ಭಾನುವಾರ, ಮಾರ್ಚ್ 29, 2020
19 °C

ಗುಜರಾತ್‌ ಬಿಜೆಪಿಯಲ್ಲಿ ತಲ್ಲಣ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಗುಜರಾತ್‌ ಬಿಜೆಪಿಯಲ್ಲಿ ತಲ್ಲಣ

‘ನೀವು ಗುಜರಾತ್‌ಗೆ ಹೋಗಿದ್ದೀರಾ, ಅಲ್ಲಿ ಚುನಾವಣಾ ಕಾವು ಹೇಗಿದೆ, ಪ್ರಚಾರ ಯಾವ ದಿಕ್ಕಿನಲ್ಲಿ ಸಾಗಿದೆ. ಈ ಬಾರಿ ಬದಲಾವಣೆ ಸಾಧ್ಯತೆ ಇದೆಯೇ?’ – ಇಂತಹ ಪ್ರಶ್ನೆಗಳು ಇತ್ತೀಚಿಗೆ ಪತ್ರಕರ್ತರ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿವೆ. ಇವುಗಳಿಗೆಲ್ಲ ನಾನು ಇಲ್ಲ ಎಂದೇ ಉತ್ತರಿಸಿರುವೆ. ಈ ಬಾರಿಯ ಚುನಾವಣಾ ಪ್ರಚಾರ ಸಂದರ್ಭದಲ್ಲಿ ನಾನು ಗುಜರಾತ್‌ಗೆ ಭೇಟಿ ನೀಡಿಲ್ಲ. ಚುನಾವಣೆಯ ಗಾಳಿ ಯಾವ ದಿಕ್ಕಿನತ್ತ ಬೀಸುತ್ತಿದೆ ಎಂದು ಆಘ್ರಾಣಿಸುವ ಶಕ್ತಿಯೂ ನನಗಿಲ್ಲ.

ಇಂತಹ ಸಂದರ್ಭದಲ್ಲಿ ನಾನೇನು ಮಾಡಬಲ್ಲೆ? ರಾಜಕಾರಣಿಗಳ ರಾಜಕೀಯ ನಡೆ, ಅವರ ಹೇಳಿಕೆ – ಪ್ರತಿಕ್ರಿಯೆ, ರಾಜಕಾರಣಿಗಳ ಮುಖದಲ್ಲಿನ ಕಳೆ, ಭಾಷಣದಲ್ಲಿ ಬಳಸುವ ಶಬ್ದ ಭಂಡಾರ, ಬದಲಾಗುವ ಕಾರ್ಯತಂತ್ರ ಮತ್ತು ಚುನಾವಣಾ ಪ್ರಚಾರದ ಬದಲಾದ ವೈಖರಿಗಳನ್ನು ಗಮನಿಸುತ್ತಿದ್ದೇನೆ. ಇವೆಲ್ಲವೂ, ಗುಜರಾತ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆಯೇ ಇಲ್ಲವೆ ಎನ್ನುವುದರ ಬಗ್ಗೆ ತಮ್ಮದೇ ಆದ ಸುಳಿವು ಕೊಡುತ್ತಿವೆ. ಈ ತಿಂಗಳ 18ರಂದು ಪ್ರಕಟಗೊಳ್ಳುವ ಫಲಿತಾಂಶದ ಹಣೆಬರಹ ಏನೇ ಇರಲಿ, ಸದ್ಯಕ್ಕೆ ಬಿಜೆಪಿಯಲ್ಲಿ ಒಂದು ಬಗೆಯ ನಿರುತ್ಸಾಹವಂತೂ ಕಂಡು ಬರುತ್ತಿರುವುದು ನಿಚ್ಚಳವಾಗಿದೆ. 2014ರ ನಂತರ ಇದುವರೆಗೂ ಪಕ್ಷಕ್ಕೆ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ.

