ಶುಕ್ರವಾರ, ಜೂನ್ 18, 2021
21 °C

ಗುರಿ ಮತ್ತು ಯಾತ್ರೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನಮ್ಮ ಬದುಕಿನಲ್ಲಿ ದಿನಾಲು ನೂರಾರು ಘಟನೆಗಳು ಜರುಗುತ್ತವೆ. ಅವು­ಗಳನ್ನೆಲ್ಲ ತುಂಬ ಅರಿವಿನಿಂದ ನೋಡಲು ಸಾಧ್ಯವಾದರೆ ಪ್ರತಿ­ಯೊಂದರ ಹಿಂದೆ ಒಂದು ಜೀವನದ ಪಾಠ ದೊರಕೀತು. ಅಮೆರಿಕದ ಖ್ಯಾತ ವಾಸ್ತುಶಿಲ್ಪಿ ಫ್ರಾಂಕ್ ರೈಟ್ ತಮ್ಮ ಒಂದು ಲೇಖನದಲ್ಲಿ ಬಾಲ್ಯದಲ್ಲಿ ನಡೆದ ಸಂಗತಿ­ಯೊಂದನ್ನು ನೆನಪಿಸಿ­ಕೊಳ್ಳುತ್ತಾರೆ.ಅದು ಮೇಲ್ನೋಟಕ್ಕೆ ತುಂಬ ಸಾಧಾರಣ­ವಾದದ್ದು. ಆದರೆ, ಅದು ರೈಟ್ ಅವರಿಗೆ ಬದುಕಿನುದ್ದಕ್ಕೂ ಅಳವಡಿಸುವಂತಹ ಮಾರ್ಗ­ದರ್ಶಿಯಾಯಿತಂತೆ. ಆಗ ರೈಟ್‌ ಅವರಿಗೆ ಒಂಬತ್ತು ವರ್ಷ. ಅವರು ಪರಿವಾರ­ದೊಂದಿಗೆ ಕೆನಡಾಕ್ಕೆ ಪ್ರವಾಸಕ್ಕೆ ಹೋಗಿದ್ದರು. ಅಂದು ಬೆಳಿಗ್ಗೆ ಎದ್ದಾಗ ವಾತಾ­ವರಣ ತುಂಬ ಚಳಿಯಾಗಿತ್ತು. ಎಲ್ಲಿ ನೋಡಿದಲ್ಲಿ ಹಿಮ ಸುರಿದಿದೆ.  ಬಿಳಿ ಬಣ್ಣ­ವನ್ನು ಬಿಟ್ಟರೆ ಯಾವ ಬಣ್ಣವೂ ಕಾಣದಂತಾಗಿದೆ.  ಆಗ ರೈಟ್ ಅವರ ದೊಡ್ಡಪ್ಪ ಈತನನ್ನು ಹೊರಗೆ ಬರಲು ಕರೆದರಂತೆ. ಈತ ಬೆಚ್ಚಗಿನ ಬಟ್ಟೆ, ಟೊಪ್ಪಿಗೆ ಧರಿಸಿ ಅವರೊಂದಿಗೆ ಹೊರಟರು. ಬಯಲಿ­ನಲ್ಲೆಲ್ಲ ಪಾದ ಮುಚ್ಚು­ವಷ್ಟು ಹಿಮದ ಪದರು. ದೊಡ್ಡಪ್ಪ ತುಂಬ ಗಂಭೀರ­ಸ್ವಭಾವದ ಮನುಷ್ಯ. ಹೆಚ್ಚು ಮಾತನಾ­ಡು­ವವರಲ್ಲ. ಮೇಲಾಗಿ ಶೀಘ್ರಕೋಪಿ ಬೇರೆ. ರೈಟ್ ಹಾಗೂ ದೊಡ್ಡಪ್ಪ ಮನೆಯಿಂದ ಹತ್ತಿರದ ಬೆಟ್ಟದವರೆಗೂ ನಡೆದು ಹೋಗುವುದೆಂದು ತೀರ್ಮಾನಿಸಿ ನಡೆದರು. ಬೆಟ್ಟದ ತಳ ಮುಟ್ಟುವ­ವರೆಗೂ ಯಾವ ಮಾತೂ ಇಲ್ಲ. ಅಲ್ಲಿ ತಲುಪಿದ ಮೇಲೆ ದೊಡ್ಡಪ್ಪ ನಿಂತು ತಾವು ನಡೆದು ಬಂದ ದಾರಿಯನ್ನು ನೋಡಿದರು.  