ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ್ರೋಹ– ದೇಶಭಕ್ತಿಯೆಂಬ ಹೊಸ ಹತಾರುಗಳು!

Last Updated 6 ಮಾರ್ಚ್ 2017, 4:40 IST
ಅಕ್ಷರ ಗಾತ್ರ

ಈಗಿನ ಭಾರತದ ಇಂತಹುದೇ ಅಸಹನೆ- ದ್ವೇಷದ ದಾರಿಯನ್ನು ಪಾಕಿಸ್ತಾನ ತುಳಿದು ಬಹಳ ಕಾಲವಾಗಿದೆ. ಅದಕ್ಕೆ ತಕ್ಕ ಶಿಕ್ಷೆ- ಸಂಕಟಗಳ ಸುಳಿಗೆ ಸಿಲುಕಿ ನರಳತೊಡಗಿದೆ. ದಿವಂಗತ ಜನರಲ್ ಜಿಯಾ ಉಲ್ ಹಕ್ ಆಡಳಿತ ಪಾಕಿಸ್ತಾನವನ್ನು ಜಿಹಾದಿ ದೇಶವನ್ನಾಗಿ ಬದಲಾಯಿಸಿಬಿಟ್ಟಿತು. ತನ್ನ ಜನಸಾಮಾನ್ಯರ ಮಾನ ಪ್ರಾಣಗಳ ರಕ್ಷಣೆಯನ್ನು ತಾನು ಮಾಡಬಲ್ಲೆ ಎನ್ನುವ ಕನಿಷ್ಠ ವಿಶ್ವಾಸ ಕೂಡ ಇಂದು ಪಾಕಿಸ್ತಾನದ ಚುನಾಯಿತ ಸರ್ಕಾರಕ್ಕೆ ಇಲ್ಲ.
ಭಾರತದಲ್ಲಿಯೂ ಇಂತಹುದೇ ಆತ್ಮಹತ್ಯೆಯ ಕೃತ್ಯ ನಡೆದಿದೆ. ತಲೆಯೆತ್ತಿ ಹೂಂಕರಿಸಿರುವ ಕಟ್ಟರ್‌ವಾದವು ತನ್ನ ಅರಿವಿಗೆ ಬಾರದೆಯೇ ಭಾರತವನ್ನೂ ಮತ್ತೊಂದು ಪಾಕಿಸ್ತಾನ ಆಗಿಸಲು ಹೊರಟಿದೆ.

ಒಂದು ದೇಶ, ಒಂದು ಜನಾಂಗ, ಒಂದು ರಾಷ್ಟ್ರ ಎಂಬ ತಿರುಳು ತತ್ವ ಉಳ್ಳ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ವಾಜಪೇಯಿ ಅವರ ಕಾಲದಲ್ಲೇ ಅಳವಡಿಸಿಕೊಳ್ಳಲಾಗಿತ್ತು. ಉರ್ದು- ಮುಸ್ಲಿಂ- ಪಾಕಿಸ್ತಾನ ಎನ್ನುವಂತೆ ಹಿಂದಿ- ಹಿಂದೂ- ಹಿಂದುಸ್ತಾನ. ಜರ್ಮನಿ ಪಾಲಿಸಿದ ಆರ್ಯ ಪಾರಮ್ಯದ ಇದೇ ಸಾಂಸ್ಕೃತಿಕ ರಾಷ್ಟ್ರೀಯತೆಯು ಯಹೂದಿಗಳ ಸಾಮೂಹಿಕ ಮಾರಣಹೋಮಕ್ಕೆ ಕಾರಣ ಆಯಿತು. ಅನ್ನ, ಅರಿವೆ, ನೀರು, ನೆರಳಿಗಾಗಿ ಜನಸಾಮಾನ್ಯರ ಜಂಜಾಟವನ್ನು ಸಾಂಸ್ಕೃತಿಕ ರಾಷ್ಟ್ರೀಯತೆ ಲೆಕ್ಕಕ್ಕೇ ಇಡುವುದಿಲ್ಲ.