ಬಿಜೆಪಿ ಮುಖಂಡರು ಗುಜರಾತ್‌ ಬಗ್ಗೆ ಚಿಂತಿತರಾಗಿದ್ದಾರೆ. ರಾಹುಲ್‌ ಗಾಂಧಿ ತೋರಿಸುತ್ತಿರುವ ಬದ್ಧತೆ ಅವರಿಗೆ ವ್ಯಕ್ತವಾಗುತ್ತಿರುವ ಜನಬೆಂಬಲ ಕಂಡು ಅವರೆಲ್ಲ ಚಕಿತಗೊಂಡಿದ್ದಾರೆ. ಮತದಾರರಲ್ಲಿ, ಅದರಲ್ಲೂ ವಿಶೇಷವಾಗಿ ಯುವ ಸಮುದಾಯದಲ್ಲಿ ಆಕ್ರೋಶ ಮಡುಗಟ್ಟಿರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಜಾತಿ ಸಮೀಕರಣವನ್ನು ಕಲಸುಮೇಲೋಗರ ಮಾಡಿರುವುದಕ್ಕೆ, ಅದರಲ್ಲೂ ಪಟೇಲ್‌ ಸಮುದಾಯಕ್ಕೆ ಸಂಬಂಧಿಸಿದಂತೆ ಅವರೀಗ ಹೆಚ್ಚು ವ್ಯಥೆ ಪಡುತ್ತಿದ್ದಾರೆ.

ಪಕ್ಷದ ಸ್ಥಳೀಯ ನಾಯಕತ್ವ ದುರ್ಬಲವಾಗಿರುವ ಬಗ್ಗೆಯೂ ಅವರೂ ದೂರುತ್ತಾರೆ. 2013ರಲ್ಲಿ ಪಕ್ಷವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ನಡೆದ ಯಾವುದೇ ಚುನಾವಣೆಯಲ್ಲಿ ಇಂತಹ ನಿರುತ್ಸಾಹ ಕಂಡುಬಂದಿರಲಿಲ್ಲ ಎಂದೂ ಅವರು ಒಪ್ಪಿಕೊಳ್ಳುತ್ತಾರೆ.

ಪಕ್ಷವು ಸೋಲಬಹುದು ಎಂದು ಯಾವುದೇ ಮುಖಂಡ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆದರೆ, ಅವರ ಮಾತಿನಲ್ಲಿ ಭರವಸೆಯ ದೃಢತೆ ಕಂಡು ಬರುವುದಿ‌ಲ್ಲ. ‘ನಾವು ಅಷ್ಟು ಸುಲಭವಾಗಿ ಗುಜರಾತ್‌ ಕಳೆದುಕೊಳ್ಳುವುದಿಲ್ಲ. ಮೋದಿಜಿ ಮತ್ತು ಅಮಿತ್‌ಭಾಯ್‌ ಅವರು ಸೋಲಿಗೆ ಅವಕಾಶ ನೀಡುವುದಿಲ್ಲ. ನರೇಂದ್ರ ಭಾಯಿ ಅವರು ಹೇಗೆ ಪ್ರಚಾರ ಮಾಡುತ್ತಿದ್ದಾರೆ ನೋಡಿ. 22 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷದ ಬಗ್ಗೆ ಒಂದು ವೇಳೆ ಮತದಾರರಲ್ಲಿ ಆಕ್ರೋಶ ಮಡುಗಟ್ಟಿದ್ದರೂ, ಮತದಾರರು ತನ್ನ ಕೈಹಿಡಿಯುವಂತೆ ಮಾಡುವ ವರ್ಚಸ್ಸನ್ನು ಕಾಂಗ್ರೆಸ್‌ ಹೊಂದಿದೆ ಎಂದು ನೀವು ಭಾವಿಸುವೀರಾ. ಬೂತ್‌ ಮಟ್ಟದಲ್ಲಿನ ಕದನದಲ್ಲಿ ಅಮಿತ್‌ಭಾಯಿ ಅವರು ಕಾಂಗ್ರೆಸಿಗರನ್ನು ಹಿಮ್ಮೆಟ್ಟಿಸಲಿದ್ದಾರೆ. ಅವರು ಸಿದ್ಧಪಡಿಸಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಡೆಯತ್ತ ನೀವು ಒಮ್ಮೆ ಕಣ್ಬಿಟ್ಟು ನೋಡಿ, ಆಮೇಲೆ ತೀರ್ಮಾನಿಸಿ’ ಎಂದೂ ಅವರು ಹೇಳುತ್ತಾರೆ.

