ಗುರುವಾರ , ಜೂಲೈ 2, 2020
27 °C

ನಮೋ... ಮಂದಿರ ಮಂತ್ರ

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ನಮೋ... ಮಂದಿರ ಮಂತ್ರ

`ರೋಮ್ ಹೊತ್ತಿ ಉರಿಯುವಾಗ ನೀರೊ ಪಿಟೀಲು ಬಾರಿಸುತ್ತಿದ್ದನಂತೆ'! ನಮ್ಮ ಬಿಜೆಪಿ ನಾಯಕರು ಅದೇ ಕೆಲಸ ಮಾಡುತ್ತಿದ್ದಾರೆ. ಪ್ರವಾಹಕ್ಕೆ ಸಿಕ್ಕಿ ತತ್ತರಿಸಿರುವ ಉತ್ತರಾಖಂಡ ಪುನಃ ಎದ್ದು ನಿಲ್ಲಲು ಹೋರಾಡುತ್ತಿರುವಾಗ `ಅಯೋಧ್ಯೆ ವಿವಾದ' ಕೆದಕುತ್ತಿದ್ದಾರೆ. ಹೋದ ವಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿಷ್ಠಾವಂತ ಬಂಟ ಅಮಿತ್ ಷಾ ರಾಮಮಂದಿರ ನಿರ್ಮಾಣ ಮಾಡುವ ಮಾತುಗಳನ್ನಾಡಿದ್ದಾರೆ.ಅಮಿತ್ ಷಾ ಅಯೋಧ್ಯೆಗೆ ಹೋಗಿದ್ದು ಸರಿಯೇ? ಮಂದಿರ ನಿರ್ಮಿಸುವ ಮಾತುಗಳನ್ನಾಡಿದ್ದು ಸೂಕ್ತವೇ? ಈ ಭೇಟಿ ಹಿಂದೆ `ರಹಸ್ಯ ರಾಜಕೀಯ ಕಾರ್ಯಸೂಚಿ' ಇರಬಹುದೆ? ಕೆಲ ಕಾಲದಿಂದ ನೇಪಥ್ಯಕ್ಕೆ ಸರಿದಿದ್ದ ರಾಮ `ದಿಢೀರನೆ ಪ್ರತ್ಯಕ್ಷ'ವಾಗಿದ್ದು ಹೇಗೆ? ಚುನಾವಣೆಗಳು ಸಮೀಪಿಸಿದಾಗ ಮಾತ್ರ ರಾಮ ನೆನಪಾಗುವುದು ಏಕೆ? ಇವೆಲ್ಲ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳದಷ್ಟು ನಮ್ಮ ಜನ ದಡ್ಡರಲ್ಲ.ಬಾಬ್ರಿ ಮಸೀದಿ- ರಾಮಮಂದಿರ ವಿವಾದದ `ಅಗ್ನಿಕುಂಡ'ವನ್ನು ಒಡಲಲ್ಲಿಟ್ಟುಕೊಂಡು ಬೇಯುತ್ತಿರುವ ಉತ್ತರ ಪ್ರದೇಶ, ದೇಶದ ರಾಜಕಾರಣದ ದೃಷ್ಟಿಯಿಂದ ಅತ್ಯಂತ ಪ್ರಮುಖ ರಾಜ್ಯ. 80 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. `ಈ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯುವ ಪಕ್ಷ ದೆಹಲಿಯಲ್ಲಿ ಅಧಿಕಾರ ಹಿಡಿಯಲಿದೆ' ಎನ್ನುವುದು ಸಾಮಾನ್ಯ ನಂಬಿಕೆ. ಅನೇಕ ಸಲ ಅದು ನಿಜವಾಗಿದೆ. ಈ ಕಾರಣಕ್ಕೆ ಬಿಜೆಪಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಎಲ್ಲ ವಿಧದ ಕಸರತ್ತುಗಳನ್ನು ಮಾಡುತ್ತಿದೆ.