ಭಾನುವಾರ, ಆಗಸ್ಟ್ 14, 2022
20 °C

ತಿರಂಗ ಹಾರಿತು ನೆತ್ತರು ಚಿಮ್ಮಿತು ನೆನಪಿಗೆ ಎಪ್ಪತ್ತು

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ತಿರಂಗ ಹಾರಿತು ನೆತ್ತರು ಚಿಮ್ಮಿತು ನೆನಪಿಗೆ ಎಪ್ಪತ್ತು

ಗಾಂಧೀಜಿ, ‘ಹರಿಜನ’ ಪತ್ರಿಕೆಯಲ್ಲಿ ನೊಂದು ಬರೆದಿದ್ದರು: ‘Those whom God has made one, man will never be able to divide. ನನ್ನ ಆತ್ಮಸಾಕ್ಷಿಗೆ ಒಪ್ಪದ ಈ ದ್ವಿರಾಷ್ಟ್ರ ನೀತಿಯನ್ನು ವಿರೋಧಿಸುತ್ತೇನೆ. ವಿಭಜನೆಯನ್ನು ಅನುಮೋದಿಸುವುದು ಎಂದರೆ ಭಗವಂತನಿಗೆ ಅಪಚಾರ ಎಸಗಿದಂತೆ. ದೇಶ ತುಂಡು ಮಾಡುವ ಮೊದಲು, ನನ್ನನ್ನು ತುಂಡು ಮಾಡಿ. ಭಾರತವನ್ನು ಎರಡು ಶತಮಾನ ಆಳಿದ ಮೊಗಲರು ಮಾಡದ ಕೆಲಸವನ್ನು ನೀವು ಮಾಡಬೇಡಿ. ವಿಭಜನೆಯಿಂದ ಆಗುವ ಒಳಿತು ನನಗೆ ಕಾಣುತ್ತಿಲ್ಲ. ಇದರಿಂದ ಇನ್ನಷ್ಟು ಒಡಕಿಗೆ, ಕೆಡುಕಿಗೆ ಬೀಜಾಂಕುರವಾಗುತ್ತದೆ’.

ಮಹಾತ್ಮನ ಬರಹದಲ್ಲಿ ಭಾವುಕತೆ ಇತ್ತು. ಆಕ್ರೋಶ, ಅಸಹಾಯಕತೆ, ಮುಂದಿನ ಪರಿಣಾಮಗಳ ಬಗೆಗಿನ ಭೀತಿ ಇತ್ತು. ಆದರೆ ಗಾಂಧೀಜಿ ಅಷ್ಟು ಹೊತ್ತಿಗಾಗಲೇ, ವಸ್ತುಸ್ಥಿತಿ ಅರಿಯದ ಆದರ್ಶವಾದಿ ಎಂಬ ಮೂದಲಿಕೆಗೆ ಒಳಗಾಗಿದ್ದರು. ‘ಪಾಕಿಸ್ತಾನ ಗೊತ್ತುವಳಿ’ಯನ್ನು ತೀವ್ರವಾಗಿ ವಿರೋಧಿಸಿದ ಪಂಡಿತ್ ಮದನ ಮೋಹನ ಮಾಲವೀಯ, ಗಾಂಧೀಜಿಯತ್ತ ಧಾವಿಸಿ ಬಂದರು. ‘ಇದಕ್ಕೆ ನಾನು ಆಸ್ಪದ ನೀಡುವುದಿಲ್ಲ. ನನ್ನ ನಂತರವೇ ದೇಶ ತುಂಡಾಗಬೇಕು’ ಎಂದು ಗಾಂಧೀಜಿ ಅಭಯ ನೀಡಿದರಾದರೂ ಆ ಹೊತ್ತಿಗಾಗಲೇ ಪರಿಸ್ಥಿತಿ ಕೈ ಮೀರಿತ್ತು.