‘ಹಿಂದೂ ಜನಾಂಗ ಮತ್ತು ಹಿಂದೂ ರಾಷ್ಟ್ರವನ್ನು ತಮ್ಮ ಹೃದಯಕ್ಕೆ ಹತ್ತಿರ ಇರಿಸಿಕೊಂಡು ವೈಭವೀಕರಿಸಿ ಆ ಧ್ಯೇಯದೆಡೆಗೆ ಸಾಗುವ ಆಶೋತ್ತರ ಉಳ್ಳವರು ಮಾತ್ರವೇ ರಾಷ್ಟ್ರವಾದಿ ದೇಶಭಕ್ತರು. ಉಳಿದವರೆಲ್ಲ ದೇಶದ್ರೋಹಿಗಳು ಮತ್ತು ರಾಷ್ಟ್ರೀಯತೆಯ ವೈರಿಗಳು’ ಎಂದಿದ್ದಾರೆ ಮಾಧವರಾವ್ ಸದಾಶಿವರಾವ್ ಗೊಳವಲ್ಕರ್‌. We or Our Nationhood Defined (1939) ಕೃತಿಯಲ್ಲಿ ರಾಷ್ಟ್ರೀಯತೆ ಕುರಿತ ಅವರ ವಿಚಾರದ ಸವಿವರ ಪ್ರಸ್ತಾಪವಿದೆ.

‘ಹಿಂದುಸ್ತಾನದ ಪರಕೀಯ ಜನಾಂಗಗಳು ಹಿಂದೂ ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಹಿಂದೂ ಧರ್ಮವನ್ನು ಭಕ್ತಿ, ಗೌರವದಿಂದ ಕಾಣಬೇಕು, ಹಿಂದೂ ಜನಾಂಗ ಮತ್ತು ಸಂಸ್ಕೃತಿಯನ್ನು ವೈಭವೀಕರಿಸುವುದರ ವಿನಾ ಬೇರೆ ಯಾವ ವಿಚಾರವನ್ನೂ ನೆಚ್ಚಕೂಡದು. ಪ್ರತ್ಯೇಕ ಅಸ್ತಿತ್ವವನ್ನು ಬಿಟ್ಟುಕೊಟ್ಟು ಹಿಂದೂ ಜನಾಂಗದೊಳಕ್ಕೆ ವಿಲೀನಗೊಳ್ಳಬೇಕು, ಇಲ್ಲವಾದರೆ ಹಿಂದೂ ರಾಷ್ಟ್ರಕ್ಕೆ ಸಂಪೂರ್ಣ ಅಧೀನವಾಗಿ ನಾಗರಿಕ ಹಕ್ಕುಗಳನ್ನು ಕೂಡ ಕೇಳದಂತೆ ಈ ದೇಶದಲ್ಲಿ ಜೀವಿಸಬೇಕು. ನಮ್ಮದು ಪ್ರಾಚೀನ ರಾಷ್ಟ್ರ. ತಮ್ಮ ದೇಶದಲ್ಲಿ ನೆಲೆಸಲು ಬಂದ ಪರಕೀಯ ಜನಾಂಗಗಳನ್ನು ಪ್ರಾಚೀನ ದೇಶಗಳು ಹೇಗೆ ನಡೆಸಿಕೊಳ್ಳುತ್ತವೆಯೋ ಅದೇ ರೀತಿ ನಡೆಸಿಕೊಳ್ಳೋಣ’ ಎಂಬುದು ಗೊಳವಲ್ಕರ್‌ ಅವರ ಪ್ರತಿಪಾದನೆಯಾಗಿತ್ತು.