ಹಿಂದಿನ ಎರಡು ಲೋಕಸಭೆ ಚುನಾವಣೆಯಲ್ಲಿ ಸೋತು ಸೊರಗಿರುವ ಬಿಜೆಪಿಗೆ ಈಗ ಮೋದಿ ಏಕೈಕ ಆಶಾಕಿರಣ. ಒಂಬತ್ತು ವರ್ಷದಿಂದ `ರಾಜಕೀಯ ವನವಾಸ' ಅನುಭವಿಸಿರುವ ಪಕ್ಷವನ್ನು ಗೆಲ್ಲಿಸಬಲ್ಲ ಸಾಮರ್ಥ್ಯ ಇರುವುದು ಅವರಿಗೆ ಮಾತ್ರ ಎನ್ನುವುದು ಬಹುತೇಕ ನಾಯಕರ ವಿಶ್ವಾಸ. ಈಗ ಅವರೊಬ್ಬ ಪ್ರಶ್ನಾತೀತ ನಾಯಕ. ಪಕ್ಷದೊಳಗೆ ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆಂದರೆ ಅವರನ್ನು ವಿರೋಧಿಸುವ ಧೈರ್ಯ ಯಾರಿಗೂ ಇಲ್ಲ. ವಿರೋಧಿಸಿದರೆ ಉಳಿಯುವುದೂ ಕಷ್ಟ. ಅವರ ಮಾತಿಗೆ ಬೆಲೆ ಎಷ್ಟಿದೆ ಎನ್ನುವುದಕ್ಕೆ ಷಾ ಉದಾರಣೆಯೊಂದೇ ಸಾಕು.ಮೊನ್ನೆವರೆಗೆ ಗುಜರಾತಿಗೆ ಸೀಮಿತವಾಗಿದ್ದ ಷಾ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಉತ್ತರ ಪ್ರದೇಶದ ಜವಾಬ್ದಾರಿಯೂ ಸಿಕ್ಕಿದೆ. ಇವೆಲ್ಲ ಸಾಧ್ಯವಾಗಿದ್ದು ಮೋದಿ `ಆಶೀರ್ವಾದ'ದಿಂದ. ಗುಜರಾತ್ ಮುಖ್ಯಮಂತ್ರಿ ಆಯಕಟ್ಟಿನ ಸ್ಥಳಗಳಲ್ಲಿ ನಂಬಿಕಸ್ಥ ಶಿಷ್ಯರನ್ನು ಇಟ್ಟುಕೊಂಡಿದ್ದಾರೆ. ತಮ್ಮ ರಾಜ್ಯದಲ್ಲಿ ಬಳಸಿದ ಚುನಾವಣೆ ತಂತ್ರಗಳನ್ನೇ ಎಲ್ಲ ಕಡೆಗೂ ವಿಸ್ತರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿಯವರ ಅಚ್ಚುಮೆಚ್ಚಿನ ಶಿಷ್ಯ ಷಾ. ಎಂಟು ತಿಂಗಳ ಹಿಂದೆ ಮುಗಿದ ಗುಜರಾತ್ ಚುನಾವಣೆಗೂ ಷಾ ಅವರದ್ದೇ `ಮಾಸ್ಟರ್ ಮೈಂಡ್'. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲೂ ಅವರದ್ದೇ ಪ್ರಮುಖ ಪಾತ್ರ.