ಭಾನುವಾರ, ಮಾರ್ಚ್ 7, 2021
18 °C

ಜಾಗತಿಕ ಉದ್ಯಮ ಲೋಕದಲ್ಲಿ ಇಂಗ್ಲಿಷ್‌ ಪ್ರಭಾವ

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ಜಾಗತಿಕ ಉದ್ಯಮ ಲೋಕದಲ್ಲಿ ಇಂಗ್ಲಿಷ್‌ ಪ್ರಭಾವ

 ಪುಸ್ತಕಗಳ ಓದು ವ್ಯಕ್ತಿಯನ್ನು ಪೂರ್ಣ­ಗೊ­ಳಿಸಿದರೆ, ಬರವಣಿಗೆಯು ಪರಿ­ಪೂರ್ಣ­ಗೊಳಿಸುತ್ತದೆ ಮತ್ತು ಸಮ್ಮೇಳನಗಳು ವ್ಯಕ್ತಿತ್ವವನ್ನು ರೂಪು­ಗೊಳಿಸುತ್ತವೆ ಎನ್ನುವ ಮಾತಿದೆ. ಜಾಗತೀಕರಣದ ಫಲವಾಗಿ ಗಡಿಯಾ­ಚೆಗಿನ ಉದ್ದಿಮೆ ವಹಿವಾಟು ಈಗ ಬಹು ರಾಷ್ಟ್ರೀಯ ಸ್ವರೂಪ ಪಡೆದುಕೊಂಡಿದೆ.ಉದ್ಯ­ಮಿ­ಗಳೂ ಹಲವಾರು ದೇಶಗಳಿಗೆ ಸುಲಭವಾಗಿ ಪ್ರಯಾಣಿಸುವಂತಾಗಿದೆ. ‘ಪ್ರವಾಸವು ವ್ಯಕ್ತಿ­ಯನ್ನು ಪರಿಪೂರ್ಣ­ಗೊಳಿಸುತ್ತದೆ’ ಎನ್ನುವ ನಾಣ್ಣುಡಿ ತುಂಬ ಹಳೆಯ­ದಾದರೂ, ಈ ಲೋಕೋಕ್ತಿಯು ಇಂದಿನ ಉದ್ಯೋಗ ಮಾರು­ಕಟ್ಟೆಯಲ್ಲಿ ಹೆಚ್ಚು ಪ್ರಸ್ತುತವಾಗಿದೆ.

ದೇಶದಾದ್ಯಂತ ವಿವಿಧ ಶೈಕ್ಷಣಿಕ ಸಂಸ್ಥೆಗಳಿಂದ ಪ್ರತಿ ವರ್ಷ ಹೊರ ಬರುವ ಪದವೀಧರರ ಕೌಶಲ ಮತ್ತು ಉದ್ಯೋಗಶೀಲತೆ ಮಧ್ಯೆ ಇರುವ ಅಂತರದ ಬಗ್ಗೆ ನಾನು ಈ ಹಿಂದಿನ ಅಂಕಣದಲ್ಲಿ ಅನೇಕ ವಿವರಗಳನ್ನು ಓದುಗರೊಂದಿಗೆ ಹಂಚಿ­ಕೊಂಡಿದ್ದೆ.  ಉದ್ಯೋಗಶೀಲತೆ ಮೇಲೆ ಪ್ರಭಾವ ಬೀರುವ ಮೂರು ಪ್ರಮುಖ ಸಂಗತಿಗಳಲ್ಲಿ ‘ಸಂವಹನ ಕಲೆ’ಯೂ ಒಂದಾಗಿದೆ. ಇನ್ನುಳಿದ ಎರಡು ಸಂಗತಿಗಳಲ್ಲಿ ಕಾರ್ಯಕ್ಷೇತ್ರದ ತಿಳಿವಳಿಕೆ ಮತ್ತು ಕಂಪ್ಯೂಟರ್ ಜ್ಞಾನ ಮಹತ್ವ­ದ್ದಾಗಿವೆ. ಅಧ್ಯಯನ ವರದಿಯಲ್ಲಿ ‘ಸಂವಹನ ಕೌಶಲ’ವು ಸಾಮಾನ್ಯ ಗುಣಲಕ್ಷಣ ಎಂದು ಪ್ರಸ್ತಾಪಿ­ಸಿ­ದ್ದರೂ, ಬಹುತೇಕ ಉದ್ಯೋಗದಾತರು, ಉದ್ಯೋಗ ನೀಡುವಾಗ ವ್ಯಕ್ತಿಯ ಇಂಗ್ಲಿಷ್ ಭಾಷಾ ಪರಿಣತಿಯನ್ನೇ ಪ್ರಮುಖ­ವಾಗಿ ಪರಿಗಣಿ­ಸುತ್ತಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.