ಶುಕ್ರವಾರ, ಫೆಬ್ರವರಿ 26, 2021
30 °C

ಗುಜರಾತ್‌ನಲ್ಲಿ ‘ತ್ರಿಮೂರ್ತಿ’ನೆಚ್ಚಿಕೊಂಡ ಕಾಂಗ್ರೆಸ್‌

ಡಾ. ಸಂದೀಪ್‌ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಗುಜರಾತ್‌ನಲ್ಲಿ ‘ತ್ರಿಮೂರ್ತಿ’ನೆಚ್ಚಿಕೊಂಡ ಕಾಂಗ್ರೆಸ್‌

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಗೆಲುವು ಸಾಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬ ಮಹತ್ವದ ರಾಜಕೀಯ ಸವಾಲಾಗಿತ್ತು. ಆ ರಾಜ್ಯದಿಂದಲೇ ಮೋದಿ ಅವರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರಿಂದ ಅವರಿಗೆ ಅದೊಂದು ಪ್ರತಿಷ್ಠೆಯ ಸಂಗತಿಯೂ ಆಗಿತ್ತು. ಈಗ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಪ್ರಧಾನಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರಿಬ್ಬರಿಗೂ ಇನ್ನೊಂದು ದೊಡ್ಡ ಸವಾಲಾಗಿದೆ.

ಬಿಜೆಪಿ ಬುಟ್ಟಿಯಲ್ಲಿಯೇ ಗುಜರಾತ್‌ ರಾಜ್ಯವನ್ನು ಉಳಿಸಿಕೊಳ್ಳುವುದಷ್ಟಕ್ಕೇನೆ ಈ ಚುನಾವಣಾ ಸಮರ ಸೀಮಿತವಾಗಿಲ್ಲ. ಹಿಂದಿನ ಬಾರಿಗಿಂತ ಉತ್ತಮ ಸಾಧನೆ ಮಾಡಿ ತೋರಿಸುವುದೇ ನಿಜವಾದ ಸವಾಲಾಗಿದೆ. ಇಲ್ಲಿನ ಫಲಿತಾಂಶವು ಮುಂದಿನ ವರ್ಷ ನಡೆಯಲಿರುವ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿ ಆಗಿರಲಿದೆ.

ಒಂದು ವೇಳೆ ಇಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದರೆ, ಅದರಿಂದ ಪಕ್ಷಕ್ಕೆ ಅಗತ್ಯವಾಗಿ ಬೇಕಾಗಿರುವ ನೈತಿಕ ಸ್ಥೈರ್ಯ ವೃದ್ಧಿಸಲಿದೆ. ದಕ್ಷಿಣದ ರಾಜ್ಯಗಳಲ್ಲಿ ಬೇರು ಬಿಡುವ ಪ್ರಯತ್ನಗಳಿಗೆ ಅಗತ್ಯವಾಗಿ ಬೇಕಾಗಿರುವ ಶಕ್ತಿ ತುಂಬಲಿದೆ. ಜತೆಗೆ ಉತ್ತರ ಮತ್ತು ಮಧ್ಯ ಭಾರತದಲ್ಲಿನ ಮೂರು ರಾಜ್ಯಗಳಲ್ಲಿನ ಅಧಿಕಾರ ಉಳಿಸಿಕೊಳ್ಳಲೂ ನೆರವಾಗಲಿದೆ.

ಮೋದಿ ಅವರು ಪ್ರಧಾನಿ ಪಟ್ಟ ಅಲಂಕರಿಸುತ್ತಿದ್ದಂತೆ, ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತಾರಾ ಪ್ರಚಾರಕರಾಗಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಇಂದಿರಾ ಗಾಂಧಿ ಅವರನ್ನು ಹೊರತುಪಡಿಸಿದರೆ, ವಿಧಾನಸಭಾ ಚುನಾವಣೆಗಳಲ್ಲಿ ಪ್ರಧಾನಿಯು ಇಷ್ಟು ಸಕ್ರಿಯವಾಗಿ ಮತ್ತು ಪ್ರಖರ ಪ್ರಚಾರಕರಾಗಿ ಕಾಣಿಸಿಕೊಂಡಿದ್ದು ಮೂರು ದಶಕಗಳಲ್ಲಿ ತುಂಬ ಅಪರೂಪದ ವಿದ್ಯಮಾನವಾಗಿದೆ.