ಇನ್ನು ನಾಲ್ಕು ದಿನ ಕಳೆದರೆ ಆಗಸ್ಟ್ 15, ತಿರಂಗ ಹಬ್ಬದ ಸಂಭ್ರಮ. ಅದರ ಜೊತೆಗೇ ಮತೀಯ ವೈಮನಸ್ಯ ಎಂಬ ವಿಷಬೀಜ ಹೆಮ್ಮರವಾಗಿ ಬೆಳೆದು, 20ನೆಯ ಶತಮಾನದ ಅತಿದೊಡ್ಡ ಜನಾಂಗೀಯ ಹತ್ಯಾಕಾಂಡಕ್ಕೆ ಕಾರಣವಾದ ದೇಶ ವಿಭಜನೆಯ ಅಧ್ಯಾಯಕ್ಕೂ ಎಪ್ಪತ್ತು ತುಂಬುತ್ತಿದೆ. ಹಾಗಾಗಿ ಭಾರತ ವಿಭಜನೆಗೆ ಕಾರಣವಾದ ಸರಣಿ ಘಟನಾವಳಿಗಳನ್ನು ಮೆಲುಕು ಹಾಕಲು ಇದು ಸಕಾಲ. ಅಷ್ಟಕ್ಕೂ ಅಖಂಡ ಭಾರತ ತುಂಡಾದದ್ದಾದರೂ ಹೇಗೆ? ದೇಶ ಭಕ್ತಿಯ ಬಿಸಿ ನೆತ್ತರು ಧಮನಿಯಲ್ಲಿ ಹರಿಯುವಾಗ, ಮತೀಯ ಭಾವನೆಗಳು ಮನದಲ್ಲಿ ತಣ್ಣಗೆ ಹೆಪ್ಪುಗಟ್ಟುತ್ತಿತ್ತೆ? ರಾಷ್ಟ್ರೀಯತೆಯ ಏಕಸ್ವರದಲ್ಲಿ, ಪ್ರತ್ಯೇಕತೆಯ ಅಪಸ್ವರ ಮೊಳಗಿದ್ದು ಯಾವ ಕಾರಣದಿಂದ? ಇತಿಹಾಸದ ಯಾವುದೇ ಘಟನೆಗೆ ಏಕ ಮುಖ ಇರುವುದಿಲ್ಲ, ದೇಶ ವಿಭಜನೆಯಂತಹ ಕರಾಳ ಮತ್ತು ಮಹತ್ವದ ಘಟನೆಯ ವಿವಿಧ ಆಯಾಮಗಳನ್ನು ಅರಿಯಲು ಹಲವು ಕೃತಿಗಳನ್ನು ಪರಿಶೀಲಿಸಬೇಕಾಗುತ್ತದೆ. ರಾಜೇಂದ್ರ ಪ್ರಸಾದರ ‘ಇಂಡಿಯಾ ಡಿವೈಡೆಡ್’, ಲೋಹಿಯಾರ ‘ದಿ ಗಿಲ್ಟಿ ಮೆನ್ ಆಫ್ ಇಂಡಿಯಾ ಪಾರ್ಟಿಷನ್’, ಡಾ.ಬಿ.ಆರ್. ಅಂಬೇಡ್ಕರ್ ಅವರ ‘ಪಾಕಿಸ್ತಾನ್’, ಪ್ಯಾರೇಲಾಲರ ‘ಲಾಸ್ಟ್ ಫೇಸ್’, ಜಿ. ಸುಬ್ಬರಾವ್ ಅವರ ‘ದಿ ಪಾರ್ಟಿಷನ್ ಆಫ್ ಇಂಡಿಯಾ’, ಲಿಯೊನಾರ್ಡ್ ಮೋಸ್ಲೆ ಅವರ ‘ಲಾಸ್ಟ್ ಡೇಸ್ ಆಫ್ ಬ್ರಿಟಿಷ್ ರಾಜ್’, ಹೊ.ವೆ. ಶೇಷಾದ್ರಿ ಅವರ ‘ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟಿಷನ್’ ಇತ್ಯಾದಿ ಮೌಲಿಕ, ವಿಶ್ವಾಸಾರ್ಹ ಕೃತಿಗಳು ಸಹಾಯ ಮಾಡುತ್ತವೆ.