ಉತ್ತರ ಪ್ರದೇಶದಲ್ಲೂ ತಮ್ಮ ಶಿಷ್ಯ ಏನಾದರೂ `ಚಮತ್ಕಾರ' ಮಾಡಬಹುದೆಂಬ ನಂಬಿಕೆ ಮೇಲೆ ಅವರಿಗೆ ಮೋದಿ ದೊಡ್ಡ ಹೊಣೆಗಾರಿಕೆ ಕೊಡಿಸಿದ್ದಾರೆ. ಲೋಕಸಭೆಯ ಒಟ್ಟು ಕ್ಷೇತ್ರಗಳಲ್ಲಿ ಅರ್ಧದಷ್ಟಾದರೂ ಗೆಲ್ಲಬೇಕೆಂದು `ಟಾರ್ಗೆಟ್' ನೀಡಲಾಗಿದೆ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಉತ್ತರ ಪ್ರದೇಶದ ರಾಜಕಾರಣ ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ. ಮತದಾರರ ಒಲವು- ನಿಲುವುಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಸ್ಥಳೀಯವಾಗಿ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಪ್ರಬಲವಾಗಿವೆ. ಕಾಂಗ್ರೆಸ್‌ಗೂ ನಿರ್ದಿಷ್ಟ ಮತದಾರರಿದ್ದಾರೆ.ಈ ಸತ್ಯ ಅರ್ಥ ಮಾಡಿಕೊಂಡೇ ಅಯೋಧ್ಯೆಗೆ ಅಮಿತ್ ಷಾ ಹೋಗಿದ್ದಾರೆ. ರಾಮಮಂದಿರ ನಿರ್ಮಿಸುವ ಮಾತನ್ನು ಪುನರುಚ್ಚರಿಸಿದ್ದಾರೆ. ಧರ್ಮದ ತಳಹದಿ ಮೇಲೆ ಮತಗಳನ್ನು ಒಡೆದು, ಹಿಂದೂ ಮತಗಳನ್ನು ಧ್ರುವೀಕರಿಸುವ `ಪೊಲಿಟಿಕಲ್ ಗಿಮಿಕ್'ಗೆ ಕೈಹಾಕಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಉಳಿದ ಪಕ್ಷಗಳು ಬಿಜೆಪಿ ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕುತ್ತಿವೆ. ಅಯೋಧ್ಯೆ ವಿವಾದವೀಗ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ವಿವಾದಿತ ಸ್ಥಳದಲ್ಲಿ `ಯಥಾಸ್ಥಿತಿ' ಕಾಪಾಡುವಂತೆ ನ್ಯಾಯಾಲಯ ಹೇಳಿದೆ.ಹೀಗಿದ್ದರೂ ಬಿಜೆಪಿ, ಸಂಘ ಪರಿವಾರದ ನಾಯಕರು ಅನಗತ್ಯವಾಗಿ ಅಯೋಧ್ಯೆ ವಿವಾದ ಕೆದಕುತ್ತಿದ್ದಾರೆ. ದೇಶದ ಅತ್ಯುನ್ನತ ನ್ಯಾಯಾಲಯದ ಆದೇಶದ ಬಳಿಕವೂ ವಿವಾದಿತ ಸ್ಥಳಕ್ಕೆ ಹೋಗುವುದು, ಮಂದಿರ ನಿರ್ಮಾಣ ಕುರಿತು ಹೇಳಿಕೆ ಕೊಟ್ಟು, ವಾತಾವರಣ ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಜ್ಞಾವಂತ ನಾಗರಿಕರು ಯಾರೂ ಇಂಥ ನಡವಳಿಕೆ ಒಪ್ಪುವುದಿಲ್ಲ. ಇದ್ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳುವವರಲ್ಲ. ಅವರ ಈ ನಡವಳಿಕೆ ಹೊಸದಲ್ಲ.1992ರ ಡಿಸೆಂಬರ್ 6ರಂದು ಅವರು ಹೇಳಿದ್ದೇನು? ಮಾಡಿದ್ದೇನು? ಎಂದು ಜಗತ್ತಿಗೆ ಗೊತ್ತಿದೆ.