ಈಗ ಗುಲಾಮಗಿರಿ ಪ್ರಪಂಚದ ಬಹಳಷ್ಟು ಭಾಗದಲ್ಲಿ ಪ್ರಚಲಿತವಿಲ್ಲ. ನಾವು ನಮ್ಮ ಮಾನಸಿಕ ಗುಲಾಮಗಿರಿಯನ್ನು ಕಳೆದುಕೊಳ್ಳದಿದ್ದರೂ ದೈಹಿಕ ಗುಲಾಮಗಿರಿಯಿಂದ ಪಾರಾಗಿದ್ದೇವೆ. ಹಿಂದೊಂದು ಕಾಲವಿತ್ತು. ಆಗ ಜನರನ್ನು ವಸ್ತುಗಳಂತೆಯೇ ಕೊಂಡು ಬಳಸಲಾಗುತ್ತಿತ್ತು. ಬಡ ಅಸಹಾಯಕ ಮನುಷ್ಯರನ್ನು ಹಣಕ್ಕೆ ಮಾರಾಟಮಾಡುತ್ತಿದ್ದರು. ಆ ಗುಲಾಮರಿಗೆ ಅವರದೇ ಆದ ಜೀವನ ಇರುವುದು ಸಾಧ್ಯವಿರಲಿಲ್ಲ. ಅವರದ್ದೇನಿದ್ದರೂ ಹಗಲು ರಾತ್ರಿಯ ದುಡಿತ, ಅರೆಹೊಟ್ಟೆ ಊಟ ಮತ್ತು ಸದಾ ಬೈಗಳುಗಳು, ಹೊಡೆತಗಳು. ಅವರ ಬದುಕೆಲ್ಲ ಭಯದ ನೆರಳಲ್ಲೇ.

ಮನೆಯಲ್ಲಿಯ ಮಕ್ಕಳು ಕೂಡ ಗುಲಾಮರನ್ನು ಹೊಡೆದು ನೋಯಿಸುತ್ತಿದ್ದರು. ಯಜಮಾನನಂತೂ ಗುಲಾಮರನ್ನು ಯಂತ್ರದಂತೆ ಹಗಲುರಾತ್ರಿ ದುಡಿಸದೇ ಬಿಡುತ್ತಿರಲಿಲ್ಲ. ನಾನು ಬಾಲಕನಾಗಿದ್ದಾಗ ಈ ರೀತಿ ಗುಲಾಮರಿಗೆ ನೀಡುತ್ತಿದ್ದ ಹಿಂಸೆಯನ್ನು ‘ಅಂಕಲ್ ಟಾಯ್ಸಿ ಕ್ಯಾಬಿನ್’ ಎಂಬ ಪುಸ್ತಕದಲ್ಲಿ ಓದಿದ್ದ ನೆನಪು. ಅದು ನನ್ನನ್ನು ಎಷ್ಟು ಆಳವಾಗಿ ತಟ್ಟಿತ್ತೆಂದರೆ ನನಗೆ ಮನುಷ್ಯರ ಬಗ್ಗೆಯೇ ಹೇಸಿಗೆ ಬಂದುಬಿಟ್ಟಿತ್ತು.

ಇಂಥ ದಿನಗಳಲ್ಲಿ ಒಂದು ಮನೆಯಲ್ಲಿ ಒಬ್ಬ ಗುಲಾಮ. ಅವನ ಹೆಸರು ಇಸೋಪ. ಅವನು ಹೊರಗೆ ಗುಲಾಮನಾಗಿದ್ದರೂ ಆಂತರ್ಯದಲ್ಲಿ ದಾರ್ಶನಿಕ. ಆತ ಹಗಲು ರಾತ್ರಿ ಯಜಮಾನನ ಮನೆಯಲ್ಲಿ ದುಡಿಯುತ್ತಿದ್ದ. ಯಜಮಾನ ಕೋಪಿಷ್ಠ. ದಿನವೂ ಇಸೋಪನಿಗೆ ಪೆಟ್ಟು ಬೀಳುವುದು ತಪ್ಪುತ್ತಿರಲಿಲ್ಲ. ಅದರೊಂದಿಗೆ ಸದಾ ಬೈಗುಳಗಳು. ರಾತ್ರಿ ಮಲಗುವ ಮುನ್ನ ತನ್ನ ದೇಹವೇ ವಿಶ್ರಾಂತಿ ಬಯಸಿ ತೂಕಡಿಸುತ್ತಿದ್ದರೂ ಯಜಮಾನನ ಕಾಲುಗಳನ್ನು ಒತ್ತಿ ಹಗುರಮಾಡುವುದು ಅನಿವಾರ್ಯವಾಗಿತ್ತು.

