ಗುರುವಾರ , ಮೇ 13, 2021
22 °C

ಚೀನಾ ಬೊಬ್ಬಿರಿದರೆ ಭಾರತ ಬೆದರಬೇಕೇ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಚೀನಾ ಬೊಬ್ಬಿರಿದರೆ ಭಾರತ ಬೆದರಬೇಕೇ?

ಇದೊಂದು ರೀತಿಯಲ್ಲಿ ದೃಷ್ಟಿ ಯುದ್ಧ. ಚೀನಾದ ಬಿರುಸು ನೋಟ, ಪೆಡಸು ಮಾತಿಗೆ ಭಾರತದ ಸೈನಿಕರು ಸಿಕ್ಕಿಂ ಗಡಿಯಲ್ಲಿ ಜಗ್ಗದೆ ನಿಂತಿದ್ದಾರೆ. ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳು ತೋಳೇರಿಸಿ ನಿಂತಿರುವುದು ಏಷ್ಯಾದ ಮಟ್ಟಿಗೆ ಆತಂಕ ಸೃಷ್ಟಿಸಿದೆ. ಯುದ್ಧ ಘಟಿಸಬಹುದೇ, ಅಣ್ವಸ್ತ್ರ ರಾಷ್ಟ್ರಗಳು ಸಂಯಮ ತೋರುತ್ತವೆಯೇ, ಈ ಜಟಾಪಟಿಯ ಬಗ್ಗೆ ಜಗತ್ತಿನ ಇತರ ರಾಷ್ಟ್ರಗಳ ನಿಲುವು ಏನಿರಲಿದೆ, ಹೀಗೆ ಅನೇಕ ಪ್ರಶ್ನೆಗಳು ಎದ್ದು ನಿಂತಿವೆ. ಆದರೆ ಈ ಸರಣಿ ಪ್ರಶ್ನೆಗಳಿಗೆ ಉತ್ತರವನ್ನು ಊಹಿಸಿಕೊಂಡು ತೀರಾ ಕಳವಳಗೊಳ್ಳುವ ಪರಿಸ್ಥಿತಿಯೇನೂ ಇಲ್ಲ.ಭಾರತ- ಚೀನಾ ಗಡಿಯಲ್ಲಿನ ತಂಟೆ ತಕರಾರು ನಿನ್ನೆ ಮೊನ್ನೆಯದಲ್ಲ. ಹಲವು ವರ್ಷಗಳಿಂದ ಗಡಿಯಲ್ಲಿ ಸೈನಿಕರ ನಡುವೆ ಮಾತಿನ ಚಕಮಕಿ, ಮುನಿಸು, ಜಗಳ ಆ ಭಾಗದಲ್ಲಿ ನಡೆದೇ ಇದೆ. ದೋಕಲಾ ಪ್ರದೇಶದ ಭೌಗೋಳಿಕ ರಚನೆ ಘರ್ಷಣೆಗೆ ಆಸ್ಪದವಾಗುವಂತಿದೆ. ಭಾರತ, ಭೂತಾನ್ ಮತ್ತು ಟಿಬೆಟ್ (ಚೀನಾ ಆಕ್ರಮಿತ) ನಡುವಿನ ಕೂಡು ಪ್ರದೇಶ (ತ್ರಿಸಂಧಿ) ದೋಕಲಾ. ನೇಪಾಳ ಮತ್ತು ಭೂತಾನ್ ಗಡಿಯಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಚೀನಾ ಕಂಡುಕೊಂಡಿದ್ದರೂ ಭಾರತದ ಸಿಕ್ಕಿಂ ಬಗ್ಗೆ ಮಾತ್ರ ಅತೃಪ್ತಿ ಹೊಂದಿದೆ. ಸಿಕ್ಕಿಂ 1890ರಲ್ಲಿ ಬ್ರಿಟಿಷರ ವಸಾಹತು ರಾಜ್ಯವಾಗಿ, 1947ರಲ್ಲಿ ಭಾರತದ ಆಶ್ರಿತ ರಾಜ್ಯವಾಗಿ, 1950ರಲ್ಲಿ ಟಿಬೆಟ್‌ಅನ್ನು ಚೀನಾ ಆಕ್ರಮಿಸಿಕೊಂಡ ನಂತರ, ರಕ್ಷಣೆಗಾಗಿ ಭಾರತದೊಂದಿಗೆ ಗುರುತಿಸಿಕೊಂಡು 1975ರಲ್ಲಿ ಭಾರತದ 22ನೇ ರಾಜ್ಯವಾಗಿ ವಿಲೀನಗೊಂಡಿತು. ಚೀನಾದ ವಿಸ್ತರಣಾ ದಾಹಕ್ಕೆ ಬೆದರಿದ ಭೂತಾನ್, ತನ್ನ ಸ್ವಾಯತ್ತತೆ ಕಾಯ್ದುಕೊಂಡು ಹೆಚ್ಚಿನ ರಕ್ಷಣೆಗಾಗಿ ಭಾರತದ ಸಹಕಾರ ಕೋರಿತು. ಭಾರತದ ಮೇಲಿನ ಚೀನಾ ಸಿಟ್ಟಿಗೆ ಮತ್ತೆರಡು ಕಾರಣಗಳು ಸೇರ್ಪಡೆಯಾದವು.ಸಾಮಾನ್ಯವಾಗಿ, ಗಡಿಯಲ್ಲಿ ಘರ್ಷಣೆ ನಡೆದಾಗ ಚೀನಾ 1962ರ ಯುದ್ಧವನ್ನು ನೆನಪಿಸಿ, ತನ್ನ ಸಾಮರ್ಥ್ಯದ ಬಗ್ಗೆ ಕೊಚ್ಚಿಕೊಳ್ಳುತ್ತದೆ. ಈಗಲೂ ಅದನ್ನೇ ಮಾಡುತ್ತಿದೆ. ಅಪ್ಪಿತಪ್ಪಿಯೂ 1967ರ ಸೆಪ್ಟೆಂಬರ್ 11ರ ಘಟನೆಯನ್ನು ಉಲ್ಲೇಖಿಸುವುದಿಲ್ಲ. ಮೊದಲ ಬಾರಿಗೆ ಚೀನಾಕ್ಕೆ ಭಾರತ ಬಲವಾದ ಪೆಟ್ಟು ಕೊಟ್ಟದ್ದು 1967ರಲ್ಲಿ. ಆದದ್ದಾದರೂ ಇಷ್ಟೇ, 1965ರ ಭಾರತ– ಪಾಕಿಸ್ತಾನ ಯುದ್ಧದಲ್ಲಿ ಇದೇ ನಾಥೂಲಾ ಮತ್ತು ಜೆಲೆಪ್ ಲಾ ಮಾರ್ಗಗಳನ್ನು ಬಳಸಿ ಪಾಕಿಸ್ತಾನಕ್ಕೆ ಸಹಾಯವಾಗಿ ನಿಲ್ಲಲು ಚೀನಾ ಮುಂದಾಯಿತು. ಅನತಿ ದೂರದಲ್ಲಿ ಬೀಡುಬಿಟ್ಟಿದ್ದ ಭಾರತೀಯ ಸೇನಾ ತುಕಡಿಗಳಿಗೆ ಕಣಿವೆ ತೊರೆಯಿರಿ ಎಂದು ಬೆದರಿಕೆ ಒಡ್ಡಿತು.ಆದರೆ ಸೇನೆಯನ್ನು ಆ ನಿರ್ಣಾಯಕ ಪ್ರದೇಶದಿಂದ ಹಿಂದೆ ಕಳುಹಿಸಲು ಮೇಜರ್ ಜನರಲ್ ಸಗತ್ ಸಿಂಗ್ ನಿರಾಕರಿಸಿದರು. ನಾಥೂಲಾ ಮತ್ತು ಜೆಲೆಪ್ ಲಾ ಮಾರ್ಗಗಳು ಇಳಿಮೇಡು ಪ್ರದೇಶದಲ್ಲಿವೆ. ಹಾಗಾಗಿ ಅದು ನೈಸರ್ಗಿಕ ವಿಭಜಕ ಎನಿಸಿಕೊಳ್ಳುತ್ತದೆ. ಭಾರತ ಅನುಮೋದಿಸಿರುವ ಅಂತರರಾಷ್ಟ್ರೀಯ ಗಡಿರೇಖೆ ‘ಮೆಕ್ ಮಹೋನ್ ಲೈನ್’ ಜಲವಿಭಾಗಕಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಸಗತ್ ಸಿಂಗ್ ವಾದಿಸಿದರು. ಚೀನಾ ತನ್ನ ಗಡಿಯಲ್ಲಿ ಲೌಡ್ ಸ್ಪೀಕರ್ ಅಳವಡಿಸಿ, ‘1962ರ ಪರಿಣಾಮವನ್ನು ಎದುರಿಸಲಿದ್ದೀರಿ ಜೋಕೆ’ ಎಂದು ಬೆದರಿಸಿತು. ಭಾರತೀಯ ಸೇನೆ ಬೆದರಿಕೆಗೆ ಕಿವಿಗೊಡದಿದ್ದಾಗ, ಚೀನಾ ಯೋಧರು ಗಡಿಯತ್ತ ಧಾವಿಸಿ ಬಂದರು, ಭಾರತೀಯ ಸೈನಿಕರು ಸೆಬುಲಾದ ಎತ್ತರ ಪ್ರದೇಶದಲ್ಲಿ ಫಿರಂಗಿಗೆ ಮತಾಪು ತುಂಬಿ ಕಾಯುತ್ತಿದ್ದರು. ಆದರೆ ಚೀನಾ ಸೇನೆ ಬಂದೂಕು ಎತ್ತಲಿಲ್ಲ. ಬೆನ್ನು ತಿರುಗಿಸಿತು.1965ರ ಡಿಸೆಂಬರಿನಲ್ಲಿ ಮತ್ತೊಮ್ಮೆ ಕಾಲು ಕೆರೆದು ಬಂದ ಚೀನಾ, ಉತ್ತರ ಸಿಕ್ಕಿಂನಲ್ಲಿ ದಾಳಿ ನಡೆಸಿ ಇಬ್ಬರು ಸೈನಿಕರನ್ನು ಹತ್ಯೆ ಮಾಡಿತು. ಇದಲ್ಲದೇ ಭಾರತೀಯ ಸೈನಿಕರ ಮಾನಸಿಕ ಸ್ಥೈರ್ಯ ಕುಗ್ಗಿಸಲು ಲೌಡ್ ಸ್ಪೀಕರ್ ಮೂಲಕ ಭಾರತೀಯ ಸೈನಿಕರ ವೇತನ, ದೊರೆಯುತ್ತಿರುವ ಸೌಲಭ್ಯಗಳನ್ನು ಟೀಕಿಸಿತು. ಆದರೆ ನಮ್ಮ ಸೈನಿಕರು ವಿಚಲಿತರಾಗಲಿಲ್ಲ. ಮೇಜರ್ ಸಗತ್ ಸಿಂಗ್ ಭಾರತದ ಗಡಿಯಲ್ಲಿ ಅದೇ ತೆರೆನಾದ ಲೌಡ್ ಸ್ಪೀಕರ್ ಅಳವಡಿಸಿ ಮಾರುತ್ತರವನ್ನು ಚೀನಿ ಭಾಷೆಯಲ್ಲಿ ಧ್ವನಿ ಮುದ್ರಿಸಿ ಪ್ರಸಾರ ಮಾಡಿದರು. ಸತತವಾಗಿ ಎರಡು ವರ್ಷಗಳ ಕಾಲ ಚೀನಿಯರು ಅತಿಕ್ರಮಣದ ಉಮೇದು ಬಿಡಲಿಲ್ಲ. ಇತ್ತ ಭಾರತೀಯ ಯೋಧರೂ ಜಗ್ಗಲಿಲ್ಲ.1967ರ ಆಗಸ್ಟ್ ಮೊದಲ ವಾರ ಮೇಜರ್ ಬಿಷನ್ ಸಿಂಗ್, ಪಿ.