ಗುರುವಾರ , ಜೂನ್ 17, 2021
21 °C

ದೊಡ್ಡವರ ಸಹವಾಸ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಇದು ಒಂದು ಪಂಚ­ತಂತ್ರದ ಕಥೆ ಎಂದು ನೆನಪು. ಆ ಘೋರವಾದ ಅರಣ್ಯ­ದಲ್ಲಿ ಅನೇಕ ಪ್ರಾಣಿಗಳು ವಾಸವಾಗಿದ್ದವು.  ಒಂದು ಭಯಂಕರ ಸಿಂಹ ಅರಣ್ಯಕ್ಕೆ ರಾಜನಾಗಿ ಮೆರೆಯುತ್ತಿತ್ತು. ಒಂದು ಬಾರಿ ಸಿಂಹ ಬೇಟೆಯಾಡಿ ಹೊಟ್ಟೆ ತುಂಬ ಮಾಂಸ ತಿಂದು, ಸರೋವರದ ನೀರು ಕುಡಿದು ಜೋರಾಗಿ ಘರ್ಜಿಸಿ ತನ್ನ ಗುಹೆಯ ಕಡೆಗೆ ಹೊರಟಿತ್ತು.ಆಗ ಪೊದೆಯ ಪಕ್ಕದಿಂದ ನರಿ­ಯೊಂದು ಸರಕ್ಕನೇ ನುಗ್ಗಿ ಬಂತು. ಎದುರಿಗೇ ನಿಂತ ಸಿಂಹರಾಜ­ನನ್ನು ನೋಡಿ ಎದೆಯೊಡೆಯಿತು. ಓಡಲಾಗುವುದಿಲ್ಲವೆಂದು ತಿಳಿದು ಥಟ್ಟನೇ ಸಿಂಹದ ಕಾಲು­ಗಳ ಮೇಲೆ ಬಿದ್ದಿತು. ಈಗ ತಾನೇ ಹೊಟ್ಟೆತುಂಬ ಊಟ ಮಾಡಿದ್ದ ಸಿಂಹ, ಆಶ್ಚ­ರ್ಯ­­ದಿಂದ, ‘ಯಾಕಯ್ಯಾ, ಹೀಗೆ ಕಾಲಮೇಲೆ ಬೀಳುತ್ತೀ?’ ಎಂದು ಕೇಳಿತು. ಆಗ ನರಿ ‘ಮಹಾಪ್ರಭೂ, ನನ್ನ ಉಳಿದ ಆಯುಷ್ಯ­ವನ್ನು ನಿಮ್ಮ ಸೇವೆಯಲ್ಲಿಯೇ ಕಳೆಯ­ಬೇಕೆಂದು ತೀರ್ಮಾನಿಸಿದ್ದೇನೆ.ತಾವು ದಯವಿಟ್ಟು ಅವಕಾಶ ಕೊಡಬೇಕು’ ಎಂದು ದೈನ್ಯದಿಂದ ಬೇಡಿತು.ಸಿಂಹ ಕರುಣೆಯಿಂದ, ‘ಆಯ್ತು ಬಾ, ನನ್ನ ಗುಹೆ­ಯಲ್ಲಿಯೇ ಇರುವೆಯಂತೆ. ನಿನಗೂ ಸಾಕಷ್ಟು ಆಹಾರ ಸಿಗುತ್ತದೆ’ ಎಂದಿತು.  ಅಂದಿನಿಂದ ನರಿ ಸಿಂಹದ ಗುಹೆಯ­ಲ್ಲಿಯೇ ಇರುತ್ತಿತ್ತು. ಸಿಂಹ ಬೇಟೆಯಾಡಿ ತಿಂದ ಮೇಲೆ ಉಳಿದ ಮಾಂಸವನ್ನು ತಿಂದು, ತಿಂದು ಕೊಬ್ಬಿತು.  