ಈ ಎಲ್ಲ ಮಾತುಗಳನ್ನು ಬಿಜೆಪಿಯವರು ತುಂಬು ಆತ್ಮವಿಶ್ವಾಸದಿಂದಲೇ ಹೇಳುತ್ತಾರೆ. ಅವರ ಮಾತುಗಳನ್ನು ಕಿವಿಗೊಟ್ಟು ಆಲಿಸಿದರೆ ಅದೊಂದು ಸ್ವಯಂ ಭರವಸೆಯ ಬಡಬಡಿಕೆಯಂತೆ ತೋರುತ್ತದೆ. ಇವೆಲ್ಲವೂ ಅವರಷ್ಟಕ್ಕೆ ಅವರೇ ಸಮಾಧಾನಪಟ್ಟುಕೊಳ್ಳುವ ಮಾತುಗಳಾಗಿವೆಯೇ ಹೊರತು ಪಕ್ಷದ ಸಾಧನೆ ಬಗ್ಗೆ ಅನುಮಾನ ಹೊಂದಿರುವ ಹೊರಗಿನವರನ್ನು ನಂಬಿಸುವ ರೀತಿಯಲ್ಲಿ ಇಲ್ಲದಿರುವುದು ವೇದ್ಯವಾಗುತ್ತದೆ. ಇತರರಿಗೆ ಮನಗಾಣಿಸುವಲ್ಲಿನ ಹತಾಶ ಪ್ರಯತ್ನದ ಆಳದಲ್ಲಿ ಆತಂಕ ಮನೆ ಮಾಡಿರುವುದನ್ನು ಯಾರಾದರೂ ಊಹಿಸಬಹುದು.

ಮೋದಿ ಮತ್ತು ಅಮಿತ್‌ ಷಾ ನೇತೃತ್ವದಲ್ಲಿ ಪಕ್ಷವು ಈ ಹಿಂದೆ ಹಲವು ರಾಜ್ಯಗಳಲ್ಲಿ ಎದುರಿಸಿದ ಚುನಾವಣೆಗೂ ಗುಜರಾತ್‌ ಚುನಾವಣೆಗೂ ಬಹುದೊಡ್ಡ ವ್ಯತ್ಯಾಸ ಇದೆ. ಗೆಲ್ಲುವ ಸಾಧ್ಯತೆ ತುಂಬ ಕಡಿಮೆ ಎಂದೇನೂ ಪಕ್ಷ ಇಲ್ಲಿ ಚುನಾವಣಾ ಕಣಕ್ಕೆ ಇಳಿದಿಲ್ಲ. ಆಡಳಿತಾರೂಢ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವ ದೃಢ ವಿಶ್ವಾಸದ ಮೇಲೆ ಚುನಾವಣೆ ಎದುರಿಸುತ್ತಿದೆ.

2013ರಲ್ಲಿನ ಮಧ್ಯಪ್ರದೇಶ ಮತ್ತು ಛತ್ತೀಸಗಡ ಹೊರತುಪಡಿಸಿದರೆ, ನಂತರ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಡಳಿತ ವಿರೋಧಿ ಅಲೆ ನೆಚ್ಚಿಕೊಂಡು ಚುನಾವಣೆ ಎದುರಿಸಿತ್ತು. ಪಂಜಾಬ್‌ನಲ್ಲಿ ಬಿಜೆಪಿಯು ಮೈತ್ರಿ ಕೂಟ ಸರ್ಕಾರದಲ್ಲಿ ಸಣ್ಣ ಪಾಲುದಾರ ಪಕ್ಷವಾಗಿತ್ತಷ್ಟೆ. ಗೋವಾ ಸಣ್ಣ ರಾಜ್ಯವಾಗಿರುವುದರಿಂದ ಅದಕ್ಕೆ ಹೆಚ್ಚಿನ ಮಹತ್ವ ಇಲ್ಲ. ಗುಜರಾತ್‌ನಲ್ಲಿ ಪಕ್ಷವು ಸತತವಾಗಿ ಅಧಿಕಾರದಲ್ಲಿ ಇರುವ ಹೊರೆಯೂ ಅದರ ಬೆನ್ನ ಮೇಲೆ ಇದೆ. ರಾಜ್ಯ ಮತ್ತು ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರದಲ್ಲಿ ಇದೆ. ಅಷ್ಟೇ ಅಲ್ಲ, ಸದ್ಯಕ್ಕೆ ಪಕ್ಷದ ಮೇಲೆ ಮೋದಿ ಮತ್ತು ಷಾ ಇಬ್ಬರ ಹಿಡಿತವೂ ಬಲವಾಗಿದೆ. ಪಕ್ಷದಲ್ಲಿನ ಈ ಹೊಸ ಹೈಕಮಾಂಡ್‌ ಗುಜರಾತನ್ನು ನಿಯಂತ್ರಿಸುವಂತೆ ಇತರ ರಾಜ್ಯಗಳಲ್ಲಿನ ಪಕ್ಷದ ಘಟಕಗಳ ಮೇಲೆಯೂ ಇವರಿಬ್ಬರೂ ಹಿಡಿತ ಹೊಂದಿದ್ದಾರೆ. ಇವರಿಬ್ಬರೂ ಪಕ್ಷದ ಎಲ್ಲ ರಾಜ್ಯಗಳ ಘಟಕಗಳ ಮೇಲೆ ನೇರ ನಿಯಂತ್ರಣ ಹೊಂದಿದ್ದಾರೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ. ಇದು ಸದ್ಯದ ಕಟು ವಾಸ್ತವ ಎಂದೂ ಸೇರಿಸುತ್ತಾರೆ.