ಹಾಗೆ ನೋಡಿದರೆ, ಬ್ರಿಟಿಷರಿಗೆ ಮೊದಲ ಬಾರಿಗೆ ಭಾರತೀಯರು ಪ್ರಬಲ ಪ್ರತಿರೋಧ ಒಡ್ಡಿದ್ದು 1857ರಲ್ಲಿ. ಅದನ್ನು ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ನಾವು ಕರೆದರೆ, ಬ್ರಿಟಿಷರು ‘ಸಿಪಾಯಿ ದಂಗೆ’ ಎಂದರು. ಆ ಬಳಿಕಸ್ವಾತಂತ್ರ್ಯ ಆಂದೋಲನಕ್ಕೆ ಹೊಸ ರಭಸ ಬಂತು. ಕ್ರಾಂತಿಕಾರಿಗಳು ಬಂಧನ, ಮರಣದಂಡನೆಯ ಭೀತಿ ತೊರೆದಾಗಿತ್ತು. ಇಂಗ್ಲೆಂಡಿಗೆ ಬ್ಯಾರಿಸ್ಟರ್, ಐಸಿಎಸ್ ಪದವಿಗಾಗಿ ಹೋದವರು, ಅವರ ನೆಲದಲ್ಲೇ ಬ್ರಿಟಿಷ್ ಅಧಿಕಾರಿಗಳ ಬೆನ್ನುಬಿದ್ದರು. ಆ ವೇಳೆಗೆ ಹಿಂದೂ– ಮುಸ್ಲಿಮರಲ್ಲಿ ವೈಮನಸ್ಯ, ಭೇದ ಇರಲಿಲ್ಲ ಎಂದರೆ ಸುಳ್ಳಾಗುತ್ತದೆ. ಆದರೆ ಸಣ್ಣಪುಟ್ಟ ಘರ್ಷಣೆಗಳು ಪಸರಿಸದಂತೆ ತಡೆಯುವ ನಾಯಕರು ಎರಡೂ ಸಮುದಾಯದಲ್ಲಿದ್ದರು. ಮತೀಯ ಸಂಕುಚಿತ ಭಾವನೆ ತೊರೆದು ಹೊರಬರಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದವು. ಸಮಾಜ ಸುಧಾರಣೆಗೆ ಸಾಕಷ್ಟು ಮಂದಿ ಶ್ರಮಿಸುತ್ತಿದ್ದರು. ವಿಶಾಲ ಹೊರಜಗತ್ತನ್ನು ನೋಡಲು ಆಂಗ್ಲಶಿಕ್ಷಣ ಅನುವು ಮಾಡಿಕೊಟ್ಟಿತ್ತು. ಅದಕ್ಕೆ ಒಂದು ಉದಾಹರಣೆ ಎಂದರೆ ಬ್ರಿಟಿಷರಿಗೆ ನಿಷ್ಠರಾಗಿದ್ದ ಸರ್ ಸೈಯದ್ ಅಹಮದ್ ಖಾನ್. ಮುಸ್ಲಿಮರು ಉಲೇಮಾ ಆಣತಿಯಂತೆ ನಡೆದುಕೊಂಡರೆ ಸಾಲದು, ಮುಖ್ಯವಾಹಿನಿಗೆ ತೆರೆದುಕೊಳ್ಳಬೇಕು, ಶಿಕ್ಷಣ ಪಡೆಯಬೇಕು ಎಂದು ಸೈಯದ್ಖಾನ್ ವಾದಿಸುತ್ತಿದ್ದರು. ಹಿಂದೂಗಳಿಗೆ ನೋವಾಗುವುದಾದರೆ, ಮುಸಲ್ಮಾನರು ಗೋಹತ್ಯೆಯನ್ನು ಬಿಡಬೇಕು ಎಂದು 1884ರಲ್ಲಿ ಸೈಯದ್ ಖಾನ್ ಭಾಷಣ ಮಾಡಿದ್ದರು.

