ನಾವೀಗ ಭಾಷೆಗಳ ಸಾಮೂಹಿಕ ಸಾವಿನ ಕಾಲಘಟ್ಟದಲ್ಲಿದ್ದೇವೆ. ಪ್ರತೀ ಎರಡು ವಾರಕ್ಕೆ ಒಂದು ಭಾಷೆ ಕೊನೆಯುಸಿರೆಳೆಯುತ್ತಿದೆ. ಈ ಲೆಕ್ಕಾಚಾರಕ್ಕೆ ಸದ್ಯಕ್ಕೆ ಬಳಸುತ್ತಿರುವ ಪ್ರಮಾಣ ಸರಳವಾದುದು. ನಿರ್ದಿಷ್ಟ ನುಡಿಯನ್ನು ಆಡುವ ಕೊನೆಯ ವ್ಯಕ್ತಿಯ ಸಾವಿನ ಜೊತೆಗೆ ಆ ಭಾಷೆಯೂ ಕೊನೆಯುಸಿರೆಳೆಯಿತು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ.

ಆದರೆ ಹಂಗೆರಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಸಂಶೋಧಕ ಆಂದ್ರಾಸ್ ಕೊರ್ನಾಯ್ ಇಷ್ಟನ್ನು ಮಾತ್ರ ಪರಿಗಣಿಸಿದರೆ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಅವರ ಪ್ರಕಾರ, ಒಂದು ಭಾಷೆ ಡಿಜಿಟಲ್ ಸ್ವರೂಪದಲ್ಲಿ (ಕಂಪ್ಯೂಟರ್ ಸೇರಿದಂತೆ ಎಲ್ಲಾ ಬಗೆಯ ವಿದ್ಯುನ್ಮಾನ ಉಪಕರಣಗಳಲ್ಲಿ) ಎಷ್ಟರ ಮಟ್ಟಿಗೆ ಬಳಕೆಯಲ್ಲಿದೆ ಎಂಬುದನ್ನು ಪರಿಗಣಿಸಿ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಗುರುತಿಸಬೇಕಾಗಿದೆ.

ಅಂದ್ರಾಸ್ ಕೊರ್ನಾಯ್ ಅವರ ಪ್ರತಿಪಾದನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇಂಗ್ಲಿಷ್ ಜ್ಞಾನದ ಭಾಷೆಯಾಗಿ ಬದಲಾಗಿಬಿಟ್ಟ ಪ್ರಕ್ರಿಯೆಯನ್ನು ನೋಡಬೇಕು. ‘ಕನ್ನಡದಂಥ ಭಾಷೆಗಳಲ್ಲಿ ವಿಜ್ಞಾನ ಸಂವಹನ ಸಾಧ್ಯವಿಲ್ಲ’ ಎಂಬ ಮಾತನ್ನು ಬಹುಕಾಲದಿಂದ ಕೇಳುತ್ತಲೇ ಬಂದಿದ್ದೇವೆ. ಈಗ ಅದೇ ಸ್ಥಿತಿ ಒಂದು ಕಾಲದಲ್ಲಿ ಬಹಳ ಪ್ರಬಲವಾಗಿದ್ದ, ಅತ್ಯುತ್ತಮವಾದ ವಿದ್ವತ್ ಸಂವಹನದ ಕೆಲಸವನ್ನೂ ಮಾಡುತ್ತಿದ್ದ ಜರ್ಮನ್, ಫ್ರೆಂಚ್ನಂಥ ಭಾಷೆಗಳಿಗೂ ಬಂದೊದಗಿದೆ.