ಸದ್ಯದ ಉದ್ದಿಮೆ ವಹಿವಾಟು ವಿಶ್ವದಾದ್ಯಂತ ಡಿಜಿಟಲ್ ವ್ಯವಸ್ಥೆ ಮತ್ತು ಪರಸ್ಪರ ಸಂಪರ್ಕ ಹೊಂದಿರುವ ಅಂತರ್ಜಾಲ ವ್ಯವಸ್ಥೆಯನ್ನೇ ಸಂಪೂರ್ಣ­ವಾಗಿ ಆಧರಿಸಿದೆ. ಈ ವ್ಯವಸ್ಥೆ ಅದೆಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಬೆಳೆದಿದೆ ಎಂದರೆ ದೂರ ಮತ್ತು ಸ್ಥಳಗಳು ತಮ್ಮ ಪ್ರಸ್ತುತತೆಯನ್ನೇ ಕಳೆದುಕೊಂಡಿವೆ.ಭಾರತದಲ್ಲಿ ಯಾವುದೇ ವಹಿವಾಟು ನಡೆಸದ ಬಹುರಾಷ್ಟ್ರೀಯ ಸಂಸ್ಥೆ­ಯೊಂದು,  ತನ್ನ ಜಾಗತಿಕ ವಹಿವಾಟಿಗೆ ಅಗತ್ಯ­ವಾದ ಪೂರಕ ಕೆಲಸ ಕಾರ್ಯ­ಗಳನ್ನು ನಿರ್ವಹಿಸುವ ಕಚೇರಿ­ಗಳನ್ನು (ಬ್ಯಾಕ್ ಆಫೀಸ್) ಇಲ್ಲಿಯೇ ಸ್ಥಾಪಿಸಿವೆ.  ಯೂರೋಪ್‌ನಲ್ಲಿ ಪ್ರಧಾನ ಕಚೇರಿ ಹೊಂದಿ­ರುವ ಅನೇಕ ಹಣಕಾಸು ಮತ್ತು ಬ್ಯಾಂಕಿಂಗ್‌ ವಹಿವಾಟಿನ ಬಹು­ರಾಷ್ಟ್ರೀಯ ಸಂಸ್ಥೆಗಳು ತಮ್ಮೆಲ್ಲ ಕಚೇರಿ ಕೆಲಸಗಳನ್ನು ಭಾರತದಿಂದಲೇ ನಿರ್ವಹಿ­ಸುತ್ತವೆ.ಸರಕುಗಳನ್ನು ತಯಾರಿಸುವ ದೈತ್ಯ ಸಂಸ್ಥೆಗಳೂ ತಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನೂ ಭಾರತ ಮತ್ತು  ಕಡಿಮೆ ವೆಚ್ಚ ಮಾಡಬ­ಹುದಾದ ಇತರ ದೇಶ­ಗಳಲ್ಲಿಯೇ ಸ್ಥಾಪಿ­ಸಿವೆ. ಕಚೇರಿ, ಸಿಬ್ಬಂದಿ ಮತ್ತಿತರ ನಿರ್ವ­ಹಣಾ ವೆಚ್ಚಗಳು ಅಗ್ಗವಾಗಿರು­ವುದರ ಜತೆಗೆ, ಇಲ್ಲಿ ಲಭ್ಯ ಇರುವ ಪರಿಣತ ಮಾನವ ಸಂಪನ್ಮೂಲವೂ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.ಇಂಗ್ಲಿಷ್ ಭಾಷೆಯನ್ನು ಸಂಪರ್ಕ ಭಾಷೆ­ಯಾಗಿ ವ್ಯಾಪಕವಾಗಿ ಬಳಕೆಗೆ ತಂದಿರುವು­ದ­ರಿಂದಲೇ ಇದೆಲ್ಲ ಸಾಧ್ಯ­ವಾಗಿದೆ. ಅಂತರ­ರಾಷ್ಟ್ರೀಯ ಉದ್ದಿಮೆ ವಹಿವಾಟು ಅದೆಷ್ಟರ ಮಟ್ಟಿಗೆ ತ್ವರಿತವಾಗಿ ಏಕೀಕೃತಗೊಂಡಿದೆ ಎಂದರೆ, ‘ಜಾಗತಿಕ ಗ್ರಾಮ’ ಎನ್ನುವ ಪರಿ­ಕಲ್ಪನೆಯೂ ಈಗ ನಿಜವಾಗಿ ಬಿಟ್ಟಿದೆ. ಅಭಿವೃದ್ಧಿ ಹೊಂದಿದ ಸಿರಿವಂತ ದೇಶಗಳು ಸೇವಾ ಕ್ಷೇತ್ರಕ್ಕೆ ಅದೆಷ್ಟರ ಮಟ್ಟಿಗೆ ಆದ್ಯತೆ ನೀಡಿವೆ ಎಂದರೆ, ದಿನ ಪತ್ರಿಕೆಗಳಲ್ಲಿ ಗಮನ ಸೆಳೆಯುವ ಸುದ್ದಿ­ಗಳೆಲ್ಲ ಇದೇ ವಲಯದಿಂದಲೇ ಬರು­ತ್ತಿವೆ.ಇತ್ತೀಚಿನ ಬಿಸಿ ಬಿಸಿ ಸುದ್ದಿಯಾಗಿರುವ ವಾಟ್ಸ್‌ಆ್ಯಪ್ ಅನ್ನು ಫೇಸ್‌ಬುಕ್ ಖರೀದಿಸಿರು­ವುದು, ಭವಿಷ್ಯದ ಜಾಗತಿಕ ಉದ್ಯಮವು ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದರ ದಿಕ್ಸೂಚಿ­ಯಾಗಿದೆ. ಸೇವಾ ವಲಯದ ಮಹತ್ವ ಹೆಚ್ಚುತ್ತಿರುವುದೂ ಇದರಿಂದ ವೇದ್ಯವಾಗುತ್ತದೆ.ಈ ಹಿಂದೆ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಸರಕುಗಳ ತಯಾರಿಕಾ ರಂಗದ ಪ್ರಾಬಲ್ಯ ಇದ್ದಾಗ ಇಂಗ್ಲಿಷ್‌್ ಭಾಷೆಗೆ ಅಷ್ಟು ಮಹತ್ವ ಇದ್ದಿರಲಿಲ್ಲ.  ವಿವಿಧ ದೇಶಗಳು ಮತ್ತು ಅವುಗಳ ಅರ್ಥ ವ್ಯವಸ್ಥೆಗಳು ಇಂಟರ್‌ನೆಟ್ ಮತ್ತು ಡಿಜಿಟಲ್ ಸಂಪರ್ಕ ಕ್ರಾಂತಿಯ ಪ್ರಭಾವದಿಂದ ಹೊರಗೆ ಉಳಿದು ತಮ್ಮತನ  ಉಳಿಸಿ­ಕೊಂಡಿ­ದ್ದವು. ಆದರೆ, ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಸೇವಾ ವಲಯವು ಪ್ರವರ್ಧಮಾನಕ್ಕೆ ಬರು­ತ್ತಿದ್ದಂತೆ ಇಂಗ್ಲಿಷ್‌ಗೆ ಇನ್ನಿಲ್ಲದ ಮಹತ್ವ ಪ್ರಾಪ್ತ­ವಾಗತೊಡಗಿತು. ಇಂಗ್ಲಿಷ್ ಪರಿ­ಣತಿಯ ಯುವ ಮಾನವ ಸಂಪನ್ಮೂಲ ವಿಪುಲವಾಗಿರುವ ಭಾರತ­­ದಂತಹ ಇತರ ದೇಶಗಳೂ ಈ ಬೆಳವಣಿಗೆಯ ಪ್ರಯೋ­ಜನ ಪಡೆಯಲು ಮುಂದಾದವು.ಬ್ರಿಟಿಷ್ ವಸಾಹತುಶಾಹಿಗಳಾಗಿದ್ದ ಸಣ್ಣ ಪುಟ್ಟ ದೇಶಗಳಲ್ಲಿ ಬ್ರಿಟಿಷರು ಬಳುವಳಿಯಾಗಿ ಬಿಟ್ಟು ಹೋಗಿದ್ದ ಇಂಗ್ಲಿಷ್ ಭಾಷೆ ಕ್ರಮೇಣ ತನ್ನ ಮಹತ್ವ ಸಾಬೀತುಪಡಿಸತೊಡಗಿತು. ಇದು ಅತ್ಯಲ್ಪ ಅವಧಿಯಲ್ಲಿ ವಿಶ್ವದಾದ್ಯಂತ ಅತ್ಯಂತ ತ್ವರಿತವಾಗಿ ಪಸರಿಸಿತು.