ಆದರೆ, ಇದು ಸಂಪೂರ್ಣ ಸತ್ಯವಲ್ಲ. ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್‌ ಷಾ ಅವರಿಬ್ಬರೂ ಗುಜರಾತ್‌ನವರು. ರಾಜ್ಯದಲ್ಲಿ ಇವರಿಬ್ಬರು ಜತೆಯಾಗಿ ನಡೆಸಿದ ಅಧಿಕಾರದಿಂದ ದೇಶದಾದ್ಯಂತ ಮತದಾರರ ಮೇಲೆ ಗಮನಾರ್ಹ ಪ್ರಭಾವ ಬೀರಿದ್ದರು. ದಕ್ಷ ರೀತಿಯಿಂದ ಆಡಳಿತ ನಿರ್ವಹಿಸಿದ್ದ ಖ್ಯಾತಿಯೂ ಇವರ ಹೆಸರಿನಲ್ಲಿ ಇದೆ. ಆದರೆ, ಈಗ ಗುಜರಾತ್‌ನಲ್ಲಿ ಪಕ್ಷವು ಅಂದುಕೊಂಡಂತೆ ಎಲ್ಲವೂ ನಡೆಯುತ್ತಿಲ್ಲ. ಪಕ್ಷದ ಹೈಕಮಾಂಡ್‌ನ ನೇರ ನಿಯಂತ್ರಣದಲ್ಲಿ ಇದ್ದರೂ ಮೂರು ವರ್ಷಗಳಲ್ಲಿ ರಾಜ್ಯದ ಈ ಹಿಂದಿನ ಸಾಧನೆ ಈಗ ಮಸುಕಾಗಿದೆ. ಈಗಾಗಲೇ ಇಬ್ಬರು ಮುಖ್ಯಮಂತ್ರಿಗಳನ್ನು ಕಂಡಿದೆ. ಇಬ್ಬರೂ ಜನಾನುರಾಗಿಗಳಾಗಿರಲಿಲ್ಲ. ಪರಿಣಾಮಕಾರಿಯಾಗಿ ಕೆಲಸವನ್ನೂ ಮಾಡಿಲ್ಲ. ಎರಡನೆಯವರ ಕಾರ್ಯವೈಖರಿಯು ಮೊದಲಿನವರಿಗಿಂತ ಕೆಟ್ಟದ್ದಾಗಿದೆ. ವ್ಯಾಪಾರ ಮತ್ತು ತಯಾರಿಕಾ ಚಟುವಟಿಕೆಗಳಿಂದ ಸಮೃದ್ಧವಾಗಿದ್ದ ರಾಜ್ಯದ ಆರ್ಥಿಕತೆಯು ಈಗ ಸ್ಥಗಿತಗೊಂಡಿದೆ. ಯುವ ಸಮುದಾಯದಲ್ಲಿ ದುಗುಡ ಮನೆ ಮಾಡಿದೆ. ದಶಕಗಳಿಂದ ರಾಜಕಾರಣಿಗಳು ಹೇಳಿದಂತೆ ನಡೆಯುತ್ತಿದ್ದ ಯುವ ಗುಜರಾತಿಗಳು ಈಗ ಬದಲಾಗಿದ್ದಾರೆ. ಅವರಲ್ಲಿ ಪ್ರಶ್ನಿಸುವ ಮನೋಭಾವ ಜಾಗೃತಗೊಂಡಿದೆ.

