ಭಾನುವಾರ, ಮೇ 9, 2021
22 °C

ಧ್ಯಾನಕ್ರಮದ ಮೂರು ಬಾಗಿಲುಗಳು

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಧ್ಯಾನಕ್ರಮದ ಮೂರು ಬಾಗಿಲುಗಳು

ಧ್ಯಾನಕ್ಕೆ ತೊಡಗುವ ಮುಂಚೆ ಧ್ಯಾನದ ಬಗ್ಗೆ ಪ್ರಚಲಿತವಿರುವ ಪೂರ್ವಗ್ರಹಗಳಿಂದ ಬಿಡಿಸಿಕೊಳ್ಳುವ ಅಗತ್ಯವಿದೆ. ಮೊದಲನೆಯದಾಗಿ ಧ್ಯಾನವೆಂಬುದು ಒಂದು ಕೃತಕ ಚಟುವಟಿಕೆಯಲ್ಲ. ಅದು ಎಲ್ಲರಿಗೂ ಸ್ವಾಭಾವಿಕ.  `ಸದಾಶಿವನಿಗೆ ಅದೇ ಧ್ಯಾನ' ಎಂಬ ಗಾದೆ ಎಲ್ಲರಿಗೂ ಗೊತ್ತು. ಪ್ರತಿಯೊಬ್ಬರೂ ತಾವು ಬಯಸುವ ಅಥವಾ ದ್ವೇಷಿಸುವ ಜನ ಅಥವಾ ಸಂಗತಿಗಳ ಬಗ್ಗೆ ಒಂದೇ ಸಮ ಚಿಂತಿಸುತ್ತಿರುತ್ತಾರೆ. ಇದೇ ರೀತಿ ನಮಗೆ ಹಿಡಿಸದೆ ಇರುವುದರ ಬಗ್ಗೆಯೂ ತುಂಬಾ ಚಿಂತಿಸುತ್ತೇವೆ. ಯಾರ ಬಗ್ಗೆ ನಮಗೆ ಹಗೆ, ಹೊಟ್ಟೆ ಕಿಚ್ಚು ಇತ್ಯಾದಿಗಳಿರುತ್ತವೆಯೋ ಅವರ ಬಗ್ಗೆ ಮನಸಿನಲ್ಲಿ ಮೆಲುಕು ಹಾಕುತ್ತಿರುತ್ತೇವೆ.ಹಾಗಿದ್ದರೆ ಧ್ಯಾನ ಮಾಡಬೇಕಾದ ಅಗತ್ಯವೇನಿದೆ? ಧ್ಯಾನದ ಜೀವಾಳವಾದ ತನ್ಮಯೀಭಾವ ನಮ್ಮೆಲ್ಲರಿಗೂ ಸಹಜವಾದರೂ ಧ್ಯಾನದ ವಸ್ತು ನಮ್ಮ ಅಂಕೆಯಲ್ಲಿರುವುದಿಲ್ಲ. ನಾವೆಲ್ಲರೂ ಇತಿಹಾಸದ, ಸಮಾಜದ, ಮನೋವೈಜ್ಞಾನಿಕ ಪ್ರಭಾವದಿಂದ ರೂಪಿತವಾಗಿದ್ದೇವೆ. ಆ ಪ್ರಭಾವಗಳೂ ತಾವೇ ಧ್ಯಾನದ ವಸ್ತುವನ್ನು ನಿರ್ಣಯಿಸುತ್ತವೆ. ಉದಾಹರಣೆಗೆ ಬಾಲ್ಯದಲ್ಲಿ ಲೈಂಗಿಕ ಚಿತ್ರಹಿಂಸೆಗೊಳಗಾದವರು ಮತ್ತೆ ಮತ್ತೆ ಅದರಲ್ಲೇ ಮನಸು ನೆಡುತ್ತಾರೆ.ಪ್ರೇಮದಲ್ಲಿ, ವ್ಯವಹಾರದಲ್ಲಿ ಘೋರ ನೈರಾಶ್ಯಗಳನ್ನುಂಡುವರ ಮನಸುಗಳು ಅಂಥವರ ಪ್ರಜ್ಞಾಪೂರ್ವಕತೆಗೆ ಸಿಗದ ಮಟ್ಟದಲ್ಲಿ ಹಿಂದಣ ಕಹಿ ಅನುಭವಗಳನ್ನೇ ಚಿಂತಿಸುತ್ತವೆ. ಮೇಲು ಪ್ರಜ್ಞೆಯಲ್ಲಿ ಸ್ವತಂತ್ರರೆಂದು ಕೊಚ್ಚಿಕೊಳ್ಳುವ ಬಹು ಮಂದಿ ಹೀಗೆ ಅಪ್ರಜ್ಞಾಪೂರ್ವಕ ನೇತ್ಯಾತ್ಮಕ ಒತ್ತಡಗಳ ಶಿಕಾರಿಗಳು. ಇಂಥವು ನಮ್ಮ ದೈನಂದಿನ ಸೃಜನಾತ್ಮಕ ಸ್ವಯಮಾಭಿವ್ಯಕ್ತಿಗೆ ದೊಡ್ಡ ಅಡ್ಡಿಗಳು. ಅಂಥ ಅಡ್ಡಿಗಳನ್ನು ನಿವಾರಿಸುವಲ್ಲಿ ಧ್ಯಾನ ತುಂಬಾ ಸಹಾಯ ಮಾಡುತ್ತದೆ.