ಅಲ್ಲಿ ಸ್ಪಷ್ಟ ಹೆಜ್ಜೆಗುರುತು­ಗಳು ಹಿಮದ ಹಾದಿಯಲ್ಲಿ ಮೂಡಿದ್ದವು.  ಅಂತೆಯೇ ಬಾಲಕ ರೈಟ್‌ನ ಹೆಜ್ಜೆಗಳೂ ಕಾಣುತ್ತಿದ್ದವು. ದೊಡ್ಡಪ್ಪ ಗಂಭೀರವಾಗಿ ರಟ್‌ನನ್ನು ಕುರಿತು ಕೇಳಿದರು, ‘ಫ್ರಾಂಕ್, ನಮ್ಮಿಬ್ಬರ ಹೆಜ್ಜೆ ಗುರುತುಗಳನ್ನು ಗಮನಿಸಿದೆಯಾ! ಏನಾದರೂ ವಿಶೇಷ ಕಂಡಿತೇ?’ ಬಾಲಕ ರೈಟ್ ಮತ್ತೊಮ್ಮೆ ಗುರುತುಗಳನ್ನು ನೋಡಿ ಹೇಳಿದ, ‘ಹೌದು, ನಿಮ್ಮ ಹೆಜ್ಜೆ ಗುರುತುಗಳು ತುಂಬ ದೊಡ್ಡವು ಮತ್ತು ನನ್ನವು ಚಿಕ್ಕವಾಗಿವೆ’.‘ದಡ್ಡಾ, ನಾನು ಗಾತ್ರದ ಬಗ್ಗೆ ಹೇಳಲಿಲ್ಲ.  ಸರಿಯಾಗಿ  ನೋಡು. ಮನೆಯಿಂದ  ಇಲ್ಲಿಯವರೆಗೆ ನನ್ನ  ಹೆಜ್ಜೆಗಳು ಹೇಗೆ ನೇರವಾಗಿ, ಸರಳರೇಖೆಯನ್ನು ಎಳೆದಂತೆ ಮಾಡಿವೆ. ಆದರೆ, ನಿನ್ನ ಹೆಜ್ಜೆಗಳನ್ನು ನೋಡು  ಸೊಟ್ಟಸೊಟ್ಟವಾಗಿ ಎಲ್ಲೆಲ್ಲಿಯೋ ಹೋಗಿ ಬಂದಿವೆ.  ಅಂದರೆ ನೀನು ನೇರವಾಗಿ ನಡೆಯದೇ ಆ ಕಡೆಗೆ  ಈ ಕಡೆಗೆ ಹೋಗುತ್ತ ಬಂದಿದ್ದೀ. ನಾನು ಸ್ವಲ್ಪವೂ ಸಮಯ­ವನ್ನು ವ್ಯರ್ಥ­ಮಾಡದೆ ನನ್ನ ಗುರಿಯೆಡೆಗೆ ನೇರವಾಗಿ ನಡೆದಿದ್ದೇನೆ.  ನೀನು ಮಾತ್ರ ಗುರಿಯ ಕಡೆಗೆ ಗಮನವನ್ನು ಕೊಡದೆ ಮನಸ್ಸು ಎಳೆದಂತೆಲ್ಲ ಬೇರೆ ಕಡೆಗೆ ಹೋಗಿ ಕೊನೆಗೆ ಇಲ್ಲಿಗೆ ತಲುಪಿದ್ದೀ.  ಎಷ್ಟು ಸಮಯ ಹಾಳಾಯಿತು ತಿಳಿಯಿತೇ?’ ಎಂದರು ದೊಡ್ಡಪ್ಪ.