ಎಸ್. ದಾಗರ್ ಜೊತೆಗೂಡಿ ‘ಟೈಗರ್ ನಾಥೂಲಾ’ದ ಸಂಪೂರ್ಣ ಹಿಡಿತ ಸಾಧಿಸಿದರು. ದಿಣ್ಣೆ ಪ್ರದೇಶಗಳಲ್ಲಿ (ಕ್ಯಾಮೆಲ್ಸ್ ಬ್ಯಾಕ್, ಸೌತ್ ಶೋಲ್ಡರ್, ಸೆಂಟರ್ ಬಂಪ್, ಸೆಬುಲಾ) ಭಾರತೀಯ ಸೈನಿಕರು ಬೀಡುಬಿಟ್ಟರು. ಚೀನಾ ಸೈನಿಕರು ಅಂತರರಾಷ್ಟ್ರೀಯ ಗಡಿರೇಖೆಯ ಸಮೀಪ ಕಂದಕ ಕೊರೆಯುತ್ತಿರುವುದು ಬೆಳಕಿಗೆ ಬಂತು. ಭಾರತದ ಸೇನೆ ತಕ್ಷಣವೇ ಕಾರ್ಯೋನ್ಮುಖವಾಗಿದ್ದರ ಪರಿಣಾಮ ಕಂದಕವನ್ನು ಮುಚ್ಚಿ ಚೀನಾ ಸೇನೆ ಹಿಂದೆ ನಡೆಯಿತು. ಈ ಪ್ರಯತ್ನಗಳಿಂದ ವಿಚಲಿತಗೊಂಡು ಮೊದಲು ಅಳವಡಿಸಿದ್ದ 21 ಲೌಡ್ ಸ್ಪೀಕರ್ ಜೊತೆ ಮತ್ತೂ 8 ಸೇರಿಸಿ ಬೆದರಿಕೆ ಒಡ್ಡುವ ಕಾರ್ಯವನ್ನು ಚೀನಾ ಮುಂದುವರೆಸಿತು.ಲೆಫ್ಟಿನಂಟ್ ಜನರಲ್ ಜೆ.ಎಸ್. ಅರೋರ ಆಣತಿ ಮೇರೆಗೆ ನಾಥೂಲಾದಿಂದ ಬಲ ಭುಜದವರೆಗೆ (ನಾರ್ಥ್ ಶೋಲ್ಡರ್) ತಂತಿ ಬೇಲಿ ನಿರ್ಮಿಸುವ ಕೆಲಸಕ್ಕೆ ಭಾರತದ ಸೇನೆ ಮುಂದಾಯಿತು. ಕುಪಿತಗೊಂಡ ಡ್ರ್ಯಾಗನ್ ಪಡೆ, ಆಗಸ್ಟ್ 23ರಂದು 75 ಶಸ್ತ್ರಸಜ್ಜಿತ ಯೋಧರನ್ನು ನಾಥೂಲಾದತ್ತ ಕಳುಹಿಸಿತು. ಚೀನಾ ಕಡೆಯಿಂದ ಬಂದ ಯೋಧರು, ತಮ್ಮ ಕೆಂಪು ಬಣ್ಣದ ಪುಸ್ತಕ ತೆರೆದು ಅದರಲ್ಲಿದ್ದ ಘೋಷಣೆ ಕೂಗಲು ಆರಂಭಿಸಿದರು. ಸುಮಾರು ಒಂದು ಘಂಟೆ ಘೋಷಣೆ ಕೂಗುವುದು ಬಿಟ್ಟು ಬೇರೇನೂ ನಡೆಯಲಿಲ್ಲ. ನಂತರ ಚೀನಾ ಪಡೆ ಬಂದ ದಾರಿಯಲ್ಲೇ ಹಿಂದೆ ನಡೆಯಿತು. ಕೆಲದಿನಗಳಲ್ಲೇ ಮತ್ತೊಮ್ಮೆ ಘರ್ಷಣೆ ಆರಂಭವಾಯಿತು. ಉಭಯ ದೇಶಗಳ ಯೋಧರು ಕೈ ಕೈ ಮಿಲಾಯಿಸುವ ಸಂದರ್ಭ ಎದುರಾಯಿತು. ಜಾಟ್ ಯೋಧರ ಬಾಹುಗಳನ್ನು ಮಣಿಸುವಲ್ಲಿ ಚೀನಾ ಯೋಧರು ಸೋತರು. ಕಲ್ಲು ತೂರುವ ಪ್ರಯತ್ನ ಮಾಡಿದರು.