ಯುವಜನಾಂಗದ ಚಿರಂತನ ಸ್ಫೂರ್ತಿಯಾಗಿರುವ ಅಪ್ರತಿಮ ದೇಶಪ್ರೇಮಿ ಭಗತ್ ಸಿಂಗ್ ಹುತಾತ್ಮನಾದ ದಿನ ಸಮೀಪಿಸುತ್ತಿದೆ. ‘ಸಾಂಪ್ರದಾಯಿಕ ದಂಗೆಗಳು ಮತ್ತು ಅವುಗಳ ಇಲಾಜು’ ಎಂಬುದಾಗಿ 1927ರಲ್ಲಿ ಭಗತ್ ಸಿಂಗ್ ಬರೆದ ಲೇಖನ ಇಂದಿನ ಭಾರತದ ಸ್ಥಿತಿಗತಿಗೆ ಹಿಡಿದ ಕನ್ನಡಿ. ಕೋಮುವಾದಿ ನಂಜಿನ ಬಗ್ಗಡವನ್ನು ಬಡಿದೆಬ್ಬಿಸುತ್ತಿರುವ ವಿಷಮತೆ-ಅಸಹನೆಗಳ ಸಮಕಾಲೀನ ಸಂದರ್ಭಕ್ಕೆ ಅಚ್ಚರಿಯೆನಿಸುವಷ್ಟು ಪ್ರಸ್ತುತ
...‘ಇಂಡಿಯಾದ ಇಂದಿನ ಪರಿಸ್ಥಿತಿ ಅತೀವವಾಗಿ ಉಲ್ಬಣಿಸಿದೆ. ಒಂದು ಧರ್ಮದ ಅನುಯಾಯಿಗಳು ಹಠಾತ್ತನೆ ಇತರೆ ಧರ್ಮಗಳ ವಿರುದ್ಧ ಕಡು ಹಗೆತನದ ಕತ್ತಿ ಹಿರಿದಿದ್ದಾರೆ. ಹಿಂದೂ ಸಿಖ್ಖರೆಂಬ ಏಕೈಕ ಕಾರಣಕ್ಕೆ ಮುಸ್ಲಿಮರು ಹಿಂದೂ ಮತ್ತು ಸಿಖ್ಖರನ್ನೂ, ಮುಸಲ್ಮಾನರೆಂಬ ಕಾರಣಕ್ಕಾಗಿ ಮುಸಲ್ಮಾನರನ್ನೂ ಕ್ರೂರವಾಗಿ ಕೊಲ್ಲಲಾಗುತ್ತಿದೆ. . . ರಾಜಕೀಯ ನಾಯಕರು ನಿರ್ಲಜ್ಜರಾಗಿ ವರ್ತಿಸುತ್ತಿದ್ದಾರೆ. ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸುವ ಶಪಥ ತೊಟ್ಟಿರುವ ಮತ್ತು ಸಮಾನ ರಾಷ್ಟ್ರೀಯತೆ ಕುರಿತು ಕೊನೆಯಿಲ್ಲದಷ್ಟು ಭಾಷಣಬಾಜಿ ಮಾಡುವ ತಲೆಯಾಳುಗಳು ಒಂದೋ ಲಜ್ಜೆಯಿಂದ ತಲೆತಗ್ಗಿಸಿ ಬಾಯಿ ಹೊಲಿದುಕೊಂಡಿದ್ದಾರೆ ಇಲ್ಲವೇ ಧರ್ಮಾಂಧತೆಯ ದುಷ್ಟ ಗಾಳಿಯ ದಿಕ್ಕಿನತ್ತ ಓಲಾಡುತ್ತಿದ್ದಾರೆ... ತುಟಿ ಬಿಚ್ಚದೆ ಬೇಲಿಯ ಮೇಲೆ ಮುಖ ಮುಚ್ಚಿ ಕುಳಿತಿರುವ ಇಂತಹವರ ಸಂಖ್ಯೆ ಸಣ್ಣದೇನೂ ಅಲ್ಲ...’ ಎಂದಿದ್ದಾರೆ.