ಉತ್ತರ ಪ್ರದೇಶದ ಆಗಿನ ಬಿಜೆಪಿ ಸರ್ಕಾರ ಬಾಬ್ರಿ ಮಸೀದಿ ಸಂರಕ್ಷಣೆ ಮಾಡುವುದಾಗಿ ನ್ಯಾಯಾಲಯಕ್ಕೆ ಲಿಖಿತವಾಗಿ ಮುಚ್ಚಳಿಕೆ ಕೊಟ್ಟು ಹೇಗೆ ನಡೆದುಕೊಂಡಿತು ಎನ್ನುವುದನ್ನು ಇತಿಹಾಸ ಹೇಳುತ್ತದೆ. ಕೋರ್ಟ್ ತೀರ್ಪು- ನೆಲದ ಕಾನೂನಿಗೆ ಯಾವ ರೀತಿ ಮನ್ನಣೆ ಸಿಕ್ಕಿತು ಎನ್ನುವುದಕ್ಕೆ ಇದು ಸಾಕ್ಷಿ. ಮಸೀದಿ ನೆಲಸಮದ ಪಾಪದಲ್ಲಿ ಉತ್ತರ ಪ್ರದೇಶ ಸರ್ಕಾರ ಮಾತ್ರ ಭಾಗಿಯಲ್ಲ. ಅಷ್ಟೇ ಸಮಪಾಲು ಆಗಿನ ಕೇಂದ್ರ ಸರ್ಕಾರದ್ದು. ಪಿ.ವಿ.ನರಸಿಂಹ ರಾವ್ ಸರ್ಕಾರ ಮನಸ್ಸು ಮಾಡಿದ್ದರೆ ಮಸೀದಿ ಉಳಿಸಬಹುದಿತ್ತು. ಏಕೋ ಏನೋ ತಟಸ್ಥವಾಯಿತು. `ಮಸೀದಿ ನೆಲಸಮದ ಪಾಪದ ಕಲೆ' ಎರಡೂ ಪ್ರಮುಖ ಪಕ್ಷಗಳ ಮುಖಂಡರ ಕೈಗೂ ಅಂಟಿಕೊಂಡಿದೆ.ಶೇಕ್ಸ್‌ಪಿಯರ್‌ನ `ಮ್ಯಾಕ್‌ಬೆತ್' ನಾಟಕದಲ್ಲಿ ಲೇಡಿ ಮ್ಯಾಕ್‌ಬೆತ್ ಹೇಳುವ `ಪಾಪ ಪ್ರಜ್ಞೆ'ಯ ಮಾತೊಂದು ಸರ್ವಕಾಲಕ್ಕೂ ಪ್ರಸ್ತುತ. ಈ ಸಂದರ್ಭಕ್ಕೂ ಅನ್ವಯವಾಗುತ್ತದೆ. ಮನೆಗೆ ಅತಿಥಿಯಾಗಿ ಬಂದ ರಾಜನನ್ನು ಕೊಂದ ಬಳಿಕ ಅವಳಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪಪಡುತ್ತಾಳೆ. `ಕೈಗೆ ಮೆತ್ತಿದ ಪಾಪದ ಕಲೆಗಳನ್ನು ತೊಳೆಯಲು ಅರಬ್ ರಾಷ್ಟ್ರಗಳ ಎಲ್ಲ ಸುಗಂಧ ದ್ರವ್ಯಗಳಿಂದಲೂ ಸಾಧ್ಯವಿಲ್ಲ' ಎಂದು ಮರಗುತ್ತಾಳೆ. ಬಾಬ್ರಿ ಮಸೀದಿ ನೆಲಸಮಗೊಳಿಸಿದ ನಮ್ಮವರ ಪಾಪ ಇದ್ಯಾವುದಕ್ಕಿಂತಲೂ ಕಡಿಮೆ ಅಲ್ಲ. ಹನ್ನೆರಡು ವರ್ಷಗಳ ಹಿಂದೆ `ತಾಲಿಬಾನ್ ಉಗ್ರರು' ಆಫ್ಘಾನಿಸ್ತಾನದ ಬಮಿಯಾನ್ ಪ್ರಾಂತ್ಯದಲ್ಲಿ `ಬುದ್ಧ ಪ್ರತಿಮೆ' ಸ್ಫೋಟಿಸಿದ ಘಟನೆಗಿಂತ ಮಸೀದಿ ನೆಲಸಮ ಭಿನ್ನವೇನಲ್ಲ.