ಇದೇನೂ ತೀರಾ ಇತ್ತೀಚಿನ ಬೆಳವಣಿಗೆಯಲ್ಲ. ಕೈಗಾರಿಕಾ ಕ್ರಾಂತಿಯ ಕಾಲದಲ್ಲಿಯೇ ಆರಂಭವಾದ ಈ ಪ್ರಕ್ರಿಯೆ ಈಗ ಇಂಗ್ಲಿಷ್ ಇಲ್ಲದೆ ವಿದ್ವತ್ ಸಂವಹನ ಸಾಧ್ಯವಿಲ್ಲ ಎಂಬ ಮಟ್ಟಕ್ಕೆ ಬಂದು ನಿಂತಿದೆ. ಶರೀರಶಾಸ್ತ್ರ ಮತ್ತು ಭ್ರೂಣಶಾಸ್ತ್ರಕ್ಕೆ ಸಂಬಂಧಿಸಿದಂತೆ 1873ರಿಂದಲೇ ಪ್ರಕಟವಾಗುತ್ತಿದ್ದ ವಿದ್ವತ್ಪತ್ರಿಕೆ ಈಗ ತನ್ನ ಜರ್ಮನ್ ಹೆಸರನ್ನೂ ಕಳೆದುಕೊಂಡು ಕೇವಲ Journal of Anatomy and Embryolgy ಆಗಿ ಸಂಪೂರ್ಣ ಇಂಗ್ಲಿಷ್ ಆಗಿಬಿಟ್ಟಿದೆ.

ತನ್ನ ಪ್ರಕಟಣೆಯ 101ನೇ ವರ್ಷದಲ್ಲಿ ಹೆಸರಿಗೊಂದು ಇಂಗ್ಲಿಷ್ ಉಪ ಶೀರ್ಷಿಕೆ ಸೇರಿಸಿಕೊಂಡ ಈ ವಿದ್ವತ್ಪತ್ರಿಕೆ ಹೊಸ ಸಹಸ್ರಮಾನವನ್ನು ದಾಟುವ ಹೊತ್ತಿಗೆ ಜರ್ಮನ್ ಭಾಷೆಯ ವಿದ್ವತ್ ಪ್ರಬಂಧಗಳನ್ನು ಪ್ರಕಟಿಸುವುದನ್ನೂ ನಿಲ್ಲಿಸಿತು. ಇದು ಕೇವಲ ಒಂದು ವಿದ್ವತ್ಪತ್ರಿಕೆಯ ವಿಚಾರವಲ್ಲ. ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ. ಅದೃಷ್ಟವಶಾತ್ ಇಂಥ ಒತ್ತಡಗಳನ್ನು ನಿರ್ವಹಿಸುವುದಕ್ಕಾಗಿ ಯೂರೋಪಿನ ಭಾಷೆಗಳು ಹೊಸ ತಂತ್ರಗಳನ್ನೂ ರೂಪಿಸುತ್ತಿವೆ.

ಯೂರೋಪ್ ಎದುರಿಸುತ್ತಿರುವ ಇಂಗ್ಲಿಷ್ ಸವಾಲು ಕೇವಲ ‘ಜ್ಞಾನದ ಜಾಗತಿಕ ಸಂವಹನ’ಕ್ಕೆ ಸಂಬಂಧಿಸಿದ್ದು. ಅವರಿಗೆ ಇಂಗ್ಲಿಷ್ ಸಾಂಸ್ಕೃತಿಕವಾದ ಸವಾಲೊಡ್ಡಿಲ್ಲ. ಭಾರತವೂ ಸೇರಿದಂತೆ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕದ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಿಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಆಯಾಮಗಳೂ ಇವೆ. ತೃತೀಯ ಜಗತ್ತು ಎಂದು ಕರೆಯುವ ಭೂಮಿಯ ಬಹುಪಾಲು ಜನರಿರುವ ಪ್ರದೇಶದಲ್ಲಿರುವ ಭಾಷೆಗಳ ಸಂಖ್ಯೆ ಬಹಳ ದೊಡ್ಡದು.