ಧ್ಯಾನಕ್ಕೆ ದೇವರ ನಂಬಿಕೆ ಜರೂರಿಯೆಂದು ಹಲವರು ತಪ್ಪು ತಿಳಿದಿದ್ದಾರೆ. ಆಸ್ತಿಕ ಯೋಗ ಪಂಥಗಳಲ್ಲಿ ದೇವರ ಕಲ್ಪನೆಯನ್ನು ಧ್ಯಾನದ ಉಪಕರಣವಾಗಿ ಬಳಸುತ್ತಾರೆ, ನಿಜ. ಆದರೆ ನಾಸ್ತಿಕವಾದಿಯಾದ ಜೈನ ಮತ್ತು ಬೌದ್ಧ ಪಂಥಗಳೂ ಧ್ಯಾನಕ್ಕೆ ಅಗ್ರಸ್ಥಾನ ನೀಡಿವೆ. ಕೆಲವು ಧ್ಯಾನಕ್ರಮಗಳಂತೂ ನಾಸ್ತಿಕ ಆಸ್ತಿಕರಿಬ್ಬರಿಗೂ ಉಪಯುಕ್ತವಾಗಿವೆ.ಕೆಲವರು ಧ್ಯಾನದಿಂದ ಅಮಾನುಷ ಸಿದ್ಧಿಗಳು ಬರುತ್ತವೆಂದು ಸಾರುತ್ತಾರೆ. ಆದರೆ ಈ ಅಮಾನುಷ ಸಿದ್ಧಿಗಳು ಯಾರಿಗೆ ಬೇಕು? ಎಷ್ಟೋ ವರ್ಷ ತಪಸ್ಸು ಮಾಡಿ ಜಲಸಿದ್ಧಿ ಪಡೆದವನೊಬ್ಬ ನೀರಿನ ಮೇಲೆ ನಡೆದು ತೋರಿಸಿದಾಗ ಅವನ ಸಿದ್ಧಿಯ ಬೆಲೆ ನಾವಿಕನಿಗೆ ಕೊಡುವ ಮೂರು ಕಾಸೆಂದು ರಾಮಕೃಷ್ಣರು ಸಾಧಿಸಿ ತೋರಿಸಿದರು. ಎಲ್ಲಕ್ಕಿಂತಾ ದೊಡ್ಡ ಸಿದ್ಧಿಯೆಂದರೆ ನಾವು ನಮ್ಮ ಮತ್ತು ಜಗತ್ತಿನ ಹಿತಕ್ಕಾಗಿ ತತ್ಪರರಾಗುವುದು. ನಮ್ಮನ್ನು ಬಿಟ್ಟು ಜಗತ್ತಿಲ್ಲ, ಜಗತ್ತನ್ನು ಬಿಟ್ಟು ನಾವಿಲ್ಲ. ಜಗತ್ತನ್ನು ಹಿಂಸಿಸಿ ಸ್ವಾರ್ಥ ಸಾಧಿಸುವವರು, ತನ್ನನ್ನು ಹಿಂಸಿಸಿಕೊಂಡು ಜಗತ್ತನ್ನು ಪೊರೆಯಹೊರಟವರು -ಇಬ್ಬರೂ ಲೋಕದಲ್ಲಿ ಜೀವದ ಗುರಿಯಾದ ಆನಂದಕ್ಕೆ ಬದಲಾಗಿ ದುರಂತದ ಹರಿಕಾರರಾಗುತ್ತಾರೆ.ಇನ್ನೊಂದು ತಪ್ಪು ತಿಳುವಳಿಕೆ: ಧ್ಯಾನಮಾರ್ಗದಲ್ಲಿ ಕಾಮಾದಿ ಬಯಕೆಗಳನ್ನು ತೊರೆಯಬೇಕೆಂಬುದು. ಆಶೆ ದುಃಖಕ್ಕೆ ಕಾರಣವೆಂದು ಬೋಧಿಸಿದ ಕೆಲವು ಪಂಥಗಳು ಈ ತೆರನ ನಂಬುಗೆಗಳನ್ನು ಹರಡಿವೆ. ಅವುಗಳ ಪ್ರಕಾರ ಆಸೆ ನರಕದ ಬಾಗಿಲು. ಹುಟ್ಟಿನಿಂದ ಅಥವಾ ಪ್ರಭಾವಗಳಿಂದ ಆಸೆಯ ಚಿದ್ವಿಲಾಸವಾಗಿರುವ ಜಗತ್ತು ನೀರಸವಾಗಿ ಕೆಲವರಿಗೆ ತೋರಿದರೆ ಅಂಥವರಿಗೆ ವೈರಾಗ್ಯಪ್ರಚೋದಕ ಧ್ಯಾನಕ್ರಮಗಳು ಒದಗಬಹುದು. ಆದರೆ ನಮ್ಮಲ್ಲಿ ಬಹುತೇಕರಿಗೆ ಕಾಮನೆಗಳ ಬಗ್ಗೆ, ಜಗತ್ತಿನ ಬಗ್ಗೆ ಅದಮ್ಯ ಸೆಳೆತವಿದೆ. ವೈರಾಗ್ಯಮಾರ್ಗ ರುಚಿಸದ ನಮ್ಮಂಥವರೂ ಧ್ಯಾನದ ಲಾಭ ಪಡೆಯಬಹುದು. ದಾಸಿಮಯ್ಯ ಅಂದ ಹಾಗೆ  `ಘಟವನೊಡೆದು ದಿಟವನರಿಯಲೇಕೆ, ಈ ಘಟವೇ ದಿಟವೆಂದರಿತರೆ ಸಾಲದೆ?'ವೈರಾಗ್ಯಾನುರಾಗಿಗಳು ಜಗತ್ತಿನಕಲ್ಲಿ ಬಿತ್ತಿರುವ ಬಹುದೊಡ್ಡ ವಿಷಬೀಜವೆಂದರೆ ಕಾಮಪ್ರವೃತ್ತಿಯ ಬಗೆಗಿನ ಭೀತಿ ಮತ್ತು ಸ್ತ್ರೀವಿರೋಧಿ ದೃಷ್ಟಿ. ಇವರ ಪ್ರಕಾರ `ಬ್ರಹ್ಮಚರ್ಯವೇ ಜೀವನ ವೀರ್ಯನಾಶವೇ ಮರಣ'. ಇದು ನಿಜವಾಗಿದ್ದರೆ ಈ ವೈರಾಗ್ಯಶೂರರೂ ಹುಟ್ಟಿಬಂದು ಲೋಕಕಂಟಕರಾಗುವುದು ತಪ್ಪುತ್ತಿತ್ತು. ಆದರೆ ಕಾಮವೇ ಜೀವನವಿಕಾಸವಾದ ಕಾರಣವಾದ್ದರಿಂದ ಇತ್ಯಾತ್ಮಕವಾಗಿ ಅದರಲ್ಲಿ ತೊಡಗುವದಕ್ಕನುಕೂಲವಾದ ಧ್ಯಾನವಿಧಾನಗಳನ್ನೂ ಹಲವು ಯೋಗಪಂಥಗಳು ನೀಡಿವೆ. ಆಸೆಗಳು, ಕಾಮನೆಗಳು ಬೆಂಕಿಯ ಹಾಗೆ. ಯಾವುದೋ ಬೆಂಕಿ ಆಕಸ್ಮಿಕದಿಂದ ಮನೆಸುಟ್ಟುಹೋಯಿತೆಂದ ಮಾತ್ರಕ್ಕೆ ಬೆಂಕಿಯನ್ನೇ ಬಹಿಷ್ಕರಿಸಲಾದೀತೆ? `ಇಂದ್ರಿಯನಿಗ್ರಹ  ಮಾಡಿದರೆ ಹೊಂದುವುವು ಹಲವು ದೋಷಂಗಳು'  ಎಂಬ ಬಸವಣ್ಣನ ಉಕ್ತಿ ನೆನಪಿಸಿಕೊಳ್ಳೋಣ.ಒಟ್ಟಿನಲ್ಲಿ ವೈರಾಗ್ಯಪರವಾದ ಧ್ಯಾನಕ್ರಮಗಳು ಎಲ್ಲೋ ಕೆಲವರಿಗೆ ಹೊಂದುತ್ತವೆ. ಬಹುತೇಕರಿಗೆ ಅವು ಅತ್ಯಂತ ಅಪಾಯಕಾರಿ. ತನ್ನನ್ನು ಅಳಿಸಿಕೊಳ್ಳುವ ಯೋಗಕ್ಕಿಂತ ತನ್ನನ್ನು ಅಳಿಸದೆ ಕೂಡುವ ಯೋಗವೇ ಮೇಲೆಂದು ಅಲ್ಲಮನೂ ಹೇಳಿದ್ದಾನೆ

`ಯಮನಿಯಮ ಧ್ಯಾನಧಾರಣ ಸಮಾಧಿ ಎಂಬೆರಡರಲ್ಲಿ ಎರಡು ಯೋಗವುಂಟು; ಅಳಿದು ಕೂಡುವ ಯೋಗ, ಅಳಿಯದೆ ಕೂಡುವ ಯೋಗ. ಇವೆರಡರಲ್ಲಿ ಅಳಿಯದೆ ಕೂಡುವ ಯೋಗವರಿದು ಕಾಣಾ ಗೊಗ್ಗೇಶ್ವರ' .ಹಲವು ಥರದ ಸಾಧನೆಗಳಲ್ಲಿ ಹಲವು ತೆರನ ಫಲಗಳನ್ನೂ ತೊಂದರೆಗಳನ್ನೂ ಉಂಡ ನನ್ನ ಅನುಭವದ ಆಧಾರದ ಮೇಲೆ ಎಲ್ಲಾ ಸ್ಥಿತಿಗಳಲ್ಲೂ ಎಲ್ಲರಿಗೂ ಲಾಭ ನೀಡುವ ಮೂರು ಧ್ಯಾನಕ್ರಮಗಳನ್ನು ಇಲ್ಲಿ ವಿವರಿಸುತ್ತಿದ್ದೇನೆ.