ಗುರುವಾರ , ಜೂನ್ 17, 2021
22 °C

ಚಿಕ್ಕಂದಿನಲ್ಲಿಯೇ ಸರಿಮಾಡಬೇಕಾದ ವ್ಯವಸ್ಥೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ರಾಜ ಧರ್ಮಾತ್ಮ. ದೇಶವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಜನರೂ ಅವನನ್ನು ತುಂಬ ಗೌರವದಿಂದ ಕಾಣು­ತ್ತಿದ್ದರು. ಅವನಿಗೆ ಒಬ್ಬನೇ ಮಗ. ಅವನಿಗೆ ಸುಮಾರು ಹತ್ತು ವರ್ಷ. ರಾಜನ ಮಗ, ಅದರಲ್ಲೂ ಒಬ್ಬನೇ ಮಗ ಎಂಬ ಪ್ರೀತಿಯಿಂದ ಬೆಳೆಸಿದ್ದ­ರಿಂದಲೋ ಅಥವಾ ಶ್ರೀಮಂತಿಕೆಯ ಗರ್ವ­ದಿಂದಲೋ ಅವನು ಉದ್ಧಟ­ನಾಗಿದ್ದ. ಹಿರಿಯರು, ದೊಡ್ಡಸ್ಥಾನದಲ್ಲಿ­ರುವ­ವರು ಎಂಬ ಯೋಚನೆ ಇಲ್ಲದೇ ಹೇಗಾದರೂ ಮಾತನಾಡುತ್ತಿದ್ದ. ಅವನ ಕ್ರೌರ್ಯ, ಕಠೋರತನ ಜನರ ಕೋಪಕ್ಕೆ ಕಾರಣವಾಗಿದ್ದವು.

ಅವನನ್ನು ಸರಿದಾ­ರಿಗೆ ತರುವುದು ಹೇಗೆ ಎಂದು ತಿಳಿಯದೇ ರಾಜ ಒದ್ದಾಡುತ್ತಿದ್ದ. ಅವನು ಏನೇನೋ ಪ್ರಯೋಗಗಳನ್ನು ಮಾಡಿದರೂ ಫಲ ನೀಡಲಿಲ್ಲ. ಒಂದು ದಿನ ರಾಜ್ಯಕ್ಕೆ ಒಬ್ಬ ಸನ್ಯಾಸಿ ಬಂದ. ಅವನನ್ನು ನೋಡಿದರೆ ತುಂಬ ಗೌರವ ತುಂಬಿ ಬರು­ತ್ತಿತ್ತು. ಅವನ ನಡಿಗೆ ಸಿಂಹದಂತಿತ್ತು. ಅವನ ಮುಖದಲ್ಲಿ ಪ್ರಶಾಂತತೆ ತೋರು­ತ್ತಿತ್ತು. ಅವ­­ನಿಂದ ಪ್ರಭಾವಿತನಾದ ರಾಜ, ಅವನನ್ನು ಕಂಡು ಮಾತ­ನಾಡಿಸಿ ತನ್ನ ಅರ­ಮನೆಯ ತೋಟದಲ್ಲಿಯ ಮಂದಿರ­ದಲ್ಲಿ ಉಳಿಯುವಂತೆ ನೋಡಿಕೊಂಡ.