ಬಹುತೇಕ ಪ್ರಧಾನಿಗಳಲ್ಲಿ ಮತದಾರರನ್ನು ಚುಂಬಕದಂತೆ ಸೆಳೆಯುವ ತಾರಾ ವರ್ಚಸ್ಸು ಇದ್ದಿರಲಿಲ್ಲ ಅಥವಾ ಸ್ವಂತ ರಾಜ್ಯಕ್ಕಷ್ಟೇ ಅವರ ಪ್ರಭಾವ ಸೀಮಿತವಾಗಿರುತ್ತಿತ್ತು. ಅಖಿಲ ಭಾರತ ಮಟ್ಟದಲ್ಲಿ ಅಥವಾ ನಿರ್ದಿಷ್ಟ ರಾಜ್ಯದಲ್ಲಿ ಚುನಾವಣಾ ಪ್ರಚಾರ ಭಾಷಣದ ನೇತೃತ್ವ ವಹಿಸಿ ಮತದಾರರ ಮನಸ್ಸಿಗೆ ಲಗ್ಗೆ ಹಾಕುವ ಅತಿ ವಿರಳ ರಾಜಕಾರಣಿಗಳಲ್ಲಿ ಇಂದಿರಾ ಗಾಂಧಿ ಅವರ ಹೆಸರನ್ನು ಪ್ರಮುಖವಾಗಿ ಪರಿಗಣಿಸಲೇಬೇಕಾಗುತ್ತದೆ.

ರಾಷ್ಟ್ರೀಯ ಮುಖಂಡನ ಸಾಮರ್ಥ್ಯ ಮತ್ತು ವ್ಯಕ್ತಿತ್ವದ ಸುತ್ತಲೇ ಗಿರಕಿ ಹೊಡೆಯುವಂತೆ ಬಿಜೆಪಿಯನ್ನು ಬದಲಿಸುವ ಪ್ರಯತ್ನದಲ್ಲಿ ಮೋದಿ ಅವರು ನಿರಂತರವಾಗಿ ಮಗ್ನರಾಗಿದ್ದಾರೆ. ಗುಜರಾತ್‌ ರಾಜ್ಯವು ಪ್ರಧಾನಿಯ ಸ್ವಂತ ರಾಜ್ಯವಾಗಿದೆ. ಅಲ್ಲಿ ಪಕ್ಷವು ಕಡಿಮೆ ಅಂತರದಿಂದ ಅಧಿಕಾರಕ್ಕೆ ಬರುವುದು ಅಥವಾ ಅಧಿಕಾರ ಕಳೆದುಕೊಳ್ಳುವುದು ಮೋದಿ ಅವರಿಗೆ ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ.

ಗುಜರಾತ್‌ನಲ್ಲಿನ ಚುನಾವಣಾ ಕದನವು ಬಹುಬಗೆಯ ಆಯಾಮ ಒಳಗೊಂಡಿರುವುದರ ಜತೆಗೆ ಸಾಕಷ್ಟು ಸಂಕೀರ್ಣವೂ ಆಗಿದೆ.

ಎರಡು ದಶಕಗಳಿಂದ ಬಿಜೆಪಿಯು ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ. ರಾಜ್ಯವನ್ನು ತನ್ನ ರಾಜಕೀಯ ಭದ್ರ ಕೋಟೆಯನ್ನಾಗಿ ಮಾಡಿಕೊಂಡಿದೆ. ಇನ್ನೊಂದೆಡೆ ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಹಲವಾರು ಬಣಗಳಾಗಿವೆ. ಜನರಲ್ಲಿ ಮನೆ ಮಾಡಿರುವ ಆಡಳಿತ ವಿರೋಧಿ ಅಭಿಪ್ರಾಯವನ್ನು ಬಂಡವಾಳ ಮಾಡಿಕೊಳ್ಳುವ ಹಾದಿಯಲ್ಲಿ ಪಕ್ಷವು ದೃಢ ಹೆಜ್ಜೆ ಇಡಲು ವಿಫಲವಾಗಿದೆ. ಪಕ್ಷಕ್ಕೆ ವಿಶ್ವಾಸಾರ್ಹವಾದ ಸ್ಥಳೀಯ ಮುಖಂಡನ ಕೊರತೆ ಇದೆ. ಹೊರಗಿನಿಂದ ತಂದಿರುವ ತ್ರಿಮೂರ್ತಿಗಳಾದ ಹಾರ್ದಿಕ್ ಪಟೇಲ್‌, ಜಿಗ್ನೇಶ್‌ ಮೆವಾನಿ ಮತ್ತು ಅಲ್ಪೇಶ್‌ ಠಾಕೂರ್‌ ಅವರನ್ನೇ ಬಹುವಾಗಿ ನೆಚ್ಚಿಕೊಂಡಿದೆ.