ಇತ್ತೀಚಿನ ಅಧ್ಯಯನ ವರದಿ ಅನ್ವಯ, ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತ ಹೊಂದಿರುವವರು, ಆರಂಭದಲ್ಲಿಯೇ ಶೇ 35ರಷ್ಟು ಹೆಚ್ಚು­ವರಿ ಸಂಬಳ ಪಡೆಯಲು ಅರ್ಹತೆ ಪಡೆಯುತ್ತಾರೆ. ವಿಶ್ವದಾದ್ಯಂತ ಉದ್ದಿಮೆ ವಹಿವಾಟಿನ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಬಳಕೆಗೆ ಬರುತ್ತಿರುವುದೇ ಇದಕ್ಕೆ ಮುಖ್ಯ ಕಾರಣ.  ಸಂವಹನ ಭಾಷೆಯಾಗಿ ಇಂಗ್ಲಿಷ್ ಬಳ­ಸು­ತ್ತಿರುವುದರಿಂದಲೇ ಬಹು­ರಾಷ್ಟ್ರೀಯ ಸಂಸ್ಥೆಗಳು ವಿಶ್ವದಾದ್ಯಂತ ಸುಲಭವಾಗಿ ತಮ್ಮ ವಹಿ­ವಾಟು ವಿಸ್ತರಿಸಲು ಸಾಧ್ಯ­ವಾಗುತ್ತಿದೆ.ಚೀನಾದ ನಿದರ್ಶನವೂ ಇಲ್ಲಿ ಉಲ್ಲೇ­ಖ­ನೀಯ. ಇಂಗ್ಲಿಷ್‌ಗೆ ಪ್ರತಿಸ್ಪರ್ಧಿ­ಯಾಗಿ ಮಂಡಾ­ರಿನ್ ಭಾಷೆಯನ್ನು ಕಂಪ್ಯೂಟರ್ ಭಾಷೆಯಾಗಿ ಬಳಕೆಗೆ ತರಲು ಚೀನಾ ಸರ್ಕಾರ  ಮುಂದಾ­ಗಿತ್ತು.  ಆದರೆ, ಇದು ಇಂಗ್ಲಿಷ್ ಭಾಷೆಯ ಮುನ್ನ­ಡೆಗೆ ಯಾವುದೇ ಅಡಚಣೆ ಉಂಟು ಮಾಡಲಿಲ್ಲ.  ಮಂಡಾರಿನ್‌ಗೆ ಹೋಲಿ­ಸಿದರೆ ಇಂಗ್ಲಿಷ್ ಭಾಷೆ ಹೆಚ್ಚು ಸಮರ್ಥ­ವಾಗಿರುವುದು ಕೊನೆಗೂ ಅಲ್ಲಿ ಸಾಬೀತಾ­ಯಿತು.ಚೀನಾದ ಒಟ್ಟು ಜನಸಂಖ್ಯೆ­ಯಾಗಿರುವ 138 ಕೋಟಿ­ಯಲ್ಲಿ ಮಂಡಾರಿನ್ ಭಾಷೆ ಆಡುವವರ ಸಂಖ್ಯೆ 90 ಕೋಟಿ ಇದ್ದರೂ ಡಿಜಿಟಲ್ ಮತ್ತು ಉದ್ದಿಮೆ ವಹಿವಾಟಿನ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಪಾರಮ್ಯಕ್ಕೆ ಎದು­ರಾಗಿದ್ದ ದೊಡ್ಡ ಬೆದರಿಕೆಯೊಂದು ದೂರ­ವಾಯಿತು.ಚೀನಾದ ಹಲವಾರು ವಾಣಿಜ್ಯ ಕೂಟಗಳೂ ಇಂಗ್ಲಿಷ್‌ ಪ್ರಭಾವವನ್ನು ಅನಿವಾರ್ಯವಾಗಿ ಒಪ್ಪಿಕೊಂಡವು. ಮಂಡಾರಿನ್‌ ಬದಲಿಗೆ ಇಂಗ್ಲಿಷ್‌ಗೆ ಆದ್ಯತೆ ನೀಡಲಾರಂಭಿಸಿದವು. ಇದ­ರಿಂದಾಗಿ ಇಂಗ್ಲಿಷ್ ಮಾತನಾಡುವ ಮ್ಯಾನೇ­ಜರ್‌­­ಗಳಿಗಾಗಿ ಭಾರಿ ಬೇಡಿಕೆ ಕಂಡು ಬಂದಿತು. ಲಕ್ಷಾಂತರ ವಿದ್ಯಾರ್ಥಿ­ಗಳು ತಮ್ಮ ಇಂಗ್ಲಿಷ್‌ ಭಾಷಾ ಕೌಶಲ ಹೆಚ್ಚಿಸಿಕೊಳ್ಳಲು ಉನ್ನತ ವಿದ್ಯಾಭ್ಯಾಸ ನೆಪದಲ್ಲಿ ಅಮೆರಿಕೆಗೆ ಪ್ರಯಾಣ ಬೆಳೆಸಿ­ದರು.