ಒಂದು ಸೂಫಿ ಕತೆಯಿದೆ. ಒಬ್ಬ ಸುಲ್ತಾನನನಿಗೆ ಧ್ಯಾನದ ಖಯಾಲಿ ಬಂತು. ಅವನು ಈ ಬಗ್ಗೆ ತನ್ನ ಮುರ್ಷೀದನಿಗೆ ತಿಳಿಸಿದ. ಆತ ಸುಲ್ತಾನನಿಗೆ ಒಂದು ಮಂತ್ರವನ್ನು ಬೋಧಿಸಿದ. ಅದನ್ನು ಹಿಡಿದು ಧ್ಯಾನಕ್ಕೆ ಕುಳಿತ ಸುಲ್ತಾನನಿಗೆ ಮಂತ್ರದ ಬದಲಿಗೆ ತನ್ನ ಮೆಚ್ಚಿನ ರಾಣಿಯ ಕೈಗಡಗವೇ ಕಣ್ಣಮುಂದೆ ಬಂದು ನಿಲ್ಲುತ್ತಿತ್ತು. ಇದು ಗೊತ್ತಾದಾಗ ತಿಳಿವಳಿಕಸ್ಥನಾದ ಮುರ್ಷೀದ, ಮಂತ್ರವನ್ನು ಬಿಟ್ಟು ಆ ಕೈಗಡಗದ ಮೇಲೇ ಮನಸ್ಸು ನೆಡುವಂತೆ ಹೇಳಿದ.ಹಾಗೆ ಮಾಡತೊಡಗಿದ ಕೂಡಲೇ ಸುಲ್ತಾನನ ಮನಸ್ಸು ಏಕಾಗ್ರತೆಯಲ್ಲಿ ನಿಂತಿತು. ಈ ಕತೆಯ ನೀತಿ ಸ್ಪಷ್ಟ. ತಮ್ಮನ್ನು ಆಕರ್ಷಿಸುವ ವಸ್ತುವಿನ ಬಗ್ಗೆ ಏಕಚಿತ್ತತೆ ಸಾಧಿಸುವುದು ಸುಲಭ. ನಮ್ಮೆಲ್ಲರಿಗೂ ಅತ್ಯಂತ ಪ್ರಿಯವಾದುವೆಂದರೆ ನಮ್ಮ ಶರೀರಗಳು. ಶರೀರದ ಜೊತೆಗೆ ತಳುಕು ಹಾಕಿಕೊಂಡಿದೆ ಹಲವು ಪೂರ್ವಗ್ರಹಗಳ, ಬೇಕುಬೇಡಗಳ ಮೊಟ್ಟೆಯಾದ ಮನಸ್ಸು. ಇವೆರಡರ ನಡುವಿನ ಸೇತುವೆ ನಮ್ಮ ಉಸಿರು. ಮೈಯಿ, ಉಸಿರು ಮತ್ತು ಪ್ರಾಣಗಳೇ ಎಲ್ಲರಿಗೂ ಹೊಂದುವ ಧ್ಯಾನವಸ್ತುಗಳು.ನಾನು ವಿವರಿಸಲಿರುವ ಮೊದಲ ಧ್ಯಾನಕ್ರಮ ಒಡಲಿನ ಪರಿವೆ. ಈ ಕ್ರಮವನ್ನು `ಬುದ್ಧಶಾಸ'ದಲ್ಲಿ `ಕಾಯಾನುಸ್ಸತಿ' ಎಂದು ಕರೆಯಲಾಗಿದೆ. ತಂತ್ರಗಳಲ್ಲಿ ಉಕ್ತವಾಗಿರುವ ನ್ಯಾಸಕ್ರಮ, ಇಂದು ಪ್ರಚಲಿತವಾದ ವಿಶ್ರಾಂತಿಕ್ರಮಗಳಿಗೂ ಒಡಲಿನ ಪರಿವೆಯೇ ಮೂಲ. ಪತಂಜಲಿ ಹೇಳುವ  `ಸ್ಥಿರಸುಖಮಾಸನಮ್' ಎಂಬುದಕ್ಕೂ ಇದೇ ಮೂಲ.