ಒಂದು ವಾರ ಸನ್ಯಾಸಿಯೊಂದಿಗೆ ಸಮಯ ಕಳೆದ ಮೇಲೆ ರಾಜನಿಗೆ ಖಾತ್ರಿ­ಯಾ­ಯಿತು. ತನ್ನ ಮಗನನ್ನು ಯಾರಾದರೂ ದಾರಿಗೆ ತರುವುದಾದರೆ ಅದು ಕೇವಲ ಈ ಸನ್ಯಾಸಿಯಿಂದ ಎಂದುಕೊಂಡ. ಸನ್ಯಾಸಿಗೆ ತನ್ನ ಸಮಸ್ಯೆ­ಯನ್ನು ಹೇಳಿಕೊಂಡು ಅವನ ಸಹಾಯ­ವನ್ನು ಕೇಳಿದ. ಸನ್ಯಾಸಿ ಪ್ರಯತ್ನ ಮಾಡುವುದಾಗಿ ಆಶ್ವಾಸನೆ ನೀಡಿದ. ಸನ್ಯಾಸಿ ರಾಜಕುಮಾರನನ್ನು ತನ್ನೊ­ಡನೆ ಕರೆದುಕೊಂಡು ಅರಮನೆ­ಯಿಂದ ಸ್ವಲ್ಪ ದೂರದಲ್ಲಿದ್ದ ಬೆಟ್ಟಕ್ಕೆ ಕರೆದು­ಕೊಂಡು ಹೋದ. ಅಲ್ಲಿಯೂ ರಾಜ­ಕುಮಾರ ಉದ್ಧಟತನವನ್ನೇ ಪ್ರದರ್ಶಿ­ಸುತ್ತಿದ್ದ.ಒಂದು ಕಡೆಗೆ ಸನ್ಯಾಸಿ ನಿಂತುಬಿಟ್ಟ. ಅಲ್ಲಿ ನಾಲ್ಕಾರು ಪುಟ್ಟ ಸಸಿಗಳು ಕಂಡವು. ರಾಜಕುಮಾರನನ್ನು ಕರೆದು ಹೇಳಿದ, ‘ಕುಮಾರಾ, ಇಲ್ಲಿ ನೋಡು, ಎಷ್ಟು ಸುಂದರವಾದ ಸಸಿ­ಗಳಿವೆ. ಈಗ ತಾನೇ ಹೊರಬಂದ ತಾಜಾ ಎಲೆಗಳು ಹೇಗೆ ನಳನಳಸುತ್ತಿವೆ. ಆ ಎಲೆ­ಗಳ ಮೃದುತ್ವ­ವನ್ನು ಗಮನಿಸು. ಅವುಗಳು ತುಂಬ ರುಚಿಯಾಗಿಯೂ ಇರಬಹುದು. ತಿಂದು ನೋಡು’. ರಾಜಕುಮಾರ ಛಕ್ಕನೇ ನಾಲ್ಕಾರು ಎಲೆಗಳನ್ನು ಕಿತ್ತು ಬಾಯಿಯಲ್ಲಿ ಹಾಕಿ­ಕೊಂಡು ಕಚಪ­ಚನೇ ಅಗಿದುಬಿಟ್ಟ.ಅವು ಬೇವಿನ ಎಲೆಗಳು. ಬಾಯಿಯಲ್ಲಿ ಕಹಿ ವಿಷ ತುಂಬಿಕೊಂಡಿತು. ‘ಥೂ, ಥೂ,  ಎನ್ನುತ್ತ ಒಂದೆ ಸಮನೆ ಉಗು­ಳಿದ.  ಹತ್ತಿರ­­ದಲ್ಲಿ ಸಿಹಿ ಪದಾರ್ಥ ಯಾವುದೂ ಇಲ್ಲ. ಏನು ಮಾಡಿದರೂ ಕಹಿ ಹೋಗು­­ತ್ತಿಲ್ಲ. ಮೊದಲೇ ಕೋಪಿಷ್ಠ ಹುಡುಗ. ಹೀಗೆ ಬಾಯಿ ಕಹಿಯಾದ ಮೇಲೆ ಅವನಿಗೆ ಆ ಸಸಿಗಳ ಬಗ್ಗೆ ದ್ವೇಷ ಉಕ್ಕಿ ಬಂತು. ಬಾಗಿ ಆ ಎಲ್ಲ ಸಸಿಗಳನ್ನು ಬೇರು ಸಮೇತ ಕಿತ್ತಿ ಹಾಕಿದ. ನಂತರ ಅವುಗಳನ್ನು ಕಾಲಿನಿಂದ ಹೊಸಕಿ ಹಾಕಿದ. ಇದನ್ನು ನೋಡುತ್ತಲೇ ಇದ್ದ ಸನ್ಯಾಸಿ, ‘ಏಕೆ ಕುಮಾರ, ಈ ಸಸಿಗಳ ಮೇಲೆ ಅಷ್ಟೊಂದು ಕೋಪ ನಿನಗೆ?’ ಎಂದು ಕೇಳಿದ.