ಕ್ರಮೇಣ ಇಂಗ್ಲಿಷ್‌್ ಭಾಷೆಯು ದಕ್ಷಿಣ ಅಮೆರಿಕ ಮತ್ತು ಇತರ ಸಮಾಜವಾದಿ ದೇಶ­ಗಳಾದ ರಷ್ಯಾ, ಉಕ್ರೇನ್ ಮತ್ತಿತರ ದೇಶಗಳನ್ನೂ ಪ್ರವೇಶಿಸಿತು.ಇತ್ತೀಚೆಗೆ ನಾನು ಬ್ರೆಜಿಲ್‌ಗೆ ಭೇಟಿ ನೀಡಿದಾಗ ಅಲ್ಲಿನ ಬಹುತೇಕ ಉದ್ಯಮಿ­ಗಳು ಇಂಗ್ಲಿಷ್‌­ನಲ್ಲಿಯೇ ಮಾತನಾಡು­ವುದನ್ನು ರೂಢಿಸಿಕೊಂಡಿ­ರುವುದನ್ನು ಅಥವಾ ಅನುವಾದಕರನ್ನು ನೇಮಿಸಿ­ಕೊಂಡಿ­ರುವುದು ನನ್ನ ಅನುಭವಕ್ಕೆ ಬಂದಿತು.ಜಾಗತಿಕ ಉದ್ಯಮ ಲೋಕದಲ್ಲಿ ಇಂಗ್ಲಿಷ್‌್ ಭಾಷೆಯ ಪ್ರಭಾವದ  ಕುರಿತು, ಇತ್ತೀಚೆಗೆ ಪ್ರಮುಖ ಇಂಗ್ಲಿಷ್‌ ಹಣಕಾಸು ದಿನಪತ್ರಿಕೆ­ಯೊಂದರಲ್ಲಿ ‘ಇಂಗ್ಲಿಷೀಕರಣ’ ಕುರಿತು ಲೇಖನ­ವೊಂದು ಪ್ರಕಟಗೊಂಡಿತ್ತು. ಹಾರ್ವರ್ಡ್‌ ಬಿಸಿನೆಸ್‌ ಸ್ಕೂಲ್‌ನ ತ್ಸೆಡಲ್‌ ನೀಲೆ ಅವರನ್ನು ಉದ್ಧರಿಸಿ ಈ ಲೇಖನ ಬರೆಯಲಾಗಿತ್ತು.ಲೆನೊವಾ, ಲುಫ್ತಾನ್ಸಾ, ಆಡಿ ಮತ್ತಿ­ತರ ಸಂಸ್ಥೆಗಳು, ವಿಶ್ವದಾದ್ಯಂತ ತಮ್ಮ ವಹಿವಾಟಿನಲ್ಲಿ ಇಂಗ್ಲಿಷ್ ಅನ್ನು  ಅಧಿ­ಕೃತ ಭಾಷೆಯನ್ನಾಗಿ ಅಳ­ವಡಿಸಿ­ಕೊಂಡಿವೆ. ಈ ಬದಲಾವಣೆ ಫಲವಾಗಿ ಇಂತಹ ಸಂಸ್ಥೆಗಳಲ್ಲಿ ಪ್ರತಿಭಾನ್ವಿತರನ್ನು ನೇಮಿಸಿ­ಕೊಳ್ಳುವ ಪ್ರಕ್ರಿಯೆ ಹೆಚ್ಚು ಸುಲಭವಾಗಿದೆ.ಬ್ರಿಟಿಷರ ಆಡಳಿತದ  ಬಳುವಳಿಯು ಜಾಗತಿಕ ಉದ್ಯಮ ಲೋಕದ ಉದ್ಯೋಗ ಅವಕಾಶಗಳಲ್ಲಿ ಭಾರತದ ಯುವ ಜನಾಂಗವು ಮುಂಚೂ­ಣಿ­ಯಲ್ಲಿ ಇರಲು ಅಪರೂಪದ ಅನುಕೂಲತೆ ಕಲ್ಪಿ­ಸಿ­ಕೊಟ್ಟಿದೆ. ಇದೊಂದು ನಿಜವಾ­ಗಿಯೂ ಅನು­ಕೂಲತೆಯೇ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿ­ಸುತ್ತದೆ.