ಅದು, 11 ಸೆಪ್ಟೆಂಬರ್ 1967. ಭಾರತೀಯ ಸೈನಿಕರು ತಂತಿ ಬೇಲಿ ನಿರ್ಮಿಸುವ ಕೆಲಸ ಆರಂಭಿಸುತ್ತಿದ್ದಂತೆಯೇ, ಚೀನಾ ಸೇನೆ ಮಾತಿನ ಚಕಮಕಿಗೆ ಇಳಿಯಿತು. ಕೆಲಹೊತ್ತಿನಲ್ಲೇ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಚೀನಾ ಗುಂಡಿನ ದಾಳಿ ನಡೆಸಿತು. ಭಾರತೀಯ ಸೇನೆಗೆ ಪ್ರತಿದಾಳಿ ಆದೇಶ ಬರುವುದು ತಡವಾಯಿತು. ಕಮಾಂಡರ್ ಪಿ.ಎಸ್. ದಾಗರ್, ಮೇಜರ್ ಹರ್ಭಜನ್ ಸಿಂಗ್ ಹುತಾತ್ಮರಾದರು. ನಂತರ ತೀವ್ರ ಪ್ರತಿದಾಳಿ ನಡೆಸಿದ ಭಾರತದ ಸೇನೆ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಲು ಸಫಲವಾಯಿತು. ಸಣ್ಣದಾಗಿ ಆರಂಭವಾದ ಘರ್ಷಣೆ ಆರು ದಿನಗಳ ಯುದ್ಧದ ಸ್ವರೂಪ ಪಡೆಯಿತು. ನಾಥೂಲಾ ಉತ್ತರ ಭಾಗದಲ್ಲಿದ್ದ ಚೋಲಾ ಮಾರ್ಗದಲ್ಲಿ ಅಕ್ಟೋಬರ್ 1 ರಂದು ಮತ್ತೊಂದು ದಾಳಿ ನಡೆಯಿತು. ಈ ಎರಡೂ ದಾಳಿಗಳಲ್ಲಿ ಸುಮಾರು 88 ಭಾರತೀಯ ಸೈನಿಕರು ಹತರಾದರೆ, ಚೀನಾದ 340 ಸೈನಿಕರು ಸಾವನ್ನಪ್ಪಿದ್ದರು.

ತನ್ನೆದುರು ಸೋತ ದೇಶವೊಂದು ಕೇವಲ ಐದು ವರ್ಷಗಳಲ್ಲಿ ಹೀಗೆ ಮುಯ್ಯಿ ತೀರಿಸಿಕೊಳ್ಳಬಹುದು ಎಂದು ಚೀನಾ ಊಹಿಸಿರಲಿಲ್ಲ. ಜೀವತೆತ್ತ ಭಾರತದ ಸೈನಿಕರ ಶವಗಳನ್ನು ತನ್ನ ಗಡಿಯೊಳಗೆ ಎಳೆದು, ಭಾರತ ಗಡಿ ದಾಟಿ ಬಂದು ದಾಳಿ ನಡೆಸಿದೆ ಎಂದು ಆರೋಪಿಸಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿತು. ಇತ್ತ ರಾಜಕೀಯ ನೇತಾರರ ತಪ್ಪು ನಿರ್ಧಾರಗಳಿಂದ 1962ರಲ್ಲಿ ಸೋತಿದ್ದ ಭಾರತದ ಯೋಧರು, 67ರಲ್ಲಿ ತಮ್ಮ ಕ್ರೋಧ ತಣಿಸಿಕೊಂಡಿದ್ದರು. ಹಾಗಾಗಿ 62ರ ಯುದ್ಧವನ್ನಷ್ಟೇ ನೆನಪಿಸಿ ಚೀನಾ ಇದೀಗ ಕಣ್ಣರಳಿಸಿದರೆ ಭಾರತ ಬೆದರುವ ಸ್ಥಿತಿಯಲಿಲ್ಲ.