ಅದಕ್ಕವನು, ‘ಮತ್ತೇನು ಮಾಡ­ಬೇಕು? ಸಣ್ಣ ಸಸಿಯಾಗಿದ್ದಾಗಲೇ ಇಷ್ಟು ವಿಷಮಯವಾಗಿರುವ ಎಲೆಗಳು ಬೆಳೆದು ಮರವಾದ ಮೇಲೆ ಮತ್ತೆಷ್ಟು ಕಹಿಯಾಗಬಹುದು? ಅದಕ್ಕೇ ಮುಂದೆ ಹಾಲಾಹಲ­ವಾಗ­ಬಹುದಾಗಿದ್ದ ಸಸಿಯನ್ನು ಇಂದೇ ಹೊಸಕಿ ಹಾಕುವುದು ಸರಿ’ ಎಂದ.ಆಗ ಸನ್ಯಾಸಿ ನಕ್ಕು ಹೇಳಿದ, ‘ಸಣ್ಣದಿದ್ದಾಗಲೇ ವಿಷಪೂರಿತವಾದ ಈ ಸಸಿ ದೊಡ್ಡದಾದ ಮೇಲೆ ಎಷ್ಟು ಕಹಿಯಾಗಬಹುದೆಂದು ಯೋಚಿಸಿ ನೀನು ಅದನ್ನು ಕಿತ್ತು ಹಾಕಿದೆ. ಅದೇ ರೀತಿ ನಿಮ್ಮ ದೇಶದ ಬಹುತೇಕ ಜನ ರಾಜಕುಮಾರ ಬಾಲಕ­ನಾಗಿ­ದ್ದಾಗಲೇ ಇಷ್ಟು ಉದ್ಧಟನಾಗಿದ್ದಾನೆ. ಕ್ರೂರನಾಗಿ­ದ್ದಾನೆ, ಕೋಪಿಷ್ಠನಾಗಿ­ದ್ದಾನೆ, ಮುಂದೆ ದೊಡ್ಡವನಾದ ಮೇಲೆ ಇನ್ನೆಷ್ಟು ಅನಾಹುತಗಳನ್ನು ಮಾಡು­ತ್ತಾನೋ ಎಂದುಕೊಂಡು ನಿನ್ನನ್ನೂ ರಾಜ್ಯದಿಂದ ಕಿತ್ತು ಹೊರಹಾಕಬಹುದಲ್ಲವೇ?’ ಬಾಲ­ಕ­­ನಿಗೆ ಮಾತು ಅರ್ಥವಾಯಿತು.ಅಂದಿನಿಂದ ಆತ ವಿನಮ್ರತೆಯನ್ನು ಮೈಗೂ­ಡಿಸಲು ಪ್ರಯತ್ನಿಸತೊಡಗಿದ. ಮಕ್ಕಳಲ್ಲಿ, ಮನೆಗಳಲ್ಲಿ, ಸಮಾಜದಲ್ಲಿ ತೋರಿ­ಬರುವ ಅಶಾಂತತೆ, ಕ್ರೌರ್ಯ, ಅಸಮಾನತೆಯನ್ನು ಪ್ರಾರಂಭದಲ್ಲೇ ಸರಿಮಾಡ­ದಿದ್ದರೆ ಅದು ಬೆಳೆದು ಕಾಳ್ಗಿಚ್ಚಾಗಿ ವ್ಯವಸ್ಥೆಯನ್ನೇ ಆಹುತಿ ತೆಗೆದುಕೊಳ್ಳುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.