ತಲೆತಿರುಕ ತಾಲಿಬಾನಿಗಳು 1500 ವರ್ಷ ಹಳೆಯದಾದ 165 ಅಡಿ ಎತ್ತರದ ಬುದ್ಧನ ವಿಗ್ರಹವನ್ನು 2001ರಲ್ಲಿ ಸ್ಫೋಟಿಸಿದರು. ಮಾನವತಾವಾದಿ ಬುದ್ಧ ಅವರಿಗೆ ಮಾಡಿದ ದ್ರೋಹವಾದರೂ ಏನು? ಅಷ್ಟೊಂದು ಅನಾಗರಿಕವಾಗಿ ಅವರು ನಡೆದುಕೊಳ್ಳಬೇಕಿತ್ತೆ? ವಿಶ್ವಸಂಸ್ಥೆ ಆಗಿನ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಸೇರಿದಂತೆ ವಿಶ್ವದ ನಾಯಕರ ಮಾತಿಗೆ ಕವಡೆ ಕಾಸಿನ ಬೆಲೆ ಕೊಡಲಿಲ್ಲ. ಮಸೀದಿ ವಿಷಯದಲ್ಲೂ ಆಗಿದ್ದು ಇದೇ. `ಮಸೀದಿ ನೆಲಸಮ ಬೇಡ'ವೆಂಬ ಮನವಿಗಳನ್ನು ಕರಸೇವಕರು ಕಿವಿಗೆ ಹಾಕಿಕೊಳ್ಳಲಿಲ್ಲ. ಕನಿಷ್ಠಪಕ್ಷ ಕೋರ್ಟ್‌ಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕೆಂಬ ಕನಿಷ್ಠ ತಿಳವಳಿಕೆಯೂ ಅವರಿಗಿರಲಿಲ್ಲ.`ದೇವನೊಬ್ಬ ನಾಮ ಹಲವು' ಎಂದು ಜಗತ್ತಿಗೆ ಸಾರಿ ಹೇಳಿದ ಅನೇಕ ದಾರ್ಶನಿಕರು ಬಾಳಿ- ಬದುಕಿದ ನಾಡಿದು. ಅವರು ಎತ್ತಿ ಹಿಡಿದ ಮೌಲ್ಯಗಳನ್ನಾದರೂ ಗೌರವಿಸಬೇಕಿತ್ತು. ಸಂಸ್ಕೃತಿ- ನಾಗರಿಕತೆ ಮುಂದುವರಿದಂತೆ ನಾವು ಹೆಚ್ಚು ಸುಸಂಸ್ಕೃತರು, ಸೂಕ್ಷ್ಮಮತಿಗಳು ಆಗಬೇಕು. ಹಿಂದೂಗಳಿರಲಿ, ಮುಸ್ಲಿಮರಿರಲಿ ಅಥವಾ ಕ್ರೈಸ್ತರೇ ಆಗಿರಲಿ ಜಾತಿ- ಧರ್ಮ ಇಲ್ಲವೇ ಸಂಸ್ಕೃತಿ ಹೆಸರಿನಲ್ಲಿ ದಾಳಿ ಮಾಡುವುದು ಬರ್ಬರತೆ. `ಮನುಷ್ಯ ಧರ್ಮಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ' ಎಂಬ ಪ್ರಜ್ಞೆ ಮುಖ್ಯ. ಆದರೆ, ಈಗ ನಡೆದಿರುವುದು ತದ್ವಿರುದ್ಧ.