ಬಿಜೆಪಿ ಪಾಲಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ತುಂಬ ಸುಲಭದ ತುತ್ತಾಗಲಿದೆ ಎಂದೇ ಅನೇಕರು ಭಾವಿಸಿದ್ದಾರೆ. ಆದರೆ, ದಿನಗಳು ಉರುಳಿದಂತೆ ಬಿಜೆಪಿ ಪಾಲಿಗೆ ಪರಿಸ್ಥಿತಿಯು ಕಠಿಣವಾಗುತ್ತಲೇ ಹೋಗುತ್ತಿದೆ. ಬಿಜೆಪಿಯು ತನ್ನ ಎದುರಾಳಿಗಳಿಗಿಂತ ಒಂದು ಹೆಜ್ಜೆ ಮುಂದೆ ಇದೆ ಎಂದು ಚುನಾವಣೆ ಮುಂಚಿನ ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಆಡಳಿತಾರೂಢ ಪಕ್ಷ ಮತ್ತು ಪ್ರತಿಪಕ್ಷದ ನಡುವಣ ಅಂತರವು ದಿನೇ ದಿನೇ ಕಡಿಮೆಯಾಗುತ್ತಿದೆ ಎನ್ನುವುದರತ್ತಲೂ ಈ ಸಮೀಕ್ಷೆಗಳು ಬೊಟ್ಟು ಮಾಡಿ ತಿಳಿಸಿವೆ.

ತೀವ್ರ ಹಣಾಹಣಿಗೆ ಯಾವ ವಿದ್ಯಮಾನಗಳು ಗಮನಾರ್ಹ ಕೊಡುಗೆ ನೀಡುತ್ತಿವೆ. ಬಿಜೆಪಿಯ ಹಲವಾರು ಮುಖಂಡರಿಗೆ ಚಿಂತೆಗೆ ಕಾರಣವಾಗಿರುವ ಸಂಗತಿಗಳೇನು ಎನ್ನುವುದರ ಬಗ್ಗೆ ರಾಜ್ಯದಲ್ಲಿ ಚುನಾವಣೆಪೂರ್ವ ನಡೆದ ‘ಲೋಕನೀತಿ–ಸಿಎಸ್‌ಡಿಎಸ್‌’ನ ಎರಡನೇ ಸುತ್ತಿನ ಸಮೀಕ್ಷೆಯು ಅನೇಕ ಆಸಕ್ತಿದಾಯಕ ವಿದ್ಯಮಾನಗಳ ಬಗ್ಗೆ ಒಳನೋಟ ನೀಡುತ್ತದೆ.

ಕಳೆದ ವಾರ ನಡೆದ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಮೊದಲ ವರ್ಷಾಚರಣೆಯು ಬಿಜೆಪಿಯ ಕಟ್ಟಾ ಬೆಂಬಲಿಗರು ಮತ್ತು ಕಟು ಟೀಕಾಕಾರರ ಮಧ್ಯೆ ಆಸಕ್ತಿದಾಯಕ ಚರ್ಚೆಗೆ ಆಸ್ಪದ ನೀಡಿದೆ. ನೋಟು ರದ್ದತಿ ನಂತರ ನಡೆದಿದ್ದ ಜನಾಭಿಪ್ರಾಯ ಸಂಗ್ರಹ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ನೆಲೆಯಲ್ಲಿ ತಮಗಾದ ಸಂಕಷ್ಟಗಳನ್ನು ತೋಡಿಕೊಂಡಿದ್ದರು. ದೀರ್ಘಾವಧಿಯಲ್ಲಿ ದೇಶಕ್ಕೆ ಆಗುವ ಒಳಿತಿನ ಕಾರಣಕ್ಕೆ ಅಲ್ಪಾವಧಿಯಲ್ಲಿನ ಸಂಕಷ್ಟಗಳನ್ನು ಸಹಿಸಿಕೊಂಡಿದ್ದಾಗಿಯೂ ಅವರು ಹೇಳಿಕೊಂಡಿದ್ದರು.