ಆ ಕಾರಣದಿಂದಾಗಿಯೇ ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ಭಾಷೆಗಳ ಸಾಮೂಹಿಕ ಸಾವಿನ ಪ್ರಮಾಣವೂ ಹೆಚ್ಚು. ಈ ಭಾಷೆಗಳ ಸಾವಿನ ಹಿಂದಿರುವ ಸಂಕೀರ್ಣ ಪ್ರಕ್ರಿಯೆಯನ್ನು ವಿವರಿಸಲು ಭಾಷಾ ಶಾಸ್ತ್ರಜ್ಞರು ಪ್ರಯತ್ನಿಸಿದ್ದಾರೆ. ಅಂದ್ರಾಸ್ ಕೊರ್ನಾಯ್ ಅವರು ಭಾಷೆಯ ಸಾವಿಗೆ ಇರುವ ಡಿಜಿಟಲ್ ಆಯಾಮವನ್ನೂ ಗುರುತಿಸಿದ್ದಾರಷ್ಟೆ.

ಅಂದ್ರಾಸ್ ಕೊರ್ನಾಯ್ ಅವರ ಪ್ರತಿಪಾದನೆಯನ್ನು ಕರ್ನಾಟಕಕ್ಕೆ ಅನ್ವಯಿಸಿ ನೋಡಲು ಪ್ರಯತ್ನಿಸೋಣ. ಕನ್ನಡದ ಸೋದರ ಭಾಷೆಗಳಾದ ತುಳು, ಕೊಡವ, ಬ್ಯಾರಿಯಂಥ ಭಾಷೆಗಳನ್ನು ಬಳಸುವವರ ಸಂಖ್ಯೆಯೇನೂ ಸಣ್ಣದಲ್ಲ. ಆದರೆ ಇವುಗಳಿಗೆ ಡಿಜಿಟಲ್ ಜಗತ್ತಿನಲ್ಲಿರುವ ಸ್ಥಾನ ಯಾವುದು? ಈ ಮೂರೂ ಭಾಷೆಗಳು ಕಂಪ್ಯೂಟರ್ನ ಜಾಗತಿಕ ಭಾಷಾ ಶಿಷ್ಟತೆಯಾದ ಯೂನಿಕೋಡ್ನ ಪಟ್ಟಿಯಲ್ಲಿಲ್ಲ. ಅದರ ಕಾರಣ ಸರಳ. ಈ ಮೂರೂ ಭಾಷೆಗಳಿಗೆ ಅವುಗಳದ್ದೇ ಲಿಪಿಯಿಲ್ಲ. ಈ ಮೂರೂ ಭಾಷೆಗಳು ಕನ್ನಡವನ್ನೇ ಲಿಪಿಯಾಗಿ ಬಳಸುವುದರಿಂದ ಅವುಗಳಿಗೆ ಮತ್ತೊಂದು ಶಿಷ್ಟತೆ ಅಗತ್ಯವಿಲ್ಲ ಎಂಬುದು ಯೂನಿಕೋಡ್ ಕನ್ಸಾರ್ಷಿಯಂನ ನಿಲುವಾಗಿರಬಹುದು. ಇದನ್ನು ತರ್ಕಕ್ಕಾಗಿ ಒಪ್ಪಿಕೊಳ್ಳೋಣ.

ಕನ್ನಡ ಲಿಪಿಯಲ್ಲಿ ಈ ಭಾಷೆಗಳನ್ನು ಕಂಪ್ಯೂಟರ್ನಲ್ಲಿ ಬಳಸುವವರ ಸಂಖ್ಯೆ ಎಷ್ಟು? ಈ ಭಾಷೆಗಳ ಪಠ್ಯದ ಆನ್ಲೈನ್ ಲಭ್ಯತೆ ಎಷ್ಟರ ಮಟ್ಟಿಗಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ನಿರಾಶೆಯಾಗುತ್ತದೆ. ತುಳು ಕೆಲಮಟ್ಟಿಗೆ ಬ್ಲಾಗ್, ವೆಬ್ಸೈಟ್ಗಳಲ್ಲಿ ಕಾಣಿಸಿಕೊಳ್ಳುತ್ತದೆ ಯಾದರೂ ತುಳು ಭಾಷೆಯ ಜ್ಞಾನವನ್ನು ಹಂಚುವ ತಾಣಗಳು ಇಲ್ಲ ಎನ್ನುವಷ್ಟು ಕಡಿಮೆ. ಬ್ಯಾರಿ ಮತ್ತು ಕೊಡವ ಭಾಷೆಗಳ ಆನ್ಲೈನ್ ಉಪಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.

