೆಳೆದ. ಐದೇ ನಿಮಿಷದಲ್ಲಿ ಇಬ್ಬರ ಕಥೆಯೂ ಮುಗಿದಿತ್ತು. ಟಿಪ್ಪೂ ಅಲ್ಲದೆ ಮಸ್ತಾನ್ ಎಂಬುವನನ್ನು ಕೂಡ ವಶಕ್ಕೆ ತೆಗೆದುಕೊಂಡೆವು.ಇಬ್ಬರು ದುಷ್ಕರ್ಮಿಗಳು ಮಾತ್ರ ತಲೆಮರೆಸಿಕೊಂಡರು. ಇದರೊಂದಿಗೆ ದೊಡ್ಡ ಅಪಹರಣದ ಜಾಲವನ್ನು ಮಟ್ಟಹಾಕಿದ ಹೆಮ್ಮೆ ನಮ್ಮದಾಗಿತ್ತು.

ಚಿತ್ರಹಿಂಸೆ ಅನುಭವಿಸಿದ್ದ ನಜೀರ್ ಖಾನ್ ಕತ್ತಲಿನಿಂದ ಬೆಳಕಿನೆಡೆಗೆ ಬಂದಾಗ ನೋವಿನಿಂದ ಒದ್ದಾಡುತ್ತಿದ್ದರು. ಅವರ ಕಣ್ಣುಗಳ ಸುತ್ತ ಗಾಯದ ಕಪ್ಪುಗುರುತುಗಳಿದ್ದವು. ಒಂದು ಕೋಟಿ ಹಣವನ್ನು ಕೊಡಲು ತಮ್ಮ ಕುಟುಂಬದವರಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದೊಡನೆ ಅಪಹರಣಕಾರರು ಅವರಿಗೆ ಸಾಕಷ್ಟು ಪೆಟ್ಟು ನೀಡಿದ್ದರು. ‘ದೇವರ ಪ್ರಾರ್ಥನೆಯೇ ನನ್ನನ್ನು ಕಾಪಾಡಿದ್ದು. ನೀವೆಲ್ಲಾ ದೇವರ ರೂಪದಲ್ಲಿ ಬಂದವರು’ ಎಂದು ನಾಜಿರ್ ಹೇಳಿದಾಗ ಅವರ ಕುಟುಂಬದವರ ಕಣ್ಣಾಲಿಗಳು ತುಂಬಿ ಬಂದಿದ್ದವು.ಮುಂದಿನ ವಾರ: ರೌಡಿ ನಸ್ರುವಿನ ಕಥೆ ಮುಗಿಸಿದ್ದು...

ಶಿವರಾಂ ಅವರ ಮೊಬೈಲ್ ನಂ.

 94483-13066

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.