ಈಗಿನ ಬಿಕ್ಕಟ್ಟಿಗೆ ಕಾರಣವಾಗಿರುವ ಘಟನೆಗಳನ್ನು ನೋಡುವುದಾದರೆ, ದೋಕಲಾ ಪ್ರದೇಶದಲ್ಲಿ ಚೀನಾದ ಸೇನೆ ರಸ್ತೆ ನಿರ್ಮಿಸುವ ಪ್ರಯತ್ನ ಮಾಡಿದಾಗ ಭಾರತದ ಸೇನೆ ಆ ಪ್ರಯತ್ನವನ್ನು ತಡೆದಿದೆ. ‘ದೋಕಲಾ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಚೀನಾ ತನ್ನ ನೆಲದಲ್ಲಿ ನಡೆಸುತ್ತಿದೆ. ಇದು ಚೀನಾ- ಭೂತಾನ್ ನಡುವಿನ ವ್ಯವಹಾರವೇ ಹೊರತು ಭಾರತಕ್ಕೆ ಸಂಬಂಧಿಸಿದ್ದಲ್ಲ’ ಎನ್ನುವುದು ಚೀನಾದ ವಾದ. ಮುಂದುವರಿದು, ಭಾರತದ ಸೇನೆ ಗಡಿ ದಾಟಿ ಬಂದು ತನ್ನ ರಸ್ತೆ ಕಾಮಗಾರಿಯನ್ನು ತಡೆಯುವ ಪ್ರಯತ್ನ ಮಾಡಿದೆ ಎಂದು ಆರೋಪಿಸುತ್ತಿದೆ. ಆದರೆ ಅಸಲಿಯತ್ತು ಬೇರೆಯಿದೆ. ತನ್ನ ಗಡಿಯಲ್ಲಿ ಚೀನಾದ ಚಟುವಟಿಕೆ ತೀವ್ರಗೊಂಡಂತೆ, ಭೂತಾನ್ ಸೇನೆ (ರಾಯಲ್ ಭೂತಾನ್ ಆರ್ಮಿ) ಚೀನಾವನ್ನು ಮೊದಲು ತಡೆಯುವ ಪ್ರಯತ್ನ ಮಾಡಿದೆ. ಜೊತೆಗೆ ಭಾರತದ ಸೇನೆಯ ಸಹಕಾರವನ್ನು ಕೋರಿದೆ. ಬಹುಶಃ ಭಾರತ ಮಧ್ಯಪ್ರವೇಶಿಸುವುದನ್ನು ಚೀನಾ ಊಹಿಸಿರಲಿಲ್ಲ. ಎಚ್ಚರಿಕೆಯ ನಂತರವೂ ರಸ್ತೆ ಕಾಮಗಾರಿಯನ್ನು ಚೀನಾ ಮುಂದುವರೆಸಿದಾಗ ಭಾರತದ ಸೈನಿಕರು ಮಾನವ ಗೋಡೆ ನಿರ್ಮಿಸಿ ಜಗ್ಗದೆ ನಿಂತಿದ್ದಾರೆ. ನೀವು ಹಿಂದೆ ಹೋಗುವವರೆಗೆ ನಾವೂ ಹೋಗೆವು ಎಂದು ಡೇರೆ ಜಡಿದು ಮೊಕ್ಕಾಂ ಹೂಡಿದ್ದಾರೆ.