ಕೋಮುವಾದದ ದಳ್ಳುರಿಗೆ ಎಣ್ಣೆ ಎರೆವ ಪತ್ರಿಕೆಗಳ ಕುರಿತು ಭಗತ್ ಹೇಳಿದ್ದು- ...‘ಕೋಮು ದಂಗೆಗಳಿಗೆ ಪ್ರಚೋದನೆ ನೀಡುವ ಇತರೆ ಪ್ರಮುಖ ಪಾತ್ರಧಾರಿಗಳ ಸಾಲಿಗೆ ಪತ್ರಕರ್ತರೂ ಸೇರುತ್ತಾರೆ. ಒಂದು ಕಾಲಕ್ಕೆ ಬಹುಗಣ್ಯ ಕಸುಬು ಎಂದು ಪರಿಗಣಿಸಲಾಗಿದ್ದ ಪತ್ರಿಕೋದ್ಯಮ ಈಗ ತಿಪ್ಪೆಯಾಗಿ ಬದಲಾಗಿದೆ. ಒಬ್ಬರ ವಿರುದ್ಧ ಮತ್ತೊಬ್ಬರು ತಲೆಬರಹಗಳಲ್ಲಿ ಕೂಗಿ ಕಿರುಚುತ್ತಾರೆ, ಪರಸ್ಪರರನ್ನು ಕೊಲ್ಲುವ ಉನ್ಮಾದಗಳನ್ನು ಜನರಲ್ಲಿ ಪ್ರಚೋದಿಸುತ್ತಿದ್ದಾರೆ... ಪತ್ರಿಕೆಗಳು ತೀವ್ರತರದ ಆಸ್ಫೋಟಕ ಮತ್ತು ಅತೀವ ಪ್ರಚೋದಕ ಲೇಖನಗಳನ್ನು ಪ್ರಕಟಿಸಿ ಕೋಮುವಾದಿ ಜ್ವಾಲೆಯನ್ನು ಹತ್ತು ಹಲವು ಸ್ಥಳಗಳಲ್ಲಿ ಭುಗಿಲೆಬ್ಬಿಸುತ್ತಿವೆ... ತಳಮಳ, ಆತಂಕಗಳ ಈ ಸ್ಥಿತಿಯಲ್ಲಿ ಸಮಚಿತ್ತವನ್ನು, ಸಮತೂಕವನ್ನು ಪ್ರದರ್ಶಿಸಿದ ಪತ್ರಕರ್ತರು ಕೆಲವೇ ಕೆಲವರು’.

‘...ಜನತೆಯಲ್ಲಿ ಅರಿವು ಮೂಡಿಸಿ ಅವರ ಮೆದುಳುಗಳನ್ನು ನಿರ್ಮಲವಾಗಿ ಇರಿಸುವುದು, ಸಂಕುಚಿತವಾದದ ಬಿಲಗಳಿಂದ ಹೊರಗೆಳೆದು ತರುವುದು, ಕೋಮುವಾದಿ ಭಾವನೆಗಳನ್ನು ಕೆರೆದು ತೆಗೆದು ತೊಳೆದು ಪರಸ್ಪರ, ಸಾಮರಸ್ಯ ಮೂಡಿಸುವುದು ಪತ್ರಿಕೆಗಳ ಅಸಲು ಕರ್ತವ್ಯ... ಬದಲಾಗಿ ಅರಿವುಗೇಡಿತನ, ಸಂಕುಚಿತ ಪಂಥವಾದ- ಕೋಮುವಾದಗಳನ್ನು ಜನರ ಮನಸುಗಳಲ್ಲಿ ಬಿತ್ತಿ ಗಲಭೆಗಳನ್ನು ಎಬ್ಬಿಸುವುದೇ ಅವರ ಮುಖ್ಯ ಗುರಿ ಎನ್ನಿಸುತ್ತಿದೆ. ಈಗಿನ ಇಂಡಿಯಾದ ಪರಿಸ್ಥಿತಿಯನ್ನು ನೋಡಿದರೆ ರಕ್ತಕಣ್ಣೀರು ಕಪಾಳಕ್ಕೆ ಇಳಿವುದಲ್ಲದೆ, ಕಟ್ಟಕಡೆಗೆ ಈ ದೇಶದ ಪರಿಸ್ಥಿತಿ ಏನಾದೀತು ಎಂಬ ಪ್ರಶ್ನೆ ಏಳುತ್ತದೆ’.