ಏಕತೆಯಿಂದ ಸಮಾಜ ಬಲಗೊಂಡರೆ, ಆಳ್ವಿಕೆ ಸುಲಭವಲ್ಲ ಎಂಬುದು ಆಂಗ್ಲರಿಗೆ ಗೊತ್ತಿತ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಬ್ರಿಟಿಷರು ಚತುರೋಪಾಯವನ್ನು ಕಂಡುಕೊಂಡರು. ಒಂದು, ಸಂಘಟಿತ ಸಮಾಜವನ್ನು ಮತ, ಜಾತಿಯ ಆಧಾರದಲ್ಲಿ ಹಂತ ಹಂತವಾಗಿ ಇನ್ನಷ್ಟು ಒಡೆಯುವುದು. ಎರಡು, ಸ್ವದೇಶಿ ಉದ್ದಿಮೆಗಳನ್ನು ನಾಶ ಮಾಡುವುದು ತನ್ಮೂಲಕ ಆರ್ಥಿಕ ಶಕ್ತಿ ಕುಂದಿಸುವುದು. ಮೂರು, ಮುಸಲ್ಮಾನರ ನಿಷ್ಠೆಯನ್ನು ತಮ್ಮೆಡೆಗೆ ಸೆಳೆದುಕೊಂಡು, ಪ್ರತ್ಯೇಕತಾವಾದ ಹುಟ್ಟುಹಾಕುವುದು. ನಾಲ್ಕು, 1885ರಲ್ಲಿ ಸ್ವಾತಂತ್ರ್ಯ ಆಂದೋಲನಕ್ಕೆ ಸಂಘಟಿತರೂಪ ನೀಡಲು ಆರಂಭವಾಗಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಮನ್ನಣೆ ನೀಡುವುದು ತನ್ಮೂಲಕ ಕ್ರಾಂತಿಕಾರಿಗಳಿಗೆ ಬಂಡುಕೋರರ ಬಣ್ಣ ಬಳಿಯುವುದು. ಮುಸಲ್ಮಾನರ ನಿಷ್ಠೆಯನ್ನು ಗಳಿಸಿಕೊಳ್ಳಲು ಬ್ರಿಟಿಷ್ ರಾಜ್ ಆಯ್ದುಕೊಂಡ ಮಾರ್ಗದ ಬಗ್ಗೆ ‘ದಿ ಇಂಡಿಯನ್ ಮುಸಲ್ಮಾನ್’ ಕೃತಿಯಲ್ಲಿ ಲೇಖಕ ಡಬ್ಲ್ಯು.ಡಬ್ಲ್ಯು. ಹಂಟರ್ ಹೀಗೆ ವಿವರಿಸಿದ್ದಾರೆ: ‘1857ರ ಬಂಡಾಯದಲ್ಲಿ ಭಾಗಿಗಳಾಗಿದ್ದ ಬಿಹಾರ ಮತ್ತು ಉತ್ತರ ಪ್ರದೇಶದ ಹಿಂದೂ ಜಮೀನ್ದಾರರಿಂದ ವಶಪಡಿಸಿಕೊಂಡಿದ್ದ ಭೂಮಿಯನ್ನು ತಮ್ಮೊಂದಿಗೆ ನಿಂತಮುಸಲ್ಮಾನರಿಗೆ ಬ್ರಿಟಿಷರು ಕೊಡುಗೆಯಾಗಿ ನೀಡಿದರು.

ಹಿಂದೂ ಮತ್ತು ಮುಸಲ್ಮಾನರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ತುಪ್ಪ ಸುರಿದು ಹಗೆಯಾಗಿ ಪರಿವರ್ತಿಸುವ ಕೆಲಸ ನಡೆಯಿತು. ಇದಕ್ಕೆ ಮೌಲ್ವಿಗಳನ್ನು ಬಳಸಿಕೊಳ್ಳಲಾಯಿತು. ಪರಿಣಾಮ ಹಿಂದೂ– ಮುಸ್ಲಿಂ ದಂಗೆಗಳು ಆರಂಭವಾದವು’. 1897ರಲ್ಲಿ ವೈಸರಾಯ್ ಎಲ್ಗಿನ್ ಅವರಿಗೆ ಬರೆದ ಪತ್ರದಲ್ಲಿ ಲಾರ್ಡ್ ಹ್ಯಾಮಿಲ್ಟನ್ ‘ಹಿಂದೂ– ಮುಸ್ಲಿಂ ಸಮುದಾಯದ ನಡುವೆ ಪಂಜಾಬ್ ಮತ್ತಿತರ ಪ್ರದೇಶಗಳಲ್ಲಿ ಘರ್ಷಣೆ ಹೆಚ್ಚುತ್ತಿದೆ. ಸಮುದಾಯಗಳ ನಡುವಿನ ಏಕತೆ, ರಾಜಕೀಯ ದೃಷ್ಟಿಯಿಂದ ಮಾರಕ. ಘರ್ಷಣೆ, ಆಡಳಿತದ ದೃಷ್ಟಿಯಿಂದ ಕಠಿಣ. ಆದರೆ ಮೊದಲನೆಯದೇ ಹೆಚ್ಚು ಅಪಾಯಕಾರಿ. ಘರ್ಷಣೆಯನ್ನು ಆಯಾ ಪ್ರಾಂತ್ಯದ ಆಡಳಿತ ಹೇಗೋ ನಿಭಾಯಿಸಿಕೊಳ್ಳಬಹುದು’ ಎಂದು ಬರೆದಿದ್ದರು.

ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಬ್ರಿಟಿಷರು ಹಿಂದೂ– ಮುಸ್ಲಿಂ ಕಂದರವನ್ನು ಸಾಕಷ್ಟು ಹಿಗ್ಗಿಸಿದ್ದರು. ಒಂದು ಹಂತದಲ್ಲಿ ಸಹಬಾಳ್ವೆಯ ಬಗ್ಗೆ ಮಾತನಾಡುತ್ತಿದ್ದ ಸೈಯದ್ ಅಹಮದ್ ಖಾನ್, 1888ರಲ್ಲಿ ಲಖನೌದಲ್ಲಿ ಮಾತನಾಡುವ ಹೊತ್ತಿಗೆ ಪ್ರತ್ಯೇಕತಾವಾದಿಯಾಗಿ ಬದಲಾಗಿದ್ದರು!

ಗೋಹತ್ಯೆ, ಮುಸ್ಲಿಮರ ಧಾರ್ಮಿಕ ಹಕ್ಕು ಎಂದು ಪ್ರತಿಪಾದಿಸಲು ನಿಂತರು. ಅಲಿಗಡ ವಿಶ್ವವಿದ್ಯಾಲಯದ ಅಂಗಳದಲ್ಲಿ ವಿಭಜನೆಯ ಬೀಜ ಮೊಳಕೆಯೊಡೆಯಿತು. ಕಾಂಗ್ರೆಸ್ಸಿಗೆ ಪರ್ಯಾಯವಾಗಿ UIPA ಸಂಘಟನೆಯನ್ನು ಹುಟ್ಟುಹಾಕಲಾಯಿತು. ಮುಸ್ಲಿಂ ಮತ್ತು ಯುರೋಪಿಯನ್ನರಿಗಷ್ಟೇ ಸದಸ್ಯತ್ವ ಸೀಮಿತಗೊಳಿಸಿ ‘Mohammedan Anglo Oriental Defense Association’ ಆರಂಭವಾಯಿತು. ಹಂತಹಂತವಾಗಿ ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಹಿಮ್ಮೆಟ್ಟಿಸಿ ಪ್ರತ್ಯೇಕತೆಯ ಭಾವ ಪೋಷಿಸಲಾಯಿತು.

ನಂತರದ ಹೆಜ್ಜೆಯಾಗಿ ಪ್ರಾಂತ್ಯಗಳನ್ನು ಮತೀಯವಾಗಿ ಒಡೆಯಲು ಬ್ರಿಟಿಷರು ಮುಂದಾದರು. ಬಂಗಾಲಿಗಳ ಬೌದ್ಧಿಕ ಶಕ್ತಿ, ಮರಾಠರ ಕೆಚ್ಚೆದೆ ಬ್ರಿಟಿಷರನ್ನು ಕಂಗೆಡಿಸಿತ್ತು. ಸ್ವದೇಶಿ ಆಂದೋಲನದ ಕೇಂದ್ರವಾಗಿ, ಕ್ರಾಂತಿಕಾರಿಗಳ ತವರಿನಂತಿದ್ದ ಬಂಗಾಲವನ್ನು ವಿಭಜಿಸುವ ಯೋಜನೆ ರೂಪುಗೊಂಡಿತು. ಆಡಳಿತದ ಅನುಕೂಲಕ್ಕಾಗಿ, ಏಳು ಕೋಟಿ ಜನಸಂಖ್ಯೆಯ ರಾಜ್ಯವನ್ನು ತುಂಡು ಮಾಡುವ ಅಗತ್ಯ ಇದೆ ಎಂದು ಲಾರ್ಡ್ ಕರ್ಜನ್ ಸಬೂಬು ಹೇಳಿದ. ಆದರೆ ಉದ್ದೇಶ, ಪೂರ್ವ ಬಂಗಾಲವನ್ನು ಅಸ್ಸಾಂ ಜೊತೆ ಸೇರಿಸಿ, ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಧರ್ಮದ ದೃಷ್ಟಿಯಿಂದ ಬಂಗಾಲಿಗಳನ್ನು ಅಲ್ಪಸಂಖ್ಯಾತರನ್ನಾಗಿಸುವುದು, ಪಶ್ಚಿಮ ಬಂಗಾಲವನ್ನು ಬಿಹಾರ್ ಮತ್ತು ಒರಿಸ್ಸಾ ಜೊತೆ ಸೇರಿಸಿ ಭಾಷೆಯ ದೃಷ್ಟಿಯಿಂದ ಅಲ್ಪಸಂಖ್ಯಾತರನ್ನಾಗಿಸಿ ಬಂಗಾಲಿಗಳ ಅಂತಃಸತ್ವವನ್ನು ಕೊಲ್ಲುವುದಾಗಿತ್ತು. ಬಂಗಾಲ ವಿಭಜನೆಯ ವಿರುದ್ಧ ತೀವ್ರಪ್ರತಿಭಟನೆ ನಡೆಯಿತು. ವಂಗ-ಭಂಗ ಚಳವಳಿ ಆರಂಭವಾಯಿತು. ಸ್ವಾಂತಂತ್ರ್ಯ ಆಂದೋಲನಕ್ಕೆ ನವಚೈತನ್ಯ ದೊರೆಯಿತು.