ಹಾಗೆ ನೋಡಿದರೆ ತುಳುವಿಗಿಂತ ಈ ಎರಡೂ ಭಾಷೆಗಳ ಸ್ಥಿತಿ ಶೋಚನೀಯವಾಗಿದೆ. ಒಂದು ಭಾಷೆ ತನ್ನ ಡಿಜಿಟಲ್ ಅಸ್ತಿತ್ವ ಕಂಡುಕೊಳ್ಳುವುದರ ಹಿಂದೆ ಅನೇಕ ಅಂಶಗಳು ಕೆಲಸ ಮಾಡುತ್ತವೆ. ಇದನ್ನು Journal of Anatomy and Embryolgy ಸಂಪೂರ್ಣವಾಗಿ ಇಂಗ್ಲಿಷ್ಗೆ ಪರಿವರ್ತಿತವಾದ ಪ್ರಕ್ರಿಯೆಯ ಉದಾಹರಣೆಯ ಮೂಲಕವೇ ಅರ್ಥ ಮಾಡಿಕೊಳ್ಳಬಹುದು.

ಬ್ರಿಟನ್ನ ವಸಾಹತುಶಾಹಿ ಪ್ರಭುತ್ವ ಜಗತ್ತಿನ ಬಹುಭಾಗವನ್ನು ಆವರಿಸಿಕೊಂಡಿತ್ತು. ಇದು ಒಂದು ಬಗೆಯಲ್ಲಿ ಜ್ಞಾನವನ್ನು ಇಂಗ್ಲಿಷ್ನ ಮೂಲಕ ವಸಾಹತೀಕರಿಸಿತು. ವೈದ್ಯವಿಜ್ಞಾನವೆಂಬುದು ಕೇವಲ ಜರ್ಮನ್ ಬಲ್ಲವರಿಗೆ ಮಾತ್ರ ಸೀಮಿತವಾಗಿದ್ದ ಕ್ಷೇತ್ರವಾಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಜರ್ಮನ್ ವಿದ್ವಾಂಸರಿಗೂ ಹೊರಗೇನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆಯೂ ಇತ್ತು. ಇವೆಲ್ಲದರ ಒಟ್ಟು ಲಾಭವನ್ನು ಪಡೆದುಕೊಂಡದ್ದು ಇಂಗ್ಲಿಷ್ ಭಾಷೆ.