ಸಮಕಾಲೀನ ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯದ ಮಾತೆತ್ತಿದವರನ್ನು ದೇಶದ್ರೋಹದ ಶಿಲುಬೆಗೆ ಏರಿಸಲಾಗುತ್ತಿದೆ. ಪರಮದೈವ ಎಂದು ಪ್ರಧಾನಿಯವರೇ ಘೋಷಿಸುವ ಅದೇ ಸಂವಿಧಾನದ ಮೌಲ್ಯಗಳನ್ನು ಆಚರಣೆಯ ಹೊತ್ತು ಬಂದಾಗ ಹರಿದು ತೂರಲಾಗುತ್ತಿದೆ. ಅಂಬೇಡ್ಕರ್ ಅವರನ್ನು ಶಕಪುರುಷನೆಂದು ಹಾಡಿ ಹೊಗಳಿದ ಅವೇ ನಾಲಗೆಗಳು ಅಂಬೇಡ್ಕರ್ ವಾದಿಗಳನ್ನು ದೇಶದ್ರೋಹಿಗಳೆಂದು ನಿಂದಿಸಿ ಹಲ್ಲು ಮಸೆಯುತ್ತಿವೆ. ನಾವೆಲ್ಲ ಒಂದು ಎನ್ನುತ್ತಲೇ ಮೇಲು ಕೀಳಿನ ವಿಷವೃಕ್ಷಕ್ಕೆ ನೀರು ಗೊಬ್ಬರ ಎರೆಯಲಾಗುತ್ತಿದೆ . ಎರಡೆಳೆ ನಾಲಗೆಯು ಸರ್ವಾಧಿಕಾರಿ ಶಕೆಯ ಹೆಗ್ಗುರುತುಗಳಲ್ಲಿ ಒಂದು ಎಂಬ ದುಬಾರಿ ಪಾಠವನ್ನು ಇಂದಿರಾ ಗಾಂಧಿ ಅವರ ತುರ್ತುಪರಿಸ್ಥಿತಿ ಈಗಾಗಲೇ ಹೇಳಿಕೊಟ್ಟಿದೆ.  ಕುಸಿಯತೊಡಗಿದ್ದ ಕುರ್ಚಿಯನ್ನು ಕಾಪಾಡಿಕೊಳ್ಳಲು ಆಕೆ ಕೂಡ ಹುಸಿ ದೇಶಪ್ರೇಮ- ದೇಶದ್ರೋಹದ ಮಾತುಗಳನ್ನು ಆವಾಹಿಸಿದ್ದರು.

ರಕ್ತದಾಹದ ರಾಷ್ಟ್ರಭಕ್ತಿ ಹೂಂಕರಿಸತೊಡಗಿದೆ. ರಕ್ತ ಹರಿಸಬೇಕೆಂದೂ ರುಂಡ- ನಾಲಗೆಗಳ ತರಿದು ತರಬೇಕೆಂದೂ ಅವುಗಳಿಗೆ ಬೆಲೆ ಕಟ್ಟಿ ಎಬ್ಬಿಸಿರುವ ತಾಲಿಬಾನಿ ಸ್ವರೂಪದ ತಹತಹವೇ ಈ ಮಾತಿಗೆ ಸಾಕ್ಷಿ.

ಹಸಿವಿನಿಂದ, ಆರೆಸ್ಸೆಸ್ಸಿನಿಂದ, ಸಾಮಂತವಾದದಿಂದ, ಬಂಡವಾಳವಾದದಿಂದ, ಬ್ರಾಹ್ಮಣವಾದದಿಂದ, ಮನುವಾದದಿಂದ ಸ್ವಾತಂತ್ರ್ಯವನ್ನು ಪಡೆದೇ ತೀರುತ್ತೇವೆ ಎಂಬ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯನ ಘೋಷಣೆಗಳ ದನಿ ಅಡಗಿಸಿ ಅವುಗಳ ಮೇಲೆ ದೇಶವನ್ನು ತುಂಡು ತುಂಡು ಮಾಡುತ್ತೇವೆ ಎಂಬ ಕಾಶ್ಮೀರದ ಪ್ರತ್ಯೇಕತಾವಾದಿಗಳ ಘೋಷಣೆಗಳ ಕತ್ತರಿಸಿ-ಅಂಟಿಸಿ ನಕಲಿ ವಿಡಿಯೊ ಸೃಷ್ಟಿಸಿದ್ದ ಮಸಲತ್ತು ಮೇಲೆ ತೇಲಲು ಬಹುಕಾಲ ಬೇಕಾಗಲಿಲ್ಲ.