`ಯಾವುದೋ ಕಾಲದಲ್ಲಿ ಮಂದಿರ ಕೆಡವಿ ಮಸೀದಿ ಕಟ್ಟಲಾಗಿದೆ. ಅದಕ್ಕಾಗಿ ನಾವು ಮಸೀದಿ ನೆಲಸಮ ಮಾಡಿದ್ದೇವೆ. ಈ ಜಾಗದಲ್ಲಿ ಮತ್ತೆ ಮಂದಿರ ನಿರ್ಮಾಣ ಮಾಡುತ್ತೇವೆ' ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ದೇಶದ ಬಹುತೇಕ ಜನ ಈ ಪ್ರತಿಪಾದನೆ ಬೆಂಬಲಿಸುವುದಿಲ್ಲ. ಬೇಕಾದರೆ ಈ ಬಗ್ಗೆ ಒಂದು ಸಮೀಕ್ಷೆಯೇ ನಡೆಯಲಿ. ಗ್ರಾಮೀಣ ಪ್ರದೇಶದ ಅನಕ್ಷರಸ್ಥರೂ ಸಂಘ ಪರಿವಾರದ ವಾದವನ್ನು ಸಮರ್ಥಿಸುವುದಿಲ್ಲ.ಅಯೋಧ್ಯೆ ವಿವಾದಕ್ಕೆ ಶತಮಾನದ ಇತಿಹಾಸವಿದ್ದರೂ, ನಾಲ್ಕು ದಶಕದ ಹಿಂದೆ 84ರಲ್ಲಿ `ವಿಶ್ವ ಹಿಂದೂ ಪರಿಷತ್' (ವಿಎಚ್‌ಪಿ) ಮೊದಲ `ಧರ್ಮ ಸಂಸತ್'ನಲ್ಲಿ ಸರ್ವಾನುಮತದ ನಿರ್ಣಯವಾಯಿತು. ಆಮೇಲೆ ರಾಮಜನ್ಮಭೂಮಿ ಕೂಗಿಗೆ ಬಲ ಬಂದಿದ್ದು. ಬಿಜೆಪಿ ರಾಮಜನ್ಮಭೂಮಿ ಆಂದೋಲನ ಮುನ್ನಡೆಸಿತು. ಹಿರಿಯ ನಾಯಕ ಎಲ್.ಕೆ. ಅಡ್ವಾಣಿ 1990ರಲ್ಲಿ `ರಥಯಾತ್ರೆ' ಮಾಡಿದರು. ಯಾತ್ರೆ ಮಧ್ಯದಲ್ಲೇ ಅವರನ್ನು ಬಂಧಿಸಲಾಯಿತು. ಇದಾದ ಎರಡೇ ವರ್ಷದಲ್ಲಿ ಮಸೀದಿ ನೆಲಸಮಗೊಂಡು ಜನರ ಮನಸಿನಲ್ಲಿ ಉಳಿಯಿತು.84ರಲ್ಲಿ ಎರಡು ಸ್ಥಾನಗಳಿದ್ದ ಬಿಜೆಪಿ ಐದು ವರ್ಷದಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಂಡಿತು. 96ರಲ್ಲಿ 161 ಸ್ಥಾನಗಳನ್ನು ಗೆದ್ದು 13 ದಿನ ಆಡಳಿತ ನಡೆಸಿತು. ಎರಡು ವರ್ಷದಲ್ಲಿ  173 ಸೀಟು ಪಡೆದು 14 ಪಕ್ಷಗಳ ಸಹಕಾರದೊಂದಿಗೆ ಅಧಿಕಾರ ಹಿಡಿಯಿತು. ಮರುವರ್ಷ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಅಧಿಕಾರಕ್ಕೆ ಬಂತು. `ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ಬೆಳೆದಿದ್ದು ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದದಿಂದಲ್ಲ. ಉಳಿದೆಲ್ಲ ಪಕ್ಷಗಳ ವೈಫಲ್ಯದಿಂದ' ಎನ್ನುವುದರಲ್ಲಿ ಅನುಮಾನವಿಲ್ಲ.