ಭ್ರಷ್ಟಾಚಾರ, ಕಪ್ಪು ಹಣ ಮತ್ತು ಅಕ್ರಮ ಸಂಪತ್ತಿನ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ನೋಟು ರದ್ದತಿ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಆಡಳಿತಾರೂಢ ಪಕ್ಷದ ಮುಖಂಡರು ಸಮರ್ಥಿಸಿಕೊಂಡು ಅದನ್ನು ಕೆಲಮಟ್ಟಿಗೆ ಸಮರ್ಪಕವಾಗಿ ಬಳಸಿಕೊಂಡಿದ್ದರು. ನೋಟು ರದ್ದತಿಯಿಂದ ತಾವು ವೈಯಕ್ತಿವಾಗಿ ಹಲವಾರು ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂದಿದ್ದನ್ನು ಉತ್ತರ ಪ್ರದೇಶದ ಜನರೂ ಹೇಳಿಕೊಂಡಿದ್ದರು. ಆದರೆ, ತಮಗಾದ ಸಂಕಷ್ಟದ ಆಕ್ರೋಶವನ್ನು ಅವರು ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಅಭಿವ್ಯಕ್ತಿ ಮಾಡಿರಲಿಲ್ಲ.

ರಾಜ್ಯ ಸರ್ಕಾರದ ಕುರಿತು ಅವರಲ್ಲಿ ತೀವ್ರ ಅಸಮಾಧಾನ ಮಡುಗಟ್ಟಿತ್ತು. ಇದೇ ಕಾರಣಕ್ಕಾಗಿಯೇ ಮತದಾರರು ತಮ್ಮೆಲ್ಲ ಸಂಕಷ್ಟ ನುಂಗಿಕೊಂಡು ನೋಟು ರದ್ದತಿ ನಿರ್ಧಾರವನ್ನು ಬದಿಗಿಟ್ಟು ಬಿಜೆಪಿ ಬೆಂಬಲಿಸಿದ್ದರು. ಆದರೆ, ಈಗ ಗುಜರಾತ್‌ನಲ್ಲಿ ಭಿನ್ನ ಸ್ವರೂಪದ ಚಿತ್ರಣ ಕಂಡು ಬರುತ್ತಿದೆ.

ಅಲ್ಲೀಗ ಬಿಜೆಪಿ ಅಧಿಕಾರದಲ್ಲಿ ಇದೆ. ತನ್ನ ಸರ್ಕಾರದ ಸಾಧನೆಗಳನ್ನು ಪಕ್ಷವು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಇರುವ ಉದ್ದಿಮೆ ವಹಿವಾಟಿನ ಪ್ರಜ್ಞೆ ಮತ್ತು ಪ್ರಸ್ತುತಿಯು ನೋಟು ರದ್ದತಿಗೆ ಭಿನ್ನ ಸ್ವರೂಪದಲ್ಲಿ ಸ್ಪಂದಿಸಿದೆ. ಸಾರ್ವಜನಿಕರ ಮನಸ್ಥಿತಿ ಇಲ್ಲಿ ಭಿನ್ನವಾಗಿದೆ. ಜತೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಲ್ಲಿ ಎದುರಾಗಿರುವ ಅನನುಕೂಲಗಳು ವಣಿಕ ಸಮುದಾಯದಲ್ಲಿ ಸಾಕಷ್ಟು ಕಸಿವಿಸಿ ಮೂಡಿಸಿವೆ.

ಚುನಾವಣೆಗೆ ಮೊದಲು ಜನರ ಮನದ ಇಂಗಿತದ ಜಾಡು ಗುರುತಿಸುವ ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆಯಲ್ಲಿ  ಮೂರನೇ ಒಂದರಷ್ಟು ಜನರು ನೋಟು ರದ್ದತಿ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಇಷ್ಟೇ ಸಂಖ್ಯೆಯ ಇತರರೂ ಅದನ್ನು ಕಟುವಾಗಿ ಟೀಕಿಸಿದ್ದಾರೆ. ಉಳಿದವರಲ್ಲಿ ಈ ನಿರ್ಧಾರದ ಬಗ್ಗೆ ಖಚಿತ ನಿಲುವೇ ಕಂಡು ಬಂದಿಲ್ಲ. ಜಿಎಸ್‌ಟಿಗೆ ವ್ಯಕ್ತವಾದ ಜನಾಭಿಪ್ರಾಯವು ಇನ್ನಷ್ಟು ನಕಾರಾತ್ಮಕವಾಗಿದೆ. ಹೊಸ ತೆರಿಗೆ ವ್ಯವಸ್ಥೆ ಬಗ್ಗೆ ಪ್ರತಿ 10 ಜನರಲ್ಲಿ ನಾಲ್ವರು ತೀವ್ರ ಅಸಮಾಧಾನ ಹೊಂದಿದ್ದಾರೆ. ಬರೀ ಕಾಲುಭಾಗ ಜನರು ಮಾತ್ರ ಇದನ್ನು ಅನುಮೋದಿಸಿದ್ದಾರೆ.

ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದ ಹೆಚ್ಚು ತೊಂದರೆಗೆ ಒಳಗಾದವರು ಯಾರು ಎನ್ನುವುದು ನಮಗೆಲ್ಲ ಗೊತ್ತಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದವರು ಅಭಿಪ್ರಾಯಪಟ್ಟಿರುವುದು ಹೆಚ್ಚು ಮಹತ್ವದ ಸಂಗತಿಯಾಗಿದೆ. ವರ್ತಕ ಸಮುದಾಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಸುವವರ ನಡುವಣ ಅಂತರ ಕೇವಲ ಶೇ 4ರಷ್ಟಕ್ಕೆ ಇಳಿದಿದೆ.

ರಾಜಕೀಯವಾಗಿ ಹೆಚ್ಚು ಪ್ರಭಾವಿ ಸಮುದಾಯವಾಗಿರುವ ಪಟೇಲ್‌ ಸಮಾಜವು ಇದುವರೆಗೆ ಬಿಜೆಪಿಯ ಬೆನ್ನಿಗೆ ನಿಂತಿತ್ತು. ಆದರೆ, ಈಗ ಅದರ ಬೆಂಬಲ ಕ್ರಮೇಣ ಕ್ಷೀಣಿಸುತ್ತಿದೆ. ಪಕ್ಷದ ಬಗ್ಗೆ ಯುವ ಮತದಾರರಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಸಮಾಧಾನ ಮಡುಗಟ್ಟಿರುವುದು ಬಿಜೆಪಿ ಪಾಲಿಗೆ ಹೆಚ್ಚು ಆತಂಕ ಮೂಡಿಸಿರುವ ಸಂಗತಿಯಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿರುವವರೂ ಒಳಗೊಂಡಿರುವ ಅರ್ಧದಷ್ಟು ಮತದಾರರು, ಜನಸಾಮಾನ್ಯರ ಪಾಲಿಗೆ ಇದುವರೆಗೂ ‘ಒಳ್ಳೆಯ ದಿನಗಳು’ (ಅಚ್ಛೇ ದಿನ್‌) ಬಂದೇ ಇಲ್ಲ ಎಂದು ಸಮೀಕ್ಷೆಯಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಚುನಾವಣೆ ಮೊದಲು ಕೇಂದ್ರ ಸರ್ಕಾರವು ಗುಜರಾತ್‌ ರಾಜ್ಯಕ್ಕೆ ಪ್ರಕಟಿಸಿದ ಸರಣಿಯೋಪಾದಿಯಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ಜನರಲ್ಲಿ ಸಿನಿಕತನ ಮನೆ ಮಾಡಿರುವುದು ಕಂಡು ಬಂದಿದೆ. ಚುನಾವಣೆಯಲ್ಲಿ ಮತಗಳನ್ನು ಸೆಳೆಯುವ ಏಕೈಕ ಉದ್ದೇಶದಿಂದಷ್ಟೇ ಈ ಯೋಜನೆಗಳನ್ನು ಘೋಷಿಸಲಾಗಿದೆ ಎಂಬುದು ಬಹುಸಂಖ್ಯಾತರ ನಿಲುವಾಗಿದೆ.

ಕಾಂಗ್ರೆಸ್‌ನಲ್ಲಿ ತಡವಾಗಿ ಸಮರೋತ್ಸಾಹ ಕಂಡು ಬಂದಿರುವುದಷ್ಟೇ ಬಿಜೆಪಿ ಪಾಲಿಗೆ ಕೊಂಚ ಸಮಾಧಾನ ತರುವ ವಿದ್ಯಮಾನವಾಗಿದೆ. ಸ್ಥಳೀಯ ಪ್ರಭಾವಿ ಮುಖಂಡನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಬಿಜೆಪಿಯ ಪ್ರಚಾರ ತಂತ್ರಕ್ಕೆ ಪ್ರತ್ಯುತ್ತರ ಕೊಡಲು ತ್ರಿಮೂರ್ತಿಗಳಾದ ಹಾರ್ದಿಕ್‌ ಪಟೇಲ್‌, ಜಿಗ್ನೇಶ್‌ ಮೆವಾನಿ ಮತ್ತು ಅಲ್ಪೇಶ್‌ ಠಾಕೂರ್‌ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ.