ತುರ್ತು ಪರಿಸ್ಥಿತಿಗೂ ಮುನ್ನ ನವ ನಿರ್ಮಾಣ ಚಳವಳಿಯು ಗುಜರಾತ್‌ನಲ್ಲಿಯೇ ನೆಲೆ ಕಂಡುಕೊಂಡಿತ್ತು. 1985ರಲ್ಲಿ ಮಂಡಲ್‌ ಆಯೋಗದ ವರದಿ ಸಲ್ಲಿಕೆಯಾದಾಗ ಪ್ರತಿಭಟನೆಯ ಮೊದಲ ಸೊಲ್ಲು ಕೇಳಿಬಂದಿದ್ದೇ ಇಲ್ಲಿಂದ. ರಾಜ್ಯದಲ್ಲಿ ಮಂಡಲ್‌ ವಿರೋಧಿ ಚಳವಳಿ ನಡೆದಿರುವಾಗಲೇ ನಾನು ಮೊದಲ ಬಾರಿಗೆ ಈ ರಾಜ್ಯಕ್ಕೆ ಭೇಟಿ ನೀಡಿದ್ದೆ, ರಾಜ್ಯದ ಎಲ್ಲೆಡೆ ಕಂಡು ಬಂದಿದ್ದ ಅಶಾಂತಿ, ಜಾತಿ ಗಲಭೆಗಳು ನಂತರ ಕೋಮು ಗಲಭೆಗಳಾಗಿ ತಿರುವು ಪಡೆದುಕೊಂಡಿದ್ದವು.

ಹಿಂದಿ ಭಾಷೆಯ ಪ್ರಭಾವ ಇರುವ ರಾಜ್ಯಗಳಲ್ಲಿ ಮಾತ್ರ ರಾಜಕೀಯ ಏರಿಳಿತಗಳನ್ನು ನಾವು ಕಾಣುತ್ತ ಬಂದಿದ್ದೇವೆ. ಇದಕ್ಕೆ ಹೋಲಿಸಿದರೆ ಗುಜರಾತ್‌ನಲ್ಲಿ ವ್ಯತಿರಿಕ್ತ ಪರಿಸ್ಥಿತಿ ಇದೆ. ಸಮರ್ಥ ನಾಯಕರಾದ ಚಿಮಣ್‌ಭಾಯಿ ಪಟೇಲ್‌ ಮತ್ತು ನರೇಂದ್ರ ಮೋದಿ ಅವರ ದಕ್ಷ ಆಡಳಿತದಲ್ಲಿ ಅಲ್ಲಿ ರಾಜಕೀಯ ಸ್ಥಿರತೆ ನೆಲೆಸಿದೆ. ವಿವಿಧ ಜಾತಿಗಳ ಯುವ ಮುಖಂಡರಾದ ಹಾರ್ದಿಕ್‌ ಪಟೇಲ್, ಜಿಗ್ನೇಶ್‌ ಮೆವಾನಿ ಮತ್ತು ಅಲ್ಪೇಶ್‌ ಅವರು ಈಗ ಪ್ರವರ್ಧಮಾನಕ್ಕೆ ಬಂದಿರುವುದು ರಾಜ್ಯದ ರಾಜಕೀಯದಲ್ಲಿ ಈ ಹಿಂದಿನ ಚಿತ್ರಣ ಈಗ ಮತ್ತೆ ಮುಂದುವರೆದಿರುವುದನ್ನು ಸೂಚಿಸುತ್ತದೆ. ಮೋದಿ ಮತ್ತು ಷಾ ದೆಹಲಿಗೆ ಸ್ಥಳಾಂತರಗೊಂಡ ನಂತರ ಉದ್ಭವಿಸಿದ ರಾಜಕೀಯ ನಿರ್ವಾತವನ್ನು ಈ ಮೂವರು ತುಂಬಲು ಮುಂದಾಗಿದ್ದಾರೆ. ಎರಡು ತಲೆಮಾರಿನ ಗುಜರಾತಿಗಳು ಇಬ್ಬರು ಬಲಿಷ್ಠ ಮುಖಂಡರ ಆಡಳಿತದ ಫಲವಾಗಿ ಏಳಿಗೆ ಹೊಂದಿದ್ದಾರೆ.

ಮೋದಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ, ದೆಹಲಿಯಲ್ಲಿನ ಪಕ್ಷದ ಹೈಕಮಾಂಡ್‌ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಅವರ ಸಲಹೆ ಪಡೆಯುತ್ತಿತ್ತು. ಪಕ್ಷದ ಹಿರಿಯ ಮುಖಂಡ ಎಲ್‌. ಕೆ. ಅಡ್ವಾಣಿ ಅವರೂ ತಮ್ಮ ಲೋಕಸಭಾ ಸೀಟಿಗಾಗಿ ಮೋದಿ ಅವರನ್ನೇ ನೆಚ್ಚಿಕೊಂಡಿದ್ದರು. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ದೆಹಲಿಯಲ್ಲಿನ ವರಿಷ್ಠರ ಸಮ್ಮತಿ ಪಡೆಯುವ ಪದ್ಧತಿ ಬಿಜೆಪಿಯಲ್ಲಿ ಇದ್ದಿರಲಿಲ್ಲ. ಅದೆಲ್ಲ ಕಾಂಗ್ರೆಸ್‌ ಸಂಸ್ಕೃತಿಯಾಗಿತ್ತು. ಬಿಜೆಪಿಯಲ್ಲಿ ಈ ಮೊದಲು ಯಾವತ್ತು ಇಂತಹ ಪರಿಸ್ಥಿತಿ ಉದ್ಭವವಾಗಿರಲಿಲ್ಲ. ಆದರೆ, ರಾಜ್ಯದಲ್ಲಿ ಸತತವಾಗಿ ಗೆದ್ದು ಬಂದ ಮೋದಿ ವರ್ಚಸ್ಸಿನಿಂದಾಗಿ ಬಿಜೆಪಿಯಲ್ಲಿ ಅಧಿಕಾರದ ಕೇಂದ್ರ ಬಿಂದು ಗುಜರಾತ್‌ಗೆ ವರ್ಗಾವಣೆಗೊಂಡ ನಂತರ ರಾಜ್ಯದಲ್ಲಿನ ಪಕ್ಷದ ವಿದ್ಯಮಾನಗಳು ಗೋಜಲುಗೊಂಡಿದ್ದವು. ಇದು ಪಕ್ಷವನ್ನು ವಿಭಜಿಸಿತ್ತು. ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಿತ್ತು. ಇದೇ ಕಾರಣಕ್ಕೆ ಈಗ ಪಕ್ಷದಲ್ಲಿ ತಳಮಳ ಶುರುವಾಗಿದೆ.

2014ರಲ್ಲಿ ‘ಗುಜರಾತ್ ಮಾದರಿ’ಯ ಅಭಿವೃದ್ಧಿ ಮತ್ತು ಘೋಷಣೆಗಳೇ ನರೇಂದ್ರ ಮೋದಿ ಅವರನ್ನು ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ್ದವು. ಮೋದಿ ಅಧಿಕಾರಾವಧಿಯಲ್ಲಿ ಕೈಗಾರಿಕೆ, ಕೃಷಿ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಅಭೂತಪೂರ್ವ ಬೆಳವಣಿಗೆ ದಾಖಲಾಗಿತ್ತು. ಆಡಳಿತ ಸುಧಾರಣಾ ಕ್ರಮಗಳೂ ಗಮನಾರ್ಹವಾಗಿದ್ದವು. ವಿದ್ಯುತ್‌ ಮತ್ತು ಕೃಷಿ ವಲಯದಲ್ಲಿ ಜಾರಿಗೆ ತಂದ ಹೊಸ ಕಾರ್ಯಕ್ರಮಗಳಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಕೈಗಾರಿಕೋದ್ಯಮಿಗಳೂ ಈ ಆರ್ಥಿಕ ಬೆಳವಣಿಗೆಯನ್ನು ಮುಕ್ತಕಂಠದಿಂದ ಕೊಂಡಾಡಿದ್ದರು. ಹಲವಾರು ಹಗರಣ ಮತ್ತು ಬಿಕ್ಕಟ್ಟುಗಳ ಯುಪಿಎ ಸರ್ಕಾರದ ಅವಧಿಯಲ್ಲಿ ಐದು ವರ್ಷಗಳು ವ್ಯರ್ಥವಾಗಿದ್ದರಿಂದ ಬೇಸತ್ತ ದೇಶದ ಜನರು ಮೋದಿ ಅವರಿಗೆ ಮತ ನೀಡಿ ಗೆಲ್ಲಿಸಿದ್ದರು. ಮತದಾರರು, 2002ರ ದಂಗೆಯ ಕಹಿ ನೆನಪನ್ನೂ ಮರೆತು ಅವರ ಕೈಹಿಡಿದಿದ್ದರು. ವಿರೋಧಿಗಳು ಮೋದಿ ಅವರನ್ನು ವಿನಾಶ ಪುರುಷ ಎಂದು ಜರೆಯುತ್ತಿದ್ದರೂ, ಮತದಾರರು ಮೋದಿ ‘ವಿಕಾಸ ಪುರುಷ’ ಎನ್ನುವ ಬ್ರ್ಯಾಂಡ್‌ ಒಪ್ಪಿಕೊಂಡಿದ್ದರು.

