ಶನಿವಾರ, ಏಪ್ರಿಲ್ 17, 2021
32 °C

ಪದಾಧಿಕಾರಿಗಳ ಪಟ್ಟಿಯ ರಹಸ್ಯ ಸ್ಫೋಟ ಮತ್ತು ಆನಂತರ...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಇದು ಖಂಡಿತ ರಹಸ್ಯ ಸ್ಫೋಟ. 12 ವರ್ಷಗಳ ಕಾಲ ಎಐಸಿಸಿಯಲ್ಲಿ ಕೊಳೆಯುತ್ತ ಬಿದ್ದಿದ್ದ ಕಡತವೊಂದಕ್ಕೆ ಅಧ್ಯಕ್ಷೆ ಸೋನಿಯಾ ಗಾಂಧಿ ಸಹಿ ಹಾಕಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರಂಥ  ಘಟಾನುಘಟಿ ನಾಯಕ ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಎರಡು ಸಾರಿ ಇಂಥ ಪಟ್ಟಿ ಹಿಡಿದುಕೊಂಡು ಹೈಕಮಾಂಡ್ ಬಾಗಿಲು ತಟ್ಟಿದ್ದರು. ಕೆಲಸ ಆಗಿರಲಿಲ್ಲ. ಆರ್.ವಿ.ದೇಶಪಾಂಡೆಯವರೂ ಅದೇ  ಕೆಲಸ ಮಾಡಿದ್ದರು. ಅವರಿಗೂ ನಿರಾಶೆಯೇ ಆಗಿತ್ತು. ಒಂದೂ ಕಾಲು ಶತಮಾನದಷ್ಟು ಹಳೆಯದಾದ ಒಂದು ಪಕ್ಷ ತನ್ನ ಬೆಂಬಲಕ್ಕೆ ಸದಾ  ನಿಂತಿದ್ದ ರಾಜ್ಯವೊಂದನ್ನು ಹೀಗೂ ನಡೆಸಿಕೊಳ್ಳಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ. ಇದಕ್ಕೆ ಜಡತ್ವ ಎನ್ನಬಹುದು, ತಾತ್ಸಾರ  ಎನ್ನಬಹುದು,  ಅಹಂಕಾರ ಎನ್ನಬಹುದು.  ಪಕ್ಷದಲ್ಲಿ ‘ಲೋ ಕಮಾಂಡ್’ಗೂ ಹೈ ಕಮಾಂಡ್‌ಗೂ ಇರುವ ತಿಕ್ಕಾಟ  ಎನ್ನಬಹುದು. ಅಥವಾ ಎಲ್ಲವೂ ಕಾರಣ ಅನ್ನಬಹುದು.ಅಂತೂ ಆನೆಗೆ ಹೆರಿಗೆಯಾಗಿದೆ. ಆನೆಗೆ ಹೆರಿಗೆಯಾದಾಗ ಚಿಕ್ಕ ಮಗು ಹುಟ್ಟುವುದಿಲ್ಲ. ಅದು ದೊಡ್ಡದೇ ಆಗಿರುತ್ತದೆ. ‘ಮೊದಲು ಒಂದು ಮಗು ಆಗಲಿ’ ಎಂದವರು ಬಹಳ. ಪರಮೇಶ್ವರ್ ಅವರಿಗೆ ‘ಎಂಥದಾದರೂ ಒಂದು ಪಟ್ಟಿಗೆ ಒಪ್ಪಿಗೆ ಪಡೆದಕೊಂಡು ಬನ್ನಿ’ ಎಂದವರು ಹಲವು ಮಂದಿ. ಪರಮೇಶ್ವರ್ ಅವರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುವ  ಮಧುಸೂದನ್ ಮಿಸ್ತ್ರಿ ಮತ್ತು ಅಹ್ಮದ್ ಪಟೇಲ್ ಜತೆಗೆ ಮಾತ್ರ ಚರ್ಚೆ ಮಾಡಿ ಸೋನಿಯಾ ಅವರಿಗೆ  ಪಟ್ಟಿ ತಲುಪುವಂತೆ ನೋಡಿಕೊಂಡಿದ್ದರು. ರಹಸ್ಯವಾಗಿ ತಲುಪಿಸಿದ್ದ ಪಟ್ಟಿ ಅಷ್ಟೇ ತುರ್ತಾಗಿ ಪ್ರಕಟವಾಗುತ್ತದೆ ಎಂಬ ನಂಬಿಕೆ ಪರಮೇಶ್ವರ್ ಅವರಿಗೇ ಇರಲಿಲ್ಲ. ಪರಮೇಶ್ವರ್ ಅವರ ಹಾಗೆ ರಾಜ್ಯದ ಇತರೆ ಹೈಕಮಾಂಡ್ ನಾಯಕರಿಗೂ ಈ ಪಟ್ಟಿ ಪ್ರಕಟಣೆಯ ಸುಳಿವು ಇರಲಿಲ್ಲ.  ಅದು ಅವರ ಅಹಂಕಾರಕ್ಕೆ ಬಿದ್ದ ಪೆಟ್ಟು. ಬಹುಶಃ ಬೆಂಗಳೂರಿನಲ್ಲಿ ಕಳೆದ ಎರಡು ದಿನ ನಡೆದ ರಹಸ್ಯ ಸಭೆಗೆ  ಇದೂ ಒಂದು ಕಾರಣ. ಅವರ ಜತೆಗೆ  ಇನ್ನು ಕೆಲವರೂ ಸೇರಿಕೊಂಡಿದ್ದಾರೆ. ‘ಮೊದಲು ಮಗು ಹುಟ್ಟಲಿ ಸಾಕು’ ಎಂದವರು ಈಗ ‘ಅದು ಹೆಣ್ಣೇ ಅಥವಾ ಗಂಡೇ’ ಎಂದು ನೋಡುತ್ತಿದ್ದಾರೆ. ‘ಅದರ ಮೂಗು, ಮುಖ ನೆಟ್ಟಗಿವೆಯೇ’ ಎಂದು ಗಮನಿಸುತ್ತಿದ್ದಾರೆ! ಇದೆಲ್ಲ ಸಹಜ.ಸಣ್ಣ ಪುಟ್ಟ ಪಕ್ಷಗಳಲ್ಲಿಯೇ ಪದಾಧಿಕಾರಿ ಪಟ್ಟಕ್ಕೆ ಬೇಕಾದಷ್ಟು ಪೈಪೋಟಿ ಇದ್ದೇ ಇರುತ್ತದೆ. ಸಾವಿರಾರು ಜನ ನಾಯಕರು(!) ಇರುವ ಕಾಂಗ್ರೆಸ್‌ನಲ್ಲಿ ಈ ಜಗ್ಗಾಟ  ಇನ್ನೂ ಜಾಸ್ತಿ ಇರುತ್ತದೆ. ಹಾಗೆಂದು ಎಲ್ಲರನ್ನೂ ಸಮಾಧಾನ ಮಾಡಬೇಕು ಎಂದರೆ ಪಕ್ಷದಲ್ಲಿ ಇರುವವರನ್ನೆಲ್ಲ ಪದಾಧಿಕಾರಿ ಮಾಡಬೇಕು. ಆಗಲೂ ‘ನನ್ನನ್ನು ಬರೀ ಕಾರ್ಯದರ್ಶಿ ಮಾಡಿದ್ದಾರೆ ಪ್ರಧಾನ ಕಾರ್ಯದರ್ಶಿ ಮಾಡಿಲ್ಲ’ ಎಂದು ಗೊಣಗಲು ಅವಕಾಶ ಇರುತ್ತದೆ. ಪ್ರಧಾನ ಕಾರ್ಯದರ್ಶಿ ಮಾಡಿದರೆ ‘ಉಪಾಧ್ಯಕ್ಷನಾಗಿ ನೇಮಿಸಬೇಕಿತ್ತು’ ಎಂದು ಕೇಳಬಹುದು. ಇದೆಲ್ಲ ಮುಗಿಯದ ಕಥೆ.ಹೈಕಮಾಂಡಿಗೆ ಸಲ್ಲಿಸಿದ ಪಟ್ಟಿಯ ಪ್ರತಿ ನನಗೆ ಸಿಕ್ಕಿತ್ತು. ಪ್ರತಿಯೊಂದು ಹೆಸರಿನ ಮುಂದೂ ಆ  ಪದಾಧಿಕಾರಿ ಯಾವ ಗುಂಪಿಗೆ ಸೇರಿದವರು ಎಂಬ ಮಾಹಿತಿ  ಇದೆ. ಕೆಲವರು ಯಾವ ಗುಂಪಿಗೂ ಸೇರದವರೂ ಇದ್ದಾರೆ! ಹಲವು ಗುಂಪುಗಳು ಇರುವ ಒಂದು ಪಕ್ಷದ  ಕಷ್ಟವಿದು. ಬಹುಶಃ ಕಳೆದ 12 ವರ್ಷಗಳ ಕಾಲ ಪಟ್ಟಿಗೆ ಅನುಮೋದನೆ ಕೊಡದೇ ಇರುವುದಕ್ಕೆ ಈ ಕಷ್ಟವೂ ಕಾರಣವಾಗಿರಬಹುದು.ಈ ಪಟ್ಟಿಯಲ್ಲಿ ಬಹುತೇಕ ಹಳೆಯ ಮುಖಗಳು ಇವೆ. ಬಿಟ್ಟು ಹೋದ ಕೆಲವು ಹೊಸ ಹೆಸರುಗಳ ಸಲುವಾಗಿಯೇ ರಹಸ್ಯ ಸಭೆ ನಡೆಯುವುದಾದರೆ ಹಳೆಯ ಪಳೆಯ ಮುಖಗಳನ್ನು ಬಿಟ್ಟಿದ್ದರೆ ಏನಾಗಬಹುದಿತ್ತು ಎಂದು ಊಹಿಸಬಹುದು. ಈ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಲಿಂಗಾಯತರನ್ನು ಮತ್ತೆ ಸಮಾಧಾನ ಮಾಡಲು ಹೈಕಮಾಂಡ್ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಉಪಾಧ್ಯಕ್ಷರ ಪಟ್ಟಿಯಲ್ಲಿ ಮೊದಲ ಹೆಸರೇ ಲಿಂಗಾಯತರದು ಇದೆ. ಅವರನ್ನು ಬಿಟ್ಟೂ ಇನ್ನೂ ಇಬ್ಬರು ಲಿಂಗಾಯತರ ಹೆಸರುಗಳು ಅಲ್ಲಿ ಇವೆ. ಒಟ್ಟು ಹತ್ತು ಮಂದಿ ಉಪಾಧ್ಯಕ್ಷರಲ್ಲಿ ಲಿಂಗಾಯತ  ಸಮುದಾಯಕ್ಕೆ ಸಿಕ್ಕ ಅತಿ ಹೆಚ್ಚಿನ ಪ್ರಾತಿನಿಧ್ಯವಿದು. ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲೂ ಮೂವರು ಲಿಂಗಾಯತರಿಗೆ ಅವಕಾಶ ಸಿಕ್ಕಿದೆ. ಜಾತಿ ಮತ್ತು ಪ್ರದೇಶಗಳಿಗೆ ಪ್ರಾತಿನಿಧ್ಯ ಕೊಡುವಾಗ ಲಿಂಗಾಯತರಲ್ಲಿನ ಪಂಚಮಸಾಲಿಗಳನ್ನು ಮತ್ತು ಪರಿಶಿಷ್ಟ ಜಾತಿಯಲ್ಲಿನ ಎಡಗೈ ಸಮುದಾಯವನ್ನು ಒಲಿಸಿಕೊಳ್ಳುವ ಪ್ರಯತ್ನವೂ ಎದ್ದು ಕಾಣುತ್ತದೆ. ಕಾಂಗ್ರೆಸ್ಸಿನಲ್ಲಿ ಬಲಗೈ ಸಮುದಾಯದ  ಪ್ರಾಬಲ್ಯದ ನಡುವೆ ಎಡಗೈ ಸಮುದಾಯ ನಲುಗಿ ಹೋಗಿತ್ತು. ಅದೇ  ರೀತಿ ಮೂಲತಃ ರೈತಾಪಿ ವರ್ಗವಾದ ಪಂಚಮಸಾಲಿಗಳಿಗೂ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಕಾರ್ಯದರ್ಶಿಗಳ ಪಟ್ಟಿಯಲ್ಲಿ ಶೇಕಡಾ 75ರಷ್ಟು ಹೊಸಮುಖಗಳು ಇವೆ. ಬಹುಶಃ ಅವರು ಮುಂದಿನ ನಾಯಕರಾಗಿ ಬೆಳೆಯಲು ಇದು ಒಂದು ಅವಕಾಶ.ಪರಮೇಶ್ವರ್ ಅವರು ಪಟ್ಟಿಯನ್ನು ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ. ಇದು ರಾಜ್ಯ ಮಟ್ಟದ ಪದಾಧಿಕಾರಿಗಳ  ಪಟ್ಟಿ. ಜಿಲ್ಲೆಗಳ ಪದಾಧಿಕಾರಿಗಳ ಪೈಕಿ ಇನ್ನೂ ಬೆಂಗಳೂರು ನಗರ, ಮೈಸೂರು ಇತ್ಯಾದಿ ನಾಲ್ಕು ಜಿಲ್ಲೆಗಳ ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿಲ್ಲ. ಆಗುವುದು ಬಹಳ ಕಷ್ಟ ಎನಿಸುತ್ತದೆ. ಬೆಂಗಳೂರು ನಗರದ ಪದಾಧಿಕಾರಿಗಳ ಪಟ್ಟಿ  ಕೆಲವರಿಗೆ ಪ್ರತಿಷ್ಠೆಯದು ಅನಿಸಿದೆ. ಅವರ ಪ್ರತಿಷ್ಠೆಗೆ ಮುಕ್ಕಾಗದಂತೆ ಪರಮೇಶ್ವರ್ ಅವರು ಪಟ್ಟಿ ಸಿದ್ಧಪಡಿಸುವುದು ಕಷ್ಟ. ಒಂದು ಪಕ್ಷದಲ್ಲಿ ಎಷ್ಟೊಂದು ಒಳ ರಾಜಕೀಯ ಇರುತ್ತದೆ ಎಂಬುದಕ್ಕೆ ಇವೆಲ್ಲ ಚಿಕ್ಕ ಉದಾಹರಣೆಗಳು. ದೊಡ್ಡ ಉದಾಹರಣೆಗಳು ಇನ್ನೂ ಎಷ್ಟೋ ಇರಬಹುದು. ಪರಮೇಶ್ವರ್  ಅವರ ಮುಂದೆ ಇರುವ ದೊಡ್ಡ ಸವಾಲು ಪಕ್ಷವನ್ನು ಕಟ್ಟುವುದು. ಮೇ 13ರಂದು ಪ್ರಕಟವಾಗುವ ಉಪ ಚುನಾವಣೆ ಫಲಿತಾಂಶ ಪಕ್ಷದ ಸ್ಥಿತಿಗತಿ ಬಗ್ಗೆ  ಒಂದು ಒಳನೋಟ  ಕೊಡಬಹುದು. ಆದರೆ, ಬಿಜೆಪಿಯ ಹಿಂದೆ ಭದ್ರವಾಗಿ ನಿಂತಿರುವ ಲಿಂಗಾಯತರನ್ನು ಒಲಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ. ಆ ಸಮುದಾಯಕ್ಕೆ ಈಗ ಮುಖ್ಯಮಂತ್ರಿಯ ಸ್ಥಾನವೇ ಸಿಕ್ಕಿದೆ. ಕಾಂಗ್ರೆಸ್ಸಿನಲ್ಲಿ ಅದೇ ಸ್ಥಾನ ಸಿಗುತ್ತದೆ ಎಂಬ ಭರವಸೆ  