ಬೆನ್ನು ಮೂಳೆಯನ್ನು ಆದಷ್ಟೂ ನೇರವಾಗಿಟ್ಟುಕೊಂಡು ನೆಲದ ಮೇಲೆ, ಕುರ್ಚಿಯಮೇಲೆ ಎಲ್ಲಿ ಅನುಕೂಲವಾಗುತ್ತದೋ ಅಲ್ಲಿ ಇದನ್ನು ಮಾಡಬಹುದು. ನೆಲದಲ್ಲಿ ಕೂತು ಮಾಡಲಿಚ್ಛಿಸುವವರು ಒಂದು ಕಂಬಳಿ ಅಥವಾ ಚಾಪೆಯ ಮೇಲೆ ಕೂತು ಮಾಡಬೇಕು. ಶರೀರದ ಯಾವ ಭಾಗವೂ ಥಂಡಿನೆಲದ ಜೊತೆಗೆ ನೇರ ಸಂಪರ್ಕವಿಲ್ಲದಂತೆ ನೋಡಿಕೊಳ್ಳುವುದು ಮುಖ್ಯ. ಅಂಗಾತವಾಗಿ ಮಲಗಿಯೂ ಇದನ್ನು ಮಾಡಬಹುದು. ಆದರೆ ನಿದ್ದೆ ಹೋಗದಂತೆ ಎಚ್ಚರ ವಹಿಸಬೇಕು. ಕುರ್ಚಿ ಮೇಲೆ ಕೂತವರು ಬೆನ್ನನ್ನು ಕುರ್ಚಿಯ ಬೆನ್ನಿಗೆ ಒರಗಿಸ ದಿರುವುದು ಮೇಲು. ಕೂತ ಭಂಗಿಯಲ್ಲಿ ಒಂದು ಅಂಗೈಯನ್ನು ಇನ್ನೊಂದು ಅಂಗೈಯ ಮೇಲಿಟ್ಟುಕೊಳ್ಳುವುದು ಅತ್ಯಂತ ಸುಲಭ ಮುದ್ರೆ.ಈ ಸ್ಥಿತಿಯಲ್ಲಿ ಆಮೆ ತನ್ನೆಲ್ಲಾ ಕಾಲುಗಳನ್ನೂ ತನ್ನೊಳಗೆಳೆದುಕೊಳ್ಳುವಂತೆ ಅತ್ತಿತ್ತ ಹರಿದಾಡುವ ಮನಸ್ಸನ್ನು ಮೈಯೊಳಗೆ ಎಳೆದು ಮಡಗಿಕೊಳ್ಳಬೇಕು. ಒಡಲು ನಿಶ್ಚಲವಾದಾಗ ಮನಸ್ಸೂ ನಿಧಾನಕ್ಕೆ ನಿಲುಗಡೆಗೆ ಬರುತ್ತದೆ. ತುಂಟಮಗುವಿನಂತಿರುವ ಮನಸ್ಸನ್ನು ಪುಸಲಾಯಿಸಿ ಒಡಲೊಳಗೆ ಸೆಳೆದುಕೊಳ್ಳುವುದು ಈ ಧ್ಯಾನದ ಶುರುವು. ಆ ನಂತರ ಶರೀರದ ಯಾವಯಾವ ಭಾಗ ಅಥವಾ ಭಾಗಗಳು ನಮ್ಮ ಗಮನ ಬೇಡುತ್ತವೋ ಅವುಗಳಲ್ಲಿ ಮನಸ್ಸನ್ನು ನಿಲ್ಲಿಸ ಬೇಕು.ಹೀಗೆ ಮನಸ್ಸು ಶರೀರದ ಮೇಲೆ ಸ್ವೇಚ್ಛೆಯಾಗಿ ಓಡಾಡಲು ಸ್ವಲ್ಪ ಹೊತ್ತು ಅನುವು ಮಾಡಿಕೊಟ್ಟು ಆಮೇಲೆ ಒಂದು ನಿರ್ದಿಷ್ಟ ಕ್ರಮದಲ್ಲಿ ಶರೀರದ ವಿವಿಧ ಅಂಗಗಳ ಮೇಲೆ ಮನಸ್ಸನ್ನು ಹರಿಸುತ್ತಾ ಹೋಗಬೇಕು. ಕಾಲು ಬೆರಳುಗಳಿಂದ ಶುರು ಮಾಡಿ ನೆತ್ತಿಯವರೆಗಿನ ಅಂಗಗಳನ್ನು ಮನಸ್ಸಲ್ಲಿ ಹೆಸರಿಸುತ್ತಾ ಹೋದರೆ ಹೆಸರಿಸಿದ ಆಯಾ ಭಾಗಗಳು ಹಗುರವಾಗುತ್ತಾ ಹೋಗುತ್ತವೆ. ಹೀಗೆ ಮೂರುನಾಲ್ಕು ಬಾರಿ ಮಾಡಿ ಆ ನಂತರ ಇಡೀ ಶರೀರದ ಮೇಲೆ ಮನಸ್ಸನ್ನು ಯಥಾಶಕ್ತಿ ನಿಲ್ಲಿಸಬೇಕು.ಹೀಗೆ ಒಡಲ ಪರಿವೆಯನ್ನು ಸ್ವತಂತ್ರ ಧ್ಯಾನ ಕ್ರಮವಾಗಿ ಮಾಡಬಹುದು. ಆದರೆ ಧ್ಯಾನದಿಂದ ಇನ್ನೂ ಹೆಚ್ಚು ಲಾಭ ಬಯಸುವವರು ಮುಂದುವರಿದು ಉಸಿರಿನ ಧ್ಯಾನಕ್ಕೆ ಹೋಗಬೇಕು. ಇದನ್ನು ಬುದ್ಧ ಪರಿಭಾಷೆಯಲ್ಲಿ ಆನಪಾನ ಸತಿ ಎನ್ನಲಾಗಿದೆ. ಜೈನರು ಇದನ್ನು ಶ್ವಾಸ ಪ್ರೇಕ್ಷಾ ಅನ್ನುತ್ತಾರೆ. ಸತಿ, ಪ್ರೇಕ್ಷಾ ಪದಗಳ ಅರ್ಥ ನಿಗಾ, ಗಮನ.