ಒಂದು ದಿನ ಸಂತೋಷದಿಂದ ಸಿಂಹ ಹೇಳಿತು, ‘ನರಿ, ನಿನಗೆ ಯಾವಾಗ, ಯಾವ ಪ್ರಾಣಿಯ ಮಾಂಸ ತಿನ್ನಬೇಕೆಂದು ಅನ್ನಿಸುತ್ತ­ದೆಯೋ ಅಂದು ನೀನು ನನ್ನ ಬಳಿಗೆ ಬಂದು, ‘ರಾಜಾ ದಯವಿಟ್ಟು ಇಂದು, ಆನೆ, ಎಮ್ಮೆ, ಜಿಂಕೆ, ನವಿಲು ಇಂಥ ಪ್ರಾಣಿಯನ್ನು ಬೇಟೆಯಾಡಿ ಎಂದು ಹೇಳು.ನಾನು ಆ ಪ್ರಾಣಿಯನ್ನು ಹೊಡೆದು ಕೊಂದು ತಿನ್ನು­ತ್ತೇನೆ. ಉಳಿದ ಮಾಂಸ ನಿನ್ನದೇ’. ನರಿಗೆ ಸ್ವರ್ಗವೇ ಸಿಕ್ಕಂತಾಯಿತು. ಪ್ರತಿ ದಿನವೂ ತನಗೆ ಯಾವ ಪ್ರಾಣಿಯ ಮಾಂಸವನ್ನು ತಿನ್ನಲು ಮನಸ್ಸಾಗು­ತ್ತದೆಯೋ ಅದನ್ನೇ ಸಿಂಹಕ್ಕೆ ಹೇಳುತ್ತಿತ್ತು.  ತಕ್ಷಣವೇ ಸಿಂಹ ಗುಹೆಯಿಂದ ಹೊರಗೆ ಬಂದು ಮೈ ಚಾಚಿ ಸಡಿಲಮಾಡಿ­ಕೊಂಡು, ಆಕಳಿಸಿ ನಂತರ ಧಾವಿಸಿ ನುಗ್ಗಿ ಆ ಪ್ರಾಣಿಯನ್ನು ಕೊಂದು ಎಳೆದು­ಕೊಂಡು ಬರುತ್ತಿತ್ತು.  ಅನಂತರ ನರಿಗೂ ಭೂರಿಭೋಜನ.ಬೇಕುಬೇಕಾದ ಆಹಾರ ತಿಂದು ಸೊಕ್ಕಿಗೇರಿದ ನರಿಗೆ ಒಂದು ದಿನ ಎನ್ನಿ­ಸಿತು.  ಇದೇನು ನಾನು ಹೀಗೆ ಆಳಿನಂತೆ ಇದ್ದೇನೆ.  ನಾನೂ ಪ್ರಾಣಿಯನ್ನು ಹುಡುಕ­ಬೇಕು,  ನಂತರ ಸಿಂಹಕ್ಕೆ ಹೇಳ­ಬೇಕು.  ಆಗ ಅದು ಅಹಂಕಾರದಿಂದ ಎದ್ದು ಬಂದು, ಆಕಳಿಸಿ ಮೈಮುರಿದ ನಂತರ ಕಾಡಿನೊಳಗೆ ನುಗ್ಗಿ  ಬೇಟೆ­ಯಾಡುತ್ತದೆ.  ನನಗೂ ನಾಲ್ಕು ಕಾಲು­ಗಳಿವೆ, ನನ್ನ ದೇಹವೂ ದೊಡ್ಡದಾ­ಗಿದೆ. ಒಂದು ಸಲ­ವಾದರೂ ಸಿಂಹ ತನ್ನ ಅಪೇಕ್ಷೆಯನ್ನು ನನಗೆ ಹೇಳಬೇಕು. ನಾನು ಹೋಗಿ ಬೇಟೆ­ಯಾಡಿ ಮೊದಲ ಮಾಂಸ ತಿನ್ನಬೇಕು.ಹೀಗೆಂದು ಯೋಚಿಸಿ ಸಿಂಹಕ್ಕೆ ಹೇಳಿತು, ‘ಪ್ರಭೂ, ಪ್ರತಿದಿನವೂ ನಾನು ಹೇಳಿದ ಪ್ರಾಣಿ­ಯನ್ನು ತಾವು ಬೇಟೆಯಾಡುತ್ತೀರಿ.  ನನಗೂ ಒಂದು ದಿನ ದೊಡ್ಡ ಆನೆಯ ಬೇಟೆಯಾಡುವ ಮನಸ್ಸಾಗಿದೆ.  