ಇಲ್ಲಿ ಭೂತಾನ್ ಸ್ವಾಯತ್ತತೆ ಕಾಪಾಡುವ ನಿಟ್ಟಿನಲ್ಲಷ್ಟೇ ಭಾರತದ ಸೇನೆ ಈ ನಿರ್ಧಾರ ತಳೆದಿಲ್ಲ. ಸೇನೆಯ ಈ ನಿಲುವಿಗೆ ಮತ್ತೊಂದು ಆಯಾಮ ಇದೆ. ಚಂಬಿ ಕಣಿವೆ ಟಿಬೆಟ್ ಸ್ವಾಯತ್ತ ಪ್ರದೇಶ, ನಾಥೂಲಾ ಮತ್ತು ಜೆಲೆಪ್ ಲಾ ಮಾರ್ಗಗಳು ಈ ಕಣಿವೆಯ ಮೂಲಕ ಹಾದು ಹೋಗುತ್ತವೆ. ಚಂಬಿ ಕಣಿವೆಯನ್ನು ಚೀನಾ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇದು ಭಾರತ, ಭೂತಾನ್, ಮತ್ತು ಚೀನಾ ನಡುವಿನ ತ್ರಿಸಂಧಿಗೆ ತಗುಲಿಕೊಂಡಿದೆ. ಅಪಾಯವಿರುವುದು ಇಲ್ಲೇ, ಒಂದೊಮ್ಮೆ ಚಂಬಿ ಕಣಿವೆ ರಸ್ತೆ ಕಾಮಗಾರಿ (ಕ್ಲಾಸ್ 40) ಪೂರ್ಣಗೊಂಡು, ವಾಹನ ಸಂಚಾರ ಸರಾಗವಾದರೆ, ಚೀನಾ ತನ್ನ ಶಸ್ತ್ರಸಜ್ಜಿತ ಸೇನೆಯನ್ನು ಸಿಲಿಗುರಿ ಮಾರ್ಗಕ್ಕೆ ತಂದು ನಿಲ್ಲಿಸುವುದು ಸುಲಭವಾಗುತ್ತದೆ. ‘ಚಿಕನ್ ನೆಕ್’ ಎಂದು ಕರೆಯಲಾಗುವ 27 ಕಿ.ಮೀ. ವಿಸ್ತಾರದ ಸಿಲಿಗುರಿ ಮಾರ್ಗ ಭಾರತದ ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಬೆಸೆದಿದೆ.ಒಂದೊಮ್ಮೆ ಚೀನಾ ಸೇನೆ ‘ಚಿಕನ್ ನೆಕ್’ ತಲುಪುವುದು ಸಾಧ್ಯವಾದರೆ, ಮೇಘಾಲಯ, ನಾಗಾಲ್ಯಾಂಡ್, ಅಸ್ಸಾಂ, ತ್ರಿಪುರ, ಮಿಜೋರಾಂ, ಮಣಿಪುರ, ಅರುಣಾಚಲ ಪ್ರದೇಶದ ಸಂಪರ್ಕ ಕಡಿತಗೊಳ್ಳುತ್ತದೆ. ಭಾರತವನ್ನು ಮಂಡಿಯೂರುವಂತೆ ಮಾಡಲು, ತುಂಡು ಮಾಡಲು ಇರುವ ಏಕೈಕ ಮಾರ್ಗ ಇದು ಎಂಬುದು ಚೀನಾಕ್ಕೆ ತಿಳಿದಿದೆ.

ಹಾಗಾದರೆ ಗಡಿಯ ಉದ್ವಿಗ್ನ ಪರಿಸ್ಥಿತಿ ಉಭಯ ದೇಶಗಳ ನಡುವಿನ ಯುದ್ಧಕ್ಕೆ ಕಾರಣವಾಗುವುದೇ? ಆ ಸಾಧ್ಯತೆ ತೀರಾ ಕಮ್ಮಿ. 1962ರ ಪರಿಸ್ಥಿತಿ ಈಗಿಲ್ಲ ಎಂಬುದು ಚೀನಾಕ್ಕೆ ತಿಳಿದಿದೆ. ಭಾರತ ರಾಜತಾಂತ್ರಿಕವಾಗಿ ಜಗತ್ತಿನ ಇತರ ಶಕ್ತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಚೀನಾ ಎದುರು ನಿಲ್ಲಲು ಜಪಾನ್, ಅಮೆರಿಕ ಹವಣಿಸುತ್ತಿವೆ. ಇನ್ನು, ಉಭಯ ದೇಶಗಳೂ ವಾಣಿಜ್ಯಿಕ ಕಾರಣಗಳಿಂದ ಒಂದರ ಮೇಲೆ ಮತ್ತೊಂದು ಅವಲಂಬಿತವಾಗಿವೆ. ಹಾಗಾಗಿ ದೀರ್ಘ ಕಾಲದ ಮುನಿಸಿಗೆ ಆಸ್ಪದವಿಲ್ಲ. ಸಾಮಾನ್ಯವಾಗಿ ಇಂತಹ ಉದ್ವಿಗ್ನ ಸಂದರ್ಭದಲ್ಲಿ ಮುಖ ಉಳಿಸಿಕೊಳ್ಳುವ ಮಾರ್ಗ ಎರಡೂ ದೇಶಗಳಿಗೆ ಗೋಚರಿಸಿದರೆ ವಾತಾವರಣ ತಿಳಿಯಾಗುತ್ತದೆ. ಆ ಮಾರ್ಗ ಹುಡುಕುವ ಕೆಲಸ ರಾಜತಾಂತ್ರಿಕ ಮಾತುಕತೆಯಿಂದ ಆಗಬೇಕು.ಯಾರು ಮೊದಲು ರೆಪ್ಪೆ ಬಡಿಯಬೇಕು, ಹಿಂದೆ ಸರಿದು ನಿಲ್ಲಬೇಕು ಎಂಬ ಪ್ರಶ್ನೆಗೆ ಅಂಟಿಕೊಂಡರೆ ಪರಿಸ್ಥಿತಿ ಸುಧಾರಿಸಲಾರದು. ಈ ಹಿಂದೆ ಜಾರ್ಜ್ ಫರ್ನಾಂಡಿಸ್ ‘ಭಾರತದ ಮೊದಲ ಶತ್ರು ಚೀನಾ’ ಎಂದಿದ್ದರು. ಅಣ್ವಸ್ತ್ರ ಪರೀಕ್ಷೆಯ ಅನಿವಾರ್ಯವನ್ನು ಮನದಟ್ಟು ಮಾಡಲು ಆಗಿನ ಅಮೆರಿಕ ಅಧ್ಯಕ್ಷ ಕ್ಲಿಂಟನ್ ಅವರಿಗೆ ಬರೆದ ಪತ್ರದಲ್ಲಿ ವಾಜಪೇಯಿ ಚೀನಾದ ಹೆಸರನ್ನು ಉಲ್ಲೇಖಿಸಿದ್ದರು. ನಿಜ, ಚೀನಾ ಎಂಬ ಮಗ್ಗುಲ ಮುಳ್ಳನ್ನು ನಿವಾರಿಸಿಕೊಳ್ಳಲು ಎಚ್ಚರಿಕೆಯ ಹೆಜ್ಜೆ ಇಡಬೇಕು. ಆದರೆ ಲೌಡ್ ಸ್ಪೀಕರ್ ಬೆದರಿಕೆಗೆ ಬಗ್ಗುವ ಸ್ಥಿತಿಯಲ್ಲಂತೂ ಭಾರತ ಇಲ್ಲ. ಹಾಗಾಗಿಯೇ ಭಾರತದ ಯೋಧರು, ‘ಚೀನಾ ಬೊಬ್ಬಿರಿದರೆ ಇಲ್ಲಾರಿಗೂ ಭಯವಿಲ್ಲ’ ಎಂದು ಜಗ್ಗದೆ ನಿಂತುಬಿಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.