ಈ ಧ್ಯಾನದ ಸಾರವೆಂದರೆ ತಾನಾಗಿಯೇ ಉಛ್ವಾಸನಿಶ್ವಾಸಗಳಲ್ಲಿ ತೊಡಗಿರುವ ಉಸಿರನ್ನು ಯಾವುದೇ ರೀತಿಯಲ್ಲಿ ನಿಯಂತ್ರಿಸದೆ ಅದು ಒಳಹೋಗುವ ಹೊರಹೊರಡುವ ಗತಿಯನ್ನು ನಿಗಾ ಮಾಡುತ್ತಾ ಹೋಗುವುದು. ಅಂದರೆ ಉಸಿರಾಟವನ್ನೇ ಧ್ಯಾನವಸ್ತುವಾಗಿ ಸ್ವೀಕರಿಸುವುದು. ಹೀಗೆ ಮಾಡುವಾಗ ಬಹಳ ಸುಲಭವಾಗಿ ಚಂಚಲವಾದ ಮನಸ್ಸು ಧ್ಯಾನ ವಸ್ತುವನ್ನು ಬಿಟ್ಟು ತನ್ನ ತ್ರಿಲೋಕ ಸಂಚಾರ ಮಾಡಹೊರಡುತ್ತದೆ. ಆಗ ತೀರಾ ಬಲವಂತ ಮಾಡದೆ ಉಪಾಯವಾಗಿ ಅದನ್ನು ಉಸಿರ ಕಡೆಗೆ ವಾಪಸ್ ತರಬೇಕು.ಮನಸ್ಸಿನ ಚಾಂಚಲ್ಯ ಅದರ ಚಲನಶೀಲತೆ. ಆದ್ದರಿಂದ ಅದನ್ನು ಹತ್ತಿಕ್ಕುವುದು ಅಪಾಯಕಾರಿ. ಹೀಗಾಗಿ ಚಲನಶೀಲವಾದ ಮನಸ್ಸನ್ನು ನಿಲ್ಲಿಸದೆ ಅದನ್ನು ಚಲನಶೀಲವಾದ ಉಸಿರಿನಂಥ ಧ್ಯಾನವಸ್ತುವಿನ ಜೊತೆಗೆ ಚಲಿಸುವಂತೆ ಮಾಡುವುದು ಈ ಧ್ಯಾನದ ಮರ್ಮ. ಮನಸ್ಸು ತೀರಾ ಅತ್ತಿತ್ತ ಅಲೆಯತೊಡಗಿದರೆ ಇನ್ನೂ ಒಂದು ಉಪಾಯ ಮಾಡಿ. ಉಸಿರಾಟದ ಎಣಿಕೆಯನ್ನು ಪ್ರಾರಂಭಿಸಿ. ಉಛ್ವಾಸ ನಿಶ್ವಾಸಗಳ ಒಂದು ಚಕ್ರವನ್ನು ಒಂದು ಘಟಕವನ್ನಾಗಿ ಭಾವಿಸಿ ಉಸಿರಿನ ಎಣಿಕೆಗೆ ತೊಡಗ ಬಹುದು. ಆದರೆ ಹೀಗೆ ಮಾಡುವಾಗ ಹಿಮ್ಮುಖ ಎಣಿಕೆ ಮಾಡುವುದು ಮೇಲು. ಅಂದರೆ 108ರಿಂದ ಅಥವಾ ನಿಮಗೆ ಬೇಕಾದ ಯಾವುದೇ ಸಂಖ್ಯೆಯಿಂದ ಸೊನ್ನೆಯವರೆಗೆ  ಉಸಿರನ್ನು ಎಣಿಸುತ್ತಾ ಹೋಗಿ. ಎಣಿಕೆ ತಪ್ಪಿದರೆ ಭಯವಿಲ್ಲ. 108 ಅಥವಾ ನೀವೇ ನಿಗದಿ ಮಾಡಿಕೊಂಡ ಸಂಖ್ಯೆಯಿಂದ ಹಿಮ್ಮುಖ ಎಣಿಕೆಯನ್ನು ಮತ್ತೆ ಶುರು ಮಾಡಿ. ಬರುಬರುತ್ತಾ ಎಣಿಕೆ ತಪ್ಪುವುದು ನಿಲ್ಲುತ್ತದೆ. ಉಸಿರಾಟ ದೀರ್ಘವೂ ಆಳವೂ ಸೂಕ್ಷ್ಮವೂ ಆಗತೊಡಗುತ್ತದೆ.