ತಾವು ಒಂದು ಆನೆಯನ್ನು ಗುರುತಿಸಿ ನನಗೆ ಹೇಳಿ, ನಾನು ಬೇಟೆಯಾಡಿ ಆನೆಯನ್ನು ಎಳೆದುಕೊಂಡು ಬರುತ್ತೇನೆ’. ಸಿಂಹ ಗಹಗಹಿಸಿ ನಕ್ಕಿತು, ‘ನರಿ, ಇದುವರೆಗೂ ಎಂಥ ಬಲಿಷ್ಠ ನರಿಯೂ ಆನೆಯನ್ನು ಬೇಟೆಯಾಡಿದ್ದಿಲ್ಲ.  ಅದು ಶಕ್ತಿಯನ್ನು ಮೀರಿದ್ದು. ಆ ಆಸೆಯನ್ನು ಬಿಟ್ಟು ಬಿಡು’ ಎಂದಿತು. ಆದರೆ, ನರಿ ಬಹಳವಾಗಿ ಮೊಂಡು­ತನ ಮಾಡಿದಾಗ, ಮರುದಿನ ದೂರ ನಿಂತಿದ್ದ ಆನೆಯನ್ನು ಕಂಡು, ‘ಅದನ್ನು ಹೊಡೆದು ತಾ’ ಎಂದಿತು ಸಿಂಹ.  ನರಿ ಸಿಂಹದಂತೆಯೇ ದೇಹವನ್ನು ಹಿಗ್ಗಿಸಿಕೊಂಡು, ಆಕಳಿಸಿ, ತನಗೆ ತಿಳಿದಂತೆ ಘರ್ಜಿಸಿ ಆನೆಯತ್ತ ಓಡಿತು.  ಅದರ ಮೇಲೆ ಹಾರಲು ಯತ್ನಿಸಿದಾಗ, ಹಾರಲಾಗದೇ ಕಾಲಿನ ಬಳಿ ಬಿತ್ತು.  ಆನೆ ತನ್ನ ಎಡಗಾಲನ್ನು ಅದರ ಮೇಲಿಟ್ಟು ತುಳಿದಾಗ ಅದು ಹಿಂದೆ ಬದುಕಿದ್ದ ಲಕ್ಷಣವೇ ಉಳಿಯಲಿಲ್ಲ. ಆನೆ ಅದರ ಮೇಲೆ ಲದ್ದಿ ಹಾಕಿ ಹೊರಟು ಹೋಯಿತು. ತುಂಬ ದೊಡ್ಡ­ವರ ಜತೆಗೆ ಇರುವುದು ಸುಲಭವಲ್ಲ. ಅಂತಹ ಅವಕಾಶ ದೊರೆತರೆ ಅವ­ರಿಂದ ಕಲಿಯುವ, ಅನುಕೂಲತೆಗಳನ್ನು ಪಡೆ­ಯುವ ಸಾಧ್ಯತೆಗಳಿರುತ್ತವೆ.  ಹಾಗೆ ಅನುಕೂಲತೆಗಳನ್ನು ಪಡೆಯುತ್ತ ನಾವೂ ಅವರಷ್ಟೇ ದೊಡ್ಡವರು ಎಂಬ ಭಾವನೆ ಬರದಂತೆ ನೋಡಿಕೊಳ್ಳುವುದು ಮುಖ್ಯ.  ದೊಡ್ಡವರ ಸಹವಾಸ ಬೆಂಕಿ­ಯೊ­ಡನಿದ್ದಂತೆ. ಮೈಕಾಯಿಸಿಕೊಳ್ಳುವಷ್ಟು ಹತ್ತಿ­ರ­ವಿರಬೇಕು, ಆದರೆ, ಮೈ ಸುಟ್ಟು­­­­ಕೊಳ್ಳು­ವಷ್ಟು ಹತ್ತಿರ ಹೋಗಬಾರದು. ಈ ತರಹದ ಪರಿಜ್ಞಾನ ಒಳ್ಳೆಯದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.