ಸಿಕ್ಕರೆ ಅವರು ಈ ಕಡೆ ಒಲಿದಾರು. ಕಾಂಗ್ರೆಸ್ಸಿನಲ್ಲಿ ಲಿಂಗಾಯತರಿಗೆ ಮತ್ತೆ ಮತ್ತೆ ಆಗಿರುವ ಗಾಯಗಳನ್ನು ಮರೆಸುವುದು ಅಷ್ಟು ಸುಲಭವಲ್ಲ. ಒಂದು ರಾಜಕೀಯ ಪಕ್ಷ ಅಧಿಕಾರದಲ್ಲಿ ಇದ್ದಾಗ ಅದರ ವರಸೆಯೇ ಬೇರೆ ಇರುತ್ತದೆ. ಅಧಿಕಾರದಲ್ಲಿ ಇಲ್ಲದೇ ಇದ್ದಾಗಿನ ವರಸೆಯೂ ಭಿನ್ನವಾಗಿರುತ್ತದೆ. ಪರಮೇಶ್ವರ್ ಮತ್ತು ಅವರ ಗೆಳೆಯರು ಮಾಡಬೇಕಾದ ಕೆಲಸ ಎಂದರೆ ತಂಡಗಳಲ್ಲಿ ನಿರಂತರವಾಗಿ ಊರು ಊರು ಸುತ್ತುವುದು. ಮರೆತು ಹೋದ ಕಾರ್ಯಕರ್ತರನ್ನು ಒಗ್ಗೂಡಿಸುವುದು. ಪಕ್ಷಕ್ಕೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂದು ನಂಬಿಗೆ ಮೂಡಿಸುವುದು. ಯಡಿಯೂರಪ್ಪನವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದರೂ ಇನ್ನು ಒಂದೂವರೆ ವರ್ಷದಲ್ಲಿ ಚುನಾವಣೆ ಬರುತ್ತವೆ. ನಿರಾಶೆಯ ಮಡುವಿನಲ್ಲಿ ಸಿಲುಕಿರುವ ಒಂದು ಪಕ್ಷದಲ್ಲಿ ಪುನಃ ಚೈತನ್ಯವನ್ನು ಮೂಡಿಸಲು ಈ ಅವಧಿ ಯಾವುದಕ್ಕೂ ಸಾಲದು. ಜಡಗಟ್ಟಿ ಹೋಗಿರುವ ಪಕ್ಷದಲ್ಲಿ ಸಂಚಲನ ಮೂಡಿಸಲು, ಸುಖಪುರುಷ ಡೊಳ್ಳು ಹೊಟ್ಟೆಯ ನಾಯಕರು ಎದ್ದು ತಮ್ಮ ಜತೆ ಕನಿಷ್ಠ ನಡೆದಾಡುವಂತೆ ಮಾಡಲು ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರಿಗೆ  ಸಾಕಷ್ಟು ಸಮಯ ಬೇಕಾಗುತ್ತದೆ.ಅಧಿಕಾರದಲ್ಲಿ ಇರುವ ಮತ್ತು ಅಧಿಕಾರದಲ್ಲಿ ಇಲ್ಲದ ಪಕ್ಷಗಳ ವರಸೆ ಬಗ್ಗೆ ಪ್ರಸ್ತಾಪಿಸಿದೆ. ಅಧಿಕಾರದಲ್ಲಿ ಇರುವ ಒಂದು ಪಕ್ಷ ಹೇಗೆ ನಡೆದುಕೊಳ್ಳಬಾರದು ಎಂಬುದಕ್ಕೆ ಬಿಜೆಪಿಗಿಂತ ಉತ್ತಮ ಉದಾಹರಣೆ ಇರಲಾರದು. ಪಕ್ಷದ ಅಧ್ಯಕ್ಷರೇ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಅವರು ಭಿನ್ನಮತೀಯ ನಾಯಕರನ್ನು ಕಟ್ಟಿಕೊಂಡು ದೆಹಲಿಗೆ ಹೋಗುತ್ತಾರೆ. ಹೋಗುವ ಸುದ್ದಿ ಪತ್ರಿಕೆಗಳಲ್ಲಿ ಬರುವಂತೆಯೂ ನೋಡಿಕೊಳ್ಳುತ್ತಾರೆ. ಬಂದ ಮೇಲೆ ಅದೇ ಪತ್ರಿಕೆಗಳ ಮೇಲೆ ರೇಗುತ್ತಾರೆ. ಈಶ್ವರಪ್ಪ ಯಾವುದೋ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವರಿಗೆ ಯಡಿಯೂರಪ್ಪ ಜತೆಗೆ ಒಂದೋ ವೈಯಕ್ತಿಕ ಮಟ್ಟದ ಭಿನ್ನಾಭಿಪ್ರಾಯ ಇರಬಹುದು. ಅಥವಾ ಸರ್ಕಾರ ನಡೆಯುತ್ತಿರುವ ರೀತಿಯ ಬಗ್ಗೆ ಅಸಮಾಧಾನ ಇರಬಹುದು.ಆದರೆ, ಈ ಎರಡನ್ನೂ ಅವರು ಇಬ್ಬರೂ ಸೇರಿ ಕುಳಿತುಕೊಂಡು ಬಗೆಹರಿಸಿಕೊಳ್ಳಬಹುದು. ಯಡಿಯೂರಪ್ಪ ಲಿಂಗಾಯತರ ನಾಯಕ ಆಗಿರುವುದು ಬರೀ ಕಾಂಗ್ರೆಸ್ಸಿನ ಸಮಸ್ಯೆ ಮಾತ್ರವಲ್ಲ ಅದು ಈಶ್ವರಪ್ಪ ಮತ್ತು ಅವರಂಥ ಲಿಂಗಾಯತರಲ್ಲದ ನಾಯಕರ ಸಮಸ್ಯೆಯೂ ಹೌದು. ‘ವೀರಶೈವರು ಯಡಿಯೂರಪ್ಪ ಅವರನ್ನು ಬರೀ ತಮ್ಮ ಸಮುದಾಯದ ನಾಯಕ ಎಂದು ಮಾತ್ರ  ಸೀಮಿತಗೊಳಿಸಿಕೊಳ್ಳಬಾರದು’ ಎಂದು ಈಶ್ವರಪ್ಪ ಮೊನ್ನೆ ರಂಭಾಪುರಿ ಶ್ರೀಗಳ ಸಮ್ಮುಖದಲ್ಲಿ ಹೇಳಿದ್ದು ಇದೇ ಅರ್ಥದಲ್ಲಿ. ಅದರಲ್ಲಿ ಯಡಿಯೂರಪ್ಪ ಅವರನ್ನು ಸರ್ವ ಸಮುದಾಯಗಳ ನಾಯಕ ಎಂದ ಬಿಂಬಿಸುವುದಕ್ಕಿಂತ ಅವರ  ಸಮುದಾಯದಲ್ಲಿನ ಗಟ್ಟಿ ಬೇರುಗಳನ್ನು ಕಿತ್ತು ಹಾಕುವ ವಿಚಿತ್ರ ಹುನ್ನಾರವೂ ಇರಬಹುದು! ಒಂದು ಆಡಳಿತ ಪಕ್ಷದಲ್ಲಿ ಹೀಗೆ ಆತ್ಮಹತ್ಯೆಯ ಲಕ್ಷಣಗಳು ಗೋಚರಿಸುತ್ತಿರುವಾಗ ಸಮರ್ಥ ವಿರೋಧ ಪಕ್ಷಕ್ಕೆ ಬೇರೇನು ಬೇಕು? ತಾನು ಒಂದು ಸಮರ್ಥ, ಸಕಾರಾತ್ಮಕ ಪರ್ಯಾಯ ಎಂದು ವಿರೋಧ  ಪಕ್ಷ ತೋರಿಸಿಕೊಟ್ಟರೆ ಸಾಕು.ಎಚ್.ಡಿ.ಕುಮಾರಸ್ವಾಮಿಯವರು ಹಲವು ಸಾರಿ ಅಧಿಕೃತ ವಿರೋಧ ಪಕ್ಷ ಮಂಕಾಗಿ ಕಾಣುವಂತೆ ವಿಜೃಂಭಿಸಿದ್ದಾರೆ. ರಾಜ್ಯ ರಾಜಕಾರಣಕ್ಕೆ ಬಂದರೆ ಇನ್ನೂ ವಿಜೃಂಭಿಸಬಹುದು ಎಂಬ ಅವರ ಬಯಕೆಗೆ ಅವರ ಮನೆಯಲ್ಲಿಯೇ ಕಲ್ಲು ಹಾಕಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಗ್ರಾಮ ವಾಸ್ತವ್ಯ ಯಾವುದೇ  ಒಂದು ಸರ್ಕಾರಕ್ಕೆ ಮಾದರಿ. ರಾಹುಲ್ ಗಾಂಧಿ ಕೂಡ ಅದನ್ನು ಅನುಸರಿಸಿದರು. ಅದು ಕುಮಾರಸ್ವಾಮಿಯವರಲ್ಲಿನ ಸಕಾರಾತ್ಮಕ ಶಕ್ತಿ. ಈಗ ಅವರಿಗೆ ಈ ಸರ್ಕಾರವನ್ನು ಹೇಗಾದರೂ ಮಾಡಿ ಮನೆಗೆ ಕಳುಹಿಸಬೇಕು ಎಂಬ ತರದೂದು. ಒಂದು ಚುನಾಯಿತ ಸರ್ಕಾರವನ್ನು ಹಾಗೆ ಯಾರೂ ಮನೆಗೆ ಕಳುಹಿಸಲು ಆಗದು. ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಲು ಅವರು ಬಿಜೆಪಿಯಲ್ಲಿಯೇ ಭಿನ್ನಮತವನ್ನು ಸೃಷ್ಟಿಸಿ 16 ಜನ ಬಂಡೇಳುವಂತೆ ಮಾಡಿದರು. ಅದು ಫಲ ಕೊಡಲಿಲ್ಲ. ಅವರು ಮಾಡಿದ ಎರಡನೇ  ಪ್ರಯತ್ನ ಈ ಸರ್ಕಾರದ ಹಗರಣಗಳನ್ನು ಒಂದಾದ ನಂತರ ಒಂದರಂತೆ ಬಯಲಿಗೆ ಎಳೆದುದು. ಅದೂ ಫಲ ಕೊಡಲಿಲ್ಲ.ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕುಮಾರಸ್ವಾಮಿ ಕಾಲದ ಕಡತಗಳನ್ನೆಲ್ಲ ಜಾಲಾಡಿಸಿ ಬಯಲಿಗೆ ಹಾಕುವ ಕೆಲಸವನ್ನು ತಮ್ಮ ರಾಜಕೀಯ ಕಾರ್ಯದರ್ಶಿಗೆ  ವಹಿಸಿದ್ದಾರೆ. ಯಡಿಯೂರಪ್ಪ ಆಗಾಗ ಅಲುಗಾಡಿದರೂ ಉರುಳುತ್ತಿಲ್ಲ ಎಂದು ಕುಮಾರಸ್ವಾಮಿ ಅವರಲ್ಲಿ ಈಗ ಹತಾಶೆ ಮಡುಗಟ್ಟತೊಡಗಿದೆ. ನಕಾರಾತ್ಮಕ, ದ್ವೇಷದ ರಾಜಕೀಯದ  ಫಲ ಹತಾಶೆಯೇ ಆಗಿರುತ್ತದೆ. ಈಗ ಅದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ವಿಧಾನಸಭೆಯನ್ನು ಹೆಂಡದ  ಅಂಗಡಿ ಎಂದ ಕುಮಾರಸ್ವಾಮಿ, ಯಡಿಯೂರಪ್ಪ ಎರಡು  ಪೆಗ್ಗು ಹಾಕಿದವರಂತೆ ಮಾತನಾಡುತ್ತಾರೆ ಎಂದೂ ಅಂದರು. ಅವರು ಕಳೆದ ಕೆಲವು ತಿಂಗಳ ಕಾಲ ಮಾಧ್ಯಮದ ಬೆಳಕಿನಲ್ಲಿ ಬಹಳ ಮಿಂಚಿದರು. ಈ ಬೆಳಕು ಎರಡು ಅಲಗಿನ ಕತ್ತಿ. ಗಾಂಧೀಜಿ ಬಗ್ಗೆ ಕುಮಾರಸ್ವಾಮಿ ಎಡವಟ್ಟು ಮಾಡಿಕೊಂಡುದು ಈ ಬೆಳಕಿನಲ್ಲಿಯೇ!ಕುಮಾರಸ್ವಾಮಿಯವರಂಥ ಪ್ರಾದೇಶಿಕ ನಾಯಕರು ಬೆಳೆಯುವುದನ್ನು ಅವರ ಮನೆಯವರು ಇಷ್ಟಪಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳು ಸಹಿಸುವುದಿಲ್ಲ. ಯಡಿಯೂರಪ್ಪ ತಪ್ಪಿಯೂ ಕಾಂಗ್ರೆಸ್‌ನ್ನು ಮುಗಿಸುತ್ತೇನೆ ಎನ್ನುವುದಿಲ್ಲ. ಜೆ.ಡಿ (ಎಸ್) ಅನ್ನು ಮುಗಿಸುತ್ತೇನೆ ಎಂದೇ ಹೇಳುತ್ತಾರೆ. ಮೊನ್ನೆ ನಡೆದ ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಯಲ್ಲಿ ಜೆ.ಡಿ  (ಎಸ್) ಅನ್ನು ಸೋಲಿಸಲು ಕೊನೆ ಗಳಿಗೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನವರು ಜತೆಯಾದರು ಎಂಬ ಮಾತು ಇದೆ. ಅಲ್ಲಿ ಜೆ.ಡಿ (ಎಸ್) ಸೋಲಬೇಕು ಎಂದೇ  ಇಬ್ಬರೂ ಬಯಸುವುದು. ಬಹುಶಃ ಇದು ತಿಳಿದೇ ದೇವೇಗೌಡರು ತಮ್ಮ ಸಮಾಧಿಯನ್ನು ಚನ್ನಪಟ್ಟಣದಲ್ಲಿಯೇ ಕಟ್ಟಿಸುವ ಮಾತು ಆಡಿದ್ದು!  ಮೇ 13 ರಂದು ಪ್ರಕಟವಾಗಲಿರುವ ಉಪಚುನಾವಣೆಯ ಫಲಿತಾಂಶ ಮೂರೂ ಪಕ್ಷಗಳಿಗೆ ಒಂದೊಂದು ಪಾಠ ಕಲಿಸಬಹುದು. ಅದು ಮುಂದಿನ ರಾಜ್ಯ ರಾಜಕೀಯದ ದಾರಿಗೆ, ಸರ್ಕಾರ ನಡೆಯಬೇಕಾದ ದಾರಿಗೆ ಸೂಚನೆಯೂ ಆಗಬಹುದು. ಕಳೆದು ಹೋಗಿರುವ ನಾಲ್ಕು ವರ್ಷಗಳನ್ನೇ ಮರಳಿ ಗಳಿಸುವುದು ಕಷ್ಟ.12 ವರ್ಷ ಕಳೆದಕೊಂಡವರಿಗೆ ಅದು ಎಷ್ಟು ಕಷ್ಟ ಎಂದು ಬಿಡಿಸಿ ಹೇಳಬೇಕಿಲ್ಲ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.