ಉಸಿರಿನ ಪರಿವೆಯನ್ನೂ ಒಂದು ಸ್ವತಂತ್ರ ಧ್ಯಾನವಿಧಾನವಾಗಿ ಮಾಡಿಕೊಳ್ಳಬಹುದು. ಆದರೆ ಧ್ಯಾನದ ಪೂರ್ಣಲಾಭವನ್ನು ಪಡೆಯಲು ಇನ್ನೂ ಮುಂದೆ ಹೋಗಿ ಮನಸ್ಸಿನ ಅನುಸಂಧಾನ ಮಾಡಬೇಕು. ಎಂತೆಲೇ ಮೂರನೆಯ ಧ್ಯಾನಕ್ರಮ ಚಿತ್ತಾನುಸಂಧಾನ ಅಥವಾ ಮನಸ್ಸಿನ ಪರಿವೆ. ಇದನ್ನು ಬೌದ್ಧರು ವಿಕಪ್ಪಾನುಸ್ಸತಿ ಅನ್ನುತ್ತಾರೆ. ಈ ಮೂರನೆಯ ಕ್ರಮಕ್ಕೆ ಕಾಲಿಡುವ ಮೊದಲು ದೇಹದ ಮತ್ತು ಉಸಿರಿನ ಪರಿವೆಗಳನ್ನು ಗಟ್ಟಿ ಮಾಡಿಕೊಳ್ಳಬೇಕು. ಅದಕ್ಕಾಗಿ ಕಡೇ ಪಕ್ಷ ಒಂದು ತಿಂಗಳಕಾಲ ತಲಾ ಅರ್ಧ ತಾಸಿನವರೆಗೆ ಒಡಲು ಮತ್ತು ಉಸಿರಿನ ಪರಿವೆಗಳನ್ನು ಪಕ್ಕಾ ಮಾಡಿಕೊಳ್ಳಬೇಕು.ಚಿತ್ತಾನುಸಂಧಾನಕ್ಕೆ ದೊಡ್ಡ ಅಡ್ಡಿಯೆಂದರೆ ಕೆಲವು ಆಧ್ಯಾತ್ಮವಿಕಾರಿಗಳೂ ಸೇರಿದಂತೆ ಹಲವರಿಗಿರುವ ಮನಸ್ಸಿನ ಬಗೆಗಿನ ಮೂಢನಂಬಿಕೆ. ಈ ದೃಷ್ಟಿಯನುಸಾರ ಚಾಂಚಲ್ಯ ಒಂದು ಶಾಪ. ಆದರೆ ಕಾಶ್ಮೀರ ಶೈವದರ್ಶನಗಳು ಹೇಳುವ ಹಾಗೆ ಮನಸ್ಸಿನ ಅಲೆಮಾರಿತನ ಅದರ ಸರ್ವೋಪರಿ ಶಕ್ತಿಯಾದ ಸ್ವಾತಂತ್ರ್ಯಶಕ್ತಿಯ ಕುರುಹು. ಇದರ ಇನ್ನೊಂದು ಹೆಸರು ಸರ್ವಸಿದ್ಧಿಹೇತುವಾದ ಪ್ರತಿಭೆ.  ಚಿತ್ತಾನುಸಂಧಾನದ ನೆರವಿನಿಂದ ಪೂರ್ವನಿಯಂತ್ರಿತ ಪ್ರಭಾವಗಳ ಗುಲಾಮನಾಗಿರುವ ಮನಸ್ಸಿನ ಮಹಾನ್ ಶಕ್ತಿಯನ್ನು ನಮಗೊಳಿತಾದ ಬಗೆಗಳಲ್ಲಿ ತೊಡಗಿಸಲು ಸಾಧ್ಯ.ಒಡಲು ಮತ್ತು ಉಸಿರಿನ ಪರಿವೆಗಳು ದೃಢವಾದ ಮೇಲೆ ಚಿತ್ತಾನುಸಂಧಾನವನ್ನು ಆರಂಭಿಸಬಹುದು. ನಮಗೆ ಸುಖಕರವಾದ ಮೇಲೆ ಸೂಚಿಸಿದ ಆಸನ/ಶಯನದ ಭಂಗಿಯಲ್ಲಿ ತುಸು ಹೊತ್ತು ಒಡಲ ಪರಿವೆ ಮತ್ತು ಉಸಿರಿನ ಪರಿವೆಯನ್ನು ಮಾಡಿ ಆ ನಂತರ ಮನಸ್ಸಿನ ಕಡೆ ಗಮನ ನೆಡಬೇಕು. ಇದು ಕನ್ನಡಿ ಕನ್ನಡಿಯನ್ನೇ ನೋಡಿಕೊಳ್ಳುವ ಹಾಗೆ. ಸಹಜವಾಗಿಯೇ ಮನಸ್ಸು ಎಲ್ಲೆಲ್ಲೋ ಓಡುತ್ತಿರುತ್ತದೆ. ಅದನ್ನು ಯಾವುದೇ ರೀತಿಯಲ್ಲಿ ಹತ್ತಿಕ್ಕದೆ ಆಡುವ ಮಗುವನ್ನು ತಾಯಿ ಅನುಸರಿಸುವ ಹಾಗೆ ನಾವದನ್ನು ಅನುಸರಿಸಬೇಕು. ಹೀಗೆ ಸ್ವಲ್ಪಕಾಲ ಅದನ್ನು ಗಮನಪೂರ್ವಕವಾಗಿ ಅಲೆಯಬಿಟ್ಟರೆ ಅದಕ್ಕೆ ಸುಸ್ತಾಗತೊಡಗಿ ತಾನೇ ನಿಲ್ಲಬಯಸುತ್ತದೆ.