ಎರಡು ದಶಕಗಳಿಂದ ಅಧಿಕಾರದಿಂದ ದೂರ ಇರುವ, ರಾಜಕೀಯ ನೆಲೆ ತಪ್ಪಿರುವ ಕಾಂಗ್ರೆಸ್‌ ಪಕ್ಷಕ್ಕೆ ಸದ್ಯಕ್ಕೆ ಸಮರ್ಥ ನಾಯಕತ್ವದ, ದೀರ್ಘಾವಧಿ ಕಾರ್ಯತಂತ್ರ ರೂಪಿಸುವ ಮತ್ತು ನಿರಂತರ ಪ್ರಚಾರ ಹಮ್ಮಿಕೊಳ್ಳುವ ಅಗತ್ಯ ಇದೆ. ರಾಜ್ಯದಲ್ಲಿ ಚುನಾವಣಾ ಬಿಸಿ ಏರುತ್ತಿದ್ದಂತೆ ಕಾಂಗ್ರೆಸ್‌ ಮುಖಂಡ ಭರತ್‌ಸಿಂಹ ಸೋಲಂಕಿ ಅವರ ಜನಪ್ರಿಯತೆ ಏರುಗತಿಯಲ್ಲಿ ಸಾಗಿದೆ. ಪ್ರಚಾರ ಭರಾಟೆಯಲ್ಲಿ ಅವರು ಗಮನ ಸೆಳೆಯುತ್ತಿದ್ದಾರೆ. ಆದರೆ ಭದ್ರವಾಗಿ ಬೇರುಬಿಟ್ಟಿರುವ ಬಿಜೆಪಿಯ ನೆಲೆ ತಪ್ಪಿಸಲು ಕಾಂಗ್ರೆಸ್‌ನ ಈ ಎಲ್ಲ ಪ್ರಯತ್ನಗಳು ಸಾಕಾಗುತ್ತಿಲ್ಲ.

ಲೋಕನೀತಿ– ಸಿಎಸ್‌ಡಿಎಸ್‌ ಸಮೀಕ್ಷೆ ಅನ್ವಯ, ಹಾರ್ದಿಕ್‌ ಪಟೇಲ್‌, ಜಿಗ್ನೇಶ್‌ ಮೆವಾನಿ ಮತ್ತು ಅಲ್ಪೇಶ್‌ ಠಾಕೂರ್‌ ಅವರು ತಮ್ಮ, ತಮ್ಮ ಸಾಮಾಜಿಕ ವಲಯದಲ್ಲಿ ಸಾಕಷ್ಟು ಜನ ಬೆಂಬಲ ಗಳಿಸುವಲ್ಲಿ ಸಫಲರಾಗಿರುವಂತೆ ಕಂಡು ಬಂದಿದೆ. ಇತರರಿಂದ ಅವರಿಗೆ ತೀವ್ರ ಸ್ಪರ್ಧೆಯೂ ಎದುರಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ಕಂಡುಬರುತ್ತಿರುವ ಇಂತಹ ರಾಜಕೀಯ ಜಿದ್ದಾಜಿದ್ದಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದು ತನ್ನ ಮುಳುಗುತ್ತಿರುವ ಹಡಗನ್ನು ರಕ್ಷಿಸಿಕೊಳ್ಳಲು ಬಿಜೆಪಿಗೆ ನೆರವಾಗಲಿದೆ ಎನ್ನುವ ಭಾವನೆ ಮೂಡಿಸುತ್ತದೆ.

ಇದೆಲ್ಲ ಏನೇ ಇರಲಿ, ಒಟ್ಟಾರೆ ಗುಜರಾತ್ ವಿಧಾನಸಭಾ ಚುನಾವಣೆಯು ಸಾಕಷ್ಟು ಆಸಕ್ತಿದಾಯಕವಾಗಿರುವುದಂತೂ ನಿಜ. ಚುನಾವಣಾ ಪ್ರಚಾರದ ತೀವ್ರತೆ ಮತ್ತು ಹಿನ್ನಡೆಗಳು ಮುಂದಿನ ಕೆಲ ವಾರಗಳಲ್ಲಿ ಜನರ ಮನಸ್ಥಿತಿಯನ್ನು ನಾಟಕೀಯವಾಗಿ ಬದಲಿಸಲಿವೆ ಎನ್ನುವುದಂತೂ ನಿಜ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.