‘ಶೋಷಣೆ, ಜಾತಿವಾದ, ಮನುವಾದದ ಸಂಸ್ಕೃತಿಯನ್ನು ನಾಶ ಮಾಡುತ್ತೇವೆಂದು ನಾವು ಹೇಳಿದ್ದೇವೆಯೇ ವಿನಾ ಭಾರತೀಯ ಸಂಸ್ಕೃತಿಯನ್ನು ಅಲ್ಲ. ನನ್ನ ಮೊಬೈಲ್ ತೆರೆದು ನೋಡಿರಿ. ನನ್ನ ತಾಯಿ ಮತ್ತು ಸೋದರಿಯನ್ನು ವಾಚಾಮಗೋಚರವಾಗಿ ಅಶ್ಲೀಲ ಶಬ್ದಗಳಿಂದ ನಿಂದಿಸಲಾಗಿದೆ. ನನ್ನ ತಾಯಿ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಪಾದಿಸುವ ಬಡ ಅಂಗನವಾಡಿ ಸೇವಿಕಾ. ನಿಮ್ಮ ಭಾರತ ಮಾತೆಯಲ್ಲಿ ಈ ನನ್ನ ಬಡ ಅಮ್ಮ ಇಲ್ಲದಿದ್ದರೆ ಅಂತಹ ಭಾರತ ಮಾತೆಯ ಪರಿಕಲ್ಪನೆ ನನಗೆ ಒಪ್ಪಿಗೆಯಿಲ್ಲ. ಗರೀಬರು, ದಲಿತರು, ಕಿಸಾನರ ತಾಯಂದಿರು ಭಾರತಮಾತೆಯ ಪರಿಕಲ್ಪನೆಯಲ್ಲಿ ಇಲ್ಲವೇ? ಸಾಮಾಜಿಕ ಸಾಕ್ಷಿಪ್ರಜ್ಞೆಯ ಟೀಕೆ- ವಿಮರ್ಶೆಗಳು ವಿಶ್ವವಿದ್ಯಾಲಯಗಳಲ್ಲಿ ನಡೆಯಬಾರದು ಎಂದರೆ ಇನ್ನೆಲ್ಲಿ ನಡೆಯಬೇಕು’ ಎಂಬುದಾಗಿ ಎತ್ತಿದ್ದ ಪ್ರಶ್ನೆಗಳಿಗೆ ಇನ್ನಷ್ಟು ಹೆಚ್ಚು ದಬ್ಬಾಳಿಕೆ ಇನ್ನಷ್ಟು ಹೆಚ್ಚು ಹಿಂಸಾಚಾರಗಳ ಉತ್ತರ ದೊರೆಯತ್ತಿದೆ.

ವಿಯೆಟ್ನಾಂ ವಿರುದ್ಧ ತಮ್ಮ ಸರ್ಕಾರ ನಡೆಸುತ್ತಿರುವ ಯುದ್ಧ ಅನ್ಯಾಯದ್ದೆಂದು ಅಮೆರಿಕೆಯ ವಿದ್ಯಾರ್ಥಿಗಳು ರ್‍ಯಾಲಿ ನಡೆಸಿದ್ದರು. ತಮ್ಮದೇ ದೇಶದ ಧ್ವಜವನ್ನು ಸುಟ್ಟು ಪ್ರತಿಭಟಿಸಿದ್ದರು. ವಿಯೆಟ್ನಾಮಿನ ಐತಿಹಾಸಿಕ ಜನನಾಯಕ ಹೋ-ಚಿ-ಮಿನ್ಹ್‌ಗೆ ಬೆಂಬಲ ಸಾರಿದ್ದರು. ಆದರೆ ಅಮೆರಿಕೆಯ ಪ್ರಭುತ್ವ ತನ್ನ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆಪಾದನೆ ಹೊರಿಸಲಿಲ್ಲ. ಬಂಧಿಸಲೂ ಇಲ್ಲ.