1905ರಲ್ಲಿ ಲಾರ್ಡ್ ಕರ್ಜನ್ ನಿವೃತ್ತಿಯ ನಂತರ ವೈಸರಾಯ್ ಆದ ಲಾರ್ಡ್ ಮಿಂಟೊ, ವಿವಿಧ ಸಂಸ್ಥಾನಗಳಿಂದ ಕೋಮು ಗಲಭೆ ಕುರಿತು ವರದಿ ತರಿಸಿಕೊಂಡರು. ಹಿಂದೂ-ಮುಸಲ್ಮಾನರ ನಡುವೆ ಘರ್ಷಣೆ ಕಡಿಮೆಯಾಗಿದ್ದವು. ಮಿಂಟೊ ಮತ್ತೊಮ್ಮೆ ಅಲಿಗಡ ವಿಶ್ವವಿದ್ಯಾಲಯದತ್ತ ನೋಡಿದರು. ಮುಸಲ್ಮಾನ ಪ್ರತಿನಿಧಿ ತಂಡವನ್ನು ರಚಿಸಲುಹೇಳಿದರು. ಶಿಯಾ ಇಮಾಮರ ವಂಶದ ಕುಡಿ, ಆಗಾಖಾನ್ ಪ್ರತಿನಿಧಿ ತಂಡದ ನಾಯಕರಾದರು. ರಾಜಕೀಯವಾಗಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಂಖ್ಯಾವಾರು ಪ್ರಾತಿನಿಧ್ಯ ಕಲ್ಪಿಸುವ ಚಿಂತನೆಯನ್ನು ಪ್ರತಿನಿಧಿ ತಂಡದಮುಂದೆ ಮಿಂಟೊ ಮಂಡಿಸಿದರು. ಅದು ಮತೀಯಆಧಾರದ ಮೇಲೆ ಪ್ರತ್ಯೇಕ ಚುನಾವಣೆ ನಡೆಸಬೇಕುಎಂಬ ಕೂಗಿಗೆ ನಾಂದಿಯಾಯಿತು. ಪ್ರತ್ಯೇಕ ರಾಜಕೀಯ ಅಸ್ತಿತ್ವಕ್ಕಾಗಿ ಮುಸ್ಲಿಂ ನಾಯಕರು, 1906ರ ಡಿಸೆಂಬರ್ 30ರಂದು ನವಾಬ್ ಸಲೀಮುಲ್ಲಾ ಖಾನ್ ನೇತೃತ್ವದಲ್ಲಿ ಸಭೆ ಸೇರಿ ಅಖಿಲ ಭಾರತ ಮುಸ್ಲಿಂ ಲೀಗ್ ಹುಟ್ಟುಹಾಕಿದರು. ಆ ಸಭೆಯಲ್ಲಿ ಭಾಗಿಯಾಗಿದ್ದ ಪ್ರತಿನಿಧಿಗಳಿಗೆ ಹಂಚಲಾದ ‘ಕೆಂಪು ಕರಪತ್ರ’ದಲ್ಲಿ ‘ಮುಸಲ್ಮಾನರೇ ಜಾಗೃತಗೊಳ್ಳಿ, ಹಿಂದೂಗಳ ಜೊತೆ ವ್ಯಾವಹಾರಿಕ ಸಂಬಂಧ ಕೂಡದು. ಹಿಂದೂಗಳಿಗೆ ನೌಕರಿ ನೀಡಬಾರದು. ಹಿಂದೂಗಳು ಕಲಿಯುವ ಶಾಲೆಯಲ್ಲಿ ನಮ್ಮ ಮಕ್ಕಳು ಕಲಿಯಬಾರದು’ ಎಂಬ ಸಂದೇಶ ಇತ್ತು. ಅಗಿನ್ನೂ ದೇಶ ತುಂಡಾಗಿರಲಿಲ್ಲ, ಗಡಿರೇಖೆ ಎಳೆದಿರಲಿಲ್ಲ, ಆದರೆ ಲೀಗ್ ಅನುಯಾಯಿಗಳ ಮನಸ್ಸಿನಲ್ಲಿ ಪಾಕಿಸ್ತಾನ ಉದಯವಾಗಿತ್ತು. ಪರಿಣಾಮವಾಗಿ 1907ರ ಮಾರ್ಚ್‌ 4ರಂದು ಕೊಮಿಲ್ಲಾದಲ್ಲಿ ದಂಗೆ ಆರಂಭವಾಯಿತು. ಸಾವಿರಾರು ಮಂದಿ ಮೃತರಾದರು.

ಆದರೆ ಭರವಸೆಯ ಆಶಾಕಿರಣಗಳೂ ಇದ್ದವು. ರಾಷ್ಟ್ರೀಯವಾದಿ ಮುಸ್ಲಿಮರು ಲೀಗ್ ಜೊತೆ ನಿಲ್ಲಲಿಲ್ಲ. ಬ್ರಿಟಿಷರಿಗೆ ಚುರುಕು ಮುಟ್ಟಿಸಲು ರೂಪಿಸಲಾದ ಕಾಕೋರಿ ಡಕಾಯಿತಿಯಲ್ಲಿ ಪಾಲ್ಗೊಂಡ ಅಷ್ಫಕುಲ್ಲಾ ಖಾನ್‌ರನ್ನು ನೆನೆಯಬೇಕು. ಆತ ನೊಗಕ್ಕೆ ಕೊರಳೊಪ್ಪಿಸುವಾಗ ‘ತಾಯಿಭಾರತಿಯ ಚರಣಗಳಲ್ಲಿ ನನ್ನ ಬದುಕನ್ನು ಅರ್ಪಿಸುತ್ತಿದ್ದೇನೆ ಎಂಬ ಧನ್ಯತೆ ಇದೆ. ರಣರಂಗದಲ್ಲಿ ನಿಂತು ಹುಟ್ಟು ಮತ್ತು ಸಾವು ಎಂಬುದು ಮಿಥ್ಯ ಎಂದು ಅರ್ಜನನ್ನು ಭಗವಾನ್ ಕೃಷ್ಣ ಎಚ್ಚರಿಸಲಿಲ್ಲವೇ. ನಾನು ಬದುಕಿದ್ದರೇನು ಸತ್ತರೇನು, ಭಾರತ ದಾಸ್ಯದಿಂದ ಮುಕ್ತವಾಗಿ ರಾರಾಜಿಸಬೇಕು’ ಎಂದಿದ್ದರು. ಆದರೆ ಮುಸ್ಲಿಂ ಲೀಗ್ ಕ್ರಮೇಣ ತಾನು ಮುಸ್ಲಿಮರ ಹಿತರಕ್ಷಕ ಎಂದು ಬಿಂಬಿಸಿಕೊಂಡಿತು. ತನ್ನ ಧ್ಯೇಯೋದ್ದೇಶಗಳನ್ನು ಸಮುದಾಯದ ಮೇಲೆ ಹೇರತೊಡಗಿತು. ರಾಷ್ಟ್ರೀಯತೆಯ ಭಾವ ಅಳಿಸಿ ಹಾಕಿ, ಮತೀಯ ಭಾವನೆಗೆಆದ್ಯತೆ ಸಿಗುವಂತೆ ನೋಡಿಕೊಂಡಿತು ಎಷ್ಟರಮಟ್ಟಿಗೆಂದರೆ, ತಮಗೆ ನೇರವಾಗಿ ಬಾಧಿಸದ, ಭಾರತಕ್ಕೆ ಯಾವ ರೀತಿಯಿಂದಲೂ ಸಂಬಂಧ ಇರದ ‘ಪ್ಯಾನ್ ಇಸ್ಲಾಂ’ ಆಂದೋಲನವನ್ನು ಮುಸ್ಲಿಂ ಲೀಗ್ ಕೈಗೆತ್ತಿಕೊಂಡಿತ್ತು. ‘ಖಿಲಾಫತ್ ಚಳವಳಿಗೆ’ ಗಾಂಧೀಜಿ ಆದಿಯಾಗಿ ಕಾಂಗ್ರೆಸ್ಸಿನ ಪ್ರಮುಖ ನಾಯಕರು ಬೆಂಬಲವಾಗಿ ನಿಂತರು. ಬ್ರಿಟಿಷರ ಹಿಡಿತದಿಂದ ಭಾರತೀಯ ಮುಸ್ಲಿಮರನ್ನು ಬಿಡಿಸಿ, ಕಾಂಗ್ರೆಸ್ ಅಂಗಳಕ್ಕೆ ಕರೆದುಕೊಳ್ಳಬೇಕು ಎಂಬ ಏಕೈಕ ಹಂಬಲ ಈ ನಾಯಕರಿಗಿತ್ತು. ಆದರೆ ಆ ಉದ್ದೇಶ ಸಫಲವಾಗಲಿಲ್ಲ. ಮೋಪ್ಲಾ ಹತ್ಯಾಕಾಂಡಕ್ಕೆ ದಾರಿ ಮಾಡಿಕೊಟ್ಟಿತು.

ಬಹುಶಃ ಇದು ಇತಿಹಾಸದ ವ್ಯಂಗ್ಯವೇ ಸರಿ, 1929-30ರ ಕಾಂಗ್ರೆಸ್ ಅಧಿವೇಶನ ಲಾಹೋರಿನಲ್ಲಿ ರಾವಿ ನದಿಯ ತಪ್ಪಲಿನಲ್ಲಿ ಆಯೋಜನೆಗೊಂಡಿತ್ತು. ಪಂಡಿತ್ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನ, ಏಕಕಂಠದಿಂದ ಪೂರ್ಣ ಸ್ವರಾಜ್ಯಕ್ಕೆ ಆಗ್ರಹಿಸಿತು. ಒಂದು ದಶಕದ ಬಳಿಕ 1940ರಲ್ಲಿ ಮುಸ್ಲಿಂ ಲೀಗ್, ಅದೇ ಸ್ಥಳದಲ್ಲಿ ‘ಪಾಕಿಸ್ತಾನ ನಿರ್ಣಯ’ವನ್ನು ಅಂಗೀಕರಿಸಿತು. ಗಾಂಧೀಜಿ, ‘Quit India’ ಎಂದು ಕರೆಕೊಟ್ಟಾಗ, ಮೊಹಮದ್ ಅಲಿ ಜಿನ್ನಾ ‘Divide and Quit India’ ಎಂದು ಅಪದ್ಧ ನುಡಿದರು. ಹಾಗಾದರೆ ವಿಭಜನೆಯಲ್ಲಿ ಜಿನ್ನಾ ಪಾತ್ರವೇನು? ‘ಜಿನ್ನಾ ಓರ್ವ ಜಾತ್ಯತೀತ ವ್ಯಕ್ತಿ’ ಎಂದು ಹೇಳಿ ತಮ್ಮ ರಾಜಕೀಯ ಭವಿಷ್ಯವನ್ನು ಅಡ್ವಾಣಿ ಮಸುಕು ಮಾಡಿಕೊಂಡರಲ್ಲಾ? ಮೊನ್ನೆ ಮೊನ್ನೆ ಬಲೂಚಿಸ್ತಾನದ ಶಾಲಾ ಪಠ್ಯದಲ್ಲಿ ಪಾಕಿಸ್ತಾನ ಸರ್ಕಾರ ವಿಭಜನೆಯ ಕಥಾನಕ ಸೇರಿಸಿದ್ದು ಏಕೆ? ಮುಂದಿನ ಅಂಕಣದಲ್ಲಿ ಚರ್ಚಿಸೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.