ಇಂಥದ್ದೇ ಒಂದು ಪ್ರಕ್ರಿಯೆ ಭಾಷೆಗಳ ಡಿಜಿಟಲ್ ಅಸ್ತಿತ್ವದ ಹಿಂದೆಯೂ ಕೆಲಸ ಮಾಡುತ್ತದೆ. ಇಲ್ಲಿ ಜ್ಞಾನಕ್ಕಿಂತ ಹೆಚ್ಚು ಮುಖ್ಯವಾಗುವುದು ಮಾರುಕಟ್ಟೆ. ಡಿಜಿಟಲ್ ತಂತ್ರಜ್ಞಾನದ ಮೊದಲ ಹಂತದಲ್ಲಿ ರೋಮನೇತರ ಲಿಪಿಗಳನ್ನು ಬಳಸುವ ಭಾಷೆಗಳ ಕುರಿತು ಯಾರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅದರ ಮಾರುಕಟ್ಟೆ ಸಾಧ್ಯತೆಗಳು ತೆರೆದು ಕೊಂಡಾಕ್ಷಣವೇ ಜಗತ್ತಿನ ಎಲ್ಲಾ ಲಿಪಿಗಳಿಗೂ ಒಂದು ಶಿಷ್ಟತೆಯನ್ನು ಒದಗಿಸಬೇಕೆಂಬ ತಹತಹ ಆರಂಭವಾಯಿತು. ಪರಿಣಾಮವಾಗಿ ಯೂನಿಕೋಡ್ ಕನ್ಸಾರ್ಷಿಯಂ ರೂಪುಗೊಂಡಿತು. ಎಲ್ಲಾ ಲಿಪಿಗಳಿಗೂ ಅವಕಾಶ ಒದಗಿಸುವ ಈ ಪ್ರಯತ್ನ ಕೂಡಾ ಪ್ರಬಲ ಭಾಷೆಗಳ ಯಾಜಮಾನ್ಯದ ಒಳಸುಳಿಗಳಿಂದ ಮುಕ್ತವೇನೂ ಅಲ್ಲ. ಆದರೂ ಮಾರುಕಟ್ಟೆಯನ್ನು ಸತತವಾಗಿ ವಿಸ್ತರಿಸುವ ಪ್ರಯತ್ನಗಳು ಇಲ್ಲಿ ಸ್ವಲ್ಪ ಮಟ್ಟಿಗಾದರೂ ಪ್ರಬಲವಾಗಿರುವ ಭಾಷೆಗಳಿಗೆ ಅವಕಾಶ ಒದಗಿಸುತ್ತದೆ.

ಆದರೆ ತುಳು, ಕೊಡವ, ಬ್ಯಾರಿ, ತೋಡ, ಇರುಳ ಮುಂತಾದ ಭಾಷೆಗಳಿಗೆ ಈ ಮಾರುಕಟ್ಟೆಯ ಮೇಲಾಟದಲ್ಲಿ ದೊಡ್ಡ ಅವಕಾಶಗಳಿಲ್ಲ. ನಿರ್ದಿಷ್ಟ ಭಾಷೆಯೊಂದರಲ್ಲಿ ಆನ್ಲೈನ್ ಸವಲತ್ತು ಒದಗಿಸಿದರೆ ಅದಕ್ಕೆಷ್ಟು ಬಳಕೆದಾರರು ದೊರೆಯಬಹುದು ಎಂಬ ತರ್ಕದಲ್ಲಿ ಎಲ್ಲವೂ ನಡೆಯುವುದರಿಂದ ಇಂಥ ಭಾಷೆಗಳು ಸಹಜವಾಗಿಯೇ ಅಂಚಿನಲ್ಲೇ ಉಳಿದುಬಿಡುತ್ತವೆ. ಜೊತೆಗೆ ಇಂಥ ನುಡಿಗಳನ್ನು ಆಡುವವರು ಯಾವುದಾದರೊಂದು ಪ್ರಬಲ ಭಾಷೆಯೊಂದನ್ನು ಚೆನ್ನಾಗಿ ಕಲಿತುಕೊಂಡೂ ಇರುತ್ತಾರೆ. ತುಳು, ಬ್ಯಾರಿ, ಕೊಡವದಂಥ ನುಡಿಗಳನ್ನು ಆಡುವವರಿಗೆ ಹೊರಜಗತ್ತಿನ ಭಾಷೆ ಕನ್ನಡ ಅಲ್ಲದಿದ್ದರೆ ಇಂಗ್ಲಿಷ್. ತಮ್ಮ ಭಾಷೆಗೆ ಡಿಜಿಟಲ್ ಅಸ್ತಿತ್ವ ಇಲ್ಲ ಎಂಬುದನ್ನು ಅದನ್ನು ನುಡಿಯುವವರಿಗೆ ಒಂದು ಕೊರತೆಯಂತೆ ಕಾಣಿಸುವುದಿಲ್ಲ. ಒಂದು ವೇಳೆ ಅನ್ನಿಸಿದರೂ ಅವರಿಗಿರುವ ಸಣ್ಣ ಸಂಖ್ಯಾಬಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವಂಥ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಅನುಕೂಲವನ್ನೂ ಒದಗಿಸುವುದಿಲ್ಲ.