 

ಐತಿಹಾಸಿಕವಾಗಿ, ದೊಡ್ಡ ಮಹಾ­ನಗ­ರ­ಗಳಲ್ಲಿನ ಯುವ ಜನಾಂಗವು ಸಹಜ­ವಾಗಿಯೇ ಹೆಚ್ಚು ಪ್ರಯೋಜನ ಪಡೆದು­ಕೊಂಡಿ­ದ್ದರೆ, ಗ್ರಾಮೀಣ ಯುವ ಜನತೆ ಈ ಅವಕಾಶ ಸದು­ಪಯೋಗ ಮಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ.ದೇಶದ ಇತರ ಅನೇಕ ಭಾಗಗಳಲ್ಲಿನ ಯುವಕರು ಇಂಗ್ಲಿಷ್‌್ ಭಾಷೆಯಲ್ಲಿ ಪರಿ­ಣತಿ  ಪಡೆಯುವಲ್ಲಿ ಹಿಂದೆ ಬಿದ್ದಿರು­ವುದು ನಿರಾಶೆ ಮೂಡಿಸುತ್ತದೆ. ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಇತ್ತೀಚೆಗೆ ನಡೆಸಿದ ಅಧ್ಯಯನ­ದಲ್ಲಿಯೂ ಈ ವಿಷಯ ಸ್ಪಷ್ಟವಾಗಿದೆ.ವ್ಯವಸ್ಥೆಯಲ್ಲಿನ ಎಲ್ಲ ದೋಷಗಳಿಗೆ ಸರ್ಕಾರ­ವನ್ನೇ ಹೊಣೆ ಮಾಡುವುದು ತುಂಬ ಸುಲಭ. ಆದರೆ, ಇದರಿಂದ ಹೆಚ್ಚಿನ ಪ್ರಯೋಜನ ದೊರೆ­ಯದು. ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರಲ್ಲಿಯೂ ಈ ಬಗ್ಗೆ ತಿಳಿವಳಿಕೆ ಮೂಡುವ ಕೆಲಸ ನಡೆ­ಯಬೇಕು. ಪಾಲಕರು ಮತ್ತು ಯುವ ಸಮೂಹದಲ್ಲಿ ಈ ಬಗ್ಗೆ ಹೆಚ್ಚು ಎಚ್ಚರ ಮೂಡುವ ಅಗತ್ಯವೂ ಇದೆ.ಬ್ರಿಟಿಷ್‌ ಸಾಮ್ರಾಜ್ಯದಲ್ಲಿ ಸೂರ್ಯ ಮುಳು­ಗುವುದೇ ಇಲ್ಲ ಎಂದು ಈ  ಹಿಂದೆ ಬ್ರಿಟಿಷರು ತುಂಬ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿದ್ದರು. ಸುಮಾರು 80 ವರ್ಷಗಳ ನಂತರವೂ ಇಂದಿನ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿಯೂ ಈ ಮಾತು ಹೆಚ್ಚು ಪ್ರಸ್ತುತವಾಗಿದೆ. ಭಾರತ ಮತ್ತು ಇಲ್ಲಿನ ಯುವ ಜನತೆ ಇಂಗ್ಲಿಷ್‌­ನಲ್ಲಿಯೇ ಜಾಗತಿಕ­ವಾಗಿ  ಚಿಂತಿಸು­ವುದರ  ಮೂಲಕ ಉದ್ಯೋಗ ರಂಗ­ದಲ್ಲಿನ ವಿಪುಲ ಸದವಕಾಶಗಳನ್ನು ಬಾಚಿ­ಕೊಳ್ಳಬೇಕಾಗಿದೆ.ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.