ಈ ಗಳಿಗೆಗಾಗಿ ಕಾದು ಅದಾದಕೂಡಲೆ ಮನಸ್ಸಿಗೆ ಒಂದು ಧ್ಯಾನವಿಷಯ ನೀಡಬೇಕು. ನನ್ನ ಅನುಭವದ ಪ್ರಕಾರ ಮನಸ್ಸು ಯಾವ ವಿಷಯಗಳನ್ನು ಅತ್ಯಂತ ಹೇಸಿಗೆಯಿಂದ ನೋಡುತ್ತದೋ ಅದರ ಮೇಲೆ ಮನಸು ನಿಲ್ಲುವಂತೆ ಮಾಡಬೇಕು. ಉದಾಹರಣೆಗೆ ಒಬ್ಬನಿಗೆ ಅತ್ಯಂತ ಹೇಸಿಗೆಯ ವಿಷಯ ತನ್ನ ಒಬ್ಬ ಸಹೋದ್ಯೋಗಿಯಿರಬಹುದು. ಅಥವಾ ತನ್ನ ಅತ್ತೆಯೋ ಮಾವನೋ ಇರಬಹುದು. ಅವರವರ ಅನುಭವದ ಪ್ರಕಾರ ಆಯಾ ವರ್ಜಿತ ವಿಷಯಗಳನ್ನು ಧ್ಯಾನಿಸಿ ಆ ಬಳಿಕ ನಮಗೆ ಹಿಡಿಸುವ ವ್ಯಕ್ತಿವಿಷಯಗಳ ಬಗ್ಗೆ ದೀರ್ಘಕಾಲ ಮನಸ್ಸನ್ನು ನೆಡಬಹುದು.ಅಮೇಲೆ ನಮಗೆ ಬೇಕಾದ ಸನ್ನಿವೇಶಗಳನ್ನು ಮನೋಭಿತ್ತಿಯಲ್ಲಿ ಅತ್ಯಂತ ವಿವರಪೂರ್ವಕವಾಗಿ ಚಿತ್ರಿಸಿಕೊಳ್ಳಬಹುದು. ಆದರೆ ಒಂದು ಎಚ್ಚರಿಕೆ. ನಮ್ಮನಮ್ಮಗಳ ಹಿತವನ್ನು ಕಲ್ಪಿಸಿಕೊಳ್ಳುವ ಹಕ್ಕು ನಮಗಿದೆಯಾದರೂ ಇತರರ ಕೇಡನ್ನು ಕಲ್ಪಿಸಲು ಯತ್ನಿಸಬಾರದು. ಹಾಗೆ ಮಾಡಿದರೆ ನಾವೆಲ್ಲರೂ ಭಸ್ಮಾಸುರರಾಗಿಬಿಡುತ್ತೇವೆ.ಈ ಕ್ರಮಗಳ ನಿಯಮಿತ ಅಭ್ಯಾಸದ ಮೂಲಕ ಎಲ್ಲರೂ ತಮ್ಮ ಸಹಜ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಬಹುದು. ಈ ಸಾಧನೆ ನಮ್ಮಲ್ಲಿ ನೆಲೆನಿಂತ ಮೇಲೆ ನಾವೆಲ್ಲರೂ ನಮಗೆ ಗುರುವಾಗಿ ಅಲ್ಲಮ ಹೇಳುವ ಅನಿಮಿಷಯೋಗಿಳಾಗಬಹುದು ಅಥವಾ ಅಭಿನವಗುಪ್ತ ಹೇಳಿದ ಅನುತ್ತರ ಯೋಗಿಗಳಾಗಬಹುದು.ಮರ್ತ್ಯಲೋಕವೇ ಕರ್ತಾರನ ಕಮ್ಮಟವಾಗಿರುವುದರಿಂದ,  ಈ ಲೋಕದೊಳಗೇ ಅನಂತಲೋಕಗಳಿರುವ ಪರಿಯನ್ನೂ ಆ ಪರಿಯಿಂದ ಉಂಟಾಗುವ ಕಾಯಬೆರೆಸಿದ ಕೈಲಾಸದ ಅನುಭವವವನ್ನೂ ಪಡೆಯಲು ಈ ಮೂರು ಧ್ಯಾನಕ್ರಮಗಳು ಮೂರು ಬಾಗಿಲುಗಳು.

  - ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.