ಇಂಥ ಭಾಷೆಗಳಿಗೊಂದು ಡಿಜಿಟಲ್ ಬದುಕು ನೀಡುವುದಕ್ಕೆ ಪ್ರಜ್ಞಾಪೂರ್ವಕ ಪ್ರಯತ್ನಗಳೇ ಬೇಕಾಗುತ್ತದೆ. ಇದು ಅನೇಕ ಬಗೆಯಲ್ಲಿ ಚಾಲನೆಯಲ್ಲಿದೆ ಎಂಬುದೇ ಸಂತೋಷದ ಸಂಗತಿ. ಕೊಂಕಣಿ ಮತ್ತು ತುಳು ಭಾಷೆಯ ಎರಡು ವಿಕಿಪಿಡಿಯಾಗಳು ಈಗ ಗರ್ಭಾವಸ್ಥೆಯಲ್ಲಿವೆ. ಕೊಂಕಣಿಯನ್ನು ದೇವನಾಗರಿ, ಕನ್ನಡ, ಮಲೆಯಾಳ ಮತ್ತು ರೋಮನ್ ಲಿಪಿಯಲ್ಲಿ ಬರೆಯುತ್ತಾರೆ. ಕೊಂಕಣಿ ವಿಕಿಪಿಡಿಯಾ ಈ ನಾಲ್ಕೂ ಲಿಪಿಗಳನ್ನೂ ಬಳಸಲಿದೆ. ಹಾಗೆಯೇ ಪರಸ್ಪರ ಲಿಪ್ಯಂತರಣಕ್ಕೆ ಬೇಕಿರುವ ತಂತ್ರಾಂಶವನ್ನೂ ವಿಕಿಪಿಡಿಯಾ ಒಳಗೊಂಡಿರುತ್ತದೆ ಎಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಖ್ಯಪಾತ್ರ ವಹಿಸುತ್ತಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯ ಯು.ಬಿ.ಪವನಜ ಹೇಳುತ್ತಾರೆ.

ಬಹುಶಃ ಈ ಬಗೆಯ ಬಹುಲಿಪಿಗಳ ವಿಕಿಪಿಡಿಯಾ ತುಳುವಿಗೂ ಅಗತ್ಯವಿದೆ. ಬ್ಯಾರಿ, ಕೊಡವದಂಥ ಭಾಷೆಗಳಲ್ಲಿಯೂ ಇಂಥ ಪ್ರಯತ್ನಗಳು ಆರಂಭವಾಗಬೇಕಿದೆ. ಈ ಎಲ್ಲಾ ಭಾಷೆಗಳಿಗೆ ಕರ್ನಾಟಕದಲ್ಲಿ ಒಂದೊಂದು ಅಕಾಡೆಮಿಗಳೂ ಇರುವುದರಿಂದ ಕನಿಷ್ಠ ವಾರ್ಷಿಕ ಲೆಕ್ಕ–ಪತ್ರದ ಅಗತ್ಯಕ್ಕಾದರೂ ಕೆಲವು ಕೆಲಸಗಳು ನಡೆಯಬಹುದು. ಆದರೆ ಇನ್ನೂ ಅಂಚಿನಲ್ಲಿರುವ ಕೊರಗರಿಗೇ ವಿಶಿಷ್ಟವಾಗಿರುವ ತುಳು, ತೋಡ, ಇರುಳದಂಥ ಅನೇಕ ಬುಡಕಟ್ಟು ಭಾಷೆಗಳ ಡಿಜಿಟಲ್ ಅಸ್ತಿತ್ವಕ್ಕೇನು ದಾರಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.