ಒಂದು ದಿನ ಯಜಮಾನನಿಗೆ ಯಾರೋ ಹೇಳಿದರು, ‘ನಿಮ್ಮ ಗುಲಾಮ ಚೆನ್ನಾಗಿ ಕಥೆ ಹೇಳುತ್ತಾನೆ’ ಎಂದು. ಯಜಮಾನ ಕಥೆ ಹೇಳಲು ಆಜ್ಞೆ ಮಾಡಿದ. ಆಗ ಇಸೋಪ ಒಂದು ಕಥೆ ಹೇಳಿದ. ಒಂದು ಮನೆಯಲ್ಲಿ ಒಬ್ಬ ಗುಲಾಮ. ಯಜಮಾನ ಅವನನ್ನು ಕರೆದು ಹೇಳಿದ. ಇಂದು ನಮ್ಮ ಮನೆಗೆ ವಿಶೇಷ ಅತಿಥಿ ಬರುತ್ತಿದ್ದಾರೆ. ಅವರಿಗೆ ಅತ್ಯಂತ ಶ್ರೇಷ್ಠವಾದ ಅಡುಗೆ ಮಾಡು. ಗುಲಾಮ ಆಯಿತೆಂದು ಹೇಳಿದ.

ಸಂಜೆಗೆ ಅತಿಥಿಗಳು ಬಂದು ಕುಳಿತಾಗ ಒಂದಾದ ಮೇಲೊಂದು ಊಟದ ಪದಾರ್ಥಗಳು ಬಂದವು. ಅವುಗಳನ್ನು ಕಂಡಾಗಲೆಲ್ಲ ಯಜಮಾನನ ಮುಖ ಬಿಗಿಯಾಗುತ್ತ, ಕಠೋರವಾಗುತ್ತ ಬಂದಿತು. ಅತಿಥಿಗಳು ಹೋದಮೇಲೆ ಗುಲಾಮನಿಗೆ ಏಟುಗಳು ಬಿದ್ದವು. ಮತ್ತೆರಡು ದಿನಗಳು ಕಳೆದ ಮೇಲೆ ಯಜಮಾನ ಹೇಳಿದ, ಇಂದು ರಾತ್ರಿ ನನಗೆ ಇಷ್ಟವಿಲ್ಲದ ವ್ಯಕ್ತಿಯೊಬ್ಬ ಮನೆಗೆ ಬರುತ್ತಿದ್ದಾನೆ. ನಿನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಟ್ಟ ಅಡುಗೆ ಮಾಡು ಗುಲಾಮ ಒಪ್ಪಿದ.

ರಾತ್ರಿ ಊಟದಲ್ಲಿ ಒಂದಾದ ಮೇಲೊಂದು ಪದಾರ್ಥಗಳು ಬಂದವು. ಮತ್ತೆ ಯಜಮಾನನ ಮುಖ ಬಿರುಸಾಯಿತು. ಈ ಬಾರಿ ಗುಲಾಮನನ್ನು ಹೊಡೆಯಲಿಲ್ಲ. ಬದಲಾಗಿ ಗುಲಾಮನ ನಡತೆಯ ಹಿಂದೆ ಏನಾದರೂ ಕಾರಣರಬೇಕು ಎಂದು ಚಿಂತಿಸಿ ಅವನನ್ನು ಕರೆದು ಕೇಳಿದ. ನಾನು ಅತ್ಯಂತ ಶ್ರೇಷ್ಠವಾದ ಅಡುಗೆ ಮಾಡು ಎಂದಾಗಲೂ, ತೀರ ಕೆಟ್ಟದಾದ ಅಡುಗೆ ಮಾಡು ಎಂದಾಗಲೂ ನೀನು ಒಂದೇ ಅಡುಗೆಯನ್ನು ಮಾಡಿದ್ದೆ.