ಇದುವರೆಗಿನ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೋದಿ ಮತ್ತು ಬಿಜೆಪಿ, ವಿಕಾಸ ಶಬ್ದವನ್ನೇ ಮರೆತಿವೆ. ‘ಗುಜರಾತ್‌ ಮಾದರಿ’ ಘೋಷಣೆಯು ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದರೂ, ಈ ಬಾರಿಯ ಚುನಾವಣೆಯಲ್ಲಿ ‘ಗುಜರಾತ್ ಮಾದರಿ’ ಘೋಷಣೆಯ ಸದ್ದು ಕೇಳಿ ಬರುತ್ತಿಲ್ಲ. ಪಕ್ಷದ ಪ್ರಚಾರ ಕಾರ್ಯಸೂಚಿಯಲ್ಲಿ ಅದಕ್ಕೆ ಅವಕಾಶವೇ ಸಿಕ್ಕಿಲ್ಲ.

ಅದರ ಬದಲಿಗೆ ರಾಹುಲ್‌ ಅವರ ಸಣ್ಣ, ಸಣ್ಣ ತಪ್ಪುಗಳು, ಔರಂಗಜೇಬ್‌, ಖಿಲ್ಜಿ, ನೆಹರೂ ಮತ್ತು ಸೋಮನಾಥ ಮಂದಿರ, ಯಾವ ಸಂದರ್ಶಕರ ಪುಸ್ತಕದಲ್ಲಿ ರಾಹುಲ್‌ ಏನೆಂದು ಸಹಿ ಹಾಕಿದರು, ಕಪಿಲ್‌ ಸಿಬಲ್‌ ಅವರು ಬಾಬ್ರಿ ಮಸೀದಿ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಏನೆಂದು ಹೇಳಿದರು ಎನ್ನುವುದರ ಸುತ್ತಲೇ ಬಿಜೆಪಿ ತನ್ನ ಚುನಾವಣಾ ಪ್ರಚಾರ ಕೇಂದ್ರೀಕರಿಸಿದೆ. ಕೆಲ ಟೆಲಿವಿಷನ್‌ ಚಾನೆಲ್‌ಗಳಲ್ಲಿ ಕಾಂಗ್ರೆಸ್‌ ಪರ ಬೆಂಬಲಕ್ಕೆ ನಿಂತಿರುವ ಹಲವರು ಅಹ್ಮದ್‌ ಪಟೇಲ್‌ ಮುಖ್ಯಮಂತ್ರಿಯಾಗಬೇಕು ಎಂದು ವಾದ ಮಂಡಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ನಮ್ಮ ಚುನಾವಣಾ ರಾಜಕೀಯದಲ್ಲಿ ಮತದಾರರ ಮನಸ್ಸು ಗೆಲ್ಲಲು ಅಧಿಕಾರಾರೂಢ ಪಕ್ಷದ ಪರ ಅಥವಾ ವಿರುದ್ಧ ಪ್ರಚಾರ ನಡೆಸುವುದು ಪ್ರಮುಖ ವ್ಯತ್ಯಾಸ ಒಳಗೊಂಡಿರುತ್ತದೆ. ಆದರೆ, ಸದ್ಯದ ಪರಿಸ್ಥಿತಿಯು ತುಂಬ ಅಪರೂಪದ್ದಾಗಿದೆ. 22 ವರ್ಷಗಳ ಕಾಲ ಅಧಿಕಾರದಲ್ಲಿ ಇರುವ ಬಿಜೆಪಿಯು ಕೇಂದ್ರದಲ್ಲಿಯೂ ಸಂಪೂರ್ಣ ಬಹುಮತ ಹೊಂದಿದೆ. ಆದಾಗ್ಯೂ ಮರಳಿ ಅಧಿಕಾರಕ್ಕೆ ಬರುವ ದೃಢ ವಿಶ್ವಾಸವು ಪಕ್ಷದಲ್ಲಿ ಕಂಡು ಬರುತ್ತಿಲ್ಲ. ಕಾಂಗ್ರೆಸ್‌ ಹಲವಾರು ವರ್ಷಗಳಿಂದ ಅಧಿಕಾರಕ್ಕೆ ಎರವಾಗಿದ್ದರೂ, ಶೇ 40ರಷ್ಟು ಮತದಾರರ ಬೆಂಬಲ ಉಳಿಸಿಕೊಂಡಿರುವುದು ಅದರ ಚಿಂತೆ ಹೆಚ್ಚಿಸಿದೆ.