ಐದು ವರ್ಷದ ಎನ್‌ಡಿಎ ಸರ್ಕಾರವಿದ್ದಾಗ (1999-2004) ರಾಮಮಂದಿರ ಕುರಿತು ಚಕಾರ ಎತ್ತಲಿಲ್ಲ. ಇದು ಅವಕಾಶವಾದಿ ರಾಜಕಾರಣವಲ್ಲದೆ ಮತ್ತೇನಲ್ಲ. ಈಗ ಮತ್ತೆ ಲೋಕಸಭೆ ಚುನಾವಣೆ ಬಂದಿದೆ. ಸಂಘ- ಪರಿವಾರಕ್ಕೆ ಮರೆತು ಹೋಗಿದ್ದ ರಾಮ ನೆನಪಾಗಿದ್ದಾನೆ. ಮೋದಿ ಬಂಟ ಅಮಿತ್ ಷಾ ಜತೆಗೆ ವಿಶ್ವ ಹಿಂದೂ ಪರಿಷತ್ ಸಹ ಮಂದಿರ ನಿರ್ಮಿಸುವುದಾಗಿ ಹೇಳುತ್ತಿದೆ. ಈ ವಿಷಯದಲ್ಲಿ ಸಂಸದರ ಬೆಂಬಲ ಪಡೆಯಲು ಮುಂದಾಗಿದೆ.ಚುನಾವಣೆಗೆ ಯುಪಿಎ ಹಗರಣಗಳು, ಬೆಲೆ ಏರಿಕೆ ಹಾಗೂ ಗುಜರಾತ್ ಅಭಿವೃದ್ಧಿ ಪ್ರಮುಖ ವಿಷಯವಾಗಲಿದೆ ಎಂದು ಹೇಳುತ್ತಿದ್ದ ಬಿಜೆಪಿ ಮುಖಂಡರು ಮೆಲ್ಲಗೆ ಅಯೋಧ್ಯೆ ವಿವಾದ ಕೆದಕಲು ಆರಂಭಿಸಿದ್ದಾರೆ. ಚುನಾವಣೆ ಹತ್ತಿರವಾದಂತೆ `ಶ್ರೀರಾಮನ ಜಪ' ಜೋರಾದರೂ ಆಗಬಹುದು.ಪಾಕಿಸ್ತಾನದ ಮುಖಂಡ ಮಹಮದ್ ಅಲಿ ಜಿನ್ನಾ ಅವರನ್ನು ಜಾತ್ಯತೀತ ನಾಯಕ ಎಂದು ಹೊಗಳಿ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದ ಅಡ್ವಾಣಿ ಮೊನ್ನೆ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಲು ಕಾರಣವಾಗಿರುವ ಸಂವಿಧಾನದ ಕಲಂ 370 ಕುರಿತು ಮಾತನಾಡಿದ್ದಾರೆ.  ಮೋದಿ ತಮ್ಮನ್ನು `ಹಿಂದೂ ರಾಷ್ಟ್ರವಾದಿ' ಎಂದು ಕರೆದುಕೊಂಡಿದ್ದಾರೆ. ಇವೆಲ್ಲವೂ ಬಿಜೆಪಿ ನಾಯಕರು ಹೋಗುತ್ತಿರುವ ದಿಕ್ಕು ಮತ್ತು ಆದ್ಯತೆಗಳನ್ನು ನಿರ್ಧರಿಸುತ್ತವೆ.ಬಿಜೆಪಿ ಮುಖಂಡರ ಚಿಂತನೆ- ಆಲೋಚನೆಗಳು ಏನೇ ಆಗಿರಲಿ, ಸದ್ಯಕ್ಕೆ ಅಯೋಧ್ಯೆ ವಿವಾದ ಅತ್ಯುನ್ನತ ನ್ಯಾಯಾಲಯದ ಮುಂದಿದೆ. ನ್ಯಾಯಾಲಯ ತೀರ್ಪು ಕೊಡುವವರೆಗೆ ವಿವಾದ ಕೆದಕುವ ಗೋಜಿಗೆ ಯಾರೂ ಹೋಗಬಾರದು. ಅದು ಧರ್ಮವೂ ಅಲ್ಲ. ಅಕಸ್ಮಾತ್ ರಾಮ ಮಂದಿರ ವಿವಾದವನ್ನು ಪ್ರಮುಖವಾಗಿ ಬಿಜೆಪಿ ಪ್ರಸ್ತಾಪಿಸಿದರೆ ಮತದಾರರೂ ನಂಬುವ ಸ್ಥಿತಿಯಲ್ಲಿ ಇಲ್ಲ.

  ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.