ಬಾಲ್ಯದ ಈ ಘಟನೆ ರೈಟ್‌ ಅವರನ್ನು ಚಿಂತನೆಗೆ ಹಚ್ಚಿತು. ದೊಡ್ಡಪ್ಪ ಹೇಳಿದಂತೆ ಗುರಿಯೆಡೆಗೆ ಬಿಟ್ಟಬಾಣದಂತೆ ನೇರ­ವಾಗಿ, ಬೇರೆಲ್ಲಿಯೂ ನೋಡದಂತೆ ಸಾಗುವುದು ಸರಿಯೇ? ಅಥವಾ ಗುರಿಯೆಡೆಗೆ ಸಾಗುವಾಗ ದಾರಿಯಲ್ಲಿ ಕಂಡ  ರಮ್ಯ ಸಂಗತಿಗಳನ್ನು ಅನುಭವಿ­ಸುತ್ತ ಬದುಕಿನಲ್ಲಿ ಆ ಸಂತೋಷವನ್ನು ತುಂಬಿಕೊಳುತ್ತ ಸಾರ್ಥಕ­ಮಾಡಿಕೊ­ಳ್ಳುವುದು ಸರಿಯೇ?  ಹೀಗೆ ಮಾಡಿದಾಗ ಹೆಚ್ಚು ಸಮಯ ಬೇಕಲ್ಲವೇ? ಗುರಿ ತಲುಪುವುದು ತಡವಾಗುವುದಿಲ್ಲವೇ? ಕೊನೆಗೆ ರೈಟ್ ಒಂದು ತೀರ್ಮಾನಕ್ಕೆ ಬಂದರು. ಎರಡೂ ಮಾರ್ಗಗಳು ಸರಿಯೇ.ದಾರಿಯಲ್ಲಿ ಕಂಡ ಆಕರ್ಷಣೆ­ಗಳಿಗೆ ಬಲಿಯಾಗದೇ ನೇರವಾಗಿ ಗುರಿ ತಲುಪುವುದು ಮುಖ್ಯ. ಆದರೆ ಗುರಿ ಎಷ್ಟು ಮುಖ್ಯವೋ, ಯಾತ್ರೆಯೂ ಅಷ್ಟೇ ಮುಖ್ಯ. ಕುದುರೆಯಂತೆ ಕಣ್ಣು ಕಟ್ಟಿ­ಕೊಂಡು ಓಡುವುದು ಯಾವ ಸುಖ? ಗುರಿ ತಲುಪುವುದು ಸಂತೋಷ ನೀಡು­ವಂತೆ ಯಾತ್ರೆಯ ಅನುಭವವೂ ಸಂತೋಷ ನೀಡಲಾರದೆ?  ಹಿಮಾಲ­ಯದ ತುದಿ ಗುರಿಯಾಗಿರ­ಬಹುದು.  ಆದರೆ, ಅದನ್ನು ಹತ್ತುವಾಗ ನಾಲ್ಕು ಗಳಿಗೆ ಅಲ್ಲಲ್ಲಿ ನಿಂತು ಆ ರಮ್ಯತೆಯನ್ನು ಹೃದಯದಲ್ಲಿ ತುಂಬಿಕೊಳ್ಳುವುದನ್ನು ಕಳೆದುಕೊಳ್ಳ­ಬಾರದಲ್ಲ.  ಬದುಕಿನಲ್ಲಿ ಸಾಧನೆಯತ್ತ ತ್ವರಿತ ನಡಿಗೆ ಮುಖ್ಯ. ಅದರೊಂದಿಗೆ ಬದುಕು ಬರಡಾಗದಂತೆ ಸುಂದರತೆಯನ್ನು ತುಂಬಿಕೊಳ್ಳು­ವುದನ್ನು ಮರೆಯಬಾರದು. ಗುರಿಯಂತೆ ಅದನ್ನು ತಲುಪುವ ಯಾತ್ರೆಯೂ ಅಷ್ಟೇ ಮುಖ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.