ಆರ್ಥಿಕ ತಪ್ಪು ನಡೆಗಳು, ಸ್ಥಳೀಯ ನಾಯಕತ್ವದ ಕೊರತೆ, ರಿಮೋಟ್‌ ಕಂಟ್ರೋಲ್‌ ಆಡಳಿತದ ವೈಫಲ್ಯಗಳು ಬಿಜೆಪಿಯ ಕಳವಳಕ್ಕೆ ಕಾರಣವಾಗಿವೆ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಗೆಲುವು ಸಾಧಿಸಬಹುದಾಗಿದ್ದ ಪಕ್ಷ ಈಗ ಸರಳ ಬಹುಮತ ಗಳಿಸಲೂ ಹರ ಸಾಹಸ ಮಾಡುತ್ತಿದೆ. ಈ ಕಾರಣಕ್ಕೆ ಚುನಾವಣಾ ಫಲಿತಾಂಶ ಏನೇ ಇರಲಿ, ರಾಹುಲ್‌ ಗಾಂಧಿ ಮಾತ್ರ ಯಶಸ್ವಿ ನಾಯಕನಾಗಿ ಹೊರ ಹೊಮ್ಮಲಿದ್ದಾರೆ. ಅವರೀಗ ತಮ್ಮ ಹೋರಾಟವನ್ನು ಎದುರಾಳಿಯ ಅಂಗಳಕ್ಕೇನೆ ನೇರವಾಗಿ ತೆಗೆದುಕೊಂಡು ಹೋಗಿದ್ದಾರೆ. ತಮ್ಮನ್ನು ಈ ಮೊದಲಿನಂತೆ ನಿರ್ಲಕ್ಷಿಸಲಾಗದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಹಲವಾರು ವಿಷಯಗಳಲ್ಲಿ ಮೇಲುಗೈ ಹೊಂದಿರುವ ಮತ್ತು ಪ್ರಬಲ ಸ್ಪರ್ಧೆ ಒಡ್ಡಿರುವ ಬಿಜೆಪಿಯು, ಲೋಕಸಭೆಯಲ್ಲಿ ಕೇವಲ 46 ಸಂಸದರನ್ನು ಹೊಂದಿರುವ ಪಕ್ಷದ ಮುಖಂಡನ ವಿರುದ್ಧ ತನ್ನೆಲ್ಲ ಸಮಯವನ್ನು ಈಗ ಪಣಕ್ಕಿಟ್ಟಿದೆ. ರಾಜ್ಯದ ಚುನಾವಣಾ ಕಣದಲ್ಲಿ ಕಾಂಗ್ರೆಸ್‌ ಒಡ್ಡಿರುವ ಸವಾಲು ಬಿಜೆಪಿ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದೆ. ಇದೇ ಕಾರಣಕ್ಕೆ ಬಿಜೆಪಿಯಲ್ಲಿ ತಳಮಳ ಕಾಣಿಸಿಕೊಂಡಿದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)