ಯಾವ ಅಡುಗೆ ನೋಡಿದರೂ ಅದು ಬರೀ ಬೇರೆ ಬೇರೆ ಪ್ರಾಣಿಗಳ ನಾಲಿಗೆಯೇ ಆಗಿತ್ತು. ಬರೀ ನಾಲಿಗೆ, ನಾಲಿಗೆ, ನಾಲಿಗೆ. ಏಕೆ ಹೀಗೆ ಮಾಡಿದೆ? ಗುಲಾಮ ಹೇಳಿದ. ಅತ್ಯಂತ ಶ್ರೇಷ್ಠ ಹಾಗೂ ಕನಿಷ್ಠವೆರಡಕ್ಕೂ ನಾಲಿಗೆಯೇ ಕಾರಣ. ಮೃದುವಾದ, ಸಾಂತ್ವನದ ಮಾತುಗಳನ್ನಾಡಿದಾಗ ಆ ನಾಲಿಗೆಯಷ್ಟು ಶ್ರೇಷ್ಠವಾದದ್ದು ಯಾವುದೂ ಇಲ್ಲ. ಅದೇ ನಾಲಿಗೆ ಒರಟಾಗಿ, ಕಠೋರವಾಗಿದ್ದಾಗ ಎಂಥವನ ಮನಸ್ಸನ್ನೂ ಗಾಸಿಮಾಡಿಬಿಡುತ್ತದೆ. ಅದಕ್ಕೇ ನಾನು ಎರಡಕ್ಕೂ ನಾಲಿಗೆಗಳನ್ನೇ ಕೊಂಡುತಂದು ಅಡುಗೆ ಮಾಡಿದೆ. ಯಜಮಾನನಿಗೆ ತನ್ನ ಕ್ರೂರತನ ಅರ್ಥವಾಗಿ ಅಂದಿನಿಂದ ಮೃದುವಾಗಿ ವ್ಯವಹರಿಸತೊಡಗಿದ.

ಹೀಗೆ ಇಸೋಪ ಕಥೆ ಮುಗಿಸಿದ. ಅವನ ಯಜಮಾನನಿಗೆ ಈ ಕಥೆ ತನ್ನನ್ನೇ ಉದ್ದೇಶಿಸಿದ್ದು ಎಂದು ಅರ್ಥವಾಯಿತು. ಆತ ಅಂದಿನಿಂದ ಇಸೋಪನಿಗೆ ಕರುಣೆ ತೋರಿಸಿದನಂತೆ.ಇದು ಎಂಥ ಸುಂದರ ದೃಷ್ಟಾಂತ! ನಮ್ಮ ಒಳ್ಳೆಯತನ, ಕೆಟ್ಟತನ ಎರಡಕ್ಕೂ ಕಾರಣವಾದದ್ದು ನಮ್ಮ ನಾಲಿಗೆ. ಅದು ಹತೋಟಿಯಲ್ಲಿದ್ದರೆ, ಅದನ್ನು ಸರಿಯಾಗಿ ಬಳಸಿದರೆ ಅದು ಸಮಾಜವನ್ನೇ ಬದಲಿಸಬಹುದು. ಅದೇ ನಾಲಿಗೆ ನಿಯಂತ್ರಣದಲ್ಲಿಲ್ಲದಿದ್ದರೆ ಎಂಥ ಬಲಿಷ್ಠ ಸಮಾಜವನ್ನೂ ಒಡೆದುಹಾಕಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.