ಹದಿನೆಂಟನೆಯ ಶತಮಾನದ ಅಂತ್ಯದಲ್ಲಿ ಮತ್ತು 19ನೆಯ ಶತಮಾನದಲ್ಲಿ ಯುರೋಪಿನ ಸಾಮ್ರಾಜ್ಯಗಳನ್ನು, ಸರ್ವಾಧಿಕಾರಗಳನ್ನು ಒಡೆದು ಕೆಡವಿದ ಕ್ರಿಯೆಯಲ್ಲಿ ರಾಷ್ಟ್ರೀಯತೆ ವಹಿಸಿದ್ದು ಸಕಾರಾತ್ಮಕ ಪಾತ್ರ. ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ವಸಾಹತುಶಾಹಿಯನ್ನು ಕೂಡ ಬುಡಮೇಲು ಮಾಡಿದ್ದು ಇದೇ ರಾಷ್ಟ್ರೀಯತೆ. ಆದರೆ ನಾಜಿವಾದ ಮತ್ತು ಫ್ಯಾಸಿಸ್ಟ್ ವಾದ ಬೆರೆತ ರಾಷ್ಟ್ರೀಯತೆಯ ಅವತಾರವು 1930 ಮತ್ತು 40ರ ದಶಕಗಳಲ್ಲಿ ಜನತಂತ್ರವನ್ನು ತುಳಿದದ್ದೂ ಸತ್ಯ. ಸರ್ವಾಧಿಕಾರಿ ಪ್ರಭುತ್ವಗಳು ತಲೆಯೆತ್ತಿ ತಮ್ಮದೇ ನಾಗರಿಕರನ್ನು ದೇಶದ್ರೋಹಿಗಳೆಂದು ಸಾರಿ ಜನಾಂಗೀಯ ಮಾರಣಹೋಮದಲ್ಲಿ ತೊಡಗಿದ್ದನ್ನು ನಿರಾಕರಿಸಲು ಬಂದೀತೇ? ಜರ್ಮನ್ ರಾಷ್ಟ್ರೀಯತೆಯ ಹೆಸರಿನಲ್ಲಿ ಅರವತ್ತು ಲಕ್ಷ ಯಹೂದಿಗಳನ್ನು ಕೊಂದವನು ಅದೇ ಅಡಾಲ್ಫ್ ಹಿಟ್ಲರ್. ಜನಪರ ರಾಷ್ಟ್ರೀಯತೆಯನ್ನು ನಾವು ಸಂಭ್ರಮಿಸಿ ಎತ್ತಿ ಹಿಡಿಯುವ ಜೊತೆ ಜೊತೆಗೇ ಈ ಪರಿಕಲ್ಪನೆಯನ್ನು ದುರುಪಯೋಗ ಮಾಡಿಕೊಳ್ಳುವವರ ಕುರಿತು ಎಚ್ಚರ ಅಗತ್ಯ ಎನ್ನುತ್ತಾರೆ  ಇತಿಹಾಸಕಾರ್ತಿ ಮೃದುಲಾ ಮುಖರ್ಜಿ.

ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ರೋಹಿತ್ ವೇಮುಲನನ್ನು  ದೇಶದ್ರೋಹಿಯೆಂದು ಕರೆದವರ ಬಾಯಿ ಬಡಿಯುವಂತೆ ಖುದ್ದು ಪ್ರಧಾನಿಯವರೇ ಆತನನ್ನು ಭಾರತ ಮಾತೆಯ ವರಪುತ್ರನೆಂದು ತಡವಾಗಿಯಾದರೂ ಬಣ್ಣಿಸಿದ್ದರು. ಆದರೆ ತಮ್ಮದೇ ನಾಯಕನ ಈ ಮಾತನ್ನು ಅವರ ಅನುಯಾಯಿಗಳು ಪೂರ್ಣ ಮನಸ್ಸಿನಿಂದ ಒಪ್ಪಿಲ್ಲ. ಅವರ ಪಾಲಿಗೆ ರೋಹಿತ್ ಈಗಲೂ ದೇಶದ್ರೋಹಿಯೇ.

ಹಳೆಯ ಹತಾರುಗಳೆಲ್ಲ ತುಕ್ಕು ಹಿಡಿದಿರುವ ಪರಿಸ್ಥಿತಿಯಲ್ಲಿ ದೇಶದ್ರೋಹ ಮತ್ತು ದೇಶಭಕ್ತಿಯ ಹೊಸ ಹತಾರನ್ನು ಮಸೆದು ಝಳಪಿಸಲಾಗುತ್ತಿದೆ. ಜಾತಿ ವರ್ಗ ವರ್ಣಗಳ ಮಿತಿಯನ್ನು ದಾಟಿ ಎಲ್ಲ ಜನರನ್ನು ಬೀಸಿ ಬಾಚಿಕೊಳ್ಳುವ ಅಸೀಮ ಶಕ್ತಿಯ ಭಾವನಾತ್ಮಕ  ಹತಾರು ಇದು. ಇಬ್ಬಗೆಯ ನೀತಿಯ ಟೀಕೆ ಟಿಪ್ಪಣಿಗಳಿಗೆ ಜಾಣ ಕಿವುಡು ನಟಿಸಲಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಅನುಕಂಪ ತೋರುತ್ತಿರುವ ಪಿ.ಡಿ.ಪಿ. ಜೊತೆ ಕೈ ಕಲೆಸಿ ಸರ್ಕಾರ ರಚಿಸಬಹುದು. ಇನ್ನೊಂದೆಡೆ ವಿಶ್ವವಿದ್ಯಾಲಯಗಳ ಆವರಣಗಳಲ್ಲಿ ಮುಕ್ತ ಚರ್ಚೆಯ ಕತ್ತನ್ನೂ ಹಿಸುಕಿ ಹಿಂಸಾಚಾರಕ್ಕೆ ಇಳಿಯಬಹುದು. ಜಮ್ಮು-ಕಾಶ್ಮೀರದಲ್ಲಿ ಅಧಿಕಾರ ಹಂಚಿಕೊಳ್ಳಲು ತೋರುವ ಸಹನೆ, ಜಾಣ್ಮೆ, ಪ್ರಬುದ್ಧತೆ ಬೇರೆಡೆಗಳಲ್ಲಿ ಯಾಕೆ ಮರೆಯಾಗುತ್ತದೆ?

ನಮ್ಮ ಕಟ್ಟಕಡೆಯ ಆಧ್ಯಾತ್ಮಿಕ ಆಶ್ರಯತಾಣ ದೇಶಭಕ್ತಿ ಅಲ್ಲ. ವಜ್ರಗಳ ಬೆಲೆ ತೆತ್ತು ಗಾಜಿನ ತುಂಡುಗಳ ಖರೀದಿಸಲಾರೆ. ದೇಶಭಕ್ತಿಯು ಮಾನವೀಯತೆಯನ್ನು ಮೆಟ್ಟಿ ಮೆರೆವುದಕ್ಕೆ ನನ್ನ ಉಸಿರಿರುವ ತನಕ ಅವಕಾಶ ನೀಡಲಾರೆ ಎಂದಿದ್ದರು ರವೀಂದ್ರನಾಥ ಟ್ಯಾಗೋರ್.

‘ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ... ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು... ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಒಯ್ದು ಚಳಿಯು ಮಳೆಯಲಿ ನೆನೆವ ತಾಯ್ಗೆ ಹಾಕು’ ಎಂಬ ಕುವೆಂಪು ಪ್ರಣೀತ ರಾಷ್ಟ್ರವಾದಕ್ಕಿಂತ ಮಾನವೀಯ ರಾಷ್ಟ್ರವಾದ ಇನ್ಯಾವುದಿದ್ದೀತು?

ಎಲ್ಲಿಯವರೆಗೆ ಈ ದೇಶದ ಜನಕೋಟಿ ಹಸಿವು, ಅಜ್ಞಾನಗಳಲ್ಲಿ ಬದುಕುತ್ತದೆಯೋ ಅಲ್ಲಿಯವರೆಗೆ ಅವರೆಡೆ ನಿರ್ಲಕ್ಷ್ಯ ತೋರುವ ಪ್ರತಿ ವ್ಯಕ್ತಿ ದೇಶದ್ರೋಹಿಯೇ ಎಂದಿದ್ದರು ಸ್ವಾಮಿ ವಿವೇಕಾನಂದ. ದೇಶದ ಸಂಪತ್ತಿನಲ್ಲಿ ಸಮಪಾಲು ನೀಡದೆ ಸಮಬಾಳನ್ನು ನಿರಾಕರಿಸುತ್ತ ಬಂದಿರುವುದು ದೇಶದ್ರೋಹ. ಜಾತಿಪದ್ಧತಿಯನ್ನು ಜತನ ಮಾಡಿಕೊಂಡು ಅಸ್ಪೃಶ್ಯತೆಯ ನಿವಾರಣೆಗೆ ಮನಸಾರೆ ಶ್ರಮಿಸದೆ ಇರುವುದು ದೇಶದ್ರೋಹ. ಮಾನವ ಮಲ ಬಳಿವ ಹತಭಾಗ್ಯರನ್ನು ಮಲದ ಕೂಪಗಳಿಂದ ಮೇಲೆತ್